Monday, September 8, 2008

ಮರಳ (ಲಾರದ) ಶಿಲ್ಪ!

ಪುಟ್ಟ ಗೆಳತಿಗೊಂದು ನುಡಿನಮನ
ಅವಳು ನನಗೇ ಅಂತ ತೆಗೆದುಕೊಟ್ಟ ಮೆಹಂದಿ ಇನ್ನೂ ಪ್ಯಾಕೆಟ್‌ನಲ್ಲಿ ಹಾಗೇ ಇದೆ. ಅವಳ ಕೆಂಚು ಕೂದಲ ನೋಡಿ ಅವತ್ತು ಕೇಳಿದ್ದೆ. ಕಲರ್‍ ಹಾಕಿಸ್ಕೊಂಡಿದ್ದೀಯೇನೇ ಅಂತ. ಇಲ್ಲಪ್ಪ. ನಮ್ಮ ಕಾಲೇಜ್ ಕ್ಯಾಂಪಸ್‌ಲ್ಲಿ ಮೆಹಂದಿ ಗಿಡಗಳಿವೆ. ಅದನ್ನ ಅರೆದು ಹಚ್ಚಿಕೊಂಡಿದ್ದೀನಷ್ಟೇ. ನಿಮಗೂ ಬೇಕಾ? ನೆಕ್ಸ್ಟ್ ಟೈಂ ತಂದ್ಕೊಡ್ತೀನಿ. ಅಂದ್ಲು. ಕೆಲವು ತಿಂಗಳು ಬಿಟ್ಟು ಮತ್ತೆ ಬೆಂಗಳೂರಿಗೆ ಬಂದ್ಲು. ಆಗ ಮರೆಯದೇ ಮೆಹಂದಿ ತಂದಿದ್ದಳು. ಆದರೆ ಎಲೆಯಲ್ಲ ಪ್ಯಾಕೆಟ್‌. ಮೆಹಂದಿ ಗಿಡದ ಎಲೆ ತರಕ್ ಆಗ್ಲಿಲ್ಲ. ಆದ್ರೆ ಈ ಪ್ಯಾಕೆಟ್‌ನಲ್ಲಿರೋ ಮೆಹಂದಿ ಚೆನ್ನಾಗಿರತ್ತೆ. ಹಚ್ಕೊಳ್ಳಿ ಅಂದ್ಲು. ಆದ್ರೆ ಆ ಪ್ಯಾಕೆಟ್ ಓಪನ್ ಮಾಡೋದಕ್ಯಾಕೋ ಮನಸ್ಸಾಗ್ತಿಲ್ಲ. ಪ್ಯಾಕೆಟ್ ಓಪನ್ ಮಾಡಿಬಿಟ್ಟರೆ ಅವಳಂತೆ ಆ ಮೆಹಂದಿಯ ಘಮವೂ ಹೊರಟುಹೋಗುತ್ತದೆಯೇನೋ ಎಂಬ ಅಳುಕಿನಿಂದಲೇ ಅದನ್ನ ಹಾಗೇ ಇಟ್ಟಿದ್ದೇನೆ. ಅದು ಇನ್ಮುಂದೇನೂ ಹಾಗೇ ಇರಲೇನೋ.

ನನ್ನ ಅಕ್ಕನ ಮಗಳು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಸ್ಕಾಮ್ ಓದ್ತಿದಾಳೆ. ನಿಮ್ಮಲ್ಲಿ ಇಂಟರ್ನ್‌‌ಶಿಪ್ ಮಾಡ್ಬೇಕು ಅಂತಿದಾಳೆ. ಅವಳಿಗೆ ಒಂಚೂರು ಗೈಡ್ ಮಾಡಿ ಅಂದ್ರು. ನಾನು ಸರಿ ಚಿಂತೆಬಿಡಿ. ನಾನ್ ಕೇರ್‍ ತಗೊಳ್ತೀನಿ ಅಂತ ಅವಳ ಮಾವನಿಗೆ ಹೇಳಿ ಫೋನ್ ಇಟ್ಟೆ.

ಫೋನ್ ರಿಂಗಾಯ್ತು. ಶ್ರೀದೇವಿಯವ್ರಾ? ಪೂರ್ಣ ಮಾವ (ಬೇಳೂರು ಪೂರ್ಣಪ್ರಜ್ಞ) ನಿನ್ನೆ ನಿಮಗೆ ಫೋನ್ ಮಾಡಿ ನನ್ನ ಬಗ್ಗೆ ಹೇಳಿದ್ರಂತೆ. ಬೆಂಗಳೂರಿಗೆ ಬಂದಿದ್ದೀವಿ. ಇನ್ನೊಂದ್ ಗಂಟೆಲಿ ನಿಮ್ ಆಫಿಸಿಗೆ ಬರ್‍ತೀವಿ. ಅಡ್ರೆಸ್ ಕೊಡಿ ಅಂದ್ಲು.

ಒಂದೆರಡು ಬಾರಿ ಗೇಟ್ ಹತ್ರ ಹೋಗಿ ಬಂದೆ. ಅಷ್ಟೊತ್ತಿಗೆ ಅಪ್ಪನನ್ನೇ ಅಂಟಿಕೊಂಡ ಆಳೆತ್ತರದ ಮಗಳು ಗೇಟ್‌ ಒಳಗೆ ಬಂದಳು. ಸುಮಾರು ವರ್ಷದ ಪರಿಚಯವಿದ್ದಂತ ಒಮ್ಮೆ ನಕ್ಕು ನೀವೇನಾ ಶ್ರೀದೇವಿ ಅಂದ್ಲು. ನಾನು ಹೌದು ಬಾ ಅಂತ ಕರೆದುಕೊಂಡು ಹೋದೆ.

ಅವಳದು ಇಂಟರ್ನ್‌‌ಶಿಪ್ ಕನ್‌ಫರ್ಮ್‌ ಆಗೋವರೆಗೂ ಅವಳ ಅಪ್ಪ ಸುಮಾರು ಮೂರು ಗಂಟೆಗಳ ಕಾಲ ಹೊರಗೇ ಕುಳಿತುಕೊಂಡಿದ್ದರು. ಅಪ್ಪನ ತಾಳ್ಮೆ ವಿನಯತೆಯೆಲ್ಲ ಮಗಳಲ್ಲಿ ಮೈಗೂಡಿದೆ ಎಂದುಕೊಂಡೆ.

ಚಾಕಚಕ್ಯತೆಯಿಂದ ಕೆಲಸ ಮಾಡಿ ಮುಗಿಸುವ, ಅಷ್ಟೇ ಲವಲವಿಕೆಯಿಂದ, ನಗುಮೊಗದಿಂದ ಎಲ್ಲರೊಂದಿಗೆ ಬೆರೆತು ಸರಳ ಮನಸ್ಸಿನಿಂದ ಮಾತನಾಡುವ ಹುಡುಗಿಯಾದ್ದರಿಂದ ಆಫೀಸಿನಲ್ಲಿ ಎಲ್ಲರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾಳೆ ಇನ್ನು ಮುಂದೆಯೂ.

ಆಗಾಗ ತನ್ನ ಅಮ್ಮನೊಂದಿಗೆ, ತಂಗಿಯೊಂದಿಗೆ ಫೋನಿನಲ್ಲಿ ಮಾತನಾಡಿಸಿ ಖುಷಿ ಪಟ್ಟು ಖುಷಿ ಹಂಚುವ ಹುಡುಗಿಯಾಗಿದ್ದಳು. ನೀವೇನಾದ್ರೂ ನಮ್ ಮನೆಗೆ ಒಮ್ಮೆ ಬಂದ್ರೆ ಮತ್ತೆ ಬೆಂಗಳೂರಿಗೆ ವಾಪಸ್ ಹೋಗೋದೇ ಇಲ್ಲ. ಇಲ್ಲಿ ಕಾಡು, ತೋಟ, ನದಿ ಎಷ್ಟು ಚೆನ್ನಾಗಿದೆ. ಬನ್ನಿ ಪ್ಲೀಸ್ ಒಂದೆರಡು ದಿನವಾದರೂ ಇದ್ದು ಹೋಗಿ ಅಂತ ಮಗುವಿನಂತೆ ಕೇಳಿಕೊಂಡಿದ್ದಳು. ಅವಳ ಊರಿಗೆ ಹೋಗದೇ ಇದ್ದಾಗ ಮತ್ತೆ ಮಾರಿಜಾತ್ರೆಗೂ ಹಾಗೇ ಫೋನಾಯಿಸಿದ್ದಳು. ಆದರೆ ಅದೆಲ್ಲ ಈಗ ಕಾಡುವ ನೆನಪು.

ನಿನ್ನ ಕಾಲೇಜು ಜೀವನ ಮುಗಿದ ನೆನಪಿಗಾಗಿ ಅಂತ ಗುಜರಾತ್ ಎಂಪೋರಿಯಂ ಗೆ ಕರೆದುಕೊಂಡು ಹೋಗಿ ಒಂದು ಟಾಪ್ ಮತ್ತು ಶಾಲ್ ಕೊಡಿಸಿದಾಗ ಹುಡುಗಿ ಸುತಾರಾಂ ಒಪ್ಪಲಿಲ್ಲ. ಬೇಡಪ್ಪಾ ನನಗಿದೆಲ್ಲ-ಅಂತ ಹಲವಾರು ಬಾರಿ ಸಂಕೋಚದ ಮುದ್ದೆಯಾಗಿದ್ದಳು. ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ನಾನು ಇದೇ ಟಾಪ್‌ನಲ್ಲೇ ನಿಮ್ಮೆದುರಿಗಿರ್‍ತೇನೆ ಅಂದವಳು ಈಗ. . .

ಮಾಸ್ ಕಾಮ್ ಮುಗಿಸಿ ಸಂಡೇ ಇಂಡಿಯನ್ ಗೆ ಹಾರಿದಾಗ ಅವಳ ಮುಖ ನೋಡಬೇಕಿತ್ತು. ಮಗುವಿನಂತೆ ಸಂಭ್ರಮಪಟ್ಟಿದ್ದಳು.

ಹದಿನೈದು ದಿನಗಳ ಹಿಂದೆಯಷ್ಟೇ ಫೋನ್ ಮಾಡಿ ಆಫೀಸಿನಲ್ಲಿ ಇವರ ಎಕ್ಸ್‌ಪೆಕ್ಟೇಶನ್ ರೀಚ್ ಆಗಕ್ಕೆ ಆಗ್ತಿಲ್ಲ ಅಂತ ಕಣ್ಣೀರು ಹಾಕಿದ್ದಳು. ಹುಚ್ಚು ಹುಡುಗಿ ನೀನಿನ್ನೂ ಸೇರಿ ತಿಂಗಳಾಗಿದೆಯಷ್ಟೇ. ಈಗಲೇ ಹೀಗೆಂದರೆ ಹೇಗೆ ಅಂತ ಹೇಳಿ, ಮೊದಲ ಕೆಲಸ ಅಂದರೆ ಎಲ್ಲರಿಗೂ ಹೀಗೇನೇ. ಸ್ವಲ್ಪ ಟೈಂ ಕಳೀಲಿ ಎಲ್ಲಾ ಸರಿಹೋಗತ್ತೆ ಅಂತ ಸಮಾಧಾನಿಸಿದ್ದೆ. ಪುಟ್ಟ ಮಗುವಿನಂತೆ ತಲೆ ಅಲ್ಲಾಡಿಸಿರಬೇಕು ಅವಳು ಕಣ್ಣೀರು ವರೆಸಿಕೊಳ್ಳುತ್ತಾ.

ಆದರೆ ಮೊನ್ನೆ ಶನಿವಾರ ಬೆಳಗ್ಗೆ ಬೇಳೂರು ಸುದರ್ಶನ್ ಫೋನ್ ಮಾಡಿ ಶಿಲ್ಪಶ್ರಿ ಅಂದ್ರು. ಕುಕ್ಕೆಗೆ ಅದೇ ತಾನೇ ಬಂದಿಳಿದಿದ್ದೆ ಮನೆಯವರೆಲ್ಲರೊಂದಿಗೆ. ಹಾಂ ಹೇಳಿ. ಏನು ಹೇಳಿ ಅಂದಿದ್ದಕ್ಕೆ ಅವರು ಶಿಲ್ಪಶ್ರೀ ತೀರಿಹೋದ್ಲಂತೆ ಅಂದ್ರು. ಆಕ್ಸಿಡೆಂಟ್ನಲ್ಲಿ.

ಚಿಕ್ಕಮಗಳೂರಿನಲ್ಲಿ ಪ್ರಜಾವಾಣಿ ಕರೆಸ್ಪಾಂಡೆಂಟ್ ಆಗಿರೋ ಘನಶ್ಯಾಮ್ ಫೋನ್ ಮಾಡಿ ಅದೇ ಸುದ್ದಿ ಹೇಳಿದ. ನಾನು ಅವಳನ್ನ ನೋಡೇ ಇಲ್ಲ ಆದರೆ ಅವಳ ಸಾವಿನ ಸುದ್ದಿ ನನಗೇ ಮೊದಲು ಗೊತ್ತಾಯ್ತು ಅಂದ. ಹೌದು ಶ್ಯಾಮಾ. ಬೆಂಗಳೂರಿಗೆ ಬಂದಾಗ ಸದಾ ಅಂಟಿಕೊಂಡೇ ಇರುತ್ತಿತ್ತದು ಮಗುವಿನ ಹಾಗೆ. ಆದರೆ ಕೊನೆ ಬಾರಿ ನಾನವಳನ್ನು ನೋಡೋದಿಕ್ಕೇ ಆಗ್ಲಿಲ್ವಲ್ಲೋ ಅಂದೆ. ಕುಮಾರಧಾರಾ ನದಿ ಹರಿಯುತ್ತಲೇ ಇತ್ತು. ಅವಳ ಬೆಳದಿಂಗಳಂಥ ಪ್ರತಿಬಿಂಬವನ್ನೂ ಆ ಅಲೆಗಳೆಲ್ಲ ಕಸಿದುಕೊಂಡಿದ್ದವು.

20 comments:

sunaath said...

ತುಂಬ ದುಃಖವಾಯ್ತು. ವಿಧಿ ಎಷ್ಟು ಕ್ರೂರಿ.

Harish kera said...

ಲವಲವಿಕೆಯ ಎಳೆಯ ಜೀವಗಳ ಅಗಲಿಕೆ ಯಾವಾಗಲೂ ನಮ್ಮನ್ನು ಅವರ್ಣನೀಯ ವಿಷಾದದಲ್ಲಿ ಅದ್ದುತ್ತದೆ.
- ಹರೀಶ್ ಕೇರ

Raghu said...

Nijavaagiu devarannu shapisabeku annastide ninna bavanige nodi...! Shilpala badukin dinagal noda horatare.....! ellarallu atimyate, preeti, mamateyanna torisu sahaja swabhaavada putta hudugi shilpa anta nimmagala baravanigeyalli gottagutte.aadru "savu" annodu sathy......nenapugalu maatray namgela nithya.....naanu a paapuna nodiradiddare avalu "HEEGE IDDALU" anta uhisikollaballe ninna baravanigeyinda......Deavaru aval aatamkke saanti koduv jotege avalanna kaledukondu novalliro adesto janarige samdhana....e "anivaarya"na tadedukollo shaktiyanna kodali anta devaralli bedikolluva - Raghu Telagadi

ವಿಕಾಸ್ ಹೆಗಡೆ/Vikas Hegde said...

:(

ಸುಶ್ರುತ ದೊಡ್ಡೇರಿ said...

ಶಿಲ್ಪನ ಸಾವಿನ ಶಾಕಿನಿಂದ ಹೊರಬರಲಿಕ್ಕೇ ಬಿಡ್ತಿಲ್ವಲ್ಲಾ ನೀವುಗಳು.. ಪ್ಲೀಸ್.. ಇನ್ನು ಸಾಕೂ.. :(

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

ಕಾಣದ ಆ ಎಳೆಯ ಜೀವದ ಆತ್ಮಕ್ಕೆ ಕಾಣದ ಆ ಭಗವಂತ ಚಿರ ಶಾಂತಿ ಕೊಡಲಿ.. ಅಂತೆಯೇ ಆಕೆಯ ಹೆತ್ತವರಿಗೆ ಹಾಗೂ ಪ್ರೀತಿಪಾತ್ರರಿಗೆ ಅವಳ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಅಂತರಾಳದಿಂದ ಪಾರ್ಥಿಸುವೆ. ನಿಯತಿಯ ಮುಂದೆ ನಾವೆಲ್ಲಾ ಎನೂ ಅಲ್ಲ ಅಲ್ಲವೇ? :(

ಶಾಂತಲಾ ಭಂಡಿ said...

.

ಕುಕೂಊ.. said...

..(:
ತಲೆಯಲ್ಲಿ ಮಂಕು ಬಡಿದಂತಾಗಿ ಮಾತು ಹೊರಡುತ್ತಿಲ್ಲ. ಬದುಕೇ ಈಗೆಲ್ಲವೇ? ಅದೇ ಪ್ರಶ್ನೆ..!! ಎದೆಯಲ್ಲಿ ಇನ್ನೂ ಉಳಿದಿದೆ..ಉತ್ತರ.....???!!!!


ಸ್ವಾಮಿ
ಪುಣೆ..

http://baaladaari.blogspot.com/
http://gubbacchi-goodu.blogspot.com/

Chamaraj Savadi said...

ಮನಸ್ಸು ಕಲಕಿದ ಬರಹ.

೧೯೯೮ರಲ್ಲಿ ಪತ್ರಕರ್ತ ಸೀತಾನದಿ ಸುರೇಂದ್ರ ತೀರಿಕೊಂಡ ದಿನಗಳನ್ನು ನೆನಪಿಸಿತು. ಆಗ ನಾನು ಹಾಯ್‌ ಬೆಂಗಳೂರಲ್ಲಿದ್ದೆ. ಅವರು ಸಾಯುವ ಹಿಂದಿನ ದಿನ ರಾತ್ರಿಯಿಡೀ ಕಚೇರಿಯಲ್ಲೇ ಇದ್ದರು. ಜೊತೆಗೆ ನಾನಿದ್ದೆ. ತುಂಬಾ ಸಂಕೋಚದ ಸ್ವಾಭಿಮಾನಿ ವ್ಯಕ್ತಿ. ಮರುದಿನ ಮಧ್ಯಾಹ್ನದ ಹೊತ್ತಿಗೆ ಹೃದಯಾಘಾತವಾಗಿ ದಿಢೀರನೇ ತೀರಿಕೊಂಡ ಸುದ್ದಿ ಬಂದಾಗ ನನಗೆ ಆಘಾತವಾಗಿತ್ತು.

ಶಿಲ್ಪಾಳನ್ನು ನಾನು ನೋಡಿಲ್ಲ. ಆದರೆ, ನೀವೆಲ್ಲ ಹೇಳುವುದನ್ನು ಕೇಳಿದಾಗ, ಅವಳ ವ್ಯಕ್ತಿತ್ವ ಊಹಿಸಿಕೊಳ್ಳಬಲ್ಲೆ. ನಮ್ಮ ವ್ಯವಸ್ಥೆ ಎಷ್ಟು ನೀಚತನದಿಂದ ಕೂಡಿದೆ ಎಂದರೆ, ಇಂತಹ ಉತ್ಸಾಹದ ಬುಗ್ಗೆಗಳನ್ನು ವೃತ್ತಿಯಲ್ಲಿ ತುಂಬ ಕಾಡಿರುತ್ತಾರೆ. ಅಕಾಲಿಕ ಸಾವು ಅಂತಹ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಮೇಲೆ ಆಕ್ರೋಶ ಹುಟ್ಟಿಸುತ್ತದೆ.

ಆಕಸ್ಮಿಕ ಸಾವು ಯಾವಾಗಲೂ ಆಘಾತಕಾರಿ. ಅದನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟ. ಶಿಲ್ಪಾ ಎಷ್ಟೊಂದು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾಳೆ! ಅದು ಅವಳ ತುಂಬು ಬದುಕಿಗೆ ಹಿಡಿದ ಕನ್ನಡಿ.

ಅವಳನ್ನು ಬಲ್ಲವರಿಗೆ ಈ ಸಾವು ಸಹಿಸುವ ಶಕ್ತಿ ಬರಲಿ ಎಂದು ಆಶಿಸುತ್ತೇನೆ.

- ಚಾಮರಾಜ ಸವಡಿ

ಪ್ರಾಂಜಲೆ said...

first time nim blog nodide thumba chennagide....

ಪಲ್ಲವಿ ಎಸ್‌. said...

ಮತ್ತೊಂದು ಮುಗ್ಧಜೀವ ಕನಸು ಕುದುರುವ ಮೊದಲೇ ಹಾರಿಹೋಯಿತೆ?

ನಮ್ಮ ಅಸ್ತಿತ್ವ ಎಷ್ಟೊಂದು ಪೊಳ್ಳು! ಎಂತೆಂಥ ಭ್ರಮೆಗಳು ಈ ಅನಿಶ್ಚಯತೆಯಲ್ಲಿ!

- ಪಲ್ಲವಿ ಎಸ್‌.

ಮನಸ್ವಿ (view photo blog too) said...

ಮತ್ತೊಂದು ಜೀವ ಅರಳುವ ಮುನ್ನ ಬಾಡಿ ಹೋಯಿತೆ, ಓದಿ ಸಂಕಟ ಆಯ್ತು, ಶಿಲ್ಪಳ ಆತ್ಮಕ್ಕೆ ಶಾಂತಿ ಸಿಗಲಿ,
ಆ ದೇವರು ನಿಮಗೆ ದುಃಖ ಮರೆಯುವ ಶಕ್ತಿ ಕೊಡಲಿ... ಮುಂದೆ ಏನು ಹೇಳಲು ಸಾಧ್ಯವಾಗುತ್ತಿಲ್ಲ.

Harish - ಹರೀಶ said...

ಶಾಂತಿ ಸಿಗಲಿ ಆಕಯ ಆತ್ಮಕ್ಕೆ

ವಿಧಿಯ ಮುಂದೆ ನಾವೆಲ್ಲ ಕೈಗೊಂಬೆಗಳಲ್ಲವೆ?

ರಾಜೇಶ್ ನಾಯ್ಕ said...

ಶಿಲ್ಪಶ್ರೀ ಬಗ್ಗೆ ಬೇಳೂರು ಸುದರ್ಶನ್ ಉದಯವಾಣಿಯಲ್ಲಿ ಬರೆದಿದ್ದು ಈ ಕೆಳಗಿನ ಕೊಂಡಿಯಲ್ಲಿದೆ.

http://www.udayavani.com/showstory.asp?news=1&contentid=573584&lang=2

shreedevi kalasad said...

ಸ್ನೇಹಿತರೆ, ಏನು ಹೇಳಬೇಕು ಗೊತ್ತಾಗ್ತಿಲ್ಲ ಶಿಲ್ಪಶ್ರೀ ಬಗ್ಗೆ. ಓಡಿ ಓಡಿ ಹೋಗ್ತಾ ಇದ್ರೆ ಅವಳು ಸಿಗಬಹುದೇನೋ ಅನ್ನಸ್ತಿದೆ. ಆ ನಗು, ಮಾತು, ವಿನಯ, ಕಲಿಯುವ ಹಂಬಲ ಎಲ್ಲ ಮಗುವಿನ ಹಾಗೆ. ಸುದರ್ಶನ್ ಉದಯವಾಣಿಯಲ್ಲಿ ಬರೆದದ್ದನ್ನು ನೋಡಿದ್ ಮೇಲೆ ಇನ್ನಷ್ಟು ಸಂಕಟವಾಗ್ತಿದೆ.

ವಿನಾಯಕ ಕೆ.ಎಸ್ said...

kalasad avare
times of indiadinda geleya subbu cal maadi "a shilpa anta sagarada hudugiyante. apagaatadalli sattuhodlante. avala photo atava avala kuritu maahiti sigabahuda anta kelida? allivaregu shilpshri kuritu nange gotirlilla. marudina maneyinda amma cal maadi petretion naraharya magalu hodlante anta kate helidru. aamele gottaytu shilpa andre yaaru anta. suddi keli tumba bejaaraayitu. istu maatra helaballe.
nimma blog bagge kelidde ivattu kannige bittu. chennaagide.

Raghu said...

ಶ್ರೀದೇವಿ,

ನಿಜವಾಗ್ಲೂ ತುಂಬಾ ನೋವು ಅನ್ಸತ್ತೆ ಆ ಹುಡುಗಿಯ ಕುರಿತಾಗಿ ನಿಮ್ಮಗಳ ಬರವಣಿಗೆಯಲ್ಲಿ ನೋಡಿ ಅವಳಿಲ್ಲವಲ್ಲ ಈಗ ಅಂತ....! ಆ ಹುಡುಗಿಯ ಅಪ್ಪ-ಅಮ್ಮಗೆ ಇನ್ನು ನೋವು ಜಾಸ್ತಿ ಆಗುತ್ತೆ ಅಲ್ವಾ ಇಂತಹ ಬರವಣಿಗೆಗಳನ್ನ ನೋಡಿದ್ರೆ....ಅವರಿಗಷ್ಟೆ ಏನು ನನಗೂ ಕೂಡಾ.....! ಹೆಯ್...ಬಹುತೇಕ ನಿನ್ನ ಸ್ನೇಹಿತರು ನನಗೆ ಗೊತ್ತು...ಆದ್ರೆ ಈ ಪಾಪುನ ನನಗೆ ಪರಿಚಯ ಮಾಡಸ್ಲೆ ಇಲ್ಲ....ಆದ್ರೆ ಈಗ ನನಗೆ ಅವಳನ್ನ ನೋಡಿರದಿದ್ರು........ಅವಳು ಚಿನ್ನದ ನಗುವಿನ ರನ್ನದ ಮುಗ್ಧ ಮಗು ಅನ್ನೊದು...ಅವಳ ಆ ಚಿತ್ತ ನಮ್ಮೆಲರಲ್ಲೂ ಶಾಸ್ವತ ಅನ್ಸತ್ತೆ ನನ್ಗೆ! ನಾವು ಬದುಕಲ್ಲಿ ನಮ್ಮ "ನೆನನಪು"ಗಳನ್ನ ಹೇಗೆ ಜನರಲ್ಲಿ ಬಿತ್ತಬಹುದು.....ಅಂದರೆ ನಮ್ಮ ಬದುಕಿನ "ದಿನ"ಗಳನ್ನ ಲೆಕ್ಕ ಹಾಕದೆ ಇದ್ದಷ್ಟು ದಿನಗಳಲ್ಲಿ ನಮ್ಮ "ರೀತಿ-ನೀತಿ" ಗಳು ಹೇಗೆ ಜನರನ್ನ ಮೆಚ್ಚಿಸುತ್ತವೆ ಅನ್ನೊದಕ್ಕೆ "ಶಿಲ್ವಶ್ರೀ" ಒಂದು ಉದಾಹರಣೆ. ಆ ಪುಟ್ಟ ಪೋರಿಯ ಮನದ ನಿನಾದಗಳನ್ನ ಯಾರ ಹತ್ತಿರವಾದರು ಯಾವಗಲೋ ಅವಳು ಉಲಿದಿದ್ದರೆ ಅದನ್ನ ಸಾಧ್ಯವಾದರೆ "ಕವಿ-ಬರಹ ಬಳಗ"ದವರು ಈಡೇರಿಸಲಿ ಎಂದು ಆಶಿಸುವೆ. ಅವಳ ಕಳೆ ಬರದ ಸನ್ನಿವೇಶಗಳನ್ನ ಬರೇದ ಸುದಶ೯ನ್ ಬರೆದ ಪದಗಳು ಕಣ್ಣೇರಿರಿಸದೆ ಬಿಡದು....ಅದನ್ನ ಅವರು ಸಹಿಸಲು ತುಂಬಾನೆ ಕಷ್ಟ ಪಟ್ಟಿರ್ತಾರೆ........ಸಹಿಸಲಾಗದಾ ನೋವು.......ಆದ್ರು ಅವಳು ನಮ್ಮೋಟ್ಟಿಗೆ ದೈಹಿಕವಾಗಿ ಇಲ್ಲದಿರಬಹುದು ಸರ್, ಆದ್ರೆ ಅವಳ ನೆನಪುಗಳು ನಮ್ಮಿಲ್ಲಿವೇ...ಅವಳು ನಮ್ಮೋಟ್ಟಿಗೆ ಇದಾಳೆ ಅನ್ನೋ ನಂಬಿಕೆಯಲ್ಲಿ ಇರೋಣ....ಇಲ್ಲ....ಇಲ್ಲ....ಅವಳಿಲ್ಲ ಅನ್ನೋ ರೋಧನೆಗಿಂತ ಇದು ಒಳ್ಳೇದು ಅಂತ ನನ್ನ ಭಾವನೆ.

ಅಕ್ಕ, ನಿಜವಾಗ್ಲು ನನ್ನ ಬದುಕಲ್ಲಿಯಂತು ಶಿಲ್ಪಾ ಒಂದು ಉದಾಹರಣೆಯಾಗಿದಳೆ. ಅವಳು ಬದುಕಿನ ಕೆಲ ದಿನಗಳಲ್ಲಿ ಸಂಬಂಧಿಗಳನ್ನ ಹೊರತುಪಡಿಸಿ ಹೊರಗಿನವರನ್ನ ನನ್ನವರನ್ನಾಗಿಸಿಕೊಳ್ಳೊ ಶಕ್ತಿಯನ್ನ ಅದು ಹೆಗೆ ಗಳಿಸಿಕೊಂಡಿದ್ಲು ಅಂತ....! ಅದನ್ನ ನಾನು ನಿಜವಾಗ್ಲೂ ಕಲಿಬೇಕು. ನೀನು ಕಳಿಸಿದ ಅವಳ ಮುಖ ಚಿತ್ರ ನೋಡಿದಾಗ ಅದು ಒಂದು ಮುಗ್ಧ ಮೊಗದ ಮಗು ಅಂತ ಅನ್ನಸ್ತು....ಬರವಣಿಗೆಯ ಪುಟಗಳನ್ನ ತಿರುವಿ ನಿಂತಾಗ ಕಾಣದ ಅವಳ ಮನಸ್ಸು ಕೂಡಾ ಅಷ್ಟೆ ಅಂತಾ ಗೊತ್ತಾಯಿತು.

ಅವಳ ಮೆಚ್ಚಿ, ಈಗ ಬೆಚ್ಚಿದ ಅವಳ ಅಪಾರ ಬಳಗಕ್ಕೆ ಅವಳು ಅವಳ ನೆನಪಿನೊಂದಿಗೆ ನಮ್ಮೋಟ್ಟಿಗೆ ಇದಾಳೆ ಅನ್ನೋ ನಂಬಿಕೆ ಇರಲಿ, ಅವಳಿಲ್ಲ ಅನ್ನೊ ನೋವಿನ ಮಾತುಗಳು ಸಾಕು ಅನ್ನೋ ಮಾತಿನೊಂದಿಗೆ ಮತ್ತೆ ಅವಳ ಚಿರಾತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಮೊರೆ ಇಡುವ,

ರಾಘು ತೆಳಗಡಿ,
Radford, USA

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಬದುಕೇ ಹೀಗೇ ಶ್ರೀದೇವಿ..ಆ ಶಾಕ್ ನಿಂದ ಚೇತರಿಸಿಕೊಂಡಿಲ್ಲ ನಾವು..ಪ್ಲೀಸ್ ತುಂಬಾ ಬರೆಯಬೇಡಿ!
-ಚಿತ್ರಾ

NADIPREETI said...

ಪ್ರಿಯ ಶ್ರೀದೇವಿ
ಯಾಕೋ ಗೊತ್ತಿಲ್ಲ ತುಂಬಾ ದುಃಖ ಆಯ್ತು. ನೀವು ಕಟ್ಟಿಕೊಟ್ಟ ಅವಳ ಚಿತ್ರ ನನ್ನ ಕಣ್ಣಲ್ಲಿನ್ನೂ ಕದಲಲಿಲ್ಲ. ಬದುಕು ಏನಲ್ಲ ಆಗಿಬಿಡುತ್ತೆ ಅಲ್ವಾ?
ಎನಿವೇ
ಟೇಕ್ ಕೇರ್. ಇನ್ನುಮೇಲೆ ಫ್ರೀಕ್ವೆಂಟ್ ಆಗಿ ನೋಡ್ತೇನೆ.
ರವಿ ಅಜ್ಜೀಪುರ

shivu K said...

ತುಂಬಾ ಬೇಸರವಾಗ್ತಿದೆ. ನನ್ನ ದಿನಪತ್ರಿಕೆ ಹಂಚುವ ಹುಡುಗ ಇದೇ ರೀತಿ ಅಪಘಾತದಲ್ಲಿ ಸತ್ತದ್ದು ನೆನಪಾಯಿತು. ತುಂಬಾ Attachment ಇಟ್ಟುಕೊಂಡರೆ ಈ ರೀತಿ ಬರೆಯಬೇಕೆನಿಸುತ್ತದೆ. ಆವಳ ಬಲ್ಲವರಿಗೆ ಈ ಸಾವು ಸಹಿಸುವ ಶಕ್ತಿ ಬರಲಿ ಎಂದು ದೇವರಲ್ಲಿ ಬೇಡುತ್ತೇನೆ.
ಮತ್ತೊಂದು ವಿಷಯ ಅಪಾರ ಬ್ಲಾಗಿನಲ್ಲಿ ಕುಂ ವಿ ಫೋಟೊ ಚೆನ್ನಾಗಿದೆ ಎಂದಿದ್ದೀರಿ Thanks.