Friday, December 5, 2008

ಲೆಕ್ಕ ಸರಿಹೋಗುತ್ತಿಲ್ಲ





ತನ್ನ ಉಸಿರಿಗೂ ಬೆಲೆ ಕಟ್ಟುವಷ್ಟು

ಜಾಣೆ ಈಕೆ ಈಗ.

ಉಸಿರತುಂಬಿ ಅವುಗಳ ಕತ್ತಿಗೊಂದೊಂದು

ಗಂಟು ಹಾಕುತ್ತಲೇ,

ಹಾರಿಹೋಗದಂತೆ ಹಿಡಿಯುವಷ್ಟು ಬಲಿತಿವೆ ಕೈಗಳೂ.

ಹತ್ತರಿಂದ ಹತ್ತರವರೆಗೂ ಇದೇ ಕಾಯಕ.

ಬಣ್ಣ ಬೇರೆ-ಬೇರೆಯಾದರೂ ಒಳಗಿನ ಉಸಿರೊಂದೆ.

ಆ ಉಸಿರಿಗೊಂದೇ ಬೆಲೆ.



ಹತ್ತಕ್ಕೆ ಎರಡೇ ನಿಮಿಷ.

ಈವತ್ತಿಗೈವತ್ತಾದರೆ ಸಾಕು

ನಾಳೆಯದು ನಾಳೆಗೆಂದು

ಕಾಯತ್ತಿದ್ದಾಳೆ ಕೊನೆಯ ಗಿರಾಕಿಗೆ.



ಹತ್ತು ರೂಪಾಯಿ ಎಂದರೆ

ನೂರೆನ್ನುತ್ತಿದ್ದಾನೆ ಅವ.

ಅವಳು ಹತ್ತು.

ಅವ ನೂರು

ಮತ್ತೆ ಅವಳು ಹತ್ತು

ಮತ್ತೆ ಅವ ನೂರು.



ಮೂರು ಕೊಡಬಲ್ಲೆ ಈ ಹೊತ್ತಲ್ಲಿ.

ನೂರೆಲ್ಲಿಂದ?

ಉಗುಳುನುಂಗುತ್ತಲೇ ಮುಷ್ಠಿಬಿಗಿಗೊಳಿಸುತ್ತಿದ್ದಾಳೆ.

ಅವ ಬಿಡುತ್ತಿಲ್ಲ.


ಇನ್ನೂರಾದರೆ? ಎನ್ನುತ್ತಿದ್ದಾನೆ.

ಅವನ ಲೆಕ್ಕವನ್ನೆಲ್ಲ ನುಂಗಿಹಾಕುತ್ತಿವೆ

ಬಸ್ಸು, ಲಾರಿ, ಮೋಟಾರು.


ಹೂಂ...

ಕೊನೆಗೂ ಅರ್ಥವಾಗಲೇ ಇಲ್ಲ

ಅವನ ಲೆಕ್ಕ ಇವಳಿಗೆ.


ಉಸಿರಿಗಷ್ಟೇ ಬೆಲೆ ಕಟ್ಟುವುದು ಗೊತ್ತಿದ್ದಾಗ

ಅರ್ಥವಾದೀತಾದರೂ ಹೇಗೆ ಇಂಥ ಲೆಕ್ಕ?

6 comments:

shivu K said...

ಶ್ರೀದೇವಿ ಮೇಡಮ್,
ಉಸುರಿಗೆ ಬೆಲೆ ಕಟ್ಟಲಾದಿತೆ!

ನಿಜಕ್ಕೂ ಅದ್ಬುತ ಕವನ.

ಶಾಂತಲಾ ಭಂಡಿ said...

ಶ್ರೀದೇವಿ...
ಬದುಕು ಇಷ್ಟೆಯೇ...ಒಬ್ಬರ ಲೆಕ್ಕ ಇನ್ನೊಬ್ಬರಿಗೆ ಅರ್ಥವಾಗದ ಆಚಾರದ ನಡುವೆ ಮೋಸ-ಮುಗ್ಧತೆಗಳ ನಡುವೆ ಭಾಗಾಕಾರ. ಶೇಷ ನಿಷ್ಯೇಶ.
ಚಂದ ಬರೆಯುತ್ತೀರಿ. ಓದಬೇಕೆನ್ನಿಸುತ್ತದೆ.

ಸಿಮೆಂಟು ಮರಳಿನ ಮಧ್ಯೆ said...

ಶ್ರೀದೇವಿಯವರೆ...
ನಿಮ್ಮ ಕವನ ತುಂಬಾ ಚೆನ್ನಾಗಿದೆ....
ತುಂಬಾ ಸಹಜವಾಗಿ, ಸರಳವಾಗಿ...
ಚೆನ್ನಾಗಿದೆ...

neelihoovu said...

ನಿಮ್ಮ ಗದ್ಯಕ್ಕಿಂಥ ಯಾಕೋ ಕವಿತೆಗಳೇ ಮುದ ನೀಡುತವೆ...

"ನನ್ನ ಒಂದೆರಡು ಕ್ಷಣಗಳ ಸ್ವತ್ತು
ಸ್ವತಂತ್ರವಾಗಿ ಹಾರುತಿತ್ತು,
ಉಸಿರು ಹೊತ್ತು ಹೋಗುತಿತ್ತು,
ಖಾಲಿ ನೀಲಿಯಲಿ ಭ್ರೂಣದಂತೆ..
ಯಮನ ಜೋಳಿಗೆಯಂತೆ ಕಾಣುತಿತ್ತು
ತುಂಬು ಬಲೂನು...

ನನ್ನ ಉಸಿರು ಹೋಯಿತು
ಉಸಿರು ಹೋಯಿತು ಎಂದು
ಜನರೆಲ್ಲಾ ಕೂಗಿದರು.."

ಚೆನ್ನಾಗಿದ್ಯ ಮೇಡಂ?

Chamaraj Savadi said...

ಲೆಕ್ಕ ಅರ್ಥವಾಗುವುದು ಕಷ್ಟ. ಅರ್ಥವಾಗದಿದ್ದರೆ ಇನ್ನಷ್ಟು ಕಷ್ಟ. ಬದುಕು, ಬಹಳಷ್ಟು ಸಲ ಲೆಕ್ಕ ತಪ್ಪಿಸುತ್ತದೆ. ತಪ್ಪಿದ ಲೆಕ್ಕ ಲೆಕ್ಕಾಚಾರ ಕಲಿಸುತ್ತದೆ. ಆದರೆ, ಲೆಕ್ಕ ಕಲಿತ ಕೂಡಲೇ ಭಾವನೆಗಳ ಲೆಕ್ಕಾಚಾರ ತಪ್ಪತೊಡಗುತ್ತದೆ.

ಕಲಿತರೂ ಕಷ್ಟ, ಕಲಿಯದಿದ್ದರೂ ಕಷ್ಟ. ಕಲಿತು, ಕಲಿಯದಂತಿದ್ದರೆ ಸರಿಯೇನೋ!

ಚೆನ್ನಾಗಿದೆ ಕವನ.

- ಚಾಮರಾಜ ಸವಡಿ

Harish kera said...

ಅವಳ ಲೆಕ್ಕಾಚಾರ ಉಸಿರು- ಒಡಲಿನದ್ದು. ಅವನ ಲೆಕ್ಕ ಲಾಲಸೆಯದ್ದು. ಇಬ್ಬರ ಲೆಕ್ಕಗಳೂ ಬೇರೆ ಆದ್ದರಿಂದಲೇ ಕೂಡುವುದಿಲ್ಲ. ಚೆನ್ನಾಗಿದೆ.
- ಹರೀಶ್ ಕೇರ