Sunday, December 7, 2008

ನೋ ಪೆನ್ ಪುಟ್ಟಾ...
ಯಾಕೋ ಭತ್ತದ ಹಸಿರು ರಜಾಯಿ ಬೇಡವಾಗಿತ್ತೇನೋ ಅವನಿಗೆ. ನೀರ್‌ಮೋಡದ ಮಧ್ಯೆ ಮೈಹರವಿಕೊಂಡಾಗ ನೋಡಬೇಕಿತ್ತು ಅವನನ್ನ. ತನ್ನನ್ಯಾರೋ ಗಮನಿಸುತ್ತಿದ್ದಾರೆ ಎಂದಾಕ್ಷಣ ಸಾಲು-ಮರಗಳ ಹಿಂದೆ ಕೆಂಪಾಗುತ್ತಿದ್ದ. ಅವನನ್ನೇ ನೋಡುತ್ತಿದ್ದ ನನ್ನವನೂ. ಅವನದೊಂದು ಚೆಂದದ ಫೋಟೊಗಾಗಿ ನನ್ನವ ಏನೆಲ್ಲ ಸರ್ಕಸ್ ಮಾಡಿದರೂ, ಕೇರಳದ ಪಲ್ಲತುರ್ತಿ ಹಿನ್ನೀರಿನ ಆಸುಪಾಸಿನ ಹಳ್ಳಿಗರ ಮನೆಗಳು ಅವನನ್ನು ಅಡಗಿಸಿಬಿಡುತ್ತಿದ್ದವು. ತೆಂಗು-ಬಾಳೆ-ಮಾವಿನಮರಗಳೋ ನಮ್ಮೂರಿನ ಹುಡುಗನ ಬಿಟ್ಟುಕೊಡೆವು ಎಂದು ಅಲ್ಲಲ್ಲಿ ಹಸಿರು ಸರಪಳಿಯನ್ನೇ ನಿರ್ಮಿಸಿಬಿಟ್ಟಿದ್ದವು. ಅಷ್ಟಕ್ಕೂ ನಾವೇನು ಆ ನಸುಗೆಂಪಿನವನನ್ನ ಕರೆದೊಯ್ದೇ ಬಿಡುತ್ತಿದ್ದೆವೆ? ನೋಡನೋಡುತ್ತಿದ್ದಂತೆ ಅತ್ತ ಅವ ಕರಗೇ ಹೋಗಿದ್ದ, ಬರುವೆ ನಾಳೆಗೆ ಎಂದು ಹೇಳದೆ! ನಾಳೆಯೂ ಇರುವೆಯಾ ಎಂದು ಕೇಳದೆ.

ಹೌದು...ಅವನ್ಯಾಕೆ ಕೇಳಬೇಕು? ಹೇಳಬೇಕು ನಾನ್ಯಾಕೆ? ನಿಮಗೇನಾದರೂ ಗೊತ್ತಾ? ಪ್ರಭಾತಪೇರಿ ಹೊರಟ ಬಾತುಕೋಳಿಗಳ ಕೇಳೋಣವೆನ್ನಿಸಿತು. ಆದರೆ ಯಾಕೋ ಅವೆಲ್ಲ, ಅಯ್ಯೋ ಈ ಹೇಳುವುದು ಕೇಳುವುದು ನಮಗೆ ತಿಳಿಯದು. ಏನಿದ್ದರೂ ಹೀಗೆ ತೇಲುವುದಷ್ಟೇ ಗೊತ್ತು. ಬಿಟ್ಟುಬಿಡಿ ನಮ್ಮನ್ನು ನಮ್ಮ ಪಾಡಿಗೆ. ಕೋರಸ್‌ ಹೇಳಿ ಚೆದುರೇಬಿಟ್ಟವು.

ಒಂದುಗಂಟೆ ಸಮಯವಿತ್ತು ಪೂರ್ತಿ ಕತ್ತಲು ಕಟ್ಟಲು. ನಿಧಾನವಾಗಿ ನಮ್ಮ ಬೋಟ್ ಹೌಸ್ ದಡದ ಮೈಗಂಟಿಕೊಂಡು ನಿಂತಿತು. ಬೋಟ್ ಹೌಸನ್ನು ತೆಂಗಿನ ಮರಕ್ಕೆ ಒಪ್ಪಿಸಿ, ಬೆಳಗಿನವರೆಗೂ ಕಾಯು ಕಲ್ಪವೃಕ್ಷವೇ ಎಂದನು ಚಾಲಕ. ಮುನ್ನೂರು ಜಾಸ್ತಿಯಾಯಿತೆಂದು ನನ್ನವ ನಡುವಯಸ್ಸಿನ ನಾಡದೋಣಿ ನಾವಿಕನೊಂದಿಗೆ ಚೌಕಾಶಿಗಿಳಿದಿದ್ದ ನೋಡಿ, 'ಬೇಗ ಬಂದುಬಿಡಿ, ರಾತ್ರಿ ಊಟಕ್ಕೆ' ಎನ್ನುತ್ತ ಅಡುಗೆ ಮನೆ ಹೊಕ್ಕ ಅಡುಗೆಯವ.

ತುಸು ಹೊತ್ತಿನಲ್ಲಿಯೇ 'ನೂರೈವತ್ತಕ್ಕೆ ಬನ್ನಿ...' ವಯಸ್ಸಾದ ನಾವಿಕನ ದನಿಗೆ ದಡಬಡಿಸಿದ್ದವು ನಮ್ಮೆರಡೂ ಜೊತೆ ಕಾಲುಗಳು. ಸಣ್ಣದೋಣಿಯ ಅಜ್ಜನಿಗ್ಯಾಕೋ ಚೂರು ಭಯವಾದಂತಿತ್ತು. ಹೀಗೆ ದಡಬಡಿಸಿದರೆ ದಡ ಸೇರಿದಂತೇ... ಎಂದು ಹೇಳುತ್ತಿದ್ದನೇನೋ ಭಾಷೆ ಗೊತ್ತಿದ್ದರೆ. ಆದರೂ ಮನೆಯಜ್ಜನ ಅಕ್ಕರೆ-ಕಾಳಜಿ ಅವನ ನಗೆಯಲ್ಲಿತ್ತು.ನಡೆಯಲ್ಲಿತ್ತು.

ಸಾಲು ಸಾಲು ಮಾವುಮರಗಳು. ಒಂದೂ ಮಿಡಿಯಿಲ್ಲ ಕಾಯಿಲ್ಲ ಎಂದು ಗೊಣಗುತ್ತ, ದೋಣಿಗೆ ತೊಡಕಾದ ತೇಲುಬಳ್ಳಿಗಳ ಹುಟ್ಟಿನಿಂದ ಸರಿಸುತ್ತ ಹೊರಟವಳಿಗೆ, ಹೆಲೋ.... ಎಂಬ ಕೂಗು ತಿರುಗುವಂತೆ ಮಾಡಿತು. ಅಬ್ಬಾ! ಏನು ಏರು-ಜೋರು ದನಿಯದು! ಸೊಂಟದಲ್ಲಿ ಕೀಲಿಗೊಂಚಲಿರಲಿಲ್ಲ. ಅಕ್ಕ-ಪಕ್ಕ ದಾಸಿಯರು ಚಾಮರ ಬೀಸುತ್ತಿರಲಿಲ್ಲ. ಅಡಿಗಡಿಗೆ ಆಳುಗಳೂ ಇರಲಿಲ್ಲ. ಅರಮನೆಯಂತೂ ಊಂಹೂ... ಸೊಂಟದ ಮೇಲೆ ಕೈ ಇಟ್ಟುಕೊಂಡು ಇನ್ನೊಂದು ಕೈಯಿಂದ ಹಾಯ್, ಹೌ ಆರ್‍ ಯೂ? ಎನ್ನಬೇಕೆ? ಆ ಬಾಳೆವನದೊಳಗೆ, ನೀರ ಬದಿಗೆ ಕುಳಿತ ಪುಟ್ಟ ಕುವರಿ...ನಿಜ ಆಕೆ ಸಾಕ್ಷರ ನಾಡಿನ ಅಚ್ಚರಿ! ತೊಳೆಯುತ್ತಿದ್ದ ಪಾತ್ರೆ ಬಿಟ್ಟು, ಕಲ್ಲ ಮೇಲೆ ನಿಂತು 'ಪೆನ್ ಪ್ಲೀಸ್...' ಎಂದಳು. ಆ ಗಳಿಗೆಗೆ ಪೆನ್‌ ಯಾಕೆ ಕೇಳುತ್ತಿದ್ದಾಳೆ ಈ ಹುಡುಗಿ ಎಂಬುದು ಹೊಳೆಯಲೇ ಇಲ್ಲ. ಜೋಬು ಮುಟ್ಟಿಕೊಂಡು, ಬೇಸರದಿಂದಲೇ 'ನೋ ಪೆನ್‌ ಪುಟ್ಟಾ...' ಎಂದಿದ್ದ ನನ್ನವ. ಮೂರ್‍ನಾಲ್ಕು ಬಾರಿ ಕೇಳಿಸಿಕೊಂಡಾಗ ಗೊತ್ತಾಯ್ತು ಅವಳ ಹೆಸರು ಆಹಿರ್ಯ್ಯಾ, ತಾಹಿರ್ಯ್ಯಾ, ಅಲ್ಲ ತಾಹಿರಾ... ಎಂದು. ಪೆನ್ನಿಲ್ಲವೆಂದು ಗೊತ್ತಾದಾಗ ಆಕೆ ಚೂರು ಪೆಚ್ಚುಮೋರೆ ಹಾಕಿದ್ದು ಆ ಕತ್ತಲಲ್ಲೂ ಕಾಣಿಸಿತು. ಅಷ್ಟು ಗತ್ತಿನಿಂದ ಹಾಯ್ ಹೇಳಿ, ಪೆನ್ ಕೇಳಿದ ರೀತಿ ಚೂರು ಇರುಸು-ಮುರುಸು ಮಾಡಿತ್ತಾದರೂ ಅವಳ ಅಕ್ಷರ ಪ್ರೀತಿಗೆ ಮನಸ್ಸು ಶರಣೆಂದಿತ್ತು.

ಇದೆಲ್ಲ ನೋಡಿಯೂ, ಕೇಳಿಯೂ ನಮ್ಮ ದೋಣಿ ಮಾತ್ರ ನಿಧಾನ ಚಲಿಸುತ್ತಲೇ ಇತ್ತು. ಬಹುಶಃ ಇದೆಲ್ಲ ಮಾಮೂಲು ಅದಕ್ಕೆ. ಕ್ಷಣಗಳಷ್ಟೇ. ಅವಳ ಅಮ್ಮನಿರಬೇಕು. ಅತ್ತ ಕಂಕುಳಲ್ಲೊಂದು ಕೂಸಿನೊಂದಿಗೆ ದೊಡ್ಡ ದೊಡ್ಡ ಹೆಜ್ಜೆ. ಅಲ್ಲೇ ಗಿಡದಿಂದ ಚಿಕ್ಕ ಕೊಂಬೆ ಮುರಿದು, ತಾಹಿರಾಗೆ ಏರಿ ಹೊಡೆಯಲು ಹೊರಟಿದ್ದಳು. ಕತ್ತಲಾಯಿತು. ಇನ್ನೂ ತೊಳೆಯದೇ ಆಟವಾಡಿಕೊಂಡಿದ್ದೀಯಾ? ಹೀಗೆ ದಿನಕ್ಕೆ ಬಂದು-ಹೋಗುವವರೆಷ್ಟೋ ಏನೋ...ಎಂದು ಬೈಯುತ್ತಿದ್ದಳೋ ಏನೋ? ಇತ್ತ ಅವಳ ಅಮ್ಮನ ಬೈಗುಳಗಳಿಗೆ ನಾವು ಬೆನ್ನಮಾಡಿ ಹೊರಟರೂ 'ಓಕೆ ಬೈ ಬೈ.ಆಲ್ ದಿ ಬೆಸ್ಟ್' ಹತ್ತರ ಎಳೆಯ ಹುಡುಗಿ ತಾಹಿರಾಳ ದನಿ ಮಾತ್ರ ಕೇಳುತ್ತಲೇ ಇತ್ತು. ಅವಳ ಮಸುಕು ಆಕೃತಿಯೊಂದಿಗೆ.

ಆದರೆ ಅದೇ ಕತ್ತಲಲ್ಲಿ ಮತ್ತಷ್ಟು ಬಾಳೆಗಿಡಗಳ ಪಕ್ಕದಿಂದ ಮತ್ತೊಂದು ಪುಟ್ಟ ಬೆಳಕು. ಪೆನ್... ಪೆನ್.
ತಾಹಿರಾಳಷ್ಟು ಇಂಗ್ಲೀಷು, ವ್ಯವಹರಿಸುವ ಚಾಕಚಕ್ಯತೆ ಇನ್ನೂ ರೂಢಿಯಾಗಿರಲಿಲ್ಲ ಆ ಐದಾರರ ಕೂಸಿಗೆ. ಆದರೆ.. ಮತ್ತೆ ಅದೇ ಉತ್ತರ ನಮ್ಮಿಂದ. ನೋ ಪೆನ್...

ಅಂತೂ ಕೈನಗರಿಯ ಪುಟ್ಟಿಯರಿಗೆ, ಇಲ್ಲಗಳ ಮಾತು ಹೇಳಿ ಬೋಟ್ ಹೌಸ್‌ನೆಡೆ ಮುಖ ಮಾಡಿತು ನಮ್ಮ ನಾಡದೋಣಿ. ನೀರಿನುದ್ದಕ್ಕೂ ದೋಣಿಯಜ್ಜ ಮಲೆಯಾಳಂನಲ್ಲಿ ಏನೇನೋ ಹೇಳುತ್ತಿದ್ದ. ಆದರೆ ಅವನ ಮಾತುಗಳ, ನಮ್ಮ ನೋಟಗಳ ಮಧ್ಯೆ ನಿಲುಕಿದ್ದು ಮಾತ್ರ ಇಷ್ಟು - ಕೈಗರಿಯಂಥ ಹಳ್ಳಿಗರ ಬದುಕದೋಣಿ ಸಾಗುವುದು ; ಹುಟ್ಟು ಹಾಕಿದಾಗಲೇ. ಮೀನು ಹಿಡಿದಾಗಲೇ. ಎಲ್ಲದಕ್ಕೂ ನೀರು-ದೋಣಿ. ದೋಣಿ-ನೀರು.
ಆ ನೀರಬದುಕಿನ ಮನೆಗಳ ತುಂಬ ಪುಟ್ಟ ಪುಟ್ಟ ಅಕ್ಷರ ದೇವತೆಗಳು. ಆ ಅಕ್ಷರದೇವತೆಯೊಂದಿಗೆ ಪ್ರತಿಮನೆಗಳಲ್ಲೂ ನಡೆಯುತ್ತಿತ್ತು ದೇವಿಸ್ತುತಿ. ಅಲ್ಲಲ್ಲಿ ಸಣ್ಣ ಮನೆಯಂಗಳದಲ್ಲೇ ದೀಪಕಂಬಗಳನ್ನಿಟ್ಟುಕೊಂಡು, ಸುತ್ತಲೂ ಕುಳಿತಿದ್ದರು ಹಿರಿ-ಕಿರಿಯರೆಲ್ಲರೂ. ಏಕಸ್ವರದಲ್ಲೇ ಏಕೋಭಾವದಿಂದ ಮಲೆಯಾಳಂ ಸುಶ್ರಾವ್ಯ ಭಕ್ತಿಗೀತೆ ಮನೆಯಿಂದ ಮನೆಗೆ ಕೇಳುತ್ತಲೇ ಇತ್ತು. ಆದರೆ ಒಂದೊಂದು ಮನೆಯದು ಒಂದೊಂದು ಹಾಡು. ಒಂದು ತೆರೆ ದಡಕ್ಕೆ ಅಪ್ಪಳಿಸಿ ಇನ್ನೊಂದು ತೆರೆ ಬರುವಂತಹ ಲಯ.

ಹಾಂ... ಮುಗಿಯಿತು ಕೈನಗರಿ ವಿಹಾರ, ದೋಣಿಯಜ್ಜನಿಗೆ ನೂರೈವತ್ತು ಕೊಡಬೇಕು. ಆದಷ್ಟು ಬೇಗ ಅವನಿಗೆ ವಿದಾಯ ಹೇಳಬೇಕು. ಸುರಕ್ಷಿತವಾಗಿ ಅವನು ಮನೆ ತಲುಪಬೇಕು ಎಂದು ಅವಸರಿಸುತ್ತಿದ್ದರೆ, ನೋಟುಗಳನ್ನು ಗುರುತಿಸದಷ್ಟು ಕಪ್ಪು ಚೆಲ್ಲಿಕೊಂಡು ಕಾಡುತ್ತಿತ್ತು ಕತ್ತಲೆ! ಹೇಗೋ ಕೊಟ್ಟಾಯಿತು ದುಡ್ಡು. ಅತ್ತ ಅವನ ದೋಣಿ ಹೊರಟಿತು.

ಇತ್ತ ನಮ್ಮ ರಸದೋಣಿ. ರಾತ್ರಿಯಿಡೀ ನೀರ ಮೇಲೆ ನಿದ್ರೆ ಎನ್ನುವ ಖುಷಿಯಲ್ಲೇ...
ಆದರೆ ಈಗಲೂ ಈ ಹೊತ್ತಿಗೆ ಬರೆದು ಮುಗಿಸುವಾಗಲೂ ಕೈನಗರಿಯ ಪುಟ್ಟಿಯರು ಯಾಕೋ ಕಾಡುತ್ತಿದ್ದಾರೆ. ಆಗಾಗ ಕತ್ತಲಲ್ಲೂ ಬೆಳಕ ಚೆಲ್ಲಿ ನಕ್ಕು ಮಾಯವಾಗುತ್ತಿದ್ದಾರೆ.

[ಚಿತ್ರಗಳು - ಅರವಿಂದ]

11 comments:

shivu K said...

ಶ್ರೀದೇವಿ ಮೇಡಮ್,

ನಿಮ್ಮ ಪ್ರವಾಸ ಸೂಪರ್ರ್... ನಿಮ್ಮ ಭಾಷೆ ಸೂಪರ್ರ್... ಅಕ್ಷರ ದೇವತೆಗಳಂತೂ ಸೂಪರೋ ಸೂಪರ್ರ್ರ್.......

sunaath said...

Liked it.

ತೇಜಸ್ವಿನಿ ಹೆಗಡೆ- said...

ಶ್ರೀದೇವಿ,

ನಿಮ್ಮ ಬರಹದ ಶೈಲಿ ಚೆಂದವೋ ಇಲ್ಲಾ ನಿಮ್ಮವರು ಹಿಡಿದ ಚಿತ್ರಗಳು ಸುಂದರವೋ ಎಂದೇ ಹೇಳಲಾಗುತ್ತಿಲ್ಲ! ಅಬ್ಬಾ ತುಂಬಾ ರಮಣೀಯ ಚಿತ್ರಗಳು.. ಜೊತೆಗೆ ಅಷ್ಟೇ ಮುದ ನೀಡುವ ಲೇಖನ. ಬಾತುಕೋಳಿಗಳ ಪ್ರಭಾತಪೇರಿ ಹಾಗೂ ಒಂಟಿ ಬೋಟಿನಲ್ಲಿ ನಿಂತ ಅಲಾಪದೊಡತಿ(?) ತುಂಬಾ ಇಷ್ಟವಾದ ಚಿತ್ರಗಳು :)

Anonymous said...

"ಪ್ರಭಾತಪೇರಿ ಹೊರಟ ಬಾತುಕೋಳಿಗಳ ಕೇಳೋಣವೆನ್ನಿಸಿತು"
"ಆ ನೀರಬದುಕಿನ ಮನೆಗಳ ತುಂಬ ಪುಟ್ಟ ಪುಟ್ಟ ಅಕ್ಷರ ದೇವತೆಗಳು"
"ಒಂದು ತೆರೆ ದಡಕ್ಕೆ ಅಪ್ಪಳಿಸಿ ಇನ್ನೊಂದು ತೆರೆ ಬರುವಂತಹ ಲಯ."

ಈ ಸಾಲುಗಳು ನೆನಪಲ್ಲಿ ಉಳಿಯುತ್ತದೆ ಮೇಡಂ... ಒಟ್ಟಾರೆ ಚಂದದ ಬರಹ. ಮತ್ತೆ ಫೋಟೋಗ್ರಾಫಿ ಕೂಡ...:)

ಸಿಮೆಂಟು ಮರಳಿನ ಮಧ್ಯೆ said...

ಶ್ರೀದೇವಿಯವರೆ...
ನಿಮ್ಮ ಬರವಣಿಗೆಯೂ ಕಾವ್ಯದಂತೆ...
ಓದಿದಾಗ ಖುಷಿಯಾಗುತ್ತದೆ..
ಧನ್ಯವಾದಗಳು...

Parisarapremi said...

ಒಳ್ಳೇ ನಿರೂಪಣೆ.. ಸಕ್ಕತ್..

ಎರಡನೆಯ ಚಿತ್ರವನ್ನು, ನಿಮ್ಮೊಪ್ಪಿಗೆಯಿದ್ದರೆ, ನಾನು ಸೇವ್ ಮಾಡ್ಕೋಳ್ಳಲೇ? ಪ್ಲೀಸ್.. :-)

ಚಿತ್ರಾ ಕರ್ಕೇರಾ ದೋಳ್ಪಾಡಿ.. said...

ಶ್ರೀದೇವಿ..ತುಂಬಾ ಚೆನ್ನಾಗಿ ಬರೆದಿದ್ದೀರಲ್ಲಾ..ಚಿಕ್ಕಂದಿನಲ್ಲಿ ನಾನೊಮ್ಮೆ ದೋಣಿಯಲ್ಲಿ ಕೂರಕ್ಕೆ ಹೋಗಿ ಹೆದರಿ ವಾಪಾಸಾಗಿದ್ದು ನೆನಪಾಯಿತು. ಈವರೆಗೆ ಕೂತೇ ಇಲ್ಲ ಅಂದ್ರೆ ನಂಬ್ತೀರಾ? ಇರ್ಲಿ ಬಿಡಿ. ನಿರೂಪಣೆ ಸೂಪರ್ರು..ತುಂಬಾ ದಿನಗಳಾಗಿತ್ತು ನಿಮ್ ಕಡೆ ಬರದೆ..ಬೈಕೋಬೇಡಿ..ಒಳ್ಳೆ ಬರಹ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಕಣ್ರೀ..
-ತುಂಬು ಪ್ರೀತಿ,
ಚಿತ್ರಾ

ಸುಧನ್ವಾ ದೇರಾಜೆ, ಬೆಂಗಳೂರು said...

ತುಂಬ ಹೊಟ್ಟೆ ಉರಿಸಿದ್ದೀರಿ. ಥ್ಯಾಂಕ್ಸ್ !

shreedevi kalasad said...

parisarapremiyavare, eradaney chithra balasikolli

shreedevi kalasad said...

@ಸುಧನ್ವಾ, ಎಲ್ಲದಕ್ಕೂ ಥ್ಯಾಂಕ್ಸ್ ಹೇಳ್ತಿರಲ್ರಿ...

@ಚಿತ್ರಾ, ನಂಗೂ ಚಿಕ್ಕವಳಿದ್ದಾಗ ತುಂಬಾ ಭಯ ಆಗ್ತಿತ್ತು. ಈಗ್ಲೂ ಆಗತ್ತೆ. ಯಾರಾದ್ರೂ ಬದಕಸ್ತಾರೆ ಬಿಡು ಅಂತ ಧೈರ್ಯ ತಂದ್ಕೊಂಡು ಸುಮ್ನಿದಿನಿ. ಸ್ವಿಮಿಂಗ್ ಬರದೇ ಇರೋವ್ರ ಕಥೆ ಇದು. ಅಯ್ಯೋ ಬೈಯ್ಕೊಳ್ಳೋದೆಂಥದ್ದು.... ಖಂಡಿತ ಇಲ್ಲಪ್ಪ. ನಿಮ್ಮ ತುಂಬುಪ್ರೀತಿಯ ಮುಂದೆ ಇದೆಲ್ಲ ಯಾವ ಲೆಕ್ಕ ಹೇಳಿ...

@ಸಿಮೆಂಟು ಮರಳಿನ ಮಧ್ಯೆ ಇರುವವರೆ, ನೀಲಿಹೂವು, ತೇಜಸ್ವಿನಿ, ಸುನಾಥ ಅಂಕಲ್‌ ಹಾಗೂ ಶಿವು ಎಂದಿನಂತೆ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ

ರಜನಿ. ಎಂ.ಜಿ said...

ಹೇಯ್... ನಾನು ಅಲ್ಲಿಗೆ ಹೋಗಿದ್ದೆ. ನೀರಿನಲ್ಲಿಯೇ ಇರುವ ಶಾಲೆಯನ್ನೂ ನೋಡಿದ್ದೆ...