Wednesday, October 15, 2008

ಕೈ ಬಿಟ್ಟೂ ಕಣ್ಣೂ ಮುಚ್ಚಿ

ಗಾಡಿ ಓಡಿಸ್ತಿರಬೇಕಾದ್ರೆನೇ ನಾನು ನನ್ನೊಂದಿಗೆ ಮಾತನಾಡಿಕೊಳ್ಳುವುದು. ಒಮ್ಮೊಮ್ಮೆ ಅದೂ ಬೇಸರವಾದರೆ, ಇಷ್ಟವಾದವರ, ಕಷ್ಟಕೊಡುವವರ ಮುಖಗಳನ್ನ ಆ ಕಪ್ಪುಗಡಿಗೆಯೊಳಗೇ ಚಿತ್ರಿಸಿಕೊಂಡು, ಪ್ರೀತಿಸುತ್ತಿರುತ್ತೇನೆ. ದಬಾಯಿಸುತ್ತಿರುತ್ತೇನೆ. ಇನ್ನೂ ಒಮ್ಮೊಮ್ಮೆಯಂತೂ ಸುಮ್ಮನೊಂದು ನಗೆ ಚೆಲ್ಲುತ್ತಿರುತ್ತೇನೆ. ಕಣ್ಣು ಕಿರಿದು ಮಾಡಿ ನಿಟ್ಟುಸಿರೊಂದನ್ನೋ, ಕಣ್ಣಗಲಿಸಿ ಹೂಂಕಾರವನ್ನೋ ಹೇಳಿಕೊಂಡಿರುತ್ತೇನೆ ನನಗರಿವಿಲ್ಲದಂತೆಯೇ. ಎಣಿಸಿದಂತೆ ಆಗದಿದ್ದನ್ನು ನೆನೆಸಿಕೊಂಡಾಗ, ಒಂದರ್ಧ ಸೆಂಟಿಮೀಟರ್‍ ಅತ್ತಿಂದ ಇತ್ತ ಇತ್ತಿಂದ ಅತ್ತ ಚಲಿಸಿಯೂ ಆಗಿರುತ್ತದೆ ಕತ್ತು. ಇದನ್ನೆಲ್ಲ ಯಾರೊಬ್ಬರೂ ಗಮನಿಸುವುದೇ ಇಲ್ಲ. ಗಮನಿಸಿದರೂ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಅವರೊಳಗೂ ಇಂಥದೇ ಇನ್ನೇನೇನೋ ತಳಕು ಹಾಕುತ್ತಿರುತ್ತವೆ. ಅದಕ್ಕಿಂತ ಹೆಚ್ಚೆಂದರೆ, ಜೊತೆಜೊತೆಗೆ ಬರುತ್ತಿದ್ದವರೆಲ್ಲ ಅದ್ಯಾವ ಮಾಯೆಯಲ್ಲೊ ಅದಲು-ಬದಲಾಗಿ, ಚದುರಿಯಾಗಿರುತ್ತದೆ.

ಹೀಗೆ ಟ್ರಾಫಿಕ್ಕು ರಾಕ್ಷನ ತೆಕ್ಕೆಯೊಳಗೆ ಯಾವುದೊಂದೂ ತರ್ಕಕ್ಕೆ ನಿಲುಕದಾದಾಗ ಸಿಕ್ಕ ಸಿಗ್ನಲ್‌ನಲ್ಲೇ ತಳ್ಳಿಬಿಡುತ್ತೇನೆ ಹೆಲ್ಮೆಟಿನೊಳಗೆ ಮೊಬೈಲನ್ನ. ನಂತರವೇನಿದ್ದರೂ ಆಪ್ತಮನಸುಗಳೊಂದಿಗೆ ನೇರಾನೇರ ವಾಗ್ದಾಳಿ. ಆಲಾಪ. ಪ್ರಲಾಪ : ಜಡಿಮಳೆಯಂತೆ, ತುಂತುರು ಹನಿಯಂತೆ. ನಿಂತ ಮಳೆಯಂತೆ. ಆದರೆ ಶಂಖ ಸುಳುವಿನ ಕಿವಿಗಂಟಿ, ಶೃಂಗಾರ ಲಹರಿಯಲ್ಲಿದ್ದ ಹೆಲ್ಮೆಟಿನ ಮೆತ್ತನೆಯ ಒಳಗೋಡೆಗೋ ನೂರಲ್ಲ ಸಾವಿರ ಸಾವಿರ ತರಹ ವಿರಹ. ಆದರೆ ಅದರ ಚಿತ್ತವೇನಿದ್ದರೂ ಸಿಕ್ಕ ಕೆಲ ಗಳಿಗೆಯನ್ನೇ ಮೊಗೆದು ಮೆಲ್ಲುವತ್ತ. ಮಾತೆಲ್ಲ ಮಥಿಸಿ, ನನ್ನೊಳಗಿನ ಮೌನ ಹೆಪ್ಪುಗಟ್ಟಿದಾಗ, ಹಣೆಬಿಟ್ಟು ಜೋಡುಹುಬ್ಬಿನತ್ತ ನಿಧಾನ ಬಾಗುತ್ತಿರುತ್ತದೆ ಸಹಸ್ರಪದಿಯಂತೆ ವಿಲಂಬಿತದಲ್ಲಿ. ದಾರಿ ಕಾಣಲಾರದೇನೋ ಎಂದೆನಿಸಿದಾಗ ತಳ್ಳುವಿಕೆ ಅನಿವಾರ್ಯ. ನನ್ನ ಆ ಅನಿವಾರ್ಯಕ್ಕೆ ಅದು ಮಮತೆಯನ್ನೇ ಎರೆಯುತ್ತದೆ. ಮುನಿಸನಲ್ಲ.

ಅಕ್ಕ-ಪಕ್ಕ ಹಸಿರ ಪರದೆ ಕಟ್ಟಿಕೊಂಡು, ನಟ್ಟನಡುವೆ ಕಪ್ಪು ಕಾಲು ಚಾಚಿಕೊಂಡ ರಾಜಭವನದ ಬೀದಿಯೆಂದರೆ ನನ್ನ ಗಾಡಿಗೂ ಹುರುಪು. ಇದೇ ನೆಪದಲ್ಲಿ ತನ್ನ ನೆತ್ತಿ ತಂಪು ಮಾಡಿಕೊಳ್ಳುವ ಆಸೆ ಹೆಲ್ಮೆಟ್ಟಿಗೂ. ಅದೊಂದು ಭಾನುವಾರ, ಚೆಂದ ಕತೆ ಬರೆವ ಕುಂವೀಯವರನ್ನು ಕಾಣಲು 'ಛಂದ'ದ ಕಾರ್ಯಕ್ರಮಕ್ಕೆ ಹೋಗಿದ್ದೆ. ಅವರ ಕತೆ ಸಾಲುಗಳಂತೆಯೇ ಅವರ ಮಾತಿನ ಧಾಟಿ. ಮುಚ್ಚುಮರೆಯಿಲ್ಲದ ನಿಚ್ಚಳ ಮನಸ್ಸು. ಜೀವನಪ್ರೀತಿ ಹುಟ್ಟಿಸುವ ಅವರ ಜವಾರಿ ವಿಚಾರಧಾರೆ ಎಲ್ಲ ತುಂಬಿಕೊಂಡು ವಾಪಸಾಗುತ್ತಿದ್ದೆ.

ಬಿತ್ತು ಸಿಗ್ನಲ್! ಅಯ್ಯೋ ಇದೇನು ಮಹಾ ಅಂದುಕೊಳ್ಳುತ್ತ, ಹಾಗೇ ಜೈ ಅಂದೆ. ತಕ್ಷಣವೇ ಎಡಬದಿಗಿದ್ದ ಖಾಕಿಯೊಳಗಿನ ಕೈಗಳಿಂದ ಆತ್ಮೀಯ ಸ್ವಾಗತ. ಅದಕ್ಕಿಂತ ಮುಂಚೆ ಸಿಗ್ನಲ್ ಬಿದ್ದಿದಿಯೆಂದು ತೆಪ್ಪಗೆ ನಿಂತಿದ್ದ ಮಹಾಶಯನೊಬ್ಬ ನನ್ನ ಜೈಕಾರ ಕೇಳಿ, ತಾನೂ ಸಿಗ್ನಲ್ ಜಂಪ್ ಮಾಡಿಬಿಟ್ಟಿದ್ದ. ಒಂದು ಖಾಕಿ ದೇಹ ಅವನನ್ನೂ, ಇನ್ನೊಂದು ದೇಹ ನನ್ನನ್ನು ತಡೆದು ನಿಲ್ಲಿಸಿದವು. ಅಕಸ್ಮಾತ್ ತಪ್ಪು ಮಾಡಿದಾಗಲೆಲ್ಲ, ಹೌದಲ್ಲ. ತಪ್ಪು ನನ್ನದೇ, ಶಿಕ್ಷೆ ಸ್ವೀಕರಿಸಲೇಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಈ ಬಾರಿ ಹಾಗೆ ಮಾಡದೇ 'ಪ್ರೆಸ್ಸಾಯನಮಃ' ಎಂದು ಮಣಮಣಿಸಿದೆ. ಹಾಗಾದರೆ ಒಂದು ನಿಮಿಷ. ನಿಮ್ ಹಿಂದೆ ಇರುವವರು ದಂಡ ಕಟ್ಟಿ ಮುಂದೆ ಹೋಗಲಿ ನಂತರ ನೀವು ದಯಮಾಡಿಸಬಹುದು ಎಂದರು ನನ್ನ ತಡೆದವರಲ್ಲೊಬ್ಬರು. ಆಕಾಶವಾಣಿ ಮುಂದೆ ನಿಂತಿದ್ದರ ಪ್ರಭಾವವೋ, ನಾಟಕಪ್ರಿಯನೋ, (ವಿ)ಶೇಷ ಮರ್ಯಾದೆಯೋ ಗೊತ್ತಿಲ್ಲ. ಆ ಖಾಕಿಯಪ್ಪನ ಆಂಗಿಕಾಭಿನಯ ಹಾಗೂ ಮಾತಿನ ಧಾಟಿಗೆ ನಗು ಬಂದರೂ ನುಂಗಿಕೊಂಡೆ. ದಂಡ ಕಟ್ಟಿದವ ಮುಂದೆ ಹೋಗುತ್ತಿದ್ದಂತೆ ನಾನು ಮುಂದಿನ ಸಿಗ್ನಲ್‌ನಲ್ಲಿ ಅವನಿಗಿಂತ ಮುಂದೆ ಹೋಗಿ ನಿಂತುಬಿಟ್ಟೆ. ಛೆ ಹೇಗಾಗಿರಬೇಡ ಅವನಿಗೆ?

ಪೊಲೀಸರಿಂದ ತಪ್ಪಿಸಿಕೊಂಡು ಬಂದೆ ಎನ್ನುವ ಹಮ್ಮು ಒಂದೆಡೆ ಇದ್ರೆ, ನಾನು ಮಾಡಿದ್ದು ಸರೀನಾ ಅನ್ನೋ ಬೇಜಾರು ಇನ್ನೊಂದೆಡೆ. ಇದೆಲ್ಲ ಗಮನಿಸಿದ್ದ ಕುಂವೀ ಬೇಸರಿಸಿಕೊಂಡೋ, ಬಸ್ಸಿಗೆ ಲೇಟಾಯ್ತು ಎಂದೋ ಕೊಟ್ಟೂರಿನತ್ತ ಪ್ರಯಾಣ ಬೆಳೆಸಿಬಿಟ್ಟಿದ್ದರು ಅದಾಗಲೇ ನನ್ನೊಳಗಿನಿಂದ.

ಭಾನುವಾರವಾದ್ದರಿಂದ ಮತ್ತೊಂದು ಸಿಗ್ನಲ್ ಜಂಪ್ ಮಾಡಿಕೊಂಡೇ ಮನೆಯತ್ತ ಮರಳಿದೆ. ಕುಂವೀಯ 'ಅರಮನೆ' ಕೊಳ್ಳಲು ಹೋದವಳಿಗೆ ಅವತ್ತು ಸಿಕ್ಕಿದ್ದು ವಸುಧೇಂದ್ರರ 'ಅಮ್ಮ' (ನಮ್ಮಮ್ಮ ಅಂದ್ರೆ ನಂಗಿಷ್ಟ). ಹಾಸಿಗೆಗಿಳಿದ ಮೇಲೂ ನನ್ನವನ್ಯಾಕೋ ಒಂಚೂರು ಕೋಪ, ಬಿಗುಮಾನದಿಂದ ಶೂನ್ಯನೋಟ ಬೀರುತ್ತಿದ್ದ. ಆದರೆ, ತನ್ನ ಬಿಟ್ಟು ಹೋದ ಅಮ್ಮನನ್ನು ಸಿಟ್ಟುಗಣ್ಣಿನಿಂದ ನೋಡುತ್ತ, ತಬ್ಬಿಕೊಳ್ಳುವುದನ್ನೇ ಕಾಯುತ್ತಿದ್ದ ಪುಟ್ಟ ಮಗುವಿನಂತೆ ನನಗವ ಕಂಡ. ಬಹುಶಃ ಇರೋ ಒಂದು ಭಾನುವಾರವೂ ನೆಟ್ಟಗೆ ಮನೇಲಿರಲ್ಲ ಎನ್ನುವ ಕಾರಣಕ್ಕೋ ಏನೋ. ಕರೆದರೆ ಬರದೆ ಹೋದೆ ನೀನು... ? ಎಂದರೆ ಮತ್ತದೇ ಹಳೇ ರಾಗ ಶುರುವಾದೀತೆಂದು, ಮೆಲ್ಲಗೆ.... ನಮ್ಮಮ್ಮ ಅಂದ್ರೆ ನಂಗಿಷ್ಟವನ್ನ ತುಸು ಜೋರಾಗಿಯೇ ಓದತೊಡಗಿದೆ. ಮೊದಮೊದಲು ಅವನ ಕಣ್ಣಲ್ಲಿ ಶುರುವಾದ ನಗು ತುಟಿ ಮೇಲೆ ಇಳಿದು, ನಂತರ ಕೆನ್ನೆಪೂರ್ಣ ಆವರಿಸಿತು. ಆಮೇಲೆ ಕೋಣೆತುಂಬ. ಆದರೆ ಓದು ಅರ್ಧಕ್ಕೆ ಬಂದಾಗ ಮಾತ್ರ ಇಬ್ಬರೆದೆಯೂ ಭಾರವಾಗಿತ್ತು. ಪೂರ್ಣ ಓದು ಮುಗಿದಾಗ, ಏನೋ ಹೇಳಲು ಹೋದವಳಿಗೆ ತಡೆದು ಬೇಡ ಮಾತು ಎಂದಿದ್ದ. ವಸುಧೇಂದ್ರರ ಅಮ್ಮ, ನಮ್ಮಿಬ್ಬರ ಅಜ್ಜಿಯನ್ನು ನೆನಪಿಸಿದ್ದರು. ಅವನ ತೋಳು ಅಮ್ಮನ ಮಡಿಲನ್ನೂ, ಅಜ್ಜಿಯ ಸೆರಗಿನ ಹಿತವನ್ನು ಒಟ್ಟಿಗೇ ಅನುಭವಿಸುವಂತೆ ಮಾಡಿತ್ತು.

ಮರುದಿನ ಆ ಬೆಚ್ಚನೆಯ ಸ್ಪರ್ಶವನ್ನೇ ನೆನಪಿಸಿಕೊಂಡು ಆಫೀಸಿಗೆಂದು ಗಾಡಿ ಏರಿದ್ದೆ. ಅಂಕು-ಡೊಂಕಿನ ಬಾವಿ, ಶಂಖ-ಚಕ್ರದ ಬಾವಿ ಇಣುಕಿ ನೋಡಿದರೆ ಒಂದು ಹನಿಯಿಲ್ಲ ಎನ್ನುವಂತಿದ್ದ ನನ್ನ ಕಿವಿಯ ಸಾಮಿಪ್ಯಕ್ಕಾಗಿ ತಲೆ ಏರಿತ್ತು ಹೆಲ್ಮೆಟ್ ಎಂದಿನಂತೆ. ಅಂದ ಹಾಗೆ ರಾಜಭವನದ ಬೀದಿಯೊಂದಿಗೆ ಮಲ್ಲೇಶ್ವರಂನ ಅಂಡರ್‌ಪಾಸ್‌ ಎಂದರೆ ನನ್ನೊಂದಿಗೆ ಹೆಲ್ಮೆಟ್‌ಗೂ ಪ್ರೀತಿ. ಕೆಲ ಕ್ಷಣವಾದರೂ ಟ್ರಾಫಿಕ್ಕಿನ ಕಿರಿಕಿರಿಯಿಲ್ಲದೇ ನಿರಾತಂಕವಾಗಿ ಹಾರಿ ಹೋಗಬಹುದು ಎಂದು. ಆದರೆ ಇತ್ತೀಚೆಗೆ ನನ್ನ ಹುಡುಗಾ(ಹುಚ್ಚಾ)ಟದ ಖಾತೆಯಲ್ಲಿ ಒಂದೆರಡು ಹವ್ಯಾಸಗಳು ಸೇರಿಕೊಂಡಿರುವುದರಿಂದಲೋ ಏನೋ ಮಲ್ಲೇಶ್ವರಂ ಅಂಡರ್‌ಪಾಸ್ ಕಂಡೊಡನೆ ಹೆಲ್ಮೆಟ್ಟು ನಡುಗತೊಡಗುತ್ತದೆ. ಆದರೂ ತೋರಗೊಡುವುದಿಲ್ಲ. ಮರ್ಯಾದೆ ವಿಷಯ! ಆದರೆ ಅಂಥ ತಲೆ ಹೋಗುವಂಥದ್ದೇನಿಲ್ಲ ಬಿಡಿ. ಒಂದು, ಕೆಲ ಸೆಕೆಂಡುಗಳಾದರೂ ಕಣ್ಣು ಮುಚ್ಚಿ ಗಾಡಿ ಓಡಿಸುವುದು. ಇನ್ನೊಂದು ತುಂಬಾ ಹೊತ್ತಲ್ಲದಿದ್ದರೂ ಚೂರೇ ಚೂರು ಸಮಯ ಕೈ ಬಿಟ್ಟು ಗಾಡಿ ಓಡಿಸುವುದು. ಅಷ್ಟೇ

see also
http://www.kendasampige.com/article.php?id=1427

2 comments:

shivu K said...

ಚೆನ್ನಾಗಿದೆ ರ್ರೀ ನಿಮ್ಮ ತಲೆ ಟ್ರಾಪಿಕ್ಕಿನಲ್ಲಿ ಅಲಾಪ ಮಾಡುತ್ತಿದ್ದರೆ, ನನ್ನ ತಲೆ ಟ್ರಾಫಿಕ್ಕಿನಲ್ಲಿ ಕ್ಯಾಮೆರಾ ಫೋಕಸ್ ಮಾಡುತ್ತಿರುತ್ತದೆ!

ಶಿವು.ಕೆ.

ಸಿಮೆಂಟು ಮರಳಿನ ಮಧ್ಯೆ said...

ದಿನಾಲೂ ನಾನೂ ಸಹ ಟ್ರಾಫಿಕ್ ಜಾಮ್ ತಿನ್ನುತ್ತೇನೆ. ಅನಿವಾರ್ಯ ಕೂಡ. ವ್ಯವಹಾರದ ಒತ್ತಡ ಸಂಗಡ ಟ್ರಾಫಿಕ್ ಜಾಮ್.. ಇನ್ನು ಮುಂದೆ ನೀವು ಮಾಡಿದ ತರಹ ಮಾಡಿ ನೋಡುವೆ..ನಾನು instrumental music (hindi) ಕೇಳುತ್ತೇನೆ.. ಒತ್ತಡ ನಿಭಾಯಿಸಲು... ಬರಹ ಚೆನ್ನಾಗಿದೆ..