Saturday, July 26, 2008

ಪುಟ್ಟ ಪಾದದ ಕನಸು. . .

ನಿದ್ದೆಗಣ್ಣಿನ ಮುದ್ದು ಮುಖವನ್ನೊಮ್ಮೆ ಸಂತೃಪ್ತಿಯಿಂದ ನೋಡಿ, ಮುಂಗೂದಲು ಸರಿಸಿ ಮುತ್ತು ಕೊಟ್ಟಾಗಲೇ ದಿನದ ಆರಂಭ. ಅಂದುಕೊಂಡಂತೆ ಇರದ ದಿನದ ಬಗ್ಗೆ ಚಿಂತಿಸುತ್ತ ಕಣ್ಮುಚ್ಚಿದಾಗಲೇ ದಿನದ ಅಂತ್ಯ. ನೆತ್ತಿ ನೇವರಿಸುವ ಅವನ ಕೈಗಳನ್ನೊಮ್ಮೆ ಅತ್ತ ಸರಿಸಿ, ಗಡಿಯಾರದ ಮುಳ್ಳುಗಳಿಗೆ ಜೋತುಬೀಳುವ ಕಣ್ಣುಗಳು. ನಿನ್ನೆಯ ದೇಹಕ್ಕೊಮ್ಮೆ ನೀರು ಸೋಂಕಿಸಿ, ಪ್ರತಿ ದಿನವೂ ಹೊಸದೆನ್ನುತ್ತ ನಗೆಚೆಲ್ಲುವ ಹೊತ್ತಿಗೆ ಸದ್ದಿಲ್ಲದೇ ಬಿಕ್ಕುತ್ತಿರುತ್ತದೆ ಅದೇ ಹಳೆಯ ಕನ್ನಡಿ. ಕಂಫರ್ಟ್‌ ಜೀನ್ಸ್‌ನಲ್ಲಿ ಚಕ್ರ ಕಟ್ಟಿಕೊಂಡ ಕಾಲುಗಳ ತೂರಿಸುತ್ತಲೇ, ಮುನಿಸಿಕೊಂಡು ಅಡಿಗೆ ಕುಳಿತ ಟಾಪ್‌ನ್ನು ಸಮಾಧಾನಿಸುವ ಯತ್ನ. ಇಷ್ಟೆಲ್ಲ ಆದಮೇಲೆ...... `ನನ್ನ ಮೇಲೇರಿ ಹಾದಿ ಸವೆಸುವ ಅನುಭವದಂತೆಯೇ ನಿನ್ನ ಬದುಕೂ...' ಎಂದು ಆಗಾಗ ನೆನಪಿಸುವ ಗಾಡಿ. ಅದರ ಮೈ ಒರಸುತ್ತ ಎಡಕನ್ನಡಿಯನ್ನೊಮ್ಮೆ ಮುಖಕ್ಕೆ ಹೊಂದಿಸಿ ಪ್ರೀತಿಯಿಂದ ಕೈಯಾಡಿಸಿ, ಮತ್ತದೇ ಕನ್ನಡಿಯ ಮರಳು ಪ್ರೀತಿಗೆ ಶರಣು....

ಮನೆದೇವರ ಸ್ಮರಿಸಿ, ಮನದನ್ನೆಯ ನೆನದು ಬೀದಿಗಿಳಿದ ಸಾವಿರಾರು ವಾಹನಗಳಲ್ಲೊಂದಾಗುತ್ತದೆ ನನ್ನದೂ ಒಂದು ರಥ. ತಲುಪುವ ಜಾಗವಷ್ಟೇ ಕಣ್ಮುಂದಿದ್ದಾಗ, ಮಾಡುವ ಕೆಲಸಗಳತ್ತಲೇ ಚಿತ್ತವಿದ್ದಾಗ ಆ ನುಗ್ಗುವಿಕೆ, ಗುದ್ದುವಿಕೆ, ತರಚುವಿಕೆ ಹೀಗೆ ಏನೆಲ್ಲ ...ವಿಕೆಗಳನ್ನು ಸಾವರಿಸಿಕೊಳ್ಳುತ್ತ ಸಾಗುತ್ತದೆ ಯಾನ... ಕಾಯಕ ಸ್ಥಾನಕ್ಕೆ ಸೇರುವ ಅದೆಷ್ಟೋ ತಲೆಗಳು ಜೊತೆಯಾಗುತ್ತವೆ... ಈ ಎಲ್ಲದರ ಮಧ್ಯೆಯೂ ಕಾಲುಗಳು ಮಾಡಿದ ತಪ್ಪಿಗೆ ಪರಸ್ಪರ ನಮಸ್ಕರಿಸುವ ಮಡಿ-ಕೈಗಳು. ಕಣ್ಕಿರಿದು ಮಾಡಿ ಪಕ್ಕದ ಕಣ್ಣುಗಳಿಗೆ ಕನ್ನಡಿ ಜೋಡಿಸುವ ಹುಚ್ಚು ಮನಸ್ಸುಗಳು. ಆ ನೋಟಗಳನ್ನೆದುರಿಸಲಾರದೇ ಡಮ್ಮಿ ಮೊಬೈಲ್‌ ಆಪರೇಶನ್‌ಗೆ ಅಣಿಯಾಗುವ ಅಕ್ಕಂದಿರು, ಅವಕಾಶ ಸಿಕ್ಕಾಗಲೆಲ್ಲ ಮೊಂಡು ಟೀಶರ್ಟ್‌‌ನ್ನು ಸಂಭಾಳಿಸುವ ನವಿರು ಬೆರಳುಗಳು, ಕಿರುಗಣ್ಣಿನಿಂದಲೇ ಅದ ನೋಡುತ್ತ ಬಣ್ಣ ಬಣ್ಣದ ಬಲೂನುಗಳಾಗಿ ಮಾಯವಾಗುವ ಚಿಗುರು ಮೀಸೆಗುಂಪುಗಳು. ಟೇಬಲ್‌ ಮೇಲೆ ಸ್ನ್ಯಾಕ್ಸ್‌ ತೆಗೆದಿಡಲು ಮರೆತು, ರೋಡ್‌ ಮೇಲೆ ಚಡಪಡಿಸುವ ಪುಟ್ಟ ಪುಟ್ಟ ಅಮ್ಮಂದಿರು, ಗೃಹಿಣಿ ಜೀವನದ ಪುರಾವೆ ಹುಡುಕುತ್ತ ಕಾಲ್ಬೆರಳ ಗ್ಲಾನ್ಸ್ ಮಾಡುವ ಅಂಕಲ್‌ಗಳು, ದೊಡ್ಡ ಬ್ಯಾಗಿಗಂಟಿಕೊಂಡು ಭವಿಷ್ಯದ ಭಾರ ಹೊತ್ತ ಸಣ್ಣ ಸಣ್ಣ ತಲೆಗಳು, ಕೆಂಪು ದೀಪವಾರಿದರೂ ಕಿಕ್‌ ಒದೆಯುತ್ತಲೇ ಹಿಂದಿದ್ದವರ ಟೆಂಪರ್‍ ಚೆಕ್ ಮಾಡುವ ಹೊಟ್ಟೆಗಳು.... ಹೀಗೆ ಏನೆಲ್ಲ. ದಿನದ ದಾರಿಯಲ್ಲಿ...

ಈ ದಾರಿಯಲ್ಲೇ ನಾನು ನಿನ್ನನ್ನು ನೋಡಿದ್ದು. ನನ್ನ ನಿನ್ನ ಮಧ್ಯೆ ಒಂದೂವರೆ ಅಡಿ ಅಂತರ. ಎರಡ್ಮೂರು ಸೆಕೆಂಡು ಮಾತ್ರ ದೃಷ್ಟಿ ನೆಟ್ಟದ್ದು. ಅಗಲಿಕೆಯಿನ್ನೂ ಆರಿರಲಿಲ್ಲ. ಒಂಟಿತನದ ನೋವಿತ್ತು. ಹಳೆಯ ದಿನಗಳನ್ನೇ ನೆನೆಯುತ್ತ ಹರಿವ ಕಣ್ಣೀರ ಒರೆಸಿಕೊಳ್ಳದಷ್ಟೂ ನಿಶ್ಯಕ್ತನಾಗಿದ್ದೆ ನೀನು. ಪುಟ್ಟ ಬಟ್ಟಲಿನಿಂದ ಸ್ನಾನ ಮಾಡಿಸಿ, ಮೆತ್ತನೆಯ ಬಟ್ಟೆಯಲ್ಲಿ ಒರೆಸಿದ ಗುಲಾಬಿ ಕೈಗಳ ನೆನಪು ನಿನ್ನ ಕಾಡುತ್ತಿತ್ತು. ಆ ಕಾಡುವಿಕೆಯಲ್ಲೂ ಬೇಸರವಿತ್ತು. ನೋವಿತ್ತು ಜೊತೆಗೆ ಪ್ರೀತಿ, ಹುಸಿಕೋಪವೂ ಇತ್ತು. ಎಲ್ಲಕ್ಕಿಂತ ಮೊದಲು 'ಇದ್ದಷ್ಟು ದಿನ ಪಾದ ಸ್ಪರ್ಶಿಸುವ ಅವಕಾಶ ಸಿಕ್ಕಿತ್ತು' ಎಂಬ ಸಂತೃಪ್ತಿ ಎದ್ದು ಕಾಣುತ್ತಿತ್ತು ನಿನ್ನಲ್ಲಿ. ಕಾಲು ಜಾರಿದ ಗಳಿಗೆಯನ್ನೇ ಮತ್ತೆ ಮತ್ತೆ ಕಣ್ಮುಂದೆ ತಂದುಕೊಳ್ಳುತ್ತ ದುಃಖಿಸುತ್ತಿದ್ದರೂ ಗುಲಾಬಿ ಅಂಗಾಲು ಸ್ಪರ್ಶಿಸಿ, ಹೂವಿನಂತೆ ಜೋಪಾನ ಮಾಡಿದ ನಿಸ್ವಾರ್ಥ ದಿನಗಳ ನೆನೆದು ಆಗೊಮ್ಮೆ ಈಗೊಮ್ಮೆ ತೃಪ್ತಿನಗೆ ಚೆಲ್ಲುತ್ತಿದ್ದುದು ನನಗೆ ಮಾತ್ರ ತಟ್ಟಿತ್ತು...

ಹಸಿರು ದೀಪ ತನ್ನ ಇರುವಿಕೆ ತೋರುತ್ತಿದ್ದಂತೆ ನನ್ನ ಬಲಗೈ ಗಾಡಿಯ ಕಿವಿ ಹಿಂಡಿತು. ತೆರೆದ ಲಿಫ್ಟ್‌ ಹೊಕ್ಕೂ ಆಯಿತು. ಕುರ್ಚಿಗೆ ಅಂಟಿಕೊಂಡಿದ್ದೂ ಆಯಿತು. ಅಕ್ಕ-ಪಕ್ಕದ ಕೀಲಿಮಣಿಯೊಂದಿಗೆ ನನ್ನದೂ ಸೋsss ಎನ್ನುತ್ತಿದ್ದರೂ ನಡುಹಾದಿಯಲ್ಲಿ ಮೌನವಾಗಿ ಬಿಕ್ಕುತ್ತಿದ್ದ ನಿನ್ನ ಧ್ವನಿ ತಣ್ಣಗೆ ನನ್ನೆದೆ ಕೊರೆಯುತ್ತಲೇ ಇತ್ತು. ಆದರೆ ನನಗೆ ಗೊತ್ತು. ನಿನ್ನ ಕಳೆದುಕೊಂಡ ಪುಟ್ಟ ಹೃದಯವೂ ನೋವುಂಡಿದೆ. ಹಂಬಲಿಸಿದೆ. ಕನವರಿಸಿಯೂ ಇದೆ. ಆದರೆ ಅದು ನಿನ್ನ ತಲುಪಲೇ ಇಲ್ಲ. ಹಾಗೆಯೇ ನಿನ್ನ ನೋವೂ ಅದಕೆ...

ಆದರೆ ಆ ಪುಟ್ಟ ಗುಲಾಬಿ ಪಾದದ 'ಒಡೆಯರು' ನಿನ್ನನ್ನು ಮರೆತುಬಿಟ್ಟಿರಬಹುದು. 'ಒಮ್ಮೆ ಕಳೆದದ್ದು ಮತ್ತೆ ಸಿಗುವುದೆ?' ಎನ್ನುತ್ತ ಮಗುವನ್ನು ರಮಿಸಿರಬಹುದು. ಹೊಸತನ್ನು ಕೊಡಿಸುವಾ ಎಂದು ಚಪ್ಪಲಿ ಅಂಗಡಿಯತ್ತ ಸಾಗಿರಲೂಬಹುದು. ಆದರೆ ಗುಲಾಬಿ ಪಾದ ನೆನೆಯುತ್ತಲೇ ಇರುತ್ತದೆ ನಿನ್ನ ಇರುವಿಕೆಯನ್ನೇ. ಯಾವ ರಸ್ತೆ ಮೇಲೋ, ಯಾವ ಅಂಗಡಿಯ ಶೋಕೇಸಿನಲ್ಲೋ, ಎಲ್ಲಾದರೂ ಮತ್ತೆ ಸಿಗುವೆಯಾ ಎನ್ನುತ ಪುಟ್ಟ ಬಟ್ಟಲು, ಮೆತ್ತನೆಯ ಬಟ್ಟೆ ಇಟ್ಟುಕೊಂಡು. ಆ ಪಾದವನ್ನೊಮ್ಮೆ ಕ್ಷಮಿಸಿಬಿಡು. ನಿನ್ನ ಹಿಡಿದಿಟ್ಟುಕೊಳ್ಳುವಷ್ಟು ಶಕ್ತಿ ಆ ಪುಟ್ಟ ಪಾದಕ್ಕಿನ್ನೂ ಬಂದಿಲ್ಲವೆಂದುಕೊಳ್ಳುತ್ತಾ... ಗಾಡಿ ಏರಿ ಕುಳಿತು, ಅಪ್ಪನ ಬೆನ್ನು ಅವುಚುತ್ತ, ಅಮ್ಮನೆದೆಗೆ ಬೆನ್ನು ಆನಿಸುತ್ತ ಹಾಗೇ ಸಾಗುತ್ತಿದ್ದಾಗ, ಅದ್ಯಾವ ಮಾಯೆಯಲ್ಲೋ ಆವರಿಸಿದ ಕೂಸಿನ ನಿದ್ದೆ ನಿನ್ನ ಬೀಳುವಿಕೆಗೆ ಕಾರಣವಾಗಿರಬಹುದು. ಎಂಟು ದಿನಗಳು ಕಳೆದವು ನಿನ್ನ ನೋಡಿ. ತಣ್ಣಗೆ ಕಾಡುತ್ತಿರುವೆ....

ನಿನ್ನೆ ತಾನೆ ಕೇಳಿದೆ, ನೆತ್ತಿ ನೇವರಿಸುವವನಿಗೆ...'ಅವತ್ತು ರಸ್ತೆಯಲ್ಲಿ ಬಿದ್ದಿದ್ದ ತಿಳಿನೀಲಿ ಬಣ್ಣದ ಪುಟ್ಟ ಚಪ್ಪಲಿ ನೆನಪಿದೆಯಾ?' ಎಂದು. ತಿಂಗಳುಗಟ್ಟಲೆ ಕಾಯಿಸಿ ಎಂದೋ ಒಂದು ಸಂಜೆ ಸದ್ದಿಲ್ಲದೇ ಅರಳುವ ಬ್ರಹ್ಮಕಮಲದಂತೆ ನಗೆ ಸೂಸಿತು ಅವನ ಮೊಗ. ನಕ್ಕಿತು ಆ ಹಳೆಯ ಕನ್ನಡಿ ಪರಿಮಳದ ಜಾಡು ಹಿಡಿದು. ಕಿಶೋರಿಯ ಯಮನ್‌ ಕೋಣೆಯ ಕಣಕಣವನ್ನಾವರಿಸಿತ್ತು... ನೆತ್ತಿಯಡಿ ಮುಳ್ಳು-ಅಂಕಿ ನೇತುಹಾಕಿಕೊಂಡಿದ್ದ ಗೋಡೆ ಸಹಿ ಹಾಕಿತು ಅದಕೆ.

also see in

http://kendasampige.com/article.php?id=963

Thursday, July 17, 2008


ಈಗ


ಬೆಳೆಯುತ್ತಿವೆ ಪುಟ್ಟ ಪಾದಗಳೀಗ


ಕಿರುದು ಕಾಲ್‌ಚೀಲ್

ಒದ್ದಾಗ ಎದೆ,

ಎಳೆ ಬೆರಳ ಕಣ್ಣ ಮುಚ್ಚಾಲೆ.

ಆಮೇಲೆ...ಬೆಳೆದಾಯ್ತು ಪುಟ್ಟ ಪಾದಗಳು

ಹಾಲ್ಗಡಗ, ಕಾಲ್ಗಡಲ ಪಾಲ

ಕರಿನೆರಳ ಕಾಲ್‌ಚೀಲ

ಎದೆಗೊದ್ದ ಬೆರಳ,

ಕರುಳ ತೊಡಕ

Wednesday, July 9, 2008

ಜಯಮ್ಮ ಮತ್ತು ಜನರೇಟರ್‍ ಶ್ರುತಿ

ಕಪ್ಪು ಎರಡರ ಶ್ರುತಿ ಹಿಡಿದೇ ಇತ್ತು ಜನರೇಟರ್‌

ಯಾರದೋ ಒತ್ತಾಯಕ್ಕೆಂಬಂತೆ ಆಗೊಮ್ಮೆ ಈಗೊಮ್ಮೆ ತೂಗುತ್ತಿದ್ದವು ಎಲೆಗಳು, ಅವುಗಳಿಗಂಟಿದ ಕೊಂಬೆಗಳೂ... ನೋಡಲು ಬಂದ ಹುಡುಗನ ಮುಂದೆ ಕಾಫಿ ಟ್ರೇ ಹಿಡಿದು ಮನಸ್ಸಿಲ್ಲದ ಮನಸ್ಸಿನಿಂದ ಆರ್ಟಿಫೀಶಿಯಲ್ ಸ್ಮೈಲ್‌ ಕೊಡುವ ಹುಡುಗಿಯ ಹಾಗೆ. ಈ ನೀರಸ ಪ್ರತಿಕ್ರಿಯೆಗೋ ಏನೋ ಮುನಿಸಿಕೊಂಡು, ಮರ ಬಿಟ್ಟು ಕಟ್ಟಡದ ನೆತ್ತಿ ಏರಿದ್ದವು ಒಂದಿಷ್ಟು ಮೈನಾ, ಎಂಟ್ಹತ್ತು ಕಾಗೆಗಳು. ಚಲಿಸುವುದೇ ನಮ್ಮ ಧರ್ಮ ಕಣಯ್ಯಾ ಎಂದು ಭುಜ ತಟ್ಟಿ ಹೇಳುತ್ತಿತ್ತು ಬೂದುಬಣ್ಣದ ಮೋಡ ಬಿಳಯ ಮೋಡಕ್ಕೆ. ಆದರೂ ಆ ಬಿಳಿಯ ಮೋಡ ತಿರುತಿರುಗಿ ಮರವನ್ನ ಮೈನಾ-ಕಾಗೆಗಳನ್ನ, ಶ್ರುತಿ ಹಿಡಿದಿರುವ ಜನರೇಟರ್‌ನನ್ನ ನೋಡುವುದ ಮರೆಯಲಿಲ್ಲ ಮರೆಯಾಗುವತನಕ. ಹಗಲಿಗೆ ಹೆಗಲು ಕೊಡುವವನು ಅದ್ಯಾಕೋ ಏನೋ ತುಸು ಲೇಟಾಗಿಯೇ ಹಾಜರಾಗಿದ್ದ ಶಿಫ್ಟಿಗೆ. ಅದು ನಿದ್ದೆಗಣ್ಣಲ್ಲೇ. ಕನಸು-ಕನವರಿಕೆ ಗುಂಗಲ್ಲೇ. ಮನಸೊಲ್ಲದ ಮನಸಿನಿಂದ. ಮೊನಾಟನಸ್‌ ರೂಟಿನ್ ಲೈಫಿನಿಂದ.

ಜನರೇಟರ್‌ ಕಪ್ಪು ಎರಡರ ಶ್ರುತಿಯಲ್ಲೇ ಇತ್ತು...

ತುರುಕಿದ ಮಂತ್ರವನ್ನೇ ತಿರುಚಿ ತಿರುಚಿ ಪಟಪಟಿಸುತ್ತ, ಗೋಡೆಗೆ ಬೆನ್ನಂಟಿಸಿಕೊಂಡ ಟಿವಿ ಪೆಟ್ಟಿಗೆಗಳ ಸಾಲು ಕಾಲಾಯ ತಸ್ಮೈನ್ನಮಃ ಎನ್ನುತ್ತಿದ್ದವು ; ರಾಹುಲ್ ಗಾಂಧಿ ದಾಲ್‌-ಚಾವಲ್ ತಿಂದರೆ ಬ್ರೇಕಿಂಗ್‌! ಸಿಡಿದ ಒಂದೆರಡು ಮಳೆಹನಿಯಿಂದ ಬಿಗ್‌ಬಿಗೆ ಕೋಲ್ಡ್ ಅಟ್ಯಾಕ್‌ ಫ್ಲ್ಯಾಶ್‌! ಬೆಚ್ಚಗೆ ಕಾಲಸಂದಿಯೊಳಗೆ ಮುಖ ಮುಚ್ಚಿಕೊಂಡು ಮಲಗಬೇಕಿದ್ದ ಬೆಕ್ಕು ಸಜ್ಜಾ ಏರಿ ಹದಿನೈದು ಗಂಟೆಗಳಾದರೂ ಕೆಳಗಿಳಿಯದಿದ್ದುದು ಸ್ಪೆಶಲ್‌!

ಕಪ್ಪು ಎರಡರ ಶ್ರುತಿ ಹಿಡಿದ ಜನರೇಟರ್‍ ಯಾಕೋ ಒಂದರ ಶ್ರುತಿಗೆ ಇಳಿದ ಹಾಗಿತ್ತು...

ಅವರಿವರ ಎಂಜಲು ತೊಳೆದು, ದಕ್ಕಿದ ಪುಡಿಗಾಸನ್ನೇ ಸೆರಗಂಚಿನಲ್ಲಿ ಗಂಟುಹಾಕುವ ಜಯಮ್ಮನ ಕಾಲ ಮೇಲೆ, ಅದ್ಯಾವುದೋ ಕೆಂಪು ಕಾರು ಹರಿದು ತಿಂಗಳಾಗುತ್ತ ಬಂದರೂ ಸುದ್ದಿ ಹೋಗಲಿ ಸ್ಕ್ರಾಲಿಗೂ ಲಾಯಕ್ಕಿಲ್ಲ. ಬೆರಳು ಅಪ್ಪಚ್ಚಿಯಾಗಿ, ರಾಮಾರಕ್ತವಾಗಿ, ಉಗುರು ವಿಳಾಸ ಕಳೆದುಕೊಂಡರೂ ಕೆಂಪು ಕಾರಿನವನ ಪತ್ತೆಯಿಲ್ಲ. ಚರ್ಮ ಕಿತ್ತು, ಕಾಲು ಊದಿ ಕಂಬಗಾತ್ರವಾದರೂ ಯಾರೋ ಮಾತು ಕೇಳಿ ಕರಿ ಕೋಟಿನ ಚುಂಗು ಹಿಡಿದ ಆಕೆ ಬಗ್ಗೆ ಅಸಮಾಧಾನವಾದರೂ ನುಂಗಿಕೊಳ್ಳಲೇಬೇಕಿತ್ತು. ಲಕ್ಷ್ಮಿದೇವಿಯಿಲ್ಲದೇ ನ್ಯಾಯದೇವತೆ ತಕ್ಕಡಿ ತೂಗಿಯಾಳೆ ಎಂದು. ಮನಸ್ಸು ತಡಿಯಲಿಲ್ಲ. ನಿನ್ನ ಮನೆ ಅಡ್ರೆಸ್‌ ಕೊಡು, ಯಾರಾದರೂ ಸಹಾಯಕ್ಕೆ ಬಂದರೆ ನೋಡೋಣ ಎಂದರೆ : ಒಮ್ಮೆ ಕಾಮಾಕ್ಷಿಪಾಳ್ಯ. ಇನ್ನೊಮ್ಮೆ ಬಸವೇಶ್ವರನಗರ. ಮೂರನೇಯದೋ ನಾಲ್ಕನೆಯದೋ ಕ್ರಾಸ್‌ ಎಂದು ಹುಬ್ಬುಗಂಟು ಹಾಕುವ ಅವಳ ಪರದಾಟ. ಯಾಕೋ ಮನಸ್ಸು ತೋಯ್ದಿತು. ದಿನ್ನೆ ಏರಿ, ದೊಡ್ಡ ಮನೆ ಪಕ್ಕ ತಿರುಗಿ, ಕೋಳಿ ಅಂಗಡಿ ಬಲಕ್ಕೆ ತಿರುಗಿದರೆ ನಮ್ಮ ಮನೆ ಕಣವ್ವಾ ಎಂದು ಪದೇ ಪದೇ ಹೇಳಿದ್ದನ್ನೇ ಹೇಳುತ್ತಿದ್ದರೂ ಅದ್ಯಾವುದೂ ಕಣ್ಣಪಟಲ ಮುಂದೆ ಬರಲಿಲ್ಲ, ಮಹಡಿ ಮಹಡಿ ಮನೆಗಳ ನಡುವೆ, ಎತ್ತರೆತ್ತರ ಕಟ್ಟಡಗಳೊಳಗೆ.

ಯಾಕೋ ಜನರೇಟರ್‍ ಕಪ್ಪು ಒಂದು ಶ್ರುತಿ ಬಿಟ್ಟು ಸರಿದ ಹಾಗಿರಲಿಲ್ಲ...

ಚಪ್ಪಲಿಯನ್ನೂ ಬೇಡವೆನ್ನುವ ಗಾಯದ ಪಾದಕ್ಕೀಗ ಗಾಜಿನ ಚೂರೊಂದು ಚುಚ್ಚಿದೆ. ಕಂಡವರಿಗೆ ಕೈ ಮುಗಿದು ಕೈಸಾಲ ಕೇಳಿ ಚಿಕಿತ್ಸೆಗಾಗಿ ನಡೆದಿದೆ ಪರದಾಟ. ಕುಂಟುತ್ತಲೇ ನಾಲ್ಕು ಮನೆ ಕಸ-ಮುಸುರೆಯೊಂದಿಗೆ ನಡೆಯುತ್ತಿದೆ ಅವಳ ಕಾಲು. ಜೊತೆಗೆ ಬದುಕೂ : ಕೆಂಪು ಕಾರಿನವನ ಕಾಸಿಗೆ ಬಾಯಿತೆರೆದು...

ಈಗ ಮತ್ತೆ ಕಪ್ಪು ಎರಡರ ಶ್ರುತಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಜನರೇಟರ್‌...

ಅಮಲುಗಣ್ಣಿನ ಬೇಬಿಗಳನ್ನ, ಅವರ ಬಳುಕಿಗೆ ಜೋತುಬೀಳುವ ಜೊಂಪೆಗೂದಲಿನ ಹೈದರನ್ನ ಟೇಪಿನಲ್ಲಿ ಸುತ್ತಿಕೊಂಡು ಪ್ರಿವ್ಯೂ ನೋಡುತ್ತಿದ್ದಾಳೆ ರಿಪೋರ್ಟ್ರಿಣಿ. ಎಲ್ಲೋ ಒಂದಿಷ್ಟು ಫ್ಲೋ ಬಿಟ್ಟು, ಬೈಟ್ ಕತ್ತರಿಸಿ, ಕಳೆದವಾರ ಬಳಸಿ ಬಿಸಾಡಿದ ಸಾಲುಗಳನ್ನೇ ತಿರುಚಿ, ಗೀಚಿ, ಬೇಗ ಹಾರಿಬಿಡಲೇ? ಎಂದು ರಿವೈಂಡ್ ಫಾರ್ವರ್ಡ್‌ ಎನ್ನುತ್ತಿದೆ ಅವಳ ಮನಸ್ಸು.

ಜನರೇಟ್ ಶ್ರುತಿ ಕಪ್ಪು ಒಂದು, ಎರಡರ ಮಧ್ಯೆ ಹೊಯ್ದಾಡುತ್ತಿದೆ...

ಗೋಡೆಗಂಟಿದ ಮೂರ್ಖಪೆಟ್ಟಿಗೆಗಳಿಗೆ ಜಯಮ್ಮಳ ‘ಕುಂಟಾಟ’ವೂ ಕಾಣುತ್ತಿಲ್ಲ. ನರಳಾಟವೂ ಕೇಳುತ್ತಿಲ್ಲ. ಕೆಂಪು ಕಾರಿನವನಿಗೆ ಕ್ಯಾಮೆರಾ ಲೆನ್ಸ್‌ ಫೋಕಸ್‌ ಮಾಡೋದು ಸಾಧ್ಯವೇ ಇಲ್ಲವೇನೋ...

ಹಾಂ ಈಗ ಆ ಜನರೇಟರ್‍ ಮೊದಲಿನಂತೆ ಕಪ್ಪು ಎರಡರ ಶ್ರುತಿಗೇ ಗಟ್ಟಿಯಾಗಿ ಅಂಟಿಕೊಂಡಿದೆ...

Tuesday, July 1, 2008

ಕಾದಿಹಳು...

ಕಾದಿಹಳು ಕಾತುರದಿ ಕಾಂತೆ

ಜಗವು ನಿದ್ರಿಸುವ ಸಮಯದಲಿ

ಕಣ್ಣೆವೆಗಳಿಗೆ

ವಿರಹವೇದನೆಯನುಣಿಸಿ,

ನಾಡಿಮಿಡಿತ ಹೃದಯಬಡಿತ ತೀವ್ರಗತಿಯಲ್ಲಿರಲು...

ಆ ಸೊಬಗಿಗೆ ಸೋನೆ ಹಾಡಿದ ತಿಳಿಗಾಳಿಯ

ಪ್ರಶಾಂತತೆಯಲಿ,

ಬೆಳ್ಳನೆಯ ಬೆಳದಿಂಗಳಡಿಯ ಬಿಸಿಯುಸಿರಿನ ಬೆಸುಗೆಯಲಿ,

ಅಂದುಸುರಿದ ಭಾವಪೂರಿತ ಮೆಲುನುಡಿಗಳ ಮೆಲುಕು

ಕಣ್ಮುಂದೆ ದಾಟಿ ಹೋಗುತ್ತಿರಲು,

ತೆರೆದ ಹೃದಯ ಪುಳಕಗೊಳ್ಳುತ್ತಿರಲು...

ಬಾನಂಗಳದಿ ಚಂದ್ರ-ರೋಹಿಣಿಯರ ಸರಸ

ಕಿಟಕಿ ಪರದೆಗಳ ಅಂಚಿನಿಂದ ಅಣಕಿಸುತಲಿದೆ,

ಉರಿವ ಗಾಯದ ಮೇಲೆ ಉಪ್ಪು ಸುರಿದಂತೆ!!

-ಶ್ರೀದೇವಿ ಕಳಸದ

ಒಂದಿಷ್ಟು ಮಿನಿಗವನಗಳು


ಆಯ್ಕೆ

ಮನದ ಬಯಕೆಯೊಂದು

ಮೌನದಲಿ ಹೆಪ್ಪುಗಟ್ಟಿದೆ

ಕರಗಿ ನೀರಾಗದೆ

ಹರಿದು ಸಾಗರ ಸೇರದೆ

ಇಬ್ಬದಿಯ ಸುಳಿಗೆ ಸಿಲುಕಿದೆ

***

ಚೆಲುವು

ಒನಪು ವಯ್ಯಾರದ

ವಿಶುದ್ಧ ವಿಚಕಿಲ ವದನ

ಹೊಂಗಿರಣದ ಹೊರಗಿನಿಂದ

ಹೊನಲ ಹರಿಸುವ

ವಾಂಛೆಯ ನಯನ

ಸೃಷ್ಟಿಯ ಸಹಜ ಸೆಲೆಗೆ

ಸಿಲುಕಿದ

ಸುಶಾಂತ ಸುಷ್ಮಿತ

ಸುಪ್ತ ಸುಮನ

***

ಚಳಿಯಲ್ಲಿ

ಬೆಚ್ಚನೆಯ ಎದೆಯೊಳಗೆ ಹುದುಗಿದ್ದ

ಹುಚ್ಚು ಮನಸಿನ ಬಣ್ಣಬಣ್ಣದ

ಗುಚ್ಛ ಗುಚ್ಛ ಕನಸುಗಳು

ಪುಚ್ಛ ಬಿಚ್ಚಿ ಗರಿಗೆದರಿದವು

ಅಚ್ಚ ನೀಲಿ ಬಾನ ಮೇಲೆ

***

ವಾಸ್ತವ

ವಾಸ್ತವ ಧುಮ್ಮಿಕ್ಕಿ ಬರುತ್ತಿವೆ ಪ್ರತಿಭಟನೆ-ದ್ವೇಷ-ರೋಷಗಳ

ಮಳಲ ರಾಶಿ ಹೊತ್ತು.

ಕ್ಷಣಾರ್ಧದಲ್ಲಿ...

ಪ್ರೀತಿ-ವಾತ್ಸಲ್ಯದ ಸೆಳವು

ದಡಸೇರುವ ಮುನ್ನವೇ

ಕಾಲಗರ್ಭದ ಒಡಲ ಸೇರಲು

ಕೈಬೀಸಿ ಕರೆಯುತ್ತಿವೆ.

***

ನನ್ನವಳು

ನನ್ನವಳು ಸೇವಂತಿಗೆ

ನಕ್ಕರೆ ಇರುವಂತಿಗೆ

ಬೇಕು ಹೊತ್ತಿಗೆ ವಂತಿಗೆ

ನತ್ತಿಗೆ-ಮುತ್ತಿಗೆ-ಮತ್ತಿಗೆ

ಹೋಗೆ ಹೋಗೆ ಎಂದೆಯೋ

ಅಂದೇ ಅವಳ ಕೈ ನನ್ನ ಕತ್ತಿಗೆ!
***

ಯಾಕೆ?

ನೀ ತೋರಿದ

ಪ್ರೀತಿ ಅಮೃತ,

ಸ್ನೇಹ ಸಿಂಚನದ

ಮೆಲುಕು ಮುಲುಗುಟ್ಟುತಲಿತ್ತು...

ನಿನ್ನ ಸ್ಪರ್ಶದಲಿ

ತನ್ನತನವಳಿದು

ನಮ್ಮತನದ

ಹಿತ ಅಪ್ಪುಗೆಯಿತ್ತು...

ನೀನಿತ್ತ ಮುತ್ತು

ಆ ಹೊತ್ತು, ಆ ಮುತ್ತು

ಆ ಗತ್ತು

ಗಮ್ಮತ್ತಿನಿಂದಿತ್ತು!

ಯಾಕೆ?

-ಶ್ರೀದೇವಿ ಕಳಸದ

ಅಂತಃಶ್ರುತಿ

ಈ ಭುವಿಗೆ ಬಂದಾಗ

ಶ್ರುತಿಸ್ಪರ್ಶ ನಿನ್ನಿಂದಲೇ,

ಚಂದಿರನ ಹಂದರದಡಿ ಅಪ್ಪಿಕೊಂಡು

ದಿನಕರನ ಚಪ್ಪರದಡಿ ಒಪ್ಪಿಕೊಂಡು

ಅಳು-ನಗುವಿನಲಿ ನವರಸ ಸೃಷ್ಟಿಸಿ

ಮಡಿಲನಾವರಿಸಿದ ಉಸಿರಿನ

ಆರೋಹ-ಅವರೋಹಕೆ ಸ್ಪಂದಿಸಿ

ಅನುರಾಗದ ಸುಧೆಯನುಣಿಸಿ

ಅಂಕುಡೊಂಕಿನ ಹೆಜ್ಜೆಗೆ

ಬಿಂಕು-ಬಿನ್ನಾಣದ ಬೆಡಗು ಕಲ್ಪಿಸಿ

ಲಯ-ಲಾಸ್ಯ-ಲಾವಣ್ಯಕೆ

ನೂಪುರ ಮೇಳೈಸಿ

ತೊದಲ್ನುಡಿಯ ಮೊದಲ್ನುಡಿಗೆ

ಸ್ವರ-ಸಂಗತಿ ತರ್ಕಿಸಿ

ಮೆಲುನುಡಿಗೆ ನಲ್ಮೆಯ

ವಾತ್ಸಲ್ಯರಾಗ ಸೃಷ್ಟಿಸಿ

ಮಮತೆಯಿಂದ ಮಂದ್ರಕ್ಕಿಳಿದು

ಮಧ್ಯಮದಲಿ ಮುದ್ದಾಡಿ

ತಾದಾತ್ಮ್ಯತೆಯಿಂದ ತಾರಕಕ್ಕೇರಿದಾಗಲೂ

ಅದೇ ಲಯ..ಅದೇ ಶ್ರುತಿ.. ಅದೇ ಭಾವ..

ನಿರಂತರ ನಿನಾದ ನಿಶ್ಚಲ ದಿವ್ಯನಾದ!

-ಶ್ರೀದೇವಿ ಕಳಸದ
(‘ಸುಧಾ’ ಜುಲೈ ೧ ೨೦೦೪ ಪ್ರಕಟ)

ವಚನದಲಿ ನಾದಾಮೃತ ತುಂಬಿ...


ವಚನ ಗಾಯನ ಪರಂಪರೆ ೭೫ರ ಹೊಸ್ತಿಲು ಮುಟ್ಟಿದೆ. ವಚನ ಸಾಹಿತ್ಯ ಜನಸಾಮಾನ್ಯರ ಹೃದಯ ಮುಟ್ಟಿದೆ. ಸಂಗೀತದ ಮೂಲಕ ಬಸವಾದಿ ಪ್ರಮಥರ ತತ್ವ ಸಕಲರಿಗೂ ತಲುಪುತ್ತಿವೆ.

ಕೇವಲ ಅರಮನೆ-ಗುರುಮನೆಗಷ್ಟೇ ಸೀಮಿತವಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರಿಗೂ ತಲುಪಿಸಿದ್ದು ೧೨ನೇ ಶತಮಾನದ ವಚನಕಾರರು. ವಚನ ಎನ್ನುವುದು ಅತ್ತ ಗದ್ಯವೂ ಅಲ್ಲದ ಇತ್ತ ಪದ್ಯವೂ ಅಲ್ಲದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರ. ಸಾಮಾನ್ಯ ಜನರ ಅನುಭವಗಳೇ ವಚನಗಳಿಗೆ ವಸ್ತು. ದೇವಭಾಷೆ ಜನಭಾಷೆಯಾಗದಿದ್ದಾಗ ಜನಭಾಷೆಯನ್ನೇ ಬಸವಾದಿಪ್ರಮಥರು ದೇವಭಾಷೆಯ ಮಟ್ಟಕ್ಕೆ ಏರಿಸಿದರು. ಬಹುಕಾಲದವರೆಗೆ ಅಂದರೆ ೧೯೩೦ರವರೆಗೂ ವಚನಗಳನ್ನು ಗಮಕದ ಶೈಲಿಯಲ್ಲಿ ವಾಚಿಸುವ ಪರಂಪತೆ ನಮ್ಮಲ್ಲಿತ್ತು.

ಉತ್ತರ ಕರ್ನಾಟಕದವರಿಗೆ ಗಮಕದ ಸೆಳೆತ ಅಷ್ಟೊಂದು ಇರಲಿಲ್ಲ. ಮೇಲಾಗಿ ಉತ್ತರ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ ಚೆನ್ನಾಗಿ ಬೆಳೆದಿತ್ತು. ಹಿಂದೂಸ್ತಾನಿಯಲ್ಲಿ ಯಾವುದೇ ಪದ್ಯ ಪ್ರಕಾರವನ್ನು ರಾಗ ಸಂಯೋಜನೆ ಮಾಡಿ ಹಾಡುವ ಸಾಧ್ಯತೆ, ಅವಕಾಶ ಸಾಕಷ್ಟು ಇದ್ದುದರಿಂದ ಸಹಜವಾಗಿಯೇ ವಚನ ಗಾಯನ ಪರಂಪರೆ ಮೈದಳೆಯಿತು.

ಹಿರಿಯ ಸಾಹಿತಿ ಡಾ. ಅ. ನ. ಕೃಷ್ಣರಾಯರು ಶರಣರು ನುಡಿದದ್ದನ್ನು ಸ್ವರಗಳಲ್ಲಿ ಕಟ್ಟಿ ಜನಮನಕೆ ತಲುಪಿಸಬೇಕೆಂದು ಪಟ್ಟು ಹಿಡಿದರು. ದಿ. ಅನಕೃ ಹಾಗೂ ದಿ. ಡಾ. ಮಲ್ಲಿಕಾರ್ಜುನ್ ಮನ್ಸೂರ್‌ ಧಾರವಾಡದ ಹಾಲಗೇರಿ ಕೆರೆ ದಂಡೆ ಮೇಲೆ ಕುಳಿತು ಸಂಗೀತ-ಸಾಹಿತ್ಯದ ಹರಟೆ ಹೊಡೆಯುತ್ತಿದ್ದರು. ‘ಯಾಕೆ ಈ ವಚನಗಳಿಗೂ ಸ್ವರಸಂಯೋಜನೆ ಮಾಡಬಾರದು’ ಎಂಬ ಅನಕೃ ರ ಆಶಯಕ್ಕೆ ಮನಸೂರರು ‘ಹೇಗಪ್ಪಾ ಇವುಗಳಿಲಗೆ ಧಾಟಿ ಕೂಡಿಸುವುದು..?’ ಎಂದು ರಾಗವೆಳೆದರು. ಹಲವಾರು ಭೇಟಿಗಳಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಲೇ ಇತ್ತು. ಕೊನೆಗೊಮ್ಮೆ ಮೈಸೂರಿನ ವಿದ್ವಾನ್‌ ಕೆ. ದೇವೇಂದ್ರಪ್ಪ ಅವರು ಧಾಟಿ ಕೂಡಿಸಿರುವ ಒಂದು ವಚನವನ್ನು ಕೇಳಿ ಬಂದ ಅನಕೃ, ಅದನ್ನು ಮನಸೂರರ ಎದುರು ಹಾಡಿ ತೋರಿಸಿದರಂತೆ. ತಕ್ಷಣವೇ ಅದೇ ಲಹರಿಯಲ್ಲಿ ಅದೇ ವಚನವನ್ನು ಹಿಂದೂಸ್ತಾನಿಯ ರಾಗಕ್ಕೆ ಅಳವಡಿಸಿ ಮನ್ಸೂರ್‍ ಅವರು ಹಾಡಿದರಂತೆ. ಹೀಗೆ ಮನ್ಸೂರ್‍ ಕ್ರಮೇಣ ವಚನಗಳನ್ನು ರಾಗಧಾರಿಯಲ್ಲಿ ಹಾಡುತ್ತ ವಚನಗಾಯನಕ್ಕೆ ಒಂದು ಸಂಚಲನ ನೀಡಿದರು’ ಎಂದು ಅವರ ಪುತ್ರ ಹಾಗೂ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷ ಡಾ. ರಾಜಶೇಖರ್‍ ಮನ್ಸೂರ್‍ ನೆನೆಪಿಸಿಕೊಳ್ಳುತ್ತಾರೆ.

ವಚನಗಳಿಗೆ ಜೀವಂತಿಕೆ ತುಂಬುವಲ್ಲಿ ದಿ. ಸಿದ್ಧರಾಮ ಜಂಬಲದಿನ್ನಿಯವರದು ಮೇಲುಗೈ. ಅವರ ಆಪ್ತ ಸ್ನೇಹಿತ ಡಾ. ಶಾಂತರಸ ವಚನ ವೈಭವದ ಗತದಿನಗಳನ್ನು ಹೀಗೆ ಮೆಲುಕು ಹಾಕುತ್ತಾರೆ. ‘ರಾಯಚೂರಿನ ಸಿರವಾರದ ಚುಕ್ಕಿ ಪ್ರತಿಷ್ಠಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಂಬಲದಿನ್ನಿಯವರ ವಚನ ಕೇಳಲೆಂದೇ ಸುತ್ತ ೧೦ ಹಳ್ಳಿ ಜನ ಜಮಾಯಿಸುತ್ತಿದ್ದರು. ರಾತ್ರಿ ೮ಕ್ಕೆ ಉಪನ್ಯಾಸ-ಪ್ರವಚನಗಳು ಪ್ರಾರಂಭವಾದರೆ, ರಾತ್ರಿ ೧೨ರಿಂದ ಬೆಳಗಿನ ೮ರವರೆಗೆ ವಚನ ಸಂಗೀತವಿರುತ್ತಿತ್ತು. ಹೀಗೆ ಸುಮಾರು ೩೦ ವರ್ಷಗಳ ಕಾಲ ಅವಿರತವಾಗಿ ಈ ಕಾರ್ಯಕ್ರಮ ಸಾಗಿತ್ತು. ಜಂಬಲದಿನ್ನಿಯವರನ್ನು ಕುರಿತು ಮಲ್ಲಿಕಾರ್ಜುನ ಮನ್ಸೂರ್‍ ಆಗಾಗ, ‘ನಿನ್ನಂತೆ ಮನದುಂಬಿ ವಚನ ಹಾಡಲು ನನಗೆ ಬರುವುದಿಲ್ಲ ಎನ್ನುತ್ತಿದ್ದರು’.

ಗದಗಿನ ವೀರೇಶ್ವರ ಪುಣ್ಯಾಶ್ರಮದ ಪಂ. ಪುಟ್ಟರಾಜ ಗವಾಯಿಗಳು ಬಹಳ ಹಿಂದಿನಿಂದ ವಚನಗಳನ್ನು ಹಾಡುತ್ತ, ಅಪಾರ ಶಿಷ್ಯಬಳಗಕ್ಕೆಲ್ಲ ಕಲಿಸುತ್ತ ಬಂದರಾದರೂ ವಚನ ಗಾಯನಕ್ಕೆ ಸಂಚಲನ ಶಕ್ತಿ ನೀಡಿದವರು ಮನಸೂರರೆಂದೇ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇದೇ ಹಾದಿಯಲ್ಲಿ ಡಾ. ದಿ. ಬಸವರಾಜ್ ರಾಜಗುರು, ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಚಂದ್ರಶೇಖರ್‍ ಪುರಾಣಿಕಮಠ, ಪಂ. ವೆಂಕಟೇಶ್‌ಕುಮಾರ್‍, ಅಂಬಯ್ಯ ನುಲಿ, ರವೀಂದ್ರ ಸೋರಗಾವಿ ಮುಂತಾದ ಕಲಾವಿದರು ತಮ್ಮ ಕಂಠಸಿರಿಯಿಂದ ವಚನ ಸಂಗೀತಕ್ಕೆ ಅಮೋಘ ಪರಂಪರೆಯನ್ನೇ ಕಟ್ಟಿಕೊಟ್ಟರು. ಪರಿಣಾಮ ಶಾಸ್ತ್ರೀಯ ಸಂಗೀತವೆಂದರೆ ಮೂಗು ಮುರಿಯುತ್ತಿದ್ದ ಜನರಿಗೆ ಲಘು ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಅಳವಡಿಸಿ ಹಾಡುತ್ತಿದ್ದ ವಚನಗಳು ರುಚಿಸಹತ್ತಿದವು. ವಚನ ಕೇಳಲೆಂದೇ ಸಂಗೀತ ಕಾರ್ಯಕ್ರಮಗಳಿಗೆ ಬರುತ್ತಿದ್ದ ಜನರ ಮೇಲೆ, ಗಾಯಕರು ಮನದುಂಬಿ ಹಾಡಿದ ವಚನಗಳ ತತ್ವಸಾರ ಫಲಿಸಲಾರಂಭಿಸಿತು. ನಾಡಿನ ವೀರಶೈವ ಮಠಮಾನ್ಯಗಳು ಈ ಪರಂಪರೆಗೆ ಆಸರೆಯಾಗಿ ನಿಂತವು. ಕ್ರಮೇಣ ಹಿಂದೂಸ್ತಾನಿ ಗಾಯಕರು ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಿದ ನಂತರ ವಚನ ಹಾಡುವುದನ್ನು ರೂಢಿಸಿಕೊಂಡರು. ಈ ಪರಂಪರೆ ಕಿರಿಯರಿಂದ ಹಿಡಿದು ಹಿರಿಯ ಸಂಗೀತಗಾರರವರೆಗೂ ಇಂದಿಗೂ ಮುಂದುವರೆಸಿಕೊಂಡು ಬಂದಿದೆ.

ಪಂ. ಭೀಮಸೇನ್‌ ಜೋಶಿಯವರ ‘ಅಭಂಗ್ ವಾಣಿ’ಯಿಂದ ಪ್ರೇರಿತರಾದ ಪಂ. ಸೋಮನಾಥ ಮರಡೂರ ೧೯೭೮ರಿಂದ ‘ಶರಣ ವಾಣಿ’ ಹೆಸರಿನಲ್ಲಿ ವಚನಗಳನ್ನು ಕಾರ್ಯಕ್ರಮಗಳಲ್ಲಿ ಹಾಡಲು ಪ್ರಾರಂಭಿಸಿದರು. ಬೆಂಗಳೂರಿನ ದಿ. ಪಂ. ಶೇಷಾದ್ರಿಗವಾಯಿಗಳವರು ೭೦ರ ದಶಕದಲ್ಲಿ ಬಸವ ಜಯಂತಿ ಸಮಿತಿ ಆಶ್ರಯದಲ್ಲಿ ಬಸವೇಶ್ವರ ಸಂಗೀತ ವಿದ್ಯಾಲಯ ಸ್ಥಾಪಿಸಿ ವಚನ ಗಾಯನದ ಕಂಪು ಹರಡಿದರು. ಪುತ್ತೂರು ನರಸಿಂಹ ನಾಯಕ್‌, ಸಿ. ಅಶ್ವತ್ಥ್‌, ಶ್ಯಾಮಲಾ ಭಾವೆ, ಶ್ಯಾಮಲಾ ಜಾಹಗೀರದಾರ್‌ ಮುಂತಾದವರು ಈ ಕಂಪನ್ನು ಇಂದಿಗೂ ಪಸರಿಸುತ್ತಿದ್ದಾರೆ.

ವಚನ ಕೇವಲ ಗಾಯನಕ್ಕಷ್ಟೇ ಸೀಮಿತವಾಗದೆ ನೃತ್ಯರೂಪಕ, ನಾಟಕ, ಸಿನಿಮಾ ಸಂಗೀತದಲ್ಲಿಯೂ ಮೈಚಾಚಿಕೊಂಡಿದೆ. ಶರಣ ಸಾಹಿತ್ಯ ಪರಿಷತ್‌ ಏರ್ಪಡಿಸುವ ‘ಮನೆಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದ ಮೂಲಕ ವಚನ ಗಾಯನ ಮನೆ ಮನೆ ತಲುಪಿದೆ. ಬೆಂಗಳೂರು ಆಕಾಶವಾಣಿ ಕೇಂದ್ರ ಕಳೆದ ವರ್ಷ ಒಂದು ತಿಂಗಳು ನಿರಂತರವಾಗಿ ಶರಣದ ವಚನಗಳನ್ನು ಆಧರಿಸಿದ ‘ಅಮೃತ ಸಿಂಚನ’ ಕಾರ್ಯಕ್ರಮ ಪ್ರಸಾರ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎಂಎಸ್‌ಐಎಲ್ ಶರಣದ ವಚನಗಳ ಸಿಡಿ ಸಿದ್ಧಪಡಿಸುವ ಉದ್ದೇಶ ಹೊಂದಿದೆ. ಈಗಾಗಲೇ ನಾಡಿನ ಖ್ಯಾತ ಸಂಗಿತಗಾರರಿಗೆ ಸಂಗೀತ ಸಂಯೋಜನೆ ಮಾಡುವ ಜವಾಬ್ದಾರಿ ಹೊರಿಸಿದೆ. ಅಲ್ಲದೆ ಇಂಟರ್‌ನೆಟ್‌ನಲ್ಲಿ ಈ ವಚನಗಳನ್ನು ಹರಿಬಿಡುವ ಘನ ಆಶಯವೂ ಇದಕ್ಕಿದೆ.

ಅಂತೂ ಜನಸಾಮಾನ್ಯರ ಮನದ ಕದ ತಟ್ಟಿದ ವಚನ-ಸಾಹಿತ್ಯ, ಸಂಗೀತದ ಮೂಲಕ ಶ್ರೀಮಂತಗೊಳ್ಳುತ್ತಿದೆ. ಸೀಮಿತ ವರ್ಗಕ್ಕಷ್ಟೇ ರುಚಿಸುತ್ತಿದ್ದ ಲಘು ಶಾಸ್ತ್ರೀಯ ಸಂಗೀತ ವಚನ ಸಾಹಿತ್ಯದ ಮೂಲಕ ಸಮೃದ್ಧಗೊಳ್ಳುತ್ತಿದೆ.

-ಶ್ರೀದೇವಿ ಕಳಸದ
(೨೦೦೫ರ ಮೇ ೫ರಂದು ವಿಜಯ ಕರ್ನಾಟಕ ಸಾಪ್ತಾಹಿಕ ವಿಜಯದಲ್ಲಿ ಪ್ರಕಟ)