Thursday, September 18, 2008

ಹೂಗ್ಲಿ ದಡದಲ್ಲಿ ರಾಜಗುರುಗಳ ನೆನಪುಉಗುರುಕಣ್ಣಿನ ಬಳಿ ಎದ್ದ ಸಣ್ಣ ಕುಂಚುತೊಗಲು, ಕೈಗೂ ಸಿಗದೇ ಹಲ್ಲಿಗೂ ಸಿಗದೇ ಕಿರಿಕಿರಿ ಮಾಡುತ್ತಿತ್ತು. ಒಮ್ಮೆ ಅದೊಂದಿಷ್ಟು ಕಿತ್ತುಬಂದು, ಒಂಚೂರು ಚುರುಗುಟ್ಟಿದರೇನೇ ಅದೇನೋ ಸಮಾಧಾನ. ಹಲ್ಲಿಗೂ, ಬೆರಳಿಗೂ ಮತ್ತದೇ ಕೆಲಸ ಮುಂದುವರೆಸಲು ಹೇಳಿ, ಲಾಡ್ಜ್ ಮ್ಯಾನೇಜರ್‌ ಮತ್ತು ಮಫ್ಲರಿನವನು ನಡೆಸುತ್ತಿದ್ದ ಬೆಂಗಾಲಿ ಸಂಭಾಷಣೆಯತ್ತ ಕಿವಿಚಾಚಿದೆ. ಆದರೂ ಅವರ ಸಂಭಾಷಣೆಯತ್ತ ಅದ್ಯಾಕೋ ಅಷ್ಟೊಂದು ಮನಸ್ಸು ವಾಲಿಕೊಳ್ಳಲಿಲ್ಲ. ಕಿವಿ ಮೇಲೆ ಬಿದ್ದರೂ ಅದನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗದೆ, ಹಾಗೇ ಪಕ್ಕದ ಮೂಲೆಯಲ್ಲಿ ಕಣ್ಣಾಡಿಸಿದೆ. ಕಲ್ಕತ್ತ ಪಾನಿನ ತಾಂಬೂಲದೋಕುಳಿ ಗೋಡೆಯುದ್ದಕ್ಕೂ ಚಿಮ್ಮಿತ್ತು. ಅದಾಗಲೇ ಮನಸ್ಸು ಒಮ್ಮೆ ಪಿಚ್ಚೆಂದಿತು. ಇನ್ನೇನು ರೂಂ ಸಿಗತ್ತೆ ಅನ್ನೋ ಖುಷೀಲಿದ್ದ ನಾನು ಒಮ್ಮೆ ಉಗುಳು ನುಂಗಿಕೊಂಡೆ.

ಅದ್ಯಾಕೋ ರೂಂ ಬುಕ್ ಮಾಡುವ ಮೊದಲು ಅಪ್ಪ ಒಮ್ಮೆ ಲಾಡ್ಜ್‌ನ್ನು ನೋಡುವ ಮನಸ್ಸು ಮಾಡಿದರೋ ಗೊತ್ತಿಲ್ಲ. ಆದರೆ ನಂತರ ಅನಿಸಿತು, ಅವರು ಹಾಗೆ ಮಾಡಿದ್ದು ಒಳ್ಳೆಯದೇ ಆಯಿತು ಎಂದು. ಅಪ್ಪ ಮಫ್ಲರಿನವನನ್ನು ಹಿಂಬಾಲಿಸುತ್ತಿದ್ದರೆ ನಾನು ಅಪ್ಪನನ್ನು. ಆದರೆ ಮತ್ತೆ ನನ್ನ ಕಣ್ಣುಗಳೋ ಎಂದಿನಂತೆ ಅಡ್ಡಡ್ಡಲಾಗೇ ನೋಡಲಾರಂಭಿಸಿದವು. ಸುತ್ತಲಿದ್ದ ಕಬ್ಬಿಣದ ಕಟಾಂಜನದ ವಿನ್ಯಾಸ ನೋಡಿಯೇ ಅಂದುಕೊಂಡೆ ಇದು ಬ್ರಿಟಿಷರ ಕಾಲದ ಕಟ್ಟಡ ಎಂದು. ಹೀಗೆ ಊಹಿಸಲು ಕಾರಣವೂ ಇತ್ತು. ಧಾರವಾಡದ ಕರ್ನಾಟಕ ಕಾಲೇಜು ಕಟ್ಟಡದ ಕಟಾಂಜನ ವಿನ್ಯಾಸದ ಮಾದರಿಯೂ ಇದನ್ನೇ ಹೋಲುತ್ತಿತ್ತು. ಇದನ್ನು ಗಮನಿಸುತ್ತ ಒಂದೊಂದೇ ಮೆಟ್ಟಿಲೇರುತ್ತಿದ್ದ ನನಗೆ ಯಾಕೋ ಒಂಚೂರು ಅಸಹಜ ವಾಸನೆಯಿಂದ ಉಮ್ಮಳಿಸಿದಂತಾಯಿತು. ಮತ್ತೆ ಸಾವರಿಸಿಕೊಂಡು, ಒಂದನೇ ಮಹಡಿಗೆ ಬಂದೆ. ಅಲ್ಲಿಯ ರೂಮಿನ ಬಾಗಿಲಿಗೆ ಜೋತುಕೊಂಡಿದ್ದ ಕರ್ಟನ್‌ಗಳು ಮೂಲಬಣ್ಣವನ್ನೇ ಕಳೆದುಕೊಂಡಿದ್ದವು. ಅಲ್ಲಲ್ಲಿ ಬೀಡಿ, ಸಿಗರೇಟಿನ ರಂಗೋಲೆ ಬೇರೆ. ಮತ್ತೆ ಉಸಿರು ಬಿಗಿಹಿಡಿದುಕೊಂಡೆ.

ತೆರೆದುಕೊಂಡೇ ಇದ್ದ ಒಂದು ರೂಮಿನ ಪರದೆಯನ್ನು ಸರಿಸಿ ಮಫ್ಲರಿನವ ಬನ್ನಿ ಒಳಗೆ ಅಂದ. ನಾನು ಅಪ್ಪನ ಕೈ ಎಳೆದು ಹಾಗೇ ಹೊರಗೇ ನಿಂತೆ. ಅವನು ಕರೆದನೆಂದು ಅವರೂ ಒಳಗೆ ಹೋಗಲಿಲ್ಲ. ಹುಳಹಿಡಿದ ಮಂಚ, ಎಂದೋ ಹಾಸಿದ ಬೆಡ್‌, ಬೆಡ್‌ಸ್ಪ್ರೆಡ್, ಬೂಸ್ಟ್ ಗೋಡೆಗಳು, ಓಬಿರಾಯನ ಕಾಲದ ಒಡಕುಗನ್ನಡಿ, ಒಡಕಿನುದ್ದಕ್ಕೂ ಅಂಟಿಸಿದ ಬ್ರೌನ್ ಟೇಪ್. ವಯಸ್ಸಾದ ಬೊಟ್ಟುಗಳ ಕೇವಲ ಅಂಟಿನ ಅಸ್ತಿತ್ವ ಉಳಿಸಿಕೊಂಡ ಕನ್ನಡಿಮೈ. ಅದರ ಪಕ್ಕದಲ್ಲೇ ಉಕ್ಕುವ ತಮ್ಮ ಹರೆಯವನ್ನೇ ಮತ್ತೆ ಮತ್ತೆ ಸೊಕ್ಕಿನಿಂದ ನೋಡಿಕೊಳ್ಳುತ್ತಿದ್ದ ಬಣ್ಣಬಣ್ಣದ ಬೊಟ್ಟುಗಳು. ಒಂದೇ ಎರಡೇ. . . ಹೇಳುತ್ತಾ ಹೋದರೆ.

ಬೇಡಪ್ಪಾ ಬೇಡ ಎಂದು ತಿರುಗಿ ಹೊರಡಲನುವಾದರೆ ಅಪರಿಚಿತ ನೋಟಗಳ ಪರಿಚಿತ ಸನ್ನೆಗಳು, ಕಿಟಕಿ ಸಂದಿಯಿಂದ. ಪರದೆ ಪಕ್ಕದಿಂದ. ಅಪ್ಜೀ...... ಎಂದು ರಾಗವೆಳೆಯುವ ಮುಂಚೆಯೇ ದಡದಡನೆ ಮೆಟ್ಟಿಲಿಳಿಸಿಕೊಂಡು ಬಂದುಬಿಟ್ಟಿದ್ದರು ಅಪ್ಪ. ನಮ್ಮ ಹಿಂದೆಯ ಮಫ್ಲರಿನವನೂ. ಅಭ್ಯಾಸಬಲದಿಂದ ಮತ್ತೊಂದು ಬೀಡಿ ಹೊತ್ತಿಸಿಕೊಳ್ಳಲು ತಯಾರಾಗಿದ್ದವನು, ಅದ್ಯಾಕೋ ಮತ್ತೆ ಹೀ... ಅಂತ ನಕ್ಕು 'ಏ ಪಸಂದ್ ನಂಹೀ ಆಯೆತೋ ದೂಸರಾ. . . ' ಎನ್ನುತ್ತಿದ್ದವನ ಮಾತು ತುಂಡರಿಸಿದವು ನಮ್ಮ ಹೆಜ್ಜೆಗಳು.

ಆದರೆ ಅವ ತಲೆಕೆರೆದುಕೊಂಡು, 'ನಹಿಂ ಚಾಹಿಯೇ ತೋ ನಹೀಂ. ಮೇರಾ ಕಮೀಶನ್ ದೇನಾ ಪಡೇಗಾ ಸಾಬ್‌ಜೀ' ಎಂದು ಹಲ್ಕಿರಿದ. ಅವನ ಕೈಗೆ ಒಂದಿಪ್ಪತ್ತು ತುರುಕಿ ಮತ್ತೆ ರೈಲ್ವೇ ಸ್ಟೇಶನ್ನಿನ ಹತ್ತಿರ ಮುಖ ಮಾಡಿದೆವು. ಒಮ್ಮೆ ಈಗಿನ ಹಾಗೆ ಆನ್‌ಲೈನ್ ಬುಕಿಂಗೋ, ಒಂದಿಷ್ಟು ನೆಂಟರ ಮನೆಗಳಿದ್ದಿದ್ದರೆ ಇದೆಲ್ಲ ತಾಪತ್ರಯ ಇರುತ್ತಿರಲಿಲ್ಲವೇನೋ ಎಂದು ಇದನ್ನು ಬರೆಯುತ್ತಿದ್ದಾಗ ಅನ್ನಿಸಿದ್ದಂತೂ ಕೊಲ್ಕತ್ತೆ ಆಣೆಗೂ ಸತ್ಯ.

ಪುನಃ ರೈಲ್ವೇ ನಿಲ್ದಾಣಕ್ಕೆ ಬಂದು ಯಾತ್ರಿ ನಿವಾಸದಲ್ಲಿ ವಿಚಾರಿಸಿದರೆ, ಇನ್ನೂ ಎರಡು ಗಂಟೆ ಕಾಯಬೇಕು. ಮದ್ಯಾಹ್ನದ ಹೊತ್ತಿಗೆ ರೂಂ ಖಾಲಿಯಾಗತ್ತೆ ಎಂದು ಮಾತು ಕೊಟ್ಟಳು, ದಪ್ಪತುಟಿಗೆ ಕೆಂಪು ಲಿಪ್‌ಸ್ಟಿಕ್ ಮೆತ್ತಿಕೊಂಡ ರಿಸೆಪ್ಶನಿಸ್ಟ್ ಆಂಟಿ. ಆದರೆ ಆ ಮಾತಿಗೆ ಒಂದೈವತ್ತನ್ನೂ ಎಡಗೈಯಿಂದ ಇಸಿದುಕೊಂಡಾದ ಮೇಲೆಯೇ ಲೆಡ್ಜ್‌ರ್‌ನಿಂದ್ ಪೂರ್ತಿ ಮುಖ ಮೇಲಕ್ಕೆತ್ತಿದ್ದು. ಪಕ್ಕದಲ್ಲಿದ್ದ ಬೆಂಚಿನ ಮೇಲೆ ಕುಳಿತುಕೊಳ್ಳಿ ಎಂದು ಹೈಬ್ರಿಡ್ ನಗೆ ಚೆಲ್ಲಿದ್ದು ಅವಳು.

ನಂತರ ರೂಂ ಸಿಕ್ಕಿತು. ಫ್ರೆಶ್ ಆದದ್ದೂ ಆಯಿತು. ಉಡುಪಿ ಹೋಟೆಲೊಂದನ್ನು ಧ್ವಂಸ ಮಾಡಿದ್ದೂ ಆಯಿತು. ನಂತರ ಹೊಕ್ಕಿದ್ದು ಚಾಂದನಿ ಬಾಝಾರ್‍ನ ಗಲ್ಲಿಗಳನ್ನು. ಅಲ್ಲಿಯ ಫುಟ್ಪಾತ್ ಮೇಲೆಲ್ಲ ಕೆಸೆಟ್ಟುಗಳ ರಾಶಿ ರಾಶಿ. ಬೆಂಗಳೂರಿನ ಅವೆನ್ಯೂ ರೋಡ್ ಫುಟ್ ಪಾತ್ ಮೇಲೆ ಪುಸ್ತಕ ಜೋಡಿಸಿ ಮಾರುತ್ತಿರುತ್ತಾರಲ್ಲ ಹಾಗೆ. ಫುಟ್‌ಪಾತ್ ಮೇಲೆ ಕೆಸೆಟ್ ಮಾರುತ್ತಿದ್ದಾರೆ ಅಂದ್ಮೇಲೆ ಫಿಲಮ್‌ ಕೆಸೆಟ್ಟುಗಳೇ ಇರತ್ತೆ. ಎಲ್ಲಾ ಪೈರಸಿ ಅಂದುಕೊಂಡು ಮುಖ ತಿರುಗಿಸಿಕೊಂಡು ಬರುತ್ತಿದ್ದೆ. ಅದು ನಿಜವೂ ಆಗಿತ್ತು. ಅದರೊಂದಿಗೆ ಇನ್ನೊಂದು ನಿಜವೂ ನನ್ನ ಕೆನ್ನೆ ಅಗಲಿಸಿತ್ತು.

ನಿಧಾನವಾಗಿ ಲಹರಿ ಹಿಡಿಯತೊಗಿಸಿದರು ಉಸ್ತಾದ್ ನಝಾಕತ್ ಮತ್ತು ಸಲಾಮತ್ ಅಲಿಖಾನ್‌, ಮಾಣಿಕ್ ವರ್ಮಾ, ಕೇಸರಬಾಯಿ ಕೇರ್‍ಕರ್‍, ಅಮೀರ್‍ಖಾನ್‌, ರೋಶನ್ಎರಾ ಬೇಗಮ್‌, ಮಾಲಬಿಕಾ ಕಾನನ್‌, ಬೇಗಮ್ ಅಖ್ತರ್‌. ವ್ಹಾ... ಜೊತೆಗೆ ನಮ್ಮ ಗದುಗಿನ ಭೀಮ್‌ಸೇನ್ ಜೋಶಿ. vintage virtuosos ನ ಆ ಎಲ್ಲ ಆಲ್ಬಮ್‌ಗಳಿಂದ ಅಲೆಅಲೆಯಾಗಿ ರಾಗಧಾರಿ ತೇಲಿಬಂದಂತಾಯಿತು. ಕೆಸೆಟ್ಟಿನ ಚೀಲವನ್ನು ಎದೆಗವಚಿಕೊಂಡು ನಡೆಯುತ್ತಿದ್ದರೆ ದಾರಿ ಸವೆದದ್ದೇ ಗೊತ್ತಾಗಲಿಲ್ಲ.

ಕಣ್ಣಮೀರಿ ಹರಿದ ಹೂಗ್ಲಿ ನದಿ, ತೋಳು ಚಾಚಿ ಕರೆದಾಗ ಅಮ್ಮನಂತೆ ಕಾಣಿಸಿತು. ಕ್ಷಣಾರ್ಧದಲ್ಲಿಯೇ ಮನಸ್ಸು ತುಂಬ ತುಂಬಿಕೊಂಡಿದ್ದ ಕೊಲ್ಕತ್ತೆಯ ಗಜಿಬಿಜಿಯನ್ನೆಲ್ಲ ತನ್ನ ಒಡಲಿಗೆ ಸುರಿದುಕೊಂಡು ನನ್ನನ್ನು ಪ್ರಫುಲ್ಲಳನ್ನಾಗಿಸಿದಳು ಆ ಮಹಾತಾಯಿ.

ತೂಗಿಯೂ ತೂಗದಂತಿರುವ ಹಾವುರಾ ಬ್ರಿಡ್ಜ್‌ಗೆ ಅಂಟಿಕೊಂಡೇ ನಿಂತಿದ್ದೆ. ಅಪ್ಪ ಭುಜ ಹಿಡಿದು ಹೊರಡೋಣವೇ ಎಂದರು. ರೈಲ್ವೇ ಟಿಕೆಟ್ ಕಾದಿರಿಸಿದ್ದರಿಂದ ಅಂದೇ ಧಾರವಾಡದ ಹಾದಿ ಹಿಡಿಯಲೇಬೇಕಾಗಿತ್ತು. ಸುತ್ತಲೂ ಕತ್ತಲ ರಾತ್ರಿ. ಸಾವಿರ ಸಾವಿರ ಉಸಿರುಗಳನ್ನು ಹೊತ್ತು ಸಾಗಿಸುವ ಬಂಡಿ ನಿಟ್ಟುಸಿರ ಬಿಟ್ಟು ಮುಂದೆ ಬಂದು ನಿಂತಿತು. ರೈಲಿನಲ್ಲಿ ಕೂತುಕೊಂಡು ಅಪ್ಪನ ಭುಜಕ್ಕೆ ಒರಗಿ ಹಾಗೇ ಒಮ್ಮೆ ಕಣ್ಣ ಮುಚ್ಚಿದೆ. ಕಲ್ಕತ್ತೆಯಲ್ಲಿ ಕಳೆದ ಒಂದೊಂದು ಗಳಿಗೆಯೂ ನೆಗೆಟಿವ್‌ ರೋಲ್‌ನಂತೆ ಸುರುಳಿ ಬಿಚ್ಚುತ್ತಿತ್ತು. ಹಾವುರಾ ಬ್ರಿಡ್ಜ್ ಮಾತ್ರ ಕಲರ್‍ ಪ್ರಿಂಟಿಗೆ ಸಜ್ಜಾಗಿ ನಿಂತಿತ್ತು. ಅದಕ್ಕೆ ಹೊಂದುವ ಫ್ರೇಂ ಕೂಡ ಕಣ್‌ ಮುಂದೆ ಎದೆಸೆಟಿಸಿ ನಿಂತಿತ್ತು. ಆದರೆ ತಣ್ಣಗೆ ಹರಿವ ಹೂಗ್ಲಿಮಾತೆಗೆ ಆ ಫ್ರೇಮಿನ ಬಂಧನ ಬೇಕಿರಲಿಲ್ಲ. ಹರಿಯುವುದೇ ನನ್ನ ಸಹಜಗುಣ ಎಂದು ಅವಳು ಹೇಳಿಕೊಳ್ಳುವುದೂ ಬೇಕಿರಲಿಲ್ಲ.

ಕ್ರಮೇಣ ಮನದಲ್ಲೆಲ್ಲ ಕರುಣ ರಸವೇ ತುಂಬಿಬಂತು. ಅದಕ್ಕೆ ಸಂವಾದಿಯಾಗಿ ಸುರುಳಿಬಿಚ್ಚಿಕೊಂಡಿತು ಭೈರವಿಯ ಆಲಾಪ್. ತುಸುಹೊತ್ತಿನಲ್ಲೇ 'ಮತ ಜಾ ಮತ ಜಾ ಮತ ಜಾ ಜೋಗಿ' ಎಂದು ಹಾಡುತ್ತ ಕೈ-ಕೈಹಿಡಿದು ಮೆಲ್ಲಗೆ ಹೆಜ್ಜೆ ಇಡುತ್ತ ನಮ್ಮೆದುರಿಗೆ ಬಂದು ನಿಂತರು ಕುರುಡ ದಂಪತಿ. ಅವಳ ಹಾಡಿಗೆ ಅವ ಡೋಲಕ್‌ನಲ್ಲಿ ತೀನ್‌ತಾಲ್ ನುಡಿಸುತ್ತಿದ್ದ. ಹಾಡುತ್ತ ಹಾಡುತ್ತ ಚಿಲ್ಲರೆಗಾಗಿ ನಮ್ಮೆದುರಿಗೆ ಆಕೆ ಕೈಚಾಚಿದ್ದಳು. ಹಾಗೇ ಆ ಕೈ ಹಿಡಿದು ಊರಿಗೆ ಕರೆದುಕೊಂಡು ಹೋಗಿಬಿಡಲೇ. . . ಎಂದೆನಿಸಿತು. ಎಂಥ ಚುರುಕಿತ್ತು ಆ ಧ್ವನಿಯಲ್ಲಿ.

ಅದಕ್ಕೆ ಸರಿಯಾಗಿ ಒಂದು ಘಟನೆಯೂ ನೆನಪಿಗೆ ಬಂತು. ಅಪ್ಪನೊಡನೆ ಹಂಚಿಕೊಂಡೆ ಕೂಡ. ಪಂ. ಬಸವರಾಜ್ ರಾಜಗುರುಗಳು ಹಿಂದೆ ಉತ್ತರಭಾರತದಲ್ಲಿ ಕಛೇರಿ ಕೊಟ್ಟು ರೈಲಿನಲ್ಲಿ ಮರಳುತ್ತಿದ್ದಾಗ ಯಾರೋ ಒಬ್ಬ ಚೀಜ್ ಹಾಡುತ್ತ ಭಿಕ್ಷೆ ಬೇಡುತ್ತಿದ್ದನಂತೆ. ಅವನ ತಯಾರಿ ಕಂಠಕ್ಕೆ ಮಾರುಹೋದ ರಾಜಗುರುಗಳು ನಿನ್ನನ್ನ ಅದ್ಭುತ ಕಲಾಕಾರನನ್ನಾಗಿ ಮಾಡುತ್ತೇನೆ ನಡಿ ನನ್ನ ಜೊತೆ ಎಂದು ಗಂಟುಬಿದ್ದಿದ್ದರಂತೆ. ಕೊನೆಗೆ ರೈಲು ಚಲಿಸುತ್ತಿದ್ದಂತೆ ಅವ ಅವರ ಕೈಕೊಸರಿಕೊಂಡು ಓಡಿಹೋಗಿಬಿಟ್ಟನಂತೆ.

ಇದನ್ನು ಕೇಳಿದ ಅಪ್ಪನಿಗೂ ಹೇಳಿದ ನನಗೂ ಅಂಥ ಗುರುವಿನ ಬಗ್ಗೆ ಹೆಮ್ಮೆ ಎನಿಸಿತು. ಉತ್ತಮ ಶಿಷ್ಯನಿಗಾಗಿ ಗುರುವೂ ಕಾಯುತ್ತಿರುತ್ತಾನೆ ಎಂಬುದು ನೆನಪಿಗೆ ಬಂದು ತುಂಬಿಬಂತು ಮನಸ್ಸು. ರೈಲು ಹೊರಡುತ್ತಿದ್ದಂತೆ 'ಶ್ರೀಯಕ್ಕ ಕುರುಡು ದಂಪತಿಗಳು ಇಳಿಯುತ್ತಿದ್ದಾರೆ ನಿಲ್ಲಿಸಲೇ' ಎಂದು ಅಪ್ಪ ತುಂಟ ನಗೆ ನಕ್ಕರು. ತೋಯ್ದ ಮನಸ್ಸಿನಿಂದ 'ಅಪ್ಜಿ ರಾಜಗುರುಗಳು ಈಗಿಲ್ಲವಲ್ಲ' ಎಂದೆ. ನಮ್ಮ ರೈಲೂ ಹೌದೆಂದು ಕೂಗು ಹಾಕಿತು.

7 comments:

chetana said...

ನೀವಂತೂ ನನ್ನ ಜೀವದಷ್ಟು ಪ್ರೀತಿಯ ಊರುಗಳಲ್ಲಿ, ನದೀ ದಡದಲ್ಲಿ ನನ್ನ ಮತ್ತೊಂದು ಜೀವವಾದ ಹಿಂದೂಸ್ಥಾನಿಯನ್ನು ಆಲಾಪಿಸುತ್ತ ಸುಖಿಸುತ್ತಿದ್ದೀರಿ. ನಿಮ್ಮನ್ನು ಕಂಡು ಹೊಟ್ಟೆಕಿಚ್ಚು ನನಗೆ!!
ಇರಲಿ. ಶುಭ ಹಾರೈಕೆಗಳು ನಿಮಗೆ.

-ಪ್ರೀತಿಯಿಂದ,
ಚೇತನಾ

ಕಾರ್ತಿಕ್ ಪರಾಡ್ಕರ್ said...

ಈ ಬರಹ ಆಲಾಪದಷ್ಟೇ ಸುಂದರ

ಪಲ್ಲವಿ ಎಸ್‌. said...

ನಿಜ ಶ್ರೀದೇವಿ,

ಪ್ರತಿಯೊಬ್ಬ ಶಿಷ್ಯನೂ ಉತ್ತಮ ಗುರುಗಳಿಗಾಗಿ ಹುಡುಕುವಂತೆ, ಉತ್ತಮ ಗುರುವೂ ಉತ್ತಮ ಶಿಷ್ಯನಿಗಾಗಿ ಹುಡುಕುತ್ತಿರುತ್ತಾನೆ. ಥೇಟ್‌, ನಿನ್ನ ಇಂಥ ಬರಹಗಳಿಗಾಗಿ ನನ್ನಂಥವರು ಹುಡುಕುವಂತೆ.

ಚೆನ್ನಾಗಿ ಬಂದಿದೆ ಬರಹ. ಸಂಗೀತದ ಬಗ್ಗೆ ನನಗೆ ಕೇಳಿ ಗೊತ್ತು. ಅಂದರೆ, ಆಲಿಸುವುದಷ್ಟೇ ಗೊತ್ತು. ಹೀಗಾಗಿ, ಬರವಣಿಗೆಯ ಸ್ವಾದವನ್ನಷ್ಟೇ ಸವಿಯುವುದು ಸಾಧ್ಯವಾಯಿತು.

ಈಗ ಹೇಗಿದ್ದರೂ ವಾಪಸ್‌ ಬಂದಾಯ್ತಲ್ಲ. ಮತ್ತೆ ಬರೆಯಲು ಶುರು ಮಾಡು.

- ಪಲ್ಲವಿ ಎಸ್‌.

Santhosh said...

tumba chennagi barediddira.....

-Santhosh

shreedevi kalasad said...

@ ಚೇತನಾ,
ಬೇಡ ಚೇತನಾ ಹೊಟ್ಟೆಕಿಚ್ಚು. ನೀವೂ ಬನ್ನಿ ಬೇಕಿದ್ರೆ ಒಟ್ಟಾಗಿ ಸುತ್ತೋಣ. ಆಲಾಪಿಸೋಣ...

@ ಕಾರ್ತಿಕ್, ಸಂತೋಷ್‌ ಥ್ಯಾಂಕ್ಸ್‌

@ಪಲ್ವಿ
ಹೂಂ ಕಣೇ.

ಸಿಮೆಂಟು ಮರಳಿನ ಮಧ್ಯೆ said...

your writting is different..please write books.. thank you...

shreedevi kalasad said...

ಸಿಮೆಂಟು ಮರಳಿನ ಮಧ್ಯೆ ಇರುವವರೆ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ