Wednesday, October 22, 2008

ಅಚ್ಚಾಗದ ಹೆಜ್ಜೆಗಳು

ಬೆರಳಲ್ಲಿ ಬೆರಳ ಬೆಸೆದು

ಫುಟ್‌ಪಾತಿನ ಬಾರ್ಡರ್‍ ಟ್ರೀಗುಂಟ

ಹೆಜ್ಜೆ ಹಾಕುವುದೆಂದರೆ

ಅವನಿಗಿಷ್ಟ.

ಹೊಂಬಣ್ಣಕ್ಕೆ ಕಣ್ಣರಳಿಸಿ,

ಹಸಿರ ಕುಡಿ ಸವರಿ,

ಇಬ್ಬನಿಗೆ ತುದಿಬೆರಳ

ತಾಕಿಸುವುದರಲ್ಲೇ

ಅವನಿಗೆ ಎಳೆಎಳೆ ಖುಷಿ.

ಹತ್ತೂ ಕಣ್ ಸೆಳೆವಂತೆ

ನಗೆ ಬೀರುವ ಚೆಲುವ.

ಕಾಣದ ದೇವರಿಗೆ ಕೈಮುಗಿದು,

ಎದುರುಬದರಾಗುವ

ಬಾಗಿದ ಕಾಯಗಳಿಗೆ ಬಾಗುತ್ತ,

ಕಣ್ಣೆ ಮುಚ್ಚೆ ಕಾಡೆಗೂಡೆಯ

ಎಳೆಕೆನ್ನೆಗಳ ಚಿವುಟುತ್ತ

ಹಂಚಿ, ಪಡೆಯುವುದೇ ಪ್ರೀತಿ-

ಅದು ಅವನ ಬದುಕ ರೀತಿ.



ಇವಳಿಗೋ ಹಗ್ಗದ ಮೇಲೆ

ನಡೆವ ಹಂಬಲ.

ಒಮ್ಮೆ ಕಿತ್ತ ಅವಳ ಕಾಲಿಗೆ

ಗಮ್ಯದತ್ತಲೇ ಚಿತ್ತ.

ಹೆಜ್ಜೆ

ತಪ್ಪಿದರೂ ಬೇಡ ಆಸರೆ,

ಗೊತ್ತಿದೆ ಕಾರಣ ಅವಳಿಗೆ-

ಆ ಕರಗಳಿಗೆ ನಿಲುಕಲಾರವು

ಈ ಭುಜಗಳು ಎಂದು,

ಎಂದೂ....



ನಕ್ಷತ್ರಗಳಿವೆ ನಗಲು.

ಹೆಜ್ಜೆ

ತಪ್ಪಿದರೆ ಇದ್ದೇ ಇದ್ದಾಳೆ ಇಳೆಯೆಂಬ ಗೆಳತಿ.

ಬೇಡ ಅವಳ ಮಡಿಲು.

ಸಾಕು ಅವಳ ಹೃದಯ.

ಮಡಿಲೊಳಗೆ ಮುಖವಿಡುವುದಕ್ಕಿಂತ

ಅವಳೆದೆ ಕನ್ನಡಿಯೊಳಗೆ ಕಾಣುವ ತಾನು.

ಅದಕ್ಕೆ ಅವಳು ಹೇಳುತ್ತಾಳೆ ಮತ್ತೆ ಮತ್ತೆ

ಅಚ್ಚಾಗುವ

ಅವನ ಸಾವಿರ ಹೆಜ್ಜೆಗಳಿಗಿಂತ

ಅಚ್ಚಾಗದ

ಹಗ್ಗದ ಮೇಲಿನ ತನ್ನ ಹೆಜ್ಜೆಗಳೇ ಹೆಚ್ಚೆಂದು.

ಎಂದೆಂದೂ...

11 comments:

ತೇಜಸ್ವಿನಿ ಹೆಗಡೆ- said...

"ಅಚ್ಚಾಗುವ ಅವನ ಸಾವಿರ ಹೆಜ್ಜೆಗಳಿಗಿಂತ

ಅಚ್ಚಾಗದ ಹಗ್ಗದ ಮೇಲಿನ ತನ್ನ ಹೆಜ್ಜೆಗಳೇ ಹೆಚ್ಚೆಂದು. "

Simply Superb!

ಸಿಂಧು Sindhu said...

ಆಲಾಪಿನೀ..

ಎಷ್ಟು ಸೊಗಸಾದ ಸೊಲ್ಲುಗಳಿವೆ..
ಇಳೆಯೆಂಬ ಗೆಳತಿ ಮತ್ತು ಅಚ್ಚಾಗದ ಹಗ್ಗದ ಮೇಲಿನ ಹೆಜ್ಜೆಗಳ ರೂಪಕ ಮತ್ತೆ ಮತ್ತೆ ಅನುರಣಿಸುತ್ತಲೇ ಇರುವಂತೆ ಬರೆದಿದ್ದೀರಿ.

ಇಷ್ಟವಾಯಿತು
ಪ್ರೀತಿಯಿಂದ
ಸಿಂಧು

shreedevi kalasad said...

thanks thejaswini and sindhu

kenecoffee said...

ನಕ್ಷತ್ರಗಳಿವೆ ನಗಲು.
ಹೆಜ್ಜೆ
ತಪ್ಪಿದರೆ ಇದ್ದೇ ಇದ್ದಾಳೆ ಇಳೆಯೆಂಬ ಗೆಳತಿ.....

ಅವನ ಸಾವಿರ ಹೆಜ್ಜೆಗಳಿಗಿಂತ
ಅಚ್ಚಾಗದ
ಹಗ್ಗದ ಮೇಲಿನ ತನ್ನ ಹೆಜ್ಜೆಗಳೇ ಹೆಚ್ಚೆಂದು....

ಆಹ್ ! superb!
ಸೊಗಸಾದ ಸಾಲುಗಳು. ತುಂಬ ಇಷ್ಟವಾಯ್ತು.

ಕುಮಾರ ರೈತ said...

ಅಚ್ಚಾಗದ ಹೆಜ್ಜೆಗಳು,ಕಿರುಗವನವೆನ್ನಲು ಅಡ್ಡಿಯಿಲ್ಲದ ತುಕಡಾ-3,ತುಕಡಾ,ಮತ್ತೊಂದು ತುಕಡಾ ರಚನೆಗಳಲ್ಲಿ ವಿಷಾದವೇ
ಸ್ಥಾಯಿಭಾವ.ಆದ್ದರಿಂದಲೇ ಇಲ್ಲಿಯ ಕೆಲವು ಸಾಲುಗಳು ಮನಕಲಕುತ್ತವೆ.
ಅಚ್ಚಾಗದ ಹೆಜ್ಜೆಗಳು;
ಬೇಡ ಅವಳ ಮಡಿಲು
ಸಾಕು ಅವಳ ಹೃದಯ

ತುಕಡಾ-3;
ಸುಟ್ಟು ಕೊಂಡರೂ ಮೈ
ದೀಪ ನಗಿಸುವ ಕಾಯಕ

ತುಕಡಾ;
ಹೊರಗು ಅಳು
ಒಳಗೂ ಅಳು,ಎಲ್ಲದಕ್ಕೂ ಅಳು ಅಳು

ಮತ್ತೊಂದು ತುಕಡಾ;
ಹೇಳಿದ್ದು ಹಗಲೇ
ಹೊಕ್ಕಿದೆ,ಕೇಳಿದ್ದು ಕತ್ತಲೆ
ಈ ಎಲ್ಲ ರಚನೆಗಳಲಿಯೂ ಲಯದ ಬಂಧವಿದೆ.
ರೂಪಕಗಳು ಭಾರವೆನ್ನಿಸಿಲ್ಲ.ಆದರೆ ತುಕಡಾ 1,2
ತಮ್ಮ ಭಾವವನ್ನು ಧ್ವನಿಸಲು ಸೋಲುತ್ತವೆ

shivu K said...

ಶ್ರೀದೇವಿ ಮೇಡಮ್,
ಅಚ್ಚಾಗದ ಹಗ್ಗದ ಮೇಲಿನ ತನ್ನ ಹೆಜ್ಜೆಗಳೇ ಹೆಚ್ಚೆಂದು! ಎಷ್ಟು ಚೆನ್ನಾಗಿ ಬರೆಯುತ್ತೀರಿ ನೀವು.!
ಶಿವು.ಕೆ

Jagali bhaagavata ಜಗಲಿ ಭಾಗವತ said...

ಶ್ರೀದೇವಿಯವರೇ,

ಈ ಹೆಜ್ಜೆಗಳು ಅಚ್ಚಾಗದಿದ್ದರೆ ಕಷ್ಟ ಅಲ್ವಾ? ’ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಿರಿ’ ಅಂತೆಲ್ಲ ಹೇಳ್ತಾರಲ್ಲ, ಆಗ ಈ ಹೆಜ್ಜೆಗಳು ಅಚ್ಚಾಗದಿದ್ರೆ ಹೇಗೆ ಅನುಸರಿಸೋದು? :-)

sunaath said...

ಶ್ರೀದೇವಿ,
ಭಾಗವತರ ಮಾತನ್ನು seriousಆಗಿ ತೆಗೆದುಕೊಳ್ಳಬೇಡ.
ಆತ ಎಲ್ಲರದೂ ಹೆಜ್ಜೆ ತಪ್ಪಿಸುತ್ತಾನೆ.
-ಕಾಕಾ

shreedevi kalasad said...

ಯಾರದೋ ಬ್ಲಾಗ್‌ನಲ್ಲಿ ಓದಿದ ನೆನಪು. ಕಾಲೆಳೆಯುವ ಭಾಗವತರು ಅಂತ. ಭಾಗವತರೆ, ನೀವು ಎಳೆಯುವತನಕ ನಾವೇನು ಕಣ್ಣುಮುಚ್ಚಿಕೊಂಡಿರುತ್ತೇವೆಯೇ? ಸುನಾಥ್ ಅಂಕಲ್ ಥ್ಯಾಂಕ್ಸ್‌...

Jagali bhaagavata ಜಗಲಿ ಭಾಗವತ said...

ಕಾಕಾ ನಿಮ್ಮ ಹೆಜ್ಜೆ ತಪ್ಪಿಸುತ್ತಿದ್ದಾರೆ. ನನ್ನ ಮಾತು ನಂಬಿ ಅಕ್ಕೋರೆ. ಸತ್ಯವನ್ನಲ್ಲದೆ ಬೇರೇನನ್ನೂ ನಾನು ನುಡಿವುದಿಲ್ಲ.

ಮನಸ್ವಿ said...

ಸುಂದರ ಸಾಲುಗಳು.. ಮನಸಿನೊಳಗೆ ಅಚ್ಚಾಯಿತು :-)