Wednesday, September 2, 2009

ಗುರುಗಳ ಕರುಣಿಸಿದ ಅಕ್ಕ

ಪಂ. ರವೀಂದ್ರ ಯಾವಗಲ್‌ ಕಂಡಂತೆ...
------------------------------------------


ಅಕ್ಕಾವ್ರ ಮನೀಗೆ ಹೋದಾಗ ಹತ್ತು ವರ್ಷದಾವ ಇದ್ದೆ. ಶೇಷಗಿರಿ ಹಾನಗಲ್‌ ಅವ್ರ ಕಡೆ ತಬಲಾಕ ಹಚ್ಚಬೇಕು ಅಂತ ನಮ್ಮ ಅಪ್ಪ ಕರ್‍ಕೊಂಡು ಹೋಗ್ತಿದ್ರು. ಮ್ಯಾಲಿಂದ್‌ ಮ್ಯಾಲ ಅವ್ರ ಮನೀಗ್‌ ಹೋಗೂದು ಬರೂದು ನಡೀತಾನ ಇತ್ತು. ಪ್ರತೀ ಸಲಿ ಹೋದಾಗನೂ, ಶೇಷಗಿರಿ ಹಾನಗಲ್‌ರು, ’ನೋಡೂಣು’ ಅಂತ ಹೇಳಿ ಕಳಸ್ತಿದ್ರು. ಆಗಿನ ಕಾಲನ ಹಂಗಿತ್ತು. ಶಿಷ್ಯನ ತಾಳ್ಮಿ, ಇಚ್ಛಾ, ಭಕ್ತಿ, ಶ್ರದ್ಧಾ ಎಲ್ಲಾನೂ ಪರೀಕ್ಷೆ ಮಾಡೀನ ಮುಂದ ಕಲಸ್ಲಿಕ್ಕೆ ಸುರು ಮಾಡ್ತಿದ್ರು. ನಾವು ಹಗಲೆಲ್ಲ ಗುರುಗಳ ಮನೀಗೆ ಓಡಾಡೂದ್‌ ನೋಡಿ ಒಮ್ಮೆ ಅಕ್ಕಾವ್ರು ’ಎಷ್ಟು ಸರ್ತೆ ಆ ಹುಡುಗನ್ನ ಓಡ್ಯಾಡಸ್ತೀ..? ಮೊದಲ ತುಗೋ ಆ ಹುಡುಗನ್ನ’ ಅಂದ್ರಂತ
ಆಮ್ಯಾಲ ಕಡೀಕ ನಮ್ಮ ಗುರುಗೋಳು ತಬಲಾ ಕಲಸ್ಲಿಕ್ಕೆ ಒಪ್ಕೊಂಡ್ರು. ಮುಂದಿನ ವರ್ಷನ ನನಗ ಅಕ್ಕಾವ್ರ ಶೀಫಾರಸ್ಸಿನ ಮ್ಯಾಲ ಕುಂದಗೋಳದ ಸವಾಯಿ ಗಂಧರ್ವ ಉತ್ಸವದಾಗ ಸೋಲೋ ಬಾರಸ್ಲಿಕ್ಕೆ ಅವಕಾಶ ಕೊಡ್ಸಿದ್ರು. ಅವತ್ತ ನಡದಿದ್ದಕ್ಕ ಅದೃಷ್ಟ ಅನಬೇಕೋ ಏನೋ ಗೊತ್ತಿಲ್ಲ. ಯಾಕಂದ್ರ ನನಗ ಲೆಹರಾ ಹಿಡಿದವ್ರು ಆಗಿನ ಕಾಲಕ್ಕ ದೊಡ್ಡ ಹಾರ್ಮೋನಿಯಂ ಕಲಾವಿದರು. ಅನ್ನಸ್ಕೊಂಡಿದ್ದ ಅಪ್ಪಾರಾವ್‌ ಜಳಗಾಂವಕರ್‌ ಅವ್ರು! ಭೀಮಸೇನ್‌ ಜೋಶಿ ಮತ್ತ ಅವರ ಸಮಕಾಲೀನ ಕಲಾವಿದರಿಗೆ ಹಾರ್ಮೋನಿಯಂ ಸಾಥ್‌ ಕೊಟ್ಟಿದ್ದ ಅವ್ರು ಅಕ್ಕಾವ್ರ ಹೇಳಿದ್ರಂತ ನನಗ ಲೆಹರಾ ಹಿಡಿದ್ರು. ಮತ್ತ ಅವತ್ತ ಹತ್ತ ರೂಪಾಯಿ ಆಹೇರ್‍ ಬಂತು!
ಅಕ್ಕಾವ್ರು ಸಣ್ಣವರಿಗೆ ಪ್ರೋತ್ಸಾಹ ಕೊಡ್ತಿದ್ರು ಖರೇ, ಆದ್ರ ಅವರ ಕಲಾವಂತಿಕಿ ಬಗ್ಗೆ ಖಾತ್ರಿ ಆದಮ್ಯಾಲಷ್ಟ ಸ್ಟೇಜ್‌ ಹತ್ತಸಿದ್ರು. ಅಷ್ಟ ಅಲ್ಲಾ, ಕಾರ್ಯಕ್ರಮದಾಗ ಸಾಥಿದಾರರ ಸಾಮರ್ಥ್ಯ ನೋಡ್ಕೊಂಡು ತಾವ ಹೊಂದಾಣಿಕಿ ಮಾಡ್ಕೊಂಡು ಹೋಗ್ತಿದ್ರ ಹೊರತು ವಿನಾಕಾರಣ ಪಾಂಡಿತ್ಯ ಪ್ರದರ್ಶನ ಮಾಡ್ಲಿಕ್ಕೆ ಎಂದೂ ಹೋಗ್ಲೇ ಇಲ್ಲ.
ಒಮ್ಮೆ ಅವ್ರ ಜೊತಿ ಬರೋಡಾಕ್‌ ಹೋಗೂ ಪ್ರಸಂಗ ಬಂತು; ಹೆಚ್ಚೂ ಕಮ್ಮಿ ಹದಿನೆಂಟ್‌ ವರ್ಷದಾಂವಿದ್ದೆ. ತಮಗ ಅರಾಮಿಲ್ಲಂತ ನನ್ನ ಹೊರಡಿಸ್ಲಿಕ್ಕೆ ಗುರುಗೋಳು ತಯಾರಿ ಮಾಡ್ಲಿಕ್ಹತ್ರು. ಜೊತೀಗ್‌ ಉಪದೇಶಾನೂ ಸುರು ಮಾಡಿದ್ರು;ಹಂಗ ಬಾರಸ್ಬೇಕು, ಹೀಂಗ್‌ ಬಾರಸ್ಬೇಕು ಅಂತೆಲ್ಲಾ...
ಆದ್ರ ಬರೋಡಾದಾಗ ಆಗಿದ್ದ ಬ್ಯಾರೆ.. ಮಾಸ್ಟರ್‌ ಪೀಸ್‌ ಜೋಗಿಯಾದ ’ಹರಿ ಕಾ ಭೇದ ನಪಾಯೋ’ ಚೀಝನ್ನ ಅಕ್ಕಾವ್ರು ಹಾಡಬೇಕಾಗಿತ್ತು, ಅದು ವಿಲಂಬಿತ್‌ ಝಪ್ತಾಲ್‌ನ್ಯಾಗ ಇತ್ತು. ಅವತ್ತ ಅವ್ರು ಅದನ್ನ ಹಾಡ್ಲೇ ಇಲ್ಲ. ಆ ವಯಸ್ಸಿಗೆ ನಾ ಆ ತಾಳ ಬಾರಸೂದು ಸ್ವಲ್ಪ ತ್ರಾಸ ಅನ್ನೂದನ್ನ ತಿಳ್ಕೊಂಡ ಅಕ್ಕಾವ್ರು ಅದನ್ನ ಹಾಡಲೇ ಇಲ್ಲ. ಅಂದ್ರ ಸಣ್ಣವರಿಗೆ ಡಿಸ್ಕರೇಜ್‌ ಮಾಡಬಾರ್‍ದು ಅನ್ನೂದು ಅವ್ರ ಉದ್ದೇಶ ಆಗಿತ್ತು. ಅಷ್ಟ ಅಲ್ಲ ಯಾವತ್ತೂ ಸಾಥಿದಾರರಿಗೆ ಸಲಹಾ ಕೊಡ್ಲೇ ಇಲ್ಲ.
ನನಗ ಅನ್ನಸ್ತದ, ದೊಡ್ಡವರು ಅಂತ ಯಾಕ ಅಂತಾರಂದ್ರ, ಸಣ್ಣವರ ಜೋಡಿ ಸಂಭಾಳಿಸ್ಕೊಂಡ ಹೋಗ್ತಾರಲ್ಲ ಅದಕ್ಕ ಅವ್ರು ದೊಡ್ಡವ್ರ ಆಗ್ತಾರು. ಅವರೆಂದೂ ಸಂಗೀತದ ಬಗ್ಗೆ ಜಾಸ್ತಿ ಮಾತಾಡ್ಲಿಲ್ಲ. ಸಂಗೀತ ಜೀವನದ ಉಸಿರು ಖರೇ. ಆದ್ರೂ ಅದನ್ನೆಂದೂ ತೋರಿಸೂ ಇರಾದಿ ಅವರ್‍ದಾಗಲೇ ಇಲ್ಲ. ಕಿಟ್ಟಕ್ಕಾರಿಗೆ (ಮಗಳು ಕೃಷ್ಣಾ ಹಾನಗಲ್‌)ಯಾವಾಗ್ಲೂ ಸ್ಟೇಜ್‌ ಮ್ಯಾಲನ ಪಾಠಾ. ಎಂದೂ ಯಾರಿಗೂ ಕುಂತ ಪಾಠಾ ಹೇಳಲೇ ಇಲ್ಲ. ಮನಿತುಂಬ ಓಡ್ಯಾಡ್ಕೋತ, ಕೆಲಸಾ ಮಾಡ್ಕೋತ ಬಂದಾವ್ರ ಜೊತಿ ಮಾತಾಡ್ಕೋತ ಶಿಷ್ಯಾರು ಹಾಡೂದನ್ನ ಕೇಳ್ತಿದ್ರು. ತಪ್ಪು ಹಾಡೀದ್ರಂದ್ರ ಎಲ್ಲಿದ್ರೂ ನಂದ್‌ಬಿಡ್ತಿದ್ರು.
೨೦೦೬ರೊಳಗ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದೊಳಗ ಶ್ರೀರಾಮ ಕಲಾವೇದಿಕೆ ಕಾರ್ಯಕ್ರಮ ಇಟ್ಕೊಂಡಿದ್ದೆ. ಹಿಂಗಿಂಗ ಮತ್ತ,, ಅವತ್ತ ನೀವು ಬರ್‍ಲಿಕ್ಕೇ ಬೇಕು ಅಂತ ವಿಷಯ ತಿಳಿಸಿದ್ನಿ. ಅದಕ್ಕ ಅವ್ರು, ಹಾಡಬೇಕೇನ ಮತ್ತ ಅವತ್ತ? ಅಂದ್ರು.ಹಾಡೀದ್ರ ಚುಲೋನ ಅಂತ ಹೇಳಿ ನಾ ಬೆಂಗಳೂರಿಗೆ ವಾಪಸಾದ್ನಿ. ಹದಿನೈದ ದಿನಾ ಬಿಟ್ಟು ಅವರ ಮೊಮ್ಮಗ ಮನೋಜ್‌ ಫೋನ್‌ ಹಚ್ಚಿ, ’ರವಿ ಹೇಳ್ಯಾನ ನಾ ಬೆಂಗಳೂರನ್ಯಾಗ ಹಾಡಬೇಕು ಅಂತ ಹೇಳಿ ಅಜ್ಜಿ ಇಲ್ಲಿ ಸುಲಭಾ ಮತ್ತು ನಾಡಗೀರ್‌ ಅವರ್‍ನ ಕೂಡಿಸ್ಕೊಂಡ್‌ ಪ್ರಾಕ್ಟೀಸಿಗ್‌ ಕೂತಾರು ಕೇಳ್ರಿಲ್ಲಿ; ಅಂತ ಫೋನ್‌ನ್ಯಾಗ ಅಕ್ಕಾವ್ರ ಅವಾಝ್‌ ಕೇಳಿಸಿದಾ. ಅವತ್ತ ಅವ್ರು ’ಮಿಯಾ ಕೀ ಮಲ್ಹಾರ್‌’ ರಿಯಾಝ್‌ ಮಾಡ್ಲಿಕ್ಹತ್ತಿದ್ರು.
ಕಾರ್ಯಕ್ರಮದ ದಿನಾ ಬಂತು. ಅವತ್ತ ಹರಿಪ್ರಸಾದ್ ಚೌರಾಸಿಯಾ ದುರ್ಗಾ ಬಾರಸ್ಲಿಕ್ಹತ್ತಿದ್ರು. ವ್ಹೀಲ್‌ಚೇರ್‌ಮ್ಯಾಲ ಅಕ್ಕಾವ್ರು ಬಂದ್ರು. ತಾವೂ ದುರ್ಗಾ ಚೀಝ್‌ ಸುರು ಮಾಡಿದ್ರು. ಅಕ್ಕಾವ್ರು ಹಾಡಿದಂಗ ಹರೀಜಿ ಭಾನ್ಸುರಿ ನುಡಸ್ಲಿಕ್ಹತ್ರು. ಇಬ್ರೂ ಸೇರಿ ಬರೋಬ್ಬರೀ ನಲವತ್ತೈದು ನಿಮಿಷ ಕಾರ್ಯಕ್ರಮಾ ಕೊಟ್ರು. ಅದೊಂಥರಾ ಇತಿಹಾಸನ.. ಅದ ಮುಗದ ಮ್ಯಾಲ ಮತ್ತ ಗಾಯನ ಮುಂದುವರೀತು. ಅವರ್‍ರ ಮನೋಜ್ ಹುಬ್ಳಿಂದ್‌ ಫೋನ್‌ನ್ಯಾಗ ಕೇಳಿಸಿದಾಗ ಮಿಯಾಮಲ್ಹಾರ್‌ ಪ್ರಾಕ್ಟೀಸ್‌ ನಡಿದಿತ್ತು ನಮ್ಮ ಕಾರ್ಯಕ್ರಮದ ಸಲುವಾಗಿ, ನಾವೆಲ್ಲ ಅದನ್ನ ಕೇಳೂ ಗುಂಗನ್ಯಾಗ ಇದ್ವಿ. ಆದ್ರ ಇಲ್ಲಿ ಅವತ್ತ ಅವ್ರು ಹಾಡಿದ್ದು ಅಭೋಗಿ. ಅವತ್ತ ನಮಗೆಲ್ಲಾ ತೊಂಭತ್ನಾಲ್ಕರ ಅಕ್ಕಾವ್ರ ಬಗ್ಗೇನ ಕಾಳಜಿ. ಇನ್ನೇನ ಮುಗಸ್ತಾರು ಅಂತ ಅನ್ಕೊಂಡ್ರ, ಮತ್ತ ’ಬಹಾರ’ ತಗೊಂಡ್‌ಬಿಟ್ರು. ಮದ್ಲ ಅದು ಉತ್ತರಾಂಗ ಪ್ರಧಾನ ರಾಗಾ. ಏರುದನೀಲೆ ಭಾಳ ಫೋರ್ಸ್‌‌ಲೇ ಹಾಡ್ಲಿಕ್‌ಹತ್ತಿದ್ರು. ಎಲ್ಲಾರ ಕಣ್ಣಾಗ ನೀರ ಹಂಗ ಇಳೀಲೀಕ್ಹತ್ತಿದ್ದು. ಆದ್ರ ನಮಗ ಆತಂಕಾ ಚಿಂತಿ, ಏನರ ಆದ್ರ ಹೆಂಗಪಾ ಅಂತ. ಆದ್ರ ಅವ್ರು ಅದನ್ನ ಮಗುಸಿದಾವ್ರನ ಭೈರವಿ ಹಾಡಲೇನು ಅಂತ ಚಾಲೂ ಮಾಡೇಬಿಡಬೇಕಾ?!
ಮತ್ತೊಮ್ಮೆ ಮುಂಬೈನ್ಯಾಗ ಮಲ್ಹಾರ ಉತ್ಸವಕ್ಕ ಅವ್ರ ಜೋಡಿ ಸಾಥೀಗ್‌ಹೋಗಿದ್ದೆ. ಗ್ರೀನ್‌ ರೂಂನ್ಯಾಗ ಕೂತಾಗ ಕಿಟ್ಟಕ್ಕಾರು ಪ್ರಾಕ್ಟೀಸ್‌ ಮಾಡ್ಕೊಳ್ಳಲಿಕ್‌ಹತ್ತಿದ್ರು. ಅಕ್ಕಾವ್ರ ಮಾತ್ರ ಸ್ಟೇಜ್‌ ಹಿಂದ ಎಂದೂ ಪ್ರಾಕ್ಟೀಸ್‌ ಅಂತೆಲ್ಲಾ ಮಾಡ್ತಿರಲಿಲ್ಲ. ಏನಿದ್ರೂ ಡೈರೆಕ್ಟ್‌ ಸ್ಟೇಜ್ ಮ್ಯಾಲ. ಅಷ್ಟೊತ್ತನಕ ಬರೀ ತುಂಬೂರಿ ಕೇಳಿಸ್ಕೋತ ಕೂಡ್ತಿದ್ರು. ಮನಸ್‌ ಬಂದ್ರ ಸ್ವರ ಹಚ್ತಿದ್ರು ಇಲ್ಲಂದ್ರ ಇಲ್ಲ. ವಿಲಂಬಿತ್‌ ಪ್ರಾಕ್ಟೀಸ್‌ ಮುಗಿಸಿದ ಮ್ಯಾಲ ಹಗೂರಕ ನಾ ಕಿಟ್ಟಕ್ಕಾರಿಗೆ ಅಂದೆ. ’ಧೃತ್‌ನ್ಯಾಗ ಕಹೆ ಲಾಡಲಿ ಚೀಝ್‌ ಅನ್ರಲಾ..’ಅಂತ. (ಯಾಕಂದ್ರ ’ಬೋಲೆರೇ ಪಪಿಯಾ..’ ಈ ಧೃತ್‌ ಎಲ್ಲಾ ಕಲಾವಿದರೂ ಹಾಡೇ ಹಾಡ್ತಾರು. ಮತ್ತ ಅದನ್ನ ಹಾಡೂಕಿಂತ ’ಕಹೆ ಲಾಡಲಿ’ ಚೀಝ್‌ ಅಪರೂಪದ್ದು. ಮತ್ತ ಅಕ್ಕಾವ್ರು ಅದನ್ನ ಹಾಡೂದನ್ನೂ ಹಿಂದ ಕೇಳಿದ್ದೆ). ಅದಕ್ಕ ಅಕ್ಕಾವ್ರು ಕಿಟ್ಟಕ್ಕಾರಿಗೆ ’ಏನಂತಾನವಾ..?’ ಅಂದ್ರು. ಆಗ ಅವ್ರು ಹಿಂಗಿಂಗಂತ ನಾ ಹೇಳಿದ್ದನ್ನ ಅವ್ರಿಗೆ ಹೇಳಿದ್ರು. ಅದನ್ನ ಕೇಳಿದ ಅಕ್ಕಾವ್ರು ಸುಮ್ನಾಗ್ಬಿಟ್ರು.


ಸ್ಟೇಜ್‌ ಮ್ಯಾಲ ವಿಲಂಬಿತ್‌ ಮುಗದಕೂಡ್ಲೇ ಇದ್ದಕ್ಕಿದ್ದಂಗ ಕಹೆ ಲಾಡಲಿ ಚಾಲೂ ಮಾಡೇಬಿಟ್ರು. ಅಗದೀ ಪರ್ಫೆಕ್ಟ್‌! ಚಪ್ಪಾಳಿ ಮ್ಯಾಲ ಚಪ್ಪಾಳಿ. ಎಷ್ಟೋ ವರ್ಷದ ಹಿಂದ ಹಾಡಿದ ಅಪರೂಪದ ಚೀಝ್‌ ಅದು. ಅವರ ನೆನಪಿನ ಶಕ್ತಿ ಅನ್ನೂದ ಉ ಮನಸಿನ ಇಚ್ಛಾ ಅನ್ನೂದು ಮಾತ್ರ ಖರೇಗೂ ಅದ್ಭುತ.
ಹಿಂದ.. ಅವ್ರು ಎಂಎಲ್‌ಸಿ ಆಗಿದ್ದಾಗ ರಾಜ್ಯೋತ್ಸವ ಅವಾರ್ಡ್‌ ಕಮೀಟಿ ಅಧ್ಯಕ್ಷರಾಗಿದ್ರು. ಒಮ್ಮೆ ಕಮೀಟಿ ಮೀಟಿಂಗ್‌ ಇತ್ತು. ಅವರನ್ನ ಭೆಟ್ಟಿಯಾಗ್ಲಿಕ್ಕೆ ಶಾಸಕರ ಭವನಕ್ಕ ಹೋದೆ. ’ರವಿ ಇನ್ನೂ ಯಾಕೋ ಕಾರ್‌ ಬರ್‍ವಾಲ್ತು ನೋಡು. ಮೀಟಿಂಗ್‌ಗೆ ಲೇಟ್‌ ಆಗ್ಬಾರ್‍ದು ನೋಡು. ನಡೀ ನಿನ್ನ ಗಾಡಿಮ್ಯಾಲ ಬರ್‍ತೇನಿ. ಸಾವಕಾಶ ಬಿಟ್ಟ ಬರ್‍ನಡಿ ನನ್ನ’ ಅಂತ ಹೇಳಿ ತಯಾರಾಗ್ಬಿಟ್ರು. ಬ್ಯಾಡ್ರಿ ಅಕ್ಕಾರ ಅಂದ್ರೂ ಕೇಳ್ಲಿಲ್ಲ. ಅವರ ಹೆಸರ ಹೇಳಿದ್ರ ಸಾಕು ನೂರ ಗಾಡಿ ಬಂದ್ ನಿಲ್ತಿದ್ದು ಅ ಮಾತ ಬ್ಯಾರೆ. ಆಗ ಅವ್ರಿಗೆ ಎಂಬತ್ತೇಳಾಗಿತ್ತಾ ಮತ್ತ...
ಆಮ್ಯಾಲ ಮೀಟಿಂಗ್‌ ಮುಗಿಸಿ ಬಂದಮ್ಯಾಲ ’ಮೀಟಿಂಗ್‌ನ್ಯಾಗ ನಿಂದೂ ಹೆಸರು ಬಂತು ಪ್ರಶಸ್ತಿ ದೆಸಿಂದ. ಅಂವಾ ಚುಲೋ ಬಾರಸ್ತಾನು ಆದ್ರ ಇನ್ನೂ ಸಣ್ಣಾವ ಅದಾನು ಮುಂದ ನೋಡೂಣು ಅಂತ ನಾನ ಅಂದೆ. ಯಾಕಂದ್ರ ಮಂದಿ ಏನರ ಅನ್ಕೋಂಡ್ರ..?’ ಅಕ್ಕಾವ್ರು ಅವತ್ತ ಹಂಗ ಹೇಳೂದಕ್ಕ ಕಾರಣ ಇತ್ತು. ಯಾಕಂದ್ರ ಬರೇ ಮೂವತ್ತು ವರ್ಷದಾಂವ ಇದ್ದೆ ನಾ. ಎಷ್ಟು ಪ್ರೀತಿ ಮಾಡಿದ್ರೂ ವಿಷಯ-ವಿಚಾರ-ನಿರ್ಧಾರದೊಳಗ ಮಾತ್ರ ಕಟ್ಟುನಿಟ್ಟು.
ಇತ್ತಿತ್ತಲಾಗ ಅವ್ರಿಗೆ ಸಂಜಿಯಾದ ಕೂಡ್ಲೇ ಜ್ವರಾ ಖಾಯಂ ಆದು. ಪ್ಯಾರೀಸ್‌ಗೆ ಹೋದಾಗನೂ ಅಷ್ಟ. ಸಾಧ್ಯಾನ ಇಲ್ಲಾ ಹಾಡ್ಲಿಕ್ಕೆ. ಆ ಪರೀ ಜ್ವರಾ. ಆದ್ರ ಕ್ರೋಸಿನ್‌ ತುಗೊಂಡಾವ್ರ ವೇದಿಕಿ ಹತ್ತೇಬಿಟ್ರು. ಮಸ್ತ್‌ ಹಾಡಿದ್ರು.
ಇನ್ನ ಅಕ್ಕಾವ್ರಿಗೆ ಟ್ರೇನ್‌ ಪ್ರವಾಸದಾಗ ಕಾದಂಬರಿ ಓದ್ಕೋತ ಕೂಡು ಚಟಾ ಇತ್ತು. ಓದಿ ಮುಗಿಸಿದ ಮ್ಯಾಲ ನಂಗೂ ಓದ್ಲಿಕ್ಕೆ ಕೊಡ್ತಿದ್ರು. ಕೊನೀತನಕಾ ಮನಸಿನ ಮಾತ ಕೇಳ್ಕೋತನ ಬಂದ ಅಕ್ಕಾವ್ರ ಬಗ್ಗೆ ಎಷ್ಟ್‌ ಹೇಳಿದ್ರೂ ಮುಗಿಯೂದನ ಇಲ್ಲ. ಹುಬ್ಬಳ್ಯಾಗ ನಮ್ಮ ಮನೀಗ್‌ ಹೋಗೂಕಿಂತ ಮೊದಲ ಅಕ್ಕಾವ್ರ ಮನೀಗ್‌ ಹೋಗೇನ ಹೋಗೂ ರೂಢಿ. ಆದ್ರ ಈಗ...

(ಸೆಪ್ಟೆಂಬರ್‌ ಮಯೂರದಲ್ಲಿ ’ದೇವರ ದೇಣಗಿ’ ಎನ್ನುವ ಶೀರ್ಷಕೆಯಲ್ಲಿ ದಾಖಲಾದ ನೆನಪುಗಳ ಸಂಕಲನ)

1 comment:

sunaath said...

ಅಪರೂಪದ ಅನುಭವಗಳು. ಈ ನೆನಪುಗಳನ್ನು ಪುಸ್ತಕರೂಪದಲ್ಲಿ
ಒಂದೇ ಕಡೆಗೆ ತರಬೇಕು.