Sunday, June 29, 2008

ಅಪೂರ್ವ ಸ್ವರಸಾಧಕ ಪಂ. ಪರಮೇಶ್ವರ ಹೆಗಡೆ

‘ಅಡ್ಡ ಮಾರಿ ಹಾಕಿ ಹಾಡ್ತಾರ್‍ ಏನ...? ಗದ್ದ ಹಿಡಿದು ಕುತ್ತಿಗೆ ನೇರ ಮಾಡಿ, ‘ಹೂಂ ಇನ್ನ ಹಾಡ’ ಗುರುಗಳು ಹಾಡಲು ಅಪ್ಪಣೆ ನೀಡಿದರು. ಮೊದಲ ಬಾರಿಗೆ ವೇದಿಕೆಯ ಮೇಲೆ ಗುರುಗಳ ಕಛೇರಿಯಲ್ಲಿ ಹುಚ್ಚು ಧೈರ್ಯ ಮಾಡಿ ಸ್ವರ ಹಚ್ಚಲು ಪ್ರಾರಂಭಿಸಿದ ಇಪ್ಪತ್ತರ ಹರೆಯದ ಯುವಕ. ಆದರೆ ‘ ಪ್ರಥಮ ಚುಂಬನಂ ದಂತ ಭಗ್ನಂ’ ಎಂಬಂತೆ ಕಂಗಾಲಾಗಿಬಿಟ್ಟ. ಗುರುಗಳ ಸ್ವಭಾವವನ್ನರಿಯದ ಸೂಕ್ಷ್ಮ ಮನಸ್ಸಿನ ಯುವಕನಿಗೆ ಶಿವಮೊಗ್ಗದ ಸಾವಿರಾರು ಜನರೆದುರು ಅವಮಾನವಾದಂತಾಯಿತು.

ನಂತರ ತನ್ನಿಂದ ಏನೋ ಅಪರಾಧವಾಗಿದೆ ಎಂದು ರೂಮಿನ ಒಂದು ಮೂಲೆಯಲ್ಲಿ ತಲೆ ಕೆಳಗೆ ಮಾಡಿಕೊಂಡು ಸುಮಾರು ಹೊತ್ತು ಕುಳಿತ. ನಂತರ ಆತ ತಲೆ ಎತ್ತಿದಾಗ ಕಂಡದ್ದು ಗುರುಗಳು! ‘ಭೇಷ್‌ ಹಾಡ್ತೀ ನೀನು. ಛಲೋ ಹಾಡಬೇಕಂದ್ರ ಛಲೋ ತಿನಬೇಕಲೇ..’ ಎಂದು ತಮಗೆ ಕಾರ್ಯಕ್ರಮದಲ್ಲಿ ಕೊಟ್ಟಿದ್ದ ಹಣ್ಣು ಹಂಪಲಗಳನ್ನು ಒತ್ತಾಯಪೂರ್ವಕವಾಗಿ ತಿನ್ನಿಸಿ ಹಾಲು ಬಿಸಿ ಮಾಡಿ ಕುಡಿಯಲು ಕೊಟ್ಟರು. ತರುಣನಿಗೆ ವಿಚಿತ್ರ ಅನುಭವ! ‘ಗುರುಗಳು ಬಹಳ ಒರಟು ಸ್ವಭಾವದವರು. ಇನ್ನು ಇವರ ಹತ್ತಿರ ಕಲಿಯುವುದು ಅಸಾಧ್ಯದ ಮಾತು’ ಎಂದು ಕೈಹೊತ್ತು ಕುಳಿತಿದ್ದವನಿಗೆ ಅವರ ಇನ್ನೊಂದು ಮುಖದ ಪರಿಚಯವಾಯಿತು.

ಈ ಯುವಕನೇ ಇಂದು ಇಡೀ ದೇಶವೇ ತನ್ನತ್ತ ತಿರುಗಿ ನೋಡುವ ಹಾಗೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾನೆ. ಅಷ್ಟೇ ಅಲ್ಲ ಗುರು ಪದ್ಮವಿಭೂಷಣ ಡಾ. ಬಸವರಾಜ ರಾಜಗುರು ಅವರ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿಯೂ. ಹೌದು ಅವರೇ ಪಂ. ಪರಮೇಶ್ವರ ಹೆಗಡೆ.

ಹೆಗಡೆ ಅವರು ಉತ್ತರ ಕನ್ನಡ ಹಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಲ್‌ಭಾಗ್‌ ಎಂಬ ಹಳ್ಳಿಯವರು. ಸಧ್ಯ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ. ಇಲ್ಲಿ ಹಿಂದೂಸ್ತಾನಿ ಸಂಗೀತದ ಕಂಪನ್ನು ಹರಡುವಲ್ಲಿ ಯಶಸ್ವಿಯಾಗಿದ್ದಾರೆ. ತಂಬೂರಿ ನೋಡಿದರೇನೇ ಅಪಹಾಸ್ಯದಿಂದ ನೋಡುವ ಕಾಲ ಅದಾಗಿದ್ದ ಸಂದರ್ಭದಲ್ಲಿ ಎಸ್‌. ಎಂ‌. ಭಟ್‌ ಅವರಲ್ಲಿ ಶಿಷ್ಯತ್ವ ಪ್ರಾರಂಭಿಸಿದವರು ಇವರು.
ನಂತರ ಧಾರವಾಡದ ಪಂ. ಚಂದ್ರಶೇಖರ್‍ ಪುರಾಣಿಕಮಠರ ಹತ್ತಿರ ಸಂಗೀತ ಅಭ್ಯಾಸ ಮುಂದುವರೆಯಿತು. ಹೆಚ್ಚಿನ ಸಂಗೀತ ಅಭ್ಯಾಸಕ್ಕೆಂದು ಸ್ವತಃ ಪುರಾಣಿಕಮಠರು ರಾಜಗುರು ಅವರ ಹತ್ತಿರ ಕಳುಹಿಸಿದರು.

‘ಧಾರವಾಡದಾಗ ರೂಂ ಮಾಡಿಕೊಂಡು ಇದ್ದೆ. ಬೆಳಗ್ಗೆ ರಿಯಾಝ್ ಮಾಡುವ ಹೊತ್ತಿನ್ಯಾಗ ರಾಜಗುರುಗಳು ಕರೀತಾ ಇದ್ರು. ನನಗೂ ಕಷ್ಟ ಕಾಲ. ಬೆಳಗ್ಗೆ ಧಾರವಾಡದ ಚಳಿ ಸಹಿಸುವಂಥಾ ಶಾಲ್‌, ಸ್ವೆಟರ್‍ ಇರಲಿಲ್ಲ. ಬಿಸಿ ಬಿಸಿ ಕಾಫಿ ಕುಡದ ಹೋಗಬೇಕಂದ್ರೆ ದುಡ್ಡು ಇರ್ತಿರ್ಲಿಲ್ಲಾ. ಆಗ ರಾಜಗುರುಗಳೇ ಬಿಸಿ ಬಿಸಿ ಓವಲ್ಟಿನ್‌ ಮಾಡಿ ಕೊಡ್ತಿದ್ರು. ಆಮೇಲೆ ರಿಯಾಜ್‌ ಚಾಲೂ ಆಗ್ತಿತ್ತು’ ಎಂದು ಹೇಳುವಾಗ ರಾಜಗುರುಗಳು ಶಿಷ್ಯನ ಮೇಲೆ ಇಟ್ಟಿದ್ದ ಕಾಳಜಿ ಮತ್ತು ಪ್ರೀತಿ ವ್ಯಕ್ತವಾಗುತ್ತದೆ.

‘ ಹೇಳಿಕೊಟ್ಟಂಥ ಪಾಠ ಕ್ರಮಬದ್ಧವಾಗಿರಲಿಲ್ಲ. ಅವರು ರಿಯಾಜ್‌ ಮಾಡಬೇಕಾದ ಹೊತ್ತಿನಲ್ಲಿ ಸ್ವರ ಹಚ್ಚಲು ಹೇಳುತ್ತಿದ್ದರು. ಪರಂಪರಾಗತ ರಾಗಗಳಾದ ಭೀಂಪಲಾಸ್‌, ಭೂಪ್‌, ದುರ್ಗಾ ಮತ್ತು ಸಾರಂಗ ರಾಗಗಳಿಂದ ನನ್ನ ಪಾಠ ಆರಂಭವಾಗಲಿಲ್ಲ. ನನಗೆ ‘ಪೂರಿಯಾ ಕಲ್ಯಾಣ್‌’ ರಾಗವನ್ನು ಮೊದಲಿಗೆ ಶುರು ಮಾಡಿದ್ರು. ಹೀಗೆ ಪಾಠ ಸಾಗ್ತಾಯಿತ್ತು. ಊರಲ್ಲಿ ಏನೋ ತೊಂದರೆ ಎಂದು ತಂದೆ ಕರೆಸಿಕೊಂಡ್ರು. ಆಗ ಒಂದು ವರ್ಷ ಮನೆಗೆ ಬಂದೆ. ಗುರುಗಳು ಮೇಲಿಂದ ಮೇಲೆ ಪತ್ರ ಬರೆದು ಕರೀತಾ ಇದ್ರು. ನನಗೆ ಗಾಡಿ ಚಾರ್ಜ್‌ ಹಾಕಿಕೊಂಡು ಹೋಗುವುದೂ ಕಷ್ಟ. ತೀರಾ ಬಡತನ ಅಂತೇನಲ್ಲ. ಒಂಭತ್ತು ಜನ ಮಕ್ಕಳು ನಾವು. ಗದ್ದೆ, ತೋಟ ಎಲ್ಲಾ ಇದ್ದರೂ ಬೆಳೆ ಬಂದು ಹಣ ಬರಬೇಕು ಅಂದರೆ ತುಂಬಾ ನಿಧಾನವಾಗುತ್ತಿತ್ತು. ನನ್ನ ಸಂಗೀತದ ತುಡಿತ ನಮ್ಮ ತಂದೆಯವರಿಗೆ ಅರ್ಥವಾಗ್ತಿರಲಿಲ್ಲ. ಇದರಿಂದ ಗುರುಗಳಿಗೂ ನಿರಾಸೆ ಆಗ್ತಿತ್ತು. ಹೀಗೆ ಸಾಗಿತ್ತು ನನ್ನ ಸಂಗೀತಾಭ್ಯಾಸ.....’ ವಿದ್ಯಾರ್ಥಿ ಜೀವನದ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ ಹೆಗಡೆ.

‘ಧ್ವನಿ ಸಂಸ್ಕರಣ’ ಪದ್ಧತಿಯನ್ನು ಕೌಶಲ್ಯಯುತವಾಗಿ ರೂಢಿಸಿಕೊಂಡಿರುವ ಹೆಗಡೆ ಅವರು ಸ್ವರ-ಲಯ ಶುದ್ಧಿ, ರಾಗವಿಸ್ತಾರ ಕ್ರಮ, ವಿಶಿಷ್ಟ ರೀತಿಯ ಲಯಕಾರಿ-ತಾನ್‌-ಸರಗಮ್‌-ಮುಖಡಾ ಇತ್ಯಾದಿ... ಸಾಂಪ್ರದಾಯಿಕ ಚೌಕಟ್ಟನ್ನು ಮೀರದೆ ತ್ರಿಸಪ್ತಕಗಳಲ್ಲಿಯೂ ಧ್ವನಿ ಸಂಚರಿಸಿ ಬರುವಾಗ ಶ್ರಾವಣ ಸಂಜೆಯ ತುಂತುರು ಮಳೆಗೆ ಮುತ್ತಿನ ಎರಕ ಹೊಯ್ದದಂತಿರುತ್ತದೆ. ಠುಮ್ರಿ, ತರಾನಾ, ಭಜನ್‌, ಭಕ್ತಿಗೀತೆ ಮತ್ತು ವಚನಗಳು ಹೆಗಡೆಯವರ ಕಂಠದಿಂದ ಮನದುಂಬಿ ಬರುತ್ತವೆ. ಅಲ್ಲದೇ ಕಿರಾಣಾ ಘರಾಣಾ ಮತ್ತು ಗ್ವಾಲಿಯರ್‍ ಘರಾಣಾ ಗಾಯನ ಶೈಲಿಯನ್ನು ಅಳವಡಿಸಿಕೊಂಡಿರುವ ಇವರ ನಾದಮಾಧುರ್ಯ ಹಲವಾರು ಧ್ವನಿಸುರುಳಿಗಳಲ್ಲಿ ಅಡಕವಾಗಿದೆ.

ಶಿಷ್ಯನಾದವನು ಹಾಡುಗಾರಿಕೆಯೊಂದಿಗೆ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಹೊಸ ದೃಷ್ಟಿಕೋನದಿಂದ ನೋಡುವುದನ್ನು ಕಲಿಯಬೇಕು ಎಂದು ಬಿಚ್ಚು ಮನದಿಂದ ನುಡಿಯುತ್ತಾರೆ ಹೆಗಡೆ. ತನ್ನೊಂದಿಗೆ ತನ್ನ ಶಿಷ್ಯರನ್ನೂ ಬೆಳೆಸಿಕೊಂಡು ಸಾಗುತ್ತಿರುವ ಹೆಗಡೆಯವರು ಸದಾ ಏನಾದರೂ ಕಾರ್ಯಕ್ರಮ, ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಪ್ರಸ್ತುತ ದಿನಮಾನಗಳಲ್ಲಿ ಇಂಥವರು ಸಿಗುವುದು ವಿರಳ.
ಒಟ್ಟಿನಲ್ಲಿ ಕಲೆ ಎನ್ನುವುದುದು ಸೌಂದರ್ಯ ಹಾಗೂ ಸತ್ಯದ ಅನ್ವೇಷಣೆಯ ಒಂದು ಚೈತನ್ಯ. ಸೂಕ್ಷ್ಮ ಬುದ್ಧಿಯ ಸೃಜನಾತ್ಮಕ ಕ್ರಿಯೆ. ಅದಕ್ಕಾಗಿಯೇ ಅದು ಮತ,ಪಂಥಗಳಿಂದ ದೂರ ಇರಲು ಇಚ್ಛಿಸುತ್ತದೆ ಎಂಬುದು ಈ ಸಂದರ್ಭದಲ್ಲಿ ನೆನಪಾಗುತ್ತದೆ.

-ಶ್ರೀದೇವಿ ಕಳಸದ
(೫-೧೨-೨೦೦೪ರ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಪ್ರಕಟ)

No comments: