Sunday, August 30, 2009

ಮೂರ್ತಿ ಚಿಕ್ಕದೆ...!

ಸಂಗೀತದಿಂದ ಗಂಗೂಬಾಯಿ ಹಾನಗಲ್‌ ದೊಡ್ಡವರಾದರು. ಗಂಗೂಬಾಯಿ ಅವರಿಂದ ಸಂಗೀತದ ಘನತೆ ಹೆಚ್ಚಾಯಿತು. ಗಂಡಸರು ಮತ್ತು ಕೆಳದರ್ಜೆಯ ಹೆಣ್ಣುಮಕ್ಕಳಿಗೆ ಸಂಗೀತ ಸೀಮಿತ ಎನ್ನುವ ಚೌಕಟ್ಟು ಮುರಿದರು. ಬಡತನದ ನಡುವೆಯೂ ಸಂಗೀತದ ಎವರೆಸ್ಟ್‌ ಏರಿದರು. ಗಂಗೆಯ ಹರಿವಿನುದ್ದಕ್ಕೂ ನೂರೆಂಟು ಕಥೆಗಳಿವೆಯಲ್ಲ, ಗಂಗೂಬಾಯಿ ಅವರ ಬದುಕು-ಸಾಧನೆಯ ಹಾದಿಯಲ್ಲೂ ಅಂಥವೇ ನೂರೆಂಟು ಕಥೆಗಳು. ಅಗಲಿದ ಸ್ವರಸಾಮ್ರಾಜ್ಞಿಗೆ ಅಕ್ಷರ ನಮನ..


ಮೊನ್ನೆ, ಒಂದ್‌ ನಾಲ್ಕೈದ ಸಾಲಿ ಹುಡುಗೋರು ನಮ್‌ ಮನೀ ಗೇಟಿನ ಹೊರಗ ನಿಂತು, ಗ್ವಾಡಿಮ್ಯಾಲಿನ ಬೋರ್ಡ್‌ ಓದ್ಕೊಂತ್‌ ನಿಂತಿದ್ವು. ಅವ್ರು ಒಳಗ ಬರ್‍ಲಿಕ್ಕೆ ಯಾಕೋ ಹಿಂದ ಮುಂದ ಮಾಡ್ಲಿಕ್ಹತ್ತಿದ್ದ ನೋಡಿ, ’ಯಾಕ್ರೋ ಹುಡುಗುರ್‍ಯಾ ಒಳಗ ಬರ್‍ರಿ ಏನ್‌ ಬೇಕಾಗಿತ್ತು ಅಂದೆ. ಅದಕ್ಕ ’ಗಂಗೂಬಾಯಿಯವರು ಬೇಕಾಗಿತ್ರಿ’ ಅಂದ್ರು. ನಾನರೋ ಗಂಗೂಬಾಯಿ. ಏನಾಗ್ಬೇಕಿತ್ತು ಹೇಳ್ರಿ ಅಂದೆ’. ’ಐ ನೀವ ಏನ್ರಿ..! ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತ ನಮ್ಮ ಪುಸ್ತಕದಾಗ ಕೊಟ್ಟಾರ್‍ರಿ. ನಮ್‌ ಸರ್‌ನೂ ಅಂದ್ರು, ಗಂಗೂಬಾಯಿ ಹಾನಗಲ್‌ ಅವರ ಮನೀ ಇಲ್ಲೇ ನಮ್‌ ಸಾಲಿ ಹಿಂದಿನ ಓಣ್ಯಾಗ ಐತಿ ಅಂತ. ಅದಕ್ಕ ನೀವು ಎಷ್ಟು ಗಿಡ್ಡ ಅದೀರಿ ಅಂತ ನೋಡ್ಕೊಂಡ್‌ ಹೋಗಾಕ ಬಂದಿವ್ರಿ...
ಧಾರವಾಡದ ಕರ್ನಾಟಕ ಕಾಲೇಜಿನ ಅಮೃತಮಹೋತ್ಸವದ ಸಂದರ್ಭದಲ್ಲಿ ಗಂಗಕ್ಕ ಈ ಸಂಗತಿ ಹೇಳಿದಾಗ ಸಭೆಯಲ್ಲಿ ನಗೆಯಲೆ. ಅವತ್ತು ಗಂಗಕ್ಕ ಈ ಘಟನೆಯನ್ನ ಕಣ್ಮುಂದೆ ತಂದುಕೊಂಡು ಮತ್ತೆ ಮತ್ತೆ ನಕ್ಕಿದ್ದರು. ನೋಡಿದವರಿಗೆ, ಅವರು ಹೆಚ್ಚು ನಕ್ಕರೆ ಎಲ್ಲಿ ಆಯಾಸವಾಗುತ್ತದೋ ಎನ್ನುವಷ್ಟು ಸಣ್ಣ, ತೆಳ್ಳನೆ ದೇಹ. ಅಂದು ಆ ಚಿಕ್ಕ ಸ್ವರಮೂರ್ತಿ ನೋಡಲು ಬಂದಿದ್ದ ಆ ಹುಡುಗರಿಗೆ ಸಿಕ್ಕಿದ್ದುಗಂಗಜ್ಜಿಯ ರವೆ ಉಂಡಿ!
ತಾಹಿ ಹೃದಯದ ಗಂಗಜ್ಜಿ ಬದುಕಿದ್ದೇ ಹಾಗೆ; ತುಂಬು ಪ್ರೀತಿಯಿಂದ. ತುಳುಕದಂಥ ವ್ಯಕ್ತಿತ್ವದೊಂದಿಗೆ. ಸ್ವರವೈಚಿತ್ರ್‍ಯ, ರಂಜನೀಯತೆ, ಪ್ರಯೋಗ, ವಿಜೃಂಭಣೆಯನ್ನೂ ದೂರ ನಿಲ್ಲಿಸಿ ತನ್ನೊಳಗಿನ ನಾದಸರಸ್ವತಿಯನ್ನು ಜೋಪಾನ ಕಾಯ್ದುಕೊಂಡರು. ಪರಂಪರಾ ಹಾಗೂ ಘರಾಣಾದ ನಿಲುವಿಗೆ ಬದ್ಧರಾಗಿ ಕಿರಾಣಾ ಘರಾಣಾದ ಪರಿಶುದ್ಧತೆ ಪ್ರತಿಪಾದಿಸಿದರು. ಅದಕ್ಕೇ ಅವರು ಎಂದಿಗೂ ಠುಮ್ರಿ, ಠಪ್ಪಾದಂಥ ಲಘುಶಾಸ್ತ್ರೀಯ ಸಂಗೀತ ಪ್ರಕಾರಗಳನ್ನು ಹಾಡಲು ಮನಸ್ಸು ಮಾಡಲಿಲ್ಲ. ಬೆಳೆಯುತ್ತಾ ಬೆಳೆಯಬೇಕು ಎನ್ನುವ ಅವರ ತತ್ವವೇ ಅವರನ್ನು ಎತ್ತರಕ್ಕೇರಿಸಿತು.
ಸುಮಾರು ಇಪ್ಪತ್ತಾರು ವರ್ಷಗಳ ಹಿಂದೆ ಪೂರ್ತಿ ಬೆಂಗಳೂರು ಕರ್ನಾಟಕ ಸಂಗೀತವನ್ನೇ ಉಸಿರಾಡುತ್ತಿದ್ದ ಸಂದರ್ಭದಲ್ಲಿ ಪಂ. ವಿನಾಯಕ ತೊರವಿ, ಪಂ. ಪರಮೇಶ್ವರ ಹೆಗಡೆ, ಡಾ, ನಾಗರಾಜ ಹವಾಲ್ದಾರ ಅವರ ಮೂಲಕ ಬೆಂಗಳೂರಿನಲ್ಲೂ ಹಿಂದೂಸ್ತಾನಿ ಸಂಗೀತದ ಎಳೆ ಹರಡಲು ಕಾರಣೀಕರ್ತರಾದರು.
‘Masterly tribute to the great master gayanacharya gururao deshpande’ ಅವತ್ತ ಹಿಂಗ ಡೆಕ್ಕನ್‌ ಹೆರಾಲ್ಡ್‌ ನೊಳಗ ಗಂಗಕ್ಕನ ಗಾಯನದ ಬಗ್ಗೆ ಹೆಡ್‌ಲೈನ್‌ ಬರೂದರ ಹಿಂದಿನ ಘಟನಾ ನೆನಪಾಗ್ತದ.. ಎನ್ನುತ್ತಾ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ವಿನಾಯಕ ತೊರವಿ ಎರಡೂವರೆ ದಶಕಗಳ ಹಿಂದು ಸ್ಪೂರ್ತಿ ಸುರುಳಿ ಬಿಚ್ಚಿದರು. ’ನೀ ಬೆಂಗಳೂರಿನ್ಯಾಗ ಹಿಂದೂಸ್ತಾನಿ ಬೆಳಸ್ತೀನಿ ಅನ್ನೂಹಂಗಿದ್ರ ಮಾತ್ರ ನಾ ಅವತ್ತ ಬರಾಕಿ. ಅಷ್ಟ ಅಲ್ಲ ಕೊನೀತನಕಾ ಸಂಗೀತ ಸಭಾ ನಡಿಸ್ಕೋತ ಹೋಗ್ಲಿಕ್‌ ನಿಇನ್‌ ಕಡೀಂದ್‌ ಆಗ್ತದೇನು ಹಂಗಿದ್ರಷ್ಟ ನಾ ಅವತ್ತ ಹಾಡಾಕಿ’ ಹಿಂಗ ಕಂಡೀಶನ್‌ ಹಾಕೀನ.. ಗುರುರಾವ್‌ ದೇಶಪಾಂಡೆ ಸಂಗೀತ ಸಬಾದ ಉದ್ಘಾಟನಾಕ ಒಪ್ಕೊಂಡ್ರು ಅಕ್ಕಾವ್ರು. ಆ ಮಾತಿನ ಮೇಲೆ ಅವರು ಅವತ್ತು ಬಂದ್ರು. ’ಮಿಯಾಕಿ ತೋಡಿ’ ಅದ್ಭುತವಾಗಿ ಹಾಡಿದ್ರು’.
’ಬರೇ ನಾವಷ್ಟ ಹಾಡಿದ್ರ ಹೆಂಗೋ? ನಾವ್‌ ಹೋದಮ್ಯಾಲೂ ಸಂಗೀತ ಉಳಿಬೇಕಂದ್ರ ಶಿಷ್ಯರನ್ನ ತಯಾರು ಮಾಡಬೇಕಪಾ. ಯಾವತ್ತೂ ಗುರುವಿನ ಸಾನಿಧ್ಯ ಭಾಳ ಮುಖ್ಯಾ ಅನ್ನೂದನ್ನ ನೆನಪಿಟ್ಕೊ. ಇನ್ನ .. ಅವ್ರ ಹಿಂಗ್‌ ಹಾಡ್ತಾರು, ಅವ್ರ ಹಂಗ್‌ ಹಾಡ್ತಾರೂ ಅನ್ನೂಕಿಂತ. ಅವರ ಹಾಡಿನೊಳಗಿನ ವಿಶೇಷತಾ ಏನ ಅದ? ಅದನ್ನ ನಾವು ಹೆಂಗ ಅಳವಡಿಸ್ಕೋಬೋದು ಅನ್ನೂದನ್ನ ವಿಚಾರ ಮಾಡಬೇಕು, ಅನುಭವಿಸ್ಕೋತ ಹಾಡಬೇಕು.ಆಗ ಹೆಸರು ಪ್ರಶಸ್ತಿ ತಾವ ನಮ್ಮ ಬೆನ್ನ ಹತ್ತತಾವು’. ಅಂತ ಆಗಾಗ ಹೇಳೋವ್ರು.’
ಅವರೆಂದೂ ಹುಟ್ಟಿದ ನೆಲವನ್ನು ಬಿಟ್ಟು ಕದಲಲಿಲ್ಲ. ಸಂಭಾವನೆ ನೆಚ್ಚಲಿಲ್ಲ. ಕಲೆ ಉಳಿಸಿ ಬೆಳೆಸಬೇಕೆನ್ನುವ ಇರಾದೆಯನ್ನು ನಿಂತ ನೆಲದಲ್ಲೇ ಹಸಿರಾಗಿಸಿದರು. ಗಂಟಲು ಬೇನೆಯಿಂದ ಧ್ವನಿ ಪೂರ್ತಿ ಕೈಕೊಟ್ಟಾಗ, ದೈಹಿಕ ಸ್ಥಿತಿ ಕ್ಷೀಣೀಸಿದ್ದಾಗಲೆಲ್ಲ ಅದಕ್ಕೆ ಮದ್ದಾಗಿದ್ದು ಸಂಗೀತವೇ.
ಹಿಂದೊಮ್ಮೆ ಗಂಗೂಬಾಯಿ ಫ್ರಾನ್ಸ್‌ನಲ್ಲಿ ಕಾರ್ಯಕ್ರಮ ಕೊಡಲು ಒಪ್ಪಿಕೊಂಡಾಗ ಅವರಿಗೆ ಎಂಬತ್ತೇಳು. ಆಗ ಅವರಿಗೆ ಹಾರ್ಮೋನಿಯಂ ಸಾಥ್‌ ನೀಡಿದ್ದು ಡಾ. ರವೀಂದ್ರ ಕಾಥೋಟಿಯವರು. ಅವರ ನೆನಪು ಕೇಳಿ; ’ಸಂಜೀಕ ಕಾರ್ಯಕ್ರಮ ಇತ್ತು. ಗಂಗೂಬಾಯಿಯವರಿಗೆ ಜೋರ ಜ್ವರಾ. ಮೈಕ್‌ ಇಲ್ಲದಂಥ ಮಾಡರ್ನ್‌ ವ್ಯವಸ್ಥಾ ಆ ಆಡಿಟೋರಿಯಮ್‌ದು. ಏನ್‌ ಮಾಡೂದಪಾ ಅಂತ ಚಿಂತಿ ಶುರುವಾತು. ಅವರ ಆತ್ಮಸ್ಥೈರ್ಯ ಅವತ್ತ ಪವಾಡನ ಮಾಡಿಬಿಟ್ತು! ಶುದ್ಧ ಕಲ್ಯಾಣ, ಬಾಗೇಶ್ರೀ, ಜೋಗಿಯಾ ರಾಗಗಳನ್ನ ಬರೋಬ್ಬರಿ ಒಂದೂವರಿ ತಾಸ ಹಾಡಿದ್ರು.’
ಇನ್ನ ಸಣ್ಣವರಿಗೆಲ್ಲ ಭಾಳ ಪ್ರೋತ್ಸಾಹ ಕೊಡ್ತಿದ್ರು. ’ಏನರ ತಪ್ಪಾತಂದ್ರ ಕ್ಷಮಿಸಿಬಿಡ್ರಿ ಅಂತ ಕೈಮುಗದ್ರ-’ತಪ್ಪು ಎಲ್ಲಾರೂ ಮಾಡ್ಲಿಕ್ಕೇ ಬೇಕು. ಆದ್ರ ಛಲೋತ್ನಂಗ ಪ್ರಾಕ್ಟೀಸ್‌ ಮಾಡಬೇಕು ಅಷ್ಟ’ ಅಂತ ನಕ್ಕಬಿಡ್ತಿದ್ರು.
ಗಂಗಕ್ಕ ಎಂದಿಗೂ ಸಾಥಿದಾರರ ಬಗ್ಗೆ ನಿರ್ದಿಷ್ಟ ಆಯ್ಕೆ ಇಟ್ಟುಕೊಂಡಿರಲಿಲ್ಲ. ಚಿಕ್ಕವರೇ ಆದರೂ ಅವರನ್ನು ಹುರಿದುಂಬಿಸುತ್ತ ಅವರಿಗೆ ಸಭಾಮನ್ನಣೆ ದೊರಕಿಸಿಕೊಡುತ್ತಿದ್ದರು. ಇದಕ್ಕೆ ಸಾಕ್ಷಿ ತಬಲಾವಾದ ಉದಯರಾಜ್‌ ಕರ್ಪೂರ್‌. ೧೯೯೨ರಲ್ಲಿ ಉದಯರಾಜ್‌ ಮೊದಲ ಬಾರಿ ಬರೋಡಾ ಕಾರ್ಯಕ್ರಮವೊಂದರಲ್ಲಿ ಗಂಗೂಬಾಯಿಯವರಿಗೆ ಸಾಥ್‌ ಕೊಡುವ ಸಂದರ್ಭ ಬಂತು. ’ಅವತ್‌ ನಮ್‌ ಗುರುಗಳು ಶೇಷಗಿರಿ ಹಾನಗಲ್‌ರಿಗೆ ಅಚಾನಕ್‌ ಆಗಿ ಆರಾಮಿಲ್ದಾತು. ನೀನ.. ಬಾರಸು ತಬಲಾ ಅಂತ ಕಳಿಸಿಕೊಟ್‌ಉ. ನನಗ ಬರೇ ೨೧ ವರ್ಷಾ. ಇಷ್ಟ ದೊಡ್ಡ ಕಲಾವಿದರ ಜೊತಿ ಹೆಂಗ ಬಾರಸೂದು ಅಂತ ಹೆದರಿಕಿ. ಕಾರ್ಯಕರಮ ಸುರು ಆತು. ನಡೂನಡೂವ ಗಂಗೂಬಾಯಿಯವರು ನನ್ನ ಕಡೀಂದ ಬೋಲ್‌ ಬಾರಿಸಿಸಿ ಜನರ ಕಡೀಂದ ವ್ಹಾ ವ್ಹಾ ಅನ್ನಿಸಿಬಿಟ್ರು! ಅವರು ಸಣ್ಣವರಿಗೆ ಪ್ರೋತ್ಸಾಹ ಕೊಡ್ತಿದ್ದ ರೀತಿ ಖರೇನ ಅದ್ಭುತ. ಯಾವತ್ತೂ ರೊಕ್ಕಕ್ಕ ಹಾಡ್ಲಿಲ್ಲ. ಸ್ವತಾ ಗಾಡಿ ಖರ್ಚ್‌ ಹಾಕ್ಕೊಂಡ ಕಾರ್ಯಕ್ರಮಕ್ಕೆ ಹೋಗ್ತಿದ್ರು. ಎಲ್ಲಾ ಸಾಧಿರಾರರ ಜೊತೀಗೇ ಪ್ರಯಾಣ ಮಾಡ್ತಿದ್ರು. ಅಂತಾ ಸಜ್ಜನಿಕೆ ಅವರಲ್ಲಿತ್ತು’. ಉದಯರಾಜ್‌ ನೆನಪುಗಳ ಭಾರದಲ್ಲಿ ಭಾವುಕರಾಗುತ್ತಾರೆ.
ಬದಲಾದ ಜೀವನ ಶೈಲಿ, ಆದ್ಯತೆಯನ್ನು ಮುಗ್ಧತೆಯಿಂದಲೇ ಸ್ವೀಕರಿಸುತ್ತ ಬಂದ ಗಂಗಕ್ಕ ಪದ್ಮಶ್ರೀ ಪುರಸ್ಕಾರ ಪಡೆದ ಸಂದರ್ಭದಲ್ಲಿ ಏಳು ವರ್ಷದ ಅವರ ಮರಿಮೊಮ್ಮಗಳು ಒಮ್ಮೆ ಕೇಳಿದಳಂತೆ; ’ಅಜ್ಜಿ, ಈ ಅವಾರ್ಡ್ ಯಾಕ ಬಂತು ನಿಂಗ?’ ಅದಕ್ಕೆ ಗಂಗೂಬಾಯಿ. ’ಸಂಗೀತಕ್ಕ’ ಅಂದ್ರಂತ. ’ನಾನೂ ಈ ಅವಾರ್ಡ್‌ ತಗೋತೇನಿ ಆದ್ರ ಸಂಗೀತಕ್ಕಲ್ಲ. ನನಗೇನ್‌ ಸೇರ್‍ತದೋ ಅದರಾಗ್‌!’ - ಆ ಪುಟ್ಟಿ ಹೇಳಿದಾಗ, ’ಈಗಿನ ಹುಡುಗೋರು ಹೆಂಗ ವಿಚಾರ ಮಾಡ್ತಾವು. ತಮ್ಮ ಬಗ್ಗೆ ತಾವ ಹೆಂಗ ನಿರ್ಧಾರ ತಗೋರಾವು. ಇಷ್ಟೆಲ್ಲಾ ಅವಕ್‌ ಹೆಂಗ ತಿಳೀತದ?’ ಎಂದು ಗಂಗಕ್ಕ ಮಗುವಿನಂತೆ ಅಚ್ಚರಿ ಪಟ್ಟಿದ್ದರು.
ಒಂದು ಸ್ವರಯಾತ್ರೆ ಮುಗಿದಿದೆ. ನೆನಪುಗಳ ಜಾತ್ರೆ ನಮಗುಳಿದಿದೆ.


(’ಕಿರಾಣಾ ಘರಾಣೆಯ ಶಾರದೆ’ ಎನ್ನುವ ಶೀರ್ಷಿಕೆಯಡಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿತ್ತು)