Saturday, August 30, 2008

ಕರ್ಮ-ಉಪಾಕರ್ಮ

ಮೊನ್ನೆ ಹುಣ್ಣಿಮೆಯಂದು

ಅಪಾದಮಸ್ತಕ

ದಳದಳನೆ ಇಳಿವ ನೀರ ಹನಿ

ಅರೆನಿಮೀಲಿತ ನಯನ

ವೇದ-ನಾದ-ನಿನಾದ

ಮಂಡಿ ಏರಿದ ಮಡಿ

ತೊಪ್ಪನೆ ತೊಯ್ದುಪ್ಪಿದ

ರೋಮ ರೋಮರಾಶಿ

ವ್ಯೋಮ ತನಕ ಹೋಮ

ಕುಳಿತವರ, ನಿಂತವರ

ಕಾಣದ ಹಲವರ

ಹರಕೆ-ಹಾರೈಕೆ-ಆಶೀರ್ವಾದ.

ಅಭ್ಯಂಜನ, ಉತ್ಸರ್ಜನ, ಉಪಾಕರ್ಮ


ಹುಣ್ಣಿಮೆಯ ಮರುದಿನ

ಮುಖಮಾರ್ಜನ ಶಾಸ್ತ್ರ

ಬ್ರಹ್ಮಾಂಡ ದರ್ಶನ

ತ್ರಿಕಾಲವಂದನೆ

ಗಾಯತ್ರಿ ಮಂತ್ರ

ಕಣ್ಣ ಕಿಂಡಿಯಿಂದಲೇ.

ನಿನ್ನೆಯ ಆರೆಳೆ

ಹನ್ನೆರಡು ತಿಂಗಳೂ

ಉರುಳು ಗೂಟದ ಗಂಟಲಿಗೇ.

ಹರಸಿದವರಿಗಿನ್ನು

ವರ್ಷವಿಡೀ ವಿಶ್ರಾಂತಿ.

ಸಂವತ್ಸರ ಕೃತ ದೋಷ ಪರಿಹಾರಾರ್ಥ

Wednesday, August 27, 2008

ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

ಇವ ಮುಂದೆ ಮುಂದೆ ಸಾಗಿ ಒಂದೊಂದು ತುಣುಕುಗಳನ್ನ ಜೋಡಿಸಿಡಲು ಪ್ರಯತ್ನಿಸುತ್ತಿದ್ದ. ಅಂದರೆ ಆ ಎಲ್ಲ ಒಟ್ಟಾಗಿಸಿ ಒಂದು ಆಕಾರ ಕೊಡುವುದು ಇವನ ಇರಾದೆ. ಹೀಗೆ ಮಾಡುತ್ತಿರುವುದು ಮೊದಲ ಸಲವೇನಲ್ಲ. ನೆನಪಾದಾಗಲೆಲ್ಲ ಅನ್ನುವುದಕ್ಕಿಂತ ಇವನದು ಇದೇ ಖಯಾಲಿ. ಆಕಾಶಕ್ಕೆ ಮುಖ ಮಾಡಿ ಏರಲಾಗದ ಏಣಿಗಾಗಿ ಹಂಬಲಿಸುವುದು. ಅಚ್ಚಾಗದ ಚಿತ್ರವನ್ನು ಮತ್ತೆ ಮತ್ತೆ ಬಿಡಿಸುವುದು. ಸುರುಳಿ-ಸುರುಳಿಯಾಗಿ ಗಂಟುಹೊಸೆದುಕೊಳ್ಳುವ ಬಣ್ಣಗಳ ಮೊಂಡಾಟ ಬಿಡಿಸುವುದು.

ಒಂದು-ಒಂದೇ ಬಾರಿ ಇವನಂದುಕೊಂಡಂತೆ ಅದೊಂದು ಅದ್ಭುತ ಕಲಾಕೃತಿಯಾಗಿಬಿಟ್ಟರೆ, ಅದಕ್ಕೊಂದು ಚೌಕಟ್ಟು ಕಟ್ಟುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಯಾಕೆಂದರೆ ಚೌಕಟ್ಟು ಕಟ್ಟುವುದು, ಕಟ್ಟಿಕೊಳ್ಳುವುದು ಎರಡೂ ಇವನಿಗಿಷ್ಟ. ಇಷ್ಟಪಟ್ಟದ್ದು ಎಂದೂ ಕಷ್ಟದ ಕೆಲಸವಲ್ಲವಲ್ಲ?

***

ಹತ್ತಿಯಂತೆ ಹಗುರ ತುಣುಕುಗಳ ಮುಗ್ಧ ನೋಟವನ್ನ, ನಡೆಯನ್ನ ಬೆಳ್ಳಂಬೆಳಗೆ ನೋಡುತ್ತಿದ್ದ ಅಷ್ಟೇ ಹಾಲು ಮನಸ್ಸಿನಿಂದ. ಹಿಂಬಾಲಿಸುತ್ತಿದ್ದ ನೂರಾಸೆ ತುಂಬಿದ ಮನಸು-ಕಣ್ಣುಗಳೊಂದಿಗೆ. ಹಾಗೆ ಇವ, ಅವುಗಳ ಬೆನ್ನು ಹತ್ತಿದರೆ ಅಸಂಖ್ಯ ಕಲ್ಪನೆಗಳ ಎಳೆಗಳು ಇವನ ಬೆನ್ನು ಹತ್ತುತ್ತಿದ್ದವು.

ಇನ್ನೇನು ಎಲ್ಲ ತುಣುಕುಗಳನ್ನೂ ಒಂದಾಗಿಸಬೇಕೆನ್ನುವಷ್ಟರಲ್ಲಿ ತಾರಸಿಯ ಗೋಡೆ ಇವನನ್ನು ಅಡ್ಡಗಟ್ಟಿತ್ತು. ಒಮ್ಮೆಲೆ ದಾರ ಕಳಚಿದ ಗಾಳಿಪಟದಂತೆ ಹಾರಿ-ಹಾರಿ ಹೋದವು ಎಲ್ಲ ತುಣುಕುಗಳೂ. ಆ ಎಲ್ಲ ಕಲ್ಪನೆಯ ಕೂಸುಗಳು ಇವನ ಮೊಣಕಾಲಿನ ಸಂದಿಯಲ್ಲಿ ಹಣೆ ಹಚ್ಚಿ ಕುಳಿತುಬಿಟ್ಟವು.

***

ಹೊಳೆ ಹೊಳೆವ ತುಣುಕಗಳ ಬುಟ್ಟಿ ಹೊತ್ತು ಅವ ಬಂದ. ಅವನ ಝಳಕ್ಕೇ ಇವನಿಗೆ ಜಳಕವೇ ಆಯಿತು. ತುಂಬಿದ ಬುಟ್ಟಿಯಲ್ಲಿ ಇನ್ನೆಂತೆಂಥ ತುಣುಕುಗಳಿವೆ ಎಂದು ಮುಂಗಾಲ ಮೇಲ್ ನಿಂತದ್ದಾಯಿತು. ಕಾಮನಬಿಲ್ಲಾಗಿಸಿಯೂ ಆಯಿತು ಬೆನ್ನು, ಕಣ್ಣು ಕಿವುಚಿ, ಹಣೆ ಮೇಲೆ ಗೆರೆ ಬರೆದುಕೊಂಡು, ಕತ್ತು ಕಸುವು ಕಳೆದುಕೊಂಡರೂ ಇವನ ಕುತೂಹಲ ಮಾತ್ರ ಒಡ್ಡು ಕಟ್ಟಿ ನಿಂತಿತು. ಕಪ್ಪು ಬಣ್ಣದ ಕ್ಯಾನ್ವಾಸ್ ಮೇಲೆ ಆ ಎಲ್ಲ ಹೊಳೆವ ತುಣುಕುಗಳು ನರ್ತಿಸುವುದ ಇವ ನೋಡುವ ಕನಸು ಕಾಣತೊಡಗಿದ. ಆ ತುಣುಕುಗಳಿಗೆ ಪುಟ್ಟ ಪುಟ್ಟ ಗೆಜ್ಜೆಗಳನ್ನೂ ಜೋಡಿಸಿಟ್ಟ ಕಟ್ಟಲು.

ಅದ್ಭುತ. . . ಆಶ್ಚರ್ಯ! ಅವನಂದುಕೊಂಡಂತೆ ಎಲ್ಲವೂ ನಡೆಯಿತು. ಖುಷಿಯಲ್ಲಿ ತೇಲುತ್ತ ತೇಲುತ್ತ ತಾನೂ ನರ್ತಿಸತೊಡಗಿದ ಮನಸ್ಸಿಗೆ ಗೆಜ್ಜೆ ಕಟ್ಟಿಕೊಂಡು. ಆದರೆ ಮತ್ತೆ ಆ ತಾರಸಿಯ ಗೋಡೆ ಅಡ್ಡಗಾಲಿಟ್ಟಿತ್ತು. ತುಣುಕುಗಳ ಕಾಲಿಗೆ ಕಟ್ಟಿದ ಕಿರುಗೆಜ್ಜೆ ನಿಚ್ಚಳವಾಗಿ ಅಚ್ಚೊತ್ತಿದ್ದರೂ ಅವುಗಳ ನಾದ ಇವನಿಗೆ ಕೇಳಿಸಲೇ ಇಲ್ಲ.

***

ಮಿಣುಕುಗಳೆಲ್ಲ ತುಣುಕುಗಳ ಮರೆಯಲ್ಲಿ ಕಣ್ಣಮುಚ್ಚಾಲೆ ಆಡತೊಡಗಿದವು. ನೀಲಿನೀಲಿಯಾಗಿ ಮೈಚೆಲ್ಲಿಕೊಂಡದ್ದೆಲ್ಲ ನಿಧಾನವಾಗಿ ಕೇಸರಿಯಾಗಿ, ಕೇಸರಿಯಾಗಿದ್ದೆಲ್ಲ ಕೆಂಪು-ಕೆಂಪಾಗಿ ಕರಗಿ ಹೋಗುತ್ತಿತ್ತು. ಹಾಗೆ ಕರಗುವ ಮುನ್ನವೇ ಆ ಕೆಂಪು ಕದ್ದುಬಿಡುತ್ತೇನೆ ; ಜೊತೆಗೆ ಆ ಎಲ್ಲ ತುಣುಕುಗಳೂ ಇಳೆಯ ಅಪ್ಪುವಂತೆ ಮಾಡುತ್ತೇನೆ. ಎಂದುಕೊಂಡು, ಕೆಂಪ ಹಿಡಿದಿಡಲು ಕ್ಯಾನ್ವಾಸನ್ನೇ ಬಲೆಯಂತೆ ಜೋರಾಗಿ ಬೀಸಿದ. ಆ ಬೀಸುವಿಕೆಯ ಶಬ್ದಕ್ಕೆ ತಾನೇ ತಲ್ಲಣಿಸಿದ. ಅತ್ತ ಇವನ ಬೆರಗಿಗೆ ಚುಂಚಿನ ಸಂಸಾರವೆಲ್ಲ ಮುದುರಿ ಗೂಡು ಸೇರಿತು. ಇತ್ತ ಗೂಡು ಸೇರಿಕೊಂಡವರೆಲ್ಲ ಅಗಳಿ ಹಾಕಿಕೊಂಡು ಬೆಚ್ಚಗೆ ಹೊದಿಕೆಯೊಳಗೆ ಗುಬ್ಬಚ್ಚಿಯಾಗಿದ್ದರು.

ಯಾಕೋ ಆ ಕೆಂಪು ಭಾರವಾಗಿ ಕ್ಯಾನ್ವಾಸ್ ಕೈ ಜಾರುತ್ತಿದೆ ಎಂಬ ಅರಿವಾಗತೊಡಗಿತಿವನಿಗೆ. ತನ್ನನ್ನೂ ಎಳೆದೊಯ್ಯತ್ತಿದೆ ಎಂಬ ಅನುಭವ ದಟ್ಟವಾಗುತ್ತಿದ್ದಂತೆ ಗಕ್ಕನೆ ನಿಂತುಬಿಟ್ಟ ಮತ್ತೆ ಅಡ್ಡ ಬಂದ ತಾರಸಿಯ ಗೋಡೆಗೆ. ಕ್ಯಾನ್ವಾಸ್ ಇವನ ಕೈಕೊಸರಿಕೊಂಡು ಆ ತಂಪು ಕೆಂಪಿನೆಡೆ ಹಾರಿಹೋಯಿತು ಗೋಡೆಯಿಲ್ಲದ ತಾರಸಿಯೆಡೆಗೆ. ದಿಕ್ಕಿಲ್ಲದ ಕನಸ ಪಯಣಕೆ. ಚೌಕಟ್ಟಿಲ್ಲದ ಮನಸ್ಸಿನೆಡೆ. ದೂರದಲ್ಲೆಲ್ಲೋ ತುಣುಕುಗಳು ನಗುತ್ತಿದ್ದುದು ಕೇಳಿಸುತ್ತಿತ್ತು ಆದರೆ ಕಾಣಿಸುತ್ತಿದ್ದಿಲ್ಲ.

Monday, August 25, 2008

ಕಪ್ಪು ಬೆಳ್ಳಿ

ಆಕೆ ಕತ್ತಲು ಬಯಸಿ

ಮಲಗಿದಳು ಕಪ್ಪು ಬಟ್ಟೆ ಹೊದ್ದು.

ಅವ ಬಿಡಲೇ ಇಲ್ಲ,

ಚಿಕ್ಕ ಚಿಕ್ಕ ಚೌಕಳಿಯೊಳಗೂ

ತೂರಿಬಂದ.

ಅತಿಯಾಯ್ತು ಇವನದು ಎಂದು

ಮುಸುಕೆಳೆದು ರೆಪ್ಪೆ ಮುಚ್ಚಿದಳು ಗಟ್ಟಿ.

ಊಹೂಂ. . .

ಬೆಳ್ಳಿ ಮುಗಿಲ ಸರಿಸಿ

ಬೆಳ್ಳಿ ನಕ್ಷತ್ರ ಪುಟಿಸಿ

ಬೆಳ್ಳಿ ಮಾತಾಡಲು ಹವಣಿಸಿದ.

ಇವಳಿಗೋ

ಬೇಕಿತ್ತು ಬಂಗಾರ ಮೌನ-

ನೋಡಬೇಕಿತ್ತು ಮೌನ ಕಣ್‌ ಬಿಡುವ ಪರಿಯ.

ಮೊಣಕಾಲು ಎದೆಗೊತ್ತಿ,

ಮೊಣಕೈ ತಲೆಗಿಟ್ಟು

ಮತ್ತದೇ ಕಪ್ಪು ಬಟ್ಟೆ ಎಳೆದು

ಬೆನ್ನಾದಳು ಅವನಿಗೆ.

ಕೇಳಲೇ ಇಲ್ಲ ಅವ

'ಬೇಡ ನಿನಗೆ ಬೆಳ್ಳಿ?

ಬೆಳ್ಳಿಯೊಳಗಿನ ನಾನು?

ನನ್ನೊಳಗಿನ ಬೆಳ್ಳಿ ಬಳ್ಳಿ?'

ಎನ್ನುತ್ತ ಬೆನ್ನಿಗೊಂದು

ತನ್ನ ನೆರಳ ಚಿತ್ರ ಅಂಟಿಸಿ

ಹುಸಿಕೋಪ ತೋರಿ ಮರೆಯಾದ.

ನಿಟ್ಟುಸಿರಬಿಟ್ಟ ಈಕೆ

ಹೊದ್ದಳು ಇನ್ನಷ್ಟು ದಪ್ಪ ಕಪ್ಪು,

ಮುಚ್ಚಿದಳು ಕಣ್ಣು,

ಮತ್ತೆ ಬಯಸಿ ಆ ಕತ್ತಲೆಗೆ.

ಬಂಗಾರ-ಮೌನ ಕಣ್‌ ಬಿಡುವ ಗಳಿಗೆಗೆ

ಕಾಯುತ್ತ ಕಾಯುತ್ತ

ಹಿಡಿಯಾಗಿಸಿಕೊಂಡಳು ತನ್ನ ತಾ.

***

ಸರಿಸಿದಷ್ಟೂ ಹೊದಿಕೆ

ಸುತ್ತೆಲ್ಲ ಕಪ್ಪು. ಕಪ್ಪು ಕಪ್ಪು.

ಒಮ್ಮೆಲೆ ಬೆಚ್ಚಿದಳು,

ಸಣ್ಣಗೆ ಬೆವರಿದಳು,

ಮೆಲ್ಲಗೆ ನಕ್ಕಳೂ....

ಕತ್ತಲೆ ಸರಿಸುವ ತನ್ನ ಬೆರಳಿನಾಟಕ್ಕೆ

ಮರುಳ ಮಾಯೆಯ ನೋಟಕ್ಕೆ.

ತೋಳುಗಳನ್ನೊಮ್ಮೆ ಚಾಚಿ,

ಮೇಲ್ಮುಖ ಮಾಡಿ

ಮೈಮುರಿದ ಗಳಿಗೆಗೆ

ಬೆರಳ ಕಣಕಣ ನಾದಕ್ಕೆ

ಬಂಗಾರ ಮೌನ ಕರಗಿತ್ತು

ಬೇಡಿತ್ತು ಮನಸು ಬೆಳ್ಳಿ.

also see

http://kendasampige.com/article.php?id=1173

Friday, August 22, 2008

ಕೇಳಬನ್ನಿ ಧೃಪದ್ ಗಾನ. . .


ಸಾಮವೇದದ ಕಾಲದಿಂದ ಇಂಟರ್‍ನೆಟ್ ಯುಗವರೆಗೂ ಕೆಲವೇ ಮಾರ್ಪಾಡುಗಳೊಂದಿಗೆ ಅಸ್ತಿತ್ವ ಉಳಿಸಿಕೊಂಡು ಬಂದಿರುವ ಧೃಪದ್ಅನ್ನು ಈಗ ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಧೃಪದ್ ಹಿಂದೂಸ್ತಾನಿ ಸಂಗೀತದ ಒಂದು ಶೈಲಿ. ಇದು ಭಾರತೀಯ ಸಂಗೀತ ಪ್ರಪಂಚದಲ್ಲಿ ಮಾತೃಸ್ಥಾನ ಹೊಂದಿದೆ. ಧೃವ-ಪದ್ ಎಂದರೆ ಆಳವಾದ ಸತ್ಯ ಎಂದರ್ಥ. ಕಲಾವಿದನ ಕಂಠದಿಂದ ಹೊಮ್ಮುವ ಧೃಪದ್ ನ ಪ್ರತಿ ಸಾಲುಗಳಲ್ಲೂ ಗಾಂಭೀರ್ಯದ ಗತ್ತಿರುವುದೇ ಇದರ ವಿಶೇಷ. ತಾಯಿ ತನ್ನ ಮಕ್ಕಳನ್ನು ಅಕ್ಕರೆಯಿಂದ ನೋಡಿಕೊಳ್ಳುವಂತೆ ಧೃಪದ್‌, ಬಂದಿಶ್ ನ ಪ್ರತಿ ಅಕ್ಷರಗಳೂ ಸ್ವರಗಳನ್ನು ಪೋಷಿಸುತ್ತ ರಾಗದ ಆಳಕ್ಕಿಳಿಯುತ್ತವೆ. ರಾಗದ ಪಾವಿತ್ರತೆ, ಸ್ವರ ಶುದ್ಧತೆ, ಲಕ್ಷಣಗಳನ್ನು ಬಿಂಬಿಸುತ್ತ ತನ್ನ ಹರವನ್ನು ಬಿಚ್ಚಿಕೊಂಡು ಕೇಳುಗನಿಗೆ ಸಮಾಧಿ ಧ್ಯಾನವನ್ನು ಕಲ್ಪಿಸುತ್ತದೆ. ಧೃಪದ್‌ ನ ಮೂಲ-ಸಾಮವೇದ. ಇದನ್ನು ಮೊದಲು ಓಂಕಾರದೊಂದಿಗೆ ಲಯಬದ್ಧವಾಗಿ ಹಾಡಲಾಗುತ್ತಿತ್ತು. ನಂತರ ಛಂದ, ಪ್ರಬಂಧ ಮಾದರಿಯಲ್ಲಿ ಸಂಸ್ಕೃತ ಸಾಹಿತ್ಯವನ್ನು ರಾಗಕ್ಕಳವಡಿಸಿ ಹಾಡಲಾಗುತ್ತಿತ್ತು.

ಹದಿಮೂರನೇ ಶತಮಾನದಲ್ಲಿ ಸಿತಾರ್‍ ಹಾಗೂ ಖ್ಯಾಲ್‌ನ ಆದ್ಯ ಪ್ರವರ್ತಕ ಅಮೀರ್‍ ಖುಸ್ರೋ ಭಾರತಕ್ಕೆ ಬರುವ ಮೊದಲು ಕೇವಲ ಭಾರತೀಯ ಸಂಗೀತ ಎಂದಿತ್ತು. ಅವನ ಆಗಮನದ ನಂತರ ಹಿಂದೂಸ್ತಾನಿ, ಕರ್ನಾಟಕ ಸಂಗೀತ ಪದ್ಧತಿಗಳು ಹುಟ್ಟಿಕೊಂಡವು. ಆಗ ಧೃಪದ್ ಸಂಪೂರ್ಣವಾಗಿ ಹಿಂದೂಸ್ತಾನಿ ಗಾಯನದ ಒಂದು ಶೈಲಿಯಾಗಿ ಮಾರ್ಪಾಡು ಹೊಂದಿತು. ೧೨-೧೬ನೇ ಶರಮಾನದ ಅವಧಿಯಲ್ಲಿ ಮೊಘಲರು ಭಾರತ ಪ್ರವೇಶಿಸಿದ ನಂತರ ಧೃಪದ್ ಹಾಡುಗಾರಿಕೆಯ ಜೊತೆಗೆ ಭಾಷೆಯಲ್ಲೂ ಬದಲಾವಣೆ ಕಂಡಿತು. ಸಂಸ್ಕೃತದಲ್ಲಿದ್ದ ರಚನೆಗಳ ಬದಲಾಗಿ ಹಿಂದಿ, ಬ್ರಿಜ್‌ಭಾಷಿ ಮಿಶ್ರಿತ ಧೃಪದ್‌ಗಳು ರಚನೆಯಾಗತೊಡಗಿದವು. ಸಂಗೀತಗಾರರೂ ಆಗಿದ್ದ ಷಹಜಹಾನ್, ಆದಿಲ್‌ಶಾ, ಔರಂಗಜೇಬ್‌, ಮಾನಸಿಂಗ್‌ ಅವರು ಸ್ವಂತ ಧೃಪದ್ ರಚಿಸಿ ಹಾಡಿದರು.

ಧೃಪದ್ ಸಾಮವೇದದ ಕಾಲದಿಂದ ಇಂಟರ್‌ನೆಟ್ ಯುಗದವರೆಗೂ ಕೆಲವೇ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಸೀಮಿತ ಕಲಾವಿದರನ್ನು ಕೇಳುಗರನ್ನು ಸೃಷ್ಟಿಸಿಕೊಂಡು ಮುನ್ನಡೆದಿದೆ. ಆಲಾಪ್ ಬಂದಿಶ್‌ನೊಂದಿಗೆ ನೋಂ, ತೋಂ, ರೆ, ನ್ಯಾ, ನಾಂ, ನ
ಆನಾ, ದರಿ ಮುಂತಾದ ಅರ್ಥವಿಲ್ಲದ ಅಕ್ಷರಗಳನ್ನು ಸ್ವರಶುದ್ಧತೆಯಿಂದ ಉಚ್ಛರಿಸುವ ಪದ್ಧತಿ ಹಾಗೂ ಬಂದಿಶ್‌ನ್ನು ದುಗುನ್, ತಿಗುನ್‌, ಚೌಗುನ್‌ ಲಯದಲ್ಲಿ ಹಾಡಿ ಪುನಃ ಮೂಲ ಲಯಕ್ಕೆ ಬಂದು ನಿಲ್ಲುವುದು ಈಗಲೂ ಚಾಲ್ತಿಯಲ್ಲಿದೆ. ಪಖಾವಾಜ್‌ ಅಥವಾ ಮೃದಂಗ ಸಾಥಿ ಮಾತ್ರ ವಿಲಂಬಿತ ಲಯದಲ್ಲೇ ಮುಂದುವರಿಸುವ ಪದ್ಧತಿ ಇಂದಿಗೂ ಪ್ರಸ್ತುತವಿದೆ. ಸಂಗೀತದ ಇತರ ಶೈಲಿಗಳಲ್ಲಿ ಬಂದಿಶ್ ಶುರುವಾದ ಮೇಲೆ ತಾಳ ಪ್ರಾರಂಭವಾದರೆ, ಇಲ್ಲಿ ತಾಳ-ಗಾಯನ ಏಕಕಾಲಕ್ಕೇ ಶುರುವಾಗುವುದು ಇದರ ವೈಶಿಷ್ಟ್ಯ.

ಚೌತಾಲ್‌, ಸರ್ಫಾಂಕ್, ಬ್ರಹ್ಮತಾಲ್‌, ರುದ್ರತಾಲ್‌ ಮುಂತಾದ ತಾಳಗಳನ್ನು ಪಖಾವಾಜ್‌ ಅಥವಾ ಮೃದಂಗದಲ್ಲಿ ಧೃಪದ್‌ಗೆ ಸಾಥಿಯಾಗಿ ಕಲಾವಿದರು ನುಡಿಸುತ್ತ ಬಂದಿದ್ದಾರೆ. ಜೊತೆಗೆ ರುದ್ರವೀಣೆ, ಕೊಳಲು ಕೂಡ ಸಾಥಿಯಾಗಿರುತ್ತವೆ.

ಡಾಗರ್‍ ಬಂಧು, ಗುಂಡೇಚಾ ಬಂಧು, ಸಿಂಗ್‌ಬಂಧು, ಫಲ್ಗುಣಿ ಮಿತ್ರಾ, ಪ್ರೇಂಕುಮಾರ್‍ ಮಲೀಕ್‌ ಮುಂತಾದವರು ಧೃಪದ್‌ನ ಪರಂಪರೆಯನ್ನು ಮುಂದವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ವೀರರಸ ಪ್ರಧಾನವಾದ ಖ್ಯಾಲ್‌, ಭಜನ್‌, ಠುಮ್ರಿ, ಠಪ್ಪಾ, ಹೋರಿ ಗಾಯನಶೈಲಿಯಂತೆ ಕೇಳುಗನ ಮನ ರಂಜಿಸುವಲ್ಲಿ ವಿಫಲವಾಗುತ್ತದೆ. ಆಗ ಸಹಜವಾಗಿ ಇದು ಜನಸಾಮಾನ್ಯರಿಂದ ದೂರ ಉಳಿಯುತ್ತದೆ. ಲಾಸ್ ಎಂಜಲೀಸ್‌ನಲ್ಲಿ ‘ನಾರ್ಥ್‌ ಅಮೆರಿಕ ಧೃಪದ್ ಅಸೋಸಿಯೇಶನ್‌’ ಸಂಘಟಿತವಾಗಿದ್ದು , ಇದು ವಿದೇಶದಲ್ಲಿ ಭಾರತೀಯ ಕಲಾವಿದರ ಮೂಲಕ ಧೃಪದ್‌ನ್ನು ಪ್ರಚುರಗೊಳಿಸುತ್ತಿದೆ. ಉತ್ತರ ಭಾರತದ ಎಲ್ಲ ಪ್ರಮುಖ ನಗರಗಳಲ್ಲಿಯೂ ಧೃಪದ್ ಗುರುಕುಲ ಶಾಲೆಗಳಿದ್ದು, ಬೆಂಗಳೂರಿನ ಜಿಡ್ಡು ಕೃಷ್ಣಮೂರ್ತಿ ಫೌಂಡೇಶನ್ನಿನ ವ್ಯಾಲಿ ಶಾಲೆಯಲ್ಲಿ ಸುಮಾರು ೩೦ ವಿದ್ಯಾರ್ಥಿಗಳು ಧೃಪದ್‌ ಅಭ್ಯಾಸ ಮಾಡುತ್ತಿದ್ದಾರೆ. ನಾಲ್ಕು ವಿದ್ಯಾರ್ಥಿಗಳು ಮಾತ್ರ ಗುರುಕುಲ ಮಾದರಿಯಲ್ಲಿ ಅಭ್ಯಸಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಪಾಲು ಯುವಕರೇ.

‘ಜನಪ್ರಿಯತೆ ಇಲ್ಲವೆಂದ ಮಾತ್ರಕ್ಕೆ ಅದ್ಕ್ಕೆ ಮಹತ್ವವಿಲ್ಲ ಎಂದರ್ಥವಲ್ಲ. ಆ ಶೈಲಿಗೊಂದು ಜನಪ್ರಿಯತೆ ಒದಗಿಸಬೇಕೆನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡೇ ನಾವು ಈ ಕೇಂದ್ರವನ್ನು ಪ್ರಾರಂಭಿಸಿದ್ದೇವೆ ಎನ್ನುತ್ತಾರೆ ವ್ಯಾಲಿ ಶಾಲೆಯ ಕಬೀರ್‍‍ ಜಯತೀರ್ಥ.

ಈ ಶೈಲಿ ಜನರಿಂದ ದೂರವಾಗುತ್ತಿರುವುದರ ಬಗ್ಗೆ ಹಿಂದೂಸ್ತಾನಿ ಗಾಯಕ ಪಂ. ಪರಮೇಶ್ವರ್‍ ಹೆಗಡೆ ಹೀಗೆ ಹೇಳುತ್ತಾರೆ. ‘ಧೃಪದ್ ಜನರಿಂದ ದೂರವಾಗಲು ಶೈಲಿಯ ಮಿತಿ ಹಾಗೂ ದೌರ್ಬಲ್ಯಗಳೇ ಕಾರಣ. ಲೆಕ್ಕಾಚಾರವನ್ನೇ ಮುಂದಿಟ್ಟುಕೊಂಡು ಹಾಡುವುದರಿಂದ ಸಾಹಿತ್ಯಕ್ಕೆ ನ್ಯಾಯ ಒದಗಿಸಲಾಗದು. ಇದರಿಂದ ಶ್ರಾವ್ಯತೆಗೂ ಭಂಗ ಉಂಟಾಗುತ್ತದೆ’.

ಈಗಾಗಲೇ ಅನೇಕ ಹಿಂದೀ ಚಿತ್ರಗಳಲ್ಲಿ ಧೃಪದ್ ಗಾಯವನ್ನು ಹಿನ್ನೆಲೆ ಸಂಗೀತವಾಗಿ ಬಳಸಿಕೊಂಡಿದ್ದಾರೆ. (ಯುದ್ಧ ಸನ್ನಿವೇಶ, ವಿಜಯದ ಸಂದರ್ಭದಲ್ಲಿ). ಇತ್ತೀಚೆಗೆ ಅನಾಹತ್ ಕಲಾತ್ಮಕ ಚಿತ್ರದಲ್ಲಿ ಪುಣೆಯ ಗಾಯಕ ಉದಯ್ ಭವಾಲ್ಕರ್‍ ಧೃಪದ್‌ನ ಮಿತಿಗಳನ್ನು, ಚೌಕಟ್ಟನ್ನು ಕೊಂಚ ಬದಿಗಿಟ್ಟು ಎಲ್ಲ ವರ್ಗದ ಸಂಗೀತ ರಸಿಕರ ಮನಸೆಳೆದಿದ್ದಾರೆ.

ಸಂಗೀತವು ಮಾಧುರ್ಯ, ವೈವಿಧ್ಯತೆಯಿಂದ ಕೂಡಿದಾಗ ಮಾತ್ರ ಹೊಸ ಪೀಳಿಗೆಯನ್ನು ಸೆಳೆಯಲು ಸಾಧ್ಯ. ಈ ಸಾಧ್ಯತೆಯನ್ನು ಖ್ಯಾಲ್ ಹಾಗೂ ಇತರ ಗಾಯನ ಶೈಲಿಗಳು ರೂಢಿಸಿಕೊಂಡಿರುವುದರಿಂದ ಇವು ಹಳೆಯ ಹಾಗೂ ಹೊಸ ಪೀಳಿಗೆಯನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಈ ಪದ್ಧತಿ ಪುನಾರಚನೆಗೊಳ್ಳದಿರುವುದಕ್ಕೆ ಈ ಶೈಲಿಯ ಗಾಯಕರೇ ಕಾರಣ. ಹಳೇ ಪದ್ಧತಿಯ ಪುನಾರಚನೆಯನ್ನು ಶಾಸ್ತ್ರೀಯ ತಳಹದಿಯಲ್ಲೇ ಮಾಡಬಹುದಾಗಿದೆ.

(೧೭-೦೭-೦೫ ವಿಜಯ ಕರ್ನಾಟಕ ಸಾಪ್ತಾಹಿಕ)

ಕಾಮನಬಿಲ್‌. . .!

ಗಣಿತ ಕ್ಲಾಸು.
ತಲೆತಗ್ಗಿಸಿ ಇಂಚುಪಟ್ಟಿ
ಅಂಚಿಗೆ ಗೆರೆ ಎಳೆದ ನೆನಪು.
ಹೆಂಚಿನ ಸಂದಿಯಿಂದ
ಅವ ಕುಕ್ಕುತ್ತಿದ್ದ ಕಣ್ಣ.
ಅದೇ ಇಂಚುಪಟ್ಟಿಯಿಂದ
ಪೆಟ್ಟು ಕೊಡಹೋದವಳಿಗೆ
ಬೀಸಿದ್ದ ಬಣ್ಣ
ಅರಳಿತ್ತು ಅವಳ ಕಣ್ಣ.

ಕೆಮ್ಮಿದ್ದು
ತುಸು ಹಗುರವಾಗಿಯೇ.
ಅರೆರೆ! ಎನ್ನುವ ಮೊದಲೇ
ಅರೆಕ್ಷಣದಲ್ಲಿ
ಮಿಂಚಿ ಮೀನವಾದವು
ಬಣ್ಣಬಣ್ಣದ ನೀರ್‌‌ಬಿಂದು
ನೇರನಿಂತ ಕಂಪ್ಯೂಟರ್‍ ಸ್ಕ್ರೀನ್‌ಮೇಲೆ
ಹನಿಯದೇ, ಜಾರದೆ.

ಸಿಗ್ನಲ್ ಬಿತ್ತು,
ಮಳೆಯೂ ನಿಂತಿತ್ತು.
ತಗ್ಗುರಸ್ತೆ ಮೆಲೆ
ಅಮೀಬಾದಂತೆ
ಹೊರಳಾಡುತ್ತಿದ್ದ
ಅದೇ ಬಣ್ಣಗಳು,
ಆಯಿಲ್-ಪೆಟ್ರೋಲ್‌ನೊಡನೆ
ಸರಸವಾಡುತ್ತಿದ್ದವು
ಎಂದೂ ಬೆಸೆಯದ
ಸಂಗ ಮರೆತು.

ಅವತ್ತು ಜಾತ್ರೆ.
ಗಿರಗಿಟ್ಲೆ ತಿರುಗಿಸುತ್ತಿದ್ದ ಅವ.
ತಿರುಗಿಸುತ್ತ ತಿರುಗಿಸುತ್ತ
ಸುತ್ತ-ಮುತ್ತಲಿನವರಿಗೆಲ್ಲ
ಶ್ವೇತಪರ್ವತ ಹತ್ತಿಸಿದ್ದ.
ಹತ್ತಿದವರೆಲ್ಲ ಹತ್ತಿಯಂತೆ
ಹಗುರಾಗಿ ವಿಳಾಸವಿಲ್ಲದ
ಊರಿಗೆ ಹೊರಡುವವರಿದ್ದರು
ಆ ಹೊತ್ತಿಗೆ ಮೋಡ
ಮೈ ಕೊಡವಿದ ರೀತಿಗೆ
ತೆರೆದುಕೊಂಡಿತ್ತು
ಗಿರಗಿಟ್ಲೆ ಬಣ್ಣ ಬಣ್ಣ. .

ಕಿಟಕಿ ತಲೆಗೊಂದು ಮೊಳೆ.
ಗೋಣು ಮುರಿದುಕೊಂಡಿತ್ತು-
ಅದಕೆ ಸ್ಫಟಿಕ ಹಾರವೊಂದು.
ತಂಪನೆರೆವ ಅದೂ ಬಯಸಿತ್ತು-
ನಿರ್ಮಲ-ನಿಶ್ಚಲ ಸ್ಪರ್ಶ.
ಅಂತೂ ಬಂದಿದ್ದ ಅವ-
ಕಿಟಕಿ ಸರಳ ಬಳಸಿ,
ಬಂದವನೇ ಅಳಿಸಿದ್ದ ವೈರಾಗ್ಯ,
ಮೂಡಿಸಿದ್ದ ಕಾಮನಬಿಲ್ಲ.

Thursday, August 21, 2008

ಎಲ್ಲ ತುಸುಹೊತ್ತು. . .


ಕೆಂಪೆಂದರೆ ಮೂಗು ಮುರಿಯುತ್ತಿದ್ದವಳಿಗೆ
ಆ ನವಿರುಗೆಂಪು ಅದ್ಯಾಕೋ
ಇಷ್ಟವಾಯಿತು.
ಮತ್ತೆ ಮತ್ತೆ
ಬೆರಳಾಡಿಸಿದಳು. . .
ಬೆರಳಾಡಿಸುತ್ತಲೇ
ಕಣ್ಹೊರಳಿಸಿ ಅರಳಿಸಿದಳು.
ಅದ್ಯಾಕೋ ಒಮ್ಮೆಲೇ
ಕೈಕೊಸರಿಕೊಂಡಳು!
ಆ ನವಿರು
ಮಾಯವಾದೀತೆಂದು.

ಅಷ್ಟಕ್ಕೂ ಅದರ ಆಯಸ್ಸು
ಅವಳಿಗೆ ಗೊತ್ತಿಲ್ಲವೇನಂತಲ್ಲ.
ಪುಟ್ಟ ಕಂದ
ಒಮ್ಮೆ ಆಕಳಿಸುತ್ತ
ಹೊಟ್ಟೆಯುಬ್ಬಿಸಿ,
ಎಳೆಮೂಳೆ
ಎಣಿಸಲನುವಾಗುವಂತೆ
ಮೈಮುರಿದಷ್ಟು ಹೊತ್ತು-
ಹವಳತುಟಿ ಅರಳಿಸಿ
ಕೆನ್ನೆಗುಳಿ ಮಾಡಿ
ಮತ್ತೆ ನಿದ್ದೆ ಹೋದಷ್ಟು.

ಆ ಮೆದುಗೆಂಪ ಮೇಲೇ
ಮೋಹವೋ, ಮತ್ಸರವೋ
ಬೆಳ್ಳಂಬೆಳಗಿನ ಎಳೆತನ
ಮರೆತ ಅವಳ ಮಿತ್ರ,
ಕೋಣೆತುಂಬ ರಚ್ಚೆ ಹಿಡಿದಿದ್ದ.
ಅವಳ ಕಣ್ಕೆಂಪಾಗಿಸಿದ್ದ
ಕಣ್‌ಮುಚ್ಚುವಂತೆ ಮಾಡಿದ್ದ.

ಸಿಗ್ನಲ್‌ ಕೆಂಪು
ಜಂಪ್ ಮಾಡುತ್ತಿದ್ದವಳಿಗೆ
ಕೆಂಪು ಟೀಶರ್ಟ್‌, ಕೆಂಪು ಗಾಡಿ
ಅಷ್ಟೇ ಏಕೆ?
ಗುಲಾಬಿ ಕೆಂಪು,
ಕಂಡರಾಗದವಳಿಗೆ
ಈ ನಸುಗೆಂಪ್ಯಾಕೋ
ನಾಚುವಂತೆ ಮಾಡಿತ್ತು
ಮತ್ತೆ ಮತ್ತೆ ನೋಡುತ್ತಲೇ ಇದ್ದಳು
ತೋಳ ಮೇಲೆ
ಅಚ್ಚೊತ್ತಿದ್ದ ಬೆಚ್ಚನೆಯ
ಅವನ ಕಿವಿಯ.

Tuesday, August 19, 2008

‘............’

ದಿನ ರಾತ್ರಿ

ಹುಟ್ಟಿ-ಸತ್ತು

ಗೆದ್ದು-ಸೋತ

ಭಾವನೆಗಳಿಗೆಲ್ಲ

ಅಕ್ಷರಗಳ ಶ್ರದ್ಧಾಂಜಲಿ ಅರ್ಪಿಸಿ

ಮನಸು ತೊಳೆದುಕೊಳ್ಳುತ್ತಾಳೆ

***

ಕೂಡಿಟ್ಟ ಹೂಡಿಟ್ಟ

ಮನಸ್ತಾಪವನ್ನೆಲ್ಲ

ಒಟ್ಟು ಮಾಡಿ

ಆಗೊಮ್ಮೆ ಈಗೊಮ್ಮೆ

ಸ್ಫೋಟಿಸುತ್ತಾನೆ

***

ಇಬ್ಬರದೂ

ದಾಖಲಾಗುತ್ತದೆ

ಪುಟಗಳ ಮೇಲೆಯೇ

ಅವಳದು

ಬಿಳಿ ಪುಟಗಳ ಮೇಲೆ

ಅವನದು

ಬಣ್ಣವಿಲ್ಲದ

ಪುಟಗಳ ಮೇಲೆ

Monday, August 18, 2008

ಕಾಮಾಖ್ಯ ಎಂಬ ಕಣಸು


ಯಾವ ನೀರೋ ಗೊತ್ತಿಲ್ಲ. ಹೋಗುತ್ತಲೇ ಇತ್ತು ಹರಿದಂತೂ. ಆ ಹರಿವಿಗೂ ಇರವಿಗೂ ಪುರಾವೆ, ಬಣ್ಣ ಬದಲಿಸಿದ್ದ ಮಣ್ಣ ದಾರಿ. ಮೂರು ಸಂಜೆ ಮೂರು ಕಲ್ಲುಗಳಡಿ, ಮಂಜಹನಿಗಳೊಂದಿಗೆ ಮುನಿಸಿಕೊಳ್ಳುತ್ತಲೇ ಚಾಚುತ್ತಿತ್ತು ಬೆಂಕಿ ನಾಲಗೆ. ಹತ್ತು-ಹನ್ನೊಂದರ ಎಳೆ ಬಾಲೆ. ಕಾಗದದ ಊದುಗೊಳವಿ ಅರ್ಧದಲ್ಲೇ ಅವಳ ಉಸಿರ ಕಸಿದು ಬೆಂಕಿಯ ಮೊಂಡಾಟಕ್ಕೆ ಹಾಕುತ್ತಿತ್ತು ರುಜು.

ಎಳೆಬೆರಳಿನಿಂದ ಎಳೆಮೀನ ಮೈ ಸವರಿ, ಸುರಿಸುತ್ತಿದ್ದಳು ಜೊಲ್ಲು ; ಅದೆಂಥದೋ ಕಲಿಸಿಟ್ಟ ಹಿಟ್ಟಿನಲ್ಲಿ ಮೀನ ಮುಳುಗಿಸುತ್ತ. ಏಳಿಸುತ್ತ. ತೇಲಿಸುತ್ತ-ಏಳೆಂಟರ ಹುಡುಗಿ.

ಬಣ್ಣಗೆಟ್ಟ ಬಾಣಲೆಯಲ್ಲಿ ಕರಕಲಿಟ್ಟ ಎಣ್ಣೆ ಕಾಯ್ದು, ಉಗಿ ಬರುವ ಹಾದಿಯನ್ನೇ ಕಾಯುತ್ತಿದ್ದ ಐದಾರರ ಪೋರ. ಅವನೊಂದಿಗೆ ಕಾಯುತ್ತಿದ್ದರು ನೂರಾರು ಜನರು ಉಗಿಬಂಡಿಯ ಹಾದಿಯನ್ನೇ.

ಆ ವರ್ಷದ ಕೂಸೆಂದರೆ ಅದಕೇನೋ ಪ್ರೀತಿಯೋ... ಕಟ್ಟಿದ ಗೂಟ ಜೀಕಿ ಜೀಕಿ, ಕೂಸಿನ ಕಿವಿಗೆ ಕಚಗುಳಿ ಇಡುತ್ತಿತ್ತು ಮರಿಕುರಿ. ಅದರ ಕಿವಿ ಹಿಡಿಯಲು ಹವಣಿಸುತ್ತಿದ್ದವು ಕುಡಿಬೆರಳಗೊಂಚಲು. ಕಿವಿ ಕೈಜಾರಿದಾಗಲೆಲ್ಲ ಕೂಸು ಬಾಲಭಾಷೆಯಲ್ಲಿ ಜೋರಾಗಿಯೇ ಬೈಯ್ಯುತ್ತಿತ್ತೇನೊ. ಬೆದರಿದಂತೆ ನಟಿಸುತ್ತ ಕೂಸಿನ ಕೈಗೆ ಕಿವಿಯೊಪ್ಪಿಸಿ ನಿಂತುಬಿಡುತ್ತಿತ್ತು. ಇದೋ ಶರಣು ನಿನಗೆ ಎಂದು.

ಪಕ್ಕದಲ್ಲೇ ವಿಧಿಯಿಲ್ಲದೇ ಹೊದ್ದಿತ್ತು ಮುರುಕು ಚಾಪೆಯನ್ನ ಆ ಹರಕು ಗುಡಿಸಲು. ಅಸ್ಸಾಮಿ ಲಿಪಿ ಪಕ್ಕದಲ್ಲೇ ಅರ್ಧ ಕೆನ್ನೆ, ಅರ್ಧ ಕಣ್ಣು, ಅರ್ಧ ತುಟಿ-ಮೂಗು ತೋರಿಸುತ್ತ ರಟ್ಟಿಗಂಟಿಕೊಂಡಿದ್ದವಳ ನೋಟ ಮುಗಿಲ ತಟ್ಟಿತ್ತು. ಆ ಅರ್ಧಮುಖಿಯ ಪಕ್ಕದಲ್ಲೇ ನೀಲಿಬಣ್ಣದ ಪ್ಲಾಸ್ಟಿಕ್ ನೋಡುತ್ತಿತ್ತು ಅದೇ ನೀಲಾಕಾಶವನ್ನೇ. ಬಾಗಿಲ ಪರದೆಯಂತೆ ಇಳಿಬಿದ್ದ ಅದ್ಯಾರದೋ ಬಾಂದನಿ ದುಪಟ್ಟಾ ; ಮೈತುಂಬ ಮಾಸಿದ ಮುತ್ತು, ಕನ್ನಡಿ ಚೂರುಗಳ ಅಂಟಿಸಿಕೊಂಡು, ಗಾಳಿಯೊಂದಿಗೆ ಬೆಳೆಸಿತ್ತು ಗೆಳೆತನ.

ಕಾಗದದ ಊದುಗೊಳವಿಗೆ ವಿರಾಮ ನೀಡಿತ್ತು ಮಂಜುಹನಿ ಸರಿದು. ಮೂರು ಕಲ್ಲೊಳಗೇ ಮೂಲೋಕ ಸುಡುವಂತೆ ಆವರಿಸಿಕೊಂಡಿತ್ತು ಜ್ವಾಲೆ. ಕಾಯ್ದಿತ್ತು ಎಣ್ಣೆ. ಮುಗಿದಿತ್ತು ಮರಿಕುರಿ ಚಿನ್ನಾಟ. ಹಿಟ್ಟುಮೈ ಎಳೆಮೀನುಗಳು ಒಪ್ಪಿದ್ದವು ಬಾಣಲೆಗಿಳಿಯಲು. ನಿಸ್ತೇಜ ಕಾಯಹೊತ್ತು. ಈ ಜೀವ ಮುಕ್ತಿ ಕಾಣುವುದೇ ಹೀಗೆಂದು.

ಸುರಾದೇವಿಗೆ ಸೆರೆಯಾಗಿ, ತೆರೆದರ್ಧ ಎದೆಯಲ್ಲಿ ತೂರಾಡುತ್ತ ಗುಡಿಸಲ ಬದಿಗೆ ಬಂದುನಿಂತ ನಲವತ್ತರವ. ಅವನ ಮೊಂಡು ಮೂಗು ಎಳೆದಿತ್ತು ಆ ಬಿದಿರು ಕಾಲುಗಳನ್ನ ಕರಿದ ಮೀನಿನತ್ತ. ಒಲೆಯೆದುರು ಕುಕ್ಕರ ಗಾಲಿನಲ್ಲಿ ಕುಳಿತವನೇ, ಎರಡೂ ಕೈಚಾಚಿ ಅಗ್ನಿಪ್ರಮಾಣ ಮಾಡಿಬಿಟ್ಟ; ತಂಗಳನ್ನಕ್ಕೆ ಕರಿದ ಮೀನು ಬಾಡಿಸಿಕೊಂಡು ಸ್ವಾಹ ಎನ್ನುವುದೇ ಈವತ್ತು ಎಂದು.

ಕರಿದ ಮೀನಿನ ಪರಿಮಳಕ್ಕೆ ಮುರುಕು ಗುಡಿಸಲಿನಲ್ಲಿದ್ದ ಜೀವಗಳೆರಡೂ ಮಿಸುಕಾಡಿದಂತಾಯ್ತು. ಸ್ವಲ್ಪ ಹೊತ್ತಿಗೆ ವಾರೆನೋಟ ಬೀರಿತು ಬಾಂದನಿ ದುಪಟ್ಟಾ. ಸುಮಾರು ಮೂವತ್ತೆರಡು-ಮೂವತ್ತೈದರವಳ ಹಿಂದಿನಿಂದ ಐವತ್ತು ಕಳೆದ ದೇಹವೊಂದು ಇಣುಕಿತು. ಅವಳ ಕೈಗೆ ಇಪ್ಪತ್ತರ ಎರಡು ನೋಟು ತುರುಕಿ, ಮಾಯವಾಯಿತು ತಿರುಗಿಯೂ ನೋಡದೆ.

ಅಮ್ಮನ ಬೆಚ್ಚಗೆದೆಗೆ ಕಾದು ಕುಳಿತ ವರ್ಷದ ಕಂದ ಸೂಸಿತ್ತು ಹರ್ಷ. ಅವಳ ಕೈತುತ್ತಿಗೆ ಕಾಯ್ದಿದ್ದವು ಒಟ್ಟು ಆರು ಜೊತೆ ಕಣ್ಣುಗಳು ; ಮಮತೆಯಿಂದಲ್ಲ ಇರುವುದೊಂದೇ ತಟ್ಟೆಯೆಂದು. ಅನ್ನದ ಪಾತ್ರೆಯನ್ನೇ ಆಕ್ರಮಿಸಿದ ನಲ್ವತ್ತರ ಕೈ-ಕಣ್ಣುಗಳಿಗೆ ಅರಳುಗಣ್ಣಿನ ಮಕ್ಕಳು, ಮನಸ ಮುದುಡಿ ಕನಸ ಅರಳಿಸುವವಳು ಕಾಣಲೇ ಇಲ್ಲ. ಒಣ ಅನ್ನ ಕರಿದ ಮೀನು ನುಂಗಿದವನಿಗೆ ಕಂಡಿದ್ದು ಅವಳ ಕೈಯಲಿದ್ದ ಇಪ್ಪತ್ತರ ನೋಟುಗಳು. ಕಿತ್ತುಕೊಂಡ ಒಂದು ನೋಟಿನೊಂದಿಗೆ ಮತ್ತೆ ಸುರೆಯ ಸೆರೆಗೆ ಬೀಳಲು ಹೊರಟೇ ಹೋದ, ಅರಳು ಕಂಗಳ ಕಡೆಗಣಿಸಿ.

ಅವಳೋ ಮತ್ತೆ ಒಡೆದ ಕನ್ನಡಿ ತುಂಡನ್ನ ತನ್ನ ಕಾಲುಗಳ ಮಧ್ಯೆ ಹಿಡಿದಿಟ್ಟು, ಹುರ್ರೆದ್ದ ಕೂದಲು ಬಾಚುತ್ತ ಗುನುಗುನಿಸತೊಡಗಿದಳು ಅಸ್ಸಾಮಿ ಚಿತ್ರಗೀತೆಯೊಂದನ್ನ. ಹೊಟ್ಟೆ ತುಂಬಿದ ಮಕ್ಕಳು ಹಿಟ್ಟು ಚೆಲ್ಲಿದಂತೆ ಬೆಳದಿಂಗಳ ನಗೆ ಹೊತ್ತು, ಆಗಾಗ ಗಂಟುಮುಖ ಹಾಕಿ ಪ್ರಯತ್ನಿಸುತ್ತಿದ್ದರು ಗೋಡೆಗೆ ನಿಲ್ಲಿಸಿದ್ದ ರೈಲುಗಾಲಿಗಳ ಉರುಳಿಸಲು.

ಇತ್ತ ಕಾಮಾಖ್ಯ ಎಕ್ಸ್‌ಪ್ರೆಸ್ ಎಂದು ಬರೆದುಕೊಂಡ ರೈಲು ನಿಧಾನವಾಗಿ ಬಂದು ನಿಂತಿತು ನಮ್ಮೆದುರಿಗೆ. ಕಾಯ್ದಿರಿಸಿದ್ದ ಜಾಗದಲ್ಲಿ ಕುಳಿತಾಗ ನನಗರಿವಿಲ್ಲದ ನಿಟ್ಟುಸಿರೊಂದು ಕ್ಷಣ ಮಾತ್ರ ಕಣ್ಣು ಮುಚ್ಚಿ ಕಣ್ಣು ತೆರೆಯಿಸಿತು. ಹಿಂದೆ ಸರಿಸುತ್ತ ಸರಿಸುತ್ತ ಹೋಯಿತು ಎಳೆಮೀನುಹುಡುಗಿಯ ಸಂಸಾರವನ್ನ ನನ್ನ ರೈಲು ಕಿಟಕಿ. ಕ್ರಮೇಣ ಅವರೆಲ್ಲ ಮಾಯವಾಗಿ ಗೋಚರಿಸತೊಡಗಿದವು ಅವರ ಆಕೃತಿಗಳು. ಆನಂತರ ಬರೀ ಅವರು ತೊಟ್ಟ ಬಟ್ಟೆಗಳು; ಪುಟ್ಟ ಪುಟ್ಟ ಬಣ್ಣಬಿಂದುಗಳಂತೆ. ಕಣಗಳಂತೆ ಕರಗಿ ಕರಗಿ ಕಾಣದಾದರು.

ಕಣ್ಣು ಮುಚ್ಚಿ ಕಣ್ಣು ತೆಗೆಯುವುದರೊಳಗೆ ಹಸಿರು ಚಾದರ ಹೊದ್ದ ಬೆಟ್ಟಗಳು ಆಳ ನಗೆ ಬೀರಿ ಹಿಂದೆ ಹಿಂದೆ ಮರೆಯಾಗತೊಡಗಿದವು. ಆ ಹೊತ್ತಿಗೆ ಸರಿಯಾಗಿ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ'. ಪಹಾಡಿ ರಾಗದಲ್ಲಿ ಬಂಧಿಯಾದ ಅಕ್ಕನ ವಚನ ಸುಲಲಿತವಾಗಿ ಹೊರಹೊಮ್ಮತೊಡಗಿತು ಮಲ್ಲಿಕಾರ್ಜುನ್ ಮನ್ಸೂರರ ಶಾರೀರದಿಂದ. ಅರಳಿದ ನನ್ನ ಮುಖ ನೋಡಿ ಅಪ್ಪ ಇನ್ನೂ ಹೆಚ್ಚಿಸಿದರು ವಾಕ್ಮನ್ನಿನ ವಾಲ್ಯೂಮ್‌ನ್ನ.

ಅಕ್ಕನ ವಚನದೊಳಗೆ ಒಂದಾಗಿ ಪಹಾಡಿ ಸುತ್ತುತ್ತ ಸಾಗಿತು ನಮ್ಮ ರೈಲು, ನನಗೋ ಬೇಗ ಕೊಲ್ಕತ್ತ ತಲುಪಿ, ಹರಿಪ್ರಸಾದ್ ಚೌರಾಸಿಯಾರ ಪಹಾಡಿ ಧುನ್, ಬೇಗಂ ಅಖ್ತರ್, ಗಿರಿಜಾದೇವಿಯ ಠುಮ್ರಿ, ಠಪ್ಪಾ ಕೆಸೆಟ್ ಕೊಂಡುಕೊಳ್ಳುವ ಆತುರ. ಅದಕ್ಕಿಂತ ಮಿಗಿಲು ಅಮೀರ್ ಖಾನ್, ಬಿಸ್ಮಿಲ್ಲಾಖಾನ್, ಪರ್‍ವೀನ್ ಸುಲ್ತಾನಾ, ಮಷ್ಕೂರ್ ಅಲಿಖಾನ್, ರಶೀದ್‌ಖಾನ್‌ರ ಪಾದಸ್ಪರ್ಶಿಸಿದ ನೆಲ ನೋಡುವ ಕಾತುರ.

ನಮ್ಮ ರೈಲು ಪಹಾಡಿ ಸುತ್ತಿ-ಸುಳಿದು ಬ್ರಹ್ಮಪುತ್ರೆಯ ಸೆರಗ ತೋರಿಸುವ ಉತ್ಸಾಹದಲ್ಲಿ ಒಂದೇ ಸಮ ಓಡುತ್ತಿತ್ತು. ಓಡುತ್ತಿತ್ತು. ಆಗೊಮ್ಮೆ ಈಗೊಮ್ಮೆ ಮಧ್ಯಸಪ್ತಕದ ಷಡ್ಜ್‌ಕ್ಕೆ ಸ್ವರಹೊಂದಿಸಿ. ತನ್ನ ಗಾಲಿಗಳಲ್ಲಿ ಲಯ ಕಟ್ಟಿಕೊಂಡು.

also see

೧೧೪೧" href="http://kendasampige.com/article.php?id=

Monday, August 11, 2008

ಹೊತ್ತಲ್ಲದ ಹೊತ್ತಿನಲ್ಲಿ ರಾಗ ದೇಶ್‌. .

ಇನ್ನೂ ಕಾಡುತ್ತಲೇ ಇದೆ ಅವ ಹೇಳಿದ್ದು. ಮೊದಲನೇ ಸಲವಂತೇನಲ್ಲ. ಆಗಾಗ ಹೀಗೆ ಹೇಳುತ್ತಲೇ, ಮನಸ್ಸು ನೋಯಿಸುತ್ತಾ ಕಣ್ಣ ತೋಯಿಸುತ್ತಾನೆ.... ‘ಹೊತ್ತಿಲ್ಲದ ಹೊತ್ತಿನಲ್ಲಿ ನಿನ್ನದೇ ಒಂದು ರಾಗ’ ಎಂದು

`ನೋಡು, ನೋಡು ಒಮ್ಮೆ ತೆಳು, ಒಮ್ಮೆ ಬಿಳಿ, ಇನ್ನೊಮ್ಮೆ ಕಪ್ಪು ಸೆರಗ ಬೀಸುವ ಆ ಮೋಡದ ನಡಿಗೆಯಲ್ಲೂ ಅದೆಂಥ ಗಾಂಭಿರ್ಯ. ಪಟಪಟನೆ ಬಡಿವ ರೆಕ್ಕೆಗೂ, ಬೀಸುವ ಗಾಳಿಗೂ ಅದೆಂಥ ತಾದಾತ್ಮ್ಯ . ಮಲ್ಲಿಗೆಯ ಬಳ್ಳಿಯಲ್ಲಿಯೂ ಧ್ಯಾನಸ್ಥ ಭಾವ. ಅಷ್ಟೇ ಯಾಕೆ ಇಲ್ನೋಡು ನಿನ್ನ ಮುಂಗುರುಳಿಗೂ, ಕಣ್ಣರೆಪ್ಪೆಗಳಿಗೂ ವಿಲಂಬಿತ ಗತಿ' ಅವ ಹೀಗೆ ಹೇಳುತ್ತಲೇ ಹುಲ್ಲಮೇಲಿನ ಮಂಜಹನಿ ಫೋಕಸ್ ಮಾಡಲು ಸರ್ಕಸ್ ಮಾಡುತ್ತಿರುತ್ತಾನೆ ದಿನವೂ. ಬೆಳ್ಳಂಬೆಳಗಿನ ಹೊತ್ತಿನ ನಿತ್ಯದ ಕಾಯಕ ಅವನಿಗಿದು.

***

ದೇಸ್ ರಾಗದ ಆಲಾಪ ಮುಗಿಸಿದ ನನ್ನ ಮನಸೇಕೋ ಒಮ್ಮೆಲೆ ವಿಲಂಬಿತ್ ಬಿಟ್ಟು ಧೃತ್ ಬಂದಿಶ್‌ನೆಡೆ ಹೊರಳುತ್ತದೆ. 'ದೇಖೋ ಸಖೀ ಬರಸನ ಕೋ ಆಯಿ ಬದರಾ. . . ಉಠಾವನ್‌‌ನ ಶೈಲಿಗೆ ಅವನ ಬಲಗೈ ತಾಳ ಹಾಕಲು ತೊಡಗುತ್ತದೆಯಾದರೂ . . .ಯಾಕೋ ತಟಸ್ಥವಾಗುತ್ತದೆ. ಹೌದು. ತಾನ್‌, ಸರಗಮ್‌, ಖಟ್ಕಿ, ಮುರ್ಕಿಯಂಥ ಯಾವ ಮೆಹನತ್‌ನ್ನೂ ಅವನು ಇತ್ತೀಚೆಗೆ ಆಸ್ವಾದಿಸುತ್ತಿಲ್ಲ. ಮಂದ್ರಸಪ್ತಕದಿಂದ ಮಧ್ಯಮಕ್ಕೆ. ಮಧ್ಯದಿಂದ ಮತ್ತೆ ಮಂದ್ರಕ್ಕೆ. ಒಂದೊಂದು ಸ್ವರವನ್ನು ಶ್ರದ್ಧೆಯಿಂದ ಆರಾಧಿಸುತ್ತ, ಪ್ರೇಮದಿಂದ ಒಲಿಸಿಕೊಳ್ಳುತ್ತ, ಮುಂದೆ ತಲುಪುವ ಸ್ವರಸ್ಪರ್ಶದ ಸೂಚನೆ ನೀಡುತ್ತಾ ಸಾಗುವ ರಾಗಧಾರಿಯೇ ಅವನಿಗಿಷ್ಟ. ಖಾಲಿ ಆಲಾಪ್. ಆಲಾಪ್‌. . . !

ನಾಭಿಯಿಂದ ಹೊರಡುವ ಶಬ್ದಕ್ಕೆ ಅವ ಅದೆಷ್ಟೋ ಸಲ ಹೊಟ್ಟೆಗೆ ಕಿವಿಹಚ್ಚಿ ಕಣ್ಣು ಅರಳಿಸಿದ್ದಾನೆ. ಶ್ರುತಿ ಒಡಲೊಳಗೆ ಸ್ವರ ಹೊಕ್ಕು, ಸ್ವರದ ತೆಕ್ಕೆಯೊಳಗೆ ಶ್ರುತಿ ಸೇರಿದಾಗ ವಿವರಿಸಲಾಗದ ಅದೆಂಥದ್ದೋ ಅನುಭವಕ್ಕೆ ಪುಳಕಗೊಂಡಿದ್ದನ್ನು ನಾನೇ ಗಮನಿಸಿದ್ದೇನೆ ಕೆಲ ಸಾರಿ. ಆಗೆಲ್ಲಾ ಮೆಲ್ಲಗೆ ಮೀಸೆಯಡಿ ನಕ್ಕಂತೆಯೂ. ಪ್ರೀತಿಯಿಂದ ನಾದಸುಖ ಸವಿದಂತೆಯೂ, ಕ್ಷಣಾರ್ಧದಲ್ಲೇ ಅದು ಮಾಯದ ಕುದುರೆಯೇರಿದಂತೆಯೂ. ಅದೆಲ್ಲ ಇನ್ನೂ ನನ್ನೆದೆ ಬೆಚ್ಚಗಾಗಿಸುತ್ತಲೇ ಇರುತ್ತದೆ.

ಮಂದ್ರಪಂಚಮಕ್ಕಿಳಿದು ಶ್ರುತಿ ಹೊಂದಿಸಲು ಧ್ವನಿಪೆಟ್ಟಿಗೆ ಗುದ್ದಾಡುತ್ತಿದ್ದಾಗ, ಕತ್ತೆತ್ತಿ ಮುಖವನ್ನೊಮ್ಮೆ ನೋಡಿ ' ಅರೆ ಖೂಬ್ ಖಾನಾ ಖೂಬ್ ಗಾನಾ' ಎಂದು ಅವ ಮೆದುಪೆಟ್ಟು ಕೊಟ್ಟಿದ್ದೂ ಮರೆಯದ ನೆನಪೇ. . .

***

ಅವನ ಲೆನ್ಸ್ ಫೋಕಸ್ ಆಗುವಷ್ಟೊತ್ತಿಗೆ ಬೆಳಕ ಚಿಮ್ಮುವವ ಮೋಡದ ಮರೆಯಿಂದ ಮುದ್ದುನಗೆ ಚೆಲ್ಲುತ್ತಿರುತ್ತಾನೆ. ಹೂಂ. . . ಇವನಿಗಂತೂ ಪುರುಸೊತ್ತೇ ಇಲ್ಲ ಎಂದು ಗೊಣಗುತ್ತಾ ಲೆನ್ಸ್ ಕ್ಯಾಪ್ ಹಾಕಿ, ಮತ್ತೆ ಇದೆಯಲ್ಲ ನಾಳೆ ... ಎಂದವನೇ 'ಕಣೆ ಮಾ ಕಾಫಿ ಪ್ಲೀಸ್‌ . . .' ಎಂದು ದಡದಡನೆ ಮಟ್ಟಿಲಿಳಿದುಬಿಡುತ್ತಾನೆ ಕ್ಯಾಮೆರಾ ಕಣ್ಣಿಗ. ನನಗಿಂತ ಮೊದಲು, ನನ್ನ ದೇಸ್ ರಾಗದ ತಾನ್ ಒಂದು ಆವರ್ತನ ಮುಗಿಯುವ ಮುಂಚೆಯೇ ಕಾಫಿಗಿಡಲು ಮುಂದಾಗಿರುತ್ತಾನೆ. 'ತೋಡಿ, ಅಹೀರ್‌ಭೈರವ್, ಕೋಮಲ್ ರಿಶಭ್ ಆಸಾವರಿ, ವಿಭಾಸ್‌ ಆಹಾ... ಇನ್ನೂ ಅದೆಷ್ಟೋ ಬೆಳ್ಳಂಬೆಳಗಿನ ರಾಗಗಳನ್ನು ಬಿಟ್ಟು, ಬಿಟ್ಟೂ ಬಿಡದ ಸೋನೆ ಮಳೆಯಂತೆ, ನಿಷೆ ಇಳೆಗಿಳಿದರೂ ಇನಿಯನ ದನಿಕೇಳದ ಪ್ರಿಯತಮೆಯ ಹಾಗೆ, ಅದ್ಯಾಕೆ ಬರೀ ದೇಸ್ ರಾಗದಲ್ಲೇ ಸುತ್ತತಿದ್ದೀಯಾ?' ಕೇಳಿದ್ದನ್ನೆ ಮತ್ತೆ ಮತ್ತೆ ಕೇಳುತ್ತಲೇ ಇರುತ್ತಾನೆ.

ಬಿಜಲಿ ಚಮಕ ಚಮಕ ಡರ ಪಾವೆ. . .

ಅಂತರಾದ ಲಹರಿ ಬಂದಾಗ, ಧೃತ್ ಗತಿಯಲ್ಲಿ ನೊರೆ ಉಕ್ಕಿಸಿರುತ್ತದೆ ಅವನಿಟ್ಟ ಕಾಫಿ. 'ಸೋನೆ ಮಳೆಗಿನ್ನೂ ಇನ್ನೂ ಎರಡು ತಿಂಗಳಲ್ವೆ?' ಮಸುಕಾಗಿ ಸಿಕ್ಕ ಮಂಜ ಮುತ್ತೊಂದನ್ನು ಹೊಳೆಯುವಂತೆ ಮಾಡುತ್ತ, ಸ್ವಪಾಕ ಅನುಭವಿಸುತ್ತ ಕೇಳುತ್ತಾನೆ ಅವ.

'ಹೌದು. ಏನೀಗ. . .? ಎಂದು ಕತ್ತುಹೊರಳಿಸಿದ ನನ್ನ ಕಣ್ಣನೊಮ್ಮೆ ನೋಡಿ,

'ನಮ್ಮ ಮನೆ, ಮಾಳಿಗೆ, ಗಾಳಿಯಲ್ಲೆಲ್ಲ ಸೋನೆ ಮಳೆಯದೇ ನಾದ, ಲಯ, ಏನೆಲ್ಲ...' ಎನ್ನುತ್ತ ಥಟ್ಟನೆ ಕೇಳುತ್ತಾನೆ. . . ಥಾಟ್ ಕಾಫಿ. ದೇಸ್ ರಾಗ. ರಸ ಶೃಂಗಾರ, ಪಂಚಮ-ಷಡ್ಜ್ ಜೀವಸ್ವರ, ರಾತ್ರಿ ರಾಗ. . .?ಎಂದು ಒಂದೇ ಉಸಿರಿನಲ್ಲಿ ಹೇಳುತ್ತ ಮತ್ತದೇ ಮಬ್ಬು ಮಂಜಹನಿಯನ್ನು ಕಣ್ಣ ಬಿಂಬದೊಳಗೆ ತುಂಬಿಕೊಳ್ಳುತ್ತಾನೆ. ಪಂಚಮದಿಂದ ಶುದ್ಧ ನಿಷಾಧ. ಅಲ್ಲಿಂದ ಮಧ್ಯಮ ಷಡ್ಜ್ ಬಳಸಿ ರಿಷಭದ ಮೇಲೆ ಕೊಂಚ ವಿರಮಿಸಿ, ಮತ್ತೆ ಪುನಃ ಕೋಮಲ್‌ ನಿಷಾಧ, ಧೈವತ್ ಸ್ಪರ್ಶಿಸಿ, ಮಧ್ಯಮದ ಆಸರೆಯಿಂದ ಪಂಚಮಕ್ಕೆ ಬಂದು ದೇಸ್ ಲಾಸ್ಯವಾಡುವ ಹೊತ್ತಿಗೆ ಮಬ್ಬುಮಬ್ಬಾದ ಮಂಜಹನಿಗಳು ಸ್ಪಷ್ಟವಾಗುವಂತೆ ಕೈಚಳಕ ತೋರಿರುತ್ತಾನೆ.

ನಸುಕಿನಲ್ಲಿ ಹಿಡಿದ ಮಂಜುಹನಿಗಳನ್ನು, ಅವುಗಳನ್ನಪ್ಪಿದ ಎಲೆ-ಮೊಗ್ಗುಗಳನ್ನೆಲ್ಲ ಫೈಲಿನಲ್ಲುಳಿಸುತ್ತಿದ್ದಾಗಲೆಲ್ಲ, ಅವನಿಗರಿವಿಲ್ಲದೆಯೇ ಜೀಕುತ್ತಿರುತ್ತವೆ ಕಾಲುಗಳು. ಆ ಅಪೂರ್ವ ಖುಷಿ ದೇಸದ ಶೃಂಗಾರ ಕ್ಷಣಗಳಲ್ಲಿ ದಾಖಲಾಗುತ್ತದೆ.

***

ಪಿಯಾ ಘರ ಆಜಾ... ಬಂದಿಶನ್‌ನ ಕೊನೆ ಸಾಲಿನಿಂದ ಮತ್ತೆ ಸ್ಥಾಯಿಗೆ ಪ್ರವೇಶಿಸುತ್ತದೆ ನನ್ನ ಕಂಠ : ದೇಖೋಸಖಿ ಬರಸನ ಕೋ ಆಯಿ ಬದರಾ. . .ಎಂದು.

ಎರಡು ತಿಂಗಳ ಹಿಂದೆ ಡಾ.ಎಂ. ಬಾಲಮುರಳಿಕೃಷ್ಣ ಆಡಿದ ಮಾತುಗಳಿಗೆ ಎಳೆ ಹಚ್ಚಿ ತಿಹಾಯಿ ಹೇಳುತ್ತದೆ ದೇಸ್‌ನ ಲಹರಿ... ತಾವು ಹೊಸೆದ ಹೊಸ ರಾಗ ಆನಂದಂ ಕುರಿತು ಮಾತನಾಡುತ್ತಾ, 'ರಸ. ಭಾವ. ಸಮಯದ ಮುಸುಕು ಹಾಕಿ ಗಾಯಕನ ಲಹರಿಯಿಂದ ರಾಗವನ್ನು ಬಿಡಿಸಿ ಕಟ್ಟಿ ಹಾಕುವ ನಿಯಮವೇಕೆ? ಸಮಯ, ರಸ, ಭಾವದೊಳಗೆ ರಾಗವೇಕೆ ಬಂಧಿಯಾಗಬೇಕು? ಸಂಗೀತಕ್ಕಾಗಿ ಗಾಯಕ. ಗಾಯಕನಿಗಾಗಿ ಸಂಗೀತವಲ್ಲ. ಎಂದು ಬಾಲಮುರಳಿ ಮುಕ್ತಭಾವದಿಂದ ಹೇಳುತ್ತಿದ್ದಾಗ ಅವರಿಟ್ಟ ಪುಟ್ಟ ಕೆಂಪು ಬೊಟ್ಟು ಪ್ರಶ್ನಾರ್ಥಕವಾಗಿ ಅವರನ್ನೇ ನೋಡುತ್ತಿದ್ದುದು ಮಾಸದ ನೆನಪು.

ಮತ್ತೆ ನಾಳೆಯ ಮಂಜಹನಿಗಾಗಿ ಅವನ ಹುಡುಕಾಟ, ಅವನೋ ಶೃಂಗಾರರಸದಲ್ಲೇ ಜೀಕುತ್ತಿರಬೇಕು : 'ಹೊತ್ತಿಲ್ಲದ ಹೊತ್ತಿನಲ್ಲಿ ನಿನ್ನದೇ ಒಂದು ರಾಗ' ಎನ್ನುವುದನ್ನ ಮರೆತು. ನನಗೋ ಶೃಂಗಾರ, ಕರುಣ, ಗಂಭೀರ, ಬೀಭತ್ಸಾದಿ ರಸಯಾನದ ತವಕ...

also see

http://www.kendasampige.com/article.php?id=1053

Sunday, August 3, 2008

ಮನಸಿಗೂ ಅಂಗಿ...?ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೂವಿನಂಗಿ ಗೆರೆಯಂಗಿ
ಚುಕ್ಕಿಯಂಗಿ ಚಮಕಿಯಂಗಿ
ಚಳಿ ಅಂಗಿ, ಮಳೆ ಅಂಗಿ
ಎಲ್ಲದಕ್ಕೂ ಒಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಬಣ್ಣದ ಬಣ್ಣದ ಅಂಗಿ
ಒಗೆದು, ಒಣಗಿಸಿ, ತಿರುಚಿ
ಹಾಕಿಕೊಳ್ಳುವ ಅಂಗಿ
ಇದಿಲ್ಲದಿದ್ದರೆ ಇನ್ನೊಂದು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಹೊತ್ತೊತ್ತಿಗೊಂದು ಅಂಗಿ
ಅವರಂಗಿ ಇವರಿಗೆ
ಇವರಂಗಿ ಅವರಿಗೆ
ತೊಡಿಸುತ್ತ ತೊಡುತ್ತ

ಮರೆತಿದ್ದೇವೆ ಬೆತ್ತಲಾಗುವುದನ್ನ...

ಉಸಿರ ಪರಿಮಳವ ಕಟ್ಟಿಟ್ಟ ಅಂಗಿ
ಒತ್ತಾದ ಕಣ್ಣೀರ ಮುತ್ತಾಗಿಸಿದ ಅಂಗಿ
ನೀರ್‍ಮುತ್ತು ಸುರಿದು
ಕರಗಿದರೂ ಕಲ್ಲು
ಮೈಗಂಟಲೇಬೇಕು ಅಂಗಿ

ಮರೆತಿದ್ದೇವೆ ಬೆತ್ತಲಾಗುವುದನ್ನ...