Wednesday, November 26, 2008

ಜನವರಿಗೆ ಮುನ್ನ...

ಈಗೀಗ ನೀ ಹೀಗೆ.

ಊರಿಗೆಲ್ಲ ಕಂಬಳಿ ಹೊದೆಸಿ ಬೇಗ,

ಮರೆಯಲ್ಲೇ ಮೆರೆಯುತ್ತಿ

ತೊಟ್ಟು ಬಿಳಿ ಶರಾಯಿ-ಕೋಟು


ಕಿರುಗೂಸಿನಿಂದ್ಹಿಡಿದು

ನರೆ ಮರೆತು ಹರೆಯ

'ಸಂ‌'ಭ್ರಮಿಸುವವರೆಲ್ಲರಿಗೂ

ಕಣ್ಣ ಮಿಟುಕಿಸುತ್ತೀ, ನಾನಿಲ್ಲವೇ ಎಂದು...

ನಡೆದದ್ದೇ ದಾರಿ, ನೋಡಿದ್ದೇ ನೋಟ.

ಬೀಗುತ್ತಿ ಹೂಡಿದ್ದೇ ಆಟವೆಂದು.


ಎದೆ ಕೊಡುವುದಿಲ್ಲ,

ಚಾಚುವುದಿಲ್ಲ ತೋಳು

ಮುಂದಲೆ ಸವರಿ ಸೂಸುವುದಿಲ್ಲ ಮಮತೆ,

ಮಾತಂತೂ ಮೊದಲೇ ಇಲ್ಲ.

ಮುತ್ತೆಂದರೇ...?! ಎನ್ನುವ ನಿನಗೆ

ಉಸಿರ ಕಚಗುಳಿಯ ಧ್ಯಾನವೇಕೋ?

ನಿಲ್ಲು ಒಮ್ಮೆ, ಹೇಳಿ ಹೋಗು ಉತ್ತರ.


ಅಳುಕೆ? ಅಂಜಿಕೆಯೇ?

ಹೊದೆಸಿದ ಕಂಬಳಿ ಕಪ್ಪೆಂದು

ಅವರು ಕನಲುತ್ತಿಲ್ಲ ಬಿಡು.

ಬದಲಿಸಿದಾಗಲೆಲ್ಲ ಮಗ್ಗಲು,

ಹೊಸ ಬಣ್ಣ ತೊಟ್ಟು

ಸುಖಿಸಿ, ಸಂಭ್ರಮಿಸುತ್ತಿದ್ದಾರೆ

ನೀ ಹಾಕಿದ ಕನಸ ಚಪ್ಪರದಡಿಯೇ.

ಇನ್ನು ನಿನ್ನ ಬಿಳಿ ಶರಾಯಿ-ಕೋಟಿಗ್ಯಾವ ಆಸೆ?

ಗೊತ್ತಿದೆ ಅವರಿಗೂ ನೇಯುವ ಕನಸಿಗೆ

ಕಡುಕತ್ತಲೆಯೇ ಬೇಕೆಂದು.


ಅದಕ್ಕೇ,

ನನ್ನದೊಂದು ವಿನಂತಿ.

ಇನ್ನೊಂದು ತಿಂಗಳು,

ಹರಿಯುತ್ತದೆ ಮತ್ತೊಂದು ಹೊಸ ಬೆಳಗು

ಅದರ ತೆಕ್ಕೆಯೊಳಗೆ ಅವರೆಲ್ಲ.

ಕಾವಿಟ್ಟ ಅವರ ಕನಸುಗಳ

ಬಣ್ಣ ಕದಡದಂತೆ

ಮತ್ತೆ ಮತ್ತೆ ಹೊದೆಸುವೆಯಾ ನನಸಗಂಬಳಿ?

ಸರಿಸಿ ಕತ್ತಲೆ ಕಂಬಳಿ!


ಚಿತ್ರ : ಅರವಿಂದ್

10 comments:

ಸುಶ್ರುತ ದೊಡ್ಡೇರಿ said...

ಬೆಚ್ಚಗಿದೆ ಕವಿತೆ.. ಕಂಬಳಿಯಂತೆ.

ಚಂದ್ರಕಾಂತ ಎಸ್ said...

ನಿಮ್ಮ ಗದ್ಯದಂತೆಯೇ ಪದ್ಯವೂ ಸೊಗಸಾಗಿದೆ.

chetana said...

Tumba ishtavaytu kavite.
becchaneya feelingu!
nalme,
Chetana

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಯಾವಾಗಲೂ ನಿಮ್ಮ ಕವನಗಳು ನಂಗೆ ತುಂಬಾನೇ ಇಷ್ಟವಾಗುತ್ತವೆ..ಖುಷಿ ಅನುಭವಿಸುತ್ತೇನೆ. ಯಾಕ್ರೀ ಹೊಟ್ಟೆಗಿಚ್ಚು ಅಂದೀರಿ..ನಾನೆಷ್ಟು ಬರೆದ್ರೂ ನಿಮ್ಮಷ್ಟು ಚೆನ್ನಾಗಿ ಬರೆಯಲ್ಲಾರೀ.ಹಿಹಿಹಿ
-ಚಿತ್ರಾ

sunaath said...

ಶ್ರೀದೇವಿ,
ನಿನ್ನ ಕವನಗಳು ಕನ್ನಡ ಕಾವ್ಯಲೋಕದಲ್ಲಿ ಹೊಸದೊಂದು ಬಗೆಯವೇ ಆಗಿವೆ. ಇತ್ತ ನವ್ಯ ಕಾವ್ಯದಂತೆ ಪ್ರತಿಮೆಗಳನ್ನು ಬಳಸುತ್ತಲೇ, ನವೋದಯದ ಆಪ್ತಭಾವನೆಯನ್ನೂ ಸಹ ಒಳಗೊಂಡಿವೆ.
ಅಲ್ಲದೆ ಮತ್ತೊಂದು ವೈಶಿಷ್ಟ್ಯ. ಕವನದಲ್ಲೆಲ್ಲೊ ಒಂದೆಡೆ clue ಇರುವದರಿಂದಲೇ ಕವನ ಅರ್ಥವಾಗುತ್ತವೆ.
ಒಟ್ಟಿನಲ್ಲಿ ತುಂಬಾ ಇಷ್ಟವಾಗುವ ಕವನಗಳು.

ರಾಘು ತೆಳಗಡಿ said...

ನಡೆದದ್ದೇ ದಾರಿ, ನೋಡಿದ್ದೇ ನೋಟ........ ಎನ್ನುತ್ತಾ ಹೊಸಗನಸ ಜೊತೆ ಹೊಸತನದ ಭರವಸೆಯ ನಿನ್ನಿ ಕವನ ಸುಂದರ ಶ್ರೀ.

ಋಷ್ಯಶೃಂಗ said...

ಮೇಡಂ,
ಬಿಡುವಿದ್ದಾಗ ನನ್ನ ಬ್ಲಾಗಿಗೂ ಭೇಟಿ ಕೊಡಿ. ನಿಮ್ಮ ಬ್ಲಾಗ್ ಓದುಗ ನಾನು. ನಿಮ್ಮ ಕವಿತೆ ಹೆಚ್ಚು ಇಷ್ಟ. ರಾಗಗಳ ಬೆನ್ನೇರಿ ನೀವು ಬರೆಯುವ ಹಾಡುಹಸೆ ಮತ್ತೂ ಇಷ್ಟ. ಸಂಗೀತದ ಬಗ್ಗೆ ತಿಳಿದುಕೊಂಡಿರುವ ನೀವು ಚೆನ್ನಾಗಿ ಬರೆಯುತ್ತೀರಿ ಅನ್ನುವುದಕ್ಕಿಂತ ಮನಸ್ಸನ್ನೇ ಬ್ಲಾಗು ತುಂಬ ಹರವಿಬಿಡುತ್ತೀರಿ ಎಂಬುದು ನನ್ನ ಅನಿಸಿಕೆ. ನಾನು ದೊಡ್ಡ ಬರಹಬಾರ ಅಲ್ಲ. ನನ್ನ ಮಿತಿಯನ್ನು ಹೇಳಿ. ನಮಸ್ಕಾರ
ಇಲ್ಲಿದೆ ನನ್ನ ಈಮೇಲ್. ಪತ್ರಿಸಿ.
rishyashringaa@gmail.com

ranjith said...

ನಮಸ್ತೆ,

ಕವನ ಚೆನ್ನಾಗಿದೆ. ಸಾಲುಗಳ ಮಧ್ಯೆ ಖಾಲಿ ಜಾಗ ಬಿಟ್ಟು pause ನ್ನು ಬಹಳ ಪರಿಣಾಮಕಾರಿಯಾಗಿ ಬಳಸುತ್ತಿದ್ದೀರಿ..

Anonymous said...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

Ramesh BV (ಉನ್ಮುಖಿ) said...

ಕಮ್ಮಗಿನ ಕವಿತೆ :)