Wednesday, June 4, 2008

ಎಸ್‌ಪಿಬಿ - ೬೨, ಬಾಲೂ ಸಾರ್‍‌ಗೊಂದು ಪತ್ರ

ಗಾನ ವಿದ್ಯಾ ಬಡೀ ಕಠಿಣ ಹೈ?

ಬಾಲೂ ಸರ್‍ ನನ್ನ ಈ ಪ್ರಶ್ನೆಗೆ ನೀವಿಂದು ಉತ್ತರ ಹೇಳಲೇಬೇಕು. ಗದಗಿನ ಪುಟ್ಟರಾಜ ಗವಾಯಿಗಳು ರಚಿಸಿ, ಜೀವನಪುರಿ ರಾಗದಲ್ಲಿ ಬಂಧಿಸಿದ ಈ ಬಂದಿಶ್ ನನಗೆ ಸುಮಾರು ಹನ್ನೆರಡು ವರ್ಷಗಳಿಂದ ಕಾಡುತ್ತಲೇ ಇದೆ. ಆ ಕಾಡುವಿಕೆಯಲ್ಲೇ ಹಲವಾರು ಪ್ರಶ್ನೆ, ಉತ್ತರ, ನೋವು, ಕುತೂಹಲ, ಆಶ್ಚರ್ಯ, ಅದ್ಭುತ ಹೀಗೆ ಏನೆಲ್ಲ ಮಿಳಿತಗೊಂಡಿವೆ...

***

ಎಲ್ಲಿಂದಲೋ ತೇಲಿ ಬಂದ ಒಂದು ರಾಗದ ಅಲೆ.... ದುಂಡು ಮಲ್ಲಿಗೆ ಮೊಗ್ಗು ಬಿಡಿಸುವಾಗ, ಅದರ ರಾಗವಿಸ್ತಾರದ್ದೇ ನೆನಪು... ಗಿರಗಿರನೆ ತಿರುಗುವ ಫ್ಯಾನಿನ ಏಕನಾದವನ್ನೋ, ದೂರದಿ ಕೇಳುವ ರೈಲಿನ ಕೂಗನ್ನೋ, ಗೋಧಿ ಬೀಸಿಕೊಂಡು ಬರಲು ಅಮ್ಮ ಕಳುಹಿಸಿದ ಗಿರಣಿ ಯಂತ್ರದ ಶಬ್ದದಲ್ಲೋ, ಅಪ್ಪನಿಗೆ ಕಿರಿಕಿರಿಯೆನಿಸಿದರೂ ಭಾನುವಾರದ ದೋಸೆಗಾಗಿ ಪಟ್ಟುಬಿಡದೇ ಒಂದೇ ಸಮನೆ ಸದ್ದು ಮಾಡುವ ಮಿಕ್ಸಿ ಶೃತಿಯೊಂದಿಗೋ..... ಕಾಡುವ ಆ ರಾಗದ ಅವರೋಹ ಆರೋಹವನ್ನು ಗುನುಗುನಿಸುವ ಖಯಾಲಿ. ಅದು ಹರಿಸುವ ಖುಷಿಯಲ್ಲೇ ಗುರುಗಳ ಮನೆಗೆ ಹೋದಾಗ, 'ಒಂದು ರಾಗವನ್ನ ಹತ್ತತ್ತು ವರ್ಷ ಅಭ್ಯಾಸ ಮಾಡಿಸುತ್ತಿದ್ದರು ನಮ್ಮ ಗುರುಗಳು!' ಎಂದು ಆಲಾಪಿಸುವ ಅವರ ತತ್ವಕ್ಕೆ, ಮನದ ಮಾತು ಮೌನದಲ್ಲೇ ತಿಹಾಯಿ ಹೇಳತೊಡಗುತ್ತಿತ್ತು.


'ಅಪರಾತ್ರಿ ಎಬ್ಬಿಸಿ, ಮಾಲಕಂಸದ ಸಮಯವಲ್ಲವೇ ಇದು? ತಂಬೂರಿ ಶ್ರುತಿ ಮಾಡಿ ಎಂದು ಹೇಳುವ ನಮ್ಮ ಗುರುಗಳ ಲಹರಿಗಾಗಿ ನಾವು ಎಷ್ಟು ವರ್ಷ ಕಾಯ್ದಿಲ್ಲ? ಕೇವಲ ಒಂದು ರಾಗದ ಕಲಿಕೆಗಾಗಿ ಜಾಗರಣೆ ಮಾಡಿದ ರಾತ್ರಿಗಳೆಷ್ಟೋ!' ಎಂದು ಆಗಾಗ ಕವಳ ತುಂಬಿದ ಬಾಯಿಯಿಂದ ಗುರುಗಳು ತಾನಿಸಿದಾಗ, ಸಂಧ್ಯಾಸಮಯದ ಶೃಂಗಾರ ರಾಗ 'ಯಮನ್' ಮನದಲ್ಲಿ ನಲಿದಾಡುತ್ತಿದ್ದರೂ ಬೆಳಗಿನ ಭೈರವವನ್ನೇ ಗಂಭೀರವಾಗಿ ಹಾಡಲು ಮನಸ್ಸು ತಯಾರಾಗುತ್ತಿತ್ತು.

***

'ಒಂದಲ್ಲ ಎರಡಲ್ಲ ಐದ್ಹತ್ತು ವರ್ಷ ಗುರುಗಳ ಬಟ್ಟೆ ಒಗೆದು, ಪಾತ್ರೆ ತೊಳೆದು, ಕಸ ಗುಡಿಸಿದ್ದಕ್ಕೇ ಇಂದು ಈ ಸ್ಥಾನ. ದಿನಗಟ್ಟಲೇ ಒಂಟಿಗಾಲಿನಲ್ಲಿ ನಿಂತು ಗುರುಗಳಿಗೆ ಗೌರವ-ವಿನಯ ಸಲ್ಲಿಸಿದ್ದರ ಫಲವೇ ನಮ್ಮನ್ನಿವತ್ತು ಹೀಗೆ ಭದ್ರವಾಗಿ ನಿಲ್ಲಿಸಿರುವುದು'. ಗುರುಗಳ ರಾಗವಿಸ್ತಾರ ಹೀಗೆ ಕ್ರಮಿಸುತ್ತಿರುವಾಗ, ಅಷ್ಟು ದೂರದೂರಿನಿಂದ ಪ್ರಯಾಣಸಿದ ಕೇವಲ ಎಂಟ್ಹತ್ತು ವರ್ಷದ ಪುಟ್ಟ ಮನಸ್ಸಿನ ಗಂಟಲು ಆರಿ ಅಂಟಿಕೊಳ್ಳುತ್ತಿದ್ದರೂ 'ಒಂದು ಗ್ಲಾಸು ನೀರು ಬೇಕಿತ್ತು' ಎಂದು ಹೇಳಿದರೂ ಅದು ಮಂದ್ರಸಪ್ತಕದ ಕೆಳಗೆ ಜಾರಿ ಹೋಗುತ್ತಿತ್ತು....

***

'ಇಪ್ಪತ್ತಿಪ್ಪತ್ತು ವರ್ಷ ಗುರು ಸೇವೆಗೈದು, ಗುರುಗಳ ಅಪ್ಪಣೆಯಾದಾಗಲೇ ವೇದಿಕೆಯೇರುವ ಅಪೂರ್ವ ಸಮಯ. ಆ ಒಂದೇ ಒಂದು ಘಳಿಗೆಗಾಗಿ ನಾವು ಮಾಡಿದ್ದು ಒಂದು ರೀತಿ ತಪಸ್ಸೇ ಸರಿ ' ಎಂದು ಆಗಾಗ ಷಡ್ಜ್ ದ ಮೇಲೆ ಓಂಕಾರ, ಹ್ರೀಂಕಾರ ನಾದ ಹೊಮ್ಮಿಸುವ ಗುರುವರ್ಯರ ಎದುರಿಗೆ, 'ನಿನ್ನೆ ಹಾಡಿದ ಭೈರವಿಯ ತರಾನಾಕ್ಕೆ ಸಾವಿರಾರು ಚಪ್ಪಾಳೆ ಗಿಟ್ಟಿಸಿಕೊಂಡದ್ದು ಹೇಳು ಹೇಳು....' ಎಂದು ಮನಸ್ಸು ಒತ್ತಾಯಿಸಿದರೂ ನಾಭಿಯಿಂದ ಹೊರಡುವ ಶಬ್ದ ಪುನಃ ಆಲ್ಲೇ ವಿರಮಿಸುತ್ತಿತ್ತು.


****

ಬಾಲು ಸರ್‍, ಅದ್ಯಾಕೋ ನನ್ನ ಮನಸ್ಸಿಗೆ ಇದನ್ನೆಲ್ಲ ಈವತ್ತು ನಿಮ್ಮ ಮುಂದೆ ಹೇಳಿಕೊಳ್ಳಬೇಕೆನ್ನಿಸಿತು. ಏಕೆಂದರೆ, ನೀವೂ ಇಂತಹ ಪರಿಸ್ಥಿತಿಯನ್ನು ಎದುರಿಸಿ ಬಂದವರಲ್ಲವಾ? ಹೇಗೆ ಬೆಳೆದಿರಿ ಬಾಲು ಸರ್‌? ಇಂಥದನ್ನೆಲ್ಲ ಅನುಭವಿಸಿಯೂ, ಎಳೆಯರ ಮುಂದೆ ಅದ್ಹೇಗೆ ದೊಡ್ಡ ಗುರುವಾಗಿ ನಿಂತಿರಿ? ಯಾವ ವಿನಯ ನಿಮ್ಮ ದೊಡ್ಡ ಕಾಯದಲ್ಲಿ ಈ ಪರಿಯ ವಿನಯ ತುಂಬಿತು? ಅದ್ಹೇಗೆ ನೀವು ಎಳೆಯರ ತಲ್ಲಣವನ್ನು ಫ್ರೆಶ್‌ ಆಗಿ ಅನುಭವಿಸುತ್ತೀರಿ? ಅವರ ನೋವನ್ನು, ನಲಿವನ್ನು, ಪ್ರಯತ್ನ ಪಡುವ ಪರಿಯನ್ನು ಅದೆಂಥ ತೀವ್ರತೆಯಿಂದ ಆಸ್ವಾದಿಸುತ್ತೀರಿ? ಒಬ್ಬ ಗಾಯಕ ಚೆನ್ನಾಗಿ ಹಾಡುವುದರಿಂದ ಬೆಳೆಯುತ್ತಾನಾ? ಅಥವಾ ಚೆನ್ನಾಗಿ ಹಾಡುವವರನ್ನು ಬೆಳೆಸುವ ಮೂಲಕವಾ? ನೀವೇ ಉತ್ತರಿಸಬೇಕು ಬಾಲು ಸರ್‌.
ಈ ಪ್ರಶ್ನೆಗೆ ಉತ್ತರ ನಿಮ್ಮಿಂದ ಮಾತ್ರ ನಿರೀಕ್ಷಿಸುತ್ತಿರುವುದಕ್ಕೆ ನಿಮ್ಮ ಅಪೂರ್ವ ವ್ಯಕ್ತಿತ್ವವೇ ಕಾರಣ...

-ಶ್ರೀದೇವಿ ಕಳಸದ

also see

http://kendasampige.com/article.php?id=798

No comments: