Monday, October 27, 2008

ಸವಾಲ್ ಜವಾಬ್‌

'ಆಯ್ತೇನೆ ಆಸಾವರಿ?'

ಸಾವನಿಯ ಕೂಗಿಗೆ ಹೂಂ.... ಎಂದು ಷಡ್ಜ್‌ದಿಂದ ಗಾಂಧಾರಕ್ಕೆ ಬಂದು ನಿಲ್ಲುತ್ತಾಳೆ. ಇನ್ನೂ ನಾ ಬರೋದು ತುಂಬಾನೇ ಹೊತ್ತು ಕಣೇ ಎಂದು ಕೂಗಿ ಹೇಳಬೇಕೆನ್ನಿಸಿದರೂ ಹೇಳದೇ, ಅದಕ್ಕೆ ಪ್ರತಿಯಾಗಿ ಮತ್ತೆ ಮತ್ತೆ ಮುಖದ ಮೇಲೆ ನೀರು ಸುರಿದುಕೊಳ್ಳತೊಡಗುತ್ತಾಳೆ. ಅದೊಂದಿಷ್ಟು ಹನಿ ಮೂಗಿನಲ್ಲಿಳಿದು ಕಿರಿಕಿರಿ ಮಾಡಿ ಆಕ್ಷಿನೋ ಕೆಮ್ಮೋ ಬಂದಾಗಲೇ ತಾನಿನ ಲಹರಿ ಏಗ್‌ದಮ್ ನಿಲ್ಲೋದು.

'ನೋಡು ನೋಡು. ಹೇಳಿದವರ ಮಾತು ಕೇಳಬೇಡ ನೀನು. ಇನ್ನೂ ಎಳೆಮಗು ಹಾಗೆ ನೀರಾಟ ಆಡ್ಕೊಂಡ್ ಕೂತ್ಕೋ ಗಂಟೆಗಟ್ಲೆ'.

ಸಾವನಿಯ ಗದರುಪ್ರೀತಿ ಇದ್ದಕ್ಕಿದ್ದ ಹಾಗೆ ಆಸಾವರಿಗೆ ಅಮ್ಮನನ್ನ ನೆನಪಿಸಿತಾದರೂ, ಅರ್ಧಕ್ಕೆ ತುಂಡರಿಸಿದ ತಾನನ್ನು ಮುಂದುವರೆಸಲು ಪ್ರಯತ್ನಿಸಿದಳು.

***

ಒಂದೇ ಹದದಲ್ಲಿ ಸುರಿಯುತ್ತಲೇ ಇದೆ ನಲ್ಲಿನೀರು, ಎಳೆಎಳೆಯಾಗಿ ಹೊಗೆಯಾಡುತ್ತಿದೆ ಮುಚ್ಚಿದ ಬಾಗಿಲ ಸಂದಿಯಿಂದ, ಯಾವುದೋ ರಾಗವೊಂದರ ಆಲಾಪ ಶುರುವಾಗಿದೆ ಎಂದರೆ ಒಳಗಿರುವುದು ಆಸಾವರಿಯೇ. ಹೊರಪ್ರಪಂಚದ ಬಾಗಿಲಿಗೊಂದು ದೊಡ್ಡ ಬೀಗ ಜಡಿದು ಪುಟ್ಟ ಬಚ್ಚಲುಮನೆ ಹೊಕ್ಕವಳಿಗೆ ಎಳೆದುಕೊಳ್ಳುವುದೇ ಏಕಾಂತದ ತೆಕ್ಕೆ. ಎಂದಿನಂತೆ ಕಾಡುವ ರಾಗವನ್ನೇ ಗುನಗುಟ್ಟುತ್ತ ಮೈಮೇಲೆ ನೀರು ಸುರಿದುಕೊಳ್ಳತೊಡಗುತ್ತಾಳೆ. ಸೋಪಿನ ನೊರೆಯಾಟ ಅವಳಿಗಿಷ್ಟವಿಲ್ಲ. ಹಾಯ್ ಎನಿಸಿದಷ್ಟೂ ಮತ್ತೆ ಮತ್ತೆ ಮೈಮೇಲೆ ಖಾಲಿ ನೀರು ಸುರಿದುಕೊಳ್ಳುತ್ತ ಇರುವುದೇ ಅವಳಿಗಿಷ್ಟ. ನೀರ ಹರಿವನ್ನೇ ಗಮನಿಸುತ್ತ ಗುರಿಯಿಲ್ಲದ ಅದರ ಪಯಣ ಕಲ್ಪಿಸಿಕೊಳ್ಳುವುದು. ಬಕೆಟ್ಟಿನಿಂದ ಹರಿವ ನೀರಿಗೆ ಅಡ್ಡಗಾಲಿಟ್ಟು ತಡೆಯಲೆತ್ನಿಸುವುದು. ಬಟ್ಟಲುಗಣ್ಣನ್ನು ಮತ್ತಷ್ಟು ಅರಳಿಸಿ ನೀರ್‍ಮುತ್ತು, ನೀರೆಳೆಗಳ ಹರಿವಿನ ಅಮೂರ್ತ ಚಿತ್ರಣದಲ್ಲಿ ಮೂರ್ತತೆ ಹುಡುಕುವುದು. ಹಾಗೆ ಹುಡುಕುತ್ತಲೇ ಕಣ್ಣು ಮುಚ್ಚಿ ದೀರ್ಘ ಉಸಿರಿನೊಂದಿಗೆ ಸಾಧ್ಯವಾದಷ್ಟು ಷಡ್ಜದ ಮೇಲೆ ನಿಲ್ಲುವುದು. ಚಳಿಗುಳ್ಳಿ ಏಳುತ್ತಿದ್ದಂತೆ ಮತ್ತದೇ ಬಿಸಿ ಬಿಸಿ ನೀರು ಹುಯ್ಯುಕೊಳ್ಳುವುದು.

'ನೀನೇನಾದರೂ ಒಂದೇ ಕೂಗಿಗೆ ಬಂದುಬಿಟ್ಟರೆ ಅವತ್ತು ಮೂಲೆಲಿದ್ದ ತಂಬೂರಿ ತನ್ನಷ್ಟಕ್ಕೆ ತಾನೇ ನುಡಿದೀತು. ಕಾಯ್ತಿದ್ದೀನಿ ಕಣೆ ಅಂಥ ವೈಚಿತ್ರಕ್ಕೆ. . .'

ಸಾವನಿಯ ಪುನರಾವರ್ತಿತ ಹುಸಿಕೋಪ ಮಾಮೂಲೆನಿಸಿದರೂ ಆಸಾವರಿಗೆ ಅದರಲ್ಲೇನೋ ಹಿತವಿದೆ. ಗೆಳತಿಯ ಹೆಗಲಿದೆ, ಸಲಿಗೆಯಿದೆ. ಅಮ್ಮನ ಮಡಿಲಿದೆ, ಅಪ್ಪನ ಬೆನ್ನುತಟ್ಟುವ ಗುಣ ಏನೆಲ್ಲ ಇದೆ. ಸ್ನಾನ ಮುಗಿಸಿ ಬಂದವಳಿಗೆ ಎದುರಿಗಿರುವ ಯಾವ ದೇವರ ಪಟಗಳೂ ಎಂದೂ ಸೆಳೆಯುವುದೂ ಇಲ್ಲ ಸೆಳೆದೇ ಇಲ್ಲ. ಸಾವನಿಯ ಎರಡೂ ಹಸ್ತಗಳನ್ನು ಕಣ್ಗೊತ್ತಿಕೊಂಡು 'ಅಮ್ಮಾ ತಾಯಿ ತಾವು ದಮಯಾಡಿಸಬಹುದು. ಇನ್ನೇನಿದ್ದರೂ ನಿಮ್ಮದೇ ಸಾಮ್ರಾಜ್ಯ, ಬಚ್ಚಲು ಮನೆಯ ಏಕೈಕ ಸರ್ವಾಧಿಕಾರಿಣಿ ತಾವೇ. ದಯಮಾಡ್ಸಿ ದಯಮಾಡ್ಸಿ.. ಹೀಗೆ ಹೀಗೆ'. ಎಂದು ಒಂದೇ ಉಸಿರಿಗೆ ಹೇಳುತ್ತ ಅವಳನ್ನು ಬಚ್ಚಲು ಮನೆಗೆ ತಳ್ಳುತ್ತಾಳೆ.

ಟವೆಲ್‌ನ್ನ ಸುರುಳಿ ಸುತ್ತಿ ಆಸಾವರಿಯ ಬೆನ್ನಿಗೊಂದು ಮುದ್ದುಗುದ್ದು ಕೊಟ್ಟು ಬಚ್ಚಲುಮನೆಯೊಡತಿಯಾಗುತ್ತಾಳೆ ಸಾವನಿ.

ಸಾವನಿ, ಆಸಾವರಿ ಹೆಚ್ಚೂ ಕಡಿಮೆ ಒಂದೇ ವಯಸ್ಸಿನವರು. ಆಸಾವರಿಯ ಚಿಕ್ಕಮ್ಮನ ಮಗಳು ಸಾವನಿ. ಅವಳ ಪ್ರಬುದ್ಧತೆ, ತಾಳ್ಮೆಯ ಒಂದೆಳೆಯೂ ಆಸಾವರಿಗಿಲ್ಲ. ಎಲ್ಲರ ಕಣ್ಣಿಗೆ ಆಸಾವರಿಯಿನ್ನೂ ಬಲಿಯದ ಹುಡುಗಿ. ಆದರೆ ಸಾವನಿಯ ದೃಷ್ಟಿಯಲ್ಲಿ ಆಸಾವರಿ ಬೇರೆಯೇ. ಬೆಂಗಳೂರಿನ ಪುಟ್ಟ ಬಾಡಿಗೆ ಮನೆಯೊಂದರಲ್ಲಿ ಇವರಿಬ್ಬರ ವಾಸ. ಇಬ್ಬರಿಗೂ ಇಪ್ಪತ್ತಿಪ್ಪತ್ತು ವಯಸ್ಸು.

ಒದ್ದೆ ಕೂದಲನ್ನು ಒರೆಸಿಕೊಳ್ಳುತ್ತ ಮೂಲೆಲಿದ್ದ ತಂಬೂರಿ ದಿಟ್ಟಿಸುತ್ತಿದ್ದ ಸಾವನಿ, ಸುಮಾರು ಹತ್ತು ವರ್ಷಗಳ ಹಿಂದಿನದನ್ನು ಕಣ್ಮುಂದೆ ತಂದುಕೊಂಡಳು. ಗುರುಗಳ ಹೆಂಡತಿಗೆ ತಾನು ಹೇಗೆ ನಮಸ್ಕರಿಸುತ್ತೇನೆ ಎಂಬುದನ್ನು ಆಸಾವರಿ ತೋರಿಸಿದ್ದು, ಒಂಚೂರು ಭಯ-ಭಕ್ತಿನೇ ಇಲ್ಲ ಅಂತ ಅವಳಿಗೆ ತಾನು ಗದರಿದ್ದು ಹಾಗೇ ಕಣ್ಣ ಮುಂದೆ ಹರಿದು ಹೋಯಿತು.

***

'ನಾನು ಟ್ಯೂಶನ್ ಮಾಸ್ತರ್‍ ಅಲ್ಲ. ವಾರಕ್ಕೆರಡು ಸಲಿ ಕ್ಲಾಸ್ ಹೇಳಾಕ. ರೊಕ್ಕದ ಮಕಾ ನಾ ಎಂದೂ ನೋಡಾಂವ ಅಲ್ಲ. ಇಪ್ಪತ್ತು ವರ್ಷಗಟ್ಟಲೇ ಸೇವೆ-ಸಾಧನೆ ಮಾಡಿಬಂದವರಿಗೆ ಮಾತ್ರ ಕಲಸಾಂವಾ. ವಾರದಾಗ ಒಂದ್ ದಿನ ಮನ್ಯಾಗ ಇದ್ರ ಹೆಚ್ಚ ನಾ. ಯಾವಾಗ ಯಾವ ಫ್ಲೈಟ್ ಹತ್ತಿರ್‍ತೇನಿ ಅಂತ ಗೊತ್ತಿಲ್ಲ. ಇಂಥಾದ್ರಾಗ ಇಷ್ಟ ಸಣ್ಣ ಹುಡುಗೀ ಜೊತಿ ಆಟಾ ಆಡ್ಕೊಂಡ್ ಕುಂಡ್ರಾಕ ಟೈಂ ಇಲ್ರೀಪಾ...' ಪಂ. ಕೇದಾರನಾಥರು ತುಸು ಹಮ್ಮಿನಿಂದಲೇ, ಆಸಾವರಿ ಹಾಗೂ ಅವಳ ಅಪ್ಪನನ್ನು ಕರೆದುಕೊಂಡು ಬಂದ ಶಿವಮತರಾವ್ ಅವರನ್ನು ಕಣ್ಣು ದೊಡ್ಡದು ಮಾಡಿಕೊಂಡೇ ನೋಡಿದ್ದರು.

'ಹಂಗ ಅನಬ್ಯಾಡ್ರಿ ಒಂಚೂರ್‍ ಹುಡುಗೀನ್ನ ಹಾಡಿಸ್ಯರ ನೋಡ್ರಿಲಾ. ಅಟss ದೊಡ್ಡ ಮನಸ ಮಾಡಬೇಕ್ರಿಪಾ ಗುರುಗಳ. ನಿಮ್ಮನ್ನs ನಂಬಕೊಂಡೇವಿ' ಅಂತ ಶಿವಮತರಾವ್ ಹೇಳಿದ ತಕ್ಷಣ, 'ನಾ ಮತ್ತ ಮತ್ತ ಹೇಳತೇನಿ ಅಂತ ಬ್ಯಾಸರಾ ಮಾಡ್ಕೊಬ್ಯಾಡ್ರಿ. ನನ್ನ ಕಲಿಸೋಣಕಿ ಅಂದ್ರ ಪಕ್ಕಾ ಗುರುಕುಲ ಪದ್ಧತಿದು. ಮೊದಲ ಸೇವೆ. ನಂತರ ಅಭ್ಯಾಸ. ಅಂದ್ರ ನಾದಸಂಸ್ಕಾರ ಮೊದಲ ಆಗಬೇಕು. ನಾವ್ ಹಾಡೂದು ಅವ್ರ ಕಿವಿ ಮ್ಯಾಲ ಬೀಳ್ತಿರ್‍ಬೇಕು. ಆಮ್ಯಾಲ ಮುಂದಿಂದು'.

ಹೀಗೆ ಹೇಳುತ್ತಿದ್ದಾಗಲೇ ಪಂ. ಕೇದಾರನಾಥರ ಕೈ ತಾಂಬೂಲ ಡಬ್ಬಿ ಕಡೆ ಹೋಗಿತ್ತು. ಅಷ್ಟೊತ್ತಿಗೆ ಸಾರಂಗ್ ಮನವಾಡೆ ಅಲ್ಲಿಗೆ ದೊಡ್ಡ ಬುಟ್ಟಿಯಲ್ಲಿ ತಾನು ತೊಳೆದ ಪಾತ್ರೆಗಳನ್ನೆಲ್ಲ ತುಂಬಿಕೊಂಡು ಬಂದ. ಮೂರು ವರ್ಷವಾಗಿತ್ತು ಅವನು ಗುರುಗಳ ಮನೆಗೆ ಬಂದು. ಓದು ಬಿಟ್ಟು, ಅಪ್ಪನ ವ್ಯಾಪಾರ-ವಹಿವಾಟು ಪಕ್ಕಕ್ಕೆ ಸರಿಸಿ, ಅಪ್ಪ-ಅಮ್ಮನನ್ನು ಕಣ್ಣೀರಲ್ಲಿ ಕೈತೊಳೆದುಕೊಳ್ಳುವ ಹಾಗೆ ಮಾಡಿ, ಸಂಗೀತಕ್ಕಾಗಿ ಎಲ್ಲವನ್ನೂ ತೊರೆದು ಬಂದಿದ್ದ. ಶಿರಸಾವಹಿಸಿ ಗುರುಗಳ ಸೇವೆ ಮಾಡಲಾರಂಭಿಸಿದ್ದ. ಆಗಲೇ ಅವನಿಗೆ ಇಪ್ಪತ್ಮೂರಾಗಿತ್ತು. ಆದರೆ ಇದುವರೆಗೂ ಗುರುಗಳು ಅವನಿಗೆ ಎದುರಿಗೆ ಕೂರಿಸಿಕೊಂಡು ಒಮ್ಮೆಯೂ ಪಾಠ ಹೇಳಿದ್ದಿಲ್ಲ.

'ನೋಡೂಣು ಹಾಡು' ಕೇದಾರನಾಥರು ಹುಬ್ಬು ಕುಣಿಸಿ ಆಸಾವರಿ ಮುಖ ನೋಡಿದರು. ಊರಿನಲ್ಲಿ ಹಳೇ ಗುರುಗಳಿಂದ ಕಲಿತ ನಂದರಾಗದ ಧೃತ್ ನ್ನು ಹಾಡಿತೋರಿಸಿದಳು. ಪುಟ್ಟ ಹುಡುಗಿಗೆ ಆ ದೊಡ್ಡ ಹಾರ್ಮೋನಿಯಂನ ಬಾತೆ ಹಾಕುವುದು ಚೂರು ಕಷ್ಟವೇ ಆಗಿತ್ತು. ಆದರೂ ಅದೆಲ್ಲಕ್ಕೆ ಲಕ್ಷ್ಯ ಕೊಡದೆ, ತನ್ಮಯತೆಯಿಂದ ಹಾಡಿದ ರೀತಿಗೆ, ವಯಸ್ಸು ಮೀರಿದ ಅವಳ ಕಂಠತ್ರಾಣಕ್ಕೆ, ಕೇದಾರನಾಥರು ತಲೆದೂಗಿದರು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ `ನೋಡೋಣ ಕಳಿಸಿಕೊಡಿ' ಎಂದು ಹೇಳಿದರು.

ವಿಜಯದಶಮಿಯಂದು ವಿದ್ಯಾರಂಭಕ್ಕೆಂದು ಪಂ. ಕೇದಾರನಾಥರ ಮನೆ ಪ್ರವೇಶಿಸಿದಾಗ ವಿದೇಶಿ ಯುವತಿಯೊಬ್ಬಳು ಫಲ-ತಾಂಬೂಲ ತಟ್ಟೆಯಿಟ್ಟು ಗುರುಗಳಿಗೆ ನಮಸ್ಕರಿಸುತ್ತಿದ್ದಳು. ಅಪ್ಪ-ಅಮ್ಮನೊಂದಿಗೆ ಹೋದ ಆಸಾವರಿ, ಹಾಸಿದ್ದ ಚಾಪೆ ಮೇಲೆ ಕುಳಿತಳು.

'ಇಕಿ ರಿದಂ ಫ್ರಾನ್ಸಿಸ್ ಅಲಿಯಾಸ್ ರಾಗೇಶ್ರೀ. ಫ್ರಾನ್ಸಿನ್ಯಾಕಿ. ನನ್ನ ಹತ್ರನs ಕಲಿಬೇಕು ಅಂತ ಬಂದಾಳು' ಎಂದು ಕೇದಾರನಾಥರು ರಾಗೇಶ್ರೀಯ ಪರಿಚಯ ಮಾಡಿಕೊಟ್ಟರು. ಅವಳು ಅವರೆಲ್ಲರಿಗೆ ನಮಸ್ತೆ ಹೇಳಿ, ತಾನು ತಂದಿದ್ದ ಲ್ಯಾಪ್ ಟಾಪಿನ ಕ್ಯಾಮ್ ಸೆಟ್ ಮಾಡುವುದರಲ್ಲಿ ಮಗ್ನಳಾದಳು.

ಗುರುಗಳು ತಂಬೂರಿಗೆ ಪೂಜೆ ಮಾಡಿ ಆಸಾವರಿಗೆ ಆಶೀರ್ವದಿಸಿದರು. ಅಷ್ಟೊತ್ತಿಗೆ ರಾಗೇಶ್ರೀ, 'ಗುರೂಜಿ ಸಿ ಹಿಯರ್‍. ಐ ಸೆಟ್ ಅಪ್ ದಿ ಕ್ಯಾಮ್‌. ಎಂದು ಅವರ ತೊಡೆಮೇಲೆ ಲ್ಯಾಪ್ ಟಾಪ್ ಇಟ್ಟು ಮೊದಲೇ ಹೊಳಪಿದ್ದ ಕಣ್ಣಿಗೆ ಇನ್ನಷ್ಟು ಮಿಂಚು ತಂದುಕೊಂಡು ಅವರನ್ನೇ ನೋಡಿದಳು. ವೆಬ್‌ಕ್ಯಾಮ್‌ನಲ್ಲಿ ತಮ್ಮನ್ನು ತಾವೇ ನೋಡಿಕೊಂಡ ಗುರುಗಳು ತಾಂಬೂಲ ತುಟಿ ಅರಳಿಸಿ, 'ವ್ಹಾವ್ ಕ್ಯಾ ಬಾತ್ ಹೈ. ಬಹುತ್ ಖೂಬ್ ಬಹುತ್ ಖೂಬ್' ಎಂದರು.

'ಆರು ತಿಂಗಳಿಗೊಮ್ಮೆ ಭಾರತಕ್ಕ ಬರ್ತಾಳಂತ. ಅದ್ಹೆಂಗವಾ ನೀ ಅಲ್ಲೇ. ನಾ ಇಲ್ಲೇ. ಅದೂ ನಮ್ಮ ಸಂಗೀತ ಹಿಂಗೆಲ್ಲಾ ಕಲಿಯಾಕ ಸಾಧ್ಯ ಆಗೂದರ ಹೆಂಗ? ಅಂತ ಕೇಳಿದ್ದಕ್ಕ ಇದೇನೋ ಈ ಲ್ಯಾಪ್‌ ಟಾಪ್ ಹಿಡಕೊಂಡ ಬಂದಾಳು. ಕಂಪ್ಯೂಟರ್‍ ನೋಡಕೋತ ಅಕಿಗೆ ಪಾಠ ಮಾಡಬೇಕಂತ. ಅದೇನೋ ಆನ್‌ಲೈನ್ ಟೀಚಿಂಗ್ ಮಾಡ್ರಿ ಅಂತ ಗಂಟಬಿದ್ದಾಳು. ದೇಶ ಬಿಟ್ಟು ದೇಶಕ್ಕ ಬಂದು ಕಲೀತಾಳ ಅಂದ್ರ ಈ ಹೆಣ್ಣಮಗಳ ಭಕ್ತಿ, ಶ್ರದ್ಧಾ ಮೆಚ್ಚಬೇಕ ಮತ್ತ' ಕೇದಾರನಾಥರು ಅವಳ ಬೆನ್ನ ಮೇಲೆ ಕೈಯ್ಯಾಡಿಸಿದರು. ಗುರುಗಳು ಹೇಳಿದ್ದು ಪೂರ್ತಿ ಅರ್ಥವಾಗದಿದ್ದರೂ ಲ್ಯಾಪ್ ಟಾಪ್ ಕೊಟ್ಟಿದ್ದಕ್ಕೆ ಮೆಚ್ಚುಗೆ ಸೂಚಿಸಿ, ತನಗೆ ಸಂಗೀತ ಕಲಿಸಲು ಒಪ್ಪಿಕೊಂಡಿದ್ದನ್ನು ಅವರಿಗೆ ಹೇಳುತ್ತಿದ್ದಾರೆ ಎಂಬುದನ್ನು ಗ್ರಹಿಸಿಕೊಂಡು ಗುರುಗಳಿಗೊಂದು ಗುಲಾಬಿ ನಗೆ ಚೆಲ್ಲಿದಳು ರಿದಂ ಫ್ರಾನ್ಸಿಸ್ ಅಲಿಯಾಸ್ ರಾಗೇಶ್ರೀ. ಆಸಾವರಿ ಪಿಳಿ ಪಿಳಿ ಕಣ್ಣು ಬಿಟ್ಟು, ಮುರಿದ ಒಂದು ಹಲ್ಲಿನ ಜಾಗವನ್ನು ಮುಕ್ತವಾಗಿ ತೋರಿಸಿದ್ದಳು. ಆಮೇಲೆ ಹಲ್ಲು ಮುರಿದದ್ದು ನೆನಪಾಗಿ ಬಾಯಿ ಮೇಲೆ ಕೈ ಇಟ್ಟುಕೊಂಡು ಗುರುಗಳೆದುರಿಗೆ ಗಂಭೀರಳಾಗಿ ಕುಳಿತಳು.

***

ಪಂ. ಕೇದಾರನಾಥರ ಮನೆಮಂದಿಗೆಲ್ಲ ಚುರುಕು ಮಾತಿನ ಆಸಾವರಿ ತುಂಬಾ ಹಿಡಿಸಿಬಿಟ್ಟಳು. ಅವತ್ತು ಅಷ್ಟು ಗತ್ತಿನಿಂದ ಮಾತನಾಡಿದ ಗುರುಗಳು ಎಂಟ್ಹತ್ತರ ಹುಡುಗಿಯನ್ನು ಅಪ್ಪನಂತೆ ತೊಡೆಮೇಲೆ ಕೂರಿಸಿಕೊಂಡು ಮುದ್ದು ಮಾಡುತ್ತಿದ್ದರು. ಇದರಿಂದ ಆಸಾವರಿಗೆ ಕೇದಾರನಾಥರನ್ನು ಗುರುಭಾವನೆಯಿಂದ ಕಾಣಲು ಸಾಧ್ಯವಾಗಲೇ ಇಲ್ಲ. ಆದರೆ ಗುರುಗಳ ಹೆಂಡತಿ ದುರ್ಗಾದೇವಿ ಅವತ್ತು ಬಾಗಿಲು ಪಕ್ಕದಲ್ಲಿ ನಿಲ್ಲಿಸಿಕೊಂಡು ಹೇಳಿದ್ದನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡು. ದಿನವೂ ಅವರು ಹೇಳಿದಂತೆ ಗುರುಗಳಿಗೂ ಅವರ ಹೆಂಡತಿಗೂ ತಪ್ಪದೆ ನಮಸ್ಕರಿಸುತ್ತಿದ್ದಳು. ಆದರೆ ಭಕ್ತಿಯಿಂದಲ್ಲ. ಕಣ್ಣು ಮುಚ್ಚಿದವರಂತೆ ನಟಿಸಿ ನಮಸ್ಕರಿಸಿ ಪಟ್ ಅಂತ ಎದ್ದುಬಿಡುತ್ತಿದ್ದಳು. ಹೀಗೆ ಮಾಡುವಾಗಲೆಲ್ಲ ಗುರುಗಳ ಹೆಂಡತಿ ಮೇಲೆ ಅವಳಿಗೆ ಸಿಕ್ಕಾಪಟ್ಟೆ ಕೋಪ. ವಿದ್ಯೆ ಕಲಿಸುವವರೇ ಹೇಳಿಲ್ಲ. ಇವರ್‍ಯಾರು ಹೀಗೆ ಹೇಳಲು ಎಂದು ಒಂದು ಕ್ಷಣ ಮುಖಗಂಟು ಹಾಕಿಕೊಂಡು ನಮಸ್ಕಾರ ಶಾಸ್ತ್ರ ಮುಗಿಸುವುದು ದಿನಚರಿಯಾಗಿ ಹೋಗಿತ್ತು.

ಆಸಾವರಿಯ ಗಾಯನದಲ್ಲಿ ಎಲ್ಲೂ ಗುರುಗಳ ಛಾಪು ಇರಲಿಲ್ಲ. ಒಮ್ಮೆ ಹಾಡಿದಂತೆ ಇನ್ನೊಮ್ಮೆ ಹಾಡುವುದೆಂದರೆ ಅವಳಿಗಾಗದ ವಿಷಯ. ಪಾಠ ಒಪ್ಪಿಸುವುದಂತೂ ಅವಳಿಗೆ ಬರುತ್ತಲೇ ಇರಲಿಲ್ಲ. ಪ್ರತಿಬಾರಿಯೂ ಹೊಸ ಪ್ರಯೋಗ, ಹೊಸ ಚಿಂತನೆ, ಎಲ್ಲವೂ ಹೊಚ್ಚ ಹೊಸದೇ. ಗುರುಗಳು ಈ ಬೆಳವಣಿಗೆಯನ್ನೆಲ್ಲ ಗಮನಿಸುತ್ತಲೇ ಇದ್ದರು. ಜೊತೆಗೆ ಹದಿನೆಂಟರ ಅವಳ ಬೆಳವಣಿಗೆಯನ್ನೂ.

***

ಉಂಡೆ ಮಾಡಲೂ ಬಾರದಂತಾಗಿತ್ತು ನೀರು ಜಾಸ್ತಿಯಾಗಿ ಹಿಟ್ಟೆಲ್ಲ ಕೈಗಂಟಿಕೊಂಡಿತ್ತು. ಅರೆ ಇದೇನಿದು ಚಪಾತಿ ಮಾಡೋದಂದ್ರೆ ನನ್ನಮ್ಮ ಗಣಿತ ಬಿಡಿಸಿದಷ್ಟು ಸಲೀಸು. ಆದರೆ ಈವತ್ತು ಹೀಗೇಕಾಯ್ತು? ಆಸಾವರಿ ಬರೋ ಮೊದಲೇ ಬೇಗ ಏನಾದರೂ ಮಾಡಿ ಚಪಾತಿ ರೆಡಿ ಮಾಡಬೇಕು ಎಂದುಕೊಂಡ ಸಾವನಿ ಗೋಧಿಹಿಟ್ಟಿನ ಡಬ್ಬಕ್ಕೆ ಕೈಹಾಕಿದಳು. ಹಿಟ್ಟು ಖಾಲಿಯಾಗಿದ್ದು ಮರೆತೇ ಹೋಗಿತ್ತು. ಇನ್ನೇನು ಮಾಡುವುದು ಎಂದು ಯೋಚಿಸುತ್ತಾ, ಕಲಿಸಿದ ಹಿಟ್ಟಿಗೆ ಮತ್ತೊಂದಿಷ್ಟು ನೀರು ಸುರಿದು, ದೋಸೆ ಹದ ಮಾಡಿಟ್ಟಳು.

ಆದರೆ ಆಸಾವರಿ ತಿಂಡಿ ತಿನ್ನುವ ಸಮಯದಲ್ಲಿ ತಂಬೂರಿ ಶ್ರುತಿ ಮಾಡುತ್ತ ಕುಳಿತಿದ್ದಳು. ಈಗೇನಾದರೂ ಡಿಸ್ಟರ್ಬ್‌ ಮಾಡಿದರೆ ಬೈಗುಳ ಗ್ಯಾರಂಟಿ ಎಂದು ಸಾವನಿಗೆ ಗೊತ್ತಿತ್ತು. ಅದಕ್ಕೇ ರಿಯಾಝ್ ಮುಗಿದಾದ ಮೇಲೆಯೇ ಮಾತನಾಡಿಸುವ ಎಂದು ಕಂಪ್ಯೂಟರ್‍ ಆನ್ ಮಾಡಿ, ಮೇಲ್ ಚೆಕ್ ಮಾಡತೊಡಗಿದಳು.

ಕಲಿಕೆಯ ಹಂತದಲ್ಲಿ ಗುರುಗಳ ಮಾರ್ಗದರ್ಶನವಿಲ್ಲದಿದ್ದರೆ ಆಗಬಹುದಾದ ಪರಿಣಾಮದ ಬಗ್ಗೆ ಅವಳಿಗೆ ಅರಿವಿತ್ತು. ಒಂದು ಸ್ವರ ವ್ಯತ್ಯಾಸವಾದರೂ ಬೇರೆ ರಾಗಕ್ಕೆ ತಿರುಗಿಕೊಂಡು ಅಭಾಸವಾಗುತ್ತದೆ ಎನ್ನುವಷ್ಟರ ಮಟ್ಟಿಗೆ ಸಾವನಿಗೆ ಸಂಗೀತ ಜ್ಞಾನವಿತ್ತು. ಯಾವ ಗುರುಗಳ ಹಂಗೇ ಬೇಡವೆಂದು ಏಕಲವ್ಯ ದಾರಿಯನ್ನು ಹಿಡಿದವಳಿಗೆ ಏನಾದರೂ ಒಂದು ದಾರಿ ಹುಡುಕಲೇಬೇಕೆಂದು ನಿರ್ಧರಿಸಿದ್ದ ಸಾವನಿಗೆ ಅಚ್ಚರಿ ಕಾಯ್ದಿತ್ತು. ಬನಾರಸ್ಸಿನ ಗೆಳತಿ ಪ್ರಿಯಾ ಮುಖರ್ಜಿ ರಿಪ್ಲೈ ಮೇಲೆ ಕುತೂಹಲದಿಂದ ಕ್ಲಿಕ್ ಮಾಡಿದಳು. ತನ್ನ ಗುರು ಶಂಕರಾದಾಸ್ ಶರ್ಮಾ ಆಸಾವರಿಯನ್ನು ಶಿಷ್ಯೆಯನ್ನಾಗಿ ಸ್ವೀಕರಿಸಲು ಒಪ್ಪಿದ್ದಾರೆಂದೂ, ಸ್ಕಾಲರ್‌ಶಿಪ್ ಪಡೆಯಲು ಬೇಕಾದ ತಯಾರಿ ಮಾಡಿಕೊಳ್ಳಲು ಅವರು ಸೂಚಿಸಿದ್ದಾರೆ ಎಂದೂ ಅವಳು ಬರೆದಿದ್ದಳು. ಅವಳಿಂದ ಬೈಗುಳ ತಿಂದರೂ ಪರವಾಗಿಲ್ಲ ಅವಳಿಗೀಗ ಖಂಡಿತ ಡಿಸ್ಟರ್ಬ್‌ ಮಾಡ್ತೇನೆ ಎಂದು ಅರೆಮುಚ್ಚಿದ ಬಾಗಿಲನ್ನು ತಳ್ಳಿದಳು ಸಾವನಿ.

ಆಸಾವರಿ ಬಿಳಿಗೋಡೆಯನ್ನ ಒಂದೇ ಸಮನೆ ದಿಟ್ಟಿಸುತ್ತ ತಂಬೂರಿ ನುಡಿಸುತ್ತ ಕುಳಿತಿದ್ದಳು. ಕಣ್ಣತುಂಬ ನೀರುಗಟ್ಟಿತ್ತು. ಏನಾಯ್ತೆ ಮಹರಾಯ್ತಿ ನಿಂಗೆ? ಅಂದಿದ್ದೇ ತಡ ಆಸಾವರಿ ತಂಬೂರಿ ಬದಿಗಿಟ್ಟು ಸಾವನಿಯ ಭುಜ ತೋಯಿಸಿದಳು...


***

ಸಂಜೆಯಾಗಿದ್ದರೂ ಬೆಳಗಿನ ಭಟಿಯಾರದ ಆಲಾಪ ಕೇದಾರನಾಥರ ಮನೆ-ಕಾಂಪೌಂಡನ್ನೆಲ್ಲ ಆವರಿಸಿತ್ತು. ಗೇಟ್ ತೆರೆಯುತ್ತಿದ್ದಂತೆ ದಿನವೂ ಕೈ ನೆಕ್ಕಿ, ಮೈಮೇಲೆ ಏರುತ್ತಿದ್ದ ಗುರುಗಳ ಮನೆಯ ಮುದ್ದುನಾಯಿ ಎಂದಿನಂತೆ ಹೊರಬರಲಿಲ್ಲ. ಬಾಗಿಲ ಬಳಿ ಹೋಗುತ್ತಿದ್ದಂತೆ ಸ್ಟೇರ್‌ಕೇಸ್‌ನ ಅಡಿಯಲ್ಲಿ ಬಿಳಿ ನಾಯಿಯ ಬದಲಾಗಿ ಕಪ್ಪು ನಾಯಿಯೊಂದು ಇಣುಕಿದಂತಾಯ್ತು. ಆದರೆ ಮುಂದೆ ಬರುವ ಧೈರ್ಯ ಮಾಡಲಿಲ್ಲ. ಆಸಾವರಿ ಒಮ್ಮೆ ಕಣ್ಣನುಜ್ಜಿಕೊಂಡು ಇದೇನು ತೆನಾಲಿ ರಾಮಕೃಷ್ಣನ ಕತೆಯಾ? ಇಷ್ಟು ದಿನ ಇದ್ದ ಬಿಳಿನಾಯಿ ಇದ್ದಕ್ಕಿದ್ದ ಹಾಗೆ ಈವತ್ತೇಕೆ ಕಪ್ಪು ಕಾಣ್ತಿದೆ? ನನ್ನ ಕಣ್ಣು ಸರಿಗಿದೇ ತಾನೆ? ಎಂದುಕೊಂಡ ಆಸಾವರಿ ಗೇಟ್ ಮುಚ್ಚಿಕೊಂಡು ಭಟಿಯಾರದ ಜಾಡು ಹಿಡಿದು ಹೋದಳು. ಗುರುಗಳ ಹೆಂಡತಿ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡ ಅವಳು ಅಂದು ಗುರುಗಳ ನಮಸ್ಕಾರಕ್ಕೆ ಚಕ್ಕರ್‍.

ರಿಯಾಝ್ ಶುರುವಾಗಿ ತುಂಬಾ ಹೊತ್ತಾಗಿದೆ ಎಂದು ಅವರ ಹದವಾದ ಕಂಠವೇ ಹೇಳುತ್ತಿತ್ತು. ನಿರಾಯಾಸವಾಗಿ ತಾರಕದ ಪಂಚಮ ಧೈವತವನ್ನೂ ಸ್ಪರ್ಶಿಸಿ ಬರುತ್ತಿದ್ದರು. ಅಷ್ಟೊಂದು ಖುಲ್ಲಾ ಆವಾಝ್‌ನಲ್ಲಿ ಅಲ್ಲಿವರೆಗೆ ಹೋಗಿ ನಿಲ್ಲೋದು ಬೇಕಾ? ಅವರು ಹಾಗೇ ಹಾಡಿಕೊಳ್ಳಲಿ ನನಗಂತೂ ಸುರೇಲಿ ಇಷ್ಟ. ನಾನು ಅವರನ್ನ ಫಾಲೋ ಮಾಡಲ್ಲಪ್ಪ ಎಂದು ಮನಸ್ಸಿನಲ್ಲೇ ಸವಾಲ್‌-ಜವಾಬ್‌ ಕೊಟ್ಟುಕೊಳ್ಳುತ್ತ ಗುರುಗಳ ಮುಂದೆ ಕುಳಿತಳು.

ಲ್ಯಾಪ್ ಟಾಪ್ ಗುರುಗಳಿಗೆ ಮುಖ ಮಾಡಿ ಕುಳಿತಿದ್ದರಿಂದ ಅದರಲ್ಲೇನಿದೆ ಎಂದು ಆಸಾವರಿಗೆ ಕಾಣಿಸಲಿಲ್ಲ. ಕುತೂಹಲವಿದ್ದರೂ ಬಹುಶಃ ರಾಗೇಶ್ರೀನೇ ಇರಬೇಕು. ಅವತ್ತೇನೋ ಆನ್‌ಲೈನ್ ಟೀಚಿಂಗ್ ಅಂತೆಲ್ಲಾ ಹೇಳಿದ್ದು ಈಗ ನಡೆದಿರಬೇಕು. ಎಂದು ಅಂದುಕೊಂಡು ಗುರುಗಳ ಗಾಯನ ಕೇಳುತ್ತ ಕುಳಿತಳು. ಆದರೆ ತನಗೆ ಕಲಿಸುವಾಗ ಒಂದೆರಡು ಆಲಾಪ್, ತಾನ್ ಹೇಳಿ ಅರ್ಧಗಂಟೆಗೆಲ್ಲಾ ಪಾಠ ಮುಗಿಸುವ ಗುರುಗಳು ರಾಗೇಶ್ರೀಗೆ ಎಷ್ಟೊಂದು ವಿಭಿನ್ನ ತಾನುಗಳನ್ನು ಹೇಳಿಕೊಡುತ್ತಿದ್ದಾರೆ. ಇದು ಬರೀ ಪಾಠವಲ್ಲ. ಗುರುಗಳು ಭಟಿಯಾರ್‌ನಲ್ಲಿ ಸಂಪೂರ್ಣ ಇಳಿದುಹೋಗಿದ್ದಾರೆ. ನಿಜ ಗುರುಗಳು ಹೇಳೋ ಹಾಗೆ ಸಂಗೀತ ಗಾಡ್ ಗಿಫ್ಟ್!

ಎಂದು ಮತ್ತೆ ಮನಸ್ಸಿನೊಡನೆ ಸವಾಲ್‌-ಜವಾಬ್ ಮಾಡಿಕೊಳ್ಳುತ್ತ ಸುಮ್ಮನೆ ಆಸಾವರಿ ಕುಳಿತೇ ಇದ್ದಳು. ಸುಮಾರು ಐದು ನಿಮಿಷಗಳಾದ ಮೇಲೆ ಗುರುಗಳು ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕುತ್ತ ತನ್ನ ಮುಂದೆ ಬಂದು ಕುಳಿತ ಅವಳನ್ನು ಗಮನಿಸಿ, ಒಮ್ಮೆಲೆ ಹಾಡುವದನ್ನು ನಿಲ್ಲಿಸಿದರು. ಅತ್ತ ರಾಗೇಶ್ರೀಗೆ ನಾಳೆ ಪಾಠ ಮುಂದುವರಿಸುವುದಾಗಿ ಹೇಳಿ ಲ್ಯಾಪ್ ಟಾಪ್ ನ ಬಾಯಿ ಮುಚ್ಚಿದರು.

ಇಷ್ಟೊತ್ತನಕ ರಾಗೇಶ್ರೀ, ಈಗ ಆಸಾವರಿsss ಎಂದು ತಾವು ಕುಳಿತಿದ್ದ ಜಾಗಬಿಟ್ಟು ಒಂಚೂರು ಮುಂದೆ ಬಂದರು. ನಿನ್ನ ನಾ ದೊಡ್ಡ ಕಲಾವಿದೆ ಮಾಡ್ತೀನಿ. ನನ್ನ ಕಣ್ಣಾಗ ಇಟಕೊಂಡ್ ನಿನಗ ಸಂಗೀತ ಕಲಸ್ತೇನಿ. ಆದ್ರ ನೀನು. . .' ಗುರುಗಳ ಈ ಹೊಸ ರಾಗವನ್ನೂ ಅದರೊಳಗೆ ಬಂಧಿಯಾದ ಬಂದಿಷ್‌. ಆ ಬಂದಿಷ್‌ನ ನೊಟೇಶನ್ನನ್ನು ಆಸಾವರಿ ಮನಸ್ಸು ಅಂದಾಜಿಸಲು ಪ್ರಾರಂಭಿಸಿತು. ಆಸಾವರೀsss ಎಂದು ರಾಗವೆಳೆದು ಗುರುಗಳು ಕುಳಿತಲ್ಲಿಂದ ಮೇಲೆದ್ದ ರೀತಿಗೆ ಪಕ್ಕದಲ್ಲಿ ಮಲಗಿಸಿದ್ದ ತಂಬೂರಿ ಅದರ ಮುಖ ಹಿಂದಕ್ಕೆ ತಿರುವಿಕೊಂಡಿತು. ಅದನ್ನು ಅದರ ಜಾಗಕ್ಕೆ ಅಂದರೆ ಮೂಲೆಯಲ್ಲಿಟ್ಟು ಸರಿಯಾಗಿ ನಿಲ್ಲಿಸೇ ಹೋಗಬೇಕೆಂದು ತಕ್ಷಣವೇ ಅನ್ನಿಸಿತಾದರೂ ಗುರುಗಳ ನಾಯಿ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರಿಂದ ಒಂದು ಕ್ಷಣ ವಿಚಲಿತಳಾಗಿ ಹೊರಓಡಿಹೋದಳು. ಆದರೆ ಮುದ್ದು ಬಿಳಿನಾಯಿಯ ಬದಲಾಗಿ ಅಲ್ಲಿ ಕಂಡದ್ದು ಅದರದೇ ಮೈಮಾಟ ಹೊಂದಿದ ಕರಿನಾಯಿ. ಮಬ್ಬುಗತ್ತಲಲ್ಲಿ ದುರುಗುಟ್ಟಿಕೊಂಡು ನೋಡುತ್ತಿದ್ದ ಆ ನಾಯಿಯನ್ನು ನೋಡಿಯೂ ನೋಡದಂತೆ ಗೇಟನ್ನು ಲಾಕ್ ಮಾಡದೆಯೇ ಹಾಗೇ ಹೊರ ಓಡಿದಳು. ಹಗಲೊತ್ತೇ ಆ ಮಾವಿನತೋಪಿನ ಅಡ್ಡದಾರಿ ಹಿಡಿದು ಹೋಗಲು ಹೆದರುತ್ತಿದ್ದ ಆಸಾವರಿ ಅಂದು ಸಂಜೆ ಏಳರ ಹೊತ್ತಿಗೆ ಮಾವಿನ ತೋಪಿನ ಕಾಲು ದಾರಿಯನ್ನು, ಕತ್ತಲನ್ನೂ ಸೀಳಿಕೊಂಡು ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುತ್ತಾ ಹೋದಳು.

***

ಒಂದೇ ಗುರು ಪರಂಪರೆಯನ್ನೇ ಕಲಿಯಬೇಕೆಂದು ತಾನು ಹಟ ತೊಟ್ಟಿದ್ದೇಕೆ? 'ನಿನಗೆ ಸಂಗೀತ ಗಾಡ್ ಗಿಫ್ಟ್. ನೀನು ಹಾಡುವ ವೇದಿಕೆಯೇ ಬೇರೆ' ಎಂದು ಬಡಬಡಿಸಿದ ಗುರುಗಳ ಬರಡು ಮಾತನ್ನು ಇಷ್ಟುದಿನ ತಾನು ನಂಬಿ ಕುಳಿತಿದ್ದರ ಫಲವೇನು? ನಾದಸಂಸ್ಕಾರ ಅಂತೆಲ್ಲ ಪುರಾಣ ಹೇಳಿದವರು ಅಂದು ರಾಗೇಶ್ರೀಗೆ ಆನ್‌ಲೈನ್ ಟೀಚಿಂಗ್ ಗೆ ಒಪ್ಪಿಕೊಂಡಿದ್ದರ ಹಿನ್ನೆಲೆ ಏನಿರಬಹುದು? ಬೆಳ್ಳಿಚಮಚ ಬಾಯಲ್ಲಿಟ್ಟುಕೊಂಡ ಹುಡುಗ ಸಾರಂಗ ಮನವಾಡೆ ಇನ್ನೂ ಪಾತ್ರೆ ತೊಳೆಯುತ್ತಲೇ ಇದ್ದುದೇಕೆ?

ಮತ್ತೆ ಆಸಾವರಿಯ ಮನಸ್ಸಿನಲ್ಲಿ ಸವಾಲ್‌-ಜವಾಬ್‌ ಶುರು ಆಗಿತ್ತು. ಪಕ್ಕದಲ್ಲಿ ಕುಳಿತ ಸಾವನಿಯ ಕೈ ಹಿಡಿದು 'ಸಾವನಿ, ಊರು ಬಿಟ್ಟಾಗ ಕಂಡಿದ್ದು ಬೆಂಗಳೂರು. ಈಗ ಹೊರಟಿರೋದು ಬನಾರಸ್‌.'

'ಮುಂದೆ? ಹೇಳು ಆಸಾವರಿ ಏನು ಅಂತ' ಸಾವನಿ ಕೇಳಿದಳು. ಅದಕ್ಕೆ ಪ್ರತಿಯಾಗಿ ಆಸಾವರಿ ಉತ್ತರ ಕೊಟ್ಟಳಾದರೂ ಅದೆಲ್ಲವನ್ನೂ ರೈಲ್ವೇ ಅನೌನ್ಸರ್‍ ನುಂಗಿಹಾಕಿಬಿಟ್ಟಳು.

ಅಷ್ಟೊತ್ತಿಗೆ ಆಸಾವರಿ ಕುಳಿತ ಕಿಟಕಿ ಹತ್ತಿರ ಬಂದು ನಿಂತಳು ಸಾವನಿ.

'ಎರಡು ಹಗಲು ಮೂರು ರಾತ್ರಿಗಳನ್ನು ನಾನಿದರಲ್ಲೇ ಕಳೆಯಬೇಕು. ಬೆಳಕಿದ್ದಾಗ ಬೆಳ್ಳಕ್ಕಿಯಂತೆ ಸಾಗುವ ಈ ರೈಲು ಕತ್ತಲಲ್ಲೂ ಹೀಗೆ ಓಡುತ್ತಿರುತ್ತದೆ. ಯಾಕೆಂದರೆ ತಾನು ಸೇರುವ ಜಾಗವನ್ನು ನಿಗದಿತ ಸಮಯದಲ್ಲಿ ಅದು ತಲುಪಲೇಬೇಕು. ಕತ್ತಲಾಯಿತೆಂದು ನಿಲ್ಲುವ ಜಾಯಮಾನ ಇದರದಲ್ಲ. ಕತ್ತಲೆಯನ್ನು ಸರಿಸಿ ಬೆಳಕಿನ ದಾರಿ ಮಾಡಿಕೊಂಡು ಹಳಿಯ ಮೇಲೆಯೇ ಚಲಿಸುವುದು ಇದರ ಧರ್ಮ. . . ' ಹೇಳುತ್ತಲೇ ಇದ್ದಳು ಆಸಾವರಿ. ಈಗ ನೆನೆದಿದ್ದು ಕಿಟಕಿ ಸರಳುಗಳ ಮಧ್ಯೆ ಇದ್ದ ಆಸಾವರಿಯ ಭುಜ.

ಒಂದೊಂದೇ ಡಬ್ಬಿಗಳು ಸಾವನಿಯನ್ನು ದಾಟತೊಡಗಿದವು. ಒಂದು ರೀತಿ ಖಾಲಿತನ ಅವಳನ್ನು ಒಮ್ಮೆಲೆ ಹಿಡಿಯಾಗಿಸಿತು. ಅಗಲುವುದು ಅನಿವಾರ್ಯ. ಅನಿವಾರ್ಯವೇ ಹೊಸ ಸೃಷ್ಟಿಗೆ ಕಾರಣ ಎಂದು ಹೇಳುತ್ತ ರೈಲು ಗಾಲಿಗಳು ಲಯಬದ್ಧವಾಗಿ ವೇಗವನ್ನು ಹೆಚ್ಚಿಸಿಕೊಂಡವು. ಆ ಕತ್ತಲೆಯಲ್ಲೂ ಬಿದ್ದ ತುಂತುರು ಹನಿಯ ಬೆಳ್ಳಿ ಬೆಳಕು ಸಾವನಿಗೆ ಎಂಥದೋ ಶಾಂತಿಸ್ಪರ್ಶ ನೀಡಿದವು.

ಅತ್ತ ಕತ್ತಲೆ ಸೀಳಿಕೊಂಡು ಓಡುವ ರೈಲಿಗಿಂತ ವೇಗವಾಗಿ, ಹರಿಯುತ್ತಿದ್ದ ಆಸಾವರಿಯ ಕಣ್ಣೀರಿಗೆ, ಅದೇ ತುಂತುರು ಹನಿಯ ಬೆಳ್ಳಿ ಬೆಳಕು ಒಡ್ಡು ಕಟ್ಟಿತು.

'ಹಿಂದಿನ ಒಂದೊಂದು ದಿನ-ಗಳಿಗೆಗಳನ್ನು ಒಟ್ಟಾಗಿಸಿ ಕತ್ತಲಗೂಡಿನಲ್ಲಿಟ್ಟು ಅವೆಲ್ಲವುಳಿಗೊಂದು ಬೀಗ ಜಡಿದು, ಇನ್ಯಾರಿಗೂ ಆ ಬೀಗದ ಕೈ ಸಿಗದಿರಲಿ' ಎಂದು ತನ್ನಷ್ಟಕ್ಕೇ ತಾನೇ ಜವಾಬ್ ಕೊಟ್ಟುಕೊಂಡು ಆ ಬೀಗದ ಕೈಯನ್ನು ದೂರ ದೂರ ಎಸೆದುಬಿಟ್ಟಳು ಆಸಾವರಿ.

ಆ ಎಸೆತದ ರಭಸಕ್ಕೆ ಎಂದೂ ಕಂಡಿರದ ಭಾರೀ ಮಿಂಚೊಂದು ಟಿಸಿಲೊಡೆದು ಕ್ಷಣದಲ್ಲಿ ಮಾಯವಾಯಿತು. ಆದರೆ ಅದರ ಹೊಳಪು ಆಸಾವರಿಯ ಕಣ್ಣಲ್ಲಿ ಅಚ್ಚೊತ್ತಿ ಹೋಗಿತ್ತು ಶಾಶ್ವತವಾಗಿ.


-ಶ್ರೀದೇವಿ ಕಳಸದ

(ಕನ್ನಡಪ್ರಭ - ದೀಪಾವಳಿ ವಿಶೇಷಾಂಕಕ್ಕೆ ಆಹ್ವಾನಿತ ಕಥೆ) c also http://www.kannadaprabha.com/NewsItems.asp?ID=KP420081025051810&Title=Sapthahikaprabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=10/30/2008&Dist=0

6 comments:

ಮಧು said...

ಸಕ್ಕತ್ತಾಗಿದೆ. ಸವಾಲ್ ಜವಾಬ್. ದೀಪಾವಳಿಗೆ ಒಳ್ಳೆಯ ಕಥೆ.
ಆದರೆ ನನ್ನದೊಂದು ಕಂಪ್ಲೇಂಟು!. ನನ್ನದೊಂದು ಅಪೂರ್ಣ ಕಥೆಯ ನಾಯಕಿಯ ಹೆಸರೂ "ಅಸಾವರಿ" ಎಂದಿದೆ. ನೀವು ಅದನ್ನುಮೊದಲು ಬಳಸಿಕೊಂಡುಬಿಟ್ರಿ. ಛೇ :-(

sunaath said...

ಶ್ರೀದೇವಿ,
ಸಂಗೀತದ ಕಲಿಕೆಯ ವಿವಿಧ ಮುಖಗಳನ್ನು ತೋರಿಸುವ ಈ ಕತೆ ನನಗೆ ಇಷ್ಟವಾಯಿತು.
ಕತೆಯ narration ಸೊಗಸಾಗಿದೆ.

ಪಲ್ಲವಿ ಎಸ್‌. said...

ಕಥೆ ಚೆನ್ನಾಗಿದೆ ಶ್ರೀದೇವಿ,

ಸಂಗೀತದ ಬಗ್ಗೆ ಏನೂ ಗೊತ್ತಿಲ್ಲವಾದರೂ, ಕತೆ ಇಷ್ಟವಾಗುವಂತಿದೆ. ಎಲ್ಲಿ ಹೋದರೂ ನಮಗೆ ಸಿಗುವುದು ಮನುಷ್ಯರೇ ಅಲ್ವಾ? ಅದಕ್ಕೆಂದೇ, ಮನುಷ್ಯನ ಎಲ್ಲ ದೌರ್ಬಲ್ಯಗಳು ಸಹಜವಾಗಿ ಅರ್ಥವಾಗುತ್ತವೆ. ಕತೆ ಅದನ್ನು ಸೊಗಸಾಗಿ ಬಿಂಬಿಸುತ್ತ ಹೋಗುತ್ತದೆ.

ಅಂದ್ಹಾಗೆ, ಇಂತಹ ಗುರುಗಳು ಕೇವಲ ಸಂಗೀತಕ್ಷೇತ್ರದಲ್ಲಿ ಮಾತ್ರವಲ್ಲ, ಇತರ ಎಲ್ಲ ಕ್ಷೇತ್ರಗಳಲ್ಲೂ ಇದ್ದಾರೆ. ಎಲ್ಲೆಡೆ ಕಾಣುವುದು ಅದೇ ರೋಗ.

ಪ್ರತಿಯೊಂದೂ ಗುರುಮುಖವಾಗಿಯೇ ಬರಬೇಕಾ? ಸ್ವಂತದ ಸಾಧನೆಗೆ ಏನೂ ಬಲವಿಲ್ಲವಾ? ಏಕೋ ಈ ಪ್ರಶ್ನೆ ತಲೆ ತಿನ್ನತೊಡಗಿದೆ.

- ಪಲ್ಲವಿ ಎಸ್‌.

ಪ್ರಿಯಾ ಕೆರ್ವಾಶೆ said...

ತುಂಬ ಚೆನ್ನಾಗಿದೆ ಕಥೆ, ಅದೆಷ್ಟು ತಾದಾತ್ಮತೆಯಿಂದ ಬರೆದ್ದೀಯ..ಮನಸ್ಸಿನಾಳದಲ್ಲೆಲ್ಲೋ ಸುಳಿಯುವ ಸೂಕ್ಷ್ಮತೆ ಇಲ್ಲಿ ತಾನೇ ತಾನಾಗಿ ಬಂದಿದೆ. ಇದಕ್ಕೆ ಮುಂದುವರಿಕೆಯಾಗಿ ಏನನ್ನಾದರೂ ನಿರೀಕ್ಷಿಸಬಹುದಾ?

ರಾಘು ತೆಳಗಡಿ said...

ಸವಾಲ್-ಜವಾಬ್ ತಲೆಬರಹ ನೋಡಿದ ಮೇಲೆ ಸಂಗೀತಕ್ಕೆ ಜೊತೆಗೂಡಿದ ಕಥೆ ಅನ್ನಿಸಿತು. ಹಾಗೇ ಇದು ಗುರು-ಶಿಷ್ಯರ ನಡುವೆ ಇರಬಹುದು ಅಂತ ಮನಸ್ಸಲ್ಲಿ ಬಂತು. ಎಲ್ಲ ಸಂಗೀತಕ್ಕೆ ಗುರುಭಕ್ತಿ ಬಹು ಮುಖ್ಯ ಅನ್ನೋದು ಸತ್ಯ ಆದ್ರೂ ಆ ಸ್ಥಾನದಲ್ಲಿರುವವರು......! ಕಥೆಗೆ ಬಳಸಿದ ಕಥಾ ನಾಯಕಿಯರ ಹೆಸರು ಸಾವನಿಯ, ಅಸಾವರಿ ಏನೋ ವಿಭಿನ್ನ ಅನ್ನಿಸುತು ಮೊದಲು ಬಾರಿ ನೋಡಿದ್ದು, ಕೇಳಿದ್ದು ಅಂತ! "ಅನಿವಾರ್ಯವೇ ಹೊಸ ಸೃಷ್ಟಿಗೆ ಕಾರಣ" ಹೌದು, ಎಷ್ಟೋ ಬಾರಿ ಎಲ್ಲರಿಗೂ ಬದುಕಲ್ಲಿ ಆದ ಅನುಭವ ಈ ಮಾತನ್ನ ಒಪ್ಪುತ್ತೆ. ಸಂಗೀತ ಜ್ನಾನವಿಲ್ಲದ ಕಾರಣ ಕೆಲ ಕಡೆ ಅರ್ಥವಾಗದಿದ್ದರು ದೀಪಾವಳಿಯ ಈ ವಿಶೇಷ ಬರಹ/ಕಥೆ ಚೆನ್ನಾಗಿದೆ ಶ್ರೀ. ಆದ್ರೆ ಇದು ಇನ್ನೂ ಪೂರ್ತಿ ಆಗಿಲ್ವೇನೋ ಅನ್ನಿಸಿತು ಮನಸ್ಸಿಗೆ....ಮುಂದುವರಸ್ತೀಯಾ ಪ್ಲೀಸ್. ರೈಲಿನ ಧರ್ಮವನ್ನು ತುಂಬಾ ಸೊಗಸಾಗಿ ಬರ್ದಿದಿಯಾ, ಎಲ್ಲರ ಬದುಕು ಸಹ ಅದೇ ತರ ಗುರಿಯೊಟ್ಟಿಗೆ ಸಾಗಿದರೆ ಸಧನೆ ಸರಳವಾಗುತ್ತಲ್ಲವೆ...?

Mallikarjuna.D.G. said...

ನಿಮ್ಮ ಬರವಣಿಗೆ ಚಂದ. ಮೊನ್ನೆ ಸೋಮವಾರ ಶಿವು ಜೊತೆ ಮೇಲುಕೋಟೆಗೆ ಹೋಗುವಾಗ ಸಾಪ್ತಾಹಿಕ ಪ್ರಭ ದಲ್ಲಿ ಪ್ರಕಟವಾಗಿದ್ದ ನಿಮ್ಮ ಕಥೆ ಓದಿ ಇಬ್ಬರೂ ಅದನ್ನೇ ಮಾತನಾಡಿಕೊಂಡೆವು. ಬರೆಯುವ ಖುಷಿ ನಿಮಗಿರಲಿ ಓದುವ ಖುಷಿ ನಮಗಿರಲಿ.