Saturday, September 5, 2009

ಅಜ್ಜಿಯ ಪೇಢೆ


ಅರಳು ಮರಳು ಅಂತಾರಲ್ಲ ಅದು ಅವ್ರ ಸಂಗೀತ ಶಕ್ತಿಗೆ ಹೆದರಿ ದೂರ ನಿಂತಿತ್ತೋ ಏನೋ...


ಗುರುಗೋಳು ಅನ್ನೂಕಿಂತ ಅಜ್ಜಿ ಅಂತನ ಮಾತಾಡ್ತ ಹೋದ್ರು ಕುಂದಗೋಳದ ಅಶೋಕ್‌ ನಾಡಗೇರ್‌.
----------------------

ಕಿಟ್ಟಕ್ಕಾರು ತೀರ್‍ಕೊಂಡ್‌ ಮ್ಯಾಲಂತೂ ಹಾಡೂದ ನಿಲ್ಲಿಸಿಬಿಟ್ಟಿದ್ರು. ಸೆಪ್ಟಂಬರ್‌ನೊಳಗ ನಮ್ಮ ಕುಂದಗೋಳ ವಾಡೆದಾಗ ಗಂಡಾಬಂಧ ಇಟ್ಕೊಂಡಿದ್ವಿ. ಬಾಬಣ್ಣ, ನಾರಾಯಣ (ಗಂಗೂಬಾಯಿಯವರ ಮಕ್ಕಳು) ಅವತ್ತ ಅಜ್ಜಿ ಹಾಡೂದು ಬ್ಯಾಡ. ಅಕಿಗೆ ಪ್ರಾಣಾಪಾಯ ಅದ ಅಂದ್ರು. ಆದ್ರ ಮೊಮ್ಮಗ ಮನೋಜ್‌ ಪಟ್ಟಬಿಡದ ಅಜ್ಜಿ ಕಡೀಂದ್‌ ಹಾಡಿಸೇ ಬಿಟ್ರು. ಆವತ್ತ ಅಭೋಗಿ ಹಾಡಿದ್ರು. ಆಮ್ಯಾಲಿಂದ ಅವ್ರಿಗೆ ಆತ್ಮವಿಶ್ವಾಸ ಬಂತು. ಮತ್ತ ಪಬ್ಲಿಕ್‌ನ್ಯಾಗ ಹಾಡ್ಲಿಕ್ಕೆ ಸುರು ಮಾಡಿದ್ರು. ಮುಂದ ೨೦೦೬ರೊಳಗ ಬೆಂಗಳೂರಿನ್ಯಾಗ ಚೌರಾಸಿಯಾ ಅವ್ರ ಜೊತಿನೂ ಹಾಡಿದ್ರು.
ಎರಡು ತಿಂಗಳ ಹಿಂದೆ ಯಡಿಯೂರಪ್ಪನವರು ಅಜ್ಜೀನ್ನ ಭೇಟಿಯಾಗ್ಲಿಕ್ಕೆ ಬಂದಿದ್ರು. ಆಗ ‘ಏನಾತು ಕುಂದಗೋಳದಾಗ ದೊಡ್ಡ ಸಭಾಂಗಣ ಕಟ್ಟಸೂದು?’ ಅಂತ ಅಜ್ಜಿ ಕೇಳಿದ್ರು. ಮುಖ್ಯಮಂತ್ರಿಗಳು ‘ಎರಡು ಕೋಟಿ ರೂಪಾಯಿ ಸ್ಯಾಂಕ್ಷನ್‌ ಮಾಡಿದ್ದೇನೆ’ ಅಂದ್ರು. ‘ಬರೀ ರೊಕ್ಕಾ ಕೊಟ್ರ ಸಾಲೂದಿಲ್ಲ. ಲಗೂನ ಕಟ್ಟಸ್ರಿ, ನಾ ಅದರೊಳಗ ಹಾಡಬೇಕು. ನಾ ತಿನ್ನೂ ಪ್ರತಿಯೊಂದ್‌ ಅಗಳಿನ ಋಣಾ ಆ ಕುಂದಗೊಳದ್ದು’ ಅಂತಂದ್ರು ಅಜ್ಜಿ. ಆಗ ಪತ್ರಕರ್ತರೆಲ್ಲಾ, ಅದೇನು? ಬರೇಬರೆ ಕುಂದಗೋಳ ಅಂತೀರಿ ಅಂತ ಕೇಳಿದ್ದಕ್ಕ ’ಕುಂದಗೋಳ ಮತ್ತ ತುಪ್ಪ ಇವೆರಡ ನನಗ ಸೇರ್‍ತಾವು’ ಅಂತ ಅಜ್ಜಿಯಂದ್ರು. ಅಜ್ಜಿ ಅಗದೀ ಮಿತಾಹಾರಿ. ಬಿಸಿಬಿಸಿ ಅನ್ನ, ಮೆಂತ್ರೆಹಿಟ್ಟು ಅನ್ನದಷ್ಟನ ತುಪ್ಪ!
ಮೊದ್ಲೇಕ ನನಗ ಅವ್ರು ಹೇಳಿಕೊಟ್ಟಿದ್ದು ಲಲತ್‌. ಮೂರು ವರ್ಷ ಹೇಳಿದ್ರು. ಒಮ್ಮೆ ಅವ್ರಿಗೆ ಕೇಳಿದೆ-‘ಎಲ್ಲಾರೂ ಭಾಗೇಶ್ರೀ ಹಾಡಬೇಕಾದ್ರ ಪಂಚಮ್‌ ಹಚ್ಚತಾರು. ಮತ್ತ ನೀವು ಪಂಚಮ್‌ ಯಾಕ್‌ ಹಚ್ಚೂದಿಲ್ಲ? ಹೀರಾಬಾಯಿ ಬಡೋದೇಕರ್‌, ಪ್ರಭಾ ಅತ್ರೆ, ಕಿಶೋರಿ ಅಮ್ಹೋಣ್‌ಕರ್‍ ಇವ್ರೆಲ್ಲಾ ಪಂಚಮ್‌ ಹಚ್ಚಿ ಹಾಡ್ತಾರು’ ಅಂತ. ಅದಕ್ಕವರು, ‘ನಮ್ಮ ಗುರುಗೋಳು ಸವಾಯಿ ಗಂಧರ್ವರು ಹಿಂಗ ಹಾಡಬೇಕು ಅಂತ ಹೇಳ್ಯಾರು. ನಮ್ಮ ಘರಾಣಾದಾಗ ಹಿಂಗ ಹಾಡಬೇಕು’ ಅಂತ ಖಡಕ್‌ ಆಗಿ ಹೇಳಿಬಿಟ್ರು.
ಪಾಠಕ್ಕ ಹೋದಾಗ ಅವತ್ತೊಂದಿನ ಅಢಾಣಾ ಹಾಡಿದೆ. ಯಾವತ್ತೂ ಏನೂ ಹಂಗೆಲ್ಲಾ ತಿನ್ಲಿಕ್ಕೆ ಕೊಟ್ಟಾವ್ರಲ್ಲ ಏನಲ್ಲ. ಭಾರೀ ಕಟ್ಟನಿಟ್ಟು ಶಿಷ್ಯಾರ ಜೊತಿ. ಏನೊಂದೂ ಉಣ್ಣು ತಿನ್ನು ಅಂತ ಯಾವತ್ತೂ ಅಂದಾವ್ರನೂ ಅಲ್ಲ. ಪ್ರಶಂಸಾ ಅಂತೂ ದೂರದ ಮಾತು. ಆದ್ರ ಅವತ್ತ ನಂಗ ಪೇಢೆ ಕೊಟ್ಟಬಿಟ್ರು ಅಜ್ಜಿ! ಭಾಳ ಖುಷಿ ಆತು. ಆಗ ನನಗ ಏನ್‌ ನೆನಪಾತಪಾ ಅಂದ್ರ... ‘ಕುಂದಗೋಳದಾಗ ಅಜ್ಜಿಯವ್ರ ಗುರುಗೋಳ ಮನೀ ಬಾಜೂಕ ಒಂದ ಹಾಲಿನ ಅಂಗಡಿ ಇತ್ತಂತ. ಯಾವತ್ತರ ಒಂದೊಂದ್‌ ದಿವ್ಸ್‌ ಪ್ರಾಕ್ಟೀಸ್ ಮುಗದ ಮ್ಯಾಲ ಹಾಲಿನ ಅಂಗಡಿಗೆ ಹೋಗಿ ಹಾಲು ಕುಡಸ್ತಿದ್ರಂತ ಅವ್ರ ಗುರುಗೋಳು. ಹಂಗ ಮಾಡಿದ್‌ ದಿವ್ಸ್‌ ಇವ್ರು ಅನಕೋತಿದ್ರಂತ. ತಾ ಹಾಡಿದ್ದು ಗುರುಗೋಳಿಗೆ ಸೇರೇದ ಅಂತ. ಹಂಗ ನನಗೂ ಅಜ್ಜಿ ಅವತ್ತ ಪೇಢೆ ಕೊಟ್ಟಾಗ ಅಂದಾಜು ಮಾಡಕ್‌ಒಂಡೆ, ಬಹುಶಃ ಅಜ್ಜಿಗೆ ನಾ ಹಾಡಿದ್ದು ಅವತ್ತ ಸೇರಿತ್ತು ಅಂತ.
ಮತ್ತ ಅಜ್ಜಿಗೆ ಅಷ್ಟ ವಿದ್ವತ್‌ ಇತ್ತು, ಎಲ್ಲಾ ಇತ್ತು, ಆದ್ರ ತನಗ ಗೊತ್ತಿಲ್ಲದ್ದನ್ನ ಗೊತ್ತಿಲ್ಲಂತ ಖಂಡತುಂಡವಾಗಿ ಹೇಳಿಬಿಡ್ತಿದ್ರು. ಒಮ್ಮೆ ಏನಾತು...ಹಿಂದೊಮ್ಮೆ ಕುಂದಗೋಳದೊಳಗ ಸವಾಯಿ ಗಂಧರ್ವರ ಪುಣ್ಯತಿಥಿ ಟೈಮಿನ್ಯಾಗ ಎಸ್‌. ಎಲ್‌. ಭೈರಪ್ಪನವ್ರು ಗೆಸ್ಟ್‌ ಆಗಿ ಬಂದಿದ್ರು. ರಾಜೀವ್‌ ತಾರಾನಾಥ್‌ ಆಗ ಚಾರುಕೇಶಿ ಬಾರಿಸಿದ್ರು. ಭೈರಪ್ಪನವ್ರು ಅಜ್ಜಿಗೆ, ಚಾರುಕೇಶಿ ಯಾವ ಥಾಟ್‌? ಅಂತ ಕೇಳಿದ್ರು. ಅಜ್ಜಿ ’ನನಗ ಗೊತ್ತಿಲ್ಲಪ್ಪ’ ಅಂತ ಸಜೀಕ ಹೇಳಿದ್ರು. ಹಂಗ ನೋಡಿದ್ರ ಅಜ್ಜಿ ಏನೋ ಒಂದು ಹೇಳಿಬಿಡಬಹುದಾಗಿತ್ತು. ಆದ್ರ ಹಂಗ ಮಾಡ್ಲಿಲ್ಲ ಅವ್ರು.
ಅಷ್ಟ ಖಡಕ್‌, ಜೋರ್‌, ಸರಳ ಇದ್ದ ಅಜ್ಜಿನ್ನ ಅಳಸಬೇಕಂದ್ರ ಅವ್ರ ಅವ್ವನ ನೆನಪ ತಗೀರಿ ಸಾಕು ಅಂತ ಅಜ್ಜಿ ಬಗ್ಗೆ ಡಾಕ್ಯುಮೆಂಟರಿ ತಗದ ವಿಜಯಾ ಮುಳೆಯವ್ರು ಅನ್ನೋವ್ರು. ನನ್ನ ಸಲವಾಗಿ ಎಲ್ಲಾ ತ್ಯಾಗ ಮಾಡಿ ನಮ್ಮವ್ವ ಹೊಂಟ್ಹೋದ್ಲು. ನಾ ಇಷ್ಟೆಲ್ಲಾ ಹೆಸರ ಗಳಿಸಿದೆ. ಸಾಧನಾ ಮಾಡಿದೆ. ಪ್ರಶಸ್ತಿಬಂದು, ಆದ್ರ ಅಕಿ ಅದನ್ನೆಲ್ಲಾ ನೋಡ್ಲೇ ಇಲ್ಲ ನೋಡು ಅಂತ ಕಣ್ಣೀರ ಹಾಕೋವ್ರು.
ಅಜ್ಜಿ ಕೊನೀಸಲ ಹುಬ್ಬಳ್ಯಾಗ ಅಡ್ಮಿಟ್‌ ಆಗೂ ಹಿಂದಿನ ದಿವಸ ಪಾಠಕ್ಕ ಹೋಗಿದ್ದೆ. ಪಾಠ ಅಂದ್ರ ಅವ್ರ ಮನೀಗ್ ಹೋಗಿ ಇಡೀ ದಿವ್ಸ ಹಾಡ್ಕೋತ ಕೂಡುದು. ಬೆಳಗ್ಗೆ ತೋಡಿ, ಮಧ್ಯಾಹ್ನ ಮುಲ್ತಾನಿ, ಹಿಂಗ ಆಯಾ ಟೈಮಿಗೆ ಅದದ ರಾಗಾನ ಹಾಡಬೇಕು. ಅವತ್ತ ಅಭೋಗಿ ಹಾಡಿ ಮುಗಿಸಿದ ಮ್ಯಾಲ ಬಸಂತ ಹಾಡ್ಕೋತ ಕೂತೆ. ಹಗೂರಕ ಬಾತ್ರೂಂ ಹೊಂಟನಿತಾವ್ರು, ಹೊಳ್ಳು ಬಂದು ಬಸಂತದ ಒಂದು ಸಂಗತಿ ಹಾಡಿತೋರ್‍ಸಿ, ಬಸಂತ ರಾಗಕ್ಕ ಈ ಸ್ವರಸಂಗತಿನ ಜೀವ. ಅಬ್ದುಲ್‌ ಕರೀಂ ಖಾನರ ’ಪಿಯಾ ಸಮಗ ಖೇಲೋರೆ..’ ಕೇಳೀಯಿಲ್ಲ? ಆ ರೆಕಾರ್ಡಿಂಗ್‌ನ್ಯಾಗ ಅವ್ರ ಇದನ್ನ ಹಾಡ್ಯಾರು ನೋಡು ಅಂತಂದ್ರು. ಅರಳು ಮರಳು ಅಂತಾರಲ್ಲ ಅದು ಅವ್ರ ಸಂಗೀತದ ಶಕ್ರಿಗೆ ಹೆದರಿ ದೂರ ಇಂತಿತ್ತೋ ಏನೋ...

Friday, September 4, 2009

ಸ್ವಾಭಿಮಾನದ ಅವ್ವ


’ಸುಲಭಾ.. ನನ್ನ ಸಂಸಾರ ದೊಡ್ಡದು, ಪ್ರಶಸ್ತಿಗಳೂ ದೊಡ್ಡು, ಜಡ್ಡೂ ದೊಡ್ಡದು. ದೇವ್ರು ದುಃಖಾನೂ ದೊಡ್ಡದ ಕೊಟ್ಟಬಿಟ್ಟ ನೋಡವಾ. ತಾಯಿ ಮುಂದ ಮಗಳ ಹೋಗಬಾರದವಾ ಹೋಗಬಾರದು’ ಅಂತ ಮ್ಯಾಲಿಂದ ಮ್ಯಾಲೆ ಕಣ್ಣೀರ ಹಾಕಾವ್ರು.

-------------------------------------------------
ಡಾ. ಸುಲಭಾ ದತ್‌ ನೀರಲಗಿ ಕಿತ್ತೂರಿನ ಕಾಲೇಜೊಂದರಲ್ಲಿ ಸಂಗೀತ ಉಪನ್ಯಾಸಕಿ. ಗುರು ಗಂಗೂಬಾಯಿ ಹಾನಗಲ್‌ ಅವರನ್ನು ನೆನೆದದ್ದು ಹೀಗೆ...

ಅಕ್ಕಿ ಆರಸಕೋತ, ಮೊಮ್ಮಗಳಿಗೆ ಹೆರಳ ಹಾಕ್ಕೋತ, ಮಜ್ಜಿಗಿ ಕಡಕೋತ, ಬರಾವ್ರ ಹೋಗಾವ್ರಿಗಿ ಮಾತಾಡಕೋತ, ಆಜೂ-ಬಾಜೂ ಮನ್ಯಾವ್ರ ಜೊತಿ ಹರಟಿ ಹೊಡ್ಕೋತ ನಮ್ಮ ಪಾಠ ನಡೀತಿತ್ತು. ಎದರಾ-ಬದರಾ ಕೂತು ಯಾವತ್ತೂ ಪಾಠಾನ ಮಾಡ್ಲಿಲ್ಲ. ಅಡಗಿ ಮನ್ಯಾಗರ ಇರ್‍ಲಿ, ಅಂಗಳದಾಗರ ಇರ್‍ಲಿ, ಹಾಡೂದೆಲ್ಯರ ಒಂದೀಟ ತಪ್ಪ ಆತಂದ್ರ ಸಾಕೂ ಖೋಲೀತನಕ ಬಂದು ಹಂಗಲ್ಲ ಹಿಂಗ ಅಂತ ಹೇಳಿ ಮತ್ತ ಹೋಗ್ಬಿಡ್ತಿದ್ರು.
ಕರ್ನಾಟಕ ವಿಶ್ವವಿದ್ಯಾಲದೊಳಗ ಎಂಎ ಮಾಡೂಮುಂದ ಅವ್ರು ನಮಗ ಗೆಸ್ಟ್‌ ಲೆಕ್ಚರರ್‌ ಆಗಿ ಬರ್‍ತಿದ್ರು. ಸಿಲಾಬಸ್ಸಿಗೆ ಇದ್ದಷ್ಟ ಹೇಳಿ ಹೋಗ್ತಿದ್ರು. ಆದ್ರ ನನಗ್ಯಾಕೋ ಅವ್ರ ಹತ್ರನ ಕಲೀಬೇಕು ಅಂತ ಭಾಳ ಅನ್ನಸ್ತಿತ್ತು. ಮುಂದ ಒಂದ್‌ ದಿವ್ಸ ಅವ್ರ ಶಿಷ್ಯಾಳನೂ ಆದೆ. ಮೊದ್ಲೇಕ ಅವ್ರ ಮನೀಗ್‌ ಹೋದಾಗ ನೋಟ್‌ಬುಕ್‌ ನೋಡಿ, ’ನೀ ನೋಟ್‌ಬುಕ್‌ನ್ಯಾಗ ಬರಕೊಂಡ್ರ ಅದು ಅದರಾಗ ಉಳೀತದ. ತಲಿಯೊಳಗ ಬರ್‍ಕೊಬೇಕು’ ಅಂತಂದ್ರು. ಆವತ್ತಿಂದ ನಾ ನೋಟ್‌ಬುಕ್ಕ ಒಯ್ಯೂದ ಬಿಟ್ಟಬಿಟ್ಟೆ.
ಮೊದಲೆಲ್ಲಾ ಅವ್ರಂದ್ರ ಅಂಜಿಕಿ, ಇತ್ತಿತ್ತಲಾಗಿ ನಮ್‌ ಜೊತಿ ಸ್ವಲ್ಪ ಸಲಿಗಿಂದ ಇರ್‍ತಿದ್ರು. ಕಲಸೂ ವಿಷಯಕ್ಕ ಮಾತ್ರ ರಿಜಿಡ್‌. ಮದ್ಲೇಕ ನನಗ ’ತೋಡಿ’ ಹೇಳ್ಕೊಟ್ರು. ಹೆಚ್ಚೂಕಮ್ಮಿ ಒಂದವರ್ಷದ ತನಕಾನೂ ಅದ ರಾಗದಾಗ. ಮಂದ್ರ, ಮಧ್ಯ ಸಪ್ತಕದಾಗ ಎರಡೆರಡ ತಾಸ ಹೇಳಿಕೊಡ್ತಿದ್ರು. ಅಗೆಲ್ಲಾ ನನಗ ಬ್ಯಾಸರಾಗ್ತಿತ್ತು. ಒಮ್ಮೊಮ್ಯಂತೂ ಹೊಟ್ಟಿ ನೋವು ಬಂದಂಗ ಆಗೂದು. ಯಾವಾಗರ ಮುಗಸ್ತಾರಪ್ಪಾ ಅಂತ ಅನ್ಸೂದು. ಒಮ್ಯಂತೂ ತಿಂಗಳಾನಗಟ್ಟಲೆ ಮ್ಯಾಲಿನ ಷಡ್ಜದ ತನಕ ಹೋಗಲೇ ಇಲ್ಲ (ಆಲಾಪದ ಮೂಲಕ ಸ್ವರದಿಂದ ಸ್ವರಕ್ಕೆ ನಿಧಾನ ಕ್ರಮಿಸುವುದು ಕಿರಾಣಾ ಘರಾಣಾದ ವೈಶಿಷ್ಟ್ಯಗಳಲ್ಲೊಂದು). ಒಳಗ ಹೋಗ್ಯಾರ ಬಾ ಅಂತ ಹೇಳಿ ಷಡ್ಜಕ್ಕ ಏನರ ಸ್ವರಾ ಹಚ್ಚೀದ್ರ ಸಾಕು ಹೊಳ್ಳಿ ಬಂದಬಿಡಾವ್ರು.
ಹಾಂ... ಅಂದ್ಹಂಗ ಅವ್ರಿಗೆ ಒಬ್ಬರ ಇಸ್ಪೀಟ್‌ ಆಡ್ಕೋತ ಕೂಡೂ ಖಯಾಲಿ ಇತ್ತು. ಇತ್ತ ನಾವು ಹಾಡ್ಕೋತ ಕೂಡಬೇಕು ಅವ್ರು ಒಬ್ರ ಇದ್ರಂದ್ರ ಇಸ್ಪೀಟ್‌ ಆಡ್ಕೋತ ಕೂಡಾವ್ರು. ಮತ್ತ ಅವ್ರ ಇಲ್ಲಂದ್ರನೂ ಅವರ ಮನೀಗ್‌ ಹೋಗಿ ಪ್ರಾಕ್ಟೀಸ್‌ ಮಾಡ್ಕೋತ ಕೂಡ್ರಿದ್ವಿ. ಇನ್ನ ನನ್ನ ಲಗ್ನದ ವಿಚಾರ ಬಂದಾಗ, ನಮ್ಮ ಮನೀಯವ್ರಿಗೆಲ್ಲ ಕರಿಸಿ ಹೇಳಿದ್ರು-’ನೋಡ್ರಿ ಅಕಿ ಧ್ವನಿ ಭಾಳ ಚುಲೋ ಅದ. ಅಕಿನ್ನ ಬಿಡಸಬ್ಯಾಡ್ರಿ’ ಅಂತ. ಹಂಗ ಮುಂದ ನೌಕ್ರಿ ಬಂದ ವೇಳ್ಯಾಕನೂ, ’ಯಾಕ ನಿನಗ ನೌಕ್ರಿ ಗೀಕ್ರಿ? ಸುಮ್ನ ಪ್ರಾಕ್ಟೀಸ್‌ ಮಾಡು. ಇದು ದೇವರ ದೇಣಗಿ ಅದ’ ಅಂತಂದ್ರು. ಆದ್ರ ನಾ ನೌಕ್ರಿಗೆ ಹೋಗೂದನ್ನ ಬಿಡಲಿಲ್ಲ. ಮುಂದ ಅವ್ರಿಗೇ ಮನವರಿಕಿ ಆತು. ಇಕಿ ಪ್ರಾಕ್ಟೀಸ್‌ ಬಿಡೂದಿಲ್ಲ ಅನ್ನೂದು.
ಆಗಾಗ ಹಿಂದಿಂದೆಲ್ಲಾ ನೆನಪ ತಕ್ಕೊಂಡ ಕೂಡ್ತಿದ್ರು. ಕಾರ್ಯಕ್ರಮಕ್ಕ ಅಂತ ಹೋದಲ್ಲೆಲ್ಲಾ, ಮೂರು ಮಕ್ಕಳನ್ನ ಕಟ್ಕೊಂಡ್‌ ಪಾಳೀ ಬರೂತನಕಾ ಬೆಳ್ಳಬೆಳತನಕಾ ಕಾಯ್ಕೋತ ಕೂಡ್ತಿದ್ದದ್ದು, ಉತ್ತರ ಭಾರತದ ಕಡೆ ಟ್ರೇನಿನ್ಯಾಗ ಪ್ರಯಾಣ ಮಾಡೂವಾಗ ಕೈಯ್ಯಾಗ ರೊಕ್ಕಾ ಇಲ್ಲದ, ಹೊಟ್ಟೆ ಕಟ್ಕೊಂಡ್‌ ತ್ರಾಸ್‌ ಪಟ್ಟಿದ್ದು ಒಂದ ಎರಡ....
ಅಕ್ಕಾವ್ರು ವಕೀಲರಿಗೆ ಎರಡನೇಹೆಂಡತಿ ಆಗಿ ಹೋದಾವ್ರು. ಮನೀ ಬಾಳೇಕ ತೊಂದ್ರಿ ಏನಿಲ್ಲ ಅಂದ್ರೂ ತನ್ನ ಮಕ್ಕಳನ್ನ ತಾನ ಸಾಕಬೇಕು ಅನ್ನೂ ಸ್ವಾಭಿಮಾನ ಅವ್ರಲ್ಲಿತ್ತು. ಆಗಾಗ ಹೇಳ್‌ಆವ್ರು ’ ನೋಡವಾ, ನಾ ಎಂದೂ ರೊಕ್ಕದ ಮಾರಿ ನೋಡಿ ಕಲಸೂವಾಕಿ ಅಲ್ಲಾ..’ ಅಂತ.
ನಂದವತ್ತ ಆಕಾಶವಾಣ್ಯಾಗ ಆಡಿಶನ್‌ ಇತ್ತು. ಅವ್ರಂದ್ರ ಇಷ್ಟ ಹೆದರ್‍ತಿದ್ದೆ.. ಆದ್ರ ಅವತ್ತವ್ರು ಬಂದು ಸ್ಟುಡಿಯೋನ್ಯಾಗ ಬಂದು ಕೂತಬಿಟ್ರು. ನನ್ನ ಮಾರಿ ನೋಡಿದಾವ್ರನ, ’ನಾ ಇದ್ದದ್ದಕ್ಕ ಇಕಿ ಯಾಕೋ ಗಾಬ್ರಿಯಾಗ್ಯಾಳ, ನಾಳೆ ಆಡಿಶನ್‌ ಮಾಡ್ರಿ ಇಕೀದು’ ಅಂತ ಆಕಾಶವಾಣಿಯವ್ರಿಗೆ ಹೇಳಿದ್ರು.
ಮತ್ತ ಮರದಿನಾ ಆಡಿಶನ್‌ ಆತು. ನನ್ ಗೊತ್ತಿಲ್ಲದನ ನಾ ಹೆಂಗ ಹಾಡ್ತೇನಿ ಅಂತ ಕೇಳಿಸ್ಕೊಳ್ಳಲಿಕ್ಕೆ ಆಕಾಶವಾಣಿಗೆ ಬಂದಿದ್ದನ್ನ ಆಮ್ಯಾಲ ಹೇಳಿದ್ರು.
ಕಿಟ್ಟಕ್ಕಾರು ತೀರ್‍ಕೊಂಡ್‌ಮ್ಯಾಲಂತೂ ಭಾಳ ತ್ರಾಸ ಮಾಡ್ಕೊತಿದ್ರು. ’ಸುಲಭಾ.. ನನ್ನ ಸಂಸಾರ ದೊಡ್ಡದು, ಪ್ರಶಸ್ತಿಗಳೂ ದೊಡ್ಡು, ಜಡ್ಡೂ ದೊಡ್ಡದು. ದೇವ್ರು ದುಃಖಾನೂ ದೊಡ್ಡದ ಕೊಟ್ಟಬಿಟ್ಟ ನೋಡವಾ. ತಾಯಿ ಮುಂದ ಮಗಳ ಹೋಗಬಾರದವಾ ಹೋಗಬಾರದು’ ಅಂತ ಮ್ಯಾಲಿಂದ ಮ್ಯಾಲೆ ಕಣ್ಣೀರ ಹಾಕಾವ್ರು.
ಸ್ವರದ ಆನಂದಾನ ಮೊದಲ ನಾವ ತಗೊಬೇಕು. ಆಮ್ಯಾಲ ಅಲ್ಲೇನ ಕೇಳೂವಾವ್ರಿಗೂ ಅದರ ಆನಂದಾ ದಕ್ಕೂದು ಅಂತ ಆಗಾಗ ಹೇಳ್ತಾ ಹೋಗೇಬಿಟ್ರು ನಮ್ಮಕ್ಕಾ...

Wednesday, September 2, 2009

ಗುರುಗಳ ಕರುಣಿಸಿದ ಅಕ್ಕ

ಪಂ. ರವೀಂದ್ರ ಯಾವಗಲ್‌ ಕಂಡಂತೆ...
------------------------------------------


ಅಕ್ಕಾವ್ರ ಮನೀಗೆ ಹೋದಾಗ ಹತ್ತು ವರ್ಷದಾವ ಇದ್ದೆ. ಶೇಷಗಿರಿ ಹಾನಗಲ್‌ ಅವ್ರ ಕಡೆ ತಬಲಾಕ ಹಚ್ಚಬೇಕು ಅಂತ ನಮ್ಮ ಅಪ್ಪ ಕರ್‍ಕೊಂಡು ಹೋಗ್ತಿದ್ರು. ಮ್ಯಾಲಿಂದ್‌ ಮ್ಯಾಲ ಅವ್ರ ಮನೀಗ್‌ ಹೋಗೂದು ಬರೂದು ನಡೀತಾನ ಇತ್ತು. ಪ್ರತೀ ಸಲಿ ಹೋದಾಗನೂ, ಶೇಷಗಿರಿ ಹಾನಗಲ್‌ರು, ’ನೋಡೂಣು’ ಅಂತ ಹೇಳಿ ಕಳಸ್ತಿದ್ರು. ಆಗಿನ ಕಾಲನ ಹಂಗಿತ್ತು. ಶಿಷ್ಯನ ತಾಳ್ಮಿ, ಇಚ್ಛಾ, ಭಕ್ತಿ, ಶ್ರದ್ಧಾ ಎಲ್ಲಾನೂ ಪರೀಕ್ಷೆ ಮಾಡೀನ ಮುಂದ ಕಲಸ್ಲಿಕ್ಕೆ ಸುರು ಮಾಡ್ತಿದ್ರು. ನಾವು ಹಗಲೆಲ್ಲ ಗುರುಗಳ ಮನೀಗೆ ಓಡಾಡೂದ್‌ ನೋಡಿ ಒಮ್ಮೆ ಅಕ್ಕಾವ್ರು ’ಎಷ್ಟು ಸರ್ತೆ ಆ ಹುಡುಗನ್ನ ಓಡ್ಯಾಡಸ್ತೀ..? ಮೊದಲ ತುಗೋ ಆ ಹುಡುಗನ್ನ’ ಅಂದ್ರಂತ
ಆಮ್ಯಾಲ ಕಡೀಕ ನಮ್ಮ ಗುರುಗೋಳು ತಬಲಾ ಕಲಸ್ಲಿಕ್ಕೆ ಒಪ್ಕೊಂಡ್ರು. ಮುಂದಿನ ವರ್ಷನ ನನಗ ಅಕ್ಕಾವ್ರ ಶೀಫಾರಸ್ಸಿನ ಮ್ಯಾಲ ಕುಂದಗೋಳದ ಸವಾಯಿ ಗಂಧರ್ವ ಉತ್ಸವದಾಗ ಸೋಲೋ ಬಾರಸ್ಲಿಕ್ಕೆ ಅವಕಾಶ ಕೊಡ್ಸಿದ್ರು. ಅವತ್ತ ನಡದಿದ್ದಕ್ಕ ಅದೃಷ್ಟ ಅನಬೇಕೋ ಏನೋ ಗೊತ್ತಿಲ್ಲ. ಯಾಕಂದ್ರ ನನಗ ಲೆಹರಾ ಹಿಡಿದವ್ರು ಆಗಿನ ಕಾಲಕ್ಕ ದೊಡ್ಡ ಹಾರ್ಮೋನಿಯಂ ಕಲಾವಿದರು. ಅನ್ನಸ್ಕೊಂಡಿದ್ದ ಅಪ್ಪಾರಾವ್‌ ಜಳಗಾಂವಕರ್‌ ಅವ್ರು! ಭೀಮಸೇನ್‌ ಜೋಶಿ ಮತ್ತ ಅವರ ಸಮಕಾಲೀನ ಕಲಾವಿದರಿಗೆ ಹಾರ್ಮೋನಿಯಂ ಸಾಥ್‌ ಕೊಟ್ಟಿದ್ದ ಅವ್ರು ಅಕ್ಕಾವ್ರ ಹೇಳಿದ್ರಂತ ನನಗ ಲೆಹರಾ ಹಿಡಿದ್ರು. ಮತ್ತ ಅವತ್ತ ಹತ್ತ ರೂಪಾಯಿ ಆಹೇರ್‍ ಬಂತು!
ಅಕ್ಕಾವ್ರು ಸಣ್ಣವರಿಗೆ ಪ್ರೋತ್ಸಾಹ ಕೊಡ್ತಿದ್ರು ಖರೇ, ಆದ್ರ ಅವರ ಕಲಾವಂತಿಕಿ ಬಗ್ಗೆ ಖಾತ್ರಿ ಆದಮ್ಯಾಲಷ್ಟ ಸ್ಟೇಜ್‌ ಹತ್ತಸಿದ್ರು. ಅಷ್ಟ ಅಲ್ಲಾ, ಕಾರ್ಯಕ್ರಮದಾಗ ಸಾಥಿದಾರರ ಸಾಮರ್ಥ್ಯ ನೋಡ್ಕೊಂಡು ತಾವ ಹೊಂದಾಣಿಕಿ ಮಾಡ್ಕೊಂಡು ಹೋಗ್ತಿದ್ರ ಹೊರತು ವಿನಾಕಾರಣ ಪಾಂಡಿತ್ಯ ಪ್ರದರ್ಶನ ಮಾಡ್ಲಿಕ್ಕೆ ಎಂದೂ ಹೋಗ್ಲೇ ಇಲ್ಲ.
ಒಮ್ಮೆ ಅವ್ರ ಜೊತಿ ಬರೋಡಾಕ್‌ ಹೋಗೂ ಪ್ರಸಂಗ ಬಂತು; ಹೆಚ್ಚೂ ಕಮ್ಮಿ ಹದಿನೆಂಟ್‌ ವರ್ಷದಾಂವಿದ್ದೆ. ತಮಗ ಅರಾಮಿಲ್ಲಂತ ನನ್ನ ಹೊರಡಿಸ್ಲಿಕ್ಕೆ ಗುರುಗೋಳು ತಯಾರಿ ಮಾಡ್ಲಿಕ್ಹತ್ರು. ಜೊತೀಗ್‌ ಉಪದೇಶಾನೂ ಸುರು ಮಾಡಿದ್ರು;ಹಂಗ ಬಾರಸ್ಬೇಕು, ಹೀಂಗ್‌ ಬಾರಸ್ಬೇಕು ಅಂತೆಲ್ಲಾ...
ಆದ್ರ ಬರೋಡಾದಾಗ ಆಗಿದ್ದ ಬ್ಯಾರೆ.. ಮಾಸ್ಟರ್‌ ಪೀಸ್‌ ಜೋಗಿಯಾದ ’ಹರಿ ಕಾ ಭೇದ ನಪಾಯೋ’ ಚೀಝನ್ನ ಅಕ್ಕಾವ್ರು ಹಾಡಬೇಕಾಗಿತ್ತು, ಅದು ವಿಲಂಬಿತ್‌ ಝಪ್ತಾಲ್‌ನ್ಯಾಗ ಇತ್ತು. ಅವತ್ತ ಅವ್ರು ಅದನ್ನ ಹಾಡ್ಲೇ ಇಲ್ಲ. ಆ ವಯಸ್ಸಿಗೆ ನಾ ಆ ತಾಳ ಬಾರಸೂದು ಸ್ವಲ್ಪ ತ್ರಾಸ ಅನ್ನೂದನ್ನ ತಿಳ್ಕೊಂಡ ಅಕ್ಕಾವ್ರು ಅದನ್ನ ಹಾಡಲೇ ಇಲ್ಲ. ಅಂದ್ರ ಸಣ್ಣವರಿಗೆ ಡಿಸ್ಕರೇಜ್‌ ಮಾಡಬಾರ್‍ದು ಅನ್ನೂದು ಅವ್ರ ಉದ್ದೇಶ ಆಗಿತ್ತು. ಅಷ್ಟ ಅಲ್ಲ ಯಾವತ್ತೂ ಸಾಥಿದಾರರಿಗೆ ಸಲಹಾ ಕೊಡ್ಲೇ ಇಲ್ಲ.
ನನಗ ಅನ್ನಸ್ತದ, ದೊಡ್ಡವರು ಅಂತ ಯಾಕ ಅಂತಾರಂದ್ರ, ಸಣ್ಣವರ ಜೋಡಿ ಸಂಭಾಳಿಸ್ಕೊಂಡ ಹೋಗ್ತಾರಲ್ಲ ಅದಕ್ಕ ಅವ್ರು ದೊಡ್ಡವ್ರ ಆಗ್ತಾರು. ಅವರೆಂದೂ ಸಂಗೀತದ ಬಗ್ಗೆ ಜಾಸ್ತಿ ಮಾತಾಡ್ಲಿಲ್ಲ. ಸಂಗೀತ ಜೀವನದ ಉಸಿರು ಖರೇ. ಆದ್ರೂ ಅದನ್ನೆಂದೂ ತೋರಿಸೂ ಇರಾದಿ ಅವರ್‍ದಾಗಲೇ ಇಲ್ಲ. ಕಿಟ್ಟಕ್ಕಾರಿಗೆ (ಮಗಳು ಕೃಷ್ಣಾ ಹಾನಗಲ್‌)ಯಾವಾಗ್ಲೂ ಸ್ಟೇಜ್‌ ಮ್ಯಾಲನ ಪಾಠಾ. ಎಂದೂ ಯಾರಿಗೂ ಕುಂತ ಪಾಠಾ ಹೇಳಲೇ ಇಲ್ಲ. ಮನಿತುಂಬ ಓಡ್ಯಾಡ್ಕೋತ, ಕೆಲಸಾ ಮಾಡ್ಕೋತ ಬಂದಾವ್ರ ಜೊತಿ ಮಾತಾಡ್ಕೋತ ಶಿಷ್ಯಾರು ಹಾಡೂದನ್ನ ಕೇಳ್ತಿದ್ರು. ತಪ್ಪು ಹಾಡೀದ್ರಂದ್ರ ಎಲ್ಲಿದ್ರೂ ನಂದ್‌ಬಿಡ್ತಿದ್ರು.
೨೦೦೬ರೊಳಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದೊಳಗ ಶ್ರೀರಾಮ ಕಲಾವೇದಿಕೆ ಕಾರ್ಯಕ್ರಮ ಇಟ್ಕೊಂಡಿದ್ದೆ. ಹಿಂಗಿಂಗ ಮತ್ತ,, ಅವತ್ತ ನೀವು ಬರ್‍ಲಿಕ್ಕೇ ಬೇಕು ಅಂತ ವಿಷಯ ತಿಳಿಸಿದ್ನಿ. ಅದಕ್ಕ ಅವ್ರು, ಹಾಡಬೇಕೇನ ಮತ್ತ ಅವತ್ತ? ಅಂದ್ರು.ಹಾಡೀದ್ರ ಚುಲೋನ ಅಂತ ಹೇಳಿ ನಾ ಬೆಂಗಳೂರಿಗೆ ವಾಪಸಾದ್ನಿ. ಹದಿನೈದ ದಿನಾ ಬಿಟ್ಟು ಅವರ ಮೊಮ್ಮಗ ಮನೋಜ್‌ ಫೋನ್‌ ಹಚ್ಚಿ, ’ರವಿ ಹೇಳ್ಯಾನ ನಾ ಬೆಂಗಳೂರನ್ಯಾಗ ಹಾಡಬೇಕು ಅಂತ ಹೇಳಿ ಅಜ್ಜಿ ಇಲ್ಲಿ ಸುಲಭಾ ಮತ್ತು ನಾಡಗೀರ್‌ ಅವರ್‍ನ ಕೂಡಿಸ್ಕೊಂಡ್‌ ಪ್ರಾಕ್ಟೀಸಿಗ್‌ ಕೂತಾರು ಕೇಳ್ರಿಲ್ಲಿ; ಅಂತ ಫೋನ್‌ನ್ಯಾಗ ಅಕ್ಕಾವ್ರ ಅವಾಝ್‌ ಕೇಳಿಸಿದಾ. ಅವತ್ತ ಅವ್ರು ’ಮಿಯಾ ಕೀ ಮಲ್ಹಾರ್‌’ ರಿಯಾಝ್‌ ಮಾಡ್ಲಿಕ್ಹತ್ತಿದ್ರು.
ಕಾರ್ಯಕ್ರಮದ ದಿನಾ ಬಂತು. ಅವತ್ತ ಹರಿಪ್ರಸಾದ್ ಚೌರಾಸಿಯಾ ದುರ್ಗಾ ಬಾರಸ್ಲಿಕ್ಹತ್ತಿದ್ರು. ವ್ಹೀಲ್‌ಚೇರ್‌ಮ್ಯಾಲ ಅಕ್ಕಾವ್ರು ಬಂದ್ರು. ತಾವೂ ದುರ್ಗಾ ಚೀಝ್‌ ಸುರು ಮಾಡಿದ್ರು. ಅಕ್ಕಾವ್ರು ಹಾಡಿದಂಗ ಹರೀಜಿ ಭಾನ್ಸುರಿ ನುಡಸ್ಲಿಕ್ಹತ್ರು. ಇಬ್ರೂ ಸೇರಿ ಬರೋಬ್ಬರೀ ನಲವತ್ತೈದು ನಿಮಿಷ ಕಾರ್ಯಕ್ರಮಾ ಕೊಟ್ರು. ಅದೊಂಥರಾ ಇತಿಹಾಸನ.. ಅದ ಮುಗದ ಮ್ಯಾಲ ಮತ್ತ ಗಾಯನ ಮುಂದುವರೀತು. ಅವರ್‍ರ ಮನೋಜ್ ಹುಬ್ಳಿಂದ್‌ ಫೋನ್‌ನ್ಯಾಗ ಕೇಳಿಸಿದಾಗ ಮಿಯಾಮಲ್ಹಾರ್‌ ಪ್ರಾಕ್ಟೀಸ್‌ ನಡಿದಿತ್ತು ನಮ್ಮ ಕಾರ್ಯಕ್ರಮದ ಸಲುವಾಗಿ, ನಾವೆಲ್ಲ ಅದನ್ನ ಕೇಳೂ ಗುಂಗನ್ಯಾಗ ಇದ್ವಿ. ಆದ್ರ ಇಲ್ಲಿ ಅವತ್ತ ಅವ್ರು ಹಾಡಿದ್ದು ಅಭೋಗಿ. ಅವತ್ತ ನಮಗೆಲ್ಲಾ ತೊಂಭತ್ನಾಲ್ಕರ ಅಕ್ಕಾವ್ರ ಬಗ್ಗೇನ ಕಾಳಜಿ. ಇನ್ನೇನ ಮುಗಸ್ತಾರು ಅಂತ ಅನ್ಕೊಂಡ್ರ, ಮತ್ತ ’ಬಹಾರ’ ತಗೊಂಡ್‌ಬಿಟ್ರು. ಮದ್ಲ ಅದು ಉತ್ತರಾಂಗ ಪ್ರಧಾನ ರಾಗಾ. ಏರುದನೀಲೆ ಭಾಳ ಫೋರ್ಸ್‌‌ಲೇ ಹಾಡ್ಲಿಕ್‌ಹತ್ತಿದ್ರು. ಎಲ್ಲಾರ ಕಣ್ಣಾಗ ನೀರ ಹಂಗ ಇಳೀಲೀಕ್ಹತ್ತಿದ್ದು. ಆದ್ರ ನಮಗ ಆತಂಕಾ ಚಿಂತಿ, ಏನರ ಆದ್ರ ಹೆಂಗಪಾ ಅಂತ. ಆದ್ರ ಅವ್ರು ಅದನ್ನ ಮಗುಸಿದಾವ್ರನ ಭೈರವಿ ಹಾಡಲೇನು ಅಂತ ಚಾಲೂ ಮಾಡೇಬಿಡಬೇಕಾ?!
ಮತ್ತೊಮ್ಮೆ ಮುಂಬೈನ್ಯಾಗ ಮಲ್ಹಾರ ಉತ್ಸವಕ್ಕ ಅವ್ರ ಜೋಡಿ ಸಾಥೀಗ್‌ಹೋಗಿದ್ದೆ. ಗ್ರೀನ್‌ ರೂಂನ್ಯಾಗ ಕೂತಾಗ ಕಿಟ್ಟಕ್ಕಾರು ಪ್ರಾಕ್ಟೀಸ್‌ ಮಾಡ್ಕೊಳ್ಳಲಿಕ್‌ಹತ್ತಿದ್ರು. ಅಕ್ಕಾವ್ರ ಮಾತ್ರ ಸ್ಟೇಜ್‌ ಹಿಂದ ಎಂದೂ ಪ್ರಾಕ್ಟೀಸ್‌ ಅಂತೆಲ್ಲಾ ಮಾಡ್ತಿರಲಿಲ್ಲ. ಏನಿದ್ರೂ ಡೈರೆಕ್ಟ್‌ ಸ್ಟೇಜ್ ಮ್ಯಾಲ. ಅಷ್ಟೊತ್ತನಕ ಬರೀ ತುಂಬೂರಿ ಕೇಳಿಸ್ಕೋತ ಕೂಡ್ತಿದ್ರು. ಮನಸ್‌ ಬಂದ್ರ ಸ್ವರ ಹಚ್ತಿದ್ರು ಇಲ್ಲಂದ್ರ ಇಲ್ಲ. ವಿಲಂಬಿತ್‌ ಪ್ರಾಕ್ಟೀಸ್‌ ಮುಗಿಸಿದ ಮ್ಯಾಲ ಹಗೂರಕ ನಾ ಕಿಟ್ಟಕ್ಕಾರಿಗೆ ಅಂದೆ. ’ಧೃತ್‌ನ್ಯಾಗ ಕಹೆ ಲಾಡಲಿ ಚೀಝ್‌ ಅನ್ರಲಾ..’ಅಂತ. (ಯಾಕಂದ್ರ ’ಬೋಲೆರೇ ಪಪಿಯಾ..’ ಈ ಧೃತ್‌ ಎಲ್ಲಾ ಕಲಾವಿದರೂ ಹಾಡೇ ಹಾಡ್ತಾರು. ಮತ್ತ ಅದನ್ನ ಹಾಡೂಕಿಂತ ’ಕಹೆ ಲಾಡಲಿ’ ಚೀಝ್‌ ಅಪರೂಪದ್ದು. ಮತ್ತ ಅಕ್ಕಾವ್ರು ಅದನ್ನ ಹಾಡೂದನ್ನೂ ಹಿಂದ ಕೇಳಿದ್ದೆ). ಅದಕ್ಕ ಅಕ್ಕಾವ್ರು ಕಿಟ್ಟಕ್ಕಾರಿಗೆ ’ಏನಂತಾನವಾ..?’ ಅಂದ್ರು. ಆಗ ಅವ್ರು ಹಿಂಗಿಂಗಂತ ನಾ ಹೇಳಿದ್ದನ್ನ ಅವ್ರಿಗೆ ಹೇಳಿದ್ರು. ಅದನ್ನ ಕೇಳಿದ ಅಕ್ಕಾವ್ರು ಸುಮ್ನಾಗ್ಬಿಟ್ರು.


ಸ್ಟೇಜ್‌ ಮ್ಯಾಲ ವಿಲಂಬಿತ್‌ ಮುಗದಕೂಡ್ಲೇ ಇದ್ದಕ್ಕಿದ್ದಂಗ ಕಹೆ ಲಾಡಲಿ ಚಾಲೂ ಮಾಡೇಬಿಟ್ರು. ಅಗದೀ ಪರ್ಫೆಕ್ಟ್‌! ಚಪ್ಪಾಳಿ ಮ್ಯಾಲ ಚಪ್ಪಾಳಿ. ಎಷ್ಟೋ ವರ್ಷದ ಹಿಂದ ಹಾಡಿದ ಅಪರೂಪದ ಚೀಝ್‌ ಅದು. ಅವರ ನೆನಪಿನ ಶಕ್ತಿ ಅನ್ನೂದ ಉ ಮನಸಿನ ಇಚ್ಛಾ ಅನ್ನೂದು ಮಾತ್ರ ಖರೇಗೂ ಅದ್ಭುತ.
ಹಿಂದ.. ಅವ್ರು ಎಂಎಲ್‌ಸಿ ಆಗಿದ್ದಾಗ ರಾಜ್ಯೋತ್ಸವ ಅವಾರ್ಡ್‌ ಕಮೀಟಿ ಅಧ್ಯಕ್ಷರಾಗಿದ್ರು. ಒಮ್ಮೆ ಕಮೀಟಿ ಮೀಟಿಂಗ್‌ ಇತ್ತು. ಅವರನ್ನ ಭೆಟ್ಟಿಯಾಗ್ಲಿಕ್ಕೆ ಶಾಸಕರ ಭವನಕ್ಕ ಹೋದೆ. ’ರವಿ ಇನ್ನೂ ಯಾಕೋ ಕಾರ್‌ ಬರ್‍ವಾಲ್ತು ನೋಡು. ಮೀಟಿಂಗ್‌ಗೆ ಲೇಟ್‌ ಆಗ್ಬಾರ್‍ದು ನೋಡು. ನಡೀ ನಿನ್ನ ಗಾಡಿಮ್ಯಾಲ ಬರ್‍ತೇನಿ. ಸಾವಕಾಶ ಬಿಟ್ಟ ಬರ್‍ನಡಿ ನನ್ನ’ ಅಂತ ಹೇಳಿ ತಯಾರಾಗ್ಬಿಟ್ರು. ಬ್ಯಾಡ್ರಿ ಅಕ್ಕಾರ ಅಂದ್ರೂ ಕೇಳ್ಲಿಲ್ಲ. ಅವರ ಹೆಸರ ಹೇಳಿದ್ರ ಸಾಕು ನೂರ ಗಾಡಿ ಬಂದ್ ನಿಲ್ತಿದ್ದು ಅ ಮಾತ ಬ್ಯಾರೆ. ಆಗ ಅವ್ರಿಗೆ ಎಂಬತ್ತೇಳಾಗಿತ್ತಾ ಮತ್ತ...
ಆಮ್ಯಾಲ ಮೀಟಿಂಗ್‌ ಮುಗಿಸಿ ಬಂದಮ್ಯಾಲ ’ಮೀಟಿಂಗ್‌ನ್ಯಾಗ ನಿಂದೂ ಹೆಸರು ಬಂತು ಪ್ರಶಸ್ತಿ ದೆಸಿಂದ. ಅಂವಾ ಚುಲೋ ಬಾರಸ್ತಾನು ಆದ್ರ ಇನ್ನೂ ಸಣ್ಣಾವ ಅದಾನು ಮುಂದ ನೋಡೂಣು ಅಂತ ನಾನ ಅಂದೆ. ಯಾಕಂದ್ರ ಮಂದಿ ಏನರ ಅನ್ಕೋಂಡ್ರ..?’ ಅಕ್ಕಾವ್ರು ಅವತ್ತ ಹಂಗ ಹೇಳೂದಕ್ಕ ಕಾರಣ ಇತ್ತು. ಯಾಕಂದ್ರ ಬರೇ ಮೂವತ್ತು ವರ್ಷದಾಂವ ಇದ್ದೆ ನಾ. ಎಷ್ಟು ಪ್ರೀತಿ ಮಾಡಿದ್ರೂ ವಿಷಯ-ವಿಚಾರ-ನಿರ್ಧಾರದೊಳಗ ಮಾತ್ರ ಕಟ್ಟುನಿಟ್ಟು.
ಇತ್ತಿತ್ತಲಾಗ ಅವ್ರಿಗೆ ಸಂಜಿಯಾದ ಕೂಡ್ಲೇ ಜ್ವರಾ ಖಾಯಂ ಆದು. ಪ್ಯಾರೀಸ್‌ಗೆ ಹೋದಾಗನೂ ಅಷ್ಟ. ಸಾಧ್ಯಾನ ಇಲ್ಲಾ ಹಾಡ್ಲಿಕ್ಕೆ. ಆ ಪರೀ ಜ್ವರಾ. ಆದ್ರ ಕ್ರೋಸಿನ್‌ ತುಗೊಂಡಾವ್ರ ವೇದಿಕಿ ಹತ್ತೇಬಿಟ್ರು. ಮಸ್ತ್‌ ಹಾಡಿದ್ರು.
ಇನ್ನ ಅಕ್ಕಾವ್ರಿಗೆ ಟ್ರೇನ್‌ ಪ್ರವಾಸದಾಗ ಕಾದಂಬರಿ ಓದ್ಕೋತ ಕೂಡು ಚಟಾ ಇತ್ತು. ಓದಿ ಮುಗಿಸಿದ ಮ್ಯಾಲ ನಂಗೂ ಓದ್ಲಿಕ್ಕೆ ಕೊಡ್ತಿದ್ರು. ಕೊನೀತನಕಾ ಮನಸಿನ ಮಾತ ಕೇಳ್ಕೋತನ ಬಂದ ಅಕ್ಕಾವ್ರ ಬಗ್ಗೆ ಎಷ್ಟ್‌ ಹೇಳಿದ್ರೂ ಮುಗಿಯೂದನ ಇಲ್ಲ. ಹುಬ್ಬಳ್ಯಾಗ ನಮ್ಮ ಮನೀಗ್‌ ಹೋಗೂಕಿಂತ ಮೊದಲ ಅಕ್ಕಾವ್ರ ಮನೀಗ್‌ ಹೋಗೇನ ಹೋಗೂ ರೂಢಿ. ಆದ್ರ ಈಗ...

(ಸೆಪ್ಟೆಂಬರ್‌ ಮಯೂರದಲ್ಲಿ ’ದೇವರ ದೇಣಗಿ’ ಎನ್ನುವ ಶೀರ್ಷಕೆಯಲ್ಲಿ ದಾಖಲಾದ ನೆನಪುಗಳ ಸಂಕಲನ)