Wednesday, July 9, 2008

ಜಯಮ್ಮ ಮತ್ತು ಜನರೇಟರ್‍ ಶ್ರುತಿ

ಕಪ್ಪು ಎರಡರ ಶ್ರುತಿ ಹಿಡಿದೇ ಇತ್ತು ಜನರೇಟರ್‌

ಯಾರದೋ ಒತ್ತಾಯಕ್ಕೆಂಬಂತೆ ಆಗೊಮ್ಮೆ ಈಗೊಮ್ಮೆ ತೂಗುತ್ತಿದ್ದವು ಎಲೆಗಳು, ಅವುಗಳಿಗಂಟಿದ ಕೊಂಬೆಗಳೂ... ನೋಡಲು ಬಂದ ಹುಡುಗನ ಮುಂದೆ ಕಾಫಿ ಟ್ರೇ ಹಿಡಿದು ಮನಸ್ಸಿಲ್ಲದ ಮನಸ್ಸಿನಿಂದ ಆರ್ಟಿಫೀಶಿಯಲ್ ಸ್ಮೈಲ್‌ ಕೊಡುವ ಹುಡುಗಿಯ ಹಾಗೆ. ಈ ನೀರಸ ಪ್ರತಿಕ್ರಿಯೆಗೋ ಏನೋ ಮುನಿಸಿಕೊಂಡು, ಮರ ಬಿಟ್ಟು ಕಟ್ಟಡದ ನೆತ್ತಿ ಏರಿದ್ದವು ಒಂದಿಷ್ಟು ಮೈನಾ, ಎಂಟ್ಹತ್ತು ಕಾಗೆಗಳು. ಚಲಿಸುವುದೇ ನಮ್ಮ ಧರ್ಮ ಕಣಯ್ಯಾ ಎಂದು ಭುಜ ತಟ್ಟಿ ಹೇಳುತ್ತಿತ್ತು ಬೂದುಬಣ್ಣದ ಮೋಡ ಬಿಳಯ ಮೋಡಕ್ಕೆ. ಆದರೂ ಆ ಬಿಳಿಯ ಮೋಡ ತಿರುತಿರುಗಿ ಮರವನ್ನ ಮೈನಾ-ಕಾಗೆಗಳನ್ನ, ಶ್ರುತಿ ಹಿಡಿದಿರುವ ಜನರೇಟರ್‌ನನ್ನ ನೋಡುವುದ ಮರೆಯಲಿಲ್ಲ ಮರೆಯಾಗುವತನಕ. ಹಗಲಿಗೆ ಹೆಗಲು ಕೊಡುವವನು ಅದ್ಯಾಕೋ ಏನೋ ತುಸು ಲೇಟಾಗಿಯೇ ಹಾಜರಾಗಿದ್ದ ಶಿಫ್ಟಿಗೆ. ಅದು ನಿದ್ದೆಗಣ್ಣಲ್ಲೇ. ಕನಸು-ಕನವರಿಕೆ ಗುಂಗಲ್ಲೇ. ಮನಸೊಲ್ಲದ ಮನಸಿನಿಂದ. ಮೊನಾಟನಸ್‌ ರೂಟಿನ್ ಲೈಫಿನಿಂದ.

ಜನರೇಟರ್‌ ಕಪ್ಪು ಎರಡರ ಶ್ರುತಿಯಲ್ಲೇ ಇತ್ತು...

ತುರುಕಿದ ಮಂತ್ರವನ್ನೇ ತಿರುಚಿ ತಿರುಚಿ ಪಟಪಟಿಸುತ್ತ, ಗೋಡೆಗೆ ಬೆನ್ನಂಟಿಸಿಕೊಂಡ ಟಿವಿ ಪೆಟ್ಟಿಗೆಗಳ ಸಾಲು ಕಾಲಾಯ ತಸ್ಮೈನ್ನಮಃ ಎನ್ನುತ್ತಿದ್ದವು ; ರಾಹುಲ್ ಗಾಂಧಿ ದಾಲ್‌-ಚಾವಲ್ ತಿಂದರೆ ಬ್ರೇಕಿಂಗ್‌! ಸಿಡಿದ ಒಂದೆರಡು ಮಳೆಹನಿಯಿಂದ ಬಿಗ್‌ಬಿಗೆ ಕೋಲ್ಡ್ ಅಟ್ಯಾಕ್‌ ಫ್ಲ್ಯಾಶ್‌! ಬೆಚ್ಚಗೆ ಕಾಲಸಂದಿಯೊಳಗೆ ಮುಖ ಮುಚ್ಚಿಕೊಂಡು ಮಲಗಬೇಕಿದ್ದ ಬೆಕ್ಕು ಸಜ್ಜಾ ಏರಿ ಹದಿನೈದು ಗಂಟೆಗಳಾದರೂ ಕೆಳಗಿಳಿಯದಿದ್ದುದು ಸ್ಪೆಶಲ್‌!

ಕಪ್ಪು ಎರಡರ ಶ್ರುತಿ ಹಿಡಿದ ಜನರೇಟರ್‍ ಯಾಕೋ ಒಂದರ ಶ್ರುತಿಗೆ ಇಳಿದ ಹಾಗಿತ್ತು...

ಅವರಿವರ ಎಂಜಲು ತೊಳೆದು, ದಕ್ಕಿದ ಪುಡಿಗಾಸನ್ನೇ ಸೆರಗಂಚಿನಲ್ಲಿ ಗಂಟುಹಾಕುವ ಜಯಮ್ಮನ ಕಾಲ ಮೇಲೆ, ಅದ್ಯಾವುದೋ ಕೆಂಪು ಕಾರು ಹರಿದು ತಿಂಗಳಾಗುತ್ತ ಬಂದರೂ ಸುದ್ದಿ ಹೋಗಲಿ ಸ್ಕ್ರಾಲಿಗೂ ಲಾಯಕ್ಕಿಲ್ಲ. ಬೆರಳು ಅಪ್ಪಚ್ಚಿಯಾಗಿ, ರಾಮಾರಕ್ತವಾಗಿ, ಉಗುರು ವಿಳಾಸ ಕಳೆದುಕೊಂಡರೂ ಕೆಂಪು ಕಾರಿನವನ ಪತ್ತೆಯಿಲ್ಲ. ಚರ್ಮ ಕಿತ್ತು, ಕಾಲು ಊದಿ ಕಂಬಗಾತ್ರವಾದರೂ ಯಾರೋ ಮಾತು ಕೇಳಿ ಕರಿ ಕೋಟಿನ ಚುಂಗು ಹಿಡಿದ ಆಕೆ ಬಗ್ಗೆ ಅಸಮಾಧಾನವಾದರೂ ನುಂಗಿಕೊಳ್ಳಲೇಬೇಕಿತ್ತು. ಲಕ್ಷ್ಮಿದೇವಿಯಿಲ್ಲದೇ ನ್ಯಾಯದೇವತೆ ತಕ್ಕಡಿ ತೂಗಿಯಾಳೆ ಎಂದು. ಮನಸ್ಸು ತಡಿಯಲಿಲ್ಲ. ನಿನ್ನ ಮನೆ ಅಡ್ರೆಸ್‌ ಕೊಡು, ಯಾರಾದರೂ ಸಹಾಯಕ್ಕೆ ಬಂದರೆ ನೋಡೋಣ ಎಂದರೆ : ಒಮ್ಮೆ ಕಾಮಾಕ್ಷಿಪಾಳ್ಯ. ಇನ್ನೊಮ್ಮೆ ಬಸವೇಶ್ವರನಗರ. ಮೂರನೇಯದೋ ನಾಲ್ಕನೆಯದೋ ಕ್ರಾಸ್‌ ಎಂದು ಹುಬ್ಬುಗಂಟು ಹಾಕುವ ಅವಳ ಪರದಾಟ. ಯಾಕೋ ಮನಸ್ಸು ತೋಯ್ದಿತು. ದಿನ್ನೆ ಏರಿ, ದೊಡ್ಡ ಮನೆ ಪಕ್ಕ ತಿರುಗಿ, ಕೋಳಿ ಅಂಗಡಿ ಬಲಕ್ಕೆ ತಿರುಗಿದರೆ ನಮ್ಮ ಮನೆ ಕಣವ್ವಾ ಎಂದು ಪದೇ ಪದೇ ಹೇಳಿದ್ದನ್ನೇ ಹೇಳುತ್ತಿದ್ದರೂ ಅದ್ಯಾವುದೂ ಕಣ್ಣಪಟಲ ಮುಂದೆ ಬರಲಿಲ್ಲ, ಮಹಡಿ ಮಹಡಿ ಮನೆಗಳ ನಡುವೆ, ಎತ್ತರೆತ್ತರ ಕಟ್ಟಡಗಳೊಳಗೆ.

ಯಾಕೋ ಜನರೇಟರ್‍ ಕಪ್ಪು ಒಂದು ಶ್ರುತಿ ಬಿಟ್ಟು ಸರಿದ ಹಾಗಿರಲಿಲ್ಲ...

ಚಪ್ಪಲಿಯನ್ನೂ ಬೇಡವೆನ್ನುವ ಗಾಯದ ಪಾದಕ್ಕೀಗ ಗಾಜಿನ ಚೂರೊಂದು ಚುಚ್ಚಿದೆ. ಕಂಡವರಿಗೆ ಕೈ ಮುಗಿದು ಕೈಸಾಲ ಕೇಳಿ ಚಿಕಿತ್ಸೆಗಾಗಿ ನಡೆದಿದೆ ಪರದಾಟ. ಕುಂಟುತ್ತಲೇ ನಾಲ್ಕು ಮನೆ ಕಸ-ಮುಸುರೆಯೊಂದಿಗೆ ನಡೆಯುತ್ತಿದೆ ಅವಳ ಕಾಲು. ಜೊತೆಗೆ ಬದುಕೂ : ಕೆಂಪು ಕಾರಿನವನ ಕಾಸಿಗೆ ಬಾಯಿತೆರೆದು...

ಈಗ ಮತ್ತೆ ಕಪ್ಪು ಎರಡರ ಶ್ರುತಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಜನರೇಟರ್‌...

ಅಮಲುಗಣ್ಣಿನ ಬೇಬಿಗಳನ್ನ, ಅವರ ಬಳುಕಿಗೆ ಜೋತುಬೀಳುವ ಜೊಂಪೆಗೂದಲಿನ ಹೈದರನ್ನ ಟೇಪಿನಲ್ಲಿ ಸುತ್ತಿಕೊಂಡು ಪ್ರಿವ್ಯೂ ನೋಡುತ್ತಿದ್ದಾಳೆ ರಿಪೋರ್ಟ್ರಿಣಿ. ಎಲ್ಲೋ ಒಂದಿಷ್ಟು ಫ್ಲೋ ಬಿಟ್ಟು, ಬೈಟ್ ಕತ್ತರಿಸಿ, ಕಳೆದವಾರ ಬಳಸಿ ಬಿಸಾಡಿದ ಸಾಲುಗಳನ್ನೇ ತಿರುಚಿ, ಗೀಚಿ, ಬೇಗ ಹಾರಿಬಿಡಲೇ? ಎಂದು ರಿವೈಂಡ್ ಫಾರ್ವರ್ಡ್‌ ಎನ್ನುತ್ತಿದೆ ಅವಳ ಮನಸ್ಸು.

ಜನರೇಟ್ ಶ್ರುತಿ ಕಪ್ಪು ಒಂದು, ಎರಡರ ಮಧ್ಯೆ ಹೊಯ್ದಾಡುತ್ತಿದೆ...

ಗೋಡೆಗಂಟಿದ ಮೂರ್ಖಪೆಟ್ಟಿಗೆಗಳಿಗೆ ಜಯಮ್ಮಳ ‘ಕುಂಟಾಟ’ವೂ ಕಾಣುತ್ತಿಲ್ಲ. ನರಳಾಟವೂ ಕೇಳುತ್ತಿಲ್ಲ. ಕೆಂಪು ಕಾರಿನವನಿಗೆ ಕ್ಯಾಮೆರಾ ಲೆನ್ಸ್‌ ಫೋಕಸ್‌ ಮಾಡೋದು ಸಾಧ್ಯವೇ ಇಲ್ಲವೇನೋ...

ಹಾಂ ಈಗ ಆ ಜನರೇಟರ್‍ ಮೊದಲಿನಂತೆ ಕಪ್ಪು ಎರಡರ ಶ್ರುತಿಗೇ ಗಟ್ಟಿಯಾಗಿ ಅಂಟಿಕೊಂಡಿದೆ...

5 comments:

SHREE (ಶ್ರೀ) said...

ಚಂದಕ್ಕೆ ಬರೆಯುತ್ತೀರಿ, ಬರೆಯುತ್ತಿರಿ.

ಶ್ರೀದೇವಿ ಕಳಸದ said...

ok ಶ್ರೀ ಥ್ಯಾಂಕ್ಸ್‌

prashanth said...

ಶ್ರೀ...

ಓದಿಗೆ ಹಚ್ಚಿತು
ಆ ಸಂಖ್ಯೆ ಹೆಚ್ಚಿತ್ತು.
ಶೃತಿ
ಸರಿಗಮದ
ಜಯಮ್ಮ
& ಜನರೇಟರ್‌.
ಮನಸಿಗೆ ಹತ್ತಿತು...

ಶ್ರೀದೇವಿ ಕಳಸದ said...

ಪ್ರಶಾಂತ್‌, ಥ್ಯಾಂಕ್ಸ್‌...

praveenshankat said...

ನ೦ಗತ್ತೂ ಎನೂ ಅಥ೯ ಆಗ್ಲಿಲ್ಲಾರಿ. ನೀವು ಸಾಹಿತ್ಯ, ಸ೦ಗೀತ ಎಲ್ಲಾ ಮಿಕ್ಸ್ ಮಾಡಿ ಬರೆದಿದ್ದಿರಿ. ಅದ್ರೂ ಚೆನ್ನಾಗಿದೆ, ಗುಡ್...ಪ್ರವೀಣ್ ಶೆಟ್ಟಿ ಸೌದಿ ಅರೇಬಿಯಾ