Thursday, September 4, 2008

ಕೊಲ್ಕತ್ತೆಯಲ್ಲಿ ಪಹಾಡಿ ಗುಂಗು?

ಅದೆಲ್ಲ ನೆನಪಿದೆ. ಏಳು ವರ್ಷ ಕಳೆದರೂ ಅದ್ಯಾಕೋ ಮನಃಪಟಲದಿಂದ ಇನ್ನೂ ಮಾಸಿಲ್ಲ. ಆ ಚಹರೆಗಳು, ನೋಟಗಳು, ಮಾತುಗಳು ಪ್ರತಿಯೊಂದು, ಇಂಚಿಂಚೂ ನೆನಪಿದೆ.

ಪಕ್ಕದ ರೈಲಿಗೆ ಒಂದು ಪರಿಚಿತ ನಗೆ ಚೆಲ್ಲಿ ನಿಂತಿತು ನಮ್ಮ ರೈಲೂ. ಕೆಂಪುನಿಶಾನೆಗೆ ಅದೇನೋ ಒಳಗೊಳಗೆ ಖುಷಿ: ಮೈಲಿಯುದ್ದ ರೈಲು, ಮಳ ಉದ್ದವಿರುವ ನನ್ನ ಮಾತು ಕೇಳುತ್ತದೆಯಲ್ಲ ಎಂದು. ಎದುರಿಗಿರುವ ಹಸಿರುನಿಶಾನೆಗೆ ಕಣ್ ಹೊಡೆದು ‘ಹೇಗೆ ನಾನು?' ಎಂದು ಹುಬ್ಬೇರಿಸಿತು. ಹಸಿರು ನಿಶಾನೆ, ಮಾತಿಗೆ ಮಾತು ಬೆಳೆಸುವ ಗೋಜಿಗೆ ಹೋಗದೆ, ತನ್ನ ಅನುಮತಿಗಾಗಿ ಕಾಯುತ್ತಿದ್ದ ರೈಲಿಗೆ ಮುಗುಳ್ನಗೆ ಬೀರಿ ಅದಕ್ಕೆ ಮೈತೆರೆದುಕೊಂಡು ಶುಭಕೋರಿತು.

ಅದನ್ನೆಲ್ಲ ಗಮನಿಸುತ್ತಿದ್ದ ನನಗೆ ಅದಾಗಲೇ ಪಹಾಡಿಯ ಶೃಂಗಾರ, ಶಾಂತ, ವಿರಹವೆಲ್ಲ ನನ್ನೊಳಗಿನಿಂದ ಮೆಲ್ಲಗೆ ದೂರ ದೂರ ಸರಿಯುತ್ತಿದ್ದ ಅನುಭವವಾಗತೊಡಗಿತ್ತು. ಪಹಾಡಿ ಗುಂಗು ಹಿಡಿಸಿ, ಬ್ರಹ್ಮಪುತ್ರೆಯ ವಿಶಾಲ ಮಡಿಲ ತೋರಿಸಿದ ರೈಲನ್ನೊಮ್ಮೆ ಹಿಂತಿರುಗಿ ನೋಡುತ್ತ ನೋಡುತ್ತ ಅದಕ್ಕೊಂದು ಪುಟ್ಟ ಥ್ಯಾಂಕ್ಸ್ ಹೇಳಿದೆ.

ಅಸ್ಸಾಮ್‌ನ ಬೆಣ್ಣೆಗಲ್ಲದ, ಪುಟ್ಟಕಣ್ಣುಗಳು ಮನಸ್ಸಿನಿಂದ ಕರಗುತ್ತಿದ್ದಂತೆ, ಕೊಲ್ಕತ್ತೆಯ ಮೀನಕಣ್ಣುಗಳು, ನಾಲ್ಕಾಣೆ ಸೈಝಿನ ಕೆಂಪುಬೊಟ್ಟು, ಬೈತಲೆಯೇರಿದ ಸಿಂಧೂರ, ಮನಸ್ಸು ತುಂಬಿಕೊಂಡವು. ಜೊತೆಗೆ ಬರಿದಾದ ಕೊರಳು. ಸೌಭಾಗ್ಯ ಲಕ್ಷಣ ಕೆಂಪು-ಬಿಳಿಯ ಬಳೆಗಳೂ.

‘ಠೆಹರೋ. . .' ಬಿಳಿ ಸಮವಸ್ತ್ರ, ಕಪ್ಪು ಕೋವಿಧಾರಿ ಪುರುಷ ಧ್ವನಿಯೊಂದು ನಮ್ಮ ಮುಂದೆ ದೇಹ ಪ್ರತಿಷ್ಠಾಪಿಸಿಕೊಂಡಿತು. ಯಾವೂರು? ಎಲ್ಲಿಂದ? ಏನು ಕತೆಯಂತೆಲ್ಲ ಕೇಳಿ. ನಮ್ಮನ್ನೂ ಬಿಡಲೇ ಇಲ್ಲ ಐಡಿ ಪ್ರೂಫ್ ತೋರಿಸುವವರೆಗೂ. ಕೈಲಿದ್ದ ಡಿಟೆಕ್ಟರ್ ನಮ್ಮ ಬ್ಯಾಗುಗಳನ್ನೊಮ್ಮೆ ಮೂಸಿ, ಮಾತನಾಡಿಸಿ, ಪೆಚ್ಚುನಗೆಯಾಡಿ, ‘ಕುಛ್ ಭೀ ನಹೀಂ ಛೋಡರೇ ಭಯ್ಯಾ' ಎಂದು ಸೂಕ್ಷ್ಮವಾಗಿ ಸಮ್ಮತಿ ಸೂಚಿಸಿದ್ದು ಅವನ ಕಿವಿ ತಲುಪಲೇ ಇಲ್ಲ. ಪ್ರಶ್ನೆ ಮೇಲೊಂದು ಪ್ರಶ್ನೆ ಹಾಕಿ ನೇರ ಉತ್ತರಗಳ ಪಡೆದ ಅವನಿಂದ ಕೊನೆ ಪ್ರಶ್ನೆಯನ್ನು ನಾನಂತೂ ನಿರೀಕ್ಷಿಸೇ ಇರಲಿಲ್ಲ.

ಅಪ್ಪ ಅಷ್ಟೇ ವಿನೀತರಾಗಿ ‘ಏ ಮೇರಿ ಬೇಟಿ, ಮೈ ಉನಕೀ ಬಾಪ್'. ಎಂದು ಹೆಜ್ಜೆ ಮುಂದಿಟ್ಟರು. ನನ್ನ ಹೆಜ್ಜೆಗಳು ಅವರ ದೊಡ್ಡ ದೊಡ್ಡ ಹೆಜ್ಜೆಗಳಿಗೆ ಸಮಸಮವಾಗಲು ಪ್ರಯತ್ನಿಸತೊಡಗಿದವು. ಆದರೆ ಹಿಂತಿರುಗಿ ನೋಡುವ ನನ್ನ ಕಣ್ಣುಗಳಿಗೆ ಸಹಕರಿಸುತ್ತಿತ್ತು ಕುತ್ತಿಗೆ. ಆ ಕೋವಿ ಇನ್ನೊಂದು ಕೋವಿಯೊಡನೆ ನಗುತ್ತ, ಗುಸುಗುಸು ಮಾಡುತ್ತ ನಿಂತಿತ್ತು. ಮುಂದೆ ಮೆಟ್ಟಿಲಿರುವುದು ಅರಿವಿಗೆ ಬಂದು ವಿಧಿಯಿಲ್ಲದೇ ಮುಂದೆ ಮುಂದೆ ನೋಡಬೇಕಾಯಿತು. ಆದರೆ ನನ್ನ ಮನಸ್ಸು ಹಿಮ್ಮುಖವಾಗಿ ಅವನ ಕೊನೆಯ ಪ್ರಶ್ನೆಯತ್ತಲೇ ಓಡುತ್ತಿತ್ತು. ಓಡಿ ಹೋಗಿ ಅವನನ್ನ ಆ ಬ್ರಿಡ್ಜ್‌ನಿಂದ ನೂಕಿಬಿಡಲೇ ಎಂದು ಕುದಿಯತೊಡಗಿದ್ದೆ. ಆದರೆ ಅದ್ಯಾಕೋ ಸುಮ್ಮನಾಗಿಬಿಟ್ಟೆ.

ಅಪ್ಪನಿಗೆ ಆ ಬಗ್ಗೆ ಕೇಳಿದಾಗ, ಭಯೋತ್ಪಾದನೆ, ಬಿಗಿ-ಭದ್ರತೆ, ಮಣ್ಣು-ಮಸಿ. ಇದೆಲ್ಲ ಇಲ್ಲಿ ಮಾಮೂಲು ನಡಿ ನಡಿ ಬೇಗ ಅಂತ ಸರಸರನೆ ಹೊರಡಿಸಿದರು.

ಕೋಲ್ಕತ್ತೆ ನೋಡುವ ಬಯಕೆ ಇದ್ದಿದ್ದರಿಂದ ಲಾಡ್ಜಿಗಾಗಿ ಶೋಧನೆ ನಡೆಸುವುದು ನಮ್ಮ ಮುಂದಿನ ಗುರಿಯಾಗಿತ್ತು. ರೈಲ್ವೇ ಸ್ಟೇಶನ್ನಿನ ಮುಖ್ಯದ್ವಾರಕ್ಕೆ ಬರುತ್ತಿದ್ದಂತೆಯೇ ಯಾರೋ ಒಂದಿಬ್ಬರು ಹಿಂಬಾಲಿಸುವುದು ಗಮನಕ್ಕೆ ಬಂತು. ನಮ್ಮ ಪ್ರತಿಕ್ರಿಯೆಗಾಗಿ ಅವರು ತಡಕಾಡುತ್ತಿರುವುದೂ ಗೊತ್ತಾಯ್ತು.

ಅದ್ಯಾಕೆ ಇವರೆಲ್ಲ ಸ್ವಲ್ಪ ಜೋರಾಗಿ ಬಾಯಿಬಿಟ್ಟು ಮುಗುಳ್ನಗೆಯಿಂದ ನಿಮಗೆ ಲಾಡ್ಜ್ ಬೇಕೆ? ಅಂತ ಕೇಳುತ್ತಿಲ್ಲ ಎಂದು ಹಲವಾರು ಬಾರಿ ಹುಬ್ಬು ಗಂಟುಹಾಕಿಕೊಂಡೆ. ‘ಸಾಬ್‌ಜೀ-ಮೇಡಮ್‌ಜಿ ಡಬಲ್ ಬೆಡ್ ರೂಂ ಹೀ ಹೈ. ಏಗ್‌ದಮ್ ಫಸ್ಟ್‌ಕ್ಲಾಸ್! ಟ್ಯಾಕ್ಸೀ ಬುಲಾವೂ' ಹೋತಗಡ್ಡದವ, ಹುಳುಕು ಮುಖದವ, ಗೂನು ಬೆನ್ನಿನವರೆಲ್ಲ ಬೆನ್ನುಹತ್ತಿದ್ದರು ಒಬ್ಬರಾದ ಮೇಲೊಬ್ಬರಂತೆ. ಪ್ರಯತ್ನ ಫೇಲಾಯಿತೆಂದು ಪೆಚ್ಚುಮೋರೆಯಂತೂ ಖಂಡಿತ ಅವರು ಹಾಕುತ್ತಿರಲಿಲ್ಲ! ಕಣ್ಣೀನಲ್ಲೇ ಹೊಂಚು ಹಾಕಿಕೊಂಡು ಬಂದವರ ಅಸ್ಪಷ್ಟ ಮಾತು, ಸ್ಪಷ್ಟ ನೋಟದ ಜಾಡು ಹಿಡಿಯಲು ತುಸು ಜಾಸ್ತಿ ಸಮಯವೇ ಬೇಕಾಯಿತು ನನಗೆ.

ಸುಮಾರು ಎರಡು ತಾಸುಗಳಷ್ಟು ಗಲ್ಲಿಗಲ್ಲಿಗಳ ಸುತ್ತಿದರೂ ಒಂದು ಲಾಡ್ಜೂ ನಮ್ಮನ್ನು ಕೈಬೀಸಿ ಕರೆಯಲಿಲ್ಲ. ಕೊನೆಗೆ ಸುಸ್ತಾಗಿ ಮತ್ತದೇ ಕೊಲ್ಕತ್ತೆಯ ರೈಲುನಿಲ್ದಾಣಕ್ಕೆ ಬಂದಾಗ ಪುಟ್ಟದೊಂದು ಬೆಂಚಿನ ಮೇಲೆ ಅವರಿವರ ಮಧ್ಯೆ ಮುಖ ಸಣ್ಣಗೆ ಮಾಡಿ ಕುಳಿತುಕೊಂಡೆ. ಅಂಟಿಯೂ ಅಂಟದಂತೆ. ಮೈ ಮುದುಡಿಕೊಂಡು. ಡಿಸೆಂಬರ್‌ನ ಚಳಿಗೋ, ಉತ್ತರದ ತತ್ತರಕ್ಕೋ ಮೈಬಿಸಿಯಾಗಿ ಗಂಟಲು ಆರತೊಡಗಿತ್ತು. ತಲೆ ನೋಯುತ್ತಿತ್ತು. ಸಣ್ಣಗೆ ಜ್ವರವೂ ಬಂದಾಗಿತ್ತು.

‘ತಿರುಗಾಡಲು ಆಗುವುದಿಲ್ಲ. ನೀನಿಲ್ಲೇ ಕುಳಿತಿರು. ನಾನು ಹೋಗಿ ಲಾಡ್ಜ್ ನೋಡಿಬರುತ್ತೇನೆ. ಇಲ್ಲೆ ಹತ್ತಿರದಲ್ಲೇ ಒಂದಿಷ್ಟು ಲಾಡ್ಜ್‌ಗಳಿವೆಯಂತೆ' ಅಪ್ಪ ಹಾಗೆ ಹೇಳುತ್ತಿದ್ದಂತೆ, ಸುತ್ತಲಿದೆಲ್ಲವೂ ಗಿರಗಿರನೇ ತಿರುಗಿದಂತಾಗುತ್ತಿತ್ತು. ಮತ್ತೆ ನನ್ನ ನಾ ಸಾವರಿಸಿಕೊಂಡೆ. ಆಗೆಲ್ಲ ಹಿಂಬಾಲಿಸುತ್ತಿದ್ದ ದಲ್ಲಾಳಿಗಳೆಲ್ಲ ಈಗ ಮುಖಾಮುಖಿಯಾಗಿ ನಿಲ್ಲತೊಡಗಿದರು. ಅವರ ವಿಚಿತ್ರ ನೋಟ-ಸನ್ನೆಗಳು ಇನ್ನಷ್ಟು ಕುಸಿಯುವಂತೆ ಮಾಡಿದವು. ‘ದಯವಿಟ್ಟು ಬೇಗ ಊರಿಗೆ ಹೋಗಿಬಿಡೋಣ ಕೊಲ್ಕತ್ತೆ ನೋಡುವುದೇ ಬೇಡ. ಯಾವ ಕೆಸೆಟ್ಟೂ ಬೇಡ' ಎಂದು ಅಳತೊಡಗಿದೆ. ಆಗ ಅಪ್ಪ ‘ಸರಿ ಬಾ ಹೋಗೋಣ ಒಟ್ಟಿಗೆ ಲಾಡ್ಜ್ ಹುಡುಕೋಣ' ಎಂದು ಕೈಹಿಡಿದುಕೊಂಡರು.

ವಾರಸುದಾರರಿಲ್ಲದೇ ನೂರಾರು ಮೆಣಸಿನಕಾಯಿ ಚೀಲಗಳು ಕೊಳೆತು, ಫ್ಲಾಟ್‌ಫಾರ್ಮಿನ ತುಂಬ ಪರಿಪರಿಯಾದ ಪರಿಮಳ ಬೀರಿದ್ದವು. ಇದ್ದಬಿದ್ದ ಒಂದಿಷ್ಟು ಜಾಗದಲ್ಲೇ ಕಣ್ಣುಗಳನ್ನಷ್ಟೇ ಬಿಟ್ಟುಕೊಂಡು ಫುಲ್ ಪ್ಯಾಕ್ಡ್ ಗುಂಪುಗಳು ಅಲ್ಲಲ್ಲಿ ಬೆಂಗಾಲಿ ಪೇಪರ್‌ಗಳ ಮೇಲೆ ಕಣ್ ಹಾಯಿಸುತ್ತಿದ್ದವು. ನೆಲದ ಮೇಲೆ ಅವುಗಳನ್ನ ಹರಡಿ. ಅದೇ ಪೇಪರಿನ ಮೇಲೆ ಸೇರು ಚುರುಮುರಿ ಸುರುವಿಕೊಂಡು ಕಡ್ಲೆ ಉಸುಳಿಯೊಂದಿಗೆ ಬೆಳಗಿನ ಉಪಹಾರವನ್ನೂ ಪ್ರಾರಂಭಿಸಿದ್ದವು ಕಂಬಳಿ ಹೊದ್ದ ಗುಂಪುಗಳೂ. ಚುರುಮುರಿ-ಉಸುಳಿ ನೋಡಿ ಹಸಿದ ಹೊಟ್ಟೆ ಬಾಯಲ್ಲಿ ನೀರು ಬರಿಸಿತಾದರೂ, ಅವರೆಲ್ಲ ಯಾರಿರಬಹುದು? ಬಂದೂಕು ಇಲ್ಲ ತಾನೇ? ಎಂದುಕೊಳ್ಳುತ್ತ ಕಿವುಚಿಕೊಂಡ ಮುಖದೊಡನೆ ಅಪ್ಪನನ್ನು ಹಿಂಬಾಲಿಸಿದೆ. ಮತ್ತೆ ಲಾಡ್ಜ್‌ನ ಶೋಧನೆಗಾಗಿ.

ತಲೆಗೆ ಮಫ್ಲರ್ ಸುತ್ತಿಕೊಂಡವನೊಬ್ಬ, ಸೇದುತ್ತಿದ್ದ ಬೀಡಿ ಎಸೆದು, ‘ಆಯಿಯೇ ಸಾಬ್‌ಜೀ' ಮೀಸೆಯೊರೆಸಿಕೊಂಡು ಸೂಟ್‌ಕೇಸ್‌ಗೆ ಕೈಹಾಕಿದ. ಅವನ ಮುಖದಲ್ಲಿ ನನಗೆ ಕಂಡ ಹಾಗೆ ಒಂದಿಷ್ಟು ಒಳ್ಳೆಯತನ ಅಪ್ಪನಿಗೂ ಕಂಡಿರಬೇಕು, ಅವನೊಂದಿಗೆ ಲಾಡ್ಜ್ ನೋಡಲು ಒಪ್ಪಿಕೊಂಡೆವು. ಇಲ್ಲಿಯೇ ಇಲ್ಲಿಯೇ ಹತ್ತಿರದಲ್ಲೇ ಎನ್ನುತ್ತ ಮತ್ತೆ ಒಂದೂವರೆ ಮೈಲಿ ನಡೆಸಿದ ಮಫ್ಲರಿನವ. ಗಿರಾಕಿ ಕೈತಪ್ಪಿ ಹೋಗದಿರುವಂತೆ ಬಗೆಬಗೆಯ ಮಾತನಾಡುತ್ತಿದ್ದ. ದಾರಿಯುದ್ದಕ್ಕೂ ‘ಸಂ'ಭಾವಿತನಂತೆ. ಮಧ್ಯೆ ಮಧ್ಯೆ ಲಹರಿ ಗಂಧರ್ವನಂತೆ ಬೆಂಗಾಲಿಯ ಹಾಡೊಂದನ್ನ ಗುನುಗುಟ್ಟುತ್ತಾ, ದಡದಡನೆ ನಡೆಯುತ್ತಿದ್ದ. ಅವನೊಂದಿಗೆ ನಾವೂ ನಡೆಯುತ್ತಿದ್ದೆವು...

ಪ್ರತಿಕ್ಷಣವೂ ನಾದದ ಬೆನ್ನುಹತ್ತುವ, ಅದರ ಜಾಡು ಹುಡುಕುವ ನನ್ನ ಮನಸ್ಯಾಕೋ ಅಂದು ತಟಸ್ಥವಾಗಿತ್ತು. ಎಲ್ಲ ರಾಗ-ಭಾವ-ರಸಾದಿಗಳು ನನ್ನಿಂದ ದೂರ ಸರಿದು ನಿಂತಿದ್ದವು. ಬಂಗಾಲಿ ನೆಲದಲ್ಲಿ ಒಂದೇಸಮನೇ ತೋಯುತ್ತಿತ್ತು ಮನಸ್ಸು: ಕಣ್ಣು ಬಿಡಲು ಕಾರಣರಾದವರು ಕೈಹಿಡಿದುಕೊಂಡಿದ್ದರೂ. ಮರಳಿ ನನ್ನ ನೆಲಕ್ಕೆ ಎಂದು ಬಂದೇನು? ಎಂದು ಒಂದೇ ಸವನೆ ಶ್ರುತಿಹಿಡಿದಿತ್ತು ಮನಃ.

ಅಷ್ಟೊತ್ತಿಗಾಗಲೇ ಮಫ್ಲರಿನವ ಒಂದು ಲಾಡ್ಜ್‌ನೊಳಗೆ ಕರೆದೊಯ್ದಿದ್ದ.

ಆದರೆ....

5 comments:

ಮಧು said...

ನಮಸ್ಕಾರ ಶ್ರೀದೇವಿಯವರೇ,
ಕೆಂಡಸಂಪಿಗೆಯಲ್ಲೂ ನಿಮ್ಮ ಲೇಖನಗಳನ್ನು ಓದುತ್ತಿರುತ್ತೇನೆ. ತುಂಬಾ ಚೆನ್ನಾಗಿ ಬರ್ತಾ ಇದೆ. ಸಂಗೀತದ ಬಗ್ಗೆ ಬರೆಯೋರು ನಮ್ಮಲ್ಲಿ ತುಂಬಾ ಕಮ್ಮಿ ಇದಾರೆ.
ಪಹಾಡಿ ನಿಜಕ್ಕೂ ಅದ್ಭುತ ಗುಂಗನ್ನು ಹಿಡಿಸುವ ರಾಗ. ನನಗೇಕೋ instrumentals ಅಲ್ಲಿ ಕೇಳಿದ್ರೆ ಇನ್ನೂ ಹಿತವೆನ್ನಿಸುತ್ತೆ. ಮೊನ್ನೆ ಪೂರ್ಬಯಾನ್ ಚಟರ್ಜಿ(ಸಿತಾರ್) ಅವ್ರು ಬಾರಿಸಿದ ಪಹಾಡಿ ಕಜರಿ ಕೇಳಿದೆ. ಎಂತಾ ಮೋಡಿ ಮಾಡಿಬಿಡ್ತು ಅಂದ್ರೆ ಇನ್ನೂ ಅದರ ಗುಂಗಿನಿಂದ ಹೊರಗೆ ಬರಕ್ಕಾಗಿಲ್ಲ.
ಹೀಗೆ ಬರೀತಾ ಇರಿ.
ಧನ್ಯವಾದ
ಮಧು

Jagali bhaagavata ಜಗಲಿ ಭಾಗವತ said...

ನಿಮ್ಮ ’ರಂಗಭೂಮಿ’ ಯಾಕೆ ಬಿಕೋ ಅನ್ನುತ್ತ ಇದೆ?

kanasu said...

ನಮಸ್ಕಾರ ಶ್ರೀದೇವಿಯವರೇ,
ನಾನೂ ಸಂಗೀತ ಪ್ರಿಯೆ..ನಿಮ್ಮ ಬರಹ ತುಂಬಾ ಚೆನ್ನಾಗಿದೆ
ನಿಮ್ಮ ಬ್ಲಾಗಿಗೆ ವಿಸಿಟ್ ಮಾಡಿ ಖುಷಿ ಆಯಿತು
-ಕನಸು

ತೇಜಸ್ವಿನಿ ಹೆಗಡೆ- said...

ಶ್ರೀದೇವಿಯವರೆ..

ಈ ಬರಹವನ್ನೂ ಜೊತೆಗೆ ಕೆಂಡಸಂಪಿಗೆ ಯಲ್ಲಿ ಪ್ರಕಟವಾಗಿರುವ ಇದೇ ಲೇಖನದ ಭಾಗ-೨ ನ್ನೂ ಓದಿದೆ (http://kendasampige.com/article.php?id=1289). ಒಂದೇ ಉಸಿರಿನಲ್ಲಿ ಓದಿಸಿಕೊಂಡಿತು. ಕೊನೆಗೆ ಮುಗಿಯಿತೆಂದು ಬೇಸರವೂ ಆಯಿತು. ಅಷ್ಟೊಂದು ಚೆನ್ನಾಗಿದೆ ನಿರೂಪಣಾ ಶೈಲಿ.

ನಿಮ್ಮಲ್ಲುಂಟಾದ ತಳಮಳ, ಭಯ, ಆತಂಕ ಎಲ್ಲವೂ ನಾನು ಓದುತ್ತಿರುವಾಗ ನನ್ನೊಳಗೂ ಆಗುತ್ತಿತ್ತು. ಕಾಣದ ಊರಿನಲ್ಲಿ ನೋಡದ ಜನರ ನಡುವೆ ಸಿಲುಕಿ ಪರದಾಡಿದ ನಿಮ್ಮ ಹಾಗೂ ನಿಮ್ಮ ತಂದೆಯವರ ಪರಿಸ್ಥಿತಿ ಎಣಿಸಿಯೇ ಭಯವಾಯಿತು ನನಗೆ. ಅಂತೂ ಕೊನೆಗೆ ನಿಮ್ಮಿಷ್ಟದ ಹಾಡುಗಳ ಕೆಸೆಟ್ ಸಿಕ್ಕಿ ನೀವು ರೈಲು ಹತ್ತಿದ್ದನ್ನು ಓದಿದಮೇಲೆ ತುಂಬಾ ಸಂತೋಷ ಹಾಗೂ ಸಮಾಧಾನವಾಯಿತು :)

shreedevi kalasad said...

@ ಮಧು ಅವರೆ,
ಧನ್ಯವಾದ. ಈಗ್ಲೂ ಪಹಾಡಿ ಗುಂಗಲ್ಲೇ ಇದ್ದೀರೋ ಹೇಗೆ?

@ ಭಾಗವತರೆ,
ಬ್ಯಾಕ್‌ಸ್ಟೇಜ್ ರಿಹರ್ಸಲ್ ನಡೀತಿದೆ.

@ ಕನಸು,
ಸಮಾನ ಆಸಕ್ತರೆಲ್ಲ ಒಂದ್ಕಡೆ ಸೇರ್‍ತಿದ್ದೀವಿ ಅನ್ನೋ ಖುಷಿಯಂತೂ ಆಗ್ತಿದೆ.

@ ತೇಜಸ್ವಿನಿ,

ಎಂದಿನ ನಿಮ್ಮ ಪ್ರೋತ್ಸಾಹಕ್ಕೆ ಮತ್ತೆ ಧನ್ಯವಾದ