Sunday, June 4, 2017

ನಮ್ಮ ಒಳಗೋಡೆಗಳು ಮತ್ತೆಮತ್ತೆ ಅವು
ಮೈತುಂಬ ಬಿಟ್ಟುಕೊಳ್ಳುವ ಬಿರುಕುಗಳು
ಅರೆತೆರೆದ ತುಟಿಯರಳಿಸಿ ನುಂಗಬರುವ
ಪುಟ್ಟ ಪುಟ್ಟ ಬಾಯಿಗಳು
ಹುಕಿಗೆ ಬಿದ್ದಂತೆ ನಮ್ಮನ್ನು ನಾವ್
ಮಣಿಸಿ ತಣಿಸಿಕೊಳ್ಳುವ ಹಸಿವು.

ಮುಂದೊಂದುದಿನ ಬಿರುಕುಗಳೇ
ಸಣ್ಣಸಣ್ಣ ಕಾಲುವೆಗಳು
ವೈನಾತಿವೈನದೊಳಗೂ ಹೆಚ್ಚಿ ಹರಿವು
ಒಂದೊಂದಾಗಿ ತುಟಿಗಳು ತೇಲಿ
ಬ್ರಹ್ಮಾಂಡ ಹಸಿವು
ತಣಿಸಿ ತಣಿಸಿ ಮಣಿಸಿ ಮಣಿಸಿ
ನಾವೆಲ್ಲೊ ಅಲ್ಲೆಲ್ಲೊ ಅಲ್ಲೋಲಕಲ್ಲೋಲ ಲೋಲ!

ಕಟ್ಟೆಯೊಡೆದುಕೊಳ್ಳುವ ಕಾಲುವೆಗಳು
ಕಂಡಕಂಡಲ್ಲೆಲ್ಲ ಚಾಚುತ್ತ ಬಾಚುತ್ತ
ಒಂದೊಮ್ಮೆ ಮೀನಖಂಡದಲ್ಲೆಂಥದೋ ಚಳಕ್
ನೆಲಕ್ಕೂರುವುದೆಂದರೀಗ
ಆಲಸ್ಯವೇ ಮೈಯಿಂದೆದ್ದು ಮೊರೆದಂತೆ
ಒಂದೊಳ್ಳೆ ಹೆಸರಿಟ್ಟುಕೊಂಡ ನದಿಗೀಗ
ಸಿಂಗಾರದ ಗತ್ತು.

ತೇಲಿಹೋಗುವ ಆ ಗುಲಾಬು ಪಕಳೆಗಳು...;
ಸಾವಿರ ಸಾವಿರ, ಸಾವು
-ಇರದ ನಾಲಗೆಗಳು
ಹರಿವಿನಿಂದ ಹರಿವಿಗೆ
ಸಂತತಿ ಬೆಳೆಸಲು
ತೊರೆದದ್ದು ಬಾಯನ್ನೇ!
ನದಿಗ್ಯಾವುದರ ಹಂಗು
ತೇಲಿಸೋ ಇಲ್ಲ ಮುಳುಗಿಸೋ.

ಮುಳುಗಿದ್ದೆಲ್ಲ ಮಳ್ಳಲ್ಲ ತೇಲಿದ್ದೆಲ್ಲ ತಿಳಿಯಲ್ಲ
ಮಳ್ಳಂತಿದ್ದದ್ದೊಮ್ಮೆ ಮರಳಿ
ಮಳಲಿ ಮರಳಿನಂತೆ ಮಿನುಗುತ್ತದೆ,
ಜಲಪತ್ರದ ಮೇಲಿನ ಬಿಂದುವಿನಂತೆ
ತೇಲಿ ತೊಯ್ದಾಡಿ ತೊನೆದದ್ದೆಲ್ಲ
ಒಂದೊಮ್ಮೆ ಗಂಟಲೊಣಗಿಸಿಕೊಂಡುಬಿಡುತ್ತದೆ.

ಹಸಿವೆಂದರೆ ಹಂಬಲವಷ್ಟೇ ಅಲ್ಲ
ಹರಿವೆಂದರೆ ಹೊಳೆಯಷ್ಟೇ ಅಲ್ಲ
ಅಮವಾಸ್ಯೆ ಪೌರ್ಣಿಮೆಗಳ ನೆರಳಲ್ಲಿ
ಅಬ್ಬರಿಸಿ ಉಬ್ಬರಿಸುವ ಮಗುವೇ
ಶಾಂತಿ ಶಾಂತಿ ಶಾಂತಿ:

#ಆಲಾಪಿನಿ

Wednesday, August 10, 2016

ಎಮ್ಮಮನೆಯಂಗಳದಿ


ಚಿಲಕ ಸರಿಯಿತು
ಆಹಾ ಬಂದವರು ಬೆಳಕು ತಂದರು!
-ಬೀಗಿದರೆ ಬೆಪ್ಪು ನೀನು
ಎಂದೂ ಬಾರದವರು
ಇಂದು ಬಂದರೆಂದರೆ...

ಕೆತ್ತನೆಯ ಕಂಬವಿದ್ದರೂ
ಕಣ್ಣೆಲ್ಲಾ ಪಡಸಾಲೆಯ ದೊಡ್ಡ ಕಿಟಕಿಗೇ
ಮೊದಲ ಸಲವೇ ಕಣ್ಣಂಟಿಸಿ ಹೋದರು...
ಹೀಗೊಂದು ಅಂದಾಜೇ ಇರಲಿಲ್ಲವಲ್ಲ
ನೂರರ ನೋಟೊಂದ ಕೈಗಿತ್ತಾಗಲೂ?
ಈಗವರು ಯಾವಾಗಲೂ ಬರುವವರು
ನಾಲ್ಕು ಕಿಟಕಿಗಳಿದ್ದರೂ ತಂದು
-ತೊಡಿಸಿದ ಪರದೆ ಆ ದೊಡ್ಡ ಕಿಟಕಿಗಷ್ಟೇ
ಪ್ರೇಮದ ಪೊರೆಬಿದ್ದ ಕಣ್ಣುಗಳಿಗೆ
ದೋಚುವ ಕೈಗಳು ಕಾಣುವುದಿಲ್ಲ

ಆ ಕಿಟಕಿ ಈಗ ಅವರ ಮನೆಯ ಗೋಡೆಗೆ!
ಬೆವರ ಕಲೆಗಳಿಲ್ಲ ಕುಮುಸು ವಾಸನೆಯಿಲ್ಲ
ಜೇಡಗಳೇ ಇಲ್ಲ ಬಲೆಗಳಿನ್ನೆಲ್ಲಿ
ಪಾತ್ರೆಗಳ ಬೆನ್ನೇರಿದ ಮರಿಸೂರ್ಯರು
ಕೂತಲ್ಲೇ ಬೆಳಕು ನಡೆದುಬರುತ್ತದೆ
ಮಿರಮಿರನೆ ನೆಲ ಹೊಳೆಯುತ್ತದೆ
ಬಂದವರ ಆಸರ-ಬೇಸರಕ್ಕಾಗುತ್ತದೆ
ಮಲಗಿದರೆ ಪರದೆ ಸರಿಯುತ್ತದೆ
ಆಹಾ ಎಂಥ ಸುಖವಿದು?
ಕತ್ತಲ ಕಳೆವ ಕಿಟಕಿಗೆ ಕೊಡುವುದರಲ್ಲೇ ಸುಖ

'ಭಲೆ ಮಜಬೂತು ಕಿಟಕಿಯಿದು
ಬೆಲೆಯುಳ್ಳದ್ದು ಜೋಪಾನ'
ಹೊರಗಿನವರ ಮಾತಿಗೆ ಉಬ್ಬಿದ್ದೆಷ್ಟೋ
-ಮನೆಯೊಳಗಿನವರು
'ಈ ಮಾಡು-ಗೋಡೆಗಳಿಗೆ ತಕ್ಕುದಲ್ಲವೇನೋ'
ಉಬ್ಬಿದ್ದು ಇಳಿಯಲೇಬೇಕು...
ಕೊಟ್ಟ ಹೊಟ್ಟೆಗೆ ಆ ದೇವರು
ಕಿಚ್ಚು ಹುಟ್ಟಲೂ ಜಾಗಕೊಟ್ಟಾಗ

ಕಿಟಕಿಯ ಪ್ರಭಾವಳಿಗೆ
ನೆರೆಮನೆಯ ನೆತ್ತಿಗಳಲ್ಲೂ ಚಿಗುರು
ಆಗಿವರ ಓಟ ಬೋಳುತಲೆಯ ಮೈದಾನದೆಡೆ
ಅದು ಬೀಸಿತು ಇವರು ಹೊತ್ತುತಂದರು
ತಲೆಯಿಂದ ತಲೆಗೆ ದಾಟಿದ ಜಿಡ್ಡುಹೊದಿಕೆಯದು
ಆ ದೊಡ್ಡಕಿಟಕಿಯೀಗ ಸಂಪೂರ್ಣ ಧ್ಯಾನಾವಸ್ಥೆಗೆ

ನೆರೆಹೊರೆಯ ನೆತ್ತಿಯಲ್ಲೀಗ ಬಲಿತ ಕಾಂಡ
ಎಲೆ ಹೂವಿನೊಂದಿಗೆ ನೆಟ್ಟನೆಯ ಮುಳ್ಳೂ
ಗಾಳಿಸಾಥಿಯೊಂದಿಗೆ ಸಣ್ಣಗೆ ಕೊರೆತ
ಕಡತಂದ ಹೊದಿಕೆತುಂಬ ರಂಧ್ರ
ಈಗಿವರ ಮನೆತುಂಬ
ಮತ್ತೆ ಪುಟಿವ ಬೆಳಕುಮರಿಗಳು
ಮುಚ್ಚಿಡಲಾಗದು ಬೆಳಕು... ಹಾಗೇ ದೋಚಲೂ

ತಂದಮನೆಗೇ ಕಿಟಕಿ ಮರಳಿಸುವಲ್ಲೀಗ ಅವರು
ಹಾರೆ ಪಿಕಾಸಿ ಗುದ್ದಲಿಗಳ ಗುರುತುಗಳೆಲ್ಲ
ಅವರ ಗೋಡೆಗಳಿಗೇ
ಚೌಕಟ್ಟೋ ಗೆದ್ದಿಲುಗಳ ಪಾಲು
ಹೇಳಿಕೇಳಿ ಕಬ್ಬಿಣ, ಕಾಸಿದಷ್ಟೂ
ಮೆದುಗೊಳ್ಳುವ ಎದೆಸರಳು
ಬಡಿದಷ್ಟೂ ಬಯಲು
ಕಿಟಕಿಯ ಆತ್ಮ ಎಂದಿಗೂ ಅಜರಾಮರ
ಆ ಪಡಸಾಲೆಯಲ್ಲೇ...

-ಶ್ರೀದೇವಿ ಕಳಸದ

Thursday, August 4, 2016

ತಂಪಗೆಂಪಗುಟ್ಟ


ಏಯ್ ಸುಮ್ಮನಿರು ಅಲ್ಲಾಡಿಸಬೇಡ!
ಮಂಡಿಯೊಳ ತಲೆಸಿಕ್ಕಿಸಿಕೊಂಡೇ
ಜೋರು ಮಾಡಿದೆ
'ಅರೆ ಏನು ಮಾಡ್ತಿದ್ದೀಯೇ?'
ನೀ ಹೇಳಿದ್ದನ್ನೇ
'ಆದ್ರೆ... ತಂಪೇನದು?'
ಶತಮಾನದ ಖೊಡ್ಡ, ನಯವಾಗಿಸಬೇಡವೆ?
ಸುಮ್ಮನಿದ್ರೆ ಸರಿ, ಕತ್ತರಿಸಿಬಿಡ್ತೀನಿ!
'ಅಯ್ಯೋ ಈ ಹುಡುಗಿ ಯಾಕೆ ಹೀಗೆ,
ಏಯ್ ಸಾವಿತ್ರಿ ನೀನಾದ್ರೂ ಹೇಳೆ'
ನಿಮ್ಮಗ ಬಿಸಿಯಾಗೋ ಮೊದಲೇ ಪಾನಕ ಮಾಡಬೇಕು,
ಪುರುಸೊತ್ತಿಲ್ಲ ಅತ್ತೆಮ್ಮ
'ಏಯ್ ಪುಟ್ಟಣ್ಣ ಇದೇನು ನೋಡೊ?'
ಥಂಡಾ ಥಂಡಾ ಕೂಲ್ ಕೂಲ್-
ಅಂದವನಿಗಿಂತ ಮೊದಲೇ ಪುಟಿದ ಚೆಂಡು

ಉಳಿದವನವನೊಬ್ಬನೆ ಒಬ್ಬನೇ ಒಬ್ಬನೇ
ಮಂಜುನಾಥನೊಬ್ಬನೇ...;

'ಎಂದಾದರೂ ಏನಾದರೂ ಕೇಳಿದ್ದಿದೆಯೆ?
ಬೆನ್ನು ಬಾಗಿಸಿ, ನೆಲ ನೋಡುತ್ತಲೇ ಸವೆದೆನಲ್ಲ?
ಅದ್ಯಾವ ಮಾಯೆಯಲ್ಲಿ ಮುರಿದೆ ಬೆನ್ನು
ಕೊರಡಿನೊಳಗೊಂದು ಕೊರಡಿಟ್ಟೆಯಲ್ಲ
ನಿಲ್ಲುವಾಗ ಬಾಗಿಸಿದೆ, ಬಾಗಿದಾಗ ನಿಲ್ಲಿಸಹೊರಟೆ
ಇದು ಲೀಲೆಯಾ?'

ಹಾಗೇ ತಲೆಸವರಿಕೊಂಡು ಬೈತಲೆಗಾಗಿ
ನೆತ್ತಿಯೆಲ್ಲ ಸವರಿಕೊಂಡಳು
ಚೇಳಿನಮರಿಗಳಂತೆ ಸಣ್ಣಸಣ್ಣ ಹೆಳಲಬಿಗಿತ
'ಬೀಳುವಾಗ ಇದೆಂಥ ಸಿಂಗಾರ?' ಎತ್ತಿದಳು ತಲೆ
ಗೋಡೆಹಕಳೆ ಜೀವಹಿಡಿದಿತ್ತು ಇನ್ನೂ
ಅದರ ತುದಿಗಾಲಲ್ಲಿ ನಿಂತಿತ್ತು ಹನಿಯೂ

'ಸಿಕ್ಕುಬಿಡಿಸೆಂದರೆ ತಲೆಹಣ್ಣುಹಣ್ಣು
ಈಗ ಕತ್ತರಿಸುತ್ತಿದ್ದಾಳೆ ಉಗುರಕಣ್ಣು
ಜೋಮಡರಿ ನಿಂತ ಕಾಲೇ ಕಂಬವೀಗ
ಹೊಟ್ಟೆಯೊಳಗೆ ಚಿಟ್ಟೆಗಳಾಟ
ಹೇಳೆ ಮೊಮ್ಮಗಳೇ ಎಂತದದು ತಂಪು?'

ಇಲಿ ಅಟ್ಟಿಸಿಕೊಂಡು ಬಂದ ಬೆಕ್ಕು
ಗೋಡೆಗೆ ಚಿಮ್ಮಿದ ಕೆಂಪುಬಣ್ಣ
ಸೊಂಟಮುರಿದ ಪುಟ್ಟಗಾಜುಕುಪ್ಪೆ
ಮೂತಿ ತಿರುವಿದ ಕುಂಚ
ನಾಲಗೆ ಕಚ್ಚಿ ಅಂಗಳಕ್ಕೆ ಹಾರಿದ ನಾನು;
ಹೇಳಬೇಡಿರೈ ಯಾರೂ ಆ ತಂಪಕೆಂಪಗುಟ್ಟ

***

ಕೂಸಿಗೆ ಹಾಲು ಹುಡುಕುತ್ತ ಕೆಫೆಗೆ ಹೊಕ್ಕೆ
ರಸೀದಿ ಕೊಡುವವಳ ಉಗುರುಗೆಂಪಿಗೆ
ಮಗಳೋ ಮರಳು ಕೈಯ್ಯೇ ಬಿಡಳು
ಹಾ ತಂಪುಕೆಂಪು!

ತಂಪುಕಾಫಿಯೊಳಗೀಗ ಬೆಚ್ಚಬೂದಿಯ ಕೆದಕು;
ಇದು ದವಡೆ, ಅದು ಬುರುಡೆ, ಇದು ಮಂಡಿ, ಅದು ಮುಂಗೈ,
ಅರೆ ಇದೇನಿದು?
ಎಂದೂ ಕೊನರದ ಸರಳು!
ನಿಲ್ಲು ಜನಮೇಜಯsss ನಿಲ್ಲು
ಅವಳ ಬೆನ್ನಮುರಿದವರ ಬಾಕಿ ತೀರಿಸಬೇಕಿದೆ
ಹೊಟ್ಟೆಯೊಳಗೆಲ್ಲ ಮರಿಸರ್ಪಗಳು
ಎದುರಿಗೊಂದು ಹೆಡೆಯೆತ್ತಿದ ಮುದಿಸರ್ಪ
ಅದರ ನಾಲಗೆಯೂ ತಂಪು!

-ಶ್ರೀದೇವಿ ಕಳಸದ

#ಆಲಾಪಿನಿ

Wednesday, August 3, 2016

ನಾದಬಿಂದುಕಲಾತೀತ


ಮಾನಕ್ಕ ಅಂಜಂಜಿ ಮಾತ ಹಿಂಜಿಂಜಿ
ಹಂಜಿಬುಟ್ಯಾತಲ್ಲೋ ಮನಸೀಗ
ಮುಟ್ಟsದೇ ಅರಿತ ನಾಡೀಯ ಮಿಡಿತ
ಕಿವಿಗೊಡದೇ ಎದಿಗೆ ಹಿಡಿದಿಟ್ಟ ಬಡಿತ
ಅರೆದರೆದುಕೊಂಡs ಅರಿತಿದ್ದಲ್ಲೇನ ಎಲ್ಲ
ಬಡಬಡಿಸಿಕೊಂಡs ಬೆಲ್ಲವಾಗಿಸಿಲ್ಲೇನ?
ಈಗಾರ ಒಗಿ ತಗದ ಯಾರೋ ಹಾಕಿಟ್ಟ ಚಿಲಕ

ಹಾರೀತ ಬೇಸೂರ ಸೂರ
ಕಟಗರಿಸೀತ ತಾರತಂತಿ
ತುಂಡರಿಸೀತ ಜೀರುದಾರ
ಸೀಳೀತ ಮಣಿಯಹಣಿ
ಬಾಯಬಿಟ್ಟೀತ ಸಾರಂಗಸೇತುವಿ;
ಹಿಂಗಂತ ಕುಂತರ ಕೂಡೀತರ ಹ್ಯಾಂಗ
;ಆಡೂತ ಹಾಡೂತ ಹಿಡಿವುದಲ್ಲೇನ ಸುತಿ

ಹಿಂದಿನದು ಹಿತ್ತಲ ಬಾಗಿಲಕ
ಮುಂದಿನದು ಮುಂಬಾಗಿಲಕ
ನಡುಮನಿಯೊಳಗೀಗ ನಂದಾದೀಪ
ಕುಡಿಮಾಡ ಸಣ್ಣ ಬಿಡ ವಾರಿಗಣ್ಣ
ಸಾಕೇನ ಈ ನೀಳತೋಳದಿಂಬ-
ಬೇಕೇನ ಕುತನಿರೇಷಿಮಿಮಕಮಲ್ಲ?

ದರದರದರದರದರ ಓಡಿತೋಡಿತ ಮುಗಿಲ
ಚಿಟಕಪಟಕ ತಟಕಮಟಕ ಹನಿದ್ಹನಿದು ಹಳ್ಳ
ದಡದಡದಡದಡದಡ ಮಾಯವಾಯ್ತ ದಿಣ್ಣ
ತೇಲುಮುಳುಗು ಮುಳುಗುತೇಲು ಒದ್ದಿಮಾಡ್ತ ಕಣ್ಣ
ಎಡಕಬಲಕನಡಕಮ್ಯಾಲಕ ಆಡೀತಾಡೀತ ಕೈಯ್ಯ
ಗೀರಿಗೀರಿ ಚಿತ್ತಹಾರಿ ಚೀರಿ ಬಿದ್ದಿತ್ತದ ಚಿಲಕ

ಮಾನಕ್ಕ ಅಂಜಂಜಿ ಮಾತ ಹಿಂಜದ ಮನಸೀಗ
ಮೂಕವಾಯಿತಲ್ಲ ಆದರ ಮಾತ ಮರಿಯಲಿಲ್ಲ
ಮನಸೀನ ಬುಟ್ಟಿದುಂಬ ಅರಳ್ಹೊರಳು ಮಲ್ಲೀಗಿ
ಆತ್ಮದೊಳಗದೊಂದು ಜ್ಯೋತೀಯ ಲಿಂಗ

-ಶ್ರೀದೇವಿ ಕಳಸದ
#ಆಲಾಪಿನಿ

ಶಾರದವ್ವನ ಪೂಜಿ


ಅನುಪಮಾ ಗೋರಿಮಾ
ಶಾಹೀರಾ ಅನುಸೂಯಾ
ಎಲ್ಲಾ ಸೇರಿ ಕಿಲ್ಲಾ ಏರಿ
ಸಾಲೀ ಕಟ್ಟಿ ಹತ್ತೂದ್ಕ
ಮುಟಗೀ ಬಿಚ್ಚೂದ್ಕ
ಸೆಕೆಂಡ್ ಬೆಲ್ ಹೊಡಿಯೂದ್ಕ

ಮಾದೇವಿ ಮುಂದೊಂದ ದೊಡ್ಡಬುಟ್ಟಿ
ಬರಾಬರಾ ಬಿಚ್ಚತಿದ್ಲ ಕಚ್ಚಾಹಾಳಿ
ಜೀಕಾ ಹೊಡೀತಿದ್ಲು ಬೆಲ್ಲವ್ವ
ತುಸುತುಸು ಕರಗತಿದ್ಲು ಸಕ್ರೆವ್ವ
ಮಾರಿಮುದಡಿ ಮೆತ್ಗಾಗಿದ್ಲು ಪುಟಾಣೆವ್ವ
ಹೋಳಾಗಿ ಕುಂತಿದ್ರು ತೆಂಗಪ್ಪ ಬಾಳಪ್ಪ
ಸರಸೋತಿ ಮಕ್ಕಳಿಗೀಗ ಮೈಯೆಲ್ಲಾ ನಾಲಿಗಿ

ಯಾಕಾರ ಮುಗಿದಿತ್ತೋ ಶುಕ್ರಾರ
ಶನಿಯಂತೆ ಸುತ್ತಿತ್ತ ಕಕಾಂಬಳ್ಳಿ
ತಿದ್ದೇ ತೀಡಿದ್ದು ಒಂದ ಎರಡ?
ಶಂಕ್ರವ್ವಗಂತೂ ಸಣ್ಣsಕ ನಿದ್ದಿ
ಈಕಡೆಬಿದ್ದಿ ಈರವ್ವ ಆಕಡೆ ಬಿದ್ದೀ ಆಶವ್ವ
ಜೋಲಿ ತಪ್ಪೂದ್ರೊಳಗ ಸುಂಯಂತ ಬಿದ್ದಿತ್ತ
ಸಣ್ಣಸಣ್ಣ ಸೀಮಿಯ ಸುಣ್ಣ
ತಪ್ಪೀತ ಧಪ್ಪಂತ ಬೀಳುವ ಕನಸ

ಸೋತ ಮಾರಿ ಹಾಕಿ ಸೋಮಾರ ಬಂದಿತ್ತ
ಪಕ್ಕಾಪುಸ್ತಕ ಮೇಜs ಹಾರಿತ್ತ
ಅಕ್ಕೋರ ಚಶ್ಮಾ ಮೂಗ ಏರಿತ್ತ
ಅಂಟಿ ಎರಡೂ ಗೆರೆಗಳಿಗೆ
ಎತ್ತಿ ಕೊಂಬು ಮೇಲಮೇಲಕ್ಕೆ
ನಡುವ ಸುತ್ತಿದ್ದಷ್ಟ ಖರೆಯಂತ
ಪದಬಿಡಿಸಿ ಹೇಳ... ಅಂದೆ
ಪಕಪಕನೆ ನಕ್ಳು ಯಮುನೆ
ಝಣಝಣ ಝಣಝಣ
ಕೆಂಪಗಾಜಿನ ಚಿಕ್ಕೀಬಳೆ ಕಣ್ಣ ಮುಂದೆ

ನಾಳೆ ಮಂಗ್ಳಾರ ಹಿಂದಿಂದ ಬುದ್ವಾರ
ಗುರುವಾರ ಬಂತಂದ್ರ ಸಂತಿ
ಶುಕ್ರಾರಂತೂ ಬಂದೇಬರ್ತಾಳ ಸರಸೋತಿ
ತೊಟ್ಟು ಚಿಕ್ಕೀಬಳಿ ಕೇಳೇಬಿಡಬೇಕ;
ಗೆರೆದಾಟಿ ಬರೆದದ್ದು ಅಕ್ಷರಲ್ಲೇನ
-ದುಂಡಸುತ್ತಿದರಷ್ಟ ಪಾಸೇನ?

-ಶ್ರೀದೇವಿ ಕಳಸದ
#ಆಲಾಪಿನಿ

ಮಾಯಾಮೃಗ

ಆಕೆ ಕೊರಳ ಕೊಂಕಿಸಿದ್ದಳಲ್ಲ?
ಫೋಟೋ ಕಳಿಸುತ್ತಿದ್ದಾಳೆಂದರ್ಥ
ಚಿತ್ತಾರ ಸೆರಗಿರಲಿ ಅಂಚು ಸಣ್ಣದಿರಲಿ
ಒಡಲು ಮಾತ್ರ ಮೆತ್ತಗಿರಲಿ ಎಂದೆಲ್ಲ
ಸಂದೇಶ ಕಳಿಸುತ್ತಿದ್ದ ಆತ
-ಸಾವಿರ ಮೈಲಿಗಳಾಚೆಯಿಂದ
ಇಬ್ಬರ ಬೆರಳುಗಳೀಗ ನವಿಲುಗರಿ

ಇನ್ನೊಬ್ಬಳೂ ಸೀರೆಗುಡ್ಡೆಗಳ ಮಧ್ಯೆಯೇ
ಸ್ವಗತಕ್ಕಿಳಿದಿದ್ದಳು;
ಅರೆ, ಇಲ್ಲೇ ಇತ್ತಲ್ಲ ಎಟಿಎಂ ನಮ್ಮದು...
ಅದೋ ಅಲ್ಲೆಲ್ಲೋ ಗೋಡೆಗೆ ವಾಲಿಕುಳಿತಿತ್ತು
ಆಕೆಯ ಕೈ ನೇರ ಅದರ ಜೇಬಿಗೆ
ಇಬ್ಬರ ಕಣ್ಣಲ್ಲೂ ಈಗ ಜಾಣಪೊರೆ

ನೋಡಿದ್ದೇ ಒಂದು ಸೀರೆ
ಅದಕ್ಕೂ ನಾನೇ ಬೇಕಿತ್ತೇನೋ
ಮಡಿಕೆ ಬಿಚ್ಚಿಕೊಳ್ಳದೆ ಎದೆಗಂಟಿಕೊಂಡಿತು
ಹಣ ಪಾವತಿಸುವಾಗ, ಯಾರೋ ಚುಂಗೆಳೆದಂತೆ
ತಿರುಗಿದೆ
'ಕ್ಷಮಿಸಿ, ಈ ಸೀರೆ ನ..ನ..ಗೆ...' ಮಾತು
-ಮುಗಿಯುವ ಮೊದಲೇ ಅವರ ಭುಜಕ್ಕಿಟ್ಟು
ಕಣ್ಣುಗಳಿಗೆ ನಕ್ಷತ್ರವಂಟಿಸಿ ಮೆಟ್ಟಿಲಿಳಿಯತೊಡಗಿದೆ
ಯಾರೋ ಕೈ ಎಳೆದಂತೆ...
ನಡೆಯುತ್ತ ನಡೆಯುತ್ತ ಓಡತೊಡಗಿದೆವು
ನನ್ನ ದಾಟಿದ ಆ ಹೆಜ್ಜೆಗಳದ್ದು
ಸಪ್ಪಳವೂ ಇರಲಿಲ್ಲ ಗುರುತೂ ಇರಲಿಲ್ಲ

-ಶ್ರೀದೇವಿ ಕಳಸದ
#ಆಲಾಪಿನಿ

ಲಯವಿನಾ

We all scream
ಬಾರೆ ಬಾ ದ್ರೌಪದಿಯೇ
ಚೌಪದಿಯೇನು ಸಹಸ್ರಪದಿ
ಬರೆಯುವಾ ಹಾಡುವಾ

You scream
ಕಂಡಿದ್ದಕ್ಕಿಂತ ಕಾಣದ್ದಕ್ಕೇ ಕಾರಣ
-ಉದಾಹರಣ ಸೋದಾಹರಣ
ಸುಕಾಸುಮ್ಮನೇ ಕಾಲಹರಣ

ದಢಾರನೆ ತೆಗೆದ ಬಾಗಿಲು
ಅರ್ಧಕ್ಕೆ ನಿಲ್ಲಿಸಿದ ಸಾಲು
ಕಾಲಬಳಿ ಗುಳುಗುಳು

I scream
ಸಪ್ತಪದಿಯೋ ಶತಪದಿಯೋ
ದೃಷ್ಟಿಪೂತಂ ನ್ಯಸೇತ್ ಪಾದಂ
ಚಲನೆಯೇ ಅರಿವಿನ ಮೂಲವಯ್ಯ

I scream, you scream, we all scream for...
ಬಿಟ್ಟಸ್ಥಳ ನಮ್ಮ ಆಯ್ಕೆ
ಮೌಲ್ಯಮಾಪನ ನಿಷಿದ್ಧ
ಇಲ್ಲಿಗೆ ಅಂಕಭಾರತ ಸಮಾಪ್ತಿ

-ಶ್ರೀದೇವಿ ಕಳಸದ
#ಆಲಾಪಿನಿ