Sunday, June 22, 2008

ಯುಗಳವಲ್ಲವೀ ಜುಗಲ್‌ಬಂದಿ

ತನ್ನ ಕಲಾಸಂಪ್ರದಾಯವನ್ನು ಕಾಯ್ದುಕೊಂಡು, ಸಹಕಲಾವಿದನೊಂದಿಗೆ ಸಹಯೋಗ ಸಾಧಿಸಿ, ವೈಯಕ್ತಿಕ ಛಾಪನ್ನೂ ಮೂಡಿಸಲೆತ್ನಿಸುವ ಕ್ಲಿಷ್ಟತೆಗಳೇ ಜುಗಲ್‌ಬಂದಿಗಿರುವ ಮಿತಿಗಳೂ ಆಗುತ್ತವೆ. ಈ ಮಿತಿಗಳ ನಡೆವಿಯೇ ಜುಗಲ್‌ಬಂದಿ ಅರಳುತ್ತದೆ.

ಅಂದು ಸಂಜೆ ಸಾವಿರಾರು ಜನ, ಸಾವಿರಾರು ರೂಪಾಯಿ ವ್ಯಯಿಸಿ ಹಾಲ್ ಪೂರ್ತಿ ಜಮಾಯಿಸಿದ್ದರು.
‘ಇಬ್ಬರು ವಿದ್ವಾಂಸರ ಗಾಯನ ಒಂದೇ ವೇದಿಕೆ ಮೇಲೆ ಕೇಳುವ ಸೌಭಾಗ್ಯ ದೊರೆಯಿತು ಮಹರಾಯಾ...’
‘ಏನೇ ಹೇಳು.. ಸಂಗೀತ ಅನುಭವಿಸಲು ಜುಗಲ್‌ಬಂದಿ ಸ್ವಲ್ಪ ಅಡೆ-ತಡೆ ಎನ್ನಿಸುತ್ತೆ ಆದರೂ...’ ಹೀಗೆ ಅನುಭವಿ-ಅನನುಭವಿ ಶ್ರೋತೃಗಳ ‘ಸವಾಲ್-ಜವಾಬ್‌’ ವೇದಿಕೆ ಮೇಲಿನ ಜುಗಲ್‌ಬಂದಿಗಿಂತ ಮುಂಚೆಯೇ ಶುರುವಾಗಿತ್ತು...

ಎರಡು ವಿಭಿನ್ನ ಪದ್ಧತಿ ಅಥವಾ ಶೈಲಿಗಳನ್ನು ಒಂದೇ ವೇದಿಕೆಯಡಿ ಸಮಾನವಾಗಿ ಪ್ರಸ್ತುತಪಡಿಸುವುದೇ ಜುಗಲ್‌ಬಂದಿ. ಸುಮಾರು ೪೦ ವರ್ಷಗಳ ಹಿಂದೆಯಷ್ಟೇ ಚಾಲ್ತಿಗೆ ಬಂದ ಈ ಪದ್ಧತಿ ಸಂಗೀತ ಮತ್ತು ನೃತ್ಯ ಸೇರಿದಂತೆ ಅನೇಕ ಕಲಾ ಪ್ರಕಾರಗಳನ್ನು ಈ ಪರಿಕಲ್ಪನೆಗೆ ಒಗ್ಗಿಕೊಳ್ಳುವಂತೆ ಮಾಡಿತು.

‘ಹಿಂದೆ ಮನೆಗಳಲ್ಲೇ ಕಚೇರಿಗಳನ್ನು ಏರ್ಪಡಿಸುವ ಪದ್ಧತಿ ಇತ್ತು. ಕಚೇರಿ ಮುಗಿದ ನಂತರ ಕಲಾವಿದರೆಲ್ಲ ಊಟ ಮಾಡಿ ವಿಶ್ರಮಿಸುವಾಗ ತಮ್ಮ ತಮ್ಮ ಕಲಾ ಪ್ರಕಾರಗಳ ಬಗ್ಗೆ ಮಾತನಾಡುತ್ತ ಪ್ರಯೋಗ ನಡೆಸುತ್ತಿದ್ದರು. ಅಲ್ಲಿ ಚರ್ಚೆಯಾಗುತ್ತಿದ್ದ ಸಂಗತಿ, ಪ್ರಯೋಗಗಳೇ ಜುಗಲ್‌ಬಂದಿಗೆ ನಾಂದಿಯಾಗಿರಬಹುದು’ ಎಂಬ ಅಭಿಪ್ರಾಯ ಉಭಯಗಾನ ವಿದುಷಿ ಶ್ಯಾಮಲಾ ಭಾವೆಯವರದು. ಆದರೆ ಈವರೆಗೂ ಜುಗಲ್‌ಬಂದಿಯ ಹುಟ್ಟಿನ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಈ ದಿಸೆಯಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.

ಸಂಗೀತ, ಸ್ವಯಂ ಪರಿವರ್ತನ ಹಾಗೂ ಸ್ವಯಂ ನಿರ್ದೇಶನ ಶಕ್ತಿಯನ್ನು ಹೊಂದಿರುವ ಆತ್ಮಚೈತನ್ಯ. ಆ ಆತ್ಮಚೈತನ್ಯ ಪ್ರತಿಯೊಬ್ಬ ಕಲಾವಿದನಲ್ಲೂ ಅಂತರ್ಗತಗೊಂಡಿರುತ್ತದಷ್ಟೇ ಅಲ್ಲ, ತನ್ನ ಕಲಾ ಸಂಪ್ರದಾಯ, ಶೈಲಿಯೊಂದಿಗೆ ಅವನ ಮನಸ್ಸೂ ಅದಕ್ಕೆ ಬದ್ಧವಾಗಿರುತ್ತದೆ. ಹೀಗಿರುವಾಗ ಭಿನ್ನ ಭಿನ್ನ ಸಂಪ್ರದಾಯಗಳನ್ನು ಇನ್ನೊಂದು ಕಲಾ ಸಂಪ್ರದಾಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದರೆ ಕಲಾವಿದನಿಗೆ ವಿಶಾಲ ಮನೋಭಾವವಿರಬೇಕಾಗುತ್ತದೆ. ಅಂತೆಯೇ ಜುಗಲ್‌ಬಂದಿಯಲ್ಲಿ ಕಲಾವಿದರಿಬ್ಬರೂ ಒಂದೇ ತೆರನಾದ ಮನೋಭೂಮಿಕೆ ನಿರ್ಮಿಸಿಕೊಳ್ಳುವುದು ಅತ್ಯವಶ್ಯ. ಆಗ ಮಾತ್ರ ಜುಗಲ್‌ಬಂದಿಗೆ ನ್ಯಾಯ ಒದಗುತ್ತದೆ. ಆದರೆ ಈ ಸಮಯದಲ್ಲಿ ಕಲಾವಿದ, ಆಯಾ ಪದ್ಧತಿಗಿರುವ ನಿರ್ದಿಷ್ಟ ಕಟ್ಟುಪಾಡುಗಳನ್ನು ತನಗರಿವಿಲ್ಲದಂತೆಯೇ ಮೀರುವಂತಾಗಬಹುದು. ಅದಕ್ಕಿಂತ ಮಿಗಿಲಾಗಿ ‘ಶ್ರೋತೃದೇವೋಭವ’ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಕಲಾನಿವೇದನೆ ಮಾಡುವ ಮಹತ್ತರ ಜವಾಬ್ದಾರಿಯನ್ನು ಕಲಾವಿದ ಹೊಂದಿರಬೇಕಾಗುತ್ತದೆ.

ಭಾವ ತಲ್ಲೀನತೆಯೇ ಸಂಗೀತದ ಪರಿಪೂರ್ಣತೆ ಎಂದು ಸಾಗುವ ಕಲಾವಿದನಿಗೆ ಜುಗಲ್‌ಬಂದಿ ಸ್ವಲ್ಪ ಕಿರಿ ಕಿರಿ ಎನಿಸಬಹುದು. ಆದ್ದರಿಂದ ಜುಗಲ್‌ಬಂದಿ ನಡೆಸುವ ಕಲಾವಿದ ಈ ಭಾವ ತಲ್ಲೀನತೆಯಿಂದ ಹೊರಬಂದು ಪ್ರಜ್ಞಾಪೂರ್ವಕ ಕಲಾನಿವೇದನೆಗೆ ಹೊಂದಿಕೊಳ್ಳಬೇಕಾದುದು ಅನಿವಾರ್ಯ. ಇದು ಸುಲಭದಲ್ಲಿ ಎಲ್ಲರಿಗೂ ಸಿದ್ಧಿಸುವಂಥದಲ್ಲ. ಈ ನಿಟ್ಟಿನಲ್ಲಿ ‘ಜುಗಲ್‌ಬಂದಿ ಪ್ರಸ್ತುತ ಪಡಿಸುವ ಕಲಾವಿದರು ಪರಸ್ಪರ ವಿದ್ವತ್‌, ಪ್ರಕಾರಗಳನ್ನು ಗೌರವಿಸಿ, ಸಂಪ್ರದಾಯ-ವೇದಿಕೆ ಹಂಚಿಕೊಳ್ಳುವ ಉದಾತ್ತ ಗುಣ ಹೊಂದಿರಬೇಕು’ ಎಂದು ಕರ್ನಾಟಕ ಸಂಗೀತ ವಿದ್ವಾಂಸ ಎಸ್‌. ಶಂಕರ್‌ ಅಭಿಪ್ರಾಯಪಡುತ್ತಾರೆ.

ಜುಗಲ್‌ಬಂದಿ ನಡೆಸುವಾಗ ನಿರ್ದಿಷ್ಟ ರಾಗವನ್ನು ಸಂಪೂರ್ಣ ಸಾದರಪಡಿಸುವಲ್ಲಿ ಕಲಾವಿದ ವಿಫಲನಾಗುತ್ತಾನೆ. ಎರಡು ಪದ್ಧತಿಗಳ ಆಯಾಮ ಬೇರೆ ಬೇರೆಯಾಗಿದ್ದಾಗ ಕಲಾವಿದರ ಕಲ್ಪನೆಗೆ ಕಡಿವಾಣ ಬಿದ್ದು ಮಿತಿಗಳುಂಟಾಗಬಹುದು. ಆದ್ದರಿಂದಲೇ ಬಹುತೇಕ ಕಲಾವಿದರು ಎರಡೂ ಪದ್ಧತಿ (ಕರ್ನಾಟಕ-ಹಿಂದೂಸ್ತಾನಿ)ಗಳಲ್ಲಿ ಬಳಕೆಯಿರುವ ಕಲ್ಯಾಣಿ, ದರ್ಬಾರಿ, ಪೂರಿಯಾ, ಕಲ್ಯಾಣ್‌, ಮಾಲಕಂಸ, ಜೋಗಿಯಾ, ಜೈಜೈವಂತಿ, ತೋಡಿ, ಪೂರ್ವಿ, ಇತ್ಯಾದಿ ರಾಗಗಳನ್ನು ಮಾತ್ರ ನಿರ್ದಿಷ್ಟ ತಾಳಗಳಲ್ಲಿ ಪ್ರಸ್ತುತ ಪಡಿಸುತ್ತಾರೆ. ಹೀಗಾದಾಗಲೂ ಜುಗಲ್‌ಬಂದಿ ನಡೆಸುವಾಗ ಕಲಾವಿದರ ಮೇಲೆ ಪರಸ್ಪರರ ಶೈಲಿ ಸಹಜವಾಗಿ ಪ್ರಭಾವ ಬೀರುತ್ತದೆ. ಅದರಲ್ಲೂ ‘ಹಿಂದೂಸ್ತಾನಿ ಸಂಗೀತಗಾರರ ಪ್ರಭಾವ ಕರ್ನಾಟಕ ಸಂಗೀತ ಕಲಾವಿದರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ’ ಎನ್ನುವುದು ವಿದ್ವಾನ್‌ ಆನೂರು ಅನಂತಕೃಷ್ಣ ಶರ್ಮ ಅವರ ಅನುಭವದ ನುಡಿ.

ಕಲಾವಿದನಿಗೆ ವ್ಯವಸ್ಥಿತ ಮನಸ್ಸು, ರಿಯಾಜ್‌ನೊಂದಿಗೆ ತನ್ನತನವನ್ನು ಕೊನೆವರೆಗೂ ಕಾಪಾಡಿಕೊಳ್ಳುವ ಜಾಣ್ಮೆ ತೀರಾ ಅವಶ್ಯ. ಈ ದಿಸೆಯಲ್ಲಿ ಜುಗಲ್‌ಬಂದಿ ತಯಾರಾಗಿ ತಿಂಗಳುಗಟ್ಟಲೆ ಸಮಯ ವ್ಯಯಿಸಿರುವುದಾಗಿ, ಹಲವಾರು ಜುಗಲ್‌ಬಂದಿ ಕಾರ್ಯಕ್ರಮ ನಡೆಸಿಕೊಟ್ಟ ಕರ್ನಾಟಕ ಸಂಗೀತ ವಿದುಷಿ ನಾಗಮಣಿ ಶ್ರೀನಾಥ್‌ ಹಾಗೂ ಶ್ಯಾಮಲಾ ಭಾವೆ ಹೇಳುತ್ತಾರೆ. ಆದರೆ ಇಬ್ಬರೂ ಕಲಾವಿದರ ಮನೋಭೂಮಿಕೆ ಒಂದೇಯಾಗಿದ್ದಾಗ ಗ್ರೀನ್‌ರೂಂ ಪ್ರಾಕ್ಟೀಸ್‌ ಸಾಕು’ ಎಂಬುದು ಪಂ. ನಾಗರಾಜ್‌ ಹವಾಲ್ದಾರ್‌ ಅವರ ಅಂಬೋಣ.

ಜುಗಲ್‌ಬಂದಿ ಜನಪ್ರಿಯವಾಗಬೇಕಾದರೆ ತಮ್ಮ ಸಂಪ್ರದಾಯದ ಕಟ್ಟುಪಾಡುಗಳನ್ನು ಸಹಜವಾಗಿಯೇ ಮೀರಬೇಕಾಗುತ್ತದೆ. ಈ ವಿಚಾರವಾಗಿ ಕಲಾವಿದರ ನಡುವೆ ಸ್ವಾರ್ಥ ಇರುವಷ್ಟೇ ಸಹಯೋಗವೂ ಇರಬೇಕು. ಹಲವಾರು ಕಲಾವಿದರೊಂದಿಗೆ ಜುಗಲ್‌ಬಂದಿ ನಡೆಸಿರುವ ಭಾನ್ಸುರಿ ಕಲಾವಿದ ಪ್ರವೀಣ್‌ ಗೋಡ್ಖಿಂಡಿ ಹೇಳುವಂತೆ, ‘ಜುಗಲ್‌ಬಂದಿ ನಡೆಸುವವರು ಭಾರತೀಯ ಸಂಗೀತವನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಬೇಕೆನ್ನುವ ಹಂಬಲದಿಂದ ವೇದಿಕೆ ಏರಬೇಕು. ಜಾಣ್ಮೆಯಿಂದ ನಮ್ಮ ನಮ್ಮ ಸಂಪ್ರದಾಯಕ್ಕೆ ಅಡೆ-ತಡೆಯಾಗದಂತೆ ಕ್ರಿಯಾಶೀಲ ಪ್ರಯೋಗ ನಡೆಸಬೇಕು. ಜೊತೆಗೆ ಕಲ್ಪನಾ ಚಾತುರ್ಯದಿಂದ ಸ್ವರವಿಸ್ತಾರ, ಲಯಕಾರಿ, ತಾನ್‌ಗಳನ್ನು ಮಾಡುವಾಗ ಜೊತೆಗಿರುವ ವಾದ್ಯಪ್ರಕಾರ ಮತ್ತು ಅದರ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತಪಡಿಸಬೇಕು. ಆಗೊಮ್ಮೆ ಈಗೊಮ್ಮೆ ನಡೆಸುವ ಜುಗಲ್‌ಬಂದಿ ಆರೋಗ್ಯಪೂರ್ಣವೂ ಆಗಿರುತ್ತದೆ. ಇದೇ ಹವ್ಯಾಸ ಹೆಚ್ಚಾದರೆ ನಮ್ಮ ಶೈಲಿ ಮರೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ’. ಹಿಂದೂಸ್ತಾನಿ ಗಾಯಕ ಪಂ. ಪರಮೇಶ್ವರ ಹೆಗಡೆಯವರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ ಜುಗಲ್‌ಬಂದಿ ಈಗಲೂ ಪ್ರಯೋಗ ಹಂತದಲ್ಲಿದೆ. ‘ಜುಗಲ್‌ಬಂದಿಯಲ್ಲಿ ಕಲಾವಿದನಾದವನು ಏಕಾಗ್ರತೆ ಸಾಧಿಸಲಿಕ್ಕಾಗದು. ಮೊದಲನೇ ಸಲ ಪಂ. ವಿಶ್ವಮೋಹನ್‌ ಭಟ್‌ರೊಂದಿಗೆ ಜುಗಲ್‌ಬಂದಿ ನಡೆಸಿದಾಗ ನನಗೆ ಅಷ್ಟೊಂದು ತೃಪ್ತಿ ಇರಲಿಲ್ಲ. ಗಾಯನ ಹಾಗೂ ವಾದನ ಜುಗಲ್‌ಬಂದಿ ನಡೆಸುವುದು ಕಷ್ಟವಾದರೂ ಎರಡನೇ ಬಾರಿ ಮಾನಸಿಕವಾಗಿ ತುಂಬಾ ಸಿದ್ಧತೆ ಮಾಡಿಕೊಂಡೆ. ಆಗ ಕಾರ್ಯಕ್ರಮ ಯಶಸ್ವಿಯಾಯಿತು. ಜುಗಲ್‌ಬಂದಿಯನ್ನು ಹೆಚ್ಚು ಹೆಚ್ಚು ರೂಢಿಸಿಕೊಂಡರೆ ನಮ್ಮ ಶೈಲಿಗೆ ವ್ಯತ್ಯಯವಾಗುವ ಸಾಧ್ಯತೆಯುಂಟು’ ಎಂದೂ ತಮ್ಮ ಅನುಭವದ ಮಾತನ್ನು ಹೇಳುತ್ತಾರೆ ಅವರು.

ಈ ಶೈಲಿ, ಸಂಪ್ರದಾಯ, ಸಮಕಾಲೀನ ಪ್ರಯೋಗಗಳ ಮಧ್ಯೆ ಕಲಾವಿದ ಮತ್ತು ಶ್ರೋತೃಗಳ ನಡುವೆ ಇರುವ ಕಲಾಸಂವಾದ ಜುಗಲ್‌ಬಂದಿಯಲ್ಲಿ ಸೀಮಿತವಾಗುತ್ತದೆ. ಕಲೆ-ಕಲಾವಿದನ ನಡುವಿನ ಆತ್ಮಸಂವಾದ ಕ್ರಮೇಣ ಕರಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಕಲೆ ಎರಡು ವಿಧಗಳಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಒಂದು ಆತ್ಮತೃಪ್ತಿಗಾಗಿ, ಇನ್ನೊಂದು ರಂಜನೆಗಾಗಿ. ನಿಜವಾದ ಕಲಾವಿದ ಆತ್ಮತೃಪ್ತಿಗಾಗಿ ಕಲಾಭಿವ್ಯಕ್ತಿಗೊಳಿಸುತ್ತಾನಾದರೂ ಕಲಾಸಕ್ತರ ಮನ ತಣಿಸುವುದು ಕಲಾವಿದನ ಕರ್ತವ್ಯಗಳಲ್ಲೊಂದು.

ಸಾಂಪ್ರದಾಯಿಕ ಕಲಾವಿದರು ಜುಗಲ್‌ಬಂದಿ ಪ್ರಯೋಗ ಕುರಿತು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಅದು ಅವರ ಅನುಭವ ಮತ್ತು ವೈಯಕ್ತಿಕ ನೆಲೆಯಿಂದ ಮೂಡಿಬಂದದ್ದು. ಜುಗಲ್‌ಬಂದಿ ನಡೆಸುವ ಕಲಾವಿದರು ಒಂದೇ ಆತ್ಮ-ದೇಹವೆಂಬಂತೆ ತಮ್ಮ ಕಲೆಯನ್ನು ಅಭಿವ್ಯಕ್ತಿಗೊಳಿಸಬೇಕಾಗುತ್ತದೆ. ಆಗ ಮಾತ್ರ ಶಾಸ್ತ್ರೀಯ ಚೌಕಟ್ಟಿನಿಂದ ಹೊರಬಂದ ಇಂಥ ಪ್ರಯೋಗವನ್ನು ಜನ ಮೆಚ್ಚಿಯಾರು. ಈ ಸಂದರ್ಭದಲ್ಲಿ ಸ್ಯಾಕ್ಸೊಫೋನ್‌ವಾದಕ ಕದ್ರಿ ಗೋಪಾಲನಾಥ್‌ ಅವರ ‘ಸಮಾನ್‌ ವಿದ್ವತ್‌ ಹೊಂದಿದ ಕಲಾವಿದರಾಗಿದ್ದಾಗ ಜುಗಲ್‌ಬಂದಿಗೆ ಪರಿಪೂರ್ಣತೆ ಒದಗುತ್ತದೆ’ ಎನ್ನುವುದು ಹೆಚ್ಚು ಅರ್ಥಗಳನ್ನು ಧ್ವನಿಸುತ್ತದೆ.

ಒಟ್ಟಿನಲ್ಲಿ ಕೇಳುಗರಿಗೆ ನಾದಸೌಖ್ಯ ನೀಡುವುದೇ ಸಂಗೀತದ ಧರ್ಮವೆಂಬುದನ್ನು ಎಲ್ಲ ಕಲಾವಿದರು ಮನಗಾಣಬೇಕೆಂಬುದು ಸ್ವರಶಃ ಸತ್ಯ.

-ಶ್ರೀದೇವಿ ಕಳಸದ
(೨೦೦೫ರ ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟ)

6 comments:

hallikannada said...
This comment has been removed by the author.
hallikannada said...

ಶ್ರೀದೇವಿ ಕಳಸದ ಅವರ ಲೇಖನ ಮತ್ತೆ ಓದಿಸಿದ್ದಕ್ಕೆ thanks.
ನಮ್ಮಕಡೆ, ಅಂದರೆ ಮಧ್ಯ ಕನಾಱಟಕದ ಚಿತ್ರದುರ್ಗದ ಕಡೆಗಳಲ್ಲಿ ಜಾನಪದ ಪ್ರಕಾರಗಳಲ್ಲಿ ಒಂದಾದ 'ಮೋಡಿ' ಕಲೆಯಲ್ಲಿಯೂ ಜುಗಲ್ ಬಂದಿ ನಡೆಯುತ್ತದೆ. ಇದರ ಇತಿಹಾಸ ಭವಿಷ್ಯ ಶಾಸ್ತ್ರೀಯ ಸಂಗೀತಕ್ಕಿಂತಲೂ ಪುರಾತನ.

thamboori said...

hallikannadadavare....
nane shreedevi kalasad. naane bareda lekhana adhu. iduvaregoo nanna blognalli nanna hesaru helikondiddilla. aadre kannadaprabhadalli nanna blog bagge bandha takshana, i mean `lekhaka' endhu parichayisidaaga... yaako irisu murasaayitu. konege nanna nijnaamdheya baredhe

ಸುಧೇಶ್ ಶೆಟ್ಟಿ said...

ಲೇಖನ ಇಷ್ಟವಾಯಿತು. ಸ೦ಗೀತದ ಬಗ್ಗೆ ಏನೂ ಗೊತ್ತಿಲ್ಲದವರಿಗೂ ಅರ್ಥವಾಗುವ೦ತಿತ್ತು.

thamboori said...

ಹೌದು ಸುದೇಶ್‌... ಮಗುವಿಗೆ ಮಗುವಿನ ಭಾಷೆಯಲ್ಲಿ ಮಾತನಾಡಿದರೆ ಇಷ್ಟವಾಗುತ್ತಾ ಹೋಗುತ್ತದೆ ಅಲ್ವೇ? ಹಾಗೆ...

ಹಂಸಾನಂದಿ said...

ಹಳೆಯ ಬರಹ, ಇವತ್ತು ಓದಿದೆ.ಚೆನ್ನಾಗಿದೆ - ಜುಗಲ್ ಬಂದಿಗಳ ಸಾಧ್ಯತೆ ಮತ್ತು ಪರಿಮಿತಿಗಳನ್ನ ಚೆನ್ನಾಗಿ ಪರಿಚಯಿಸಿದ್ದೀರ.