Sunday, January 11, 2009

ಒಣಮಲ್ಲಿಗೆಯ ಅರಳು ಧ್ಯಾನ

ಅರಳುವುದೇ ನಿಮಗಾಗಿ ಅಂದುಕೊಂಡಿದ್ದಿರೇನೋ ನೀವು. ಕಟ್ಟೆ ಮೇಲೆ ತುಂಬಿದ ಮಲ್ಲಿಗೆಬುಟ್ಟಿ, ಮೈಚಳಿಬಿಟ್ಟು ಅರಳಿದ ಹೂಗಳು ಅದರೊಳಗೆ. ಆದರೂ ಎಲೆಮರೆಯಲ್ಲೇ ಸುಖಿಸಿ, ಸೊರಗುವ ಕಳ್ಳಹೂಗಳನ್ನೋ, ಇದ್ದಷ್ಟೇ ಜಾಗದಲ್ಲೇ ಅರೆಬರೆ ಅರಳಿ ಕಂಪ ಸೂಸುವ ಅವುಗಳನ್ನು ಉಡಿಯಲ್ಲಿ ಕಟ್ಟಿಹಾಕಿಕೊಳ್ಳುವುದರಲ್ಲೇ ನಿಮಗೇನೋ ಖುಷಿ, ಆಪ್ತಭಾವ. ಮೈ-ಕೈಗೆಲ್ಲ ತರಚುವ, ಕೂದಲು ಜಗ್ಗುವ ಟೊಂಗೆ ಲೆಕ್ಕಿಸದೆ ಬಿಡಿಸುವ ಹತ್ತೋ-ಹದಿನೈದು ಹೂಗಳಿಗಾಗಿ ಉಡಿಕಟ್ಟುತ್ತ, ಇನ್ನೊಂದು, ಮತ್ತೊಂದು, ಕೊನೆಯದು ಎಂದು ಸಾಗುವ, ಬಾಗುವ ಆ ಸಂಭ್ರಮ ನೋಡಲಲ್ಲ, ಅನುಭವಿಸಲು. ಬುಟ್ಟಿಮಲ್ಲಿಗೆಯೆಲ್ಲ ಮಾರುದ್ದವಾಗುವ ಮೊದಲೇ... ನಿಮ್ಮ ಮುಡಿಯೊಳಗೆ ಉಡಿಯ ಹೂ; ಬಿಳಿಚೆಂಡಿನಂತೆ. ತಾನು ತಿಳಿಹಸಿರ ತೊಟ್ಟಿನ ಹೊಟ್ಟೆಯೊಳಗೆ ನಿಧಾನ ತೂರಿದ್ದರಿಂದಲೇ ಅಲ್ಲವೆ? ಜಂಭದಿಂದ ನಿಮ್ಮ ಗಾಜಿನ ಬಳೆಗಳಿಗೆ ಜೀಕು ಹೊಡೆಯುವ ಪಿನ್ನಿನ ಪಿಸುಮಾತು.

ಆದರೆ ನಿಮ್ಮ ಹೂಪ್ರೀತಿಗೋ ಬಳ್ಳಿಯ ಸ್ವಾತಂತ್ರ್ಯ ಹರಣ! ಬಿಸಿಲಿಗೆ ಮೈಹರವಿಕೊಳ್ಳಲೂ ಬಿಡದೆ, ಮನಬಂದಂತೆ ಚಿಗುರಿಕೊಳ್ಳಲೂ ಬಿಡದೆ, ಎಳೆ ಕೈಕಾಲುಗಳನ್ನೆಲ್ಲ ಎಳೆದೆಳೆದು ಕಟ್ಟಿ, ಸೆಣಬಿನಿಂದ ಚಿಕ್ಕ ಕಲ್ಲೊಂದನ್ನೂ ತೂಗುಬಿಟ್ಟು, ಗೋಡೆಆಚೆ ಇಳಿಬಿಡುವ ಪರಿಯಲ್ಲೂ ನಮ್ಮ ಮನೆಯಂಗಳದ ಹೂ ನಮ್ಮಮನೆಯೊಳಗಿರಲಿ ಎನ್ನುವ ಮಮಕಾರವಿತ್ತೇ? ಆದರೂ ಗೋಡೆಯಾಚೆ ಇಳಿದು ಬೆಳೆಯದಂತೆ ಕಟ್ಟಿಹಾಕುತ್ತಿದ್ದಿರಿ ನೀವು. ಪಾಪ ಮಲ್ಲಿಗೆ ಬಳ್ಳಿ. ಅದು ತಾನು ಬಳ್ಳಿ ಅನ್ನುವುದನ್ನು ಮರೆತು ಸ್ವಚ್ಛಂದವಾಗಿ ಬೆಳೆಯಲಿಚ್ಛಿಸುತ್ತಿತ್ತು. ಅಬ್ಬಲಿಗೆ, ಸೇವಂತಿಗೆಯಂತೆ ಹಬ್ಬುತ್ತ. ಹಬ್ಬಿ ಉಬ್ಬುತ್ತ. ಆದರೆ ನೆನಪಿರಲಿ ತನ್ನ ಕಂಪು ಕಳೆದುಕೊಂಡಲ್ಲ. ಬಹುಶಃ ಅಕ್ಕ-ಪಕ್ಕದವರೂ ಕಂಪಿನಲ್ಲಿ ಪಾಲಾದಾರೆಂಬ ಭಯವಿತ್ತೇನೋ ನಿಮಗೆ. ಎಲ್ಲ ನಮಗೇ ಇರಲಿ ಎಂಬ ಸ್ವಾರ್ಥವೋ? ಬಳ್ಳಿ ಬಳ್ಳಿಯ ಹಾಗೇ ಬೆಳೆಯಲಿ ಎಂಬ ಬಲವಂತವೋ...

ಅಮ್ಮ, ಅಮ್ಮಮ್ಮ ನನ್ನ ನಿಮ್ಮ ಜಗಳ ಏನೇ ಇರಲಿ. ಆದರೆ ನೀವಿಬ್ಬರೂ ಬಿಳಿಚೆಂಡಿನಂತೆ ಮುಡಿಯುತ್ತಿದ್ದ ಮಲ್ಲಿಗೆಯ ನೆನಪನ್ನೇ ಇಲ್ಲೊಬ್ಬರು ಹೊತ್ತು ತಂದಿದ್ದಾರೆ. ತಿಂಗಳ ಮೇಲಾದರೂ ಅವರ ನೆನಪು ಸರಿಯುತ್ತಿಲ್ಲ. ಹೆಸರು ಮರೆತರೂ ಕಣ್ಮುಂದೆಯೇ ಚೆಹರೆ. ಅಂದು ಯಾವುದೋ ಕೆಲಸಕ್ಕೆಂದು ನಾ ಓದಿದ ಕಾಲೇಜು ತಲುಪಿದಾಗ ಸಂಜೆ ಐದು. ಪ್ರಾಧ್ಯಾಪಕರು ಹತ್ತೇ ನಿಮಿಷವೆಂದು ಎರಡು ಗಂಟೆ ಕಾಯಿಸಿದ್ದರು. ಕೊನೆಗೂ ಅವರು ಬರಲೇ ಇಲ್ಲ.

ನಮ್ಮದೊಂದಿಷ್ಟು ಹಾಡು ಕೇಳಿ ಎಂದು ಏಕಾಂತ ಭಂಗ ಮಾಡಲೆತ್ನಿಸಿದ್ದ ಸೊಳ್ಳೆಗುಂಪು ಕಟ್ಟಡದ ಮುಂಭಾಗಕ್ಕೆ ಕರೆತಂದಿತ್ತು. ಐವತ್ತು ದಾಟಿದ ಅಲ್ಲೊಬ್ಬರು, ಬಂದ ಕೆಲಸವೇನೆಂದು ಕೇಳುತ್ತ ಕಬ್ಬಿಣದ ಕುರ್ಚಿಗೆ ಬೆನ್ನು ತಾಕಿಸಿದರು. ಖಾಕಿ ಸೀರೆ ಉಟ್ಟಿದ್ದರಿಂದ ಹೋಮ್‌ಗಾರ್ಡ್‌ ಅಂದುಕೊಂಡೆ.

ನಾವಿದ್ದಾಗ ನೀವಿರಲಿಲ್ಲವಲ್ಲ ಎಂದೆ. ‘ಹೌದು ಟ್ರಾನ್ಸ್‌ಫರ್‌'. ಮನೆ ಎಲ್ಲಿ? ಗಂಡ, ಮಕ್ಕಳು? ಬಾಕ್ಸ್‌ ತರುತ್ತೀರಾ? ಬೆಳಗಿನ ಎಂಟಕ್ಕೇ ತಿಂಡಿ ತಿನ್ನಕ್ಕಾಗತ್ತಾ? ಎಷ್ಟು ವರ್ಷ ಸರ್ವಿಸ್‌? ಎಲ್ಲದಕ್ಕೂ ಒಂದೇ ವಾಕ್ಯದಲ್ಲಿ ಉತ್ತರಿಸಿ ಎಂದು ಪರೀಕ್ಷೆಯಲ್ಲಿ ಹೇಳುವ ಧಾಟಿಯಲ್ಲೇ ಅವರ ಉತ್ತರ. ಕಣ್ಣಿಗೆ ಕಣ್ಣು ಕೊಡದೆ, ಚುಟುಕಾಗಿ ಉತ್ತರಿಸುತ್ತಿದ್ದ ಅವರ ಆ ರೀತಿಗೆ ನಾನ್ಯಾಕೆ ಏಗಬೇಕೆಂದು ಸುಮ್ಮನಾಗುವ ಹೊತ್ತಿಗೆ ಅವರು ಥಟ್ಟನೆ, ಬೇಜಾರಾಗಿದೆ ನನಗೆ ಎಂದರು. ಸ್ವಲ್ಪ ಜೋರುದನಿಯಲ್ಲೇ. ಸಂಕಟದಲ್ಲೇ. ಯಾಕೆ? ಮನಸ್ಸು ತೋಯಿತು.... ಮುದಕಿಯಾಗಿದ್ದೀನಿ. ಐವತ್ತೆರಡಾಯ್ತು. ಪ್ಯಾಂಟ್ ಶರ್ಟ್‌ ಹಾಕೋಕಾಗತ್ತಾ? ಯೂನಿಫಾರ್ಮ್‌ ಹಾಕ್ಕೊಂಡು ಟಿಪ್ ಟಾಪ್ ಆಗಿರಬೇಕಂತೆ. ಯಾರೋ ಉತ್ತರದ ಕಡೆಯೋರಂತೆ. ಹೊಸ ಸಾಹೇಬರು. ಇಲ್ಲಾಂದ್ರೆ ನೋಟೀಸ್ ಕೊಡ್ತಾರಂತೆ ಎಂದು ಹೇಳುತ್ತಾ ಪಟ್ ಅಂತ ಎಡಗೈ ಮೇಲಿದ್ದ ಸೊಳ್ಳೆಯನ್ನ ಕೊಂದೇ ಬಿಟ್ಟರು. ಆಗಲೂ ಅವರು ಮುಖಕ್ಕೆ ಮುಖ ಕೊಡಲಿಲ್ಲ.

ಈ ಪರಿ ಮೈಗೆ ಪ್ಯಾಂಟ್ ಹಾಕ್ಕೊಂಡ್ರೆ ಹೇಗ್ ಕಾಣಬೇಡಾ? ಇಳಿದ ಸೆರಗನ್ನ ಮೈತುಂಬ ಹೊದ್ದುಕೊಂಡರು. ಅಕ್ಕ-ಪಕ್ಕದವರೇನೆನ್ನಬೇಡ? ಬೆಳೆದ ಮಗನ ಮುಂದೆ ಈ ದಪ್ಪ ಹೊಟ್ಟೆಗೆ ಬೆಲ್ಟ್ ಕಟ್ಟಿಕೊಂಡು ಓಡಾಡೋದಾದ್ರೂ ಹೇಗೆ? ಹಾಸಿಗೆ ಹಿಡಿದಿರುವ ಯಜಮಾನರು ಏನೆಂದುಕೊಂಡಾರು? ಕೈಯಲ್ಲಿದ್ದ ದಪ್ಪ ಹಾಳೆಗಳ ಸುರುಳಿ ಆಗಾಗ ಬಿಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಸುಮ್ಮನೇ ಇದ್ದರು. ಆದರೆ ಈ ಬಾರಿ ಅದನ್ನು ಮತ್ತಷ್ಟು ಬಿಗಿಗೊಳಿಸುತ್ತ ಮೊದಲಬಾರಿಗೆ ಮುಖಕ್ಕೆ ಮುಖ ಕೊಟ್ಟರು. ಅವರ ಹಣೆಮೇಲಿನ ಗೀರುಗಳ ಹಿಂದೆಲ್ಲ ಉತ್ತರ ಸಿಗದ ಪ್ರಶ್ನೆಗಳೇ ಅಡಗಿದ್ದವು. ಕೆಲ ಹಲ್ಲುದುರಿ ಗುಳಿಬಿದ್ದ ಕೆನ್ನೆಗಳ, ಕಣ್ಣುಗಳ ಕೆಳಗಿನ ಕಪ್ಪಲ್ಲೆಲ್ಲ ಅಸಹಾಯಕತೆ ಮಲಗಿತ್ತು ಮುದುಡಿ. ಅಗಲ ಕೆಂಪು ಬೊಟ್ಟು ಹಿರಿತನದ ಹೆಮ್ಮೆಯಲ್ಲಿತ್ತು. ಬಂಗಾರನೀರು ಕುಡಿದರೂ, ಅಪ್ಪಟ ಬಂಗಾರದಂತೆ ಮುಚ್ಚು-ಮರೆಯಿಲ್ಲದೆ ಪ್ರಾಮಾಣಿಕತೆಯಿಂದ ಮಾತನಾಡಿಕೊಳ್ಳುತ್ತಿದ್ದವು ಕಪ್ಪನೆಯ ಮುದುಡುಚರ್ಮದ ಕೈಗಳ ಬಳಸಿಕೊಂಡ ಎರಡೆರಡು ಬಳೆಗಳು.

ಬಾಗಿ ತುದಿಬೆರಳಿಗೆ ಬಂದ ಬೆಳ್ಳಿ ಕಾಲುಂಗುರ ಹಿಂದೆ ತಳ್ಳಿ, ನಿಟ್ಟುಸಿರು ಬಿಟ್ಟು, ಬಟ್ಟೆ ಕೊಟ್ಟಿದಾರೆ ಯೂನಿಫಾರ್ಮ್‌ ಗೆ ಎಂದು ಕುರ್ಚಿಗೆ ಒರಗಿದರು. ಅವರ ದನಿ ಕೊಂಚ ಸಮಾಧಾನಿಸಿತ್ತು. ಮಗ ದುಡಿಯುವುದಿಲ್ಲವೇ? ಬಿಟ್ಟುಬಿಡಿ ಕೆಲಸ ಎಂದೆ. ಸಾಕಾಗಲ್ಲ. ಸಣ್ಣ ಕೆಲಸ. ಎಂದರು. ಮೈ-ಕೈ ಕೆರೆದುಕೊಂಡು, ಗೀರು ಬರೆಸಿಕೊಂಡು ಸೊಳ್ಳೆ ಶಪಿಸಿದರು. ಆರಿದ ಗಂಟಲಿಗೆ ನೀರು ಸುರಿದುಕೊಂಡರು. ಆದರೂ ಯೂನಿಫಾರ್ಮ್‌ ಭೂತ ಅವರ ಮನಸನ್ನೇ ಅಲ್ಲಾಡಿಸಿದಂತಿತ್ತು. ಸರಳವಾಗಿ ಅದು ಬಿಟ್ಟುಹೋಗುವ ಲಕ್ಷಣಗಳೇ ಇರಲಿಲ್ಲ.

ಪ್ಯಾಂಟ್ ಶರ್ಟ್‌ ಹೊಲೆಸಿಯೂ ಆಗಿದೆ ಎಂದರು. ಓಹ್ ಹೌದಾ? ಹಾಕಿಕೊಂಡಿದ್ರಾ ಒಮ್ಮೆಯಾದ್ರೂ ಅಂದೆ. ಇಲ್ಲ ಕಣವ್ವ. ನಾಚಿಕೆ... ಆಗೊಂದು ನಗೆ ಚೆಲ್ಲಿದರು...ಅಬ್ಬಾ! ಅವತ್ತೊಂದು ದಿನ ಟ್ರಾಫಿಕ್‌ನಲ್ಲಿ ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ಹೋದ ಹಸಿರುಹಸಿರಾದ ಹುಲ್ಲು ನೋಡಿದಾಗಿನ ಸಂತೋಷವೇ ಈಗಲೂ ಆಗಿತ್ತು. ಆದರೆ ಸಿಗ್ನಲ್ ಪಾಸ್ ಮಾಡಿದ ಮೇಲೆ ಮತ್ತೆ ಅದೇ ದೊಡ್ಡ ದೊಡ್ಡ, ಸಣ್ಣ ಸಣ್ಣ ಹೊಗೆಬುರುಕ, ಬಾಯಿಬಡುಕ ಗಾಡಿಗಳು. ಎಲ್ಲದರ ಮಧ್ಯೆ ಕಳೆದುಹೋಗೇಬಿಟ್ಟಿತ್ತು ಹಸಿರುಹುಲ್ಲಿನ ಬಂಡಿ.

ಈಗಲೂ ಹಾಗೇ ಆಯಿತು. ಮತ್ತದೇ ಕಾಠಿಣ್ಯ. ಮನೆಯಿಂದ ಸೀರೆ ಉಟ್ಟುಕೊಂಡು ಬನ್ನಿ. ಇಲ್ಲಿಬಂದು ಯೂನಿಫಾರ್ಮ್‌ ಹಾಕ್ಕೊಳ್ಳಿ ಮತ್ತೆ ಮರಳುವಾಗ ಸೀರೆ ಉಟ್ಟುಕೊಂಡೇ ಹೋಗಿ. ಇಷ್ಟೂ ಮಾಡಲಾಗುವುದಿಲ್ಲವೆಂದರೆ ಖಂಡಿತ ನೋಟೀಸೇ... ಸಾಹೇಬರು ಅಂತಿದಾರೆ. ಇನ್ನೂ ಎಂಟು ವರ್ಷ ಸರ್ವಿಸ್‌. ಚೂಡಿದಾರ್‍ ಹಾಕ್ಕೊಂಡು ಅಭ್ಯಾಸವಿದ್ದರೆ ನಡೆಯುತ್ತಿತ್ತು. ಆದರೆ ಈಗ... ಎಂದು ಆಕಳಿಸಿ ಬೇಸರಿಸಿ ಮತ್ತೊಂದು ನಿಟ್ಟುಸಿರು ಬಿಟ್ಟರು.

ಬೇರೆ ಬೇರೆ ಡಿಪಾರ್ಟ್‌‌ಮೆಂಟ್‌ಲ್ಲಿರೋ ಹಿರಿಯ ಮಹಿಳೆಯರೆಲ್ಲ ಒಟ್ಟಾಗಿ ಹೋಗಿ ರಿಕ್ವೆಸ್ಟ್ ಮಾಡ್ಕೊಳ್ಳಿ ಅಂದೆ. ಯಾಕೋ ಅದನ್ನು ಅವರು ಗಮನಿಸಲಿಲ್ಲ. ಹೊಟ್ಟೆಗೆ ಬಟ್ಟೆಗೆ ಎಲ್ಲ ಸರಿಯಾಗೇ ಇದೆ. ಮಗನ ಮದುವೆ ಮಾಡಿದರೆ ಮುಗೀತು. ಆದ್ರೆ ಇದೊಂದೇ ಬೇಜಾರು. ಎಂದು ಹಾಕಿಕೊಂಡ ಹೊಸ ಶೂಸ್‌ನತ್ತ ನೋಡಿಕೊಂಡರು. ಯೋಚನೆ ಮಾಡಿ ಮಾಡಿ ತಲೆ ನೋವ್ ಬರ್ತದೆ. ಉಣ್ಣೋದಕ್ಕೇ ಮನಸಾಗ್ತಿಲ್ಲ. ಚಿಕ್ಕ ತುರುಬಿಗೆ ಸಿಕ್ಕಿಸಿದ್ದ ಪಿನ್ನು ತೆಗೆದು, ಬಾಡಿದ ಮಲ್ಲಿಗೆಯನ್ನೆಲ್ಲ ನೆಲಕ್ಕೆ ಚೆಲ್ಲಿದರು. ಓಡಿಬಂದ ನಾಯಿ, ಒಣಮುಖದ ಮಲ್ಲಿಗೆ ಮೂಸಿ, ತಿರುಗಿ ಹೋಯಿತು. ಪಿನ್ನೋ ಮತ್ತೆ ಬಳೆಗಳೊಳಗೆ ಬಂಧಿಯಾಗಿ ನಾಳೆಯ ಮಲ್ಲಿಗೆಗೆ ಕನಸಕಾಣತೊಡಗಿತೇನೋ...

ನಾಯಿಯೂ ಕತ್ತಲಲ್ಲಿ ಮಾಯವಾಯಿತು. ಗಂಟೆ ಏಳಾದ್ದರಿಂದ ಬರದ ಪ್ರಾಧ್ಯಾಪಕರಿಗೆ ಶಾಪ ಹಾಕುತ್ತ ಅಲ್ಲಿಂದ ನಡೆದೆ. ಆದರೆ ಇನ್ನೂ ಡ್ಯೂಟಿ ಮುಗಿದಿಲ್ಲ ಎನ್ನುವ ಅವರು ಮತ್ತು ಒಣಮಲ್ಲಿಗೆ ಅಲ್ಲಿಯೇ ಇದ್ದರು ಇನ್ನೂ.

ಜಯಮ್ಮ ಇತ್ತೀಚೆಗೆ ಬಾಡಿದ ಮಲ್ಲಿಗೆಯನ್ನೇ ಕೊಡುತ್ತಿದ್ದಾಳೆ. ದೇವರಿಗೆ ಅಲಂಕರಿಸಿದಷ್ಟೂ ಪುಣ್ಯ ಜಾಸ್ತಿ ಎಂದು ಮಾರು ಮಾರು ಮಲ್ಲಿಗೆ ಏರಿಸುತ್ತಲೇ ಇರುತ್ತಾರೆ ಅತ್ತೆ. ಪುಣ್ಯ ಅತ್ತೆ ಊರಲಿಲ್ಲ. ಸದ್ಯ ಜಯಮ್ಮ ಬಚಾವ್‌. ಅತ್ತೆ ಹೇಳುತ್ತಿದ್ದ ನೆನಪು. ಅವರೂ ಹಿಂದೊಮ್ಮೆ ಮಲ್ಲಿಗೆಬಳ್ಳಿ ಬೆಳೆಸಿದ್ದರಂತೆ. ಖಂಡಿತ ಅಮ್ಮ, ಅಮ್ಮಮ್ಮನಂತೇ ಬೆಳೆಸಿರುತ್ತಾರೆ ಬಿಡಿ. ಬಳ್ಳಿಯೊಳಗೆ ಬಳ್ಳಿ ಸಿಕ್ಕಿಸಿ ಬೆಳೆಸಿದ್ದರಿಂದ ಎರಡನೇ ಮಹಡಿವರೆಗೂ ಅದು ಏರಿತ್ತು ಎಂದು ಹೇಳುವಾಗ ಅವರ ಮುಖ ನೋಡಬೇಕಿತ್ತು. ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ತೋರಿಸಿದ ಕಾಳಜಿ, ಅಕ್ಕರೆ ಬಿಂಬ ಅಲ್ಲಿ ಕಂಡಿತ್ತು. ಆದರೆ ಮಲ್ಲಿಗೆ ಬಳ್ಳಿ ಈಗಿಲ್ಲ. ರಸ್ತೆ ರಿಪೇರಿ ಸಂದರ್ಭದಲ್ಲಿ ಬೇರುಸಹಿತ ಇನ್ನಿಲ್ಲವಾಗಿದೆ. ಆ ಜಾಗದಲ್ಲಿ ಬೇರೆ ಎಂಥದೋ ಗಿಡ ಬೆಳೆದು ಮರವಾಗಿ ನಿಂತಿದೆ. ಕಾಗೆ ಗೂಡಿಗೆ ನೆಲೆಯಾಗಿದೆ. ಆದರೆ ಅತ್ತೆಗೆ ಮಲ್ಲಿಗೆ ಮುಡಿಯುವುದಕ್ಕಿಂತ ತಾನು ನೆಚ್ಚಿದವನಿಗೇ ಅದು ಸಲ್ಲಲಿ ಎನ್ನುವ ಆಸೆ.

ಅಮ್ಮಮ್ಮ ಮಲ್ಲಿಗೆ ಮುಡಿದು ಸಂಭ್ರಮಿಸಿ ತಿರುಗಿ ಬಾರದ ಊರಿಗೆ ಹೊರಟೇ ಹೋದರು. ಹೂ ಮುಡಿಯುವುದೇ ಬೇಡ ಈಗಿನ ಮಕ್ಕಳಿಗೆ ಎಂದು ಹುಸಿಕೋಪ ತೋರುವ ಅಮ್ಮ, ಅವಕಾಶ ಸಿಕ್ಕಾಗಲೆಲ್ಲ ಅವರ ಮಾತಿಗೆ ದನಿಜೋಡಿಸುವ ಅತ್ತೆಯೂ. ಆದರೆ ಕಾಣದ ದೇವರಿಗೆ ರಾಶಿ ರಾಶಿ ಅಲಂಕಾರ ಮಾಡುತ್ತಲೇ ಹೂ ಬಾಡಿಸಿಬಿಡುವ ಅತ್ತೆಗೆ ಹೇಗೆ ಹೇಳುವುದು? ಮಲ್ಲಿಗೆ ಇರಲಿ ಬಳ್ಳಿಯಲ್ಲಿಯೇ. ಅರಳುವಿಕೆಯೇ ಒಂದು ಧ್ಯಾನ. ಹಾಗೆಯೇ ಬಾಡುವಿಕೆಯೂ. ತೊಟ್ಟು ಕಳಚಿ ತನ್ಮೂಲಕ ಕಂಡುಕೊಳ್ಳುವ ಮೋಕ್ಷದ ಪರಿ ಎಂದು...