Monday, June 29, 2009

ಬಟವಾಡೆಯಾಗದ ಒಂದು ಪತ್ರ


ಅಮಿ ಸು.ಕ.ಮಾ..
ಸುರಯ್ಯಾ... ಕಮಲಾ... ಮಾಧವಿ...
ಯಾವ ಹೆಸರಿಗೆ ಪೋಸ್ಟ್ ಮಾಡಬೇಕು ಗೊತ್ತಾಗುತ್ತಿಲ್ಲ. ಹೊಸ ಊರಿನಲ್ಲಿ ಹೊಸ ಹೆಸರೇನಾದರೂ...!?
ಕಮಲಾದಾಸ್‌ಳ ಸೆರಗಿಗೆ ಸುತ್ತಿಕೊಡು, ಸುರಯ್ಯಾಳ ಕಪ್ಪು ಬುರ್ಖಾದೊಳಗೆ ಕಣ್ಬಿಟ್ಟು, ಕಮಲಾ ಸುರಯ್ಯಾ ಅಲಿಯಾಸ್‌ ಮಾಧವಿಕುಟ್ಟಿಯ, ಅಂದರೆ ನೀನು ಮೈಚಳಿ ಬಿಟ್ಟು ಬರೆದ ’ಮೈ ಸ್ಟೋರಿ’ ಓದಿದವರಲ್ಲಿ ಹೆಚ್ಚಿದ್ದು ಪೂರಾ ’ಬಿಸಿ’ಯೇ. ಗುಟ್ಟಾಗಿಡುವುದನ್ನೇ ರಟ್ಟು ಮಾಡುತ್ತಾ ಹೋದಿ ನೋಡು ಆಗಲೇ ಅದಕ್ಕೆ ಸೆನ್ಸೇಶನಲ್‌ ಲೇಬಲ್‌ ಬೀಳುತ್ತಾ ಹೋಯಿತೋ ಏನೋ. ಬದುಕೇ ಬರಹಕ್ಕೆ ತೆರೆದು, ಬರಹವೇ ಬದುಕಿಗೆ ಬೆಸೆದುಕೊಂಡಿದ್ದರಿಂದ ಬಿಚ್ಚಿಡುವುದೇನು ಬಂತು ಎನ್ನುತ್ತಲೇ ನೀ ಬರೆದಿದ್ದು ತುಸು ಬೆಚ್ಚಿಸಿತು.
ಆದರೆ ವಾಸ್ತವದ ರಾವುಗಾಜಿನಿಂದ ಸತ್ಯ-ಮಿಥ್ಯ ಎಂದು ಪರೀಕ್ಷಿಸುವ ಕಣ್ಣುಗಳು ಪ್ರಾಮಾಣಿಕತೆ ಬಿಟ್ಟು ಇನ್ನೇನೆಲ್ಲಾ ಹುಡುಕುತ್ತಾ ಹೋದವು, ನಿನ್ನ ಕೃತಿಗಿಂತ ನಿನ್ನೊಳಗೆ. ಬಡಬಡಿಸಿದವು ಧರ್ಮ-ನೀತಿಯಂತೆಲ್ಲಾ... ಆ ಮೂಲಕವೇ ವ್ಯಕ್ತಿತ್ವ ಅಳೆಯುವ ಮಂದಿಗೆ ವಿಲಕ್ಷಣ ಸ್ತ್ರೀ ಎನ್ನಿಸಿಬಿಟ್ಟೆಯಾ? ಇದರಿಂದಲೇ ತರ್ಕದ ಮುಷ್ಠಿಯೊಳಗೆ ನಿಲ್ಲದ ವ್ಯಕ್ತಿತ್ವ ನಿನ್ನದಾಯಿತಾ? ಅಥವಾ ಇದೇ ನಿನ್ನ ವೈಶಿಷ್ಟ್ಯ ಯಾನೆ ಹೆಚ್ಚುಗಾರಿಕೆಯಾಗಿತ್ತಾ? ಶ್ರೇಷ್ಠವಾದದ್ದು ಎಂದರೆ ಅನಿಶ್ಚಿತವಾದದ್ದು ತರ್ಕಕ್ಕೆ ನಿಲುಕದ್ದು ಎನ್ನುತ್ತಾರಲ್ಲ ಹಾಗೆ ಏನಾದರೂ ಅಂದುಕೊಳ್ಳಲೆ?
ಗಟ್ಟಿದನಿಯಲ್ಲಿ ದಿಟ್ಟತನದಿಂದ ಹೇಳಿಕೊಂಡ ನಿನ್ನ ಅನುಭವಗಳು ಸಾಮಾಜಿಕ ಬದುಕಿನ ಚೌಕಟ್ಟನ್ನು ಅಲುಗಾಡಿಸಿದಾಗ ಹೇಗೆ ಸಂಭಾಳಿಸಿಕೊಂಡೆ? ಅವರವರ ಅನುಭವದ ಕನ್ನಡಿಯಲ್ಲಿಯೇ ಅವರನ್ನು ಕಾಣಲು ಪ್ರಯತ್ನಿಸಿದಲ್ಲಿ ಒಳನೋಟ ಸಾಧ್ಯವಲ್ಲವೆ? ದಕ್ಕೀತಲ್ಲವೆ ಅದರೊಳಗಿನ ಗಟ್ಟಿ ಅನುಭೂತಿಯೂ; ತಳದಲ್ಲಿ ಉಳಿಯುವ ಗಟ್ಟಿಬೇಳೆಯಂತೆ. ಬಸಿದುಬಿಡಬಹುದು ತಿಳಿಯನ್ನು. ಉಳಿಯುವುದು ಗಟ್ಟಿಯೇ. ಅಂದರೆ ನೀನಿಗ ಬಸಿದುಹೋಗಿರುವೆಯಲ್ಲ ಹಾಗೆ. ಉಳಿದುರುವುದೇನಿದ್ದರೂ ನಿನ್ನ ಧೋರಣೆಗಳು, ವಿಚಾರಗಳು, ಗಟ್ಟಿಬೇಳೆಯಂತೆ.
ಕಮಲಾದಾಸಳ ಸೀರೆ, ಸುರಯ್ಯಾಳ ಬುರ್ಖಾ ಬಗ್ಗೆಯೇ ಸದ್ದು ಮಾಡಿದ ’ಧರ್ಮ’ಜೀವಿ, ಸುದ್ದಿಜೀವಿಗಳು ಅವುಗಳ ನಡುವಿನ ’ನಿರ್ವಾತ’ ಅರಿಯುವ ಪ್ರಯತ್ನವನ್ನೇಕೆ ಮಾಡಲಿಲ್ಲ? ನಿನ್ನ ಬುರ್ಖಾದ ಕಪ್ಪು, ಸಮಾಜದ ಐಬು ಹಾಗೂ ಅಜ್ಞಾನದ ಕಣ್ಣುಗಳನ್ನು ವಿರೋಧಿಸುವುದನ್ನು ಸಾಂಕೇತಿಸುತ್ತಿತ್ತು ಎಂದುಕೊಳ್ಳಬೇಕೆನ್ನಿಸುತ್ತಿದೆ. ಇನ್ಯಾವ ಭಾವ-ಬಣ್ಣಗಳ ಪ್ರಭಾವವೂ ಮಿಳಿತವೂ ಕಪ್ಪಿನೊಳಗೆ ಅಸಾಧ್ಯ ಎನ್ನುವುದನ್ನು ಅದು ಸೂಚಿಸುತ್ತಿತ್ತು ಅಂತ ಅಂದುಕೊಳ್ಳಲೆ? ಏನೇ ಆಗಲಿ ಸುತ್ತಲ ಕತ್ತಲೊಳಗೆ ಪ್ರೀತಿ ಬಣ್ಣಗಳೇ ನಿನ್ನ ಬೆಳಕಸ್ಫೂರ್ತಿ.
ಆ ಬೆಳಕಸ್ಫೂರ್ತಿಯೇ ನಿನ್ನ ಅಸಹಜ ಹರಿವಿನತ್ತ ಮುಖ ಮಾಡಿಸಿತೆ? ಸಹಜ ಹರಿವಿಗೆ ಬೆನ್ನುಕೊಟ್ಟವರೆದುರು ಮುಖ ಕೊಟ್ಟು ನಿಲ್ಲುವುದು-ಅಸ್ವಾಭಾವಿಕ. ಅಸಹಜ. ಅಸಂಗತ. ಅಪ್ರಸ್ತುತ. ಅನಾಚಾರಾವೂ... ಎಂದಾದಲ್ಲಿ ಸಹಜತೆಗೆ ಮುಖಮಾಡಿದ ಅವರೆಲ್ಲ ಕಂಡುಕೊಂಡಿದ್ದೇನು?
ಗಟ್ಟಿಗಿತ್ತಿ ನೀ. ಸೆಳವಿಗೆ ಹೊರಳಿ ಈಜಿದೆ. ಇತಿಹಾಸದ ಬಾಗಿಲೊಳಗೆ ನಿಂತುಕೊಂಡೇ ವರ್ತಮಾನದ ಹೊಳಹು ಕಂಡುಕೊಂಡೆಯಲ್ಲ ಅದು ಹೇಗೆ? ಈ ಈಜುವಿಕೆಯಿಂದಲೇ ಆಗಾಗ ನಿನ್ನ ಧ್ವನಿ ಬದಲಾಯಿಸಿತೆ? ಹಾಗೆ ಬದಲಾಗುತ್ತಿದ್ದ ಆ ಧ್ವನಿ ಕೇಳಿಸಿಕೊಂಡವರಿಗೆ ಅದರೊಳಗಿನ ವಿಶಿಷ್ಟ ನಾದ ಹಿಡಿದಿಟ್ಟುಕೊಳ್ಳಲು ಆಗಲಿಲ್ಲವೋ, ತ್ರಾಣವಿರಲಿಲ್ಲವೋ, ಇದ್ದರೂ ಅಹಮಿಕೆ ಅನುವು ಮಾಡಿಕೊಡಲಿಲ್ಲವೊ ಗೊತ್ತಿಲ್ಲ. ಅದು ನಿನ್ನ ನಿಲುವಿನೊಳಗಿನ ಹರಿವಿನ ಅರಿವು ಎಂಬುದಂತೂ ಖರೇ.
ಹೇಳು ಅಮೀ, ಅನ್ನಿಸಿದಂತೆ ಬದುಕುತ್ತಾ, ಅನುಭವಿಸಿದ್ದನ್ನು ಬರೆಯುತ್ತಾ ಈಗ ಇಲ್ಲವಾಗಿಬಿಟ್ಟೆಯಲ್ಲ. ಆ ಇಲ್ಲವಾದ ಮೇಲೂ ಬದುಕಿರುವೆಯಲ್ಲ ಇದಕ್ಕೆ ಇಂಬುಕೊಟ್ಟಿದ್ದು ನಿನ್ನ ವಿಲಕ್ಷಣ ವ್ಯಕ್ತಿತ್ವವೆ? ನಿನ್ನೊಳಗೆ ಕುಡಿಯೊಡೆದ ವಿಕ್ಷಿಪ್ತ ವಿಚಾರಗಳು ಇದಕ್ಕೆ ಸಾಕ್ಷಿಯೆ? ಬದುಕುವುದಕ್ಕಾಗಿ ಬರೆಯುವುದು. ಬರೆಯುವುದಕ್ಕಾಗಿ ಬದುಕುವುದು-ಈ ಗೊಂದಲಗಳಿಂದ ನೀ ಹೇಗೆ ಪಾರಾದೆ ತಾಯಿ? ಹಾಗೆ ಪಾರಾಗುವಾಗ ಪ್ರಾಮಾಣಿಕತೆ ಸೋರಬಹುದೆನ್ನುವ ಆತಂಕವೂ ನಿನಗಾಗುತ್ತಿರಲಿಲ್ಲವೆ?
ಕೆಲವರೆಂದರು- ನಿನ್ನ ಧೋರಣೆ, ಅಭಿಪ್ರಾಯಗಳೆಲ್ಲವೂ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಓಲೈಸಲು ಎಂದು. ’ಆದರೆ ಈ ಎಲ್ಲವನ್ನೂ ಬದಿಗಿರಿಸಿ, ಹಸಿಹಸಿ ಅನುಭವಗಳನ್ನು ಉಡಿಯಲ್ಲಿ ಕಟ್ಟಿಕೊಂಡು ನಡುರಾತ್ರಿ ಅಕ್ಷರ ಲೋಕಕ್ಕೆ ಪಯಣಿಸುತ್ತಿದ್ದ ಎದೆಗಾರಿಕೆಯೇ ’ಮಿತಿ’ಮೀರಿದ ದೃಷ್ಟಿಕೋನದವಳು ಎಂದು ಭಾವಿಸುವಂತಾಯಿತೋ ಏನೊ. ಅಥವಾ ಪ್ರತಿಯೊಂದು ಮೋಡಕ್ಕೂ ಅದರದೇ ಆದ ಮಿಂಚಿನ ಗೆರೆಯಿದೆ ಎನ್ನುವ ಜಿಡ್ಡುಗಟ್ಟಿದ, ಜವಾರಿ ವ್ಯಾಖ್ಯಾನವನ್ನೇ ಪುನರುಚ್ಛರಿಸಿಕೊಳ್ಳಲೇ ಹೇಳು. ಇನ್ನೂ ಒಂದು ಹೆಜ್ಜೆ ಹಿಂದೆಯೇ ಹೋಗಿ, ಓದಿಗೆ ಅನ್ವಯವಾಗುವ ’ರೀಡ್‌ ಬಿಟ್ವೀನ್‌ ದಿ ಲೈನ್ಸ್‌’ ಅನ್ನು ನಿನ್ನ ಹೇಳಿಕೆಗಳಿಗೆ ಹೋಲಿಸಲೆ? ಆ ಹೇಳಿಕೆಗಳ ನಡುವಿನ ’ಪಾಸ್‌’ (pause) ಅನ್ನು ಗ್ರಹಿಸುವ ವ್ಯವಧಾನ ನಿನ್ನ ಸುತ್ತಲಿನವರಿಗೆ ಉಳಿಯದೇ ಹೋಯಿತೋ ಹೇಗೆ?
...ಅರ್ಧಂಬರ್ಧ ಕಣ್ಣು ತೆರೆದ ಬೆಕ್ಕಿನಮರಿಯಂತೆ ಗೋಡೆಯಿಂದ ಗೋಡೆಗೆ ಹಾಯುತ್ತ ಬಂದೆನೋ ಏನೋ... ಎಳಸು ಕಾಲು. ಅಲ್ಲಲ್ಲಿ ಜೋಲಿ ತಪ್ಪಿರಬಹುದು ಕ್ಷಮಿಸಿಬಿಡು...

ಇಂತಿ
’.....’

4 comments:

sunaath said...

ಕಮಲಾ ಸುರೈಯಾ ನಮ್ಮ ಕಾಲದ frank and fearless ವ್ಯಕ್ತಿ. ಅವರ ಆಂತರ್ಯ ಅರಿಯಲು ಪ್ರಯತ್ನಿಸುವ ನಿಮ್ಮ ಲೇಖನ ವೈಶಿಷ್ಟ್ಯಪೂರ್ಣವಾಗಿದೆ.

ಧರಿತ್ರಿ said...

ಕಮಲದಾಸ್ ಇಡೀ ವ್ಯಕ್ತಿತ್ವವನ್ನು ಅತ್ಯಂತ ಭಾವುಕ ಬರಹದಿಂದ ಬಿಚ್ಚಿಟ್ಟಿದ್ದೀಯಾ..ಶ್ರೀ..ಅತ್ತುಬಿಟ್ಟೆ ಇದನ್ನು ಓದಿ.......
-ಧರಿತ್ರಿ

Chamaraj Savadi said...

ಕಮಲಾ ದಾಸ್‌ ಕವಿತೆಯೊಂದು ತುಂಬ ದಿನಗಳವರೆಗೆ ನನ್ನ ಸಂಗ್ರಹದಲ್ಲಿತ್ತು. ಯಾವನೋ ಪಾಪಿ ಗೆಳೆಯ ಪುಸ್ತಕ ಪಡೆದುಕೊಂಡವನು ವಾಪಸ್‌ ಮಾಡಲೇ ಇಲ್ಲ. ಅವನು ಕಮಲಾ ದಾಸ್‌ ಫ್ಯಾನೂ ಅಲ್ಲ, ಓದಿದರೆ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತನೂ ಅಲ್ಲ.

ಆ ಕವಿತೆಗಾಗಿ ಹುಡುಕುತ್ತಿದ್ದೇನೆ. ಸಿಕ್ಕರೆ ಅನುವಾದ ಮಾಡುವ ಆಸೆ. ಅನುವಾದ ಸಂಪ್ರದಾಯವಾದಿಗಳನ್ನು ಬೆಚ್ಚಿಬೀಳಿಸಿದರೂ ಅಚ್ಚರಿಯಿಲ್ಲ.

ಬರಹ ಚೆನ್ನಾಗಿದೆ. ಸ್ವಗತದಂತೆ. ಬಹುಶಃ ಕನ್ನಡ ಗೊತ್ತಿದ್ದರೆ, ಕಮಲಾದಾಸ್‌ ಬದುಕಿದ್ದರೆ, ಓದಿ ಮೆಚ್ಚುತ್ತಿದ್ದರು!

IBK said...

chennagide...

vandanegalu