Thursday, October 30, 2008

ನೀನಾಸಂ ನೆಲದಲ್ಲಿ ನೆನಪ ಮೆರವಣಿಗೆ

ಎದುರು ಬದರಾದವರಿಗೆಲ್ಲ ಕೈ ಕುಲುಕಿಯೊ, ಕ್ಷಣ ಅಪ್ಪಿಕೊಂಡೋ ದಾರಿ ಮಾಡಿಕೊಂಡು ಹೊರಟಿತ್ತು ಇರುವೆ ಸಾಲು. ಇಷ್ಟೆಲ್ಲ ಮಾಡಿದ ಮೇಲೆ ಪರಸ್ಪರ ಒಂದು ನಗೆ ಚೆಲ್ಲದೆ ಹೋಗುವವೆ? ಎಂದು ಅಂದಾಜಿಸುತ್ತ ಅವುಗಳ ನಗು (!?) ಹುಡುಕುತ್ತಿರುವಾಗಲೇ ಆ ಮುಳ್ಳು ನನ್ನ ಹಣೆ ತಾಕಿದ್ದು. ವೈಯ್ಯಾರದಿಂದ ನಾಚಿಕೊಂಡಿದ್ದು. ಆ ನಾಚುವಿಕೆಯ ಸಂಭ್ರಮಕ್ಕೆ ಇರುವೆಗಳು ದಾರಿ ಬದಲಾಯಿಸಿದ್ದವು. ಮತ್ತೆ, ಮತ್ತೆ ಮುಟ್ಟಿದೆ. ಪೂರ್ತಿ ಮುನಿಸಿಕೊಂಡೇ ಬಿಡುವುದೇ ನಾಚಿಕೆ ಮುಳ್ಳು?

ಹುಟ್ಟುಗುಣವಲ್ಲವೇ ಅದರದು ಎಂದು ಸುಮ್ಮನಾದವಳಿಗೆ ಸೆಳೆದಿದ್ದು ಮಂಜಮಣಿಮಾಲೆ ಉಯ್ಯಾಲೆ. ಬೆಳ್ಳಿ ತೊಟ್ಟಿಲಲ್ಲಿ ನಕ್ಷತ್ರಗಳ ತೂಗಿದಂತೆ. ಅವುಗಳ ಕೆನ್ನೆ ಮುಟ್ಟಲೋ, ನೆತ್ತಿ ಸವರಲೋ ಎಂದುಕೊಂಡವಳಿಗೆ ಎಂಥದೋ ಪುಳಕ. ಅಳುಕು. ಬಲೆ ನೇಯ್ದ ಒಡೆಯನ ಕಂಡು.

ಯಾಕೋ ಬೇಡವೆನಿಸಿ ಮುಖವೆತ್ತಿದವಳಿಗೆ ಮಂಜಪರದೆ ಮಸುಕು. ಮುಸುಕು. ಲ್ಯಾಂಡ್ ಸ್ಕೇಪ್ ಮೇಲಿನ ಟ್ರೇಸಿಂಗ್ ಪೇಪರ್‍ನಂತೆ ಒಮ್ಮೆ ಅದನ್ನ ಸರಿಸಿದರೆ ಮರಗಳ ನೆತ್ತಿ ಸ್ಪರ್ಶಿಸಿ, ತೋಳುಗಳಲ್ಲೊಮ್ಮೆ ಆ ಎಲ್ಲ ಹಸಿರ ಎಳೆದುಕೊಳ್ಳಬಹುದಲ್ಲವೆ?

ಹೀಗೆ ಯೋಚಿಸುತ್ತಿರುವಾಗಲೇ ಒಣಗಿದ ಎಲೆಸುರುಳಿ ಚಲಿಸುತ್ತಿದ್ದೆಡೆ ಗಮನ ಸೆಳೆದಿದ್ದು. ಅರೆ! ಎನ್ನುತ್ತಿದ್ದಂತೆ ಗೇಣು ದೂರ ಕ್ರಮಿಸುತ್ತಿರುವಂತೆ ಕೀಟವೊಂದು ಸಾರಥಿಯಾಗಿ ಅದರ ಗುಟ್ಟು ರಟ್ಟಾಗಿಸಿದ್ದು. ಏನೇ ಆಗಲಿ ತನ್ನೊಂದಿಗೆ ಜೊತೆಗಿರುವವರನ್ನೂ ಚಲಿಸುವಂತೆ ಮಾಡುವ ಆ ಕೀಟಕ್ಕೆ ಒಂದು ಪುಟ್ಟ ಸೆಲ್ಯೂಟ್‌...? ಕಣ್ಣಿನಿಂದಲೇ ಮನಸ್ಸಿನಲ್ಲಿಯೇ.

ಮತ್ತೆ ನೋಡಿದರೆ ಮಂಜಪರದೆ ಇನ್ನೂ ದಟ್ಟವಾಗೇ ಇತ್ತು. ನಾಟಕದ ದೃಶ್ಯಪರದೆ ಬದಲಿಸಿದಂತೆ ಒಮ್ಮೆ ಎಳೆದುಬಿಡಲೇ? ಆಗ ಅದರ ಹಿಂದಿನ ಜಂಗಲ್ ಸೀನ್ ಪರದೆ ಬದಲಿಸಿದಂತೆ. ಆದರೆ ಅದೆಲ್ಲ ಸಾಧ್ಯವೆ? ಬೇಕೆಂದಾಗ ಪರದೆಗಳನ್ನು ಬದಲಿಸುವಂತಿದ್ದರೆ ಆಹಾ ಬದುಕೆ...! ಆದರೆ ಆಯಾ ದೃಶ್ಯಕ್ಕೆ ಅದದೇ ಪರದೇ. ಎಲ್ಲದಕ್ಕೂ ಅದರದೇ ಆದ ಸಮಯ. ಅರಳುವಿಕೆಗಿದ್ದಂತೆ. ಮಾಗುವಿಕೆಗೂ.

ಹಿಂದಿನಿಂದ ಬಂದ ಮುದ್ದು ಕರುವೊಂದು ತನ್ನ ಮೂಗಹಸಿಯಿಂದ ಮೊಣಕೈ ತಿವಿದಾಗಲೇ ನಾನು ನಿಂತಿದ್ದು ಹೆಗ್ಗೋಡಿನ ನೀನಾಸಂ ನೆಲದಲ್ಲಿ ಎಂಬ ಅರಿವಾಗಿದ್ದು. ಅದುವರೆಗಿನದೆಲ್ಲವೂ ಮನಸ ರಸ್ತೆಮೇಲಿನ ಪ್ರಕೃತಿ ಮೆರವಣಿಗೆ.

ಸಂಜೆಗೆ ಶಂಕರ್‍ ಮೊಕಾಶಿ ಪುಣೇಕರ್‍ ರ 'ನಟನಾರಾಯಣಿ' ನಾಟಕ ತಾನೆ? ಸ್ನೇಹಿತೆಯೊಬ್ಬಳು ಹಲ್ಲುಜ್ಜುತ್ತಾ ಕೇಳಿದಳು. ತುಸು ತಡವಾಗಿಯೇ ನನಗದು ಅರ್ಥವಾಯಿತು, ಅವಳು ಬಾಯಲ್ಲಿ ಟೂತ್‌ಬ್ರಶ್ ಇಟ್ಟುಕೊಂಡೇ ಮಾತನಾಡಿದ್ದರಿಂದ. ನಂತರ ನಾನು ಹೌದೆಂದೆ.

ಚಿಕ್ಕವಳಿದ್ದಾಗ ನೋಡುತ್ತಿದ್ದ ಕಂಪನಿ ನಾಟಕದ ನೆನಪು ಬೆನ್ನುಹತ್ತಿತು. ಹಾಗೆ ಬೆನ್ನು ಹತ್ತಿದ್ದೇ, ಮನಸಿನೊಳಗೆ ನಡೆಯುತ್ತಿದ್ದ ಮೆರವಣಿಗೆಯೊಳಗಿನ ಪಲ್ಲಕ್ಕಿ ನಿಧಾನವಾಗಿ ಹಿಮ್ಮುಖ ಚಲಿಸಲಾರಂಭಿಸಿತು. ಹದಿನೈದಿಪ್ಪತ್ತು ವರ್ಷಗಳ ಹಿಂದಿನದೆಲ್ಲವೂ ದೃಶ್ಯಗಳಂತೆ ಕಾಣಲಾರಂಭಿಸಿದವು.

***
ರಾತ್ರಿ ಹನ್ನೊಂದು ಗಂಟೆ. ಅತ್ತ ಪುಟ್ಟ ತಂಗಿ ಅಮ್ಮನೊಂದಿಗೆ ಮಲುಗುತ್ತಿದ್ದಂತೆ, ಹೊರಗಿನಿಂದ ಬೀಗ ಜಡಿದು ಕಳ್ಳ ಹೆಜ್ಜೆ ಹಾಕುತ್ತ ಅಪ್ಪ ತಮ್ಮ ಹಾಗೂ ನಾನು ಒಟ್ಟಾಗಿ ನಾಟಕ ನೋಡಲು ಹೊರಟುಬಿಡುತ್ತಿದ್ದೆವು. ಇದು ಒಂದೆರಡು ದಿನದ ಮಾತಲ್ಲ. ಬೇಸಿಗೆ ರಜೆ ಪೂರ್ತಿ ಹೀಗೆಯೇ. ತಂಗಿ ನಿದ್ದೆಗೆಡುವಷ್ಟು ದೊಡ್ಡವಳಲ್ಲದ ಕಾರಣ ಅವಳನ್ನು ಹಾಗೆ ಬಿಟ್ಟು ಹೋಗುತ್ತಿದ್ದೆವು. ಅವಳಿಗೋಸ್ಕರ ಅಮ್ಮನನ್ನೂ. ನನಗಾಗ ಏಳೆಂಟಿರಬೇಕು ವಯಸ್ಸು. ತಮ್ಮ ನನಗಿಂತ ಎರಡು ವರ್ಷ ಚಿಕ್ಕವನು. ತಂಗಿ ಅವನಿಗಿಂತ ಮೂರು ವರ್ಷ. ಆಗ ನಾವಿದ್ದ ಊರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮ. ಅಲ್ಲಿ ಪ್ರತಿ ಬೇಸಿಗೆಗೆ ಸಂಗಮೇಶ್ವರ ನಾಟ್ಯ ಸಂಘ ಊರ ಹೊರಗಿನ ಅಗಸಿ ಬಾಗಿಲಿನತ್ತ ಟೆಂಟು ಹಾಕುತ್ತಿತ್ತು.

ಬೆಳಗಿನ ಐದಕ್ಕೆ ನಾಟಕ ಮುಗಿಯುತ್ತಿದ್ದಂತೆ, ಬೇಗ ಮನೆಗೆ ಹೋಗಿ ತಂಗಿ ಪಕ್ಕದಲ್ಲೇ ಮಲಗಿ ಬಿಡುತ್ತಿದ್ದೆವು, ಇಡೀ ರಾತ್ರಿ ಅವಳೊಂದಿಗೇ ಮಲಗಿದ್ದೆವು ಎಂದು ಪ್ರತಿಪಾದಿಸಲು. ಪ್ರತೀ ಬೇಸಿಗೆಯಲ್ಲೂ ಇದೇ ಆಟ ನಾಟಕ ನೋಡಲು. ಆದರೆ ಒಮ್ಮೊಮ್ಮೆ ಅವಳಿಗಿದು ಗೊತ್ತಾಗಿ ರಾದ್ಧಾಂತ ಮಾಡುತ್ತಿದ್ದಳು. ನಾಟಕ ಎಂದರೇನಂತ ಅವಳಿಗೆ ಗೊತ್ತಾಗದಿದ್ದರೂ ಆಗಾಗ ನಾವೆಲ್ಲ ಅವಳನ್ನು ಹೀಗೆ ಬಿಟ್ಟು ಹೋಗುತ್ತಿರುತ್ತೇವೆ ಎಂಬುದು ಗೊತ್ತಾಗುತ್ತಿತ್ತು. ಅವಳ ಹಟ ಜಾಸ್ತಿಯಾದಾಗಲೊಮ್ಮೆ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದೆವಾದರೂ ನಡುರಾತ್ರಿಯಲ್ಲೇ ನಿದ್ದೆ ಹೋಗಿ ಅಮ್ಮನ ಕಾಲು ಜೋಮು ಹಿಡಿಸಿಬಿಡುತ್ತಿದ್ದಳು.

ಇನ್ನು ತಮ್ಮ. ಪುಸ್ತಕ ಹಿಡಿದ ಐದು ನಿಮಿಶಕ್ಕೇ ನಿದ್ದೆಗಿಳಿಯುತ್ತಿದ್ದವನು ರಾತ್ರಿಯಿಡೀ ಅದ್ಹೇಗೆ ನಾಟಕ ನೋಡುತ್ತಿದ್ದನೋ ಆ ಸಂಗಮೇಶ್ವರನೇ ಬಲ್ಲ. ಹಿನ್ನೆಲೆ ವಾದ್ಯವೃಂದದವರ ಹಿಂದೆಯೇ, ಅಂದರೆ ಮುಂದಿನ ಸಾಲಿನಲ್ಲಿಯೇ ಕುಳಿತುಕೊಳ್ಳುತ್ತಿದ್ದ. ಪಿಳಿ ಪಿಳಿ ಕಣ್ಣು ಬಿಡುತ್ತ, ನಾಟಕದ ಸನ್ನಿವೇಶಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಿದ್ದ. ಆಗ ಅವನ ಮುಖ ನೋಡುವುದೇ ಒಂದು ಚೆಂದ. ಫೈಟಿಂಗ್ ಸೀನ್ ಬಂದರೆ ಅವನ ಕೈಗಳೆರಡೂ ತಯಾರಾಗಿಯೇ ನಿಂತಿರುತ್ತಿದ್ದವು. ಕಾಮಿಡಿ ಸೀನ್ ಬಂದರಂತೂ ಪಕ್ಕದವರು ನಾಟಕ ಬಿಟ್ಟು ಅವನನ್ನೇ ನೋಡುತ್ತಿದ್ದರು ಒಮ್ಮೊಮ್ಮೆ. ಹಾಗೆ ನಗುತ್ತಿದ್ದ. ಕುಳಿತು ನಗಲಾಗದೇ ನಿಂತೂ ನಕ್ಕು ಚಪ್ಪಾಳೆ ತಟ್ಟುತ್ತಿದ್ದ. ಮೊದಲೇ ದೊಡ್ಡ ಹಲ್ಲುಗಳು. ಒಂದೆರಡು ಎಕ್ಸ್‌ಟ್ರಾ ಬೇರೆ. ಆದರೂ ಚೆಂದದ ಕಣ್ಣುಗಳಿಂದ, ಮಾಡುವ ತಂಟೆಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದ.

ಇನ್ನು ನಾನೋ... ಕೆಲವೊಮ್ಮೆ ನಾಟಕ ಬೋರಾದರೆ ಪ್ರೇಕ್ಷಕರನ್ನು ನೋಡುತ್ತ ಕುಳಿತುಬಿಡುತ್ತಿದ್ದೆ : ಸ್ವೆಟರ್‍ ಶಾಲು ಹೊದ್ದು ಕುರ್ಚಿ ಮೇಲೆ ಕುಳಿತವರಿಂದ ಹಿಡಿದು, ಕೌದಿ, ಚಾದರ್‍ನಲ್ಲಿ ಕಣ್ಣೆರಡೇ ಬಿಟ್ಟು ನೆಲದ ಮೇಲೆ ನಿದ್ದೆ ಹೋದವರವರೆಗೂ. ಶೇಂಗಾ ತಿಂದು ಇನ್ನೊಬ್ಬರ ಚಾಪೆಯಡಿ ಸಿಪ್ಪೆ ಸರಿಸುವುವವರನ್ನೂ, ತೂಕಡಿಸಿ ತಳ್ಳಿಸಿಕೊಳ್ಳುವವರನ್ನೂ, ಮಗುವಿನ ಸಿಂಬಳ ತೆಗೆದು ಪಕ್ಕದ ಸೆರಗಿಗೆ ಒರೆಸುವವರನ್ನೂ, ಅದು ಹೊಯ್ದ ಉಚ್ಚೆಗೆ ಮಣ್ಣು ಸುರಿಯುವುದನ್ನೂ... ಹೀಗೆ ನಾಟಕದ ಹೊರತಾಗಿ ನೋಡುವ ಖಯಾಲಿ ನನಗಾಗ ಇತ್ತು.

ತಮ್ಮನಿಗೋ ಅವನಿಗಿಷ್ಟವಾದ ಪಾತ್ರಗಳನ್ನು ಅನುಕರಿಸುವುದೆಂದರೆ ದಿನ ದಿನ ಹಬ್ಬ. ವಿಶೇಷವಾಗಿ ಪೌರಾಣಿಕ ಪಾತ್ರಗಳ ಟಿಪಿಕಲ್ ನಗು, ಆರ್ಭಟ ಇನ್ನೂ ಏನೆಲ್ಲ. ಪಾಪ ತಂಗಿ ಬಿಟ್ಟ ಕಣ್ಣು ಬಿಟ್ಟು ನೋಡುತ್ತ ಕುಳಿತುಕೊಳ್ಳುತ್ತಿದ್ದಳು. ಒಮ್ಮೆ ಹೀಗೆ. 'ನಾನು ಭೀಮ' ಎಂದು ಬಲಗೈ ತೋಳು ತೋರಿಸಿದ್ದ ತಮ್ಮ. ಏನೋ ಚಿತ್ರ ಬರೆಯುತ್ತ ಕುಳಿತ ತಂಗಿ, ಓಡಿ ಹೋಗಿ ಮಂಚದ ಮೇಲೆ ಹತ್ತಿ, ಗಲ್ಲ ಉಬ್ಬಿಸಿ, ಕಣ್ಣು ದೊಡ್ಡದು ಮಾಡಿ 'ನಾನು ಭೀಮಿ' ಎಂದು ಕೂಗಿದ್ದಳು. ನಮ್ಮಿಂದ ಚಪ್ಪಾಳೆ, ಹೊಗಳಿಕೆ ಮಾತು ನಿರೀಕ್ಷಿಸಿದ್ದ ಆಕೆಗೆ ನಮ್ಮ ನಗುವಿನಿಂದ ಕೋಪ ಉಕ್ಕಿಬಂದಿತ್ತು. ಜೊತೆಗೆ ಮಹಾ ಅವಮಾನವಾದಂತಾಗಿತ್ತೇನೋ. ಕಣ್ಣಲ್ಲಿ ನೀರಿಳಿಸಿಕೊಂಡು ನಿಜವಾಗಲೂ ಕೆನ್ನೆ ಊದಿಸಿಕೊಂಡು ಅಮ್ಮನ ಸೆರಗು ಹಿಡಿದುಕೊಂಡಿದ್ದಳು.

ಪಾಪ ಇಷ್ಟೆಲ್ಲ ಆದರೂ ರಾತ್ರಿ ಅವಳನ್ನು ಬಿಟ್ಟು ನಾಟಕಕ್ಕೆ ಹೋಗುವ ಗುಟ್ಟು ಮಾತ್ರ ಅವಳಿಗೆ ಗೊತ್ತೇ ಆಗಿರಲಿಲ್ಲ. ಎಷ್ಟೋ ವರ್ಷಗಳವರೆಗೆ. ಆದರೆ ಈಗಲೂ ಅವಳಿಗೆ ನೆನಪಿದೆ ಮತ್ತು ಹೇಳುತ್ತಿರುತ್ತಾಳೆ, 'ನಾನು ಚಿಕ್ಕವಳೆಂದು ನೀವು ಆಗಾಗ ಹೀಗೆ ಮಾಡುತ್ತಿದ್ದಿರಿ. ಎಲ್ಲ ಕಡೆಗೂ ನನ್ನ ಬಿಟ್ಟುಹೋಗುತ್ತಿದ್ದಿರಿ. ನಿಮಗಿಂತ ಮೊದಲೇ ಹುಟ್ಟಿದರೆ ಚೆಂದವಿತ್ತು' ಅಂತ. ಆದರೆ ನಾನು ಅಂದುಕೊಳ್ಳುತ್ತಿರುತ್ತೇನೆ, ಅವಳ ಹಾಗೆ ಕಡೆಹುಟ್ಟಾಗಿರಬೇಕಿತ್ತು ಅಂತ... ಯಾಕಂತ ಗೊತ್ತಿಲ್ಲ.

***
ನಾಟಕ ಮುಗಿದಾಗ ರಾತ್ರಿ ಹತ್ತು ಗಂಟೆ. 'ನಟನಾರಾಯಣಿ' ನಾಟಕದ ಪಾತ್ರಧಾರಿ ನಾಣಿ ಹಾಡಿದ ಚೀಜ್ ಮನಸು ಸುತ್ತುತ್ತಿತ್ತು. ಅಬ್ದುಲ್ ಕರೀಂಖಾನ್‌ರ ಗಾಯನವನ್ನು ಕೇವಲ ಗ್ರಾಮೊಫೋನ್ ಮೂಲಕ ಕೇಳಿಯೇ ತಾನು ಕಲಿತಿದ್ದು ಎಂದು ನಾಣಿ ಹೇಳಿದ್ದು ಮತ್ತೆ ಮತ್ತೆ ಕೇಳಿಸುತ್ತಿತ್ತು. ಇದೆಲ್ಲ ನಡೆದದ್ದು ನಾಟಕದಲ್ಲಾದರೂ, ಪಾತ್ರಧಾರಿ ಆ ಡೈಲಾಗ್ ಒಪ್ಪಿಸಿದನಾದರೂ ನನ್ನ ಖುಷಿ ಅಸಲಿಯದಾಗಿತ್ತು. ಬಣ್ಣದಲಿ ಬಯಲಾದ ಕೆ. ವಿ. ಸುಬ್ಬಣ್ಣ ಹಣೆ ಮೇಲೆ ಗೆರೆ ತಂದುಕೊಂಡು ಗೋಡೆ ಮೇಲೆ ಗಂಭೀರರಾಗಿದ್ದರು. ತೆರೆದ ಕಣ್ಣಿನಿಂದ ಹಾಗೇ ನೋಡುತ್ತಲೇ ಇದ್ದರು. ಆದರೆ ಅವರ ನೋಟ ಯಾರಿಗೂ ನಿಲುಕುವಂತಿರಲಿಲ್ಲ. ಒಂದು ರೀತಿ ಶೂನ್ಯ. ಆ ಶೂನ್ಯದೊಳಗೆಂಥದೋ ಅಪೂರ್ವ ಸೆಳೆತ. ಆ ಸೆಳೆತದೊಳಗೆಂಥದೋ ದಿವ್ಯ ಅನುಭವ.

see also
http://www.kendasampige.com/article.php?id=1497

2 comments:

shivu K said...

ಮೇಡಮ್,
ನೀವು ನಾಟಕ ನೋಡೊದ್ ಬಿಟ್ಟು ಬೇರೆಯವರ ಕಡೆ ಗಮನ ಹರಿಸುವ [ಕೆಟ್ಟ]ಬುದ್ಧಿ ಬಂದಿದ್ದರಿಂದಲೇ ಈಗ ನಿಮಗೆ ಹೀಗೆಲ್ಲಾ ಬರೆಯಲು ಸಾಧ್ಯವಾಗಿರೋದು !

ಆಹಾಂ! ಮೊನ್ನೆ ಬಾನುವಾರ ಕನ್ನಡಪ್ರಭದಲ್ಲಿ ಬಂದಿದ್ದ ನಿಮ್ಮ ಕತೆಯೊಂದನ್ನು ಓದಿದೆ. ಸಂಗೀತದ ಕಥಾ ವಸ್ತುವಿನ ಬಗ್ಗೆ ಬರೆದ ಕಥೆ ಚೆನ್ನಾಗಿದೆ. ಬರವಣಿಗೆಯ ಶೈಲಿ ಇಷ್ಟವಾಯಿತು.

ಹಳ್ಳಿಕನ್ನಡ said...

ನಿನಾಸಂ ಎಷ್ಟೇ ಬೇಜಾರು ತರಿಸಿದ್ದರೂ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ ಅಲ್ವೆ. ಅಂದಹಾಗೆ ಆಫೀಸ್ ಕಡೆ ಬರಲಿಲ್ಲ?
- ಮಂಜುನಾಥಸ್ವಾಮಿ