Tuesday, July 1, 2008

ವಚನದಲಿ ನಾದಾಮೃತ ತುಂಬಿ...


ವಚನ ಗಾಯನ ಪರಂಪರೆ ೭೫ರ ಹೊಸ್ತಿಲು ಮುಟ್ಟಿದೆ. ವಚನ ಸಾಹಿತ್ಯ ಜನಸಾಮಾನ್ಯರ ಹೃದಯ ಮುಟ್ಟಿದೆ. ಸಂಗೀತದ ಮೂಲಕ ಬಸವಾದಿ ಪ್ರಮಥರ ತತ್ವ ಸಕಲರಿಗೂ ತಲುಪುತ್ತಿವೆ.

ಕೇವಲ ಅರಮನೆ-ಗುರುಮನೆಗಷ್ಟೇ ಸೀಮಿತವಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರಿಗೂ ತಲುಪಿಸಿದ್ದು ೧೨ನೇ ಶತಮಾನದ ವಚನಕಾರರು. ವಚನ ಎನ್ನುವುದು ಅತ್ತ ಗದ್ಯವೂ ಅಲ್ಲದ ಇತ್ತ ಪದ್ಯವೂ ಅಲ್ಲದ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರ. ಸಾಮಾನ್ಯ ಜನರ ಅನುಭವಗಳೇ ವಚನಗಳಿಗೆ ವಸ್ತು. ದೇವಭಾಷೆ ಜನಭಾಷೆಯಾಗದಿದ್ದಾಗ ಜನಭಾಷೆಯನ್ನೇ ಬಸವಾದಿಪ್ರಮಥರು ದೇವಭಾಷೆಯ ಮಟ್ಟಕ್ಕೆ ಏರಿಸಿದರು. ಬಹುಕಾಲದವರೆಗೆ ಅಂದರೆ ೧೯೩೦ರವರೆಗೂ ವಚನಗಳನ್ನು ಗಮಕದ ಶೈಲಿಯಲ್ಲಿ ವಾಚಿಸುವ ಪರಂಪತೆ ನಮ್ಮಲ್ಲಿತ್ತು.

ಉತ್ತರ ಕರ್ನಾಟಕದವರಿಗೆ ಗಮಕದ ಸೆಳೆತ ಅಷ್ಟೊಂದು ಇರಲಿಲ್ಲ. ಮೇಲಾಗಿ ಉತ್ತರ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ ಚೆನ್ನಾಗಿ ಬೆಳೆದಿತ್ತು. ಹಿಂದೂಸ್ತಾನಿಯಲ್ಲಿ ಯಾವುದೇ ಪದ್ಯ ಪ್ರಕಾರವನ್ನು ರಾಗ ಸಂಯೋಜನೆ ಮಾಡಿ ಹಾಡುವ ಸಾಧ್ಯತೆ, ಅವಕಾಶ ಸಾಕಷ್ಟು ಇದ್ದುದರಿಂದ ಸಹಜವಾಗಿಯೇ ವಚನ ಗಾಯನ ಪರಂಪರೆ ಮೈದಳೆಯಿತು.

ಹಿರಿಯ ಸಾಹಿತಿ ಡಾ. ಅ. ನ. ಕೃಷ್ಣರಾಯರು ಶರಣರು ನುಡಿದದ್ದನ್ನು ಸ್ವರಗಳಲ್ಲಿ ಕಟ್ಟಿ ಜನಮನಕೆ ತಲುಪಿಸಬೇಕೆಂದು ಪಟ್ಟು ಹಿಡಿದರು. ದಿ. ಅನಕೃ ಹಾಗೂ ದಿ. ಡಾ. ಮಲ್ಲಿಕಾರ್ಜುನ್ ಮನ್ಸೂರ್‌ ಧಾರವಾಡದ ಹಾಲಗೇರಿ ಕೆರೆ ದಂಡೆ ಮೇಲೆ ಕುಳಿತು ಸಂಗೀತ-ಸಾಹಿತ್ಯದ ಹರಟೆ ಹೊಡೆಯುತ್ತಿದ್ದರು. ‘ಯಾಕೆ ಈ ವಚನಗಳಿಗೂ ಸ್ವರಸಂಯೋಜನೆ ಮಾಡಬಾರದು’ ಎಂಬ ಅನಕೃ ರ ಆಶಯಕ್ಕೆ ಮನಸೂರರು ‘ಹೇಗಪ್ಪಾ ಇವುಗಳಿಲಗೆ ಧಾಟಿ ಕೂಡಿಸುವುದು..?’ ಎಂದು ರಾಗವೆಳೆದರು. ಹಲವಾರು ಭೇಟಿಗಳಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಲೇ ಇತ್ತು. ಕೊನೆಗೊಮ್ಮೆ ಮೈಸೂರಿನ ವಿದ್ವಾನ್‌ ಕೆ. ದೇವೇಂದ್ರಪ್ಪ ಅವರು ಧಾಟಿ ಕೂಡಿಸಿರುವ ಒಂದು ವಚನವನ್ನು ಕೇಳಿ ಬಂದ ಅನಕೃ, ಅದನ್ನು ಮನಸೂರರ ಎದುರು ಹಾಡಿ ತೋರಿಸಿದರಂತೆ. ತಕ್ಷಣವೇ ಅದೇ ಲಹರಿಯಲ್ಲಿ ಅದೇ ವಚನವನ್ನು ಹಿಂದೂಸ್ತಾನಿಯ ರಾಗಕ್ಕೆ ಅಳವಡಿಸಿ ಮನ್ಸೂರ್‍ ಅವರು ಹಾಡಿದರಂತೆ. ಹೀಗೆ ಮನ್ಸೂರ್‍ ಕ್ರಮೇಣ ವಚನಗಳನ್ನು ರಾಗಧಾರಿಯಲ್ಲಿ ಹಾಡುತ್ತ ವಚನಗಾಯನಕ್ಕೆ ಒಂದು ಸಂಚಲನ ನೀಡಿದರು’ ಎಂದು ಅವರ ಪುತ್ರ ಹಾಗೂ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷ ಡಾ. ರಾಜಶೇಖರ್‍ ಮನ್ಸೂರ್‍ ನೆನೆಪಿಸಿಕೊಳ್ಳುತ್ತಾರೆ.

ವಚನಗಳಿಗೆ ಜೀವಂತಿಕೆ ತುಂಬುವಲ್ಲಿ ದಿ. ಸಿದ್ಧರಾಮ ಜಂಬಲದಿನ್ನಿಯವರದು ಮೇಲುಗೈ. ಅವರ ಆಪ್ತ ಸ್ನೇಹಿತ ಡಾ. ಶಾಂತರಸ ವಚನ ವೈಭವದ ಗತದಿನಗಳನ್ನು ಹೀಗೆ ಮೆಲುಕು ಹಾಕುತ್ತಾರೆ. ‘ರಾಯಚೂರಿನ ಸಿರವಾರದ ಚುಕ್ಕಿ ಪ್ರತಿಷ್ಠಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಂಬಲದಿನ್ನಿಯವರ ವಚನ ಕೇಳಲೆಂದೇ ಸುತ್ತ ೧೦ ಹಳ್ಳಿ ಜನ ಜಮಾಯಿಸುತ್ತಿದ್ದರು. ರಾತ್ರಿ ೮ಕ್ಕೆ ಉಪನ್ಯಾಸ-ಪ್ರವಚನಗಳು ಪ್ರಾರಂಭವಾದರೆ, ರಾತ್ರಿ ೧೨ರಿಂದ ಬೆಳಗಿನ ೮ರವರೆಗೆ ವಚನ ಸಂಗೀತವಿರುತ್ತಿತ್ತು. ಹೀಗೆ ಸುಮಾರು ೩೦ ವರ್ಷಗಳ ಕಾಲ ಅವಿರತವಾಗಿ ಈ ಕಾರ್ಯಕ್ರಮ ಸಾಗಿತ್ತು. ಜಂಬಲದಿನ್ನಿಯವರನ್ನು ಕುರಿತು ಮಲ್ಲಿಕಾರ್ಜುನ ಮನ್ಸೂರ್‍ ಆಗಾಗ, ‘ನಿನ್ನಂತೆ ಮನದುಂಬಿ ವಚನ ಹಾಡಲು ನನಗೆ ಬರುವುದಿಲ್ಲ ಎನ್ನುತ್ತಿದ್ದರು’.

ಗದಗಿನ ವೀರೇಶ್ವರ ಪುಣ್ಯಾಶ್ರಮದ ಪಂ. ಪುಟ್ಟರಾಜ ಗವಾಯಿಗಳು ಬಹಳ ಹಿಂದಿನಿಂದ ವಚನಗಳನ್ನು ಹಾಡುತ್ತ, ಅಪಾರ ಶಿಷ್ಯಬಳಗಕ್ಕೆಲ್ಲ ಕಲಿಸುತ್ತ ಬಂದರಾದರೂ ವಚನ ಗಾಯನಕ್ಕೆ ಸಂಚಲನ ಶಕ್ತಿ ನೀಡಿದವರು ಮನಸೂರರೆಂದೇ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇದೇ ಹಾದಿಯಲ್ಲಿ ಡಾ. ದಿ. ಬಸವರಾಜ್ ರಾಜಗುರು, ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಚಂದ್ರಶೇಖರ್‍ ಪುರಾಣಿಕಮಠ, ಪಂ. ವೆಂಕಟೇಶ್‌ಕುಮಾರ್‍, ಅಂಬಯ್ಯ ನುಲಿ, ರವೀಂದ್ರ ಸೋರಗಾವಿ ಮುಂತಾದ ಕಲಾವಿದರು ತಮ್ಮ ಕಂಠಸಿರಿಯಿಂದ ವಚನ ಸಂಗೀತಕ್ಕೆ ಅಮೋಘ ಪರಂಪರೆಯನ್ನೇ ಕಟ್ಟಿಕೊಟ್ಟರು. ಪರಿಣಾಮ ಶಾಸ್ತ್ರೀಯ ಸಂಗೀತವೆಂದರೆ ಮೂಗು ಮುರಿಯುತ್ತಿದ್ದ ಜನರಿಗೆ ಲಘು ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಅಳವಡಿಸಿ ಹಾಡುತ್ತಿದ್ದ ವಚನಗಳು ರುಚಿಸಹತ್ತಿದವು. ವಚನ ಕೇಳಲೆಂದೇ ಸಂಗೀತ ಕಾರ್ಯಕ್ರಮಗಳಿಗೆ ಬರುತ್ತಿದ್ದ ಜನರ ಮೇಲೆ, ಗಾಯಕರು ಮನದುಂಬಿ ಹಾಡಿದ ವಚನಗಳ ತತ್ವಸಾರ ಫಲಿಸಲಾರಂಭಿಸಿತು. ನಾಡಿನ ವೀರಶೈವ ಮಠಮಾನ್ಯಗಳು ಈ ಪರಂಪರೆಗೆ ಆಸರೆಯಾಗಿ ನಿಂತವು. ಕ್ರಮೇಣ ಹಿಂದೂಸ್ತಾನಿ ಗಾಯಕರು ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಿದ ನಂತರ ವಚನ ಹಾಡುವುದನ್ನು ರೂಢಿಸಿಕೊಂಡರು. ಈ ಪರಂಪರೆ ಕಿರಿಯರಿಂದ ಹಿಡಿದು ಹಿರಿಯ ಸಂಗೀತಗಾರರವರೆಗೂ ಇಂದಿಗೂ ಮುಂದುವರೆಸಿಕೊಂಡು ಬಂದಿದೆ.

ಪಂ. ಭೀಮಸೇನ್‌ ಜೋಶಿಯವರ ‘ಅಭಂಗ್ ವಾಣಿ’ಯಿಂದ ಪ್ರೇರಿತರಾದ ಪಂ. ಸೋಮನಾಥ ಮರಡೂರ ೧೯೭೮ರಿಂದ ‘ಶರಣ ವಾಣಿ’ ಹೆಸರಿನಲ್ಲಿ ವಚನಗಳನ್ನು ಕಾರ್ಯಕ್ರಮಗಳಲ್ಲಿ ಹಾಡಲು ಪ್ರಾರಂಭಿಸಿದರು. ಬೆಂಗಳೂರಿನ ದಿ. ಪಂ. ಶೇಷಾದ್ರಿಗವಾಯಿಗಳವರು ೭೦ರ ದಶಕದಲ್ಲಿ ಬಸವ ಜಯಂತಿ ಸಮಿತಿ ಆಶ್ರಯದಲ್ಲಿ ಬಸವೇಶ್ವರ ಸಂಗೀತ ವಿದ್ಯಾಲಯ ಸ್ಥಾಪಿಸಿ ವಚನ ಗಾಯನದ ಕಂಪು ಹರಡಿದರು. ಪುತ್ತೂರು ನರಸಿಂಹ ನಾಯಕ್‌, ಸಿ. ಅಶ್ವತ್ಥ್‌, ಶ್ಯಾಮಲಾ ಭಾವೆ, ಶ್ಯಾಮಲಾ ಜಾಹಗೀರದಾರ್‌ ಮುಂತಾದವರು ಈ ಕಂಪನ್ನು ಇಂದಿಗೂ ಪಸರಿಸುತ್ತಿದ್ದಾರೆ.

ವಚನ ಕೇವಲ ಗಾಯನಕ್ಕಷ್ಟೇ ಸೀಮಿತವಾಗದೆ ನೃತ್ಯರೂಪಕ, ನಾಟಕ, ಸಿನಿಮಾ ಸಂಗೀತದಲ್ಲಿಯೂ ಮೈಚಾಚಿಕೊಂಡಿದೆ. ಶರಣ ಸಾಹಿತ್ಯ ಪರಿಷತ್‌ ಏರ್ಪಡಿಸುವ ‘ಮನೆಮನೆಯಲ್ಲಿ ಮಹಾಮನೆ’ ಕಾರ್ಯಕ್ರಮದ ಮೂಲಕ ವಚನ ಗಾಯನ ಮನೆ ಮನೆ ತಲುಪಿದೆ. ಬೆಂಗಳೂರು ಆಕಾಶವಾಣಿ ಕೇಂದ್ರ ಕಳೆದ ವರ್ಷ ಒಂದು ತಿಂಗಳು ನಿರಂತರವಾಗಿ ಶರಣದ ವಚನಗಳನ್ನು ಆಧರಿಸಿದ ‘ಅಮೃತ ಸಿಂಚನ’ ಕಾರ್ಯಕ್ರಮ ಪ್ರಸಾರ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎಂಎಸ್‌ಐಎಲ್ ಶರಣದ ವಚನಗಳ ಸಿಡಿ ಸಿದ್ಧಪಡಿಸುವ ಉದ್ದೇಶ ಹೊಂದಿದೆ. ಈಗಾಗಲೇ ನಾಡಿನ ಖ್ಯಾತ ಸಂಗಿತಗಾರರಿಗೆ ಸಂಗೀತ ಸಂಯೋಜನೆ ಮಾಡುವ ಜವಾಬ್ದಾರಿ ಹೊರಿಸಿದೆ. ಅಲ್ಲದೆ ಇಂಟರ್‌ನೆಟ್‌ನಲ್ಲಿ ಈ ವಚನಗಳನ್ನು ಹರಿಬಿಡುವ ಘನ ಆಶಯವೂ ಇದಕ್ಕಿದೆ.

ಅಂತೂ ಜನಸಾಮಾನ್ಯರ ಮನದ ಕದ ತಟ್ಟಿದ ವಚನ-ಸಾಹಿತ್ಯ, ಸಂಗೀತದ ಮೂಲಕ ಶ್ರೀಮಂತಗೊಳ್ಳುತ್ತಿದೆ. ಸೀಮಿತ ವರ್ಗಕ್ಕಷ್ಟೇ ರುಚಿಸುತ್ತಿದ್ದ ಲಘು ಶಾಸ್ತ್ರೀಯ ಸಂಗೀತ ವಚನ ಸಾಹಿತ್ಯದ ಮೂಲಕ ಸಮೃದ್ಧಗೊಳ್ಳುತ್ತಿದೆ.

-ಶ್ರೀದೇವಿ ಕಳಸದ
(೨೦೦೫ರ ಮೇ ೫ರಂದು ವಿಜಯ ಕರ್ನಾಟಕ ಸಾಪ್ತಾಹಿಕ ವಿಜಯದಲ್ಲಿ ಪ್ರಕಟ)

No comments: