Wednesday, November 26, 2008

ಜನವರಿಗೆ ಮುನ್ನ...

ಈಗೀಗ ನೀ ಹೀಗೆ.

ಊರಿಗೆಲ್ಲ ಕಂಬಳಿ ಹೊದೆಸಿ ಬೇಗ,

ಮರೆಯಲ್ಲೇ ಮೆರೆಯುತ್ತಿ

ತೊಟ್ಟು ಬಿಳಿ ಶರಾಯಿ-ಕೋಟು


ಕಿರುಗೂಸಿನಿಂದ್ಹಿಡಿದು

ನರೆ ಮರೆತು ಹರೆಯ

'ಸಂ‌'ಭ್ರಮಿಸುವವರೆಲ್ಲರಿಗೂ

ಕಣ್ಣ ಮಿಟುಕಿಸುತ್ತೀ, ನಾನಿಲ್ಲವೇ ಎಂದು...

ನಡೆದದ್ದೇ ದಾರಿ, ನೋಡಿದ್ದೇ ನೋಟ.

ಬೀಗುತ್ತಿ ಹೂಡಿದ್ದೇ ಆಟವೆಂದು.


ಎದೆ ಕೊಡುವುದಿಲ್ಲ,

ಚಾಚುವುದಿಲ್ಲ ತೋಳು

ಮುಂದಲೆ ಸವರಿ ಸೂಸುವುದಿಲ್ಲ ಮಮತೆ,

ಮಾತಂತೂ ಮೊದಲೇ ಇಲ್ಲ.

ಮುತ್ತೆಂದರೇ...?! ಎನ್ನುವ ನಿನಗೆ

ಉಸಿರ ಕಚಗುಳಿಯ ಧ್ಯಾನವೇಕೋ?

ನಿಲ್ಲು ಒಮ್ಮೆ, ಹೇಳಿ ಹೋಗು ಉತ್ತರ.


ಅಳುಕೆ? ಅಂಜಿಕೆಯೇ?

ಹೊದೆಸಿದ ಕಂಬಳಿ ಕಪ್ಪೆಂದು

ಅವರು ಕನಲುತ್ತಿಲ್ಲ ಬಿಡು.

ಬದಲಿಸಿದಾಗಲೆಲ್ಲ ಮಗ್ಗಲು,

ಹೊಸ ಬಣ್ಣ ತೊಟ್ಟು

ಸುಖಿಸಿ, ಸಂಭ್ರಮಿಸುತ್ತಿದ್ದಾರೆ

ನೀ ಹಾಕಿದ ಕನಸ ಚಪ್ಪರದಡಿಯೇ.

ಇನ್ನು ನಿನ್ನ ಬಿಳಿ ಶರಾಯಿ-ಕೋಟಿಗ್ಯಾವ ಆಸೆ?

ಗೊತ್ತಿದೆ ಅವರಿಗೂ ನೇಯುವ ಕನಸಿಗೆ

ಕಡುಕತ್ತಲೆಯೇ ಬೇಕೆಂದು.


ಅದಕ್ಕೇ,

ನನ್ನದೊಂದು ವಿನಂತಿ.

ಇನ್ನೊಂದು ತಿಂಗಳು,

ಹರಿಯುತ್ತದೆ ಮತ್ತೊಂದು ಹೊಸ ಬೆಳಗು

ಅದರ ತೆಕ್ಕೆಯೊಳಗೆ ಅವರೆಲ್ಲ.

ಕಾವಿಟ್ಟ ಅವರ ಕನಸುಗಳ

ಬಣ್ಣ ಕದಡದಂತೆ

ಮತ್ತೆ ಮತ್ತೆ ಹೊದೆಸುವೆಯಾ ನನಸಗಂಬಳಿ?

ಸರಿಸಿ ಕತ್ತಲೆ ಕಂಬಳಿ!


ಚಿತ್ರ : ಅರವಿಂದ್

Sunday, November 23, 2008

ಜೋಶಿ ಬುವಾ, ನಿಮ್ಮನ್ನು ಭೇಟಿಯಾಗುವ, ಕಛೇರಿ ಸಂಗೀತ ಕೇಳುವ ಭಾಗ್ಯ ನನಗ್ಯಾಕೆ ಬರಲಿಲ್ಲ?
ನಿಜ ಪಂಡಿತ್‌ಜಿ, ನೀವು ನಂಬಿದ ನಾದದೇವತೆಯೇ ಇಷ್ಟು ದೂರ ಕೈಹಿಡಿದು ನಡೆಸಿದ್ದು. ಹಂಗಿಲ್ಲದೆ ಹರಿವ ನೀರಿನಂತೆ ನಾದಜಗತ್ತು. ನಿಂತ ನೆಲದಲ್ಲೇ ನೆಲೆ ಅರಸುವುದಕ್ಕಿಂತ ಬೇಕಾದ್ದನ್ನು ದಕ್ಕಿಸಿಕೊಳ್ಳುತ್ತ ಸಾಗಿದಾಗ ಅದೊಂದು ಅದ್ಭುತ ರಸಯಾನ. ಅನಿವಾರ್ಯ ಮರೆಸಿ, ಅನುಭೂತಿ ನೀಡುವುದರಿಂದಲೇ ಅದು ಸೀಮಾತೀತ. ಇಂಥ ನಾದಪಯಣದಲ್ಲಿ ನೀವಿಂದು ಬಹುದೂರ ಕ್ರಮಿಸಿದ್ದೀರಿ.

ಆಡುವ ವಯಸ್ಸಿನಲ್ಲಿ ಓಡುವ ಮನಸ್ಸು ಮಾಡಿದಿರಿ. ಗೋಲಿ ಹಿಡಿಯುವ ಬೆರಳುಗಳಿಗೆ ತಂತಿ ಗುಂಗು ಹಿಡಿಸಿದಿರಿ. ಹಡೆದವರ ಹಂಗಿನಲ್ಲಿರದೇ, ನಾದದ ಬೆನ್ನು ಹತ್ತಿದಿರಿ. ತುತ್ತು ಅನ್ನಕ್ಕೂ ಹಂಬಲಿಸಿದಾಗ ನೀವು ನಂಬಿದ ನಾದದೇವತೆ ಕೈಬಿಡಲಿಲ್ಲ. ಗುರುವಿನ ಗುಲಾಮನಾಗಿ ಅವಳನ್ನು ಒಲಿಸಿಕೊಂಡಿರಿ. ಅವಳು ಕಳಿಸಿದತ್ತ, ಕರೆಸಿಕೊಂಡತ್ತ ಪಯಣ ಬೆಳೆಸಿದಿರಿ. ಒಂದೊಂದು ಪಯಣವೂ ಯಶಸ್ಸಿನ ಮೈಲಿಗಲ್ಲೇ...

ಹಾಂ. ಪಯಣವೆಂದರೆ ನೆನಪಾಗುವುದು ನಿಮ್ಮ ಕಾರು ಓಡಿಸುವ ರೀತಿ-ಪ್ರೀತಿ. ತಂಬೂರಿ-ತಬಲಗಳೊಂದಿಗೆ ನಿಮ್ಮ ಸಾಥಿದಾರರನ್ನೆಲ್ಲ ಕರೆದುಕೊಂಡು, ಕಲ್ಲು, ಮಣ್ಣು, ತಗ್ಗು-ದಿನ್ನೆಯಲ್ಲೂ ವೇಗವಾದರೂ ಹದವಾಗಿಯೇ ಕಾರು ಓಡಿಸುತ್ತಿದ್ದಿರಿ. ನಿಮ್ಮ ಈ ಪರಿಯ ಕಾರ್‍ಪ್ರೀತಿ ಜೊತೆಗಿರುವ ಅವರಿಗೆಲ್ಲ ಕಿರಿಕಿರಿಯಾಗದಂತೆ ನಿಗಾವಹಿಸುವ ಜಾಣ್ಮೆಯೂ ನಿಮಗಿತ್ತು. ಒಮ್ಮೆ ನೆನಪಿಸಿಕೊಳ್ಳಿ? ಈ ಇಳಿವಯಸ್ಸಿನಲ್ಲೂ ತುಂಟ ನಗೆಯೊಂದು ಚಿಮ್ಮಬಹುದೇನೊ...

ಒಂದೇ ದಿನದಲ್ಲಿ ಪುಣೆಯಿಂದ ಬೆಳಗಾವಿ ಅಥವಾ ಬೆಳಗಾವಿಯಿಂದ ಬೆಂಗಳೂರಿಗೆ ಕ್ರಮಿಸುತ್ತಿದ್ದ ವೇಗದ ರೀತಿಯೇ, ಬಹುಬೇಗ ಜಮ್ಮೂ, ಜಲಂಧರ್‍, ಗುವಾಹಟಿ, ದಿಲ್ಲಿವರೆಗೆ ನಿಮ್ಮ ರಸಯಾತ್ರೆ ಸಾಗುವಂತಾಯಿತೇನೋ... ಈ ಗಡಿ ದಾಟಿದ ಕೀರ್ತಿಗೆ, ಖ್ಯಾತಿಗೆ ನಿಮ್ಮೊಳಗಿನ ಡ್ರೈವರ್‍ನ್ನು ಕುಳಿತಲ್ಲೇ ಕಣ್ಮುಂದೆ ತಂದುಕೊಳ್ಳುತ್ತಿರಬಹುದಲ್ಲವೆ ಈಗ?

ಗುರೂಜಿ, ಸಂಗೀತ : ಕೊನೆಯಿಲ್ಲದ ಪಯಣ. ನಮ್ಮ ನಂತರವೂ ಆ ಪರಂಪರೆ ಉಳಿಯುತ್ತದೆ, ಉಳಿದು ಬೆಳೆಯುತ್ತದೆ ಎಂಬಂತಾದರೆ ಅದು ಪಯಣದ ಸಾರ್ಥಕ್ಯ. ನಿಷ್ಕಾಮ ಕರ್ಮ. ಆದರೆ ಜೀವನ? ಕಾರು ಪ್ರಯಾಣದಂತೆ. ಎಷ್ಟೇ ವೇಗ ಚಲಿಸಿದರೂ, ಏನೇ ಅಡೆ-ತಡೆಗಳಾದರೂ ಅದರ ಮಿತಿಗೆ ನಾವು ಶರಣಾಗಲೇಬೇಕು. ಎಷ್ಟೇ ದೂರ ಕ್ರಮಿಸಿದರೂ ಮರಳಿ ಮನೆಗೆ ಬಂದಾಗ ಸಿಗುವ ತಂಪೇ ತಂಪಲ್ಲವೇ! ಆದರೆ ಈ ಮನೆತಂಪಿನಿಂದ ನೀವು ಈವತ್ತಿಗೂ ದೂರವೇ ಉಳಿದುಬಿಟ್ಟಿದ್ದೀರಿ.

ಕಾರಣಗಳಿಲ್ಲವಂತಲ್ಲ. ಅಂದಿನಿಂದ ಇಂದಿನವರೆಗೂ ನಮ್ಮ ಮನೆಯ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ನಮ್ಮವರಲ್ಲಿ ಏನೋ ಹಿಂಜರಿಕೆ. ನಿರ್ಲಕ್ಷ್ಯ. ನೆರೆಮನೆಯವರ ಶಿಫಾರಸ್ಸಿನ ನಂತರವಷ್ಟೇ ದಡಬಡಿಸಿ ಅಪ್ಪಿಕೊಳ್ಳುವ ಅಪ್ಯಾಯಮಾನತೆ! ಇಲ್ಲವೆ ಇದನ್ನೇ ಅವಾಂತರ ಮಾಡಿಬಿಡುವುದು. ಇದೇನೇ ಇದ್ದರೂ, ಒಂದು ಹಂತದಲ್ಲಿ ಬೆಳೆದು ನಿಂತಾಗ ಅಂದರೆ, ಸಾಂಸ್ಕೃತಿಕ ರಾಯಭಾರಿಯೆನಿಸಿಕೊಂಡಾಗ ಕಲಾವಿದನಿಗೆ ಇವೆಲ್ಲ ನಗಣ್ಯ. ತನ್ನ ನೆಲದ ಕಂಪಿಗೆ ಕಣ್ಣರಳಿಸಿದಲ್ಲಿ, ಹಂಬಲಿಸಿದಲ್ಲಿ, ಮತ್ತಷ್ಟು ಮೇರುವ್ಯಕ್ತಿತ್ವ ಅವನದಾಗಬಹುದಲ್ಲವೆ?

ಜೀವನವೇ ಸಂಗೀತ. ಸಂಗೀತವೇ ಜೀವನವೆಂದುಕೊಂಡು ಬಹುದೂರ ಸಾಗಿದ್ದೀರಿ. ಕಲಾಧ್ಯಾನದ ಮೂಲಕವೇ ಸಂಗೀತದೊಂದಿಗೆ ತಾದಾತ್ಮ್ಯ ಸಾಧಿಸುವ ಸ್ವರಸಂತ. ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲೇ ಹದವರಿತ ರಸಾನುಭೂತಿ ಒದಗಿಸುವ ಪ್ರಯೋಗಶೀಲ ಮನಸ್ಸುಳ್ಳವರು. ನಿಮ್ಮ ವಿಶಿಷ್ಟ ಧ್ವನಿಸಂಸ್ಕಾರವೇ ಜನಪ್ರಿಯತೆ, ಸಭಾರಂಜನೆಯ ಪ್ರಮುಖ ನಾಡಿ.ಶಾಬ್ದಿಕ ಸುಖಕ್ಕಿಂತ ನಾದದ ಅನುಭೂತಿ ಸೂಸುವ ಆಧ್ಯಾತ್ಮ ಶಕ್ತಿ ಇರುವುದೇ ಹಿಂದೂಸ್ತಾನಿ ಸಂಗೀತದಲ್ಲಿ. ತನ್ಮೂಲಕ ಆ ವಿಶೇಷ ಪ್ರಯಾಣದ ಸುಖ-ದುಃಖ ಕಂಡಿದ್ದೀರಿ. ನಿಮ್ಮ ಜೊತೆ ಜೊತೆಗೆ ಸಂಗೀತಯಾನದಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ಕಲಾವಿದರೂ ಈಗ ನೆನಪಾಗುತ್ತಿದ್ದಾರೆ. ಅನಕೃ ಅವರ ಒತ್ತಾಯಕ್ಕೆ ಮಣಿದು, ವಚನಗಳನ್ನು ಮನೆ-ಮನ ಮುಟ್ಟಿಸಿದ ಮನ್ಸೂರರ ನಾದಲೋಕವೇ ವಿಭಿನ್ನ. ಹದಿನಾರು ವರುಷಗಳ ಹಿಂದೆ ಧಾರವಾಡದ ಮುರುಘಾಮಠದಲ್ಲಿ ಕೇಳಿದ ಅಕ್ಕ ಕೇಳವ್ವದ 'ಅಚ್ಚರಿ'ಗೆ ಪ್ರಾಯವೇ ಕಳೆದಿಲ್ಲ. ಆದರೆ ಮನ್ಸೂರರ ಕಾರ್ಯಕ್ರಮದ ನಂತರ ಅಂದು ನಾನೇನು ಹಾಡಿದ್ದೆ? ಎನ್ನುವುದು ತಲೆಕೆಳಗೆ ಮಾಡಿನಿಂತರೂ ಸ್ಮೃತಿಪಟಲದ 'ಸಮ್‌' ಗೆ ಬಂದು ನಿಲ್ಲಲಾಗುತ್ತಿಲ್ಲ. ಆತ್ಮಾನುಭವ ಜೊತೆಜೊತೆಗೆ ಕೇಳುಗನೊಂದಿಗೆ ತಾದಾತ್ಮ್ಯ ಸಾಧಿಸುವುದು ತಪಸ್ಸೇ ಅಲ್ಲವೆ?


ಹೀಗೆ ಖ್ಯಾಲಗಾಯನದ ಶೈಲಿಯಲ್ಲೇ ವಚನ ಸಂಗೀತ ಪ್ರಸ್ತುತ ಪಡಿಸಿದ ಇನ್ನೋರ್ವರು ರಾಜಗುರುಗಳು. ಆಗಾಗ ವಿನಾಕಾರಣ ಕಣ್ಣೀರು ತರಿಸುತ್ತಾರೆ. ಹಾರ್ಮೋನಿಯಂ ನುಡಿಸುತ್ತ ಯಮನ್ ರಾಗದಲ್ಲಿ ನೀನೊಲಿದರೆ ಕೊರಡು ಕೊನರುವುದಯ್ಯಾ ಎಂದಾಗ 'ವ್ಹಾ! ಈ ಎಳೆ ಎಳೆ ಎಂಟರ ಹುಡುಗಿ ನನ್ನ ಹತ್ತಿರವೇ ಇದ್ದು ಬಿಡಲಿ. ನನ್ನ ಶಿಷ್ಯಬಳಗದಲ್ಲಿ ಇವಳೂ ಒಬ್ಬಳು. ಎಂದು ಅಕ್ಕರೆ ತೋರಿಸಿದ್ದು ಮಾಸದ ನೆನಪು. ಮರು ವರ್ಷವೇ ಕೊಟ್ಟ ಮಾತು, ತೋರಿದ ವಿಶ್ವಾಸ ಮರೆತು ನಡೆದೇ...ಬಿಟ್ಟರು ಶಾಶ್ವತವಾಗಿ. ಆದರೆ ಆಗಲೂ ಈಗಲೂ ಕೋಪ ಬರುವುದು ಖಂಡಿತ ಅವರ ಮೇಲಲ್ಲ, ಅವರೆಲ್ಲ ನಂಬಿದ್ದ ಈ ಕಾಲನ ಮೇಲೆ.

ತ್ರಿಸಪ್ತಕಗಳ ದಾಟಿ ತಾರಕ ಮೀರಿ ಏರಿದ ಸ್ವರ ನಿಲ್ಲಿಸಿ, 'ಹಾರ್ಮೊನಿಯಂ ಯಾಕೆ ನಿಲ್ಲಿಸಿದಿರಿ?' ಎಂದು ವಸಂತ ಕನಕಾಪುರರಿಗೆ ರಾಜಗುರುಗಳು ಕೇಳಿದ್ದರಂತೆ... ಹಾರ್ಮೋನಿಯಂನಲ್ಲಿನ ಸ್ವರಗಳು ಮುಗಿದರೆ ಇನ್ನೇನು ಮಾಡಲಿ? ಎಂದು ಕನಕಾಪುರ ಪ್ರಶ್ನಿಸಿದ್ದರಂತೆ. ವಾದ್ಯದ ಮಿತಿಯನ್ನು ಮೀರಿದ ಕಂಠತ್ರಾಣ, ತನ್ಮಯತೆಗೆ ಸಾಕ್ಷಿ ರಾಜಗುರುಗಳು.

ಜೋಶಿ ಬುವಾ, ಆದರೆ ಇವರೆಲ್ಲರ ಹಾಗೆ ನಿಮ್ಮನ್ನು ಭೇಟಿಯಾಗುವ, ಕಛೇರಿ ಸಂಗೀತ ಕೇಳುವ ಭಾಗ್ಯ ನನಗ್ಯಾಕೆ ಬರಲಿಲ್ಲ? ಈ ಕಾಡುವ ಪ್ರಶ್ನೆ ಈಗಿನದಲ್ಲ. ಆ ವಯಸ್ಸಿನಿಂದಲೇ...

ಅದೆಲ್ಲ ಇರಲಿ. ಪಕ್ಕದ ಮನೆಯಲ್ಲಿದ್ದರೇನು? ನಮ್ಮ ಮನೆಯಲ್ಲಿದ್ದರೇನು? ನಾದದ ಹೊಳೆ ಹರಿಯುತ್ತಲೇ ಇದೆ.... ಹರಿದಾಸವಾಣಿ ಹಾಗೂ ಅಭಂಗ್‌ವಾಣಿ ಮೂಲಕ ಮನಸೆಳೆದ ನೀವು ಅಂದು ಬೇಂದ್ರೆಯವರ 'ಉತ್ತರ ಧೃವದಿಂ...' ಶೀರ್ಷಿಕೆಯಡಿ ಭಾವಗೀತೆಗಳಿಗೆ ಜೀವ ತುಂಬಿದ್ದೀರಿ. ಖ್ಯಾಲ ಗಾಯನದ ಮೂಲಕ ನಾದಾನುಭವಕ್ಕೆ ಅನುವು ಮಾಡಿಕೊಟ್ಟು, ಠುಮ್ರಿ, ಠಪ್ಪಾ, ಭಜನ್‌ನಂಥ ಆಧ್ಯಾತ್ಮ ಮಿಲಿತ ರಸದೌತಣ ಬಡಿಸಿದ್ದೀರಿ. ಪ್ರಕೃತಿಯ ಇರವನ್ನೆ, ಹರಿವನ್ನೇ ಪುಟ್ಟ ಗಂಟಲಲ್ಲಡಗಿಸಿಕೊಂಡು ಮೂಕವಿಸ್ಮಿತಗೊಳಿಸಿದ್ದೀರಿ. ಇದೆಲ್ಲದರ ಫಲವಾಗಿ ಈಗ ಭಾರತ ರತ್ನ ಪ್ರಶಸ್ತಿ ಕಿರೀಟ. ಅಭಿನಂದನೆ ಗುರೂಜಿ.

ಆದರೆ, ಮತ್ತೆ ಮತ್ತೆ ಹೇಳುತ್ತಿದ್ದೇನೆ. ಬಂದುಬಿಡಿ ಒಮ್ಮೆ ನಿಮ್ಮದೇ ಮನೆಗೇ.... ಅಂದು ಎಲ್ಲರೆದುರಿಗೆ ಸುಮ್ಮನಿದ್ದು, ಸಂದರ್ಭ ಒದಗಿದಾಗ ತನ್ನ ಮಿತಿಯನ್ನು ತೋಡಿಕೊಂಡರೂ ಅದರ ಕತ್ತು ಸವರುತ್ತಲೇ, ಹುರಿದುಂಬಿಸುತ್ತಲೇ ನಿಮ್ಮತನಕ್ಕೆ ಅದನ್ನು ಒಗ್ಗಿಸಕೊಂಡುಬಿಟ್ಟಿದ್ದಿರಿ. ಆ ಕಾರು ಈಗ ನಿಮ್ಮೊಂದಿಗಿದೆಯೋ ಇಲ್ಲವೋ ಗೊತ್ತಿಲ್ಲ. ಅದರೆ ಅದೇ ವೇಗವನ್ನೇನೂ ನಾವು ಕೇಳುತ್ತಿಲ್ಲ, ಏಕೆಂದರೆ ನದಿ ಬೇಡ ಸಾಕು ಸೆಲೆ. ಆ ಸೆಲೆಯೊಂದಿಗೆ ಸ್ವರಸಾಮಿಪ್ಯ. ಇಡೀ ನಾದಲೋಕವೇ ನಿಮ್ಮನ್ನು ಒಪ್ಪಿ-ಅಪ್ಪಿರುವಾಗ ಮತ್ಯಾಕೆ ತಡ? ಕೇಳಿಸುತ್ತಿಲ್ಲವೇ? ಒಡಲಹಂಬಲ...

Thursday, November 20, 2008

ಈ ದೀವಳಿಗೆಯಲ್ಲಿ ಸಗಣಿ ಎಲ್ಲಿ ಹುಡುಕಲಿ?

ಎಷ್ಟು ಸಲ ಹೇಳಿದಿನಿ. ಬೇಡ, ದಯವಿಟ್ಟು ನನ್ ಪಾಡಿಗೆ ನನ್ನ ಬಿಟ್ಬಿಡು. ನಿನ್ನಿಂದ್ಲೇ ಹೀಗಾಗಿರೋದು ನಾನು ಅಂತ. ಕೇಳೋದೇ ಇಲ್ಲ. ಅದ್ಯಾವಾಗ್ ಬಂದು ನನ್ನ ಸುತ್ತಾಕ್ಕೊಂಡಿರ್ತಿಯೋ, ಹೊರಟೂ ಹೋಗ್ತಿಯೊ ಗೊತ್ತೇ ಆಗೊಲ್ಲ. ಕೆನ್ನೆ ಕಾಡುವ ಮುಂಗುರುಳು, ಮೊಂಡುತನಕ್ಕಿಳಿಯೋ ಮಲ್ಲಿಗೆ ಬಳ್ಳಿ ಕುಡಿ, ಮಡಕೆ ತಟ್ಟೆಯಲ್ಲಿ ಮೊಳಕೆ ಒಡೆದ ಗೋಧಿಯ ಹೊಂಬಣ್ಣ ಸಸಿ, ಹಸಿ ಶಾವಿಗೆ ಎಳೆಗಳು, ಮಡಿಲ ಒದೆಯುವ ಕಂದನ ಕಾಲುಗಳು, ಕಾಳೊಂದಕ್ಕಾಗಿ ಹತ್ತು ಕಾಳು ಚೆಲ್ಲಾಪಿಲ್ಲಿಸುವ ಪಾರಿವಾಳ, ಅಷ್ಟೇ ಯಾಕೆ ತೊಡೆ ಚಿವುಟಿ ಹುಬ್ಬು ಗಂಟು ಹಾಕಿಸೋ ಅವನ ಕೈಗಳನ್ನೂ ಕಟ್ಟಿ ಹಾಕಿಬಿಡಬಹುದು. ಕಣ್ಣಿಗೆ ಕಾಣುವ, ಸ್ಪರ್ಶಕ್ಕೆ ನಿಲುಕುವ ಎಲ್ಲ, ಎಲ್ಲವನ್ನೂ. ಆದರೆ ನಿನ್ನನ್ನ...

ಪಕ್ವಕತ್ತಲಿನಲ್ಲೂ ಕಾಡದ ನೀನು, ಆಗ ತಾನೆ ಎದ್ದು ಮುಖವರೆಸಿಕೊಳ್ಳುತ್ತಿರುವ ಬೆಳಕರಾಯನೊಂದಿಗೇ ಬೆನ್ನ ಬಿದ್ದಿರುತ್ತಿ. ಇನ್ನೇನೂ ಏಳಬೇಕು ಎಂದುಕೊಂಡವಳಿಗೆ ಮತ್ತೆ ಮತ್ತೆ ತಟ್ಟಿ ಮಲಗಿಸುತ್ತಿ. ನೀ ಹೀಗೆ ನನ್ನ ಬೆನ್ನು ಹತ್ತಿರುವುದಕ್ಕೇ, ನಿನ್ನ ಹೆಸರು ಹಿಡಿದೇ ನನ್ನವ ದಿನವೂ ಜೋಗುಳ ಹಾಡುವುದು : ಎದ್ದೇಳು 'ಸೋಮಾರಿ' ಬೆಳಗಾಯಿತೇ... ಎಂದು.

ಎಂದಿನಂತೆ ಅಂದೂ, ಅವ ಹೇಳುವ ಜೋಗುಳದಿಂದಲೇ ಕಣ್ಬಿಟ್ಟಿದ್ದು. ಆದರೆ ಹಿಡಿದಿಟ್ಟುಕೊಂಡಿದ್ದು ಅವನ ತೋಳುಗಳಲ್ಲ. ಚಿಕ್ಕ ಚಿಕ್ಕ ಟೋಪಿ ಹಾಕಿಕೊಂಡ ಗುಲಾಬಿ ಟೊಂಗೆಗಳು, ಕಿಟಕಿಯಾಚೆಯಿಂದ. ಮಣ್ಣಿನವು ಏನೋ... ಟೊಂಗೆ ಒಣಗದೆ, ಬೇಗ ಚಿಗುರಲಿ ಎಂದು ಸೆಗಣಿ ಬದಲು ಮಣ್ಣಿನ ಟೋಪಿ ಹಾಕಿದ್ದಿರಬಹುದು ಅತ್ತೆ, ಎಂದು ಮುಖ ತಂದೆ ಅದರತ್ತ. ಹಸುವಿನ ಹೊಟ್ಟೆಗಿರಣಿಯಲ್ಲಿ ನುರಿದ ಕಣ-ಕಣ ಮೇವು, ಅಜೀರ್ಣಗೊಂಡ ಹುಳುಕು ಕಾಳು-ಕಡಿಗಳ ಹರುಕು ಮುಖಗಳು. ಮುರುಕು ಬೆನ್ನುಗಳು, ಪೊಳ್ಳು ಹೊಟ್ಟೆಗಳು, ಅದಾಗಲೇ ಪ್ರಾಣ ಕಳೆದುಕೊಂಡ ಸಣ್ಣ ಹುಳು-ಹುಪ್ಪುಡಿಗಳ ಬಿಡಿ ಮೈ, ಏನೆಲ್ಲ ಕಂಡವು. ಮದುವೆ ಹಿಂದಿನ ದಿನ ಕೈತುಂಬ ಒಣಗಿ ನಿಂತು, ಬಿರಿದ ಒಣ ಮೆಹಂದಿ ಬಣ್ಣವನ್ನೇ ಥೇಟ್ ಆ ಸೆಗಣಿ ಟೊಪ್ಪಿಗೆಗಳು ನಿಂತಿದ್ದವು ಹೊತ್ತು. ಬಿರುಕಿನಲ್ಲಿ ಮುಚ್ಚಿಟ್ಟುಕೊಂಡ ಹಸಿಯನ್ನೇ ಮುಟ್ಟಿದೆ ಮತ್ತೆ ಮತ್ತೆ. ಯಾಕೋ ತೋಯ್ದಿತು ಮನಸ್ಸು.

***

ಕಳೆದ ವರ್ಷ ಮೊದಲ ದೀಪಾವಳಿ ಸಂದರ್ಭದಲ್ಲಿ ಪಾಂಡವರನ್ನಿಡುವುದಿಲ್ಲವೆ? ಎಂದಾಗ ನಕ್ಕಿದ್ದ ಅತ್ತೆ, ಬೆಂಗಳೂರಿನಲ್ಲಿ ಎಲ್ಲಿ ಹುಡುಕುವುದು ಸೆಗಣಿ? ಎಂದು ತೋರಣಕ್ಕಾಗಿ ದಾರ ಕೈಗಿಡುತ್ತ ಅಡುಗೆ ಮನೆ ಸೇರಿದ್ದರು. ಸೆಗಣಿ ಎನ್ನುವ ಶಬ್ದ ಕೇಳುತ್ತಿದ್ದಂತೆ ನನ್ನವ ಜೋರಾಗಿ ನಕ್ಕುಬಿಟ್ಟಿದ್ದ. ಅವ ಮೂಗರಳಿಸಿದ್ದು ಬೆಂಗಳೂರಿನ ಮಣ್ಣಿಗೇ ಅಲ್ಲವೇ? ಸುಮ್ಮನಾಗಿಬಿಟ್ಟೆ.
ಇಲ್ಲದಿದ್ದರೆ.....

ನಿನ್ನೆ ಮಟ ಮಟ ಮಧ್ಯಾಹ್ನ ಬಂದ ಕೋಲೆಬಸವನ ದಯೆ. ಅದಕ್ಕೇ ಅಲ್ಲವೇ? ನಮ್ಮ ಗುಲಾಬಿ ಟೊಂಗೆಗಳು ಸೆಗಣಿ ಕಾಣುವ ಹಾಗಾಗಿದ್ದು? ಎಂದು ಅತ್ತೆ ಸಂಭ್ರಮಿಸಿದ ರೀತಿಯೇ, ಇನ್ನಷ್ಟು ಅವರ ಹತ್ತಿರಕ್ಕೆ ನಿಲ್ಲಿಸಿತ್ತು ನನ್ನ. ಇನ್ನೊಂಚೂರು ಜಾಸ್ತಿ ಸೆಗಣಿ ತೆಗೆದಿಟ್ಟುಕೊಂಡಿದ್ದರೆ ಈ ದೀಪಾವಳಿ ದಿನವಾದ್ರೂ ಚಿಕ್ಕ ಚಿಕ್ಕ ಪಾಂಡವರನ್ನಿಡಬಹುದಿತ್ತಲ್ಲವೇ ನಾಮ್‌ ಕಾ ವಾಸ್ತೆ? ಎಂದಿದ್ದಕ್ಕೆ, ಅಷ್ಟೊತ್ತಿಗೆ ಅದು ಒಣಗುತ್ತಿತ್ತೇನೋ...ಅತ್ತೆಯ ಎಳೆದ ಸ್ವರ. ಅದಕ್ಕೇನಂತೆ? ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಟ್ಟು ಫ್ರಿಡ್ಜ್‌ನಲ್ಲಿಡಬಹುದಿತ್ತಪ್ಪಾ.... ಎಂಬ ಮಹಾನ್ನುಪಾಯ ನುಸುಳಿತಾದರೂ, ಅದು ಗಂಟಲಲ್ಲೇ ಸಿಕ್ಕಿಹಾಕಿಕೊಂಡು ಮರ್ಯಾದೆ ಉಳಿಸಿತು. ಅಬ್ಬಾ! ಥ್ಯಾಂಕ್ಸ್ ಗಂಟಲೇ ಎಂದು ಜೋರುಸಿರು ಬಿಡುತ್ತಿದ್ದಂತೆ, ಚಿಕ್ಕವರಿದ್ದಾಗ ನಾವಿದ್ದ ಹಳ್ಳಿ ದೊಡ್ಡವಾಡದಲ್ಲಿ ಪ್ರತಿ ದೀಪಾವಳಿಗೆ ಸುಮಾರು ಐವತ್ತು-ಅರವತ್ತು ಪಾಂಡವರನ್ನು ಸೆಗಣಿಯಿಂದ ಮಾಡಿ ನಿಟ್ಟುಸಿರುಬಿಟ್ಟ ಗಳಿಗೆಗಳು ಕಣ್ಮುಂದೆ....

***

ಹಟ್ಟಿಹಬ್ಬಕ್ಕೆ ಮೂರ್‍ನಾಲ್ಕು ದಿನಗಳಿರುವಾಗಲೇ ಹಾದಿ-ಬೀದಿ ಸುತ್ತುವ ಊರ ದನಗಳ ಹಿಂದಿಂದೆ ಸಣ್ಣ ಹುಡುಗಿಯರ ಹಿಂಡು. ಸೊಂಟ, ತಲೆಮೇಲೊಂದು ಸಣ್ಣ ಬುಟ್ಟಿ. ಅಗಸಿಬಾಗಿಲಿನಿಂದ ಊರಕೆರೆದಾರಿಯತನಕ, ದೊಡ್ಡಬಾವಿರಸ್ತೆಯಿಂದ ಪಾಳುಕಿಲ್ಲೆಯುದ್ದಕ್ಕೂ ಪಥಸಂಚಲನ. ದನವೊಂದು ಸೆಗಣಿ ಹಾಕುವ ಮುನ್ಸೂಚನೆ ಕೊಡುತ್ತಿದೆ ಎನ್ನುವಾಗಲೇ ಓಟಕಿತ್ತ ಹುಡುಗಿಯರು ಗುಂಪು ಇಳಿಯುವುದು ಹುಚ್ಚು ಸ್ಪರ್ಧೆಗೆ. ನೇರವಾಗಿ ತನ್ನ ಬುಟ್ಟಿಗೇ ಬೀಳಲಿ ಸೆಗಣಿ ಎಂದು ಬೇಡಿಕೊಳ್ಳುತ್ತ, ಅದು ಬೀಳುವ ರಭಸಕ್ಕೆ ಧಡಕ್ಕನೇ ಬುಟ್ಟಿ ನೆಲಕ್ಕೆ ಕುಕ್ಕರಿಸಿಬಿಡುವ ಎಳೆಕೈಗಳು. ಮುಗಿಬಿದ್ದು ಬಳಿದುಕೊಂಡ ಸಂತೃಪ್ತ ಕಣ್‌ಗಳ ಪುಟ್ಟ ಒಡತಿಯರು. ಹಿಂಜರಿದ ಸಪ್ಪು ಮೋರೆಯ ಕಿರಿಕೂಸುಗಳು, ಬನ್ನಿ ಸಿಕ್ಕಷ್ಟರಲ್ಲೇ ಹಂಚಿಕೊಳ್ಳುವಾ ಎಂದು ಅಮ್ಮ-ಅಕ್ಕನ ಪಾತ್ರ ವಹಿಸುವ ತುಸು ದೊಡ್ಡ ಹುಡುಗಿಯರು... ಒಟ್ಟಿನಲ್ಲಿ ಕತ್ತಲಾಗುತ್ತಿದ್ದಂತೆ ತುಂಬಿದ ಸೆಗಣಿ ಬುಟ್ಟಿ ಆ ಎಲ್ಲ ಎಳೆಕತ್ತುಗಳನ್ನೂ ನೋಯಿಸಿಬಿಡುತ್ತಿತ್ತು. ಆದರೆ ಮಾರನೆಯ ದಿನ ಹಟ್ಟಿಹಬ್ಬದ ಖುಷಿಯಲ್ಲಿ ಅದೆಲ್ಲ ಹೆಸರಿಲ್ಲದ ಊರಿಗೆ ಮಾಯ!

ಒಮ್ಮೆಯೂ ಅಮ್ಮ ನನಗೆ ಆ ಪುಟ್ಟ ಗೋಪಿಕೆಯರೊಡನೆ ಕಳಿಸಲೇ ಇಲ್ಲ. ಪ್ರತಿ ವರ್ಷವೂ ನನ್ನದು ಇದೇ ರಾಗ ಅಮ್ಮನದು ಅದೇ ಹಾಡು. . . ಆದರೆ ಮುಖ ಸಣ್ಣ ಮಾಡಿ ಕುಳಿತವಳಿಗೆ ಮತ್ತೆ ಅರಳುವಂತೆ ಮಾಡುತ್ತಿದ್ದುದು ಶೆಟ್ಟರ ಬಸಲಿಂಗಮ್ಮನ ತಲೆ ಏರಿಬಂದ ಸೆಗಣಿಬುಟ್ಟಿಯೇ.

ಬೆಳಗ್ಗೆ ನಾಲ್ಕೈದಕ್ಕೆಲ್ಲ ಎದ್ದು, ನಿದ್ದೆಗಣ್ಣಲ್ಲೇ ಸೆಗಣಿಗೊಂದು ಮನುಷ್ಯನಾಕಾರ ಕೊಟ್ಟು ಪಾಂಡವರ ಕಣ್‌ಬಿಡಿಸುವದರತ್ತ ತಲ್ಲೀನ. ಪಾಂಡವರೊಂದಿಗೆ ಕೌರವರನ್ನೂ ಕೂರಿಸುವ ದೊಡ್ಡಹೊರೆ. ಬಿಳಿ ಪೇಟಿಕೋಟು ಅದಕ್ಕೆ ಸ್ವತಃ ಸಾಕ್ಷಿ. ಕೌರವರ ವಂಶವನ್ನೆಲ್ಲ ಒಪ್ಪಗೊಳಿಸುವ ತ್ರಾಣ, ಸಮಯ ಇಲ್ಲವಾದ್ದರಿಂದ ಪ್ರಮುಖ ಸಹೋದರರನ್ನಷ್ಟೇ ಪ್ರತಿಷ್ಠಾಪಿಸಿ, ಹಿತ್ತಲಿಗೆ ಓಟವೇ... ಆರಂಭದ ಉತ್ಸಾಹ ಕೊನೆಗಿರುತ್ತಿರಲಿಲ್ಲ ಎಂದರೂ ಸರಿಯೇ. ಕೊನೆಗೆ ಮತ್ತೆ ಉತ್ಸಾಹ ತುಂಬಿಕೊಳ್ಳುವುದು- ಬೆಟ್ಟದ ಆಕಾರದಲ್ಲಿ ಮೈದಳೆದ ಅವರ ದೇಹ ಅಲಂಕರಿಸುವುದರಲ್ಲಿ. ರುಂಡ-ಮುಂಡಕ್ಕೆ, ಕಾಳುಗಳಿಂದ ಕಣ್ಣು-ಬಾಯಿ, ತಲೆ ಮೇಲೊಂದು ಉತ್ತರಾಣಿ ಕಡ್ಡಿ ಚೆಂಡುಹೂವು ಸಿಕ್ಕಿಸಿ, ಅರಿಶಿಣ ಕುಂಕುಮ ಏರಿಸಿ ಕುಳ್ಳರಿಸಿಬಿಟ್ಟರೆ ಥೇಟ್ ಪಟ್ಟದರಸರೇ... ಎಲ್ಲ.

ದೇವರಕೋಣೆಯಿಂದ ಹಿಡಿದು ಅಂಗಳದ ಬಾಗಿಲುಗಳ ಎರಡೂ ಬದಿಗೂ ಅವರದೇ ಸೈನ್ಯ. ಮನೆತುಂಬ ಸುಣ್ಣ-ಕ್ಯಾವಿಯಲ್ಲಿ ಮೂಡಿದುವೆಲ್ಲ ಅವರ ಹೆಜ್ಜೆಗಳೇ. ಕೌರವರ ಗುಂಪಿನಲ್ಲಿರುವ ದೈತ್ಯರ ಮೂಗಿಗೆ ಕೆಂಪು ಮೆಣಸಿನಕಾಯಿ ಚುಚ್ಚುತ್ತಿದ್ದುದು ಅವರ ದುಷ್ಟತನದ ಸಂಕೇತ. ನಂತರ ಸೆಗಣಿ ಬಟ್ಟಲುಗಳಲ್ಲಿ ಮೊಸರ ನೈವೇದ್ಯ. ಚಿಕ್ಕವರಾದ ನಮಗೆಲ್ಲ ಮನೆ ಬೆಕ್ಕು-ನಾಯಿಯಿಂದ ಅದ ಕಾಯುವ ವಿಶೇಷ ಕಾಯಕ. ಕಣ್ಣುತಪ್ಪಿಸಿ ಮೊಸರು ಕುಡಿದ ಕಳ್ಳಬೆಕ್ಕಿನಾಟ ಕಾಣದ ನಾವು, ಓಹ್ ಪಾಂಡವರು ಮೊಸರು ಕುಡಿದರು! ಎಂದು ಬೀಗಿದ್ದೇ ಬಿಗಿದ್ದು.

ಲಕ್ಷ್ಮೀ ಪೂಜೆಯ ನಂತರ ಹೋಳಿಗೆಯೂಟ. ಸಂಜೆಯಾಗುತ್ತಿದ್ದಂತೆ ನೆಂಟರೊಂದಿಗೆ ಪಾಂಡವ-ಕೌರವರನ್ನೂ ಬೀಳ್ಕೊಡುವ ಸಮಯ. ತುಸು ಹೊತ್ತಿನಲ್ಲೇ ಕುಂಬಿ ಮೇಲೆ ಪವಡಿಸುವ ಕೌರವ-ಪಾಂಡವರ ಹಿಂಡು, ಅವರವರ ಎತ್ತರಕ್ಕೆ ಅನುಗುಣವಾಗಿ ಸಾಲಾಗಿ. ಆದರೆ ತಿಂಗಳೊಪ್ಪತ್ತಾಗುತ್ತಿದ್ದಂತೆ ಕೆಲವರು ಸತ್ವ ಕಳೆದುಕೊಂಡು, ಬೀಸುವ ಒಣಗಾಳಿಗೆ ಒಬ್ಬೊಬ್ಬರಾಗಿ ಮಾಳಿಗೆಯಿಂದ ಉರುಳಿ ನೇರ ನೀರೊಲೆಯ ಬಾಯಿಗೇ. ಆ ಒಲೆಯ ಗಂಟಲಿಗೆ ಸಿಕ್ಕಿಹಾಕಿಕೊಳ್ಳುವ ಭೀಮ, ಧುರ್ಯೋದನನಂಥ ದೈತ್ಯದೇಹಿಗಳಿಗೆ ಕಟ್ಟಿಗೆಯ ಪೆಟ್ಟು ಕಟ್ಟಿಟ್ಟದ್ದೇ. ಎತ್ತಿ ಬೀಳಿಸಿ, ಉರುಳಾಡಿಸಿ ಅಂತೂ ಅವರನ್ನೆಲ್ಲ ಅಗ್ನಿಗೆ ಸಮರ್ಪಿಸುತ್ತಿದ್ದುದರಲ್ಲಿ ಅದೇನೋ ಹುಚ್ಚುಶ್ರದ್ಧೆ! ಕೊರೆವ ಚಳಿಗೆ ಕಾಲುಮುದುಡಿ ಬಿಸಿಬಿಸಿ ನೀರು ಸುರಿದುಕೊಂಡಾಗಿನ ಹಿತದ ಪಾಲಿನಲ್ಲಿ ಅವರೆಲ್ಲರೂ...

***

ಆಗೆಲ್ಲ ನೀವಿದ್ದಿರಿ. ಈಗ ನಾನೊಬ್ಬಳೇ ಏನು ಮಾಡಲಿ? ಎನ್ನುವ ಅಮ್ಮ, ಐವತ್ತಕ್ಕೆ ಬದಲಾಗಿದ್ದಾಳೆ. ನಲವತ್ತೊಂಭತ್ತಾಗಿದ್ದಾಗಲೂ ಹೀಗಿರಲಿಲ್ಲ. ಹಾಗೇ... ಅರವತ್ತು ತುಳಿದ ಅಪ್ಪನೂ. ಹಬ್ಬ-ಗಿಬ್ಬ ಎಲ್ಲ... ಏನು? ಓದು-ಬರಹ ಮುಖ್ಯ. ಕಾಯಕವೇ ಕೈಲಾಸ ಎಂದು ಆಗೆಲ್ಲ ಬೆನ್ನುಹತ್ತುತ್ತಿದ್ದವರು, ಈ ದೀಪಾವಳಿಗಾದರೂ ಬರಬಾರದೇ? ದೊಡ್ಡ ಹಬ್ಬ. ನೀವಿರದೆ ಹೇಗೆ? ಎಂದು ಫೋನಾಯಿಸುತ್ತಿದ್ದಾರೆ. ಹಾಗಂತ ಅಪ್ಪನ ವಿಚಾರಗಳು ಬದಲಾಗಿಲ್ಲ. ಅಪ್ಪನೂ ಬದಲಾಗಿಲ್ಲ. ಅವರಿಗೆ ಈಗ ಹಬ್ಬ ನೆಪವಷ್ಟೇ.

ಆಗಾಗ ನೆನಪುಕ್ಕಿಸಿ, ಬಿಕ್ಕುವಂತೆ ಮಾಡುವ ಹಳೆಯ ದಿನಗಳಿಗೆಗಳು ಹೇಳುತ್ತಿವೆ ಒಟ್ಟಾಗಿ- 'ನಿಲ್ಲದಿರು ನೋಡದಿರು ತಿರುಗಿ ಹಿಂದೆ, ಬಾಳಪಯಣದ ಬಾಹುಒಳಗೆಲ್ಲವೂ ಹೀಗೆ... ಹೊಸತೆಲ್ಲವೂ ಹಿಗ್ಗೇ. ಅದರೊಂದಿಗೆ ಕಳೆದುಹೋಗುವ ನೋವೂ ಹೊಸತೇ. ಹೊಸತರ ಬೆನ್ನಿಗೆ ಹಳೆಯದು. ಹಳೆಯದರ ಎದೆಯೊಳಗೆ ಮತ್ತೆ ನಾವು.

***

ಬೆಳಗಾದರೆ ಬೆಳಕ ಹಬ್ಬ. ಮೈಒರೆಸಿಕೊಂಡು ನಳನಳಿಸುತ್ತಿವೆ ಮಾವಿನೆಲೆ. ಆಧಾರವಿಲ್ಲದೆ ನಿಲ್ಲುವುದು ಹೇಗೆಂಬ ತಕರಾರು ಬಾಳೆಕಂಬಗಳದು. ನಾರಿನೊಂದಿಗೆ ಸ್ವರ್ಗ ಏರುವ ಆತುರ ಚೆಂಡು-ಸೇವಂತಿಗೆಯದು. ಚುಚ್ಚಬೇಡಿ ನಮ್ಮ ಮೈಗೆ ಗಂಧಕಡ್ಡಿ ಎಂದು ಭಿನ್ನವಿಸಿಕೊಳ್ಳುತ್ತಿವೆ ಸೇಬು-ಸೀತಾಫಲ-ಚಿಕ್ಕು-ಬಾಳೆ. ಅವ ತಂದಿಟ್ಟಿದ್ದಾನೆ ಹೊಸ ಪ್ರಣತೆ. ಹೊಸೆಯಬೇಕು ಬತ್ತಿ. ಹಾಕಬೇಕು ಎಣ್ಣೆ. ಹಚ್ಚಬೇಕು ದೀಪ. ಕಿಟಕಿಯಾಚೆಗಿನ ಗುಲಾಬಿ ಟೊಂಗೆ ಚಿಗುರೊಡೆಯಬಹುದು ಇನ್ನೇನು. ಉದುರಲೇಬೇಕು ಸಾವಕಾಶ ತುಣುಕು ತುಣುಕು ಸೆಗಣಿ. ಹೇಳಬೇಕಿನ್ನು ಅವನಿಗೆ ನಿಲ್ಲಿಸು ನಿನ್ನ ಸೋಮಾರಿ ಜೋಗುಳವ...

Sunday, November 2, 2008

ನೀರಿಳಿಯದ ಗಂಟಲೊಳ್ ನೀನಾಸಂ ಕಡುಬು

ಅಲ್ಲಿದ್ದವರು ಸುಮಾರು ಇನ್ನೂರೈವತ್ತು ಶಿಬಿರಾರ್ಥಿಗಳು. ರಾಜ್ಯದ ವಿವಿಧ ಭಾಗಗಳಿಂದ ಬಂದವರು. ಅವರೆಲ್ಲರೂ ಸಾಂಸ್ಕೃತಿಕ ರಾಯಭಾರಿಗಳನ್ನು ಹತ್ತಿರದಿಂದ ಕಂಡು ಹೆಮ್ಮೆ ಪಟ್ಟುಕೊಳ್ಳುವಲ್ಲಿ ಸಫಲರಾದರೇ ಹೊರತು ಪುನರಾವರ್ತಿತ ವಿಚಾರ, ವಿಷಯ ಪಲ್ಲಟ, ಅಂಕೆಗೆ ಸಿಗದ ಶಿಬಿರದ ಉದ್ದೇಶದಿಂದ ಹೆಚ್ಚಿನ ಪಾಲು ನಿರಾಶರಾದರು.

ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ. ಈ ವಾಕ್ಯ ಸವೆಕಲು ಎನಿಸಿದರೂ ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರಕ್ಕೆ ಹತ್ತಿರವಾಗಿತ್ತು ಎನ್ನಬಹುದು. ‘ಆಹ್ವಾನಿತ ಶಿಬಿರಾರ್ಥಿಗಳಿಗೆ ಮಾತ್ರ' ಎಂದಿದ್ದರೆ ಖಂಡಿತ ಶಿಬಿರ ಯಶಸ್ವಿಯಾಗುತ್ತಿತ್ತೇನೋ. ಯಾಕೆಂದರೆ ಅಲ್ಲಿದ್ದವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರೇ. ಕಲೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಆಸಕ್ತಿ-ಅಭಿಮಾನ-ಅಭಿರುಚಿಯುಳ್ಳವರೇ. ತಮ್ಮ ಆಸಕ್ತಿಗೆ ಪೂರಕವಾಗಿ ಸಾಕಷ್ಟು ಮಾಹಿತಿ-ಅನುಭವ ದೊರೆಯಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡು ಬಂದವರೇ. ಆದರೆ ಅವರ ಗ್ರಹಿಕೆ, ಸಾಮರ್ಥ್ಯಕ್ಕೆ ಅನುಗುಣವಾಗಿ ವಿಷಯ ಮಂಡನೆ, ಚರ್ಚೆ, ಸಂವಾದಗಳು ನಡೆಯದೇ ಶಿಬಿರ ಹಾಗೂ ಶಿಬಿರಾರ್ಥಿಗಳ ಮಧ್ಯೆ ಒಂದು ರೀತಿ ನಿರ್ವಾತ ಉಂಟಾಗಿತ್ತು.

ಯಾವತ್ತೂ ವಿಷಯ ಹಳೆಯದೇ. ಆದರೆ ಅದನ್ನು ಪ್ರಸ್ತಾಪಿಸುವ ರೀತಿ, ದೃಷ್ಟಿಕೋನ, ಆಲೋಚನಾ ವಿಧಾನ ವಿಭಿನ್ನವಾಗಿದ್ದರೆ, ಅದು ಗ್ರಹಿಕೆಯಲ್ಲಿ ಐಕ್ಯವಾಗಿ ಹೊಸ ಸಂಚಲನವನ್ನೇ ಮೂಡಿಸಬಹುದು. ಸತ್ವಯುತ ವಿಚಾರಧಾರೆಗಳು ಸೃಷ್ಟಿಯಾಗಬಹುದು. ಹಳೆಯದನ್ನು ನಿರಾಕರಿಸದೆ, ಹೊಸದನ್ನು ಸ್ವೀಕರಿಸುವ ಇಂದಿನ ಪೀಳಿಗೆಯ ಮನಃಸ್ಥಿತಿಗೆ ಇದು ಅಗತ್ಯ ಕೂಡ.

ಆದರೆ ಇಲ್ಲಿ ನಡೆದದ್ದೇನು?

ಶಿಬಿರದ ಕಾರ್ಯಕ್ರಮ ರೂಪಿಸುವಲ್ಲಿ, ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯಲ್ಲಿ ಹಾಗೂ ಅವರು ಮಂಡಿಸುವ ವಿಚಾರಗಳಲ್ಲಿ ನಾವಿನ್ಯತೆಯಾಗಲಿ, ಚುರುಕಾಗಲಿ, ಹೊಳಹುಗಳಾಗಲಿ ಕಾಣಿಸದೇ, ಶಿಬಿರಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ತಮ್ಮ ತಮ್ಮ ಬೌದ್ಧಿಕ ಪ್ರದರ್ಶನ ಮಾಡಿಕೊಂಡಿದ್ದು. ಪರಸ್ಪರ ಬೆನ್ನು ತಟ್ಟಿಕೊಂಡಿದ್ದು.

‘ಹಿಂದ್ ಸ್ವರಾಜ್' (ಈ ಬಾರಿಯ ಶಿಬಿರದ ವಿಷಯ) ಬಗ್ಗೆ ಕೆಲವರು ಉಪನ್ಯಾಸ ನೀಡಿದಾಗಲೂ ಅಷ್ಟೇ. ಸರಳ, ಸುಗಮ ರಸ್ತೆ ಎದುರಿಗಿದ್ದರೂ, ಎಲ್ಲಿಂದಲೋ ಹತ್ತಿ, ಎಲ್ಲಿಂದಲೋ ಇಳಿದು ತಿರುಚಿ-ಮುಗುಚಿ ಸಾಗುವ ಪ್ರಯತ್ನ ಮಾಡಿದ್ದೇಕೆ?

‘ಹಿಂದ್ ಸ್ವರಾಜ್' ಪರಿಕಲ್ಪನೆಗೆ ಜಾಗತೀಕರಣ, ವಾಣಿಜ್ಯೀಕರಣ ಎಂಬೆಲ್ಲ ‘ಎಳೆ'ಗಳನ್ನು ಜೋಡಿಸಿ ಹೆಣೆಯುವ ಪ್ರಯತ್ನವೂ ನಡೆಯಿತು. ಆದರೆ ಇದರಿಂದ ಶಿಬಿರಾರ್ಥಿಗಳಿಗೆ ದಕ್ಕಿದ್ದೇನು? ಶಿಬಿರದ ಉದ್ದೇಶಕ್ಕೆ ಇದು ಎಷ್ಟು ಪಾಲು ನ್ಯಾಯ ಒದಗಿಸಿತು? ಯಾವುದಕ್ಕೂ ಒಂದು ನಿಗದಿತ ಸಮಯ, ಸೂಕ್ತ ಸಂದರ್ಭಗಳಿರುತ್ತವೆಯಲ್ಲವೆ?

ಇನ್ನು ಸಂಜೆ ನಡೆಯುವ ನಾಟಕ ಹೊರತುಪಡಿಸಿದರೆ, ಶಿಬಿರದ ದಿನಚರಿ ಬಗ್ಗೆ ಮುನ್ನೋಟ ಅಥವಾ ಕಿರುಮಾಹಿತಿ ವಿವರ ಸಿಗುತ್ತಿರಲೇ ಇಲ್ಲ. ಪ್ರತಿ ಉಪನ್ಯಾಸ, ಪ್ರದರ್ಶನದ ನಂತರ ತುಸು ಧೈರ್ಯದಿಂದ ಪ್ರಶ್ನೆ ಕೇಳುತ್ತಿದ್ದವರು ಮಾತ್ರ ಹದಿನೈದಿಪ್ಪತ್ತು ಮಂದಿ. ವೇದಿಕೆಯ ಮೇಲೆ ನಡೆಯುತ್ತಿದ್ದ ‘ಸಂ'ವಾದ ತುಸು ‘ತೂಕ'ದ್ದಾಗಿದ್ದರಿಂದ, ಎಲ್ಲಿ ತಾವು ಕೇಳಿದ ಪ್ರಶ್ನೆಗಳು ಆ ತೂಕಕ್ಕೆ ಸಮದೂಗಲಾರವೇನೋ ಎಂಬ ಅಳುಕು. ಪ್ರತಿಸ್ಪಂದನೆ ಹೇಗಿರುತ್ತದೆಯೋ ಎಂಬ ಅನುಮಾನ, ಹಿಂಜರಿಕೆ ಉಳಿದವರಿಗೆ.

***

ಒಂದು ವಿಷಯದ ಬಗ್ಗೆ ಎಲ್ಲ ಆಯಾಮಗಳತ್ತ ಗಮನಹರಿಸಿ, ಉನ್ನತ ಅಭಿಪ್ರಾಯಗಳಿಗೆ ಎಡೆಮಾಡಿಕೊಟ್ಟು ಅವುಗಳನ್ನು ಗಟ್ಟಿಗೊಳಿಸಿಕೊಳ್ಳುವಂಥ ‘ಸಂ'ವಾದವಿದ್ದರೆ ಅದೊಂದು ಚೆಂದದ, ಅರ್ಥಪೂರ್ಣ ಸಂವಾದ. ಅಂಥ ಆರೋಗ್ಯಕರ ‘ವಾದ'ಗಳನ್ನು ಬೆಳೆಸಲು, ಚುರುಕುಗೊಳಿಸಲು ಕೆಲವು ಶಿಬಿರಾರ್ಥಿಗಳು ಪ್ರಯತ್ನಿಸುತ್ತಿದ್ದರಾದರೂ ಸಾಕಷ್ಟು ಬಾರಿ ಅದನ್ನು ಮೊಟಕುಗೊಳಿಸುವ ಪ್ರಯತ್ನಗಳೇ ವೇದಿಕೆ ಮೇಲೆ ನಡೆಯುತ್ತಿದ್ದವು. ಅಲ್ಲಿದ್ದ ಸಂಪನ್ಮೂಲ ವ್ಯಕ್ತಿಗಳು ತಮಗೆ ನಿಲುಕಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತಿದ್ದರು. ಇದರರ್ಥ ಅದು ಅವರ ಮಿತಿಯಂತಲ್ಲ, ವಿಷಯ ಪರಿಣತ ಸಂಪನ್ಮೂಲ ವ್ಯಕ್ತಿಗಳ ಕೊರತೆ ಹಾಗೂ ಅಸಮರ್ಪಕ ಸಂವಹನ.

ಉದಾಹರಣೆಗೆ-

ಸಂಜೆ ನಡೆದ ನಾಟಕದ ಸಂವಾದ ಮರುದಿನ ಬೆಳಗ್ಗೆ ನಡೆಯುತ್ತಿತ್ತು. ನಾಟಕ ಪ್ರದರ್ಶನದ ಬಗ್ಗೆ ಎರಡು ಮಾತಿಲ್ಲ. ಆದರೆ ಆ ಬಗೆಗಿನ ಸಂವಾದ ಮಾತ್ರ ಅಪೂರ್ಣ. ಒಟ್ಟಾರೆ ನಾಟಕದ ಒಳ-ಹೊರಗಿನ ಕುರಿತು ಸಂವಾದ ನಡೆಯದೇ ಕೇವಲ ಕಥಾ-ವಸ್ತು ಹಾಗೂ ರಚನಕಾರರ ಧೋರಣೆ, ಮತ್ತವರು ಪ್ರತಿಪಾದಿಸುವ ವಾದಗಳ ಕುರಿತ ಚರ್ಚೆಗೆ ಪುಷ್ಠಿ ದೊರೆಯುತ್ತಿತ್ತು. ಆದರೆ ಅದು ಕೂಡ ಏಕಮುಖವಾಗಿಯೇ. ಇನ್ನೊಂದು ಆಶ್ಚರ್ಯ ಹಾಗೂ ಬೇಸರದ ಸಂಗತಿ ಎಂದರೆ ನಾಟಕ ರಚನಕಾರರಾಗಲಿ ನಿರ್ದೇಶಕರಾಗಲಿ ಅಲ್ಲಿ ನೇರವಾಗಿ ಸಂವಾದಕ್ಕಿಳಿಯುವಂತಿರಲಿಲ್ಲ. ಒಂದು ರೀತಿ ಅವರು ಪಿಚ್‌ನಲ್ಲಿ ಇರಲೇ ಇಲ್ಲ ಎಂದರೂ ಸರಿಯೇ. ಸ್ಪಂದನಾ ಮನೋಭಾವವೇ ಇರದಿದ್ದಾಗ ಅದು ಎಷ್ಟ ಮಟ್ಟಿಗೆ ಖುಷಿ ಕೊಡಲು, ಆಸಕ್ತಿ ಉಳಿಸಿಕೊಳ್ಳಲು ಸಾಧ್ಯ?

ಕಥಾವಸ್ತು ನಾಟಕದ ಜೀವಾಳ ಸರಿ. ಆದರೆ ನಾಟಕದ ಬಗೆಗಿನ ಸಂವಾದ ಎಂದಾಗ ಸಂಭಾಷಣೆ, ಅಭಿನಯ, ರಂಗಸಜ್ಜಿಕೆ, ಸಂಗೀತ, ಬಣ್ಣ-ಬೆಳಕು, ವೇಷಭೂಷಣ, ಚಮತ್ಕಾರ, ತಂತ್ರ, ಪ್ರೇಕ್ಷಕ ಇತ್ಯಾದಿ ಇತ್ಯಾದಿ ಮುಖಗಳು ಒಳಗೊಳ್ಳುತ್ತವೆ. ಹೀಗಿದ್ದಾಗ ಪ್ರೇಕ್ಷಕರೆನಿಸಿಕೊಂಡವರು (ಶಿಬಿರಾರ್ಥಿಗಳು) ತಮ್ಮ ಆಸಕ್ತಿಗೆ ತಕ್ಕಂತೆ ಗ್ರಹಿಸುತ್ತಾ ಸಾಗುತ್ತಿರುತ್ತಾರೆ. ಗ್ರಹಿಕೆಗೆ ನಿಲುಕಿದ್ದನ್ನ ಚರ್ಚಿಸಲು ಇಷ್ಟಪಡುತ್ತಾರೆ. ಈ ದಿಕ್ಕಿನಲ್ಲಿ ಶಿಬಿರಾರ್ಥಿಗಳಿಂದ ಎಲ್ಲ ಬಗೆಯ ಪ್ರಶ್ನೆಗಳು ಹುಟ್ಟಿಕೊಂಡರೂ ಉತ್ತರ ಮಾತ್ರ ಕೇವಲ ಕಥಾವಸ್ತುವಿನತ್ತಲೇ ಸುತ್ತುತ್ತಿದ್ದುದು ದುರಾದೃಷ್ಟ.

ಒಟ್ಟಾರೆ ಶಿಬಿರ ‘ಬೋಧನೆ'ಯಿಂದಲೇ ಮುಕ್ತಿ ಕಾಣಲು ಹವಣಿಸುತ್ತಿತ್ತೇ ವಿನಾ ಹೊಸ ಪೀಳಿಗೆಯ ಗ್ರಹಿಕೆ, ಸ್ಪಂದನೆ, ಆಶೋತ್ತರ-ಅಭಿವ್ಯಕ್ತಿಗೆ ಅಲ್ಲಿ ಸ್ವಾಗತವೇ ಇರಲಿಲ್ಲ. ಶಿಬಿರಾರ್ಥಿಗಳ ಅಭಿಪ್ರಾಯ, ಗೊಂದಲ, ಕುತೂಹಲ, ಪ್ರಶ್ನೆಗಳತ್ತ ಅಷ್ಟಾಗಿ ಗಮನ ಹರಿಸಿದಂತಿರಲಿಲ್ಲ. ಸಮರ್ಥನೆಗಳಲ್ಲಿ ಪಾರದರ್ಶಕತೆ ಬದಲಾಗಿ ಪೂರ್ವಗ್ರಹ ಪೀಡಿತ ವಿಚಾರಧಾರೆಗಳೇ ಗಿರಕಿ ಹೊಡೆಯುತ್ತಿದ್ದವು.

ಏಳುವ ಗೊಂದಲ, ಹುಟ್ಟುವ ಪ್ರಶ್ನೆ, ಕಾಡುವ ಕುತೂಹಲಗಳಿಗೆ ಸಮರ್ಥನೀಯ ಉತ್ತರಗಳನ್ನು ಕೊಡುವತ್ತ ಪ್ರಯತ್ನಿಸಬೇಕೇ ಹೊರತು ಮಿತಿಯಲ್ಲೇ ಹೊರಳಾಡುತ್ತ, ಅದರಲ್ಲೇ ಹೂತುಹೋಗುವ ಅಪಾಯ ತಂದಿಟ್ಟುಕೊಳ್ಳಬಾರದಲ್ಲವೆ? ಓಡುವ ಕುದುರೆಯ ಲಗಾಮು ಹಿಡಿಯಬೇಕೆ ವಿನಾ, ಕುದುರೆಯ ಕಾಲುಗಳನ್ನ ಕಟ್ಟಿಹಾಕಬಾರದಲ್ಲವೆ? ಹಾಗೆ ಕಟ್ಟಿಹಾಕಿದರೂ ಅದಕ್ಕೊಂದು ಸಮಜಾಯಿಷಿಯೋ ಅರ್ಥವೋ ಇರಲೇಬೇಕಲ್ಲವೆ?