Wednesday, August 27, 2008

ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್

ಇವ ಮುಂದೆ ಮುಂದೆ ಸಾಗಿ ಒಂದೊಂದು ತುಣುಕುಗಳನ್ನ ಜೋಡಿಸಿಡಲು ಪ್ರಯತ್ನಿಸುತ್ತಿದ್ದ. ಅಂದರೆ ಆ ಎಲ್ಲ ಒಟ್ಟಾಗಿಸಿ ಒಂದು ಆಕಾರ ಕೊಡುವುದು ಇವನ ಇರಾದೆ. ಹೀಗೆ ಮಾಡುತ್ತಿರುವುದು ಮೊದಲ ಸಲವೇನಲ್ಲ. ನೆನಪಾದಾಗಲೆಲ್ಲ ಅನ್ನುವುದಕ್ಕಿಂತ ಇವನದು ಇದೇ ಖಯಾಲಿ. ಆಕಾಶಕ್ಕೆ ಮುಖ ಮಾಡಿ ಏರಲಾಗದ ಏಣಿಗಾಗಿ ಹಂಬಲಿಸುವುದು. ಅಚ್ಚಾಗದ ಚಿತ್ರವನ್ನು ಮತ್ತೆ ಮತ್ತೆ ಬಿಡಿಸುವುದು. ಸುರುಳಿ-ಸುರುಳಿಯಾಗಿ ಗಂಟುಹೊಸೆದುಕೊಳ್ಳುವ ಬಣ್ಣಗಳ ಮೊಂಡಾಟ ಬಿಡಿಸುವುದು.

ಒಂದು-ಒಂದೇ ಬಾರಿ ಇವನಂದುಕೊಂಡಂತೆ ಅದೊಂದು ಅದ್ಭುತ ಕಲಾಕೃತಿಯಾಗಿಬಿಟ್ಟರೆ, ಅದಕ್ಕೊಂದು ಚೌಕಟ್ಟು ಕಟ್ಟುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಯಾಕೆಂದರೆ ಚೌಕಟ್ಟು ಕಟ್ಟುವುದು, ಕಟ್ಟಿಕೊಳ್ಳುವುದು ಎರಡೂ ಇವನಿಗಿಷ್ಟ. ಇಷ್ಟಪಟ್ಟದ್ದು ಎಂದೂ ಕಷ್ಟದ ಕೆಲಸವಲ್ಲವಲ್ಲ?

***

ಹತ್ತಿಯಂತೆ ಹಗುರ ತುಣುಕುಗಳ ಮುಗ್ಧ ನೋಟವನ್ನ, ನಡೆಯನ್ನ ಬೆಳ್ಳಂಬೆಳಗೆ ನೋಡುತ್ತಿದ್ದ ಅಷ್ಟೇ ಹಾಲು ಮನಸ್ಸಿನಿಂದ. ಹಿಂಬಾಲಿಸುತ್ತಿದ್ದ ನೂರಾಸೆ ತುಂಬಿದ ಮನಸು-ಕಣ್ಣುಗಳೊಂದಿಗೆ. ಹಾಗೆ ಇವ, ಅವುಗಳ ಬೆನ್ನು ಹತ್ತಿದರೆ ಅಸಂಖ್ಯ ಕಲ್ಪನೆಗಳ ಎಳೆಗಳು ಇವನ ಬೆನ್ನು ಹತ್ತುತ್ತಿದ್ದವು.

ಇನ್ನೇನು ಎಲ್ಲ ತುಣುಕುಗಳನ್ನೂ ಒಂದಾಗಿಸಬೇಕೆನ್ನುವಷ್ಟರಲ್ಲಿ ತಾರಸಿಯ ಗೋಡೆ ಇವನನ್ನು ಅಡ್ಡಗಟ್ಟಿತ್ತು. ಒಮ್ಮೆಲೆ ದಾರ ಕಳಚಿದ ಗಾಳಿಪಟದಂತೆ ಹಾರಿ-ಹಾರಿ ಹೋದವು ಎಲ್ಲ ತುಣುಕುಗಳೂ. ಆ ಎಲ್ಲ ಕಲ್ಪನೆಯ ಕೂಸುಗಳು ಇವನ ಮೊಣಕಾಲಿನ ಸಂದಿಯಲ್ಲಿ ಹಣೆ ಹಚ್ಚಿ ಕುಳಿತುಬಿಟ್ಟವು.

***

ಹೊಳೆ ಹೊಳೆವ ತುಣುಕಗಳ ಬುಟ್ಟಿ ಹೊತ್ತು ಅವ ಬಂದ. ಅವನ ಝಳಕ್ಕೇ ಇವನಿಗೆ ಜಳಕವೇ ಆಯಿತು. ತುಂಬಿದ ಬುಟ್ಟಿಯಲ್ಲಿ ಇನ್ನೆಂತೆಂಥ ತುಣುಕುಗಳಿವೆ ಎಂದು ಮುಂಗಾಲ ಮೇಲ್ ನಿಂತದ್ದಾಯಿತು. ಕಾಮನಬಿಲ್ಲಾಗಿಸಿಯೂ ಆಯಿತು ಬೆನ್ನು, ಕಣ್ಣು ಕಿವುಚಿ, ಹಣೆ ಮೇಲೆ ಗೆರೆ ಬರೆದುಕೊಂಡು, ಕತ್ತು ಕಸುವು ಕಳೆದುಕೊಂಡರೂ ಇವನ ಕುತೂಹಲ ಮಾತ್ರ ಒಡ್ಡು ಕಟ್ಟಿ ನಿಂತಿತು. ಕಪ್ಪು ಬಣ್ಣದ ಕ್ಯಾನ್ವಾಸ್ ಮೇಲೆ ಆ ಎಲ್ಲ ಹೊಳೆವ ತುಣುಕುಗಳು ನರ್ತಿಸುವುದ ಇವ ನೋಡುವ ಕನಸು ಕಾಣತೊಡಗಿದ. ಆ ತುಣುಕುಗಳಿಗೆ ಪುಟ್ಟ ಪುಟ್ಟ ಗೆಜ್ಜೆಗಳನ್ನೂ ಜೋಡಿಸಿಟ್ಟ ಕಟ್ಟಲು.

ಅದ್ಭುತ. . . ಆಶ್ಚರ್ಯ! ಅವನಂದುಕೊಂಡಂತೆ ಎಲ್ಲವೂ ನಡೆಯಿತು. ಖುಷಿಯಲ್ಲಿ ತೇಲುತ್ತ ತೇಲುತ್ತ ತಾನೂ ನರ್ತಿಸತೊಡಗಿದ ಮನಸ್ಸಿಗೆ ಗೆಜ್ಜೆ ಕಟ್ಟಿಕೊಂಡು. ಆದರೆ ಮತ್ತೆ ಆ ತಾರಸಿಯ ಗೋಡೆ ಅಡ್ಡಗಾಲಿಟ್ಟಿತ್ತು. ತುಣುಕುಗಳ ಕಾಲಿಗೆ ಕಟ್ಟಿದ ಕಿರುಗೆಜ್ಜೆ ನಿಚ್ಚಳವಾಗಿ ಅಚ್ಚೊತ್ತಿದ್ದರೂ ಅವುಗಳ ನಾದ ಇವನಿಗೆ ಕೇಳಿಸಲೇ ಇಲ್ಲ.

***

ಮಿಣುಕುಗಳೆಲ್ಲ ತುಣುಕುಗಳ ಮರೆಯಲ್ಲಿ ಕಣ್ಣಮುಚ್ಚಾಲೆ ಆಡತೊಡಗಿದವು. ನೀಲಿನೀಲಿಯಾಗಿ ಮೈಚೆಲ್ಲಿಕೊಂಡದ್ದೆಲ್ಲ ನಿಧಾನವಾಗಿ ಕೇಸರಿಯಾಗಿ, ಕೇಸರಿಯಾಗಿದ್ದೆಲ್ಲ ಕೆಂಪು-ಕೆಂಪಾಗಿ ಕರಗಿ ಹೋಗುತ್ತಿತ್ತು. ಹಾಗೆ ಕರಗುವ ಮುನ್ನವೇ ಆ ಕೆಂಪು ಕದ್ದುಬಿಡುತ್ತೇನೆ ; ಜೊತೆಗೆ ಆ ಎಲ್ಲ ತುಣುಕುಗಳೂ ಇಳೆಯ ಅಪ್ಪುವಂತೆ ಮಾಡುತ್ತೇನೆ. ಎಂದುಕೊಂಡು, ಕೆಂಪ ಹಿಡಿದಿಡಲು ಕ್ಯಾನ್ವಾಸನ್ನೇ ಬಲೆಯಂತೆ ಜೋರಾಗಿ ಬೀಸಿದ. ಆ ಬೀಸುವಿಕೆಯ ಶಬ್ದಕ್ಕೆ ತಾನೇ ತಲ್ಲಣಿಸಿದ. ಅತ್ತ ಇವನ ಬೆರಗಿಗೆ ಚುಂಚಿನ ಸಂಸಾರವೆಲ್ಲ ಮುದುರಿ ಗೂಡು ಸೇರಿತು. ಇತ್ತ ಗೂಡು ಸೇರಿಕೊಂಡವರೆಲ್ಲ ಅಗಳಿ ಹಾಕಿಕೊಂಡು ಬೆಚ್ಚಗೆ ಹೊದಿಕೆಯೊಳಗೆ ಗುಬ್ಬಚ್ಚಿಯಾಗಿದ್ದರು.

ಯಾಕೋ ಆ ಕೆಂಪು ಭಾರವಾಗಿ ಕ್ಯಾನ್ವಾಸ್ ಕೈ ಜಾರುತ್ತಿದೆ ಎಂಬ ಅರಿವಾಗತೊಡಗಿತಿವನಿಗೆ. ತನ್ನನ್ನೂ ಎಳೆದೊಯ್ಯತ್ತಿದೆ ಎಂಬ ಅನುಭವ ದಟ್ಟವಾಗುತ್ತಿದ್ದಂತೆ ಗಕ್ಕನೆ ನಿಂತುಬಿಟ್ಟ ಮತ್ತೆ ಅಡ್ಡ ಬಂದ ತಾರಸಿಯ ಗೋಡೆಗೆ. ಕ್ಯಾನ್ವಾಸ್ ಇವನ ಕೈಕೊಸರಿಕೊಂಡು ಆ ತಂಪು ಕೆಂಪಿನೆಡೆ ಹಾರಿಹೋಯಿತು ಗೋಡೆಯಿಲ್ಲದ ತಾರಸಿಯೆಡೆಗೆ. ದಿಕ್ಕಿಲ್ಲದ ಕನಸ ಪಯಣಕೆ. ಚೌಕಟ್ಟಿಲ್ಲದ ಮನಸ್ಸಿನೆಡೆ. ದೂರದಲ್ಲೆಲ್ಲೋ ತುಣುಕುಗಳು ನಗುತ್ತಿದ್ದುದು ಕೇಳಿಸುತ್ತಿತ್ತು ಆದರೆ ಕಾಣಿಸುತ್ತಿದ್ದಿಲ್ಲ.

7 comments:

mriganayani said...

ಪ್ರಿಯ ಶ್ರೀದೇವಿ.
ಬಣ್ಣಗಳು ಚೆನ್ನಾಗಿದೆ.ಆದರೆ ಈ ತಾರಸಿಯ ಗೋಡೆ ಏನು ಎನ್ನುವುದು ಗೊತ್ತಾಗಲಿಲ್ಲ.ಅವರಿಬ್ಬರೂ ಬೇರೆ ಬೇರೆಯವರಾ?
ಇಲ್ಲಿ ನೀವೂ ಇದ್ದೀರಾ.. ನಂಗೆ ಕಾಣಿಸಲಿಲ್ಲ.
ಇನ್ನು ಸ್ವಲ್ಪ ನಮ್ಮಂತಹ ಹಳೆತಲೆಮಾರಿನವರಿಗೆ ಗೊತ್ತಾಗುವ ಹಾಗೆ ಬರೆಯುತ್ತೀರಾ?
ಜೈ ಅಂಬಾ ಭವಾನಿ

ವಿಕಾಸ್ ಹೆಗಡೆ/Vikas Hegde said...

:-)

shreedevi kalasad said...

ಮೃಗನಯನಿಯವರೆ,
ನನಗನ್ನಿಸಿದ್ದನ್ನು ನಿಮಗೆ ಹೇಳುತ್ತಿದ್ದೇನೆ. ಅವರವರಿಗೆ ಬೇಕಾದ್ದನ್ನು ಅವರು ಇಲ್ಲಿ ಕಲ್ಪಿಸಿಕೊಳ್ಳಬಹುದು. ಆದರೆ ನಾನು ಅಂದುಕೊಂಡಿದ್ದು ಹೀಗೆ. ತುಣುಕು-ಮೋಡ, ತಾರಸಿಯ ಗೋಡೆ-limitation, ಅವ - ಸೂರ್ಯ, ಇವ -ಕಲಾವಿದ,

shreedevi kalasad said...

ವಿಕಾಸ್ ಎಂಥ ನಗುವಪ್ಪಾ ಇದು?

ಚಾಮರಾಜ ಸವಡಿ said...

ಎಲ್ಲ ಕನಸುಗಳ ಮಿತಿ ಇದೇನಾ? ಅಥವಾ ಕನಸುಗಳನ್ನು ನನಸು ಮಾಡುವಲ್ಲಿ ಸೂಕ್ತ ಪ್ರಯತ್ನ ಆಗಲಿಲ್ಲ ಎಂಬ ಸಂದೇಶವಾ? ಎಲ್ಲರ ಕನಸುಗಳ ಕ್ಯಾನ್ವಾಸ್‌ ಬಹುತೇಕ ಒಂದೇ. ಅದೇ ರೀತಿ ಮಿತಿ ಒಡ್ಡುವ ತಾರಸಿಯೂ ಅಷ್ಟೇ. ಕನಸುಗಳನ್ನು ನನಸು ಮಾಡಲು ಮತ್ತೆ ಮತ್ತೆ ಯತ್ನಿಸುತ್ತಾನೆ. ಒಂದಿಷ್ಟು ಹಾರುತ್ತವೆ. ಇನ್ನೊಂದಿಷ್ಟು ಜಾರುತ್ತವೆ. ಹಾರದೇ ಉಳಿದ, ಜಾರದೇ ಇದ್ದ ಬಣ್ಣಗಳನ್ನು ನಿರಾಶೆ ನುಂಗಿ ಬಿಡುವುದು ನಿಮಗೆ ಗೊತ್ತೆ?

ಆದರೂ, ಕನಸಿನ ಚಿತ್ರಕ್ಕೆ ಬಣ್ಣ ತುಂಬುವುದನ್ನು ನಾವು ನಿಲ್ಲಿಸುವುದಿಲ್ಲ. ನಿಲ್ಲಿಸಬಾರದು. ಚಿತ್ರ ಬಿಡಿಸುತ್ತಲೇ ಇರಬೇಕು. ಬಣ್ಣ ಬಳಿಯುತ್ತಲೇ ಇರಬೇಕು. ಅದರಲ್ಲೇ ತಲ್ಲೀನರಾದವರಿಗೆ ಹಾರಿ ಹೋದ ಬಣ್ಣಗಳಿಗಿಂತ ಉಳಿದ ಬಣ್ಣಗಳ ಚಿತ್ರಣ ಹೆಚ್ಚು ಸೊಗಸಾಗಿ ಕಾಣುತ್ತದೆ. ಅದನ್ನು ನೋಡಿ ತಾರಸಿ ಕೂಡ ಮಂಕಾಗುತ್ತದೆ.

ಅದು ನನ್ನ ನಂಬಿಕೆಯಷ್ಟೇ ಅಲ್ಲ, ಅನುಭವ ಕೂಡಾ.

- ಚಾಮರಾಜ ಸವಡಿ

shreedevi kalasad said...

ಚಾಮರಾಜ್ ಸರ್‍,
ನನ್ನ ಕನಸಿನ ಕ್ಯಾನ್ವಾಸನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ನಿಮ್ಮ ಅನುಭವ, ದೃಷ್ಟಿಕೋನವೇ ಸ್ಫೂರ್ತಿ. ಧನ್ಯವಾದ

shivu K said...

ಇವತ್ತೇಕೊ ಬೆಳಿಗ್ಗೇನೆ ಮೂಡು ಕೆಟ್ಟಿತ್ತು. ಯಾವಾಗಲು ಕತೆ ಕವನಗಳೇ ಅನ್ನಿಸಿ ಆಲಾಪಕ್ಕೆ ಬಂದೆ. ಸಂಗೀತದಲ್ಲಿ ಏನಾದರೂ ಸಿಕ್ಕುತ್ತಾ ಅಂತ. ಅದರೆ ಇಲ್ಲಿಯೂ ಕಲೆಯೇ ಸಿಕ್ಕಬೇಕೆ! ಓದುತ್ತಾ ಓದುತ್ತಾ ನನಗೇ ಆಕಾಶಕ್ಕೆ ಹಾರಿದಂತಾಗಿತ್ತು. ನಮ್ಮ ಬಳಗದಲ್ಲಿ ಉತ್ತರ ಭಾರತದ ಶಕೀತ್ ಆಲಿ ಎಂಬ ಛಾಯಾಚಿತ್ರಗಾರ ಮೋಡದೊಳಗೆ ಚಿತ್ರ ಬಿಡಿಸುವ ಕೈ ಇರುವಂತ ಫೋಟೊ ಸೃಷ್ಠಿಸಿದ್ದಾನೆ. ನಿಮ್ಮ ಬರಹ ಓದುತ್ತಾ ಆ ಚಿತ್ರ ನೆನಪಾಯಿತು. ಭಾಷೆ ಚೆನ್ನಾಗಿದೆ. ಕಲ್ಪನೆಯಂತೂ ಇನ್ನೂ ಚೆನ್ನಾಗಿದೆ. keep it up!!

ಶಿವು.ಕೆ