Thursday, June 12, 2008

ಕಾಫಿ ಹುಡುಗಿ


`ಮೇಡಮ್ ಕಾಫಿ...'ನಾನು ಕಾಫಿ ಕುಡಿಯಲ್ಲ ಅಂತಾ ಗೊತ್ತಿಲ್ವಾ ಇವ್ಳಿಗೆ...? ಮತ್ತೆ ಮರುದಿನ 'ಮೇಡಮ್ ಕಾಫಿ ನಾ, ಟೀನಾ?'ಛೆ. ಇವ್ಳಿಗೆ ಹೇಳ್ಬಿಡ್ಬೇಕು. ಕಾಫಿಗೂ ಟೀಗೂ ರಿಲೇಶನ್ ಕಟ್ ಆಗಿ ಎಷ್ಟೋಂದ್ ದಿನ ಆಯ್ತು, ಇನ್ಮೇಲೆ ನನ್ನನ್ನ ಕೇಳ್ಬೇಡ್ವೇ ಮಹರಾಯ್ತಿ ಅಂತಾ. ಹೀಗಂತಾ ಯೋಚಿಸ್ತಿರೋವಾಗ್ಲೇ, ನನ್ನ ಬೆರಳುಗಳೂ ಕೂಡ ಅವಳಿಗೇ ಸಪೋರ್ಟಾ? ನಿಧಾನವಾಗಿ ಕಪ್ಪಿನ ಹಿಡಿಕೆಯನ್ನ ಹಿಡಿದೇಬಿಟ್ಟಿದ್ವು !

ಟ್ರೇನಲ್ಲಿದ್ದ ಕಪ್ಪುಗಳತ್ತಲೇ ದೃಷ್ಟಿ ನೆಟ್ಟಿದ್ದಳು ಆ ಹುಡುಗಿ..... ಮುಗುಳುನಗೆಗೂ ಅನುವು ಮಾಡಿಕೊಡದ ಉಬ್ಬು ಹಲ್ಲುಗಳು, ಅಷ್ಟೇನೂ ಉದ್ದವಲ್ಲದ ಮಾಟ ಮೂಗು. ದೃಷ್ಟಿಗೆ ದೃಷ್ಟಿ ಕೊಡದೆ, ನಿಂತಲ್ಲಿ ನಿಲ್ಲದ ಕಂದುಕಣ್ಗುಡ್ಡೆಗಳು, ಬಾಗಿಯೂ ಬಾಗದಂಥ ಹುಬ್ಬುಗಳ ನಡುವೆ ಅದೆಂಥದ್ದೋ ಮಿಂಚಿನಿಂದ ಕೂಡಿದ ಹಸಿರು ಬಿಂದಿ. ಶಿವಾಜಿನಗರ ಫುಟ್ ಪಾತಿನ ಪುಟ್ಟ ಜುಮುಕಿ, ಗುಂಗುರುಗೂದಲಿಗೂ ಕೆಂಪುಬಣ್ಣದ ಹೇರ್‍ಪಿನ್ನಿಗೂ ಆಗಾಗ ಜಗಳ ಹಚ್ಚುವ ಹುಡುಗಿಯ ಸಪೂರ ಎಳೆಬೆರಳುಗಳು. ಆ ಬೆರಳುಗಳ ಹಿಡಿದಿಟ್ಟುಕೊಂಡ ರಿಸ್ಟ್‌ಗೆ ಒಂದೆರಡು ಕಾಶೀದಾರದ ಸುತ್ತು. ತೋರು ಬೆರಳಿಗೆ ಶಿಲುಬೆಯೊಂದಿಗೆ ಅಡ್ಡಡ್ಡಲಾಗಿ ಮಲಗಿದ್ದ ಏಸುಕ್ರಿಸ್ತ. ತನ್ನ ಸೈಜಿನದಲ್ಲ ಈ ಚೂಡಿದಾರ್‍ ಎಂದು ಹೇಳುತ್ತಿದ್ದ ಕುತ್ತಿಗೆ ಕೆಳಗಿನ ಮೂಳೆಗಳು, ಭುಜ ಬಿಟ್ಟು ಕೆಳಗಿಳಿದ ತೋಳುಗಳು...

ಹೆಸರೇನು ?ಎಂದೆ. 'ಅಮ್ಮು' ಆಂ?'ಅಮ್ಮು ಮೇರಿ...' ವಾವ್ ಅಮ್ಮು. ಅಮ್ಮು ಮೇರಿ ! ಮುದ್ದಾದ ಹೆಸರೋ, ನಾಚಿಕೆ ಸ್ವಭಾವವೋ ಅಂತೂ ಹುಡುಗಿ ಜೊತೆ ಕಾಫಿನೂ ಇಷ್ಟವಾಯ್ತು. ಕುಡಿದಷ್ಟೂ ಕಾಫಿ ರುಚಿ ಹೆಚ್ಚುತ್ತಾ ಹೋಯ್ತು. ಮನಸ್ನಲ್ಲಿ ಅಚ್ಚೊತ್ತಾ ಹೋದ್ಲು ಅಮ್ಮು. ಬಿಟ್ಟುಹೋಗಿದ್ದ ಕಾಫಿ ರುಚಿ ಹಚ್ಚಿಸಿದ್ದ ಹುಡುಗಿ ಬಗ್ಗೆ ವಿಶೇಷ ಆಸಕ್ತಿ ಬೆಳೀತಾ ಹೋಯ್ತು...

***

ಹೀಗೆ ಒಮ್ಮೆ ಕಾಫೀ ಕುಡೀತಾ ಎದುರಿಗಿರೋ ವಿಶ್ವೇಶ್ವರಯ್ಯ ಟವರಿನೊಳಗೆ ಮಿಂಚುಹುಳದಂತೆ ಅಲ್ಲೊಂದು ಇಲ್ಲೊಂದು ಮಿಣುಕುತ್ತಿದ್ದ ಟ್ಯೂಬ್ಲೈಟ್ ಕಡೆ ಗಮನ ಹೋಯ್ತು. ಶಿಫ್ಟ್ ಮುಗಿಯೋದಕ್ಕಿನ್ನೂ ಎರಡು ಗಂಟೆಯಿತ್ತು. ಇನ್ನೂ ಮೂರು ನಾಲ್ಕು ಗುಟುಕಿಗಾಗುವಷ್ಟು ಕಾಫಿ ಇತ್ತು. ಇದ್ದಕ್ಕಿದ್ದ ಹಾಗೆ ಕೆಳಗಡೆ ಫ್ಲೋರ್‍ನಲ್ಲಿರೋ ಕಾಫಿ ಮಶೀನ್ ನೆನಪಾಯ್ತು. ಅದುವರೆಗೂ ಮರೆತುಹೋಗಿದ್ದ ಆ ಮಶೀನನ್ನು ಮತ್ತೆ ನೆನಪಿಸಿದ್ದು ಅಮ್ಮುನ ಕಾಫಿಯೇ...

ಒಂದು ವರ್ಷದ ಹಿಂದೆ ಈ ಆಫೀಸ್ ಸೇರಿದಾಗಿನಿಂದ ಕಾಫಿ ಮಶೀನ್ ಆಕರ್ಷಣೆಯೋ ಏನೋ, ಅದುವರೆಗೂ ಕಾಫಿಗೆ ಮನಸೋಲದ ನಾಲಗೆಗೂ ಆ ಯಂತ್ರಕ್ಕೂ ಪಕ್ಕಾ ದೋಸ್ತಿ ಶುರುವಾಗ್ಬಿಟ್ತು. ಗಂಟೆಗೊಮ್ಮೆ ನನಗರಿವಿಲ್ಲದೇ ಆ ಯಂತ್ರದತ್ತಲೇ ನನ್ನ ಕಾಲುಗಳು ತಳ್ಳಲ್ಪಡುತ್ತಿದ್ದವು. ಕೈಗಳೂ ಅದಕ್ಕೇ ಸಾಥ್ ಕೊಡೋದೇ? ಹೀಗೇ ಒಂದಿಷ್ಟು ಸಾಗಿದವು ಕಾಫಿ ದಿನಗಳು. ಆದ್ರೆ ಅದೊಂದ್ ದಿನ ಮಶೀನಿನ ಮೂತಿಯಿಂದ ಹೊಸ ಅತಿಥಿಗಳ್ಯಾರೋ ಇಣುಕಿದಂಗಾಯ್ತು. ಯಾರದು? ಕಿರಿದುಗೊಂಡವು ಕಣ್ಣುಗಳು. ಆಕಾರ ಕಳೆದುಕೊಂಡವು ಹುಬ್ಬುಗಳು. ನಾವಿದೋ ಇದೋ ಸನ್ನದ್ಧ ಎಂದು ಅರಳಿದವು ಮೂಗಿನ ಹೊರಳೆಗಳು... ಹಾಗೇ ಯಂತ್ರದ ಮೂತಿಗೆ ನನ್ನ ಮೂತಿ ಒಯ್ದೆ. refilling ಅಂತ ಯಂತ್ರ ತೋರಿಸ್ತಾ ಇದ್ರೆ, ಅದರ ಮುಂದೆ ಯಾರೋ ಒಂದಿಬ್ರು, ಚಿಕಣಿ ಅಡಿಕೆ ಹೋಳಿನ ಗಾತ್ರದವ್ರು ಕುಡಿ ಮೀಸೆ ಆಡಿಸುತ್ತ ಅತ್ತಿಂದಿತ್ತ, ಇತ್ತಿಂದಿತ್ತ ಸುಳಿದಂತಾಯ್ತು. ಚಿಟ್ಟನೆ ಚೀರಿ, ಕಪ್ ಕೆಳಗೆ ಬಿಟ್ಟೆ. ಬಿದ್ದ ಕಪ್ಪಿನ ಸದ್ದಿಗೋ ಏನೋ ಯಂತ್ರದ ಸಂದಿಯಿಂದ ಮತ್ತೆ ಎರಡು ಜೊತೆ ಮೀಸೆಗಳು ಕಂಡವು. ಅವು ಸ್ವಲ್ಪ ದೊಡ್ಡ ಸೈಜಿನವು. ಕಣ್ಬಿಟ್ಟು ನೋಡುವಷ್ಟರಲ್ಲೇ 'ವಿಶೇಷ' ಪರಿಮಳದೊಡನೆ ಚಲಿಸಿ ಮಾಯವಾದವು.

ಏಳೆಂಟು ತಿಂಗಳು ಕುಡಿದ ಕಾಫಿನೆಲ್ಲ ಸೇರಿಸಿ, ವಾಪಸ್ ಬಚ್ಚಲಿಗೆ ಧಾರೆ ಎರೆಯಲೇ ಅಂತ ಒಂದು ಕ್ಷಣ ಅನ್ನಿಸಿದ್ದಂತೂ ಜಿರಳೆ ಸಂಸಾರದಾಣೆಗೂ ಸತ್ಯ. ಮಾರನೇ ದಿನದಿಂದ ಹೆಚ್ಚೂ ಕಡಿಮೆ ಒಂದು ತಿಂಗಳವರೆಗೂ ಮೆಂಟೇನೆನ್ಸ್ ಹುಡುಗ್ರು, 'ಮೇಡಮ್ ಮಶೀನ್ ಕ್ಲೀನ್ ಮಾಡಿದ್ದೇವೆ ಕಾಫಿ ಕುಡೀರಿ ಕುಡೀರಿ' ಅಂತ ಹೇಳಿದ್ರೂ ಊಃಹುಂ... ಮಶಿನ್ ಕಾಫಿಗೊಂದು ದೊಡ್ಡ ನಮಸ್ಕಾರ ಹಾಕಿಯೇ ಬಿಟ್ಟೆ. ಅದ್ಯಾಕೋ ಕಾಫಿಗೆ ಕೋಕ್ ಕೊಟ್ಟ ಮೇಲೂ ಆ ಯಂತ್ರದತ್ತ ಕಣ್ಹಾಯಿಸೋದು ಮಾತ್ರ ನಿಲ್ಲಲೇ ಇಲ್ಲ. ಜಿರಳೆ ಸಂಸಾರದ ಮೇಂಬರ್ಸ್‌ ಯಾರಾದ್ರೂ ಕಾಣ್ತಾರಾ ಅಂತ ಇಣುಕಿ ಹಾಕುವ ಕೆಟ್ಟ ಕುತೂಹಲ ಹಾಗೇ ಉಳಿದುಕೊಂಡ್ತು. ಒಟ್ಟಿನಲ್ಲಿ ನಮ್ಮ ಆಫೀಸ್ ಸೆಕೆಂಡ್ ಫ್ಲೋರಿಗೆ ಶಿಫ್ಟ್ ಆಗುವ ಹೊತ್ತಿಗೆ ಕಾಫಿ ರಗಳೆಯೂ ಮತ್ತು ಜಿರಳೆ ಸಂಸಾರದ ಕಥೆಯೆಲ್ಲ ಮರೆತಂತಾಗಿತ್ತು.
ಹೊಸ ಆಫೀಸಿಗೆ ಹೊಸ ಮಶೀನೂ ಬಂದಾಗಿತ್ತು. ಜೊತೆಗೆ ಅಮ್ಮು....! ಅಂಡರಪಾಸ್, ಫ್ಲೈಓವರ್‍ನ ಹಾವಳಿಗೆ ಬಿಲ್ಡಿಂಗು ಹಾಗೂ ಕಂಪೌಂಡನ್ನು ಬಿಟ್ಟು ಎಲ್ಲೆಡೆ ಸಂಚರಿಸುವಂಥ ಪರಿಸ್ಥಿತಿ ಬೆಂಗಳೂರಿನ ಗಾಡಿಗಳಿಗೀಗ. ದಿನವೂ ಟರ್ಫ್‌ ಕ್ಲಬ್ಬಿನಿಂದ ಆರ್‍ ಸಿ ಕಾಲೇಜಿನವರೆಗೆ ಫುಟ್ ಪಾತ್ ಡ್ರೈವ್ ಮಾಡೋವಷ್ಟೊತ್ತಿಗೆ ಅಮ್ಮು ಅಮ್ಮು ಅಂತ ಚಾಂಟಿಸುತ್ತಿರತ್ತೆ ನಾಲಗೆ. ಆಫೀಸಿಗೆ ಬಂದದ್ದೇ, ಟ್ರಾಫಿಕ್ಕಿನ ಟಾಪಿಕ್ ಓಪನ್ ಮಾಡಿ ಕೊಲೀಗ್ಸ್ ಜೊತೆ ಒಂದ್ಹತ್ತು ನಿಮಿಷ ಹರಟಿ ರಿಲ್ಯಾಕ್ಸ್ ಆಗೋದು ಡೈಲಿ ರೂಟಿನ್... 'ಗಂಡಸರಾದ ನಾವೇsss ಸಿನ್ಸಿಯರ್‍ ಆಗಿ ರೋಡ್ ಮೇಲೆ ಗಾಡಿ ಓಡಿಸ್ಕೊಂಡ್ ಬರ್ತೀವಿ. ಅಂಥದ್ರಲ್ಲಿ ನೀನು ಫುಟ್ಪಾತ್ ಮೇಲೆ ಗಾಡಿ ಓಡಸ್ತೀಯಾ?' ಅಂತಾನೋ... 'ಈವತ್ತು ಯಾವ ಕಾಂಪೌಂಡ್ ಮೇಲೆ ಗಾಡಿ ಹಾರಿಸಿದೆ ತಾಯಿsss?' ಅಂತಾನೋ ಒಂದಿಲ್ಲಾ ಒಂದು ವಿಷಯಕ್ಕೆ ಸಹೋದ್ಯೋಗಿಗಳು ತಮಾಶೆ ಮಾಡೋದು ರೂಢಿ.

ಬ್ಯಾಗಿಳಿಸಿ ಸಿಸ್ಟಮ್ ಆನ್ ಮಾಡೋಷ್ಟೊತ್ತಿಗೆ ಅಮ್ಮು ಹಾಜರ್ ವಿತ್ ಕಾಫಿ ಕಪ್‌! ಕಾಲೇಜಿಗೆ ಹೋಗಲ್ವಾ? ಏನ್ ಓದಿದ್ದು? ಅಂದೆ.

ಖಾಲಿಯಾದ ಕಾಫಿ ಕಪ್ಪುಗಳಿಗೋಸ್ಕರ ಅಕ್ಕ-ಪಕ್ಕದ ಟೇಬಲ್‌ಗಳತ್ತ ಕಣ್ಣು ಹಾಯಿಸುತ್ತ 'ಟೆಂತ್ ಆಗಿದೆ' ಅಂದಳು.

ಮನೆ? ಮೈಲಿ ಉದ್ದ ದೂರವಿದ್ದರೂ ಮಾರುದೂರವೇನೋ ಎಂಬಂತಿದ್ದ ಮಹಡಿ ಮಹಡಿ ಕಟ್ಟಡಗಳನ್ನು ದಿಟ್ಟಿಸುತ್ತ, 'ಕೋಲ್ಸ್ ಪಾರ್ಕ್‌' ಎಂದಳು.

ಖಾಲಿ ಕಪ್ಪುಗಳೊಂದಿಗೆ ಹಿಂತಿರುಗುತ್ತಿದ್ದಾಗ ಅದೇ ಆ ಗುಂಗುರುಗೂದಲಿನ ಮೋಟು ಜಡೆ ಅವಳ ಚಿಕ್ಕ ಸೊಂಟ ಸ್ಪರ್ಶಿಸಿಲು ಹವಣಿಸುತ್ತಿತ್ತು. ಮತ್ತೆ ಖಾಲಿಯಾದ ಕಪ್ಪುಗಳ ಹೊಟ್ಟೆ ತುಂಬಿಸಿ, ದಣಿದ ದೇಹಗಳಿಗೆ ಕಾಫಿ ಕೊಡಲು ಹೆಜ್ಜೆ ಹಾಕಿದಳು ಆಕೆ. ಆ ಹೆಜ್ಜೆಗೆ ಜೊತೆಯಾದವು ಅವಳ ಗೆಜ್ಜೆಗಳು. ಆ ಗೆಜ್ಜೆಗೆ, ಹೆಜ್ಜೆಗೆ, ಬಳಕುವ ಜಡೆಯ ಸುತ್ತ ನೆಟ್ಟವು ಕೆಲವು ಜೊತೆ ಕಣ್ಣುಗಳು. ಆದ್ರೆ ಅದ್ಯಾಕೋ ಗೊತ್ತಿಲ್ಲ. ಎರಡು-ಮೂರು ದಿನಗಳಿಂದ ಮುಗುಳುನಗೆಯಿಂದಲೇ ಉತ್ತರಿಸುವ ಹುಡುಗಿ ಕಾಣುತ್ತಿಲ್ಲ. ಕಾಶೀದಾರ ಸುತ್ತಿ, ಏಸುಕ್ರಿಸ್ತನನ್ನ ಬೆರಳ ಮೇಲೆ ಮಲಗಿಸಿಕೊಂಡಾಕೆಯ ಕೈಗಳು 'ಕಾಫಿ, ಮೇಡಮ್...' ಎನ್ನುತ್ತಿಲ್ಲ. ಹೇರ್‍ಪಿನ್ನಿಗೂ ಕೂದಲಿಗೂ ಜಗಳ ಹಚ್ಚುವ ನೀಳಬೆರಳುಗಳು ಖಾಲಿಯಾದ ಕಪ್ಪನ್ನು ತೆಗೆದುಕೊಳ್ಳುವುದನ್ನು ಮರೆತೇಬಿಟ್ಟವೆ? ಹೀಗೆ ನನ್ನೊಂದಿಗೆ ಬಾರದ ಹುಡುಗಿಗಾಗಿ ಹುಡುಕುತ್ತಿರಬಹುದಲ್ಲ ಕೆಲವು ಜೊತೆ ಕಣ್ಣುಗಳೂ?

ಹೌದು. ಅಮ್ಮು ಈವತ್ತೂ ಬಂದಿಲ್ಲ. ಇನ್ನು ನಾಳೆ? ಬೇಡ ನಾಳೆಯೂ ಬರುವುದು ಬೇಡ. ಇನ್ನೆಂದಿಗೂ ಕಾಫಿ ಕಪ್ ಹಿಡಿದುಕೊಂಡು ಅವಳು ಮೇಡಮ್ ಎನ್ನುವುದು ಬೇಡವೇ ಬೇಡ. ಖಾಲಿ ಕಪ್ಪಿಗಾಗಿ ನೆಲನೋಡುತ್ತ ನಿಲ್ಲುವ ಆಕೆ ಇನ್ನುಮುಂದೆ ಇಲ್ಲಿಗೆ ಬರದಿದ್ದರೆ ಒಳಿತು. ದಿನವೂ ಟೀನಾ? ಕಾಫೀನಾ ಅಂತ ಕಂಪಿಸುವ ಅವಳ ಸ್ವರ ಕಿವಿಗೆ ತಾಕದಿದ್ದರೆ ಒಳ್ಳೆಯದು. ಹೋಟೆಲ್ಲಿನಿಂದ ಬಗೆ-ಬಗೆಯ ತಿಂಡಿ ತರಿಸಿ ತಿನ್ನುವವರಿಂದ ದೂರ ಸರಿದು, ಕಿಟಕಿಯಿಲ್ಲದ, ಮುಸುರೆ ಡಬ್ಬದ ಪಕ್ಕದಲ್ಲಿ, ಒಡೆದ ಹಾಲಿನ ವಾಸನೆ, ಪುಟ್ಟ ಪುಟ್ಟ ಟೀಪುಡಿಯ ಚರಟದ ಚೀಲಗಳ ಮಧ್ಯೆ ದಿನವೂ ತಿಳಿ-ಸಾರು ತಿನ್ನುವ ಅವಳನ್ನು ನೋಡದೇ ಇರುವುದೇ ವಾಸಿ. ಎಲ್ಲರೂ ತಿಂದುಂಡ ತಟ್ಟೆ ತೊಳೆಯುವ ಅವಳ ಕೈಗಳು ನನ್ನ ಕಣ್ಣಿಂದ ಆದಷ್ಟು ಬೇಗ ಮಾಸಲಿ.... ಅರೆ! ದಿನವೂ ಅವಳಿಗಾಗಿ ಅವಳ ಕಾಫಿಗಾಗಿ ಹಂಬಲಿಸುತ್ತಿದ್ದ ಮನಸ್ಸು ಇಂದೇಕೆ ಹೀಗೆ?

ಹೌದು. ನೇರಾನೇರ ನೋಡುವದನ್ನು ಕಲಿಯಬೇಕಿದೆ ಅತ್ತಿತ್ತ ಚಲಿಸುವ ಅವಳ ಕಣ್ಣುಗಳು. ಮಾತನಾಡಿಸಿದರೆ ಸಣ್ಣಗೆ ಕಂಪಿಸುವ ಅವಳ ದೇಹ ನಡುಗುವ ಕೈಗಳು, ಗಟ್ಟಿಯಾಗಬೇಕು. ಬಿಗಿಹಿಡಿಯುವ ಉಸಿರು ನಿರಾಳವಾಗಿ ಹೊರಹೊಮ್ಮಬೇಕು. ಜಡೆಯ ಹಿಂದೆ ಚೂಡಿಗೆ ಹಾಕಿದ ಪಿನ್ನಿನ ಸಹವಾಸ ಸಾಕಿನ್ನು. ಇಳಿಬಿದ್ದ ತೋಳಿಗೆ ಸರಿಹೊಂದಬೇಕು ಆ ಭುಜಗಳು. ಮೋಟುಜಡೆ ಸೊಂಟ ತಾಗುವುದನ್ನು ನೋಡಲು ಹವಣಿಸುವ, ಗೆಜ್ಜೆ ದನಿಗೆ ಕಿವಿಯಾಗುವ ಕೆಲವು ಜೊತೆ ಮನಸ್ಸುಗಳನ್ನು ಎದುರಿಸುವ ನೋಟ ಅವಳದಾಗಬೇಕು. ಆ ಮನಸು, ಈ ಮನಸು, ಆ ಕಣ್ಣು, ಈ ಕಣ್ಣು, ಎಲ್ಲವುಗಳೊಂದಿಗೆ ಮಾತನಾಡುವ ಗಟ್ಟಿ ದನಿ, ಮನಸ್ಸು ಅವಳೊಂದಿಗಿರಲಿ.

ಯಾವ ಕಾರಣಕ್ಕೆ ಕಾಫಿ ಹುಡುಗಿಯಾದಳೋ ಗೊತ್ತಿಲ್ಲ. ಶಾಲೆಯ ಹತ್ತೂ ಮೆಟ್ಟಿಲೇರಿದ ಅವಳಿಗೆ ಕಾಲೇಜಿನ ಹನ್ನೊಂದನೆ ಮೆಟ್ಟಿಲು ಏರುವುದು ಅಸಾಧ್ಯವೆ? ನಿರ್ಧಾರ ಅಮ್ಮುವಿನದೇ....

-ಶ್ರೀದೇವಿ ಕಳಸದ

also see http://www.kendasampige.com/article.php?id=829

4 comments:

ಏಕಾಂತ said...

ಹಾಯ್...
‘ಆಲಾಪ’ನೆ ನಿಜಕ್ಕೂ ಮುದ ನೀಡಿತು. ಕಾಫಿ ಹುಡುಗಿಯಲ್ಲಿ ಪದೇ ಪದೇ ಕಾಡುವ ಗುಣವಿದೆ.
ಸರಳ ಹಾಗೂ ಸುಂದರ ಬ್ಲಾಗ್.
...Laxmikanth...

ಸುಧೇಶ್ ಶೆಟ್ಟಿ said...

ನಿಮ್ಮ ಬ್ಲಾಗಿಗೆ ಮೊದಲ ಭೇಟಿ.
ನಿಮ್ಮ ಬರಹ ಆತ್ಮೀಯವಾಗಿತ್ತು. ಮತ್ತೆ ಬರುತ್ತೇನೆ.
ಕಾಫಿ ಮೆಶೀನಿನ ಇನ್ನೊ೦ದು ಮೊಗವನ್ನು ತೋರಿಸಿದ್ದಕ್ಕಾಗಿ ಥ್ಯಾ೦ಕ್ಸ್!

thamboori said...

ಲಕ್ಷ್ಮೀಕಾಂತ್ ಹಾಗೂ ಸುಧೇಶ್‌ ಶೆಟ್ಟಿ ಅವರೆ, ಕಮೆಂಟಿಸಿದ್ದಕ್ಕೆ ಧನ್ಯವಾದ

avinash said...

ಛೊಲೊ ಅದ ಇದು.ಓದಲಿಕ್ಕೆ interesting ಇತ್ತು.

Avinash