Saturday, July 26, 2008

ಪುಟ್ಟ ಪಾದದ ಕನಸು. . .

ನಿದ್ದೆಗಣ್ಣಿನ ಮುದ್ದು ಮುಖವನ್ನೊಮ್ಮೆ ಸಂತೃಪ್ತಿಯಿಂದ ನೋಡಿ, ಮುಂಗೂದಲು ಸರಿಸಿ ಮುತ್ತು ಕೊಟ್ಟಾಗಲೇ ದಿನದ ಆರಂಭ. ಅಂದುಕೊಂಡಂತೆ ಇರದ ದಿನದ ಬಗ್ಗೆ ಚಿಂತಿಸುತ್ತ ಕಣ್ಮುಚ್ಚಿದಾಗಲೇ ದಿನದ ಅಂತ್ಯ. ನೆತ್ತಿ ನೇವರಿಸುವ ಅವನ ಕೈಗಳನ್ನೊಮ್ಮೆ ಅತ್ತ ಸರಿಸಿ, ಗಡಿಯಾರದ ಮುಳ್ಳುಗಳಿಗೆ ಜೋತುಬೀಳುವ ಕಣ್ಣುಗಳು. ನಿನ್ನೆಯ ದೇಹಕ್ಕೊಮ್ಮೆ ನೀರು ಸೋಂಕಿಸಿ, ಪ್ರತಿ ದಿನವೂ ಹೊಸದೆನ್ನುತ್ತ ನಗೆಚೆಲ್ಲುವ ಹೊತ್ತಿಗೆ ಸದ್ದಿಲ್ಲದೇ ಬಿಕ್ಕುತ್ತಿರುತ್ತದೆ ಅದೇ ಹಳೆಯ ಕನ್ನಡಿ. ಕಂಫರ್ಟ್‌ ಜೀನ್ಸ್‌ನಲ್ಲಿ ಚಕ್ರ ಕಟ್ಟಿಕೊಂಡ ಕಾಲುಗಳ ತೂರಿಸುತ್ತಲೇ, ಮುನಿಸಿಕೊಂಡು ಅಡಿಗೆ ಕುಳಿತ ಟಾಪ್‌ನ್ನು ಸಮಾಧಾನಿಸುವ ಯತ್ನ. ಇಷ್ಟೆಲ್ಲ ಆದಮೇಲೆ...... `ನನ್ನ ಮೇಲೇರಿ ಹಾದಿ ಸವೆಸುವ ಅನುಭವದಂತೆಯೇ ನಿನ್ನ ಬದುಕೂ...' ಎಂದು ಆಗಾಗ ನೆನಪಿಸುವ ಗಾಡಿ. ಅದರ ಮೈ ಒರಸುತ್ತ ಎಡಕನ್ನಡಿಯನ್ನೊಮ್ಮೆ ಮುಖಕ್ಕೆ ಹೊಂದಿಸಿ ಪ್ರೀತಿಯಿಂದ ಕೈಯಾಡಿಸಿ, ಮತ್ತದೇ ಕನ್ನಡಿಯ ಮರಳು ಪ್ರೀತಿಗೆ ಶರಣು....

ಮನೆದೇವರ ಸ್ಮರಿಸಿ, ಮನದನ್ನೆಯ ನೆನದು ಬೀದಿಗಿಳಿದ ಸಾವಿರಾರು ವಾಹನಗಳಲ್ಲೊಂದಾಗುತ್ತದೆ ನನ್ನದೂ ಒಂದು ರಥ. ತಲುಪುವ ಜಾಗವಷ್ಟೇ ಕಣ್ಮುಂದಿದ್ದಾಗ, ಮಾಡುವ ಕೆಲಸಗಳತ್ತಲೇ ಚಿತ್ತವಿದ್ದಾಗ ಆ ನುಗ್ಗುವಿಕೆ, ಗುದ್ದುವಿಕೆ, ತರಚುವಿಕೆ ಹೀಗೆ ಏನೆಲ್ಲ ...ವಿಕೆಗಳನ್ನು ಸಾವರಿಸಿಕೊಳ್ಳುತ್ತ ಸಾಗುತ್ತದೆ ಯಾನ... ಕಾಯಕ ಸ್ಥಾನಕ್ಕೆ ಸೇರುವ ಅದೆಷ್ಟೋ ತಲೆಗಳು ಜೊತೆಯಾಗುತ್ತವೆ... ಈ ಎಲ್ಲದರ ಮಧ್ಯೆಯೂ ಕಾಲುಗಳು ಮಾಡಿದ ತಪ್ಪಿಗೆ ಪರಸ್ಪರ ನಮಸ್ಕರಿಸುವ ಮಡಿ-ಕೈಗಳು. ಕಣ್ಕಿರಿದು ಮಾಡಿ ಪಕ್ಕದ ಕಣ್ಣುಗಳಿಗೆ ಕನ್ನಡಿ ಜೋಡಿಸುವ ಹುಚ್ಚು ಮನಸ್ಸುಗಳು. ಆ ನೋಟಗಳನ್ನೆದುರಿಸಲಾರದೇ ಡಮ್ಮಿ ಮೊಬೈಲ್‌ ಆಪರೇಶನ್‌ಗೆ ಅಣಿಯಾಗುವ ಅಕ್ಕಂದಿರು, ಅವಕಾಶ ಸಿಕ್ಕಾಗಲೆಲ್ಲ ಮೊಂಡು ಟೀಶರ್ಟ್‌‌ನ್ನು ಸಂಭಾಳಿಸುವ ನವಿರು ಬೆರಳುಗಳು, ಕಿರುಗಣ್ಣಿನಿಂದಲೇ ಅದ ನೋಡುತ್ತ ಬಣ್ಣ ಬಣ್ಣದ ಬಲೂನುಗಳಾಗಿ ಮಾಯವಾಗುವ ಚಿಗುರು ಮೀಸೆಗುಂಪುಗಳು. ಟೇಬಲ್‌ ಮೇಲೆ ಸ್ನ್ಯಾಕ್ಸ್‌ ತೆಗೆದಿಡಲು ಮರೆತು, ರೋಡ್‌ ಮೇಲೆ ಚಡಪಡಿಸುವ ಪುಟ್ಟ ಪುಟ್ಟ ಅಮ್ಮಂದಿರು, ಗೃಹಿಣಿ ಜೀವನದ ಪುರಾವೆ ಹುಡುಕುತ್ತ ಕಾಲ್ಬೆರಳ ಗ್ಲಾನ್ಸ್ ಮಾಡುವ ಅಂಕಲ್‌ಗಳು, ದೊಡ್ಡ ಬ್ಯಾಗಿಗಂಟಿಕೊಂಡು ಭವಿಷ್ಯದ ಭಾರ ಹೊತ್ತ ಸಣ್ಣ ಸಣ್ಣ ತಲೆಗಳು, ಕೆಂಪು ದೀಪವಾರಿದರೂ ಕಿಕ್‌ ಒದೆಯುತ್ತಲೇ ಹಿಂದಿದ್ದವರ ಟೆಂಪರ್‍ ಚೆಕ್ ಮಾಡುವ ಹೊಟ್ಟೆಗಳು.... ಹೀಗೆ ಏನೆಲ್ಲ. ದಿನದ ದಾರಿಯಲ್ಲಿ...

ಈ ದಾರಿಯಲ್ಲೇ ನಾನು ನಿನ್ನನ್ನು ನೋಡಿದ್ದು. ನನ್ನ ನಿನ್ನ ಮಧ್ಯೆ ಒಂದೂವರೆ ಅಡಿ ಅಂತರ. ಎರಡ್ಮೂರು ಸೆಕೆಂಡು ಮಾತ್ರ ದೃಷ್ಟಿ ನೆಟ್ಟದ್ದು. ಅಗಲಿಕೆಯಿನ್ನೂ ಆರಿರಲಿಲ್ಲ. ಒಂಟಿತನದ ನೋವಿತ್ತು. ಹಳೆಯ ದಿನಗಳನ್ನೇ ನೆನೆಯುತ್ತ ಹರಿವ ಕಣ್ಣೀರ ಒರೆಸಿಕೊಳ್ಳದಷ್ಟೂ ನಿಶ್ಯಕ್ತನಾಗಿದ್ದೆ ನೀನು. ಪುಟ್ಟ ಬಟ್ಟಲಿನಿಂದ ಸ್ನಾನ ಮಾಡಿಸಿ, ಮೆತ್ತನೆಯ ಬಟ್ಟೆಯಲ್ಲಿ ಒರೆಸಿದ ಗುಲಾಬಿ ಕೈಗಳ ನೆನಪು ನಿನ್ನ ಕಾಡುತ್ತಿತ್ತು. ಆ ಕಾಡುವಿಕೆಯಲ್ಲೂ ಬೇಸರವಿತ್ತು. ನೋವಿತ್ತು ಜೊತೆಗೆ ಪ್ರೀತಿ, ಹುಸಿಕೋಪವೂ ಇತ್ತು. ಎಲ್ಲಕ್ಕಿಂತ ಮೊದಲು 'ಇದ್ದಷ್ಟು ದಿನ ಪಾದ ಸ್ಪರ್ಶಿಸುವ ಅವಕಾಶ ಸಿಕ್ಕಿತ್ತು' ಎಂಬ ಸಂತೃಪ್ತಿ ಎದ್ದು ಕಾಣುತ್ತಿತ್ತು ನಿನ್ನಲ್ಲಿ. ಕಾಲು ಜಾರಿದ ಗಳಿಗೆಯನ್ನೇ ಮತ್ತೆ ಮತ್ತೆ ಕಣ್ಮುಂದೆ ತಂದುಕೊಳ್ಳುತ್ತ ದುಃಖಿಸುತ್ತಿದ್ದರೂ ಗುಲಾಬಿ ಅಂಗಾಲು ಸ್ಪರ್ಶಿಸಿ, ಹೂವಿನಂತೆ ಜೋಪಾನ ಮಾಡಿದ ನಿಸ್ವಾರ್ಥ ದಿನಗಳ ನೆನೆದು ಆಗೊಮ್ಮೆ ಈಗೊಮ್ಮೆ ತೃಪ್ತಿನಗೆ ಚೆಲ್ಲುತ್ತಿದ್ದುದು ನನಗೆ ಮಾತ್ರ ತಟ್ಟಿತ್ತು...

ಹಸಿರು ದೀಪ ತನ್ನ ಇರುವಿಕೆ ತೋರುತ್ತಿದ್ದಂತೆ ನನ್ನ ಬಲಗೈ ಗಾಡಿಯ ಕಿವಿ ಹಿಂಡಿತು. ತೆರೆದ ಲಿಫ್ಟ್‌ ಹೊಕ್ಕೂ ಆಯಿತು. ಕುರ್ಚಿಗೆ ಅಂಟಿಕೊಂಡಿದ್ದೂ ಆಯಿತು. ಅಕ್ಕ-ಪಕ್ಕದ ಕೀಲಿಮಣಿಯೊಂದಿಗೆ ನನ್ನದೂ ಸೋsss ಎನ್ನುತ್ತಿದ್ದರೂ ನಡುಹಾದಿಯಲ್ಲಿ ಮೌನವಾಗಿ ಬಿಕ್ಕುತ್ತಿದ್ದ ನಿನ್ನ ಧ್ವನಿ ತಣ್ಣಗೆ ನನ್ನೆದೆ ಕೊರೆಯುತ್ತಲೇ ಇತ್ತು. ಆದರೆ ನನಗೆ ಗೊತ್ತು. ನಿನ್ನ ಕಳೆದುಕೊಂಡ ಪುಟ್ಟ ಹೃದಯವೂ ನೋವುಂಡಿದೆ. ಹಂಬಲಿಸಿದೆ. ಕನವರಿಸಿಯೂ ಇದೆ. ಆದರೆ ಅದು ನಿನ್ನ ತಲುಪಲೇ ಇಲ್ಲ. ಹಾಗೆಯೇ ನಿನ್ನ ನೋವೂ ಅದಕೆ...

ಆದರೆ ಆ ಪುಟ್ಟ ಗುಲಾಬಿ ಪಾದದ 'ಒಡೆಯರು' ನಿನ್ನನ್ನು ಮರೆತುಬಿಟ್ಟಿರಬಹುದು. 'ಒಮ್ಮೆ ಕಳೆದದ್ದು ಮತ್ತೆ ಸಿಗುವುದೆ?' ಎನ್ನುತ್ತ ಮಗುವನ್ನು ರಮಿಸಿರಬಹುದು. ಹೊಸತನ್ನು ಕೊಡಿಸುವಾ ಎಂದು ಚಪ್ಪಲಿ ಅಂಗಡಿಯತ್ತ ಸಾಗಿರಲೂಬಹುದು. ಆದರೆ ಗುಲಾಬಿ ಪಾದ ನೆನೆಯುತ್ತಲೇ ಇರುತ್ತದೆ ನಿನ್ನ ಇರುವಿಕೆಯನ್ನೇ. ಯಾವ ರಸ್ತೆ ಮೇಲೋ, ಯಾವ ಅಂಗಡಿಯ ಶೋಕೇಸಿನಲ್ಲೋ, ಎಲ್ಲಾದರೂ ಮತ್ತೆ ಸಿಗುವೆಯಾ ಎನ್ನುತ ಪುಟ್ಟ ಬಟ್ಟಲು, ಮೆತ್ತನೆಯ ಬಟ್ಟೆ ಇಟ್ಟುಕೊಂಡು. ಆ ಪಾದವನ್ನೊಮ್ಮೆ ಕ್ಷಮಿಸಿಬಿಡು. ನಿನ್ನ ಹಿಡಿದಿಟ್ಟುಕೊಳ್ಳುವಷ್ಟು ಶಕ್ತಿ ಆ ಪುಟ್ಟ ಪಾದಕ್ಕಿನ್ನೂ ಬಂದಿಲ್ಲವೆಂದುಕೊಳ್ಳುತ್ತಾ... ಗಾಡಿ ಏರಿ ಕುಳಿತು, ಅಪ್ಪನ ಬೆನ್ನು ಅವುಚುತ್ತ, ಅಮ್ಮನೆದೆಗೆ ಬೆನ್ನು ಆನಿಸುತ್ತ ಹಾಗೇ ಸಾಗುತ್ತಿದ್ದಾಗ, ಅದ್ಯಾವ ಮಾಯೆಯಲ್ಲೋ ಆವರಿಸಿದ ಕೂಸಿನ ನಿದ್ದೆ ನಿನ್ನ ಬೀಳುವಿಕೆಗೆ ಕಾರಣವಾಗಿರಬಹುದು. ಎಂಟು ದಿನಗಳು ಕಳೆದವು ನಿನ್ನ ನೋಡಿ. ತಣ್ಣಗೆ ಕಾಡುತ್ತಿರುವೆ....

ನಿನ್ನೆ ತಾನೆ ಕೇಳಿದೆ, ನೆತ್ತಿ ನೇವರಿಸುವವನಿಗೆ...'ಅವತ್ತು ರಸ್ತೆಯಲ್ಲಿ ಬಿದ್ದಿದ್ದ ತಿಳಿನೀಲಿ ಬಣ್ಣದ ಪುಟ್ಟ ಚಪ್ಪಲಿ ನೆನಪಿದೆಯಾ?' ಎಂದು. ತಿಂಗಳುಗಟ್ಟಲೆ ಕಾಯಿಸಿ ಎಂದೋ ಒಂದು ಸಂಜೆ ಸದ್ದಿಲ್ಲದೇ ಅರಳುವ ಬ್ರಹ್ಮಕಮಲದಂತೆ ನಗೆ ಸೂಸಿತು ಅವನ ಮೊಗ. ನಕ್ಕಿತು ಆ ಹಳೆಯ ಕನ್ನಡಿ ಪರಿಮಳದ ಜಾಡು ಹಿಡಿದು. ಕಿಶೋರಿಯ ಯಮನ್‌ ಕೋಣೆಯ ಕಣಕಣವನ್ನಾವರಿಸಿತ್ತು... ನೆತ್ತಿಯಡಿ ಮುಳ್ಳು-ಅಂಕಿ ನೇತುಹಾಕಿಕೊಂಡಿದ್ದ ಗೋಡೆ ಸಹಿ ಹಾಕಿತು ಅದಕೆ.

also see in

http://kendasampige.com/article.php?id=963

3 comments:

mala rao said...

ತುಂಬಾ ಚೆನ್ನಾಗಿದೆ

ಚಪ್ಪಲಿ ಬಿದ್ದು ಹೋಗುತ್ತೇನೋ ಅಂತ ಅನ್ನಿಸುತ್ತಿತ್ತು
ಅದಕ್ಕೆ ನನ್ನ ವರ್ಷದ ಮಗುವಿಗೆ ಹೊಸ ಶೂಸು ಕೊಂಡಿದ್ದೇನೆ
ಸಂಜೆ ಪುಟು ಪುಟು ನಡೇಯುತ್ತಿದ್ದ....
ನಿಮ್ಮ ಬ್ಲಾಗ್ ನಲ್ಲಿ ಮುದ್ದಾದ ಲೇಖನ ಅವನ ಮುದ್ದಾದ ನಡಿಗೆಯಷ್ಟೇ ಮುದ ಕೊಟ್ಟಿತು....

ಶ್ರೀದೇವಿ ಕಳಸದ said...

ಓಹ್‌.. . ಮಾಲಾ ಅವರೆ. ನಿಮ್ಮ ಮಗುವಿಗೊಂದು ಮುದ್ದು. ಲಯ ತಪ್ಪುವ ಪುಟ್ಟ ಪುಟ್ಟ ಹೆಜ್ಜೆಗಳ ನಡಿಗೆಯಲ್ಲೂ ಅದೆಷ್ಟು ಪುಳಕ ನೀಡುತ್ತದೆಯಲ್ಲವೆ?

Veena Shivanna said...

ee post tumbaane ishTa aaytu.
Mathe bartheeni innu ondashtu Odokke. neevu bhaavuka jeevi annisutte..!:-) tappu grahisiddare kshamisi.