Monday, September 29, 2008

ಸೆರಗ ಹಂಗು ತೊರೆದು

ಅವಳೀಗ ಹೊದೆಯುವುದಿಲ್ಲ ಸೆರಗು

ಹೇಳಿಲ್ಲ ಬೇಡಂತ ಯಾರೂ.

ತುದಿಗಂಟು ಕಟ್ಟಿದ್ದು ಇತಿಹಾಸ

ಎದೆ ಮುಚ್ಚಿ ಭುಜ ಬಳಸಿದ್ದು ಅಭ್ಯಾಸಬಲ.

ಹಲ್ಲಸಂದಿಯಲಿ ಕಚ್ಚಿ ನೆನೆಸಿದ ಚುಂಗು-

ಕಾದ ಕಾವಲಿಗೆ ಹನಿದ ನೀರು.

ಉಡಬೇಕಿಲ್ಲ ಪಕ್ಕೆ ಜಾರಿಸಿ

ಸಿಕ್ಕಿಸಬೇಕಿಲ್ಲ ತೊಡೆಗಂಟುವಂತೆ.

ಎತ್ತಿ ನೆರಿಗೆ ಕಟ್ಟದೇ-

ಹೊಕ್ಕಳ ಕುಣಿಸಲೇಬೇಕಿಲ್ಲ.

ಚಿಮ್ಮಲೇಬೇಕಿಲ್ಲ ಬೆರಳ ಸಾಲಿನಿಂದ.

ಬೀಸು ಸೆರಗ ಬೀಸಿ

ಸೊಕ್ಕಿದ ಹರೆಯ ಕುಕ್ಕಬೇಕಿಲ್ಲ

ಹಾಸಬೇಕಿಲ್ಲ ಬಿಚ್ಚಿ

ಹಿಂಡಬೇಕಿಲ್ಲ ಹಿಡಿದು.ಏಕೆಂದರೆ ಅವಳು ತೊಡುವುದು ನೈಟಿ.


ವಯಸ್ಸಾಯ್ತು ಆಕೆಗೆ ಎಂದು ಹೇಳಬೇಕಿಲ್ಲ ತಾನೆ?

15 comments:

ಸಿಮೆಂಟು ಮರಳಿನ ಮಧ್ಯೆ said...

simply amazing... I am impressd, keep it up. thank u...

Anonymous said...

ಇಷ್ಟೆಲ್ಲ ಚಂದ ಬರೆದು ಆ ಕೊನೆಯ ಸಾಲನ್ನೇಕೆ ಹಾಗೆ ಮಾಡಿದಿರಿ?

‘ಏಕೆಂದರೆ ಅವಳು ತೊಡುವುದು ನೈಟಿ’ ಅನ್ನುವಲ್ಲಿ ಇಷ್ಟೇನಾ ಅನ್ನಿಸಿಬಿಡುತ್ತದೆ....

ಪಲ್ಲವಿ ಎಸ್‌. said...

ಚೆನ್ನಾಗಿದೆ ಕವನ ಶ್ರೀದೇವಿ,

ನನಗೂ ಮುಂಚೆ ಪ್ರತಿಕ್ರಿಯೆ ನೀಡಿದ ಸಿಮೆಂಟು ಮರಳಿನ ಮಧ್ಯೆ ಸಿಲುಕಿಕೊಂಡ ರಾಘವೇಂದ್ರರ ಅನಿಸಿಕೆ ಓದಿದೆ. ಅಂತ್ಯವನ್ನು ಒಂಚೂರು ಬದಲಾಯಿಸಲು ಸಾಧ್ಯವಿತ್ತು ಎಂದು ಅನ್ನಿಸತೊಡಗಿದೆ.

ಆದರೆ, ಅದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ. ಕವಿತೆ, ಕತೆಯಂತಹ ತೀರಾ ಖಾಸಗಿ ಅಭಿವ್ಯಕ್ತಿಯನ್ನು ತಿದ್ದುವ ಬಗ್ಗೆ ನನ್ನ ವಿರೋಧವಿದೆ. ಹೀಗಾಗಿ, ನೀನೇ ಅದನ್ನು ತಿದ್ದಿದರೆ ಉತ್ತಮ ಎಂಬುದು ನನ್ನ ನಮ್ರ ಅನಿಸಿಕೆ.

’ಏಕೆಂದರೆ, ನೈಟಿಗೆ ಸೆರಗಿನ ಹಂಗಿಲ್ಲ’ ಎಂದು ತಿದ್ದಿದರೆ ಸರಿಯಾದೀತೆ? ನಿನ್ನಂಥವಳಿಗೆ ಸಲಹೆ ಕೊಡುವಷ್ಟು ದೊಡ್ಡವಳಲ್ಲ ಎಂಬ ಅಳುಕಿನಿಂದಲೇ ಈ ಪ್ರತಿಕ್ರಿಯೆ ಬರೆಯುತ್ತಿದ್ದೇನೆ.

ಬೇಡ ಅನ್ನಿಸಿದರೆ, ಕವಿತೆ ಹಾಗೇ ಇರಲಿ ಬಿಡು.

- ಪಲ್ಲವಿ ಎಸ್‌.

shreedevi kalasad said...

@ ಸಿಮೆಂಟ್ ಮರಳಿನ ಮಧ್ಯೆ ಇರುವವರೇ,
ಥ್ಯಾಂಕ್ಸ್‌.

@ರಾಘವೇಂದ್ರ ಅವರೆ,

ಇಲ್ಲಿ ನೈಟಿಗೆ ಒತ್ತು ಕೊಟ್ಟಿಲ್ಲ. ಹಣ್ಣು ಹಣ್ಣಾದ ಹಿರಿಯಜ್ಜಿ ಈ ಕವನದ ಸ್ಫೂರ್ತಿ. ಎಲ್ಲ ರೀತಿಯಿಂದಲೂ ಸೋತುಹೋದ ಮನಃಸ್ಥಿತಿಯನ್ನು ಹಿಡಿದಿಡುವ ಒಂದು ಸಣ್ಣ ಪ್ರಯತ್ನ. ನಿಮ್ಮ ಪ್ರಶ್ನೆಗೆ ಧನ್ಯವಾದ.

@ಪಲ್ಲವಿ,
ಹಾಗೇನಿಲ್ಲ. ತಿದ್ದವುದಕ್ಕಿಂತ ಮತ್ತೊಂದು ಬರೆದರಾಯಿತು ಬಿಡು ಮನಸ್ಸು ಬಂದಾಗ. ಅಲ್ವಾ?

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

:) ಓದುತ್ತಾ ಹೋದಂತೆ ಪ್ರತಿ ಸಾಲೂ ಕೂಡಾ ಹೊಸ ಕಲ್ಪನೆಗೆ ಅವಕಾಶಮಾಡಿಕೊಡುವಂತಿದೆ. ನನಗೇಕೋ ಕೊನೆಯ ಸಾಲು ಸರಿಯಾಗಿಯೇ ಇದೆ ಅಂದೆನ್ನಿಸುತ್ತಿದೆ. ಆದರೂ ಇನ್ನೊಂದು ಇಂತಹ ಕವಿತೆ ಬಂದರೆ ಮತ್ತೂ ಒಳ್ಳೆಯದು ನೋಡಿ :)

shreedevi kalasad said...

ಓಕೆ ತೇಜಸ್ವಿನಿ

ಪುಚ್ಚಪ್ಪಾಡಿ said...

ಹಲೋ..

ಹೊಸ ಓದುಗನ ನಮಸ್ಕಾರ. ಕವನ ನೈಜತೆಯತ್ತ ಇದೆ.

sunaath said...

ಭಾವನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಕವನ.

ಜೋಮನ್ said...

ಚೆಂದದ ಕವಿತೆ..

Chevar said...

ಓದಿಸುತ್ತಾ ಹೋಯಿತು ಬರಹ.

Jayadeva said...

Good poem but the last line was disappointing. You if had said she got aged, it would have become a great poem

ರಾಘು ತೆಳಗಡಿ said...

ಮಾದಕತೆಯ ಜಾಡ ಹಿಡಿದ ಪದಗಳ ಜೋಡಣೆಯ ಕವನ ಓದುತ್ತ ಕೊನೆಯ ಸಾಲುಗಳಿಗೆ ಬಂದಾಗ ಅದು ನಿಜವಾಗಿಯು ನೈಟಿ ಅಂದಾಗ......! ಕಾಮೆಂಟ್ ರಾಣಿ ಒಬ್ಬಳಿಗೆ ಕೊಟ್ಟ ಭರವೆಸೆಗೆ ನಾನು ಕೊನೆ ಸಾಲಿನ ಬಗ್ಗೆ ನಿರ್ಧರಿಸ್ತಿನಿ. ಹಹಃ. ಒಳ್ಳೆ ಬರಹ Shree.

ನವಿಲುಗರಿ ಹುಡುಗ said...

ಕೊನೆ ಇಷ್ಟವಾಗಲಿಲ್ಲ,..ಅದ್ಭುತ ಪದ ಜೋಡಣೆ..:) ಕೊನೇ ಸಾಲಲ್ಲಿ ಇಷ್ಟೇನ ಅನ್ನಿಸಿಬಿಡುತ್ತೆ..ನೈಟಿ ಬಗ್ಗೆ ನ
ಇಷ್ಟು ಸುಂದರವಾಗಿ ಬರೆದಿದ್ದು ಅನ್ನಿಸಿಬಿಡ್ತು...ಕವನವನ್ನ ಬೇರೆ ದಿಕ್ಕಿನ ಕಡೆಗೂ ತಿರುಗಿಸಬಹುದಿತ್ತು..ಯಾಕೆ ಹೇಳ್ತಿದ್ದೀನಿ ಅಂದ್ರೆ ಕವನದ ವಿಷಯಾನೆ ಸೂಪರ್ ಇದೆ.. ಆದರೇ ಹೇಗೆ ಅಂತ ಮಾತ್ರ ಕೇಳಬೇಡಿಪಾ..

ನಿಮ್ಮ
ನವಿಲ್ಗರಿ

shivu K said...

ಸತ್ಯಕ್ಕೆ ಹತ್ತಿರವಾದ ಕವನ. ಬರೀತಿರಿ.

ಶಿವು.ಕೆ

ಚಂದ್ರು ... said...

ತುಂಬಾ ಚೆನ್ನಾಗಿದೆ ... ಇಷ್ಟ ಆಯಿತು .. ಹೀಗೆ ಬರಿತಾಯಿರಿ.