Monday, August 18, 2008

ಕಾಮಾಖ್ಯ ಎಂಬ ಕಣಸು


ಯಾವ ನೀರೋ ಗೊತ್ತಿಲ್ಲ. ಹೋಗುತ್ತಲೇ ಇತ್ತು ಹರಿದಂತೂ. ಆ ಹರಿವಿಗೂ ಇರವಿಗೂ ಪುರಾವೆ, ಬಣ್ಣ ಬದಲಿಸಿದ್ದ ಮಣ್ಣ ದಾರಿ. ಮೂರು ಸಂಜೆ ಮೂರು ಕಲ್ಲುಗಳಡಿ, ಮಂಜಹನಿಗಳೊಂದಿಗೆ ಮುನಿಸಿಕೊಳ್ಳುತ್ತಲೇ ಚಾಚುತ್ತಿತ್ತು ಬೆಂಕಿ ನಾಲಗೆ. ಹತ್ತು-ಹನ್ನೊಂದರ ಎಳೆ ಬಾಲೆ. ಕಾಗದದ ಊದುಗೊಳವಿ ಅರ್ಧದಲ್ಲೇ ಅವಳ ಉಸಿರ ಕಸಿದು ಬೆಂಕಿಯ ಮೊಂಡಾಟಕ್ಕೆ ಹಾಕುತ್ತಿತ್ತು ರುಜು.

ಎಳೆಬೆರಳಿನಿಂದ ಎಳೆಮೀನ ಮೈ ಸವರಿ, ಸುರಿಸುತ್ತಿದ್ದಳು ಜೊಲ್ಲು ; ಅದೆಂಥದೋ ಕಲಿಸಿಟ್ಟ ಹಿಟ್ಟಿನಲ್ಲಿ ಮೀನ ಮುಳುಗಿಸುತ್ತ. ಏಳಿಸುತ್ತ. ತೇಲಿಸುತ್ತ-ಏಳೆಂಟರ ಹುಡುಗಿ.

ಬಣ್ಣಗೆಟ್ಟ ಬಾಣಲೆಯಲ್ಲಿ ಕರಕಲಿಟ್ಟ ಎಣ್ಣೆ ಕಾಯ್ದು, ಉಗಿ ಬರುವ ಹಾದಿಯನ್ನೇ ಕಾಯುತ್ತಿದ್ದ ಐದಾರರ ಪೋರ. ಅವನೊಂದಿಗೆ ಕಾಯುತ್ತಿದ್ದರು ನೂರಾರು ಜನರು ಉಗಿಬಂಡಿಯ ಹಾದಿಯನ್ನೇ.

ಆ ವರ್ಷದ ಕೂಸೆಂದರೆ ಅದಕೇನೋ ಪ್ರೀತಿಯೋ... ಕಟ್ಟಿದ ಗೂಟ ಜೀಕಿ ಜೀಕಿ, ಕೂಸಿನ ಕಿವಿಗೆ ಕಚಗುಳಿ ಇಡುತ್ತಿತ್ತು ಮರಿಕುರಿ. ಅದರ ಕಿವಿ ಹಿಡಿಯಲು ಹವಣಿಸುತ್ತಿದ್ದವು ಕುಡಿಬೆರಳಗೊಂಚಲು. ಕಿವಿ ಕೈಜಾರಿದಾಗಲೆಲ್ಲ ಕೂಸು ಬಾಲಭಾಷೆಯಲ್ಲಿ ಜೋರಾಗಿಯೇ ಬೈಯ್ಯುತ್ತಿತ್ತೇನೊ. ಬೆದರಿದಂತೆ ನಟಿಸುತ್ತ ಕೂಸಿನ ಕೈಗೆ ಕಿವಿಯೊಪ್ಪಿಸಿ ನಿಂತುಬಿಡುತ್ತಿತ್ತು. ಇದೋ ಶರಣು ನಿನಗೆ ಎಂದು.

ಪಕ್ಕದಲ್ಲೇ ವಿಧಿಯಿಲ್ಲದೇ ಹೊದ್ದಿತ್ತು ಮುರುಕು ಚಾಪೆಯನ್ನ ಆ ಹರಕು ಗುಡಿಸಲು. ಅಸ್ಸಾಮಿ ಲಿಪಿ ಪಕ್ಕದಲ್ಲೇ ಅರ್ಧ ಕೆನ್ನೆ, ಅರ್ಧ ಕಣ್ಣು, ಅರ್ಧ ತುಟಿ-ಮೂಗು ತೋರಿಸುತ್ತ ರಟ್ಟಿಗಂಟಿಕೊಂಡಿದ್ದವಳ ನೋಟ ಮುಗಿಲ ತಟ್ಟಿತ್ತು. ಆ ಅರ್ಧಮುಖಿಯ ಪಕ್ಕದಲ್ಲೇ ನೀಲಿಬಣ್ಣದ ಪ್ಲಾಸ್ಟಿಕ್ ನೋಡುತ್ತಿತ್ತು ಅದೇ ನೀಲಾಕಾಶವನ್ನೇ. ಬಾಗಿಲ ಪರದೆಯಂತೆ ಇಳಿಬಿದ್ದ ಅದ್ಯಾರದೋ ಬಾಂದನಿ ದುಪಟ್ಟಾ ; ಮೈತುಂಬ ಮಾಸಿದ ಮುತ್ತು, ಕನ್ನಡಿ ಚೂರುಗಳ ಅಂಟಿಸಿಕೊಂಡು, ಗಾಳಿಯೊಂದಿಗೆ ಬೆಳೆಸಿತ್ತು ಗೆಳೆತನ.

ಕಾಗದದ ಊದುಗೊಳವಿಗೆ ವಿರಾಮ ನೀಡಿತ್ತು ಮಂಜುಹನಿ ಸರಿದು. ಮೂರು ಕಲ್ಲೊಳಗೇ ಮೂಲೋಕ ಸುಡುವಂತೆ ಆವರಿಸಿಕೊಂಡಿತ್ತು ಜ್ವಾಲೆ. ಕಾಯ್ದಿತ್ತು ಎಣ್ಣೆ. ಮುಗಿದಿತ್ತು ಮರಿಕುರಿ ಚಿನ್ನಾಟ. ಹಿಟ್ಟುಮೈ ಎಳೆಮೀನುಗಳು ಒಪ್ಪಿದ್ದವು ಬಾಣಲೆಗಿಳಿಯಲು. ನಿಸ್ತೇಜ ಕಾಯಹೊತ್ತು. ಈ ಜೀವ ಮುಕ್ತಿ ಕಾಣುವುದೇ ಹೀಗೆಂದು.

ಸುರಾದೇವಿಗೆ ಸೆರೆಯಾಗಿ, ತೆರೆದರ್ಧ ಎದೆಯಲ್ಲಿ ತೂರಾಡುತ್ತ ಗುಡಿಸಲ ಬದಿಗೆ ಬಂದುನಿಂತ ನಲವತ್ತರವ. ಅವನ ಮೊಂಡು ಮೂಗು ಎಳೆದಿತ್ತು ಆ ಬಿದಿರು ಕಾಲುಗಳನ್ನ ಕರಿದ ಮೀನಿನತ್ತ. ಒಲೆಯೆದುರು ಕುಕ್ಕರ ಗಾಲಿನಲ್ಲಿ ಕುಳಿತವನೇ, ಎರಡೂ ಕೈಚಾಚಿ ಅಗ್ನಿಪ್ರಮಾಣ ಮಾಡಿಬಿಟ್ಟ; ತಂಗಳನ್ನಕ್ಕೆ ಕರಿದ ಮೀನು ಬಾಡಿಸಿಕೊಂಡು ಸ್ವಾಹ ಎನ್ನುವುದೇ ಈವತ್ತು ಎಂದು.

ಕರಿದ ಮೀನಿನ ಪರಿಮಳಕ್ಕೆ ಮುರುಕು ಗುಡಿಸಲಿನಲ್ಲಿದ್ದ ಜೀವಗಳೆರಡೂ ಮಿಸುಕಾಡಿದಂತಾಯ್ತು. ಸ್ವಲ್ಪ ಹೊತ್ತಿಗೆ ವಾರೆನೋಟ ಬೀರಿತು ಬಾಂದನಿ ದುಪಟ್ಟಾ. ಸುಮಾರು ಮೂವತ್ತೆರಡು-ಮೂವತ್ತೈದರವಳ ಹಿಂದಿನಿಂದ ಐವತ್ತು ಕಳೆದ ದೇಹವೊಂದು ಇಣುಕಿತು. ಅವಳ ಕೈಗೆ ಇಪ್ಪತ್ತರ ಎರಡು ನೋಟು ತುರುಕಿ, ಮಾಯವಾಯಿತು ತಿರುಗಿಯೂ ನೋಡದೆ.

ಅಮ್ಮನ ಬೆಚ್ಚಗೆದೆಗೆ ಕಾದು ಕುಳಿತ ವರ್ಷದ ಕಂದ ಸೂಸಿತ್ತು ಹರ್ಷ. ಅವಳ ಕೈತುತ್ತಿಗೆ ಕಾಯ್ದಿದ್ದವು ಒಟ್ಟು ಆರು ಜೊತೆ ಕಣ್ಣುಗಳು ; ಮಮತೆಯಿಂದಲ್ಲ ಇರುವುದೊಂದೇ ತಟ್ಟೆಯೆಂದು. ಅನ್ನದ ಪಾತ್ರೆಯನ್ನೇ ಆಕ್ರಮಿಸಿದ ನಲ್ವತ್ತರ ಕೈ-ಕಣ್ಣುಗಳಿಗೆ ಅರಳುಗಣ್ಣಿನ ಮಕ್ಕಳು, ಮನಸ ಮುದುಡಿ ಕನಸ ಅರಳಿಸುವವಳು ಕಾಣಲೇ ಇಲ್ಲ. ಒಣ ಅನ್ನ ಕರಿದ ಮೀನು ನುಂಗಿದವನಿಗೆ ಕಂಡಿದ್ದು ಅವಳ ಕೈಯಲಿದ್ದ ಇಪ್ಪತ್ತರ ನೋಟುಗಳು. ಕಿತ್ತುಕೊಂಡ ಒಂದು ನೋಟಿನೊಂದಿಗೆ ಮತ್ತೆ ಸುರೆಯ ಸೆರೆಗೆ ಬೀಳಲು ಹೊರಟೇ ಹೋದ, ಅರಳು ಕಂಗಳ ಕಡೆಗಣಿಸಿ.

ಅವಳೋ ಮತ್ತೆ ಒಡೆದ ಕನ್ನಡಿ ತುಂಡನ್ನ ತನ್ನ ಕಾಲುಗಳ ಮಧ್ಯೆ ಹಿಡಿದಿಟ್ಟು, ಹುರ್ರೆದ್ದ ಕೂದಲು ಬಾಚುತ್ತ ಗುನುಗುನಿಸತೊಡಗಿದಳು ಅಸ್ಸಾಮಿ ಚಿತ್ರಗೀತೆಯೊಂದನ್ನ. ಹೊಟ್ಟೆ ತುಂಬಿದ ಮಕ್ಕಳು ಹಿಟ್ಟು ಚೆಲ್ಲಿದಂತೆ ಬೆಳದಿಂಗಳ ನಗೆ ಹೊತ್ತು, ಆಗಾಗ ಗಂಟುಮುಖ ಹಾಕಿ ಪ್ರಯತ್ನಿಸುತ್ತಿದ್ದರು ಗೋಡೆಗೆ ನಿಲ್ಲಿಸಿದ್ದ ರೈಲುಗಾಲಿಗಳ ಉರುಳಿಸಲು.

ಇತ್ತ ಕಾಮಾಖ್ಯ ಎಕ್ಸ್‌ಪ್ರೆಸ್ ಎಂದು ಬರೆದುಕೊಂಡ ರೈಲು ನಿಧಾನವಾಗಿ ಬಂದು ನಿಂತಿತು ನಮ್ಮೆದುರಿಗೆ. ಕಾಯ್ದಿರಿಸಿದ್ದ ಜಾಗದಲ್ಲಿ ಕುಳಿತಾಗ ನನಗರಿವಿಲ್ಲದ ನಿಟ್ಟುಸಿರೊಂದು ಕ್ಷಣ ಮಾತ್ರ ಕಣ್ಣು ಮುಚ್ಚಿ ಕಣ್ಣು ತೆರೆಯಿಸಿತು. ಹಿಂದೆ ಸರಿಸುತ್ತ ಸರಿಸುತ್ತ ಹೋಯಿತು ಎಳೆಮೀನುಹುಡುಗಿಯ ಸಂಸಾರವನ್ನ ನನ್ನ ರೈಲು ಕಿಟಕಿ. ಕ್ರಮೇಣ ಅವರೆಲ್ಲ ಮಾಯವಾಗಿ ಗೋಚರಿಸತೊಡಗಿದವು ಅವರ ಆಕೃತಿಗಳು. ಆನಂತರ ಬರೀ ಅವರು ತೊಟ್ಟ ಬಟ್ಟೆಗಳು; ಪುಟ್ಟ ಪುಟ್ಟ ಬಣ್ಣಬಿಂದುಗಳಂತೆ. ಕಣಗಳಂತೆ ಕರಗಿ ಕರಗಿ ಕಾಣದಾದರು.

ಕಣ್ಣು ಮುಚ್ಚಿ ಕಣ್ಣು ತೆಗೆಯುವುದರೊಳಗೆ ಹಸಿರು ಚಾದರ ಹೊದ್ದ ಬೆಟ್ಟಗಳು ಆಳ ನಗೆ ಬೀರಿ ಹಿಂದೆ ಹಿಂದೆ ಮರೆಯಾಗತೊಡಗಿದವು. ಆ ಹೊತ್ತಿಗೆ ಸರಿಯಾಗಿ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ'. ಪಹಾಡಿ ರಾಗದಲ್ಲಿ ಬಂಧಿಯಾದ ಅಕ್ಕನ ವಚನ ಸುಲಲಿತವಾಗಿ ಹೊರಹೊಮ್ಮತೊಡಗಿತು ಮಲ್ಲಿಕಾರ್ಜುನ್ ಮನ್ಸೂರರ ಶಾರೀರದಿಂದ. ಅರಳಿದ ನನ್ನ ಮುಖ ನೋಡಿ ಅಪ್ಪ ಇನ್ನೂ ಹೆಚ್ಚಿಸಿದರು ವಾಕ್ಮನ್ನಿನ ವಾಲ್ಯೂಮ್‌ನ್ನ.

ಅಕ್ಕನ ವಚನದೊಳಗೆ ಒಂದಾಗಿ ಪಹಾಡಿ ಸುತ್ತುತ್ತ ಸಾಗಿತು ನಮ್ಮ ರೈಲು, ನನಗೋ ಬೇಗ ಕೊಲ್ಕತ್ತ ತಲುಪಿ, ಹರಿಪ್ರಸಾದ್ ಚೌರಾಸಿಯಾರ ಪಹಾಡಿ ಧುನ್, ಬೇಗಂ ಅಖ್ತರ್, ಗಿರಿಜಾದೇವಿಯ ಠುಮ್ರಿ, ಠಪ್ಪಾ ಕೆಸೆಟ್ ಕೊಂಡುಕೊಳ್ಳುವ ಆತುರ. ಅದಕ್ಕಿಂತ ಮಿಗಿಲು ಅಮೀರ್ ಖಾನ್, ಬಿಸ್ಮಿಲ್ಲಾಖಾನ್, ಪರ್‍ವೀನ್ ಸುಲ್ತಾನಾ, ಮಷ್ಕೂರ್ ಅಲಿಖಾನ್, ರಶೀದ್‌ಖಾನ್‌ರ ಪಾದಸ್ಪರ್ಶಿಸಿದ ನೆಲ ನೋಡುವ ಕಾತುರ.

ನಮ್ಮ ರೈಲು ಪಹಾಡಿ ಸುತ್ತಿ-ಸುಳಿದು ಬ್ರಹ್ಮಪುತ್ರೆಯ ಸೆರಗ ತೋರಿಸುವ ಉತ್ಸಾಹದಲ್ಲಿ ಒಂದೇ ಸಮ ಓಡುತ್ತಿತ್ತು. ಓಡುತ್ತಿತ್ತು. ಆಗೊಮ್ಮೆ ಈಗೊಮ್ಮೆ ಮಧ್ಯಸಪ್ತಕದ ಷಡ್ಜ್‌ಕ್ಕೆ ಸ್ವರಹೊಂದಿಸಿ. ತನ್ನ ಗಾಲಿಗಳಲ್ಲಿ ಲಯ ಕಟ್ಟಿಕೊಂಡು.

also see

೧೧೪೧" href="http://kendasampige.com/article.php?id=

No comments: