Friday, May 9, 2008

ಬಂಗಾರ ಬೆಳಕು ಮತ್ತು ಒಲೆಯೊಡತಿ

ಗುಡಿಸಲಿಗೆ ಹೊಚ್ಚಿದ್ದ ತಗಡಿನಿಂದ ತಟ ತಟ ನೀರು... ಬಿಳಿ ಜರ್ಮನಿ ಪ್ಲೇಟಿನ ತುಂಬ ಬಂಗಾರ ಬಣ್ಣ. ಏದುಸಿರಿನ ಮಳೆಗೆ ನೆಲ್ಲಕ್ಕಿ ತೂತು. ಉಬ್ಬಿ ನಿಂತ ಸೆಗಣಿ ಹಕಳೆಗೆ ಯಾವ ದೇಶದ್ದೋ ರೂಪು. ಆ ರೂಪಿಗೂ ಆ ತೂತಿಗೂ ಅದೇನ್ಥದ್ದೂ ಸಂಬಂಧ. ಸುತ್ತಲೆಲ್ಲ ಪರಿಮಳ ಅದರಿಂದಲೇ. ಇಳೆಯ ಒಡಲಿನಿಂದ ಇಣುಕಿದ ಕೆಂಪು ಜಲ್ಲಿಗೆ, ಮಳೆಗೆ ತೋಯ್ದು ಮಡಿಯಾದೆನೆಂಬ ಸಮಾಧಾನ. ಒಲೆ ಮಾಡಿನ ಒಡತಿಗೋ ಒಳಗೊಳಗೆ ತೋಯ್ದ ಅನುಭವ, ಬಿಸಿ ಹೆಂಚು ಎದುರಿಗಿದ್ದರೂ...ಬಂಗಾರ ಹನಿ ಉದುರಿ, ಕಾವಲಿ ಚುರುಗುಟ್ಟಿದಾಗಲೇ ಮತ್ತೆ ಎಚ್ಚರ ಆಕೆಗೆ. ಕಟ್ಟಿಗೆಯೇನೋ ತೋಯ್ದು ತೆಪ್ಪಗಾಗುತ್ತಿತ್ತು. ಅದರ ‘ತಾಪ’ ಮಾತ್ರ ಅದೇ ಒಲೆಯೊಡತಿಗೆ...

ಬೂಸರು ಹಿಡಿದ ಬೀಡಿ ನಗಿಸಲು ಮೀಸೆಯೊಡೆಯನ ಒದ್ದಾಟ. ಕಣ್ ಕಿರಿದು ಮಾಡಿ ನಗತೊಡಗಿತು ಹೊರಸಿಗೆ ಬಿಗಿದ ಪುಂಡಿನಾರು : ತನ್ನ ಕಟ್ಟಿಗೆಗೆ ಬಿಗಿದದ್ದು ಈ ಕೈಗಳೇ ತಾನೆ? ಎಂದು. ಆದರೂ ಒಳಗೊಳಗೆ ಖುಷಿ, ಬೇರು ಕಿತ್ತು, ಹಗ್ಗ ಹೊಸೆದು, ಹೀಗೆ ಕಟ್ಟಿಗೆಗೆ ಬಿಗಿದಾತನ ಪರಿಪಾಡಲು ನೋಡಿ.

ಒಂದಿರುಳು, ಒಂದು ಹಗಲು ಮಾತ್ರ ಕಳೆದಿದೆ ಒಡಲಿನಿಂದ ಮಡಿಲಿಗೆ ಜಾರಿ. ಅಪ್ಪನಂತೆ ಕಪ್ಪಗಿದ್ದರೂ ಅವ್ವನ ತಾಳಿ ನೊಂದುಕೊಳ್ಳುವಷ್ಟು ಬಂಗಾರ ಬೆಳಕು. ಒಲೆಯೊಡತಿಗೋ ಅರೆಬಿಸಿ ಎಣ್ಣೆಯನ್ನೇ ಅಳ್ಳೆತ್ತಿಗೊತ್ತಿ ತಟ್ಟಿ ವಂಶಕುಡಿ ಮಲಗಿಸಿದ ಸಂತಸ. ಎದೆಹಗುರು ಮಾಡಿದ ಕಂದನೊಮ್ಮೆ ನೋಡಿ ನಿದ್ದೆಗೆ ಜಾರುವ ತವಕ ಹೆತ್ತೊಡಲಿಗೆ...

ಮತ್ತೆ ಅದೇ ಏದುಸಿರಿನ ಮಳೆ...

ಇನ್ನೆರಡು ತಾಸು ಕಳೆದರೆ ಬಂಗಾರ ಕಿರಣಗಳೊಡೆಯನ ಆಗಮನ. ಗೊರಕೆಗೆ ಆಗಾಗ ಬೆದರುವ ಮೀಸೆಗುಚ್ಛ. ನ್ಯಾಗೊಂದಿ ಸಂದಿ ಅಪ್ಪಿದ ಬೀಡಿಗೂ, ಒಲೆಯ ತಲೆಯೇರಿದ ಊದುಗೊಳವಿಗೂ ಸಕ್ಕರೆ ನಿದ್ರೆ. ಹೊಗೆಗಪ್ಪು ಅಡರಿದ ಗೋಡೆ ಮೇಲೆ ಧ್ಯಾನಸ್ಥ ಹಲ್ಲಿ. ಕೊಂಚ ಮೈಮರೆತರೆ, ಹಾರೀತು ಪ್ರಾಣಪಕ್ಷಿ ಎಂಬ ನಡುಕದಲ್ಲೇ ರೆಕ್ಕೆ ಹುಳು. . .ಎದೆಕಾವಿಗೆ ಮೊಗಮಾಡಿದ ತುಂಬುಗಣ್ಣಿನ ಕೂಸು. ಪುಂಡಿನಾರಿಗೆ ಮೈಭಾರ ಹೊರಿಸಿದ ಅಮ್ಮ, ಅಗ್ಗಿಷ್ಠಿಗೆ ಮಗ್ಗುಲಿಗೆ ಆ ಅಮ್ಮನ ಅಮ್ಮ ಅದೇ ಆss ಒಲೆಯೊಡತಿ...

ಅಪ್ಪಿದ ರೆಪ್ಪೆ ನುಸುಳಿ ಹರಿಯುತ್ತಿದ್ದವು ಕಣ್ಣ ಹನಿಗಳು, ಆ ಹನಿಗಳಿಗೆ ಸಾಥ್ ನೀಡುತ್ತಿದ್ದವು ಜಂತಿಯ ಸಾರವನ್ನೆಲ್ಲ ಹೀರಿ, ಬಂಗಾರದುಡುಗೆ ತೊಟ್ಟ ಹನಿಗಳು. ಆ ಹನಿಯ ಹಸಿಯಲ್ಲೇ, ಹೊದ್ದು ಮಲಗಿದವರೆಲ್ಲ ಅದಾಗಲೇ ಕದ್ದಾಗಿತ್ತು ಹೊನ್ನ ಕನಸು. ಆದರೆ....

ಈ ಮನೆ ಹೊಸ್ತಿಲು ತುಳಿದು ಮೂವತ್ತು ದೀಪಾವಳಿ, ಯುಗಾದಿ ಹೀಗೆ ಏನೆಲ್ಲ ಕಳೆದವು ಜೊತೆಗೆ ಅಕ್ಷತೃತಿಯಾ. ಹೌದು. ಈ ಸಲವೂ ಹೀಗೆ ಬಂದು ಹಾಗೇ ಹೋಯಿತು ಅಕ್ಷತೃತಿಯಾ...ಆಗಾಗ ಹೇಳುತ್ತಿದ್ದ ಅವ್ವನ ಧ್ವನಿ ಒಲೆಯೊಡತಿಯ ಮುರುಕು ಬೆಂಡೋಲೆ ಪಕ್ಕದಿಂದ ಹಾಯ್ದು ಹೋಯಿತು. ‘ಈವತ್ತಿನ ದಿನ ಒಂದು ಗುಂಜಿನಾದ್ರೂ ಬಂಗಾರ ತಗೊಂಡ್ರೆ ಒಳ್ಳೆಯದು. ಅಷ್ಟೇ ಅಲ್ಲ ದುಪ್ಪಟ್ಟೂ ಆಗತ್ತೆ. ಹಾಗಂತsss ನಮ್ಮ ಅಮ್ಮ ಹೇಳ್ತಿದ್ರು. ನಾನಂತೂ ಕಾಣ್ಲಿಲ್ಲ, ನೀನಾದ್ರೂ...’ ಅಮ್ಮ ಬಿಟ್ಟು, ಕೊಟ್ಟು ಹೋದ ಆಸ್ತಿಯೆಂದರೆ ಇದೊಂದೇ. ಆದರೆ...

ದಿನಸರಿದಂತೆ ತಪ್ಪಲೇ ಇಲ್ಲ ಗಂಜಿಗೆ ಗುದ್ದಾಟ. ವರ್ಷ ಕಳೆದಷ್ಟೂ ಮಳೆಯ ಕಾಟ. ಆ ಮಳೆಗೊಂದರಂತೆ ಬಸುರು-ಬಾಣಂತನ, ಆಳವಿ ಪಾಯಸಕ್ಕೆ ಕಟ್ಟಿಗೆ ಹೊಂಚಾಟ. ಅಂಟಿನುಂಡಿಗೆ ಕೊಬ್ಬರಿ ಕುಟ್ಟಾಟ. ಮತ್ತದೇ ಅಳು, ಮತ್ತದೇ ನಗು, ಮತ್ತದೇ ಬೆಳಕು, ಮತ್ತದೇ ಕತ್ತಲು, ನಡುನಡುವೆ ಬಂಗಾರಬೆಳಕು. . . .ಕನಸ ಹೂಡಲು, ನನಸ ಮಾಡಲು. ಬದುಕ ಬಂಡಿ ದೂಡಲು...
-ಶ್ರೀದೇವಿ ಕಳಸದ
also see
http://kendasampige.com/article.php?id=671