Thursday, September 11, 2008

ಹಳದಿಯೊಳಗಿನ ಬೆಳಕುಸಿಕ್ಕ ಅಷ್ಟಿಷ್ಟು ಎಳೆಗಳನ್ನೇ ಹೊಸೆದು ಒಪ್ಪ ಮಾಡಬೇಕೆಂದು ಗಟ್ಟಿ ಮನಸ್ಸು ಮಾಡಿದವಳಿಗೆ ಅದ್ಯಾಕೋ ಬೇಸರ. ಬೇಡವೇ ಬೇಡವೆಂದು ಕೈಕಟ್ಟಿದರೂ ತುಂಡರಿಸುವ ಎಳೆಗಳ ಹಿಂದೆಯೇ ಹೊಸ ಎಳೆಗಳು ಇಣುಕಿ, ಕಟ್ಟಿದ ಕೈಯನ್ನು ಮತ್ತೆ ಮತ್ತೆ ಬಿಚ್ಚಿಸುತ್ತಿವೆ. ಒಂದೂ ಕೈಗೂಡುತಿಲ್ಲ. ಎಲ್ಲ ತೊಡಕು. ಎಡಕು. ಬಲಕೂ.

ತನ್ನ ಚೌಕಟ್ಟಿನೊಳಗೆ ನಿಲುಕಿದ್ದನ್ನು ತೋರಿಸುವ ಕಿಟಕಿಗಂತೂ ಬೇಸರ ಪದದ ಪರಿಚಯವೇ ಇದ್ದಂತಿಲ್ಲ. ನಿಂತಲ್ಲೇ ನಿಂತು ಮರಗಟ್ಟಿದರೂ ತಾನು ಚಲನಶೀಲ ಎಂತಲೇ ಸ್ವರ ಹಚ್ಚುತ್ತದೆ ಮಂದ್ರದಲ್ಲಿ. ಮಧ್ಯಮದ ಮಿಡಿತ ತಾರಕದ ಸೆಳೆತ ಮಂದ್ರಕ್ಕಿಲ್ಲ. ಆದರೆ ತಪ್ತಭಾವಕ್ಕೆ ನಾದದ ಅನುಭೂತಿ ನೀಡುವ ಅದಮ್ಯ ಶಕ್ತಿ ಇರುವುದು ಇದಕ್ಕೆ ಅಲ್ಲವೆ?

ಕುಸಿದಾಗ ಎದೆಗಂಟಿಸಿಕೊಂಡು, ಕುಣಿದಾಗ ಕೈಜೋಡಿಸುವ ಇದರ ಒಳ-ಮನಸು ನಿರಾಕಾರ. ಆದರೆ ಪಿಸು-ಮುನಿಸು ಮಾತುಗಳ ತನ್ನೊಡಲೊಳಗೆ ಹಾಕಿಕೊಳ್ಳುವ ಮಾತು ಕೊಟ್ಟು, ಒಮ್ಮೆ ಒಂದು ಆಕಾರದಲ್ಲಿ ಗೋಡೆಗಂಟಿಕೊಂಡಾಗಿದೆ ಎಂದೋ. ಮಾತೆಂದರೆ ಮಾತು. ಅದು ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ ಎಂಬಂತೆ. ತನ್ನ ಇರವಿನ ಬಗ್ಗೆ ಅರಿವಿದೆ : ಕತ್ತಲೆಯ ರಿಕ್ತ, ಬೆಳಕಿನ ಮುಕ್ತ, ನಟ್ಟನಡುವೆ ತಾನೆಂದು.

ಹಂಗಿಲ್ಲದೇ ಅರಳಿ ನಿಂತ ಹಳದಿ ಹೂವು ತೋರಿಸುವುದೆಂದರೆ, ಅಪರೂಪಕ್ಕೆ ತಾರಕದ ಪಂಚಮ ಸ್ಪರ್ಶಿಸಿ ಬಂದಷ್ಟು ಖುಷಿ ಈ ಕಿಟಕಿಗೆ. ಆದರೆ ಅಲ್ಲಿ ಅಪರೂಪವಾದದ್ದು ಇಲ್ಲಿ ನಿತ್ಯ ಅನುಲಾಪ. ದೊಡ್ಡ ಆಕಾಶಕ್ಕೆ ಪುಟ್ಟ ಮುಖವೆತ್ತಿ ಹಂಗಿಸುವ ಹಳದಿಗೆ ಸಂಭ್ರಮದ ಹೊಳಪಿದೆ. ಅವನೊಂದಿಗೆ ಅರಳಿ ಅವನೊಂದಿಗೇ ಮರಳುವುದರ ಬಗ್ಗೆ ಅರಿವಿದ್ದರೂ, ಅರಳಿ ನಿಂತಾಗಿನ ಉತ್ಸಾಹ, ಮರಳುವಾಗಿನ ವಿಷಾದ ಎರಡನ್ನೂ ಸ್ವೀಕರಿಸುವ ಸಮಭಾವವಿದೆ. ಅವನ ಕುಕ್ಕುವ ಕಣ್ಣುಗಳನ್ನು ತನ್ನ ಹೊನ್ನ ಬಣ್ಣದಿಂದಲೇ ತಣ್ಣಗಾಗಿಸುತ್ತೇನೆಂಬ ತಿಳಿಅಹಮ್ಮೂ ಇಲ್ಲವೆಂತೇನಿಲ್ಲ.

ಗುಲಾಬಿ ಕೆಂಪು, ಮೊಲ್ಲೆ ಬಿಳಿ ನೋಡಿ - ಒಲ್ಲೆ ಹಳದಿ ಎಂದು ಅದೆಂದೂ ಹೇಳುವುದೇ ಇಲ್ಲ. ಅದು ಅದರ ಜಾಯಮಾನವೂ ಅಲ್ಲ. ಮೇಲೆ ಕುಳಿತವನು ಬರೆಯಬೇಕೆಂದು ಹೊರಟರೆ ಇದರ ಹಣೆ ಸಾಲಲೇ ಇಲ್ಲವಂತೆ. ಒಂದಿಷ್ಟು ಹಟವಿದ್ದೀತು ಆದರೆ ತನ್ನ ಸುತ್ತಲಿರುವವರನ್ನೂ ಅದರೊಳಗೆ ಎಳೆದುಕೊಳ್ಳುವ ಆಪ್ತಮನಸಿದೆ. ತೋಯ್ದ ಮನಸು ಅರಳಿಸುವ ಶಕ್ತಿ ಇದಕಿದೆ.

ಅವನ ರಾಗ ಅವಗೆ. ತನ್ನ ರಾಗ ತನಗೆ ಎಂದುಕೊಳ್ಳುತ್ತ ನಾಳೆಯವರಿಗೆ ಈ ಗುಟ್ಟು ಬಿಚ್ಚಿ, ತನ್ನ ಬೆನ್ನ ಹಿಂದಿನ ಪ್ರಶ್ನೆಗಳನ್ನೆಲ್ಲ ಅವರೆದೆಗೆ ಒತ್ತಿಕಟ್ಟಬೇಕೆನ್ನುವಾಗ ಥೇಟ್ ಮುದ್ದುಹುಡುಗಿಯ ಹಟಮುನಿಸೇ ಈ ಹಳದಿ ಚೆಲುವೆಯದು. ಹಾಗೆ ಮೂಲೆಯಲಿ ಮೊಣಕಾಲೂರಿ, ಗದ್ದ ಆನಿಸಿ ಮುಸುಮುಸು ಮಾಡುವವಳು ಇವಳು ಅಲ್ಲವೇ ಅಲ್ಲ. ಹಾಗೇ ಮಾಡಿದರೂ ಕತ್ತಲ ರಾತ್ರಿಯಲ್ಲಿ ಕುಸಿದ ಕತ್ತಿಗೆ ನೀನಲ್ಲವೇ ಜೊತೆಗಾತಿ ಎಂದು ಜ್ಞಾನದೀಪದತ್ತ ಒಂದು ಶಾಂತನೋಟ ಬೀರುವವಳು. ನಂತರವೇನಿದ್ದರೂ ಒಂದಿಷ್ಟು ವಿಲಂಬಿತ ಗತಿಗೆ ತಿರುಗುವ ಎವೆಸಾಲು. ಏರಿಳಿವ ಎದೆ. ತಣ್ಣಗಾಗುವ ಜೀವಜಲ. ಮನದ ತುಂಬ ಹೊನ್ನ ಬಣ್ಣ ಬಣ್ಣ. ಕೊನೆಗೊಂದು ಏಕಾಂತ ಪಯಣ. ಆ ಪಯಣಕ್ಕೆ ಬೇಸರವೆಂದರೆ ಏನೆಂದು ಅರಿಯದ ಕಿಟಕಿಯೇ ಶಾಶ್ವತ ಗೆಳೆಯ. ಮತ್ತೆ ಹೊನ್ನನಗೆಯರಳಿಸಿ, ಇಳೆಗೆ ಮುಖವಿಡುವ ಹಳದಿ ಹೂಗಳೇ ನಿತ್ಯ ಸ್ಫೂರ್ತಿದೀಪ್ತಿ.

10 comments:

sunaath said...

ಹಳದಿ ಹೂವಿನ ಪ್ರಶಾಂತವಾದ, ಬದುಕನ್ನು ಬಂದಂತೆ ಸ್ವೀಕರಿಸುವೆ ಎನ್ನುವ ಮನಸ್ಸಿನ ಚಿತ್ರವನ್ನು ಮಂದ್ರ ಆಲಾಪದಲ್ಲಿ ಹಾಡುವ ಈ ಲೇಖನವನ್ನು ಏನೆಂದು ಹೇಳಲಿ?
'ಕಿಟಕಿಯಿಂದ ಕಂಡ ಕವನ'ಎಂದು ಕರೆಯಲೆ?
ಇಂತಹ ಮನೋಭಾವ ಮೂಡಲು, ಬರೆಯಲು ಸಾಧ್ಯವಾದ ಲೇಖಕಿಯ ಮನಸ್ಸು ಹೊನ್ನ-ಹಳದಿಯ ಮನಸ್ಸೇ ಇರಬೇಕು.
ಅಭಿನಂದನೆಗಳು, ಶ್ರೀದೇವಿ.
-ಸುನಾಥ ಕಾಕಾ

Chamaraj Savadi said...

ಬರಹ ಚೆನ್ನಾಗಿದೆ. ಆಳಕ್ಕೆ ಇಳಿಯುತ್ತ ಇಳಿಯುತ್ತ, ಬಂದ ದಾರಿಯ ಜಾಡನ್ನೇ ಮರೆತು ಮುಂದೆ ಸಾಗಿದ್ದೀರಿ. ಬರವಣಿಗೆಯ ಸೊಬಗು ಅದು, ಅಷ್ಟೇ ಅಲ್ಲ ಮಿತಿಯೂ ಹೌದು. ತುಂಬ ಗಹನತೆಯಿಂದ ಬರೆದರೆ ಹೀಗಾಗುತ್ತದೆ. ಸ್ವಗತ ಬರಹವಾದ ಸೊಬಗಿದು. ಹಾಗೆ ಹೇಳುತ್ತ ಹೇಳುತ್ತ, ಅರೆರೆ, ಇದನ್ನು ಯಾರಾದರೂ ಕೇಳಿಸಿಕೊಳ್ಳುತ್ತಿದ್ದಾರಾ? ಅವರಿಗೆ ನನ್ನ ಸ್ವಗತ ಅರ್ಥವಾಗ್ತಿದೆಯಾ? ಅಂತ ಮುಖ್ಯ ತಿರುವಿನಲ್ಲಿ ಒಮ್ಮೆ ನಿಂತು ಯೋಚಿಸಿದರೂ ಸಾಕು- ಬರವಣಿಗೆ ಆಳದ ಜೊತೆಗೆ ವಿಸ್ತಾರವೂ ಆಗುತ್ತದೆ.

ಇದು ನನ್ನ ನಮ್ರ ಅನಿಸಿಕೆ. ಬರಹ ಇಷ್ಟವಾಯಿತು. ಎಲ್ಲರಿಗೂ ಅದರ ಸ್ವಾದ ದಕ್ಕಲಿ ಎಂಬ ಆಸೆಯಿಂದ ನನಗೆ ತಿಳಿದ ಸಲಹೆ ಕೊಟ್ಟಿದ್ದೇನೆ. ಪರಾರಂಬರಿಸಬೇಕು.

- ಚಾಮರಾಜ ಸವಡಿ

ಪಲ್ಲವಿ ಎಸ್‌. said...

ಅದಲ್ಲಿಂದ ತರ್ತೀ ಶ್ರೀದೇವಿ ಇಂಥ ಬರಹಗಳನ್ನು?

ಏನನ್ನು ನೋಡಿ ಮನಸ್ಸು ಉಕ್ಕುವುದೋ, ಬಿಕ್ಕುವುದೋ ಗೊತ್ತಾಗುವುದಿಲ್ಲ.

ಬರೆದಿದ್ದನ್ನು ಓದಿ ಮನಸ್ಸಿನಲ್ಲೊಂದು ಭಾವ ಅರಳಿ ನಿಂತಿತು ನಿಜ. ಅದನ್ನು ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ.

ಚಂದದ ಬರಹ.

- ಪಲ್ಲವಿ ಎಸ್‌.

shreedevi kalasad said...

@ ಸುನಾಥ ಅಂಕಲ್‌,
ನಿಜ ಹಳದಿಯ ಗುಣ-ಸ್ವಭಾವವನ್ನ ಆಸ್ವಾದಿಸಿದ್ದಕ್ಕೆ ಥ್ಯಾಂಕ್ಸ್

***
@ ಚಾಮರಾಜ್ ಸರ್‍,
ಒಮ್ಮೆ ಬರೆದು ಅದನ್ನು ಓದಿದ ಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳನ್ನೇ ನೀವು ಇಲ್ಲಿ ಎತ್ತಿ ಹಿಡಿದಿದ್ದೀರಿ. ನಿಮ್ಮ ಸಲಹೆಗೆ ಧನ್ಯವಾದ

***
@ ಗ್ಯಾರಂಟಿ ರೊಕ್ಕ ಕೊಟ್ರಂತೂ ಬರೂದಿಲ್ಲ ಅಂತ ನಿನಗ್ ಬ್ಯಾರೇ ಹೇಳಬೇಕೇನ?

super said...

ಇದು ಬರಹ ಅಲ್ಲ. ಸಂಗೀತದ ಸ್ವರಕುಂಚಗಳನ್ನು ಕೋಮಲ ಭಾವನೆಗಳ ಬಣ್ಣದಲ್ಲಿ ಅದ್ದಿ ಎತ್ತಿ ಚುಮುಚುಮು ಮಂಜಿನ ಮೇಲೆ ಲೇಪಿಸಿದ ಅತ್ತರಿನ ರೇಕುಗಳಿವು. 'ಬರಹ' ಖಂಡಿತ ಅಲ್ಲ. ನನ್ನಂಥ ಧ್ರುತ್ ರಾಷ್ಟ್ರರಿಗೆ ನಿಲುಕಿದ್ದೂ ಅಲ್ಲ.
-ನಾಗೇಶ ಹೆಗಡೆ

ಪಲ್ಲವಿ ಎಸ್‌. said...

ತಗೊಳವ್ವಾ,

ನಾಗೇಶ ಹೆಗಡೆ ಅಂಥವ್ರು ಬಣ್ಣದ ರೇಕಿನಲ್ಲಿ ಮೆಚ್ಚುಗೆ ಬರೆದಿದ್ದಾರೆ ಎಂದ ಮೇಲೆ, ನನ್ನಂಥವಳಿಗೆ ರೊಕ್ಕ ಕೊಟ್ರೂ ಸಿಗೋದು ಹ್ಯಾಂಗ?

ಎಲ್ಲಾ ಪಡಕೊಂಡು ಬಂದಿರಬೇಕು.

- ಪಲ್ಲವಿ ಎಸ್‌.

Harish kera said...

ಈ ಬರಹ ಹಳದಿ ಹೂವಿನ ಹಾಗೆ. ಇರುವುದು ಅರ್ಥವಾಗಲಲ್ಲ, ಅನುಭವಿಸಲು.
- ಹರೀಶ್ ಕೇರ

Sushma Sindhu said...

Hii ಶ್ರೀದೆವಿಯವರೇ,
ಅ೦ತರ೦ಗದ ಭಾವನೆಗಳು ಎಲ್ಲರ ಅಂತರಾಳವನ್ನು ಮೀಟುವ೦ತಿದೆ... ಅರ್ಥಗರ್ಭಿತ ವಾಕ್ಯ ಗಳು ...
~ಸುಷ್ಮ ಸಿಂಧು

shivu K said...

ಶ್ರೀದೇವಿಯವರೆ,

ನಿಮ್ಮ ಅಂತರಂಗದ ಭಾವನೆಗಳು ನಾನು ಫೋಟೊ ಕ್ಲಿಕ್ ಮಾಡುವಾಗಿನ ಥ್ರಿಲ್ಲುಗಳನ್ನು ನೆನಪಿಸಿದವು. ಚೆನ್ನಾಗಿ ಬರೆಯುತ್ತೀರಿ. ನೀವು fishmarketನಲ್ಲಿ ಸಿಕ್ಕಾಗ ನಿಮ್ಮ ಬ್ಲಾಗ್ ಹೇಳಿದ್ರಿ. ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

ಮತ್ತೊಂದು ಅಶ್ಚರ್ಯಕ್ಕೆ
http://camerahindhe.blogspot.com/

ranjith said...

"ಒಂದಿಷ್ಟು ವಿಲಂಬಿತ ಗತಿಗೆ ತಿರುಗುವ ಎವೆಸಾಲು"
"ಅಪರೂಪಕ್ಕೆ ತಾರಕದ ಪಂಚಮ ಸ್ಪರ್ಶಿಸಿ ಬಂದಷ್ಟು ಖುಷಿ ಈ ಕಿಟಕಿಗೆ."
ಈ ಸಾಲುಗಳ್ಯಾಕೊ ಹೊಸ ಪ್ರಯೋಗವೆಂಬಂತೆ ಅನಿಸಿತು. ಕಲ್ಪನೆ ಖುಷಿ ಕೊಟ್ಟಿತು.