Tuesday, July 1, 2008

ಒಂದಿಷ್ಟು ಮಿನಿಗವನಗಳು


ಆಯ್ಕೆ

ಮನದ ಬಯಕೆಯೊಂದು

ಮೌನದಲಿ ಹೆಪ್ಪುಗಟ್ಟಿದೆ

ಕರಗಿ ನೀರಾಗದೆ

ಹರಿದು ಸಾಗರ ಸೇರದೆ

ಇಬ್ಬದಿಯ ಸುಳಿಗೆ ಸಿಲುಕಿದೆ

***

ಚೆಲುವು

ಒನಪು ವಯ್ಯಾರದ

ವಿಶುದ್ಧ ವಿಚಕಿಲ ವದನ

ಹೊಂಗಿರಣದ ಹೊರಗಿನಿಂದ

ಹೊನಲ ಹರಿಸುವ

ವಾಂಛೆಯ ನಯನ

ಸೃಷ್ಟಿಯ ಸಹಜ ಸೆಲೆಗೆ

ಸಿಲುಕಿದ

ಸುಶಾಂತ ಸುಷ್ಮಿತ

ಸುಪ್ತ ಸುಮನ

***

ಚಳಿಯಲ್ಲಿ

ಬೆಚ್ಚನೆಯ ಎದೆಯೊಳಗೆ ಹುದುಗಿದ್ದ

ಹುಚ್ಚು ಮನಸಿನ ಬಣ್ಣಬಣ್ಣದ

ಗುಚ್ಛ ಗುಚ್ಛ ಕನಸುಗಳು

ಪುಚ್ಛ ಬಿಚ್ಚಿ ಗರಿಗೆದರಿದವು

ಅಚ್ಚ ನೀಲಿ ಬಾನ ಮೇಲೆ

***

ವಾಸ್ತವ

ವಾಸ್ತವ ಧುಮ್ಮಿಕ್ಕಿ ಬರುತ್ತಿವೆ ಪ್ರತಿಭಟನೆ-ದ್ವೇಷ-ರೋಷಗಳ

ಮಳಲ ರಾಶಿ ಹೊತ್ತು.

ಕ್ಷಣಾರ್ಧದಲ್ಲಿ...

ಪ್ರೀತಿ-ವಾತ್ಸಲ್ಯದ ಸೆಳವು

ದಡಸೇರುವ ಮುನ್ನವೇ

ಕಾಲಗರ್ಭದ ಒಡಲ ಸೇರಲು

ಕೈಬೀಸಿ ಕರೆಯುತ್ತಿವೆ.

***

ನನ್ನವಳು

ನನ್ನವಳು ಸೇವಂತಿಗೆ

ನಕ್ಕರೆ ಇರುವಂತಿಗೆ

ಬೇಕು ಹೊತ್ತಿಗೆ ವಂತಿಗೆ

ನತ್ತಿಗೆ-ಮುತ್ತಿಗೆ-ಮತ್ತಿಗೆ

ಹೋಗೆ ಹೋಗೆ ಎಂದೆಯೋ

ಅಂದೇ ಅವಳ ಕೈ ನನ್ನ ಕತ್ತಿಗೆ!
***

ಯಾಕೆ?

ನೀ ತೋರಿದ

ಪ್ರೀತಿ ಅಮೃತ,

ಸ್ನೇಹ ಸಿಂಚನದ

ಮೆಲುಕು ಮುಲುಗುಟ್ಟುತಲಿತ್ತು...

ನಿನ್ನ ಸ್ಪರ್ಶದಲಿ

ತನ್ನತನವಳಿದು

ನಮ್ಮತನದ

ಹಿತ ಅಪ್ಪುಗೆಯಿತ್ತು...

ನೀನಿತ್ತ ಮುತ್ತು

ಆ ಹೊತ್ತು, ಆ ಮುತ್ತು

ಆ ಗತ್ತು

ಗಮ್ಮತ್ತಿನಿಂದಿತ್ತು!

ಯಾಕೆ?

-ಶ್ರೀದೇವಿ ಕಳಸದ

4 comments:

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

ಹನಿಗವನಗಳೆಲ್ಲಾ ಚೆನ್ನಾಗಿವೆ. ‘ಚೆಲುವು’ ಹನಿ ತುಂಬಾ ಚೆಲುವಾಗಿದೆ.

srinivas said...

ಚುಟುಕ ಅರ್ಥಾತ್ ಮಿನಿಗವಿತೆಗಳು ಬಹಳ ಚೆನ್ನಾಗಿವೆ


ಜಾಲಾಡಿಸಿದೆ ನನ್ನ ಮನದ ಗಟ್ಟಿ ತೆಗೆಯಲು
ಹೊಟ್ಟಿನ ಕಂತೆ, ತೆಗೆದಷ್ಟೂ ಬರುತಿರಲು
ಮನದ ಖಾತೆ ತಲೆಯಂತೆ ನುಣುಪಾಗಿರಲು
ಕಂಡಿತು ಕಂಡರಿಯದ ಜೀವನದ ಮಜಲು


ಗುರುದೇವ ದಯಾ ಕರೊ ದೀನ ಜನೆ

ಶ್ರೀದೇವಿ ಕಳಸದ said...

ಥ್ಯಾಂಕ್ಸ್‌ ತೇಜಸ್ವಿನಿ ಮತ್ತು ಶ್ರೀನಿವಾಸ್ ಅವರಿಗೆ...

Raghu said...

"Yaake.....mattu Anthashruthi" tumba ista ayitu akka. ninn minigavanaglu preeti....badukin sutta nulitirodu tumba chennagive - Raghu Telagdai