Monday, August 11, 2008

ಹೊತ್ತಲ್ಲದ ಹೊತ್ತಿನಲ್ಲಿ ರಾಗ ದೇಶ್‌. .

ಇನ್ನೂ ಕಾಡುತ್ತಲೇ ಇದೆ ಅವ ಹೇಳಿದ್ದು. ಮೊದಲನೇ ಸಲವಂತೇನಲ್ಲ. ಆಗಾಗ ಹೀಗೆ ಹೇಳುತ್ತಲೇ, ಮನಸ್ಸು ನೋಯಿಸುತ್ತಾ ಕಣ್ಣ ತೋಯಿಸುತ್ತಾನೆ.... ‘ಹೊತ್ತಿಲ್ಲದ ಹೊತ್ತಿನಲ್ಲಿ ನಿನ್ನದೇ ಒಂದು ರಾಗ’ ಎಂದು

`ನೋಡು, ನೋಡು ಒಮ್ಮೆ ತೆಳು, ಒಮ್ಮೆ ಬಿಳಿ, ಇನ್ನೊಮ್ಮೆ ಕಪ್ಪು ಸೆರಗ ಬೀಸುವ ಆ ಮೋಡದ ನಡಿಗೆಯಲ್ಲೂ ಅದೆಂಥ ಗಾಂಭಿರ್ಯ. ಪಟಪಟನೆ ಬಡಿವ ರೆಕ್ಕೆಗೂ, ಬೀಸುವ ಗಾಳಿಗೂ ಅದೆಂಥ ತಾದಾತ್ಮ್ಯ . ಮಲ್ಲಿಗೆಯ ಬಳ್ಳಿಯಲ್ಲಿಯೂ ಧ್ಯಾನಸ್ಥ ಭಾವ. ಅಷ್ಟೇ ಯಾಕೆ ಇಲ್ನೋಡು ನಿನ್ನ ಮುಂಗುರುಳಿಗೂ, ಕಣ್ಣರೆಪ್ಪೆಗಳಿಗೂ ವಿಲಂಬಿತ ಗತಿ' ಅವ ಹೀಗೆ ಹೇಳುತ್ತಲೇ ಹುಲ್ಲಮೇಲಿನ ಮಂಜಹನಿ ಫೋಕಸ್ ಮಾಡಲು ಸರ್ಕಸ್ ಮಾಡುತ್ತಿರುತ್ತಾನೆ ದಿನವೂ. ಬೆಳ್ಳಂಬೆಳಗಿನ ಹೊತ್ತಿನ ನಿತ್ಯದ ಕಾಯಕ ಅವನಿಗಿದು.

***

ದೇಸ್ ರಾಗದ ಆಲಾಪ ಮುಗಿಸಿದ ನನ್ನ ಮನಸೇಕೋ ಒಮ್ಮೆಲೆ ವಿಲಂಬಿತ್ ಬಿಟ್ಟು ಧೃತ್ ಬಂದಿಶ್‌ನೆಡೆ ಹೊರಳುತ್ತದೆ. 'ದೇಖೋ ಸಖೀ ಬರಸನ ಕೋ ಆಯಿ ಬದರಾ. . . ಉಠಾವನ್‌‌ನ ಶೈಲಿಗೆ ಅವನ ಬಲಗೈ ತಾಳ ಹಾಕಲು ತೊಡಗುತ್ತದೆಯಾದರೂ . . .ಯಾಕೋ ತಟಸ್ಥವಾಗುತ್ತದೆ. ಹೌದು. ತಾನ್‌, ಸರಗಮ್‌, ಖಟ್ಕಿ, ಮುರ್ಕಿಯಂಥ ಯಾವ ಮೆಹನತ್‌ನ್ನೂ ಅವನು ಇತ್ತೀಚೆಗೆ ಆಸ್ವಾದಿಸುತ್ತಿಲ್ಲ. ಮಂದ್ರಸಪ್ತಕದಿಂದ ಮಧ್ಯಮಕ್ಕೆ. ಮಧ್ಯದಿಂದ ಮತ್ತೆ ಮಂದ್ರಕ್ಕೆ. ಒಂದೊಂದು ಸ್ವರವನ್ನು ಶ್ರದ್ಧೆಯಿಂದ ಆರಾಧಿಸುತ್ತ, ಪ್ರೇಮದಿಂದ ಒಲಿಸಿಕೊಳ್ಳುತ್ತ, ಮುಂದೆ ತಲುಪುವ ಸ್ವರಸ್ಪರ್ಶದ ಸೂಚನೆ ನೀಡುತ್ತಾ ಸಾಗುವ ರಾಗಧಾರಿಯೇ ಅವನಿಗಿಷ್ಟ. ಖಾಲಿ ಆಲಾಪ್. ಆಲಾಪ್‌. . . !

ನಾಭಿಯಿಂದ ಹೊರಡುವ ಶಬ್ದಕ್ಕೆ ಅವ ಅದೆಷ್ಟೋ ಸಲ ಹೊಟ್ಟೆಗೆ ಕಿವಿಹಚ್ಚಿ ಕಣ್ಣು ಅರಳಿಸಿದ್ದಾನೆ. ಶ್ರುತಿ ಒಡಲೊಳಗೆ ಸ್ವರ ಹೊಕ್ಕು, ಸ್ವರದ ತೆಕ್ಕೆಯೊಳಗೆ ಶ್ರುತಿ ಸೇರಿದಾಗ ವಿವರಿಸಲಾಗದ ಅದೆಂಥದ್ದೋ ಅನುಭವಕ್ಕೆ ಪುಳಕಗೊಂಡಿದ್ದನ್ನು ನಾನೇ ಗಮನಿಸಿದ್ದೇನೆ ಕೆಲ ಸಾರಿ. ಆಗೆಲ್ಲಾ ಮೆಲ್ಲಗೆ ಮೀಸೆಯಡಿ ನಕ್ಕಂತೆಯೂ. ಪ್ರೀತಿಯಿಂದ ನಾದಸುಖ ಸವಿದಂತೆಯೂ, ಕ್ಷಣಾರ್ಧದಲ್ಲೇ ಅದು ಮಾಯದ ಕುದುರೆಯೇರಿದಂತೆಯೂ. ಅದೆಲ್ಲ ಇನ್ನೂ ನನ್ನೆದೆ ಬೆಚ್ಚಗಾಗಿಸುತ್ತಲೇ ಇರುತ್ತದೆ.

ಮಂದ್ರಪಂಚಮಕ್ಕಿಳಿದು ಶ್ರುತಿ ಹೊಂದಿಸಲು ಧ್ವನಿಪೆಟ್ಟಿಗೆ ಗುದ್ದಾಡುತ್ತಿದ್ದಾಗ, ಕತ್ತೆತ್ತಿ ಮುಖವನ್ನೊಮ್ಮೆ ನೋಡಿ ' ಅರೆ ಖೂಬ್ ಖಾನಾ ಖೂಬ್ ಗಾನಾ' ಎಂದು ಅವ ಮೆದುಪೆಟ್ಟು ಕೊಟ್ಟಿದ್ದೂ ಮರೆಯದ ನೆನಪೇ. . .

***

ಅವನ ಲೆನ್ಸ್ ಫೋಕಸ್ ಆಗುವಷ್ಟೊತ್ತಿಗೆ ಬೆಳಕ ಚಿಮ್ಮುವವ ಮೋಡದ ಮರೆಯಿಂದ ಮುದ್ದುನಗೆ ಚೆಲ್ಲುತ್ತಿರುತ್ತಾನೆ. ಹೂಂ. . . ಇವನಿಗಂತೂ ಪುರುಸೊತ್ತೇ ಇಲ್ಲ ಎಂದು ಗೊಣಗುತ್ತಾ ಲೆನ್ಸ್ ಕ್ಯಾಪ್ ಹಾಕಿ, ಮತ್ತೆ ಇದೆಯಲ್ಲ ನಾಳೆ ... ಎಂದವನೇ 'ಕಣೆ ಮಾ ಕಾಫಿ ಪ್ಲೀಸ್‌ . . .' ಎಂದು ದಡದಡನೆ ಮಟ್ಟಿಲಿಳಿದುಬಿಡುತ್ತಾನೆ ಕ್ಯಾಮೆರಾ ಕಣ್ಣಿಗ. ನನಗಿಂತ ಮೊದಲು, ನನ್ನ ದೇಸ್ ರಾಗದ ತಾನ್ ಒಂದು ಆವರ್ತನ ಮುಗಿಯುವ ಮುಂಚೆಯೇ ಕಾಫಿಗಿಡಲು ಮುಂದಾಗಿರುತ್ತಾನೆ. 'ತೋಡಿ, ಅಹೀರ್‌ಭೈರವ್, ಕೋಮಲ್ ರಿಶಭ್ ಆಸಾವರಿ, ವಿಭಾಸ್‌ ಆಹಾ... ಇನ್ನೂ ಅದೆಷ್ಟೋ ಬೆಳ್ಳಂಬೆಳಗಿನ ರಾಗಗಳನ್ನು ಬಿಟ್ಟು, ಬಿಟ್ಟೂ ಬಿಡದ ಸೋನೆ ಮಳೆಯಂತೆ, ನಿಷೆ ಇಳೆಗಿಳಿದರೂ ಇನಿಯನ ದನಿಕೇಳದ ಪ್ರಿಯತಮೆಯ ಹಾಗೆ, ಅದ್ಯಾಕೆ ಬರೀ ದೇಸ್ ರಾಗದಲ್ಲೇ ಸುತ್ತತಿದ್ದೀಯಾ?' ಕೇಳಿದ್ದನ್ನೆ ಮತ್ತೆ ಮತ್ತೆ ಕೇಳುತ್ತಲೇ ಇರುತ್ತಾನೆ.

ಬಿಜಲಿ ಚಮಕ ಚಮಕ ಡರ ಪಾವೆ. . .

ಅಂತರಾದ ಲಹರಿ ಬಂದಾಗ, ಧೃತ್ ಗತಿಯಲ್ಲಿ ನೊರೆ ಉಕ್ಕಿಸಿರುತ್ತದೆ ಅವನಿಟ್ಟ ಕಾಫಿ. 'ಸೋನೆ ಮಳೆಗಿನ್ನೂ ಇನ್ನೂ ಎರಡು ತಿಂಗಳಲ್ವೆ?' ಮಸುಕಾಗಿ ಸಿಕ್ಕ ಮಂಜ ಮುತ್ತೊಂದನ್ನು ಹೊಳೆಯುವಂತೆ ಮಾಡುತ್ತ, ಸ್ವಪಾಕ ಅನುಭವಿಸುತ್ತ ಕೇಳುತ್ತಾನೆ ಅವ.

'ಹೌದು. ಏನೀಗ. . .? ಎಂದು ಕತ್ತುಹೊರಳಿಸಿದ ನನ್ನ ಕಣ್ಣನೊಮ್ಮೆ ನೋಡಿ,

'ನಮ್ಮ ಮನೆ, ಮಾಳಿಗೆ, ಗಾಳಿಯಲ್ಲೆಲ್ಲ ಸೋನೆ ಮಳೆಯದೇ ನಾದ, ಲಯ, ಏನೆಲ್ಲ...' ಎನ್ನುತ್ತ ಥಟ್ಟನೆ ಕೇಳುತ್ತಾನೆ. . . ಥಾಟ್ ಕಾಫಿ. ದೇಸ್ ರಾಗ. ರಸ ಶೃಂಗಾರ, ಪಂಚಮ-ಷಡ್ಜ್ ಜೀವಸ್ವರ, ರಾತ್ರಿ ರಾಗ. . .?ಎಂದು ಒಂದೇ ಉಸಿರಿನಲ್ಲಿ ಹೇಳುತ್ತ ಮತ್ತದೇ ಮಬ್ಬು ಮಂಜಹನಿಯನ್ನು ಕಣ್ಣ ಬಿಂಬದೊಳಗೆ ತುಂಬಿಕೊಳ್ಳುತ್ತಾನೆ. ಪಂಚಮದಿಂದ ಶುದ್ಧ ನಿಷಾಧ. ಅಲ್ಲಿಂದ ಮಧ್ಯಮ ಷಡ್ಜ್ ಬಳಸಿ ರಿಷಭದ ಮೇಲೆ ಕೊಂಚ ವಿರಮಿಸಿ, ಮತ್ತೆ ಪುನಃ ಕೋಮಲ್‌ ನಿಷಾಧ, ಧೈವತ್ ಸ್ಪರ್ಶಿಸಿ, ಮಧ್ಯಮದ ಆಸರೆಯಿಂದ ಪಂಚಮಕ್ಕೆ ಬಂದು ದೇಸ್ ಲಾಸ್ಯವಾಡುವ ಹೊತ್ತಿಗೆ ಮಬ್ಬುಮಬ್ಬಾದ ಮಂಜಹನಿಗಳು ಸ್ಪಷ್ಟವಾಗುವಂತೆ ಕೈಚಳಕ ತೋರಿರುತ್ತಾನೆ.

ನಸುಕಿನಲ್ಲಿ ಹಿಡಿದ ಮಂಜುಹನಿಗಳನ್ನು, ಅವುಗಳನ್ನಪ್ಪಿದ ಎಲೆ-ಮೊಗ್ಗುಗಳನ್ನೆಲ್ಲ ಫೈಲಿನಲ್ಲುಳಿಸುತ್ತಿದ್ದಾಗಲೆಲ್ಲ, ಅವನಿಗರಿವಿಲ್ಲದೆಯೇ ಜೀಕುತ್ತಿರುತ್ತವೆ ಕಾಲುಗಳು. ಆ ಅಪೂರ್ವ ಖುಷಿ ದೇಸದ ಶೃಂಗಾರ ಕ್ಷಣಗಳಲ್ಲಿ ದಾಖಲಾಗುತ್ತದೆ.

***

ಪಿಯಾ ಘರ ಆಜಾ... ಬಂದಿಶನ್‌ನ ಕೊನೆ ಸಾಲಿನಿಂದ ಮತ್ತೆ ಸ್ಥಾಯಿಗೆ ಪ್ರವೇಶಿಸುತ್ತದೆ ನನ್ನ ಕಂಠ : ದೇಖೋಸಖಿ ಬರಸನ ಕೋ ಆಯಿ ಬದರಾ. . .ಎಂದು.

ಎರಡು ತಿಂಗಳ ಹಿಂದೆ ಡಾ.ಎಂ. ಬಾಲಮುರಳಿಕೃಷ್ಣ ಆಡಿದ ಮಾತುಗಳಿಗೆ ಎಳೆ ಹಚ್ಚಿ ತಿಹಾಯಿ ಹೇಳುತ್ತದೆ ದೇಸ್‌ನ ಲಹರಿ... ತಾವು ಹೊಸೆದ ಹೊಸ ರಾಗ ಆನಂದಂ ಕುರಿತು ಮಾತನಾಡುತ್ತಾ, 'ರಸ. ಭಾವ. ಸಮಯದ ಮುಸುಕು ಹಾಕಿ ಗಾಯಕನ ಲಹರಿಯಿಂದ ರಾಗವನ್ನು ಬಿಡಿಸಿ ಕಟ್ಟಿ ಹಾಕುವ ನಿಯಮವೇಕೆ? ಸಮಯ, ರಸ, ಭಾವದೊಳಗೆ ರಾಗವೇಕೆ ಬಂಧಿಯಾಗಬೇಕು? ಸಂಗೀತಕ್ಕಾಗಿ ಗಾಯಕ. ಗಾಯಕನಿಗಾಗಿ ಸಂಗೀತವಲ್ಲ. ಎಂದು ಬಾಲಮುರಳಿ ಮುಕ್ತಭಾವದಿಂದ ಹೇಳುತ್ತಿದ್ದಾಗ ಅವರಿಟ್ಟ ಪುಟ್ಟ ಕೆಂಪು ಬೊಟ್ಟು ಪ್ರಶ್ನಾರ್ಥಕವಾಗಿ ಅವರನ್ನೇ ನೋಡುತ್ತಿದ್ದುದು ಮಾಸದ ನೆನಪು.

ಮತ್ತೆ ನಾಳೆಯ ಮಂಜಹನಿಗಾಗಿ ಅವನ ಹುಡುಕಾಟ, ಅವನೋ ಶೃಂಗಾರರಸದಲ್ಲೇ ಜೀಕುತ್ತಿರಬೇಕು : 'ಹೊತ್ತಿಲ್ಲದ ಹೊತ್ತಿನಲ್ಲಿ ನಿನ್ನದೇ ಒಂದು ರಾಗ' ಎನ್ನುವುದನ್ನ ಮರೆತು. ನನಗೋ ಶೃಂಗಾರ, ಕರುಣ, ಗಂಭೀರ, ಬೀಭತ್ಸಾದಿ ರಸಯಾನದ ತವಕ...

also see

http://www.kendasampige.com/article.php?id=1053

9 comments:

sunaath said...

ಶಾಸ್ತ್ರೀಯ ಸಂಗೀತ ನನಗೆ ತಿಳಿಯದು. ಆದರೆ ನಿಮ್ಮ ಲೇಖನದಲ್ಲಿಯ ಚೀಜುಗಳನ್ನು ಓದುತ್ತಿದ್ದಾಗ ಒಳ್ಳೆಯ ಸಂಗೀತ
ಕೇಳಿದಷ್ಟೇ ಸಂತೋಷವಾಗುತ್ತದೆ.

ಸುಶ್ರುತ ದೊಡ್ಡೇರಿ said...

ಕನ್ನಡಕ್ಕೆ ಹೀಗೆ ಸಂಗೀತ ಸ್ವರಗಳನ್ನ ಸೂಸೋ ಬ್ಲಾಗೊಂದು ಬೇಕಿತ್ತು..
ಮತ್ತೆ, ಅದೆಷ್ಟ್ ಚನಾಗ್ ಬರೀತೀರಾ ನೀವು..

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

ಸುನಾಥ ಕಾಕಾರಂತೆ, ನನಗೂ ಶಾಸ್ತ್ರೀಯ ಸಂಗೀತದ ಗಂಧಗಾಳಿಯಿಲ್ಲ. ಆದರೆ ಓದುತ್ತಿರುವಂತೆ ಎಲ್ಲೋ ಎನೋ ಶ್ರುತಿಮಿಡಿದಂತಾಗುವುದು!

shreedevi kalasad said...

@ ಸುನಾಥ್ ಅಂಕಲ್‌, ಸುಶ್ರುತ್, ತೇಜಸ್ವಿನಿ,
ನಿಮ್ಮ ಪ್ರೀತಿಯ ಓದಿಗೆ ನನ್ನ ಕಡೆಯಿಂದಲೂ ಅಷ್ಟೇ ಪ್ರೀತಿಯ ಧನ್ಯವಾದ.

ಹಳ್ಳಿಕನ್ನಡ said...

ನಾದಮಯ ಲೋಕವೆಲ್ಲ...
ತುಂಬಾ ಚೆನ್ನಾಗಿದೆ ಮೆಡಮ್
- ಮಂಜುನಾಥ ಸ್ವಾಮಿ

ಅರುಣ್ ಮಣಿಪಾಲ್ said...

ಸಂಗೀತ ಬರಹ ತುಂಬಾ ಚೆನ್ನಾಗಿತ್ತು ..;)..;)..)..
ಅಲ್ಲಾ ಅದೇಕೆ ಹೇಳಬೇಕೆಂದುಕೊಂಡಿದ್ದನ್ನ ಹೇಳದೆ ಉಳಿಸಿಕೊಂಡಿರಿ..ಅಷ್ಟು ಖಾಸಗಿಯಾಗಿದ್ದರೆ ನನಗೊಂದು ಇ ಅಂಚೆ ಮೂಲಕವಾದರು ಹೇಳಿ ಅಲ್ವಾ.ನನಗೂ ಸ್ಟಲ್ಪ ಅರ್ಥವಾದಂತಾಗುತ್ತದೆ...;);)my email id..arunkmanipal@gmail.com

shreedevi kalasad said...

@ ಮಂಜುನಾಥ ಸ್ವಾಮಿ, ಅರುಣ್ ಮಣಿಪಾಲ್ Thanks

dinesh said...

ಶಾಸ್ತ್ರೀಯ ಸಂಗೀತ ಕುರಿತಾದ ವಿವರಗಳ ಲೇಖನಗಳನ್ನು ಹೀಗೆ ಬರೆಯುತ್ತಿರಿ. ಕನ್ನಡದಲ್ಲಿ ಈ ಕುರಿತಾದ ಬರಹಗಳು ಬರುತ್ತಿರುವುದು ತುಂಬಾ ಕಡಿಮೆ. ಲೇಖನ ತುಂಬಾ ಚೆನ್ನಾಗಿದೆ.

shreedevi kalasad said...

Ok dinesh. thank u