Thursday, November 20, 2008

ಈ ದೀವಳಿಗೆಯಲ್ಲಿ ಸಗಣಿ ಎಲ್ಲಿ ಹುಡುಕಲಿ?

ಎಷ್ಟು ಸಲ ಹೇಳಿದಿನಿ. ಬೇಡ, ದಯವಿಟ್ಟು ನನ್ ಪಾಡಿಗೆ ನನ್ನ ಬಿಟ್ಬಿಡು. ನಿನ್ನಿಂದ್ಲೇ ಹೀಗಾಗಿರೋದು ನಾನು ಅಂತ. ಕೇಳೋದೇ ಇಲ್ಲ. ಅದ್ಯಾವಾಗ್ ಬಂದು ನನ್ನ ಸುತ್ತಾಕ್ಕೊಂಡಿರ್ತಿಯೋ, ಹೊರಟೂ ಹೋಗ್ತಿಯೊ ಗೊತ್ತೇ ಆಗೊಲ್ಲ. ಕೆನ್ನೆ ಕಾಡುವ ಮುಂಗುರುಳು, ಮೊಂಡುತನಕ್ಕಿಳಿಯೋ ಮಲ್ಲಿಗೆ ಬಳ್ಳಿ ಕುಡಿ, ಮಡಕೆ ತಟ್ಟೆಯಲ್ಲಿ ಮೊಳಕೆ ಒಡೆದ ಗೋಧಿಯ ಹೊಂಬಣ್ಣ ಸಸಿ, ಹಸಿ ಶಾವಿಗೆ ಎಳೆಗಳು, ಮಡಿಲ ಒದೆಯುವ ಕಂದನ ಕಾಲುಗಳು, ಕಾಳೊಂದಕ್ಕಾಗಿ ಹತ್ತು ಕಾಳು ಚೆಲ್ಲಾಪಿಲ್ಲಿಸುವ ಪಾರಿವಾಳ, ಅಷ್ಟೇ ಯಾಕೆ ತೊಡೆ ಚಿವುಟಿ ಹುಬ್ಬು ಗಂಟು ಹಾಕಿಸೋ ಅವನ ಕೈಗಳನ್ನೂ ಕಟ್ಟಿ ಹಾಕಿಬಿಡಬಹುದು. ಕಣ್ಣಿಗೆ ಕಾಣುವ, ಸ್ಪರ್ಶಕ್ಕೆ ನಿಲುಕುವ ಎಲ್ಲ, ಎಲ್ಲವನ್ನೂ. ಆದರೆ ನಿನ್ನನ್ನ...

ಪಕ್ವಕತ್ತಲಿನಲ್ಲೂ ಕಾಡದ ನೀನು, ಆಗ ತಾನೆ ಎದ್ದು ಮುಖವರೆಸಿಕೊಳ್ಳುತ್ತಿರುವ ಬೆಳಕರಾಯನೊಂದಿಗೇ ಬೆನ್ನ ಬಿದ್ದಿರುತ್ತಿ. ಇನ್ನೇನೂ ಏಳಬೇಕು ಎಂದುಕೊಂಡವಳಿಗೆ ಮತ್ತೆ ಮತ್ತೆ ತಟ್ಟಿ ಮಲಗಿಸುತ್ತಿ. ನೀ ಹೀಗೆ ನನ್ನ ಬೆನ್ನು ಹತ್ತಿರುವುದಕ್ಕೇ, ನಿನ್ನ ಹೆಸರು ಹಿಡಿದೇ ನನ್ನವ ದಿನವೂ ಜೋಗುಳ ಹಾಡುವುದು : ಎದ್ದೇಳು 'ಸೋಮಾರಿ' ಬೆಳಗಾಯಿತೇ... ಎಂದು.

ಎಂದಿನಂತೆ ಅಂದೂ, ಅವ ಹೇಳುವ ಜೋಗುಳದಿಂದಲೇ ಕಣ್ಬಿಟ್ಟಿದ್ದು. ಆದರೆ ಹಿಡಿದಿಟ್ಟುಕೊಂಡಿದ್ದು ಅವನ ತೋಳುಗಳಲ್ಲ. ಚಿಕ್ಕ ಚಿಕ್ಕ ಟೋಪಿ ಹಾಕಿಕೊಂಡ ಗುಲಾಬಿ ಟೊಂಗೆಗಳು, ಕಿಟಕಿಯಾಚೆಯಿಂದ. ಮಣ್ಣಿನವು ಏನೋ... ಟೊಂಗೆ ಒಣಗದೆ, ಬೇಗ ಚಿಗುರಲಿ ಎಂದು ಸೆಗಣಿ ಬದಲು ಮಣ್ಣಿನ ಟೋಪಿ ಹಾಕಿದ್ದಿರಬಹುದು ಅತ್ತೆ, ಎಂದು ಮುಖ ತಂದೆ ಅದರತ್ತ. ಹಸುವಿನ ಹೊಟ್ಟೆಗಿರಣಿಯಲ್ಲಿ ನುರಿದ ಕಣ-ಕಣ ಮೇವು, ಅಜೀರ್ಣಗೊಂಡ ಹುಳುಕು ಕಾಳು-ಕಡಿಗಳ ಹರುಕು ಮುಖಗಳು. ಮುರುಕು ಬೆನ್ನುಗಳು, ಪೊಳ್ಳು ಹೊಟ್ಟೆಗಳು, ಅದಾಗಲೇ ಪ್ರಾಣ ಕಳೆದುಕೊಂಡ ಸಣ್ಣ ಹುಳು-ಹುಪ್ಪುಡಿಗಳ ಬಿಡಿ ಮೈ, ಏನೆಲ್ಲ ಕಂಡವು. ಮದುವೆ ಹಿಂದಿನ ದಿನ ಕೈತುಂಬ ಒಣಗಿ ನಿಂತು, ಬಿರಿದ ಒಣ ಮೆಹಂದಿ ಬಣ್ಣವನ್ನೇ ಥೇಟ್ ಆ ಸೆಗಣಿ ಟೊಪ್ಪಿಗೆಗಳು ನಿಂತಿದ್ದವು ಹೊತ್ತು. ಬಿರುಕಿನಲ್ಲಿ ಮುಚ್ಚಿಟ್ಟುಕೊಂಡ ಹಸಿಯನ್ನೇ ಮುಟ್ಟಿದೆ ಮತ್ತೆ ಮತ್ತೆ. ಯಾಕೋ ತೋಯ್ದಿತು ಮನಸ್ಸು.

***

ಕಳೆದ ವರ್ಷ ಮೊದಲ ದೀಪಾವಳಿ ಸಂದರ್ಭದಲ್ಲಿ ಪಾಂಡವರನ್ನಿಡುವುದಿಲ್ಲವೆ? ಎಂದಾಗ ನಕ್ಕಿದ್ದ ಅತ್ತೆ, ಬೆಂಗಳೂರಿನಲ್ಲಿ ಎಲ್ಲಿ ಹುಡುಕುವುದು ಸೆಗಣಿ? ಎಂದು ತೋರಣಕ್ಕಾಗಿ ದಾರ ಕೈಗಿಡುತ್ತ ಅಡುಗೆ ಮನೆ ಸೇರಿದ್ದರು. ಸೆಗಣಿ ಎನ್ನುವ ಶಬ್ದ ಕೇಳುತ್ತಿದ್ದಂತೆ ನನ್ನವ ಜೋರಾಗಿ ನಕ್ಕುಬಿಟ್ಟಿದ್ದ. ಅವ ಮೂಗರಳಿಸಿದ್ದು ಬೆಂಗಳೂರಿನ ಮಣ್ಣಿಗೇ ಅಲ್ಲವೇ? ಸುಮ್ಮನಾಗಿಬಿಟ್ಟೆ.
ಇಲ್ಲದಿದ್ದರೆ.....

ನಿನ್ನೆ ಮಟ ಮಟ ಮಧ್ಯಾಹ್ನ ಬಂದ ಕೋಲೆಬಸವನ ದಯೆ. ಅದಕ್ಕೇ ಅಲ್ಲವೇ? ನಮ್ಮ ಗುಲಾಬಿ ಟೊಂಗೆಗಳು ಸೆಗಣಿ ಕಾಣುವ ಹಾಗಾಗಿದ್ದು? ಎಂದು ಅತ್ತೆ ಸಂಭ್ರಮಿಸಿದ ರೀತಿಯೇ, ಇನ್ನಷ್ಟು ಅವರ ಹತ್ತಿರಕ್ಕೆ ನಿಲ್ಲಿಸಿತ್ತು ನನ್ನ. ಇನ್ನೊಂಚೂರು ಜಾಸ್ತಿ ಸೆಗಣಿ ತೆಗೆದಿಟ್ಟುಕೊಂಡಿದ್ದರೆ ಈ ದೀಪಾವಳಿ ದಿನವಾದ್ರೂ ಚಿಕ್ಕ ಚಿಕ್ಕ ಪಾಂಡವರನ್ನಿಡಬಹುದಿತ್ತಲ್ಲವೇ ನಾಮ್‌ ಕಾ ವಾಸ್ತೆ? ಎಂದಿದ್ದಕ್ಕೆ, ಅಷ್ಟೊತ್ತಿಗೆ ಅದು ಒಣಗುತ್ತಿತ್ತೇನೋ...ಅತ್ತೆಯ ಎಳೆದ ಸ್ವರ. ಅದಕ್ಕೇನಂತೆ? ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಟ್ಟು ಫ್ರಿಡ್ಜ್‌ನಲ್ಲಿಡಬಹುದಿತ್ತಪ್ಪಾ.... ಎಂಬ ಮಹಾನ್ನುಪಾಯ ನುಸುಳಿತಾದರೂ, ಅದು ಗಂಟಲಲ್ಲೇ ಸಿಕ್ಕಿಹಾಕಿಕೊಂಡು ಮರ್ಯಾದೆ ಉಳಿಸಿತು. ಅಬ್ಬಾ! ಥ್ಯಾಂಕ್ಸ್ ಗಂಟಲೇ ಎಂದು ಜೋರುಸಿರು ಬಿಡುತ್ತಿದ್ದಂತೆ, ಚಿಕ್ಕವರಿದ್ದಾಗ ನಾವಿದ್ದ ಹಳ್ಳಿ ದೊಡ್ಡವಾಡದಲ್ಲಿ ಪ್ರತಿ ದೀಪಾವಳಿಗೆ ಸುಮಾರು ಐವತ್ತು-ಅರವತ್ತು ಪಾಂಡವರನ್ನು ಸೆಗಣಿಯಿಂದ ಮಾಡಿ ನಿಟ್ಟುಸಿರುಬಿಟ್ಟ ಗಳಿಗೆಗಳು ಕಣ್ಮುಂದೆ....

***

ಹಟ್ಟಿಹಬ್ಬಕ್ಕೆ ಮೂರ್‍ನಾಲ್ಕು ದಿನಗಳಿರುವಾಗಲೇ ಹಾದಿ-ಬೀದಿ ಸುತ್ತುವ ಊರ ದನಗಳ ಹಿಂದಿಂದೆ ಸಣ್ಣ ಹುಡುಗಿಯರ ಹಿಂಡು. ಸೊಂಟ, ತಲೆಮೇಲೊಂದು ಸಣ್ಣ ಬುಟ್ಟಿ. ಅಗಸಿಬಾಗಿಲಿನಿಂದ ಊರಕೆರೆದಾರಿಯತನಕ, ದೊಡ್ಡಬಾವಿರಸ್ತೆಯಿಂದ ಪಾಳುಕಿಲ್ಲೆಯುದ್ದಕ್ಕೂ ಪಥಸಂಚಲನ. ದನವೊಂದು ಸೆಗಣಿ ಹಾಕುವ ಮುನ್ಸೂಚನೆ ಕೊಡುತ್ತಿದೆ ಎನ್ನುವಾಗಲೇ ಓಟಕಿತ್ತ ಹುಡುಗಿಯರು ಗುಂಪು ಇಳಿಯುವುದು ಹುಚ್ಚು ಸ್ಪರ್ಧೆಗೆ. ನೇರವಾಗಿ ತನ್ನ ಬುಟ್ಟಿಗೇ ಬೀಳಲಿ ಸೆಗಣಿ ಎಂದು ಬೇಡಿಕೊಳ್ಳುತ್ತ, ಅದು ಬೀಳುವ ರಭಸಕ್ಕೆ ಧಡಕ್ಕನೇ ಬುಟ್ಟಿ ನೆಲಕ್ಕೆ ಕುಕ್ಕರಿಸಿಬಿಡುವ ಎಳೆಕೈಗಳು. ಮುಗಿಬಿದ್ದು ಬಳಿದುಕೊಂಡ ಸಂತೃಪ್ತ ಕಣ್‌ಗಳ ಪುಟ್ಟ ಒಡತಿಯರು. ಹಿಂಜರಿದ ಸಪ್ಪು ಮೋರೆಯ ಕಿರಿಕೂಸುಗಳು, ಬನ್ನಿ ಸಿಕ್ಕಷ್ಟರಲ್ಲೇ ಹಂಚಿಕೊಳ್ಳುವಾ ಎಂದು ಅಮ್ಮ-ಅಕ್ಕನ ಪಾತ್ರ ವಹಿಸುವ ತುಸು ದೊಡ್ಡ ಹುಡುಗಿಯರು... ಒಟ್ಟಿನಲ್ಲಿ ಕತ್ತಲಾಗುತ್ತಿದ್ದಂತೆ ತುಂಬಿದ ಸೆಗಣಿ ಬುಟ್ಟಿ ಆ ಎಲ್ಲ ಎಳೆಕತ್ತುಗಳನ್ನೂ ನೋಯಿಸಿಬಿಡುತ್ತಿತ್ತು. ಆದರೆ ಮಾರನೆಯ ದಿನ ಹಟ್ಟಿಹಬ್ಬದ ಖುಷಿಯಲ್ಲಿ ಅದೆಲ್ಲ ಹೆಸರಿಲ್ಲದ ಊರಿಗೆ ಮಾಯ!

ಒಮ್ಮೆಯೂ ಅಮ್ಮ ನನಗೆ ಆ ಪುಟ್ಟ ಗೋಪಿಕೆಯರೊಡನೆ ಕಳಿಸಲೇ ಇಲ್ಲ. ಪ್ರತಿ ವರ್ಷವೂ ನನ್ನದು ಇದೇ ರಾಗ ಅಮ್ಮನದು ಅದೇ ಹಾಡು. . . ಆದರೆ ಮುಖ ಸಣ್ಣ ಮಾಡಿ ಕುಳಿತವಳಿಗೆ ಮತ್ತೆ ಅರಳುವಂತೆ ಮಾಡುತ್ತಿದ್ದುದು ಶೆಟ್ಟರ ಬಸಲಿಂಗಮ್ಮನ ತಲೆ ಏರಿಬಂದ ಸೆಗಣಿಬುಟ್ಟಿಯೇ.

ಬೆಳಗ್ಗೆ ನಾಲ್ಕೈದಕ್ಕೆಲ್ಲ ಎದ್ದು, ನಿದ್ದೆಗಣ್ಣಲ್ಲೇ ಸೆಗಣಿಗೊಂದು ಮನುಷ್ಯನಾಕಾರ ಕೊಟ್ಟು ಪಾಂಡವರ ಕಣ್‌ಬಿಡಿಸುವದರತ್ತ ತಲ್ಲೀನ. ಪಾಂಡವರೊಂದಿಗೆ ಕೌರವರನ್ನೂ ಕೂರಿಸುವ ದೊಡ್ಡಹೊರೆ. ಬಿಳಿ ಪೇಟಿಕೋಟು ಅದಕ್ಕೆ ಸ್ವತಃ ಸಾಕ್ಷಿ. ಕೌರವರ ವಂಶವನ್ನೆಲ್ಲ ಒಪ್ಪಗೊಳಿಸುವ ತ್ರಾಣ, ಸಮಯ ಇಲ್ಲವಾದ್ದರಿಂದ ಪ್ರಮುಖ ಸಹೋದರರನ್ನಷ್ಟೇ ಪ್ರತಿಷ್ಠಾಪಿಸಿ, ಹಿತ್ತಲಿಗೆ ಓಟವೇ... ಆರಂಭದ ಉತ್ಸಾಹ ಕೊನೆಗಿರುತ್ತಿರಲಿಲ್ಲ ಎಂದರೂ ಸರಿಯೇ. ಕೊನೆಗೆ ಮತ್ತೆ ಉತ್ಸಾಹ ತುಂಬಿಕೊಳ್ಳುವುದು- ಬೆಟ್ಟದ ಆಕಾರದಲ್ಲಿ ಮೈದಳೆದ ಅವರ ದೇಹ ಅಲಂಕರಿಸುವುದರಲ್ಲಿ. ರುಂಡ-ಮುಂಡಕ್ಕೆ, ಕಾಳುಗಳಿಂದ ಕಣ್ಣು-ಬಾಯಿ, ತಲೆ ಮೇಲೊಂದು ಉತ್ತರಾಣಿ ಕಡ್ಡಿ ಚೆಂಡುಹೂವು ಸಿಕ್ಕಿಸಿ, ಅರಿಶಿಣ ಕುಂಕುಮ ಏರಿಸಿ ಕುಳ್ಳರಿಸಿಬಿಟ್ಟರೆ ಥೇಟ್ ಪಟ್ಟದರಸರೇ... ಎಲ್ಲ.

ದೇವರಕೋಣೆಯಿಂದ ಹಿಡಿದು ಅಂಗಳದ ಬಾಗಿಲುಗಳ ಎರಡೂ ಬದಿಗೂ ಅವರದೇ ಸೈನ್ಯ. ಮನೆತುಂಬ ಸುಣ್ಣ-ಕ್ಯಾವಿಯಲ್ಲಿ ಮೂಡಿದುವೆಲ್ಲ ಅವರ ಹೆಜ್ಜೆಗಳೇ. ಕೌರವರ ಗುಂಪಿನಲ್ಲಿರುವ ದೈತ್ಯರ ಮೂಗಿಗೆ ಕೆಂಪು ಮೆಣಸಿನಕಾಯಿ ಚುಚ್ಚುತ್ತಿದ್ದುದು ಅವರ ದುಷ್ಟತನದ ಸಂಕೇತ. ನಂತರ ಸೆಗಣಿ ಬಟ್ಟಲುಗಳಲ್ಲಿ ಮೊಸರ ನೈವೇದ್ಯ. ಚಿಕ್ಕವರಾದ ನಮಗೆಲ್ಲ ಮನೆ ಬೆಕ್ಕು-ನಾಯಿಯಿಂದ ಅದ ಕಾಯುವ ವಿಶೇಷ ಕಾಯಕ. ಕಣ್ಣುತಪ್ಪಿಸಿ ಮೊಸರು ಕುಡಿದ ಕಳ್ಳಬೆಕ್ಕಿನಾಟ ಕಾಣದ ನಾವು, ಓಹ್ ಪಾಂಡವರು ಮೊಸರು ಕುಡಿದರು! ಎಂದು ಬೀಗಿದ್ದೇ ಬಿಗಿದ್ದು.

ಲಕ್ಷ್ಮೀ ಪೂಜೆಯ ನಂತರ ಹೋಳಿಗೆಯೂಟ. ಸಂಜೆಯಾಗುತ್ತಿದ್ದಂತೆ ನೆಂಟರೊಂದಿಗೆ ಪಾಂಡವ-ಕೌರವರನ್ನೂ ಬೀಳ್ಕೊಡುವ ಸಮಯ. ತುಸು ಹೊತ್ತಿನಲ್ಲೇ ಕುಂಬಿ ಮೇಲೆ ಪವಡಿಸುವ ಕೌರವ-ಪಾಂಡವರ ಹಿಂಡು, ಅವರವರ ಎತ್ತರಕ್ಕೆ ಅನುಗುಣವಾಗಿ ಸಾಲಾಗಿ. ಆದರೆ ತಿಂಗಳೊಪ್ಪತ್ತಾಗುತ್ತಿದ್ದಂತೆ ಕೆಲವರು ಸತ್ವ ಕಳೆದುಕೊಂಡು, ಬೀಸುವ ಒಣಗಾಳಿಗೆ ಒಬ್ಬೊಬ್ಬರಾಗಿ ಮಾಳಿಗೆಯಿಂದ ಉರುಳಿ ನೇರ ನೀರೊಲೆಯ ಬಾಯಿಗೇ. ಆ ಒಲೆಯ ಗಂಟಲಿಗೆ ಸಿಕ್ಕಿಹಾಕಿಕೊಳ್ಳುವ ಭೀಮ, ಧುರ್ಯೋದನನಂಥ ದೈತ್ಯದೇಹಿಗಳಿಗೆ ಕಟ್ಟಿಗೆಯ ಪೆಟ್ಟು ಕಟ್ಟಿಟ್ಟದ್ದೇ. ಎತ್ತಿ ಬೀಳಿಸಿ, ಉರುಳಾಡಿಸಿ ಅಂತೂ ಅವರನ್ನೆಲ್ಲ ಅಗ್ನಿಗೆ ಸಮರ್ಪಿಸುತ್ತಿದ್ದುದರಲ್ಲಿ ಅದೇನೋ ಹುಚ್ಚುಶ್ರದ್ಧೆ! ಕೊರೆವ ಚಳಿಗೆ ಕಾಲುಮುದುಡಿ ಬಿಸಿಬಿಸಿ ನೀರು ಸುರಿದುಕೊಂಡಾಗಿನ ಹಿತದ ಪಾಲಿನಲ್ಲಿ ಅವರೆಲ್ಲರೂ...

***

ಆಗೆಲ್ಲ ನೀವಿದ್ದಿರಿ. ಈಗ ನಾನೊಬ್ಬಳೇ ಏನು ಮಾಡಲಿ? ಎನ್ನುವ ಅಮ್ಮ, ಐವತ್ತಕ್ಕೆ ಬದಲಾಗಿದ್ದಾಳೆ. ನಲವತ್ತೊಂಭತ್ತಾಗಿದ್ದಾಗಲೂ ಹೀಗಿರಲಿಲ್ಲ. ಹಾಗೇ... ಅರವತ್ತು ತುಳಿದ ಅಪ್ಪನೂ. ಹಬ್ಬ-ಗಿಬ್ಬ ಎಲ್ಲ... ಏನು? ಓದು-ಬರಹ ಮುಖ್ಯ. ಕಾಯಕವೇ ಕೈಲಾಸ ಎಂದು ಆಗೆಲ್ಲ ಬೆನ್ನುಹತ್ತುತ್ತಿದ್ದವರು, ಈ ದೀಪಾವಳಿಗಾದರೂ ಬರಬಾರದೇ? ದೊಡ್ಡ ಹಬ್ಬ. ನೀವಿರದೆ ಹೇಗೆ? ಎಂದು ಫೋನಾಯಿಸುತ್ತಿದ್ದಾರೆ. ಹಾಗಂತ ಅಪ್ಪನ ವಿಚಾರಗಳು ಬದಲಾಗಿಲ್ಲ. ಅಪ್ಪನೂ ಬದಲಾಗಿಲ್ಲ. ಅವರಿಗೆ ಈಗ ಹಬ್ಬ ನೆಪವಷ್ಟೇ.

ಆಗಾಗ ನೆನಪುಕ್ಕಿಸಿ, ಬಿಕ್ಕುವಂತೆ ಮಾಡುವ ಹಳೆಯ ದಿನಗಳಿಗೆಗಳು ಹೇಳುತ್ತಿವೆ ಒಟ್ಟಾಗಿ- 'ನಿಲ್ಲದಿರು ನೋಡದಿರು ತಿರುಗಿ ಹಿಂದೆ, ಬಾಳಪಯಣದ ಬಾಹುಒಳಗೆಲ್ಲವೂ ಹೀಗೆ... ಹೊಸತೆಲ್ಲವೂ ಹಿಗ್ಗೇ. ಅದರೊಂದಿಗೆ ಕಳೆದುಹೋಗುವ ನೋವೂ ಹೊಸತೇ. ಹೊಸತರ ಬೆನ್ನಿಗೆ ಹಳೆಯದು. ಹಳೆಯದರ ಎದೆಯೊಳಗೆ ಮತ್ತೆ ನಾವು.

***

ಬೆಳಗಾದರೆ ಬೆಳಕ ಹಬ್ಬ. ಮೈಒರೆಸಿಕೊಂಡು ನಳನಳಿಸುತ್ತಿವೆ ಮಾವಿನೆಲೆ. ಆಧಾರವಿಲ್ಲದೆ ನಿಲ್ಲುವುದು ಹೇಗೆಂಬ ತಕರಾರು ಬಾಳೆಕಂಬಗಳದು. ನಾರಿನೊಂದಿಗೆ ಸ್ವರ್ಗ ಏರುವ ಆತುರ ಚೆಂಡು-ಸೇವಂತಿಗೆಯದು. ಚುಚ್ಚಬೇಡಿ ನಮ್ಮ ಮೈಗೆ ಗಂಧಕಡ್ಡಿ ಎಂದು ಭಿನ್ನವಿಸಿಕೊಳ್ಳುತ್ತಿವೆ ಸೇಬು-ಸೀತಾಫಲ-ಚಿಕ್ಕು-ಬಾಳೆ. ಅವ ತಂದಿಟ್ಟಿದ್ದಾನೆ ಹೊಸ ಪ್ರಣತೆ. ಹೊಸೆಯಬೇಕು ಬತ್ತಿ. ಹಾಕಬೇಕು ಎಣ್ಣೆ. ಹಚ್ಚಬೇಕು ದೀಪ. ಕಿಟಕಿಯಾಚೆಗಿನ ಗುಲಾಬಿ ಟೊಂಗೆ ಚಿಗುರೊಡೆಯಬಹುದು ಇನ್ನೇನು. ಉದುರಲೇಬೇಕು ಸಾವಕಾಶ ತುಣುಕು ತುಣುಕು ಸೆಗಣಿ. ಹೇಳಬೇಕಿನ್ನು ಅವನಿಗೆ ನಿಲ್ಲಿಸು ನಿನ್ನ ಸೋಮಾರಿ ಜೋಗುಳವ...

4 comments:

shivu K said...

ಸಗಣಿಗಾಗಿ ಕೋಲೆಬಸವನ ಹಿಂದೆ ಬೀಳುವುದು, ಪಾಂಡವರ ಆಕಾರ, ಕೌರವರ ದುಷ್ಟತನಕ್ಕೆ ಮೆಣಸಿನಕಾಯಿ, ನಂತರ ನೀರೊಲೆಗೆ ಬಿಸಿನೀರಿಗೆ, ಗುಲಾಬಿಗಳ ಸಗಣಿ ಟೊಪ್ಪಿಗೆ, ದೀಪಾವಳಿ ಅಲಂಕಾರದ ವರ್ಣನೆ ಬಲು ಸೊಗಸಾಗಿದೆ. ಅದರಲ್ಲೂ ನಿಮ್ಮದೇ ಶೈಲಿಯಲ್ಲಿರುವ ಬರವಣಿಗೆ ನನ್ನ ಬಾಲ್ಯದ ದೀಪಾವಳಿಯನ್ನು ನೆನಪಿಸಿತು. ಹೀಗೆ ಬರೆಯುತ್ತಿರಿ....

Jagali bhaagavata said...

ಈ ಬ್ಲಾಗಿನಲಿ ಹೊಸ ಪೋಸ್ಟು ಎಲ್ಲಿ ಹುಡುಕಲಿ? ಹಳೆ ಲೇಖನಗಳನ್ನೆ ಮತ್ತೆ ಮತ್ತೆ ಹಾಕ್ತಿದೀರಾ?

ಸುಶ್ರುತ ದೊಡ್ಡೇರಿ said...

ಫಸ್ಟ್ ಪ್ಯಾರಾ ಸೂಪರ್.

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

ತುಂಬಾ ಇಷ್ಟವಾಯಿತು ನೆನಪುಗಳ ಸಿಹಿ/ಕಹಿ ಮೆರವಣಿಗೆಗಳು. ಮೊದಲಾರ್ಧ ಮತ್ತೂ ಚೆನ್ನಾಗಿದೆ.