Thursday, August 26, 2010

ಯಾರದು ನಿನ್ನ ಫೋಟೋ ತೆಗೆದವರು?ಅವತ್ತ್ಲೆಲ ಅಮ್ಮ ನನ್ನ ಪುಟ್ಟ ಕೈಗಳ್ಲಲಿ ಗಂಧದಕಡ್ಡಿ ಕೊಟ್ಟು ಬೆಳಗು ಎಂದಾಗಲ್ಲೆಲ ಮೂಡುತ್ತಿದ್ದ ಪ್ರಶ್ನೆ ಒಂದೇ. ಯಾವಾಗಲೂ ನಗುತ್ತಲೇ, ಎರಡು ಎಕ್ಸ್ಟ್ರಾ ಕೈಗಳನ್ನು ಅಂಟಿಸಿಕೊಂಡು, ಕಮಲದ ಮೇಲೆ ನಿಂತಿರುವ ಆ ನಿನ್ನ ಫೋಟೋ ತೆಗೆದವರು ಯಾರು? ಆ ಫೋಟೋಗ್ರಾಫರ್ ಎಲರ ಮನೆಗೂ ಹೋಗಿ ಫೋಟೋ ಹಂಚಿಬಂದ್ದಿದಾನೋ ಹೇಗೆ? ಎಲರ ಮನೆಯ್ಲಲೂ ಸೇಮ್‌ಫೇಸ್‌ ಲಕ್ಷ್ಮೀ...

ಸ್ವಲ್ಪ ವರ್ಷಗಳು ಕಳೆದ ಮೇಲೆ ಗೊತ್ತಾಯ್ತು, ಅದು ಫೋಟೊ ಅಲ ಬಿಡಿಸಿದ ಚಿತ್ರ ಅಂತ ಅಪ್ಪಾಜಿ ಹೇಳಿದ್ರು... ಹಾಗಾದರೆ ನಿನ್ನ ಚಿತ್ರ ಬಿಡಿಸಿದವನು ಎಲ್ದಿದಾನೆ? ಯಾವಾಗ ಬಿಡಿಸಿದ? ಅವನು ನಿನ್ನನ್ನು ಎಲ್ಲಿ ಭೇಟಿ ಮಾಡಿದ್ದ? ಎಷ್ಟು ದಿನ ತೆಗೆದುಕೊಂಡ ಚಿತ್ರ ಬಿಡಿಸೋದಕ್ಕೆ? ಅವನು ಚಿತ್ರ ಬಿಡಿಸೋವರೆಗೂ ನಿನ್ನ ಪಕ್ಕದ್ಲಲಿರೋ ಆನೆಗಳು ಸೊಂಡಿಲೆತ್ತಿಕೊಂಡು ಅಷ್ಟೂ ಹೊತ್ತು ಹಾಗೇ ನಿಂತಿದ್ದವಾ? ಪಾಪ ಕಾಲು, ಸೊಂಡಿಲು ನೋವು ಬಂದಿರಬೇಕಲ್ವಾ? ಬೈಯ್ಕೊಬೇಡ ಹೀಗೆ ಕೇಳ್ತಿದಿನಿ ಅಂತಾ.. ಆ ಕಮಲದ ಮೇಲೆ ಅದ್ಹೇಗೆ ನಿಂತುಕೊಂಡ್ದಿದಿ ಮಾರಾಯ್ತಿ? ಬ್ಯಾಲೆನ್ಸ್ ಹೇಗೆ ಮಾಡ್ದೆ?

ಹೀಗೆ ಯೋಚನೆ ಮಾಡ್ತಾ, ಮಾಡ್ತಾ.. ಎಷ್ಟೋ ಸಲ ನಿನಗೆ ನೈವೇದ್ಯ ಮಾಡುವವರೆಗೆ ಕಾಯದೆ ನಿನ್ನ ಫೋಟೋದ ಮುಂದಿಟ್ಟ ಸಕ್ಕರೆಯೊಳಗೆ ಅರ್ಧಂಬರ್ಧ ಕವುಚು ಹಾಕಿಕೊಂಡ್ದಿದ ಪುಟಾಣಿಗಳನ್ನು ಕದ್ದು ಕದ್ದು ತಿಂದುಬಿಟ್ಟಿದ್ದೇನೆ. ನಗುತ್ತ ಯಾವಾಗಲೂ ನೇರವಾಗಿಯೇ ನೋಡುತ್ತಿದ್ದ ನಿನಗೆ ಅದು ಕಂಡಿಲ್ಲ ಅಂದ್ಕೊತೀನಿ..

ಅಂದಹಾಗೆ ಸ್ಟೆಪ್ ಬೈ ಸ್ಟೆಪ್ ನೀನು ಹಾಕಿಕೊಂಡ ಆ ವೆರೈಟಿ ಹಾರಗಳು, ಬಳೆ, ಜುಮುಕಿ, ಕಿರೀಟ ಅದೆಲ್ಲ ಯಾರು ಕೊಡಿಸಿದ್ದು? ಅಪ್ಪಾ ತಾನೆ? ಬಂಗಾರದ್ದೇ ಇರಬೇಕು! ಹಾಗಿದ್ರೆ ನಿಮ್ಮ ಅಪ್ಪಾ ದೊಡ್ಡ ಶ್ರೀಮಂತರೇ ಇದಿರಬೇಕು. ನಿಂಗೆ ನಿಮ್ಮ ಅಮ್ಮನೇ ಎಲ್ಲಾ ರೆಡಿ ಮಾಡ್ದಿದಾ... ಕೆನ್ನೆಗೆ ರೋಸು, ತುಟಿಗೆ ಲಿಪ್‌ಸ್ಟಿಕ್‌, ಕಣ್ಣಿಗೆ ಕಾಡಿಗೆ ಅದೆಲ್ಲ ಎಷ್ಟು ನೀಟಾಗಿ ಹಚ್ಚಿದಾರೆ ನೋಡು... ಇದನ್ನೆಲ್ಲಾ ಹಚ್ಕೊಂಡಿದ್ದಕ್ಕೆ ನಿಮ್ಮ ಅಪ್ಪ ಬೈಯ್ಲಿಲ್ಲಾ ತಾನೆ?

ಉಟ್ಕೊಂಡಿರೋ ಸೀರೆ ನಿಮ್ಮ ಅಮ್ಮಂದೇ ಇರಬೇಕು; ಅವರ ಮದುವೇದು. ಚಿತ್ರ ಬಿಡಿಸೋದು ಮುಗಿದ ಮೇಲೆ ನೀನು ನಮ್ಮೆಲ್ಲರ ಹಾಗೆ ಡ್ರೆಸ್ ಹಾಕ್ಕೊಂಡಿದ್ಯಾ? ಆದ್ರೆ ಎಲಿ ಮತ್ತೆ ಒಂದಿನಾನೂ ಸಿಕ್ಲಿಲ್ಲಾ.. ತರಕಾರಿ ತರೋದಕ್ಕೆ, ನಾಟಕ ನೋಡೋದಕ್ಕೆ, ಕೆರೆ ಕಡೆ ಸುತ್ತಾಡೋದಕ್ಕೆ, ಈಜಾಡೋದಕ್ಕೆ, ದೀಪಾವಳಿಗೆ ಸೆಗಣಿ ಹಿಡಿಯೋದಕ್ಕೆ, ನಾಗರಪಂಚಮಿಗೆ ಅಲ್ಲೀಕೇರಿಗೆಂದು ಕೆರೆ ಕಡೆ ಹೋದಾಗ್ಲೆಲ್ಲ ನೋಡ್ತಿದ್ದೆ, ನೀ ಕಾಣ್ತಿರಲೇ ಇಲ್ಲ. ನೀನೆಲ್ಲೂ ಹೋಗಲ್ವಾ ಹಾಗಾದ್ರೆ? ಯಾಕೆ ನಿಮ್ಮ ಅಪ್ಪ-ಅಮ್ಮ ಹೊರಗಡೆ ಬಿಡೋದೇ ಇಲ್ವಾ?

ಸರಿ ಬಿಡು, ಇಲ್ ಕೇಳು.. ಒಂದಿನಾ ನಮ್ಮನೆಗೂ ಟಿವಿ ಬಂತು. ಅವತ್ತೊಂದಿನ ಫ್ರಾಕ್ ಮೇಲೆ ಟವಲ್ ಸುತ್ಕೊಂಡು ಸೀರೆ ಉಟ್ಟುಕೊಳ್ಳುತ್ತಿದ್ದ ನನ್ನನ್ನ ಅಮ್ಮ ಕೂಗಿದವರೆ, ‘ಬಾರೇ.. ಲಕ್ಷ್ಮೀ ಬಂದಿದಾಳೆ..’ ಅಂದ್ರು. ‘ಹೇ.. ಲಕ್ಷ್ಮೀ..’ ಅಂತ ಓಡಿ ಬಂದ್ರೆ ಅಮ್ಮಾ ತೋರ್ಸಿದ್ದು ಟಿವಿ ಲಕ್ಷ್ಮೀ. ನಿಜಾ ಕಣೇ... ನಿನ್ನ ಹಾಗೆನೇ ಟಿವಿನಲ್ಲಿ ಇದ್ದ ಲಕ್ಷ್ಮೀ ಅಲಂಕಾರ ಮಾಡಿಕೊಂಡಿದ್ರು! ಅಬ್ಬಾ ಇಷ್ಟು ದೊಡ್ಡ ಹಾವಿನ ಮೇಲೆ ಮಲಗಿಕೊಂಡವರೊಬ್ಬರ ಕಾಲನ್ನು ಅವರು ಒತ್ತುತ್ತಿದ್ದರು. ಆಮೇಲೆ ಅಮ್ಮ, ‘ಅದು ವಿಷ್ಣು ದೇವರು.. ಲಕ್ಷ್ಮೀ ವಿಷ್ಣುವಿನ ಪಾದಸೇವೆ ಮಾಡ್ತಿದಾಳೆ.. ಸುಮ್ನೆ ನೋಡು’ ಅಂತ ಗದರಿಸಿದ್ರು. ಏನೋ ಕೇಳಲೆಂದು ಆ.. ಅಂತ ಬಾಯಿ ತೆಗೆದವಳಿಗೆ ಮುಚ್ಚಿಸೇಬಿಟ್ರು..

ಅಷ್ಟೊತ್ತಿಗೆ ಅಪ್ಪನ ಗಾಡಿ ಶಬ್ದ! ಇನ್ನು ಏನಿದ್ರೂ ಆ ‘ಸರಸ್ವತಿ’ನೇ ಗತಿ ಎಂದು ಕೋಣೆಗೆ ಓಡುತ್ತಾ... ಪುಸ್ತಕ ಕೈಯಲ್ಲಿ ಹಿಡಿದುಕೊಳ್ಳುವ ಹೊತ್ತಿಗೆ ಮತ್ತೆ ನಿನ್ನದೇ ಮುಖ ಆ ತೆಳುನೀಲಿ ಗೋಡೆಯ ಮೇಲೆ.. ಎವರ್‌ ಸ್ಮೈಲಿಂಗ್‌ ಫೇಸ್. ನಿನ್ನ ಕಾಲುಗಳಿಗೆ ಅಂಟಿಕೊಂಡೇ ನೇತಾಡುವ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್.... ತಿಂಗಳ ಪುಟ್ಟ ಕ್ಯಾಲೆಂಡರ್. ಪರೀಕ್ಷೆಗೆಂದು ತಾರೀಖುಗಳ ಮೇಲೆ ಅಮ್ಮ ಗುರುತು ಹಾಕಿಟ್ಟ ಕೆಂಪು ಮಾರ್ಕ್ ಕಂಡರೆ ಸಾಕು.. ಕೆಂಪು ಮೆಣಸಿನಕಾಯಿ ನಾಲಿಗೆಗೆ ಚುರುಕು ಮುಟ್ಟಿಸಿದ ಹಾಗೆ!

ಅದಕ್ಕೂ ನೀ ನಗುತ್ತ ನಿಂತುಬಿಡ್ತಿದ್ದೆಯಲ್ಲವೆ? ಛೆ.. ನೀ ಸರಿಯಿಲ್ಲಾ ಹೋಗು.. ಒಮ್ಮೆಯಾದರೂ ಕೇಳಿದ್ಯಾ? ಪರೀಕ್ಷೆ ಟೈಮ್‌ನಲ್ಲಿ ಯಾರಿಗೂ ಕಾಣದ ಹಾಗೆ ಬಂದು ಬರೆದು ಕೊಡಲಾ? ಕೊನೆ ಪಕ್ಷ ಕಿವಿನಲ್ಲಿ ಉತ್ತರಗಳನ್ನ ಹೇಳಿ ಹೋಗಬಹುದಿತ್ತಲ್ಲಾ? ಬೇಡಾ ಬಿಡಮ್ಮಾ.. ಪರ್ವಾಗಿಲ್ಲ... ನಮ್ ‘ಸರಸ್ವತಿ’ ನಮ್ ಜೊತೆಗಿರ್ತಾಳೆ.

ಆಯ್ತು ಲಕ್ಷ್ಮೀ... ಏನೋ ನಿನ್ನ ಬಗ್ಗೆ ಹಳೇದೆಲ್ಲಾ ಹೇಳಬೇಕು ಅನ್ನಿಸ್ತು ಹೇಳ್ಕೊಂಡೆ. ತಪ್ಪಾಗಿದ್ರೆ ಕ್ಷಮಿಸ್ಬಿಡು ತಾಯೇ.. ನಿನಗೆ ಲೇಟ್ ಆಯ್ತೋ ಏನೋ.. ಎಲಾ ನಿನಗೆ ಪೂಜೆ ಮಾಡೋದಕ್ಕೆ ಕಾಯ್ತಿದಾರೆ.. ಒಂದೇ ಒಂದು ಪ್ರಶ್ನೆ.. ಅದೇನೋ ಹೇಳ್ತಾರಲ್ಲಾ.. ನೀನಿದ್ದಲ್ಲಿ ಸರಸ್ವತಿ ಇರಲ್ಲಾ.. ಅವಳ್ದಿದ್ಲಲಿ ನೀನಿರಲ್ಲಾ ಅಂತ.. ಅದು ನಿಜಾನಾ?

-ಶ್ರೀದೇವಿ ಕಳಸದ
-----------------------
’ಪ್ರಜಾವಾಣಿ’ ವಿಶೇಷ ಪುರವಣಿಯಲ್ಲಿ ಪ್ರಕಟ

Sunday, August 15, 2010

ಪ್ರಸಾಧನ ಕಲೆಯ ಹಿರಿತಲೆ ಮಹಾಲೆ
ನರನಾಡಿಗಳಲ್ಲಿ ಲಯ, ಬೆರಳುಗಳಲ್ಲಿ ಕೌಶಲ್ಯ. ಕಾಯಕ ತತ್ವವೇ ಅಡಿಪಾಯ. ಸ್ವಾಭಿಮಾನ, ಸೇವಾಮನೋಭಾವದ ಈ ನಿರಂತರ ಕಲಾಯಾನದಲ್ಲಿ 2009ರ ಸಾಲಿನ ಮೇಕಪ್ ನಾಣಿ ಪ್ರಶಸ್ತಿ, ಮೈಲಿಗಲ್ಲಿನಂತೆ.


ಮಂದಿ ನಡಕೂ ಬೇಂದ್ರೆ. ಸ್ಟೇಜ್ ಮ್ಯಾಲೂ ಬೇಂದ್ರೆ...

ಮೇಕಪ್ ಎಲ್ಲಾ ಮುಗೀತು. ಥೇಟ್ ಬೇಂದ್ರೆ ಗೆಟಪ್‌ನ್ಯಾಗ ಶ್ರೀರಂಗರು ತಯಾರಾದ್ರು. ಆದ್ರ ಅವ್ರ ಹಾಕ್ಕೊಂಡಿದ್ ನೀಲಿ ಕೋಟ್, ಯಾಕೋ ಅಷ್ಟು ಹೊಂದಿಕಿ ಆಗಿರ್ಲಿಲ್ಲ. ಕರೀ ಕೋಟ್ ಹಾಕ್ಕೊಳ್ರಿ ಅಂತ ಅಷ್ಟ ದೊಡ್ಡಾವ್ರಿಗೆ ಹೇಳೂದರ ಹೆಂಗ? ‘ಹದಿಮೂರು’ ವರ್ಷದ ಮೇಕಪ್ ಮ್ಯಾನ್ ಕೊನೆಗೂ ಧೈರ್ಯಾ ಮಾಡಿ ಹೇಳೇಬಿಟ್ಟ. ಆಗ ಶ್ರೀರಂಗರು, ‘ಹಿಂಗಂತೀಯಾ’ ಅಂದಾವ್ರನ ಕರೀ ಕೋಟ್ ಹಾಕ್ಕೊಂಡ ಸ್ಟೇಜ್ ಮ್ಯಾಲ ನಡದಬಿಟ್ರು. ಸಭಾಮಂದಿಯೊಳಗಿದ್ದ ಬೇಂದ್ರೆ ತಮ್ಮ ಪಡಿಯಚ್ಚ ನೋಡಿದಾವ್ರನ ಕೂತಲ್ಲೇ ದಂಗ್!

ನಾಟಕ ಮುಗದ ಮ್ಯಾಲ, ‘ಯಾರ ಅಂವಾ? ಕರೀರಿ ಅಂವನ್ನ..’ ಅಂತ ಮೇಕಪ್ ಹುಡುಗನ್ನ ಕರೆಸಿದ ಬೇಂದ್ರೆ, ‘ತಮ್ಮಾ ನೀ ಹಿಂಗ ನನ್ನಗತೇನ ಇಮೇಜ್ ಮಾಡಬ್ಯಾಡೋಪಾ ನನಗ ಧಕ್ಕಿ ಆದಗೀದೀತು..’ ಅಂತ ನಗಚಾಟಕಿ ಮಾಡ್ಕೋತ ಡುಬ್ಬಾ ಚಪ್ಪರಿಸಿ, ಕೂಡಿದ ಮಂದೀಗೆ ಪರಿಚಯ ಮಾಡ್ಸಿದ್ರು.

ಧಾರವಾಡದ ಬಾಸೆಲ್ ಮಿಷನ್ ಶಾಲೆಯಲ್ಲಿ ಶ್ರೀರಂಗರು ‘ಸಂಸಾರ ನೌಕೆ’ ನಾಟಕ ಮಾಡುವಾಗಿನ ಈ ಘಟನೆಗೆ ಈಗ ಐವತ್ತೆಂಟು ವರ್ಷ. ಅಂದಿನ ‘ಛೋಟಾ’ ಮೇಕಪ್‌ಮ್ಯಾನ್ ಗಜಾನನ ಮಹಾಲೆಯವರ ದೇಹಕ್ಕೆಎಂಬತ್ತೊಂಬತ್ತಾದರೂ ಇವರ ಚೈತನ್ಯಕ್ಕೆ, ಸೈಕಲ್ಲಿಗೆ, ಇಪ್ಪತ್ತೇ. ಮೂತಿಗೆ ಮೇಕಪ್ ಕಿಟ್, ಕಿವಿಗೆ ಕ್ಷೌರದ ಚೀಲ, ಬೆನ್ನಿಗೆ ಹಾರ್ಮೋನಿಯಂ ಕಟ್ಟಿಕೊಂಡು ಒಮ್ಮೆ ಗಾಲಿಕಿತ್ತ ಇವರ ಸೈಕಲ್ ಮತ್ತೆ ಮರಳುವುದು ಊರೆಲ್ಲ ಕತ್ತಲ ತೋಳಿನೊಳಗೆ ಆತುಕೊಂಡಾಗ. ಬೆಳಗು ಮಿಸುಕುವ ಮೊದಲೇ ಮತ್ತದೇ ಕಾಯಕದ ತಯಾರಿ. ಅವರ ನಾಯಿ- ಬೆಕ್ಕು ಮಲಗಿಕೊಂಡೇ ಅವರಿಗೆ ಬೀಳ್ಕೊಡುಗೆ ನೀಡುವಾಗಲೇ ಟ್ರೇನಿಂಗ್ ಕಾಲೇಜಿನ ಪಕ್ಕದ ಓಣಿಸಂದಿಯಿಂದ ಮುಖ್ಯರಸ್ತೆ ತಲುಪಿಯಾಗಿರುತ್ತದೆ ಮಹಾಲೆ ಮತ್ತವರ ಸೈಕಲ್.

‘ಹೇಳಿ ಕಳಿಸಿದ ಹಾಗೆ ಬಂದಿರಿ ನೋಡಿ’ ಎನ್ನುತ್ತಲೇ ಧಾರವಾಡದ ಪರಿಚಿತರ, ಕಲಾವಿದರ, ಆತ್ಮೀಯರ ತಲೆಗಳು ಮಹಾಲೆಯವರ ಕೇಶ ಕರ್ತನ ಸೇವೆಗೆ ಬಾಗುತ್ತವೆ. ‘ವೃತ್ತಿ ಧರ್ಮಕ್ಕೆ ಕತ್ತರಿ ಹಾಕಬೇಡವೋ..’ ಎಂದ ಅಪ್ಪನ ಮಾತಿನ ನೆನಕೆಯೊಂದಿಗೆ ಲಯಬದ್ಧವಾಗಿ ಶಿರೋಮರ್ದನನಡೆಸುತ್ತವೆ ಬೆರಳುಗಳು. ಹೊತ್ತು ಏರುತ್ತಿದ್ದಂತೆ ಆ ಬೆರಳುಗಳುತೋರುವ ದಾರಿಯೇ ಸಾಧನಕೇರಿ, ಮಾಳಮಡ್ಡಿ, ಚನ್ನಬಸವೇಶ್ವರ ನಗರ, ಶ್ರೀನಗರ.. ಅಲ್ಲಿಯ ಹಿರಿ-ಕಿರಿಯ ಕಲಾವಿದರೊಂದಿಗೆ ಕೆಲ ಹೊತ್ತು ಹಾರ್ಮೋನಿಯಂ ಸಾಥ್ ಸಂಗತ್.

ಇಳಿಹೊತ್ತಾಗುತ್ತಲೇ ಕಣ್‌ಮನಗಳ ತುಂಬ ತುಂಬಿ ಕೊಳ್ಳುವುದೇ ಜೀವದ ಪ್ರಸಾಧನ ರಂಗ. ಪಾತ್ರ ಅಥವಾ ವಯಸ್ಸು ಹೇಳಿದರೆ ಸಾಕು ನಿಮಿಷಗಳ ಲೆಕ್ಕದಲ್ಲಿ ಚಕಚಕನೆ ಪಾತ್ರಸೃಷ್ಟಿ. ಪಾತ್ರಧಾರಿಯ ಮುಖ ಹೇಗೇ ಇರಲಿ ನಗು ಮುಖದ ನಾರಿಯನ್ನಾಗಿ, ರೋಷ ಉಕ್ಕಿಸುವ ಮಾರಿಯನ್ನಾಗಿ, ಜೋಲುಮುಖದ ನೀರೆಯನ್ನಾಗಿ, ನೆರಿಗೆಗಳಿಂದ ಕೂಡಿದ ಮುದುಕಿಯನ್ನಾಗಿ, ಹದಿನಾರು ವರುಷದ ತರುಣನನ್ನಾಗಿ- ಹೀಗೆ ಆಕಾರಕ್ಕೆ ಆಕಾರವನ್ನೇ ಬದಲಿಸಿ ಉದ್ದ ಮೂಗು, ವಿಶಾಲ ಕಿವಿ, ರಾಕ್ಷಸ ಕಣ್ಣು, ಕೋರೆ ಹಲ್ಲು, ಬೊಚ್ಚು ಬಾಯಿ, ಬೋಳು ತಲೆ ಮುಂತಾದ ಕುರೂಪ-ಸುರೂಪಗಳನ್ನು ಅಲ್ಪ ಸಮಯದಲ್ಲಿಯೇ ಮಾಡುವ ಅಪರೂಪದ ಸಾಧಕರಿವರು.

2001ರಲ್ಲಿ ಧಾರವಾಡದ ಶ್ರೀ ಗಜಾನನ ಮಹಾಲೆ ಅಭಿನಂದನಾ ಸಮಿತಿಯವರು ಹಮ್ಮಿಣಿ ಸಲ್ಲಿಸಲು ಚಂದಾ ವಸೂಲಿಗೆ ಹೋದ ಸಂದರ್ಭದಲ್ಲಿ, ‘ಮಹಾಲೆಯವ್ರಿಗೇನ್ರಿ? ಐದನೂರ್ಯಾಕ್ರೀ ಸಾವ್ರಾ ತುಗೊಳ್ರೀ..’ ಹೀಗೆ ಧಾರವಾಡ- ಹುಬ್ಬಳ್ಳಿ ಜನ ಕಕ್ಕುಲಾತಿಯಿಂದ ದೇಣಿಗೆ ನೀಡಿದ್ದರು. ಹಾಗೆ ಸಂಗ್ರಹಿಸಿದ ಮೊತ್ತ ಎರಡು ಲಕ್ಷಕ್ಕೆ ಹತ್ತಿರವಾಗಿತ್ತು!

ಪ್ರಸಾಧನ ಕಲೆಯಲ್ಲಿ ಹೊಸ ಪ್ರಯೋಗಗಳೊಂದಿಗೆ ನೈಜ ಹಾಗೂ ತೆಳು ಲೇಪನದ ಯುಗಕ್ಕೆ ನಾಂದಿ ಹಾಕಿದ ಮಹಾಲೆ, ಬಣ್ಣ-ಬೆಳಕು-ನೆರಳಿನ ಸಂಯೋಜನೆಗನುಸಾರವಾಗಿ ಪ್ರಸಾಧಿಸುವಲ್ಲಿ ನಿಪುಣರು. ಇದೆಲ್ಲದರೊಂದಿಗೆ ಸಜ್ಜನಿಕೆ, ಸರಳತೆ, ಅಕ್ಕರೆಯೇ ಅವರನ್ನಿಷ್ಟು ಎತ್ತರಕ್ಕೇರಿಸಿದ್ದು. ಅಂತೆಯೇ ನಾಟಕಕ್ಕೆ ಮೊದಲು ಕಲಾವಿದರೆಲ್ಲ ತೆರೆಯ ಹಿಂದಿನ ಗಜಾನನನಿಗೆ (ಮಹಾಲೆಯವರಿಗೆ) ವಂದಿಸಿಯೇ ರಂಗಮಂಚ ಪ್ರವೇಶಿಸುವುದು ಇಂದಿಗೂ ರೂಢಿ.

ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಮುಂತಾದ ಹಿರಿಯ ಕಲಾವಿದರಿಗಷ್ಟೇ ಅಲ್ಲ ಕಿರಿಯರಿಗೂ ವಿಶೇಷವಾಗಿ ಮಕ್ಕಳಿಗೂ ಹಾರ್ಮೋನಿಯಮ್ ಸಾಥ್ ಕೊಡುವಲ್ಲಿ ಅದೇ ಶ್ರದ್ಧೆ. ಕೆಲ ವರ್ಷಗಳಿಂದ ಚಂದ್ರಶೇಖರ ಪುರಾಣಿಕಮಠರ ಗರಡಿಯಲ್ಲಿ ಮತ್ತಷ್ಟು ಪಳಗುತ್ತಿದ್ದಾರೆ. ಇದೆಲ್ಲದರೊಂದಿಗೆ ವರುಷವೂ ಶ್ರಾವಣ-ಭಾದ್ರಪದ ಬಂತೆಂದರೆ ಮೈಕೈ ತುಂಬ ಮಣ್ಣು. ಮಣ್ಣಿಗೆ ಗಣೇಶ ರೂಪು ಕೊಡುವುದರಲ್ಲಿ ಹಗಲು-ರಾತ್ರಿ ಸರಿದಿದ್ದು ಅವರ ಅರಿವಿಗೆ ಬರುವುದೇ ಇಲ್ಲ. ಈ ಮಣ್ಣ-ಬಣ್ಣ ಅಭಿನಯದ ನಂಟನ್ನೂ ಅಂಟಿಸಿದೆ; ಕಿರುತೆರೆ, ಹಿರಿತೆರೆಗಳಿಗೆ ಪ್ರಸಾಧನ ಮಾಡುತ್ತ ಕೆಲ ಪಾತ್ರಗಳನ್ನೂ ನಿರ್ವಹಿಸಿದ ಬಹುಮುಖಿ ವ್ಯಕ್ತಿತ್ವ ಇವರದು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1987-88), ರಾಷ್ಟ್ರಮಟ್ಟದ ಅತ್ಯುತ್ತಮ ಪ್ರಸಾಧನ ಪ್ರಶಸ್ತಿ(2004-05), ಮುಂಬೈ ಕರ್ನಾಟಕ ಸಂಘದಿಂದ ಅತ್ಯುತ್ತಮ ರಾಷ್ಟ್ರ ಮಟ್ಟದ ಪ್ರಸಾಧನ ಪ್ರಶಸ್ತಿ (2008-09), ಇವರ ಜೋಳಿಗೆಯಲ್ಲಿವೆ ಯಾದರೂ ಇಂದಿಗೂ ಬಾಡಿಗೆ ಮನೆಯಲ್ಲಿಯೇ ವಾಸ. ಮೂರು ಮಕ್ಕಳ ಪೈಕಿ ಮಗಳು ಭಾರತಿ ಮತ್ತು ಕಿರಿಯ ಮಗ ಸಂತೋಷ್ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ.

ಹೀಗೆ ಬಣ್ಣದೊಂದಿಗೆ. ಮಣ್ಣಿನೊಂದಿಗೆ. ಕೇಶಕರ್ತನದೊಂದಿಗೆ, ಸಂಗೀತದೊಂದಿಗೆ ಸಾಗುತ್ತಿರುವ ಈ ಸಣ್ಣ ದೇಹಕ್ಕೆ ಒಮ್ಮೆ ಪೆಟ್ಟು ಬಿದ್ದಿತು. ‘ಸೈಕಲ್ ಮುಟ್ಟಿದರೆ ಆಣೆ!’ ಪತ್ನಿ ಜಯಾರ ಮಾತು ಮುರಿದು ಮತ್ತದೇ ಸೈಕಲ್ ಏರಿದರು ಮಹಾಲೆ. ಈ ವಯಸ್ಸಿನಲ್ಲಿಯೂ ಆರೋಗ್ಯ-ಮನಸ್ಸು ಉಲ್ಲಸಿತವಾಗಿದೆ ಎಂದರೆ ನಮನ, ಸೈಕಲ್ಲಿಗೇ ಎನ್ನುತ್ತಾರೆ ಮಹಾಲೆ.

-ಶ್ರೀದೇವಿ ಕಳಸದ, ’ಪ್ರಜಾವಾಣಿ’ ಸಾಪ್ತಾಹಿಕದಲ್ಲಿ 08/09/2009ರಂದು ಪ್ರಕಟ.

ಗಮಕಯೋಗಿಯೊಂದಿಗೆ...ನಮ್ಮದು ಹಳ್ಳಿ ಮನೆ. ಒಂದೊಂದಕ್ಕೆ ಒಂದೊಂದು ಜಾಗ. ಅಭ್ಯಾಸಕ್ಕೆ ಒಂದು ಕೋಣೆ, ಮಲಗಲು ಮತ್ತೊಂದು.. ಅವಳಿಗೂ ಗಮಕದ ಹದ ಗೊತ್ತು. ರುಚಿಯೂ. ಆದರೆ ವಾಚಿಸುವುದಿಲ್ಲವಷ್ಟೇ. ಇಷ್ಟು ವರ್ಷಗಳಾದರೂ ತಕರಾರೇ ಇಲ್ಲ. ಕಾರ್ಯಕ್ರಮಗಳಿಗೆ ಬಿಟ್ಟು ಹೋದರೂ ಕೋಪಿಸಿಕೊಂಡಿದ್ದಂತೂ ಊಂ ಹೂ....

-------------------

೨೦೧೦ನೇ ಸಾಲಿನ ಕುಮಾರವ್ಯಾಸ ಪ್ರಶಸ್ತಿ ಗಮಕಿ ಹೊಸಹಳ್ಳಿ ಕೇಶವಮೂರ್ತಿ ಅವರನ್ನು ಅರಸಿ ಬಂದಿದೆ. ಗಮಕ ಕಲೆಯನ್ನು ಜೀವಂತವಾಗಿ ಇಟ್ಟ, ಜನರ ಆಸಕ್ತಿಯನ್ನು ಕನ್ನಡ ಕಾವ್ಯದ ಕುರಿತಂತೆ ಹಿಡಿದಿಟ್ಟ ಹಿರಿಯ ಗಮಕಿಗಳಲ್ಲಿ ಅವರೂ ಒಬ್ಬರು. ಇಲ್ಲಿ ತಮ್ಮ ಗಮಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ಹೊಸಹಳ್ಳಿ-ಮತ್ತೂರು ಮಧ್ಯೆ ತಾಯ ಮಮತೆಯಂತೆ ಹರಿಯುವ ತುಂಗೆಯೇ ಬಾಲಕ ಕೇಶವನಿಗೆ ಸಂಗೀತ ಮಾತೆ. ಅವಳ ಲಯ-ಗತಿಗೆ, ಕಾವ್ಯದ ರಸಕ್ಕೆ ರಾಗಗಳನ್ನು ಹೊಸೆಯುತ್ತ ಪಂಪ, ರನ್ನ, ಕುಮಾರವ್ಯಾಸ ಕಾವ್ಯಗಳನ್ನು ಗಮಕ ಶೈಲಿಯಲ್ಲಿ ಹಾಡುವ ಕಲೆ ಕೇಶವನಿಗೆ ಬಾಲ್ಯದಲ್ಲೇ ಸಿದ್ಧಿಸಿತ್ತು. ಅತ್ತ ಹೈಸ್ಕೂಲು ಕಟ್ಟೆ ಏರುವ ಹೊತ್ತಿಗೆ ಗಮಕ ವಾಚನಕ್ಕಾಗಿ ಸಾರ್ವಜನಿಕ ವೇದಿಕೆಗಳನ್ನು ಏರುವ ಅವಕಾಶಗಳೂ ಅವನನ್ನು ಹುಡುಕಿಕೊಂಡು ಬಂದವು...

ಹಗಲು ಹೊತ್ತು ಉತ್ತು-ಬಿತ್ತುವ ಕೆಲಸ. ಇರುಳು ಹನ್ನೊಂದರಿಂದ ಕಾವ್ಯದ ಆಸ್ವಾದನೆ, ರಸಸಿದ್ಧಾಂತದೊಂದಿಗೆ ಗಮಕ ಕಲೆಯ ಕುಸುರಿ ಕೆಲಸ. ಯುವಕ ಕೇಶವನಿಗೆ ಕಲಾದೇವಿಯೊಂದಿಗೆ ‘ಲಕ್ಷ್ಮೀದೇವಿ’ಯೂ ಒಲಿದುಬಂದಳು. ಈ ದಾಂಪತ್ಯಕ್ಕೆ ‘ಉಷೆ’ ಬೆಳಕು ಚೆಲ್ಲಿದಳು. ಕೇಶವಮೂರ್ತಿಗಳ ಕಾಯಕ ಮುಂದುವರಿಯಿತು... ಆಳಿನೊಂದಿಗೆ ಆಳಾಗಿ ವಸುಂಧರೆಯ ಸೇವೆ; ಕಾವ್ಯ-ರಸದೊಂದಿಗೆ ಸರಸ್ವತಿಯ ಪಾದಸೇವೆ...

ಪ್ರಸಕ್ತ ಸಾಲಿನ ಕುಮಾರವ್ಯಾಸ ಪ್ರಶಸ್ತಿ ಗಮಕಿ ಹೊಸಹಳ್ಳಿ ಕೇಶವಮೂರ್ತಿ ಅವರನ್ನು ಅರಸಿ ಬಂದಿದೆ. ಈ ಸಂದರ್ಭದಲ್ಲಿ ‘ಸಾಪ್ತಾಹಿಕ’ ದೊಂದಿಗೆ ಅವರು ತಮ್ಮ ‘ಗಮಕ-ಜೀವನ’ದ ಬಗ್ಗೆ ಮೆಲುಕು ಹಾಕಿದ ಛಾಯೆಯಷ್ಟೇ ನಿಮ್ಮಮುಂದೆ...

* ನಿಮ್ಮ ಬಾಲ್ಯ...
ಅಪ್ಪ ಸಂಸ್ಕೃತ ಪುರಾಣ ವಾಚಕರು. ಅಣ್ಣ ಸಂಗೀತ ವಿದ್ವಾಂಸ. ಹೀಗಾಗಿ ಸಂಗೀತ ಪರಿಸರದಲ್ಲೇ ಬೆಳೆದೆ. ಗಮಕವಾಚನ ಎಲ್ಲೇ ನಡೆದರೂ ಲಕ್ಷ್ಯಗೊಟ್ಟು ಆಲಿಸುವುದೇ ಬಾಲ್ಯಕಾಲದ ‘ಆಟ’ವಾಗಿತ್ತು. ನಂತರ ಕುಪ್ಪಳಿಯ ವೆಂಕಟೇಶಯ್ಯನವರಲ್ಲಿ ಗಮಕಾಭ್ಯಾಸ ಮುಂದುವರಿಸಿದೆ.

* ಗಮಕ-ಕಲಾಸಮಯ-ಪ್ರಯೋಗ..

ಇಡೀ ದಿನ ತೋಟದಲ್ಲಿ ಕೆಲಸ. ರಾತ್ರಿ ಹನ್ನೊಂದರಿಂದ 1 ಗಂಟೆವರೆಗೆ ಗಮಕ ಅಭ್ಯಾಸ. ರನ್ನ, ಪಂಪರ ಮಹಾಕಾವ್ಯಗಳಿಗಿಂತ ಕುಮಾರವ್ಯಾಸ ಕಾವ್ಯವನ್ನೇ ವಾಚಿಸಿದ್ದು ಹೆಚ್ಚು. ಶಂಕರಾಭರಣ, ಕಲ್ಯಾಣಿ, ತೋಡಿ, ಹಂಸಧ್ವನಿ, ಮೋಹನ ಇತ್ಯಾದಿ ಹದಿನೈದಿಪ್ಪತ್ತು ರಾಗಗಳಿಗೆ ಸೀಮಿತವಾಗಿದ್ದ ಗಮಕ ವಾಚನವನ್ನು ಕಾವ್ಯದ ರಸಕ್ಕೆ ತಕ್ಕಂತೆ ಹೊಸ ರಾಗಗಳನ್ನು ಸಂಯೋಜಿಸಿ ಹಾಡುತ್ತ ಬಂದೆ.

* ನಿಮ್ಮ ‘ಕಲಾಸಮಯ’ ಪತ್ನಿ ಲಕ್ಷ್ಮೀದೇವಿಯವರ ಮುನಿಸಿಗೆ ಎಡೆಮಾಡಿಕೊಡಲಿಲ್ಲವೆ?

ನಮ್ಮದು ಹಳ್ಳಿ ಮನೆ. ಒಂದೊಂದಕ್ಕೆ ಒಂದೊಂದು ಜಾಗ. ಅಭ್ಯಾಸಕ್ಕೆ ಒಂದು ಕೋಣೆ, ಮಲಗಲು ಮತ್ತೊಂದು.. ಅವಳಿಗೂ ಗಮಕದ ಹದ ಗೊತ್ತು. ರುಚಿಯೂ. ಆದರೆ ವಾಚಿಸುವುದಿಲ್ಲವಷ್ಟೇ. ಇಷ್ಟು ವರ್ಷಗಳಾದರೂ ತಕರಾರೇ ಇಲ್ಲ. ಕಾರ್ಯಕ್ರಮಗಳಿಗೆ ಬಿಟ್ಟು ಹೋದರೂ ಕೋಪಿಸಿಕೊಂಡಿದ್ದಂತೂ ಊಂ ಹೂ....

* ಮತ್ತೂರು ಮತ್ತು ನೀವು...
ಮತ್ತೂರು ಕೃಷ್ಣಮೂರ್ತಿಯವರು ಲಂಡನ್‌ನಿಂದ ಭಾರತಕ್ಕೆ ಬಂದಾಗಲೆಲ್ಲ ನನ್ನ ಗಮಕ ವಾಚನಕ್ಕೆ ಕಿವಿಯಾಗುತ್ತಿದ್ದರು. ನಂತರ ಅವರು ಶಾಶ್ವತವಾಗಿ ಭಾರತಕ್ಕೇ ಮರಳಿದರು. ಆಗ ಅವರಿಗೆ 55 ವಯಸ್ಸಿದ್ದಿರಬೇಕು. ಆಗ... ಅವರಿಗೆ ಗಮಕ ವ್ಯಾಖ್ಯಾನದ ಖಯಾಲಿ ಶುರುವಾಯಿತು! ನಂತರ ಸಾಕಷ್ಟು ಕಡೆ ವ್ಯಾಖ್ಯಾನ-ವಾಚನ ಒಟ್ಟಾಗಿ ನಡೆಸಿದೆವು. ಈಗಲೂ ನಡೆಸುತ್ತಿದ್ದೇವೆ. ಎಚ್‌ಎಂವಿ ಕೆಸೆಟ್ ಕಂಪೆನಿಯವರ 200 ಕೆಸೆಟ್‌ಗಳಲ್ಲಿ ವ್ಯಾಖ್ಯಾನಿಸಿ-ವಾಚಿಸಿದ್ದೇವೆ. ಟಿವಿ, ರೇಡಿಯೋ ಕಾರ್ಯಕ್ರಮ ಎಂದು ಬೆಂಗಳೂರಿಗೆ ತಿಂಗಳಿಗೆರಡು ಮೂರು ಬಾರಿ ಪ್ರಯಾಣ...

* ನಿಮ್ಮ ಪ್ರಕಾರ ಗಮಕ ಕಲೆಯ ವೈಶಿಷ್ಟ್ಯ?
ಪರಭಾರೆಗೆ ಸಾಧ್ಯವಾಗದ ಕನ್ನಡದ ಏಕೈಕ ಕಲೆ ಎಂದರೆ ಗಮಕ. ಭಾಷೆಯೇ ಇದಕ್ಕೆ ಮಿತಿ. ಕನ್ನಡದ ಕಾವ್ಯವೇ ಇದಕ್ಕೆ ಅಂತಃಸ್ಸತ್ವ. ಆದರೂ ಪ್ರಯೋಗಾರ್ಥವಾಗಿ ಅಲಹಾಬಾದಿನಲ್ಲಿ ಕನ್ನಡದಲ್ಲೇ ಕಾವ್ಯ ವಾಚಿಸಿದೆ. ಮತ್ತೂರು ಅದಕ್ಕೆ ಹಿಂದಿಯಲ್ಲಿ ವ್ಯಾಖ್ಯಾನಿಸಿದರು. ಆದರೂ ಕನ್ನಡದ ಕಂಪೇ ಕಂಪು. ತಂಪು, ಇಂಪು ಎಲ್ಲವೂ....

* ಬೇಸರವೇನು? ಖುಷಿ ಏನು?

ಗಮಕ ಕಲೆಯ ಬಗ್ಗೆ ಜನರಿಗೆ ನಿರಾಸಕ್ತಿ. ನೂರಾರು ಶಿಷ್ಯರಿದ್ದರೂ ಮುಂದುವರಿಸಿಕೊಂಡು ಹೋಗುತ್ತಿಲ್ಲ. ಅದರಲ್ಲೂ ಗಂಡು ಮಕ್ಕಳು ಗಮಕದ ಕಡೆ ತಲೆಯೇ ಹಾಕುತ್ತಿಲ್ಲ. ಇನ್ನು ಹೆಣ್ಣುಮಕ್ಕಳು ಕಾಲೇಜು ಮೆಟ್ಟಿಲು ಹತ್ತುವುದರೊಳಗೆ ಅವರ ಆಸಕ್ತಿಗಳೇ ಬದಲಾಗಿ ಬಿಟ್ಟಿರುತ್ತವೆ. ಒಂದುವೇಳೆ ಕಲಿಕೆ ಮುಂದುವರಿಸಿದರೂ ಮದುವೆಯಾದ ನಂತರ ತಕ್ಕ ಪರಿಸರದ ಕೊರತೆ. ಆದರೂ ದೆಹಲಿಯಲ್ಲಿ ಜಲಜಾ, ಚಿತ್ರದುರ್ಗದಲ್ಲಿ ಚಂಪಾ ಹಾಗೂ ಸನತ್‌ಕುಮಾರ್, ಅನಂತನಾರಾಯಣ ಈ ಕಲೆಯನ್ನು ಕಲಿಯುತ್ತ, ಕಲಿಸುತ್ತ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

* ಕಲೆಯ ಉಳಿವಿಗಾಗಿ...
ಪ್ರಾಥಮಿಕ ಶಾಲೆಯಿಂದಲೇ ಪಠ್ಯದಲ್ಲಿ ಗಮಕ ಕಲೆ ಅಳವಡಿಕೆ. ವಾರಕ್ಕೆ ಎರಡು-ಮೂರು ಸಲವಾದರೂ ಮಕ್ಕಳು ಗಮಕ ವಾಚನ ಕೇಳಿದಲ್ಲಿ ಆಸಕ್ತಿ ಬೆಳೆಯುವುದೋ..? ಪ್ರಯತ್ನಿಸಿ ನೋಡಬೇಕು.... ಹೊಸಹಳ್ಳಿಯಲ್ಲಿ ಈಗಲೂ ‘ಹೊಸಹಳ್ಳಿ ಗಮಕ ಕಲಾ ಪರಿಷತ್ತು’ ಪ್ರತಿ ವರ್ಷ ಸಪ್ತಾಹ ಆಚರಿಸುತ್ತದೆ. ಸ್ಥಳೀಯರೊಂದಿಗೆ ಹೊರ ಊರುಗಳ ಗಮಕ ಕಲಾವಿದರೂ ಇಲ್ಲಿಗೆ ಬಂದು ಸೇವೆ ಸಲ್ಲಿಸುತ್ತಾರೆ.

* 76ರ ಇಳಿವಯಸ್ಸಿನಲ್ಲೂ ಗಮಕ ಸೇವೆ...?
ನಿಲ್ಲಿಸುವುದೆಂತು ಮಾರಾಯರೆ? ಆಸಕ್ತಿಯಿಂದ ಆಲಿಸುವ ಯಾರೇ, ಎಲ್ಲೇ ಕರೆದರೂ, ‘ಕಾಂಚಾಣ’ ಲೆಕ್ಕಿಸದೆ ಕಲಾಸೇವೆಗೆ ಸೈ....
----------------------
ಶ್ರೀದೇವಿ ಕಳಸದ, ’ಪ್ರಜಾವಾಣಿ’ ಸಾಪ್ತಾಹಿಕದಲ್ಲಿ 20-6-2010 ಪ್ರಕಟ.

‘ಭೋಗ ಜೀವನವೊಂದೇ ಮುಖ್ಯವಲ್ಲ’ಭಾರತೀಯರಾದ ನಮಗೆ ಭೋಗ ಜೀವನವೊಂದೇ ಮುಖ್ಯವಲ್ಲ. ಮನೋ-ದೈಹಿಕ ನಿಯಂತ್ರಣಕ್ಕೆ ಆಧ್ಯಾತ್ಮವಿದೆ. ಸಂಗೀತವಿದೆ. ಧ್ಯಾನವಿದೆ. ಇಚ್ಛಿತ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮನೋಬಲವಿದೆ ಎಂದು ಹೇಳಿದಾಗ ಅವರೆಲ್ಲ ಎದ್ದು ನಿಂತು ಕರತಾಡನ ಮಾಡುತ್ತ ಅಭಿನಂದಿಸಿದರು. ಒಬ್ಬೊಬ್ಬರಾಗಿ ಎದ್ದು ಬಂದು ನೀವು ಭಾರತೀಯರು ಶ್ರೇಷ್ಠರು ಎಂದು ಅಪ್ಪಿಕೊಂಡರು. ಮುತ್ತಿಟ್ಟರು. ನಂತರ ನಾನು ಭಾರತದಿಂದ ತಂದಿದ್ದ ಸೋಪಿನಿಂದ ಮುಖ ಮೈ ಕೈ ತೊಳೆದುಕೊಂಡೆ...
--------------------------


ಬದುಕೆಂದರೆ ಗೋಳಲ್ಲ, ಸಂಬಂಧವೆಂದರೆ ಸಂಕೋಲೆಯಲ್ಲ, ಪ್ರೀತಿಯೊಂದೇ ಜೀವನವಲ್ಲ. ಮದುವೆಯಿಂದಲೇ ಮುಕ್ತಿ ಎಂದೇನಿಲ್ಲ, ಸಂಸಾರದಾಚೆಗೂ ಏನೋ ಇದೆಯಲ್ಲವಾ? ಎನ್ನುವ ಪಂಕಜಕ್ಕನ ‘ಪ್ರಸನ್ನ’ಕ್ಕೆ ನೋವಿನ ಗುಡ್ಡ ಹೊತ್ತು ಬಂದವರು ಖಂಡಿತ ಮರಳುವುದು ನಗೆಹೂವಿನೊಂದಿಗೇ. ಅಂತಹದೊಂದು ಮಾಂತ್ರಿಕ ಶಕ್ತಿ ಪಂಕಜಕ್ಕ ಮತ್ತು ಅವರ ಬಳಗಕ್ಕಿದೆ.

ಎಪ್ಪತ್ತಾರರ ಎಂ.ಸಿ. ಪಂಕಜಾ ಚನ್ನಪಟ್ಟಣದ ಹತ್ತಿರವಿರುವ ಹಿರೇಮಳೂರಿನವರು. ಮನಶಾಸ್ತ್ರದಲ್ಲಿ ಪದವಿ ಪಡೆದ ಇವರು ಬೆಂಗಳೂರಿನ ಹೊಂಬೇಗೌಡ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ನಿವೃತ್ತಿಯಾದರು. ಶಾಲೆಗೆ ಬರುತ್ತಿದ್ದ ಮಧ್ಯಮ, ಕೆಳಮಧ್ಯಮ ವರ್ಗದ ಮಕ್ಕಳ ಮನಃಸ್ಥಿತಿ, ಮನೆ ಪರಿಸ್ಥಿತಿಯೇ ಬೆಂಗಳೂರಿನ ಬಸವನಗುಡಿಯಲ್ಲಿರುವ ‘ಪ್ರಸನ್ನ ಆಪ್ತಸಲಹಾ ಕೇಂದ್ರ’ ತೆರೆಯಲು ಇವರನ್ನು ಪ್ರೇರೇಪಿಸಿತು.

ಬೆಂಗಳೂರಿನ ಪ್ರಥಮ ಆಪ್ತಸಲಹಾ ಕೇಂದ್ರ ‘ಪ್ರಸನ್ನ’ ಸುಮಾರು ಮೂವತ್ತು ವರ್ಷಗಳಿಂದ ಲಕ್ಷಾಂತರ ಜನರಿಗೆ ಸಾಂತ್ವನ ಹೇಳಿದೆ. ಮನೋಸ್ಥೈರ್ಯ ತುಂಬಿದೆ. ಮಾರ್ಗದರ್ಶನ ನೀಡಿದೆ.

ಆಪ್ತಸಲಹೆ ನಿಮಗೆ ಆಪ್ತವಾದದ್ದು...


ಮಕ್ಕಳೊಂದಿಗಿನ ಒಡನಾಟ!? ಆಗ ಹೊಂಬೇಗೌಡ ಶಾಲೆಗೆ ಬರುತ್ತಿದ್ದ ಮಕ್ಕಳ ಬಹುಪಾಲು ಅಪ್ಪಂದಿರು ಕುಡುಕರು, ಬೇಜವಾಬ್ದಾರರು. ಇನ್ನು ಅಮ್ಮಂದಿರು ಮಕ್ಕಳ ಮೇಲೆ ಪಾಟಿಚೀಲದೊಂದಿಗೆ ಕಂಕುಳ ಕೂಸನ್ನೂ ‘ಹೊರೆ’ಸುತ್ತ ಹಿಟ್ಟಿಗಾಗಿ ಮೈಮುರಿಯುತ್ತಿದ್ದರು.

ಇಂತಹ ಪರಿಸ್ಥಿತಿಯಲ್ಲಿ ‘ಓದುವ’ ಆ ಮನಸುಗಳು ಭಾರದಿಂದ ನಲುಗುತ್ತಿದ್ದವು, ಏಕಾಗ್ರತೆ ತೊಂದರೆ, ಭಯ, ಚುರುಕಿಲ್ಲದಿರುವಿಕೆ ಹೀಗೆ ಮುಂತಾದ ಸಮಸ್ಯೆಗಳು ಅವರ ಬಾಲ್ಯವನ್ನು ನುಂಗಿಹಾಕುತ್ತಿದ್ದವು. ಆ ಸಮಯದಲ್ಲಿ ಮಕ್ಕಳೊಂದಿಗೆ ಅವರ ಮನೆಯವರನ್ನು ಕರೆಸಿ ಸಲಹೆ ನೀಡುತ್ತ ಬಂದೆ. ಅಂದಿನಿಂದಲೂ ಈ ಆಪ್ತತೆ ಲಕ್ಷಾಂತರ ಮನಸುಗಳೊಂದಿಗೆ ಬೆಸೆದುಕೊಂಡುಬಿಟ್ಟಿದೆ.

ಯಾರಿಗೆ ಆಪ್ತ ಸಲಹೆ ಬೇಕು? ಯಾಕೆ?

ಕುಟುಂಬದ ಯಾರೇ ಆಗಲಿ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎಂದಾದಲ್ಲಿ ಸಮಸ್ಯೆ ಅವರಿಗೊಬ್ಬರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದಕ್ಕೆ ಪೂರಕವಾಗಿ ಅವರೊಂದಿಗಿರುವವರು ನೀಡಿದ ‘ಕೊಡುಗೆ’ಯ ಪಾತ್ರ ಮಹತ್ವದ್ದಾಗಿರುತ್ತದೆ.

ಮನೆಗೆ ಬಂದ ಮಕ್ಕಳಿಗೆ ತಿನ್ನುಣ್ಣು, ಎಂದು ಹೇಳುವವರಿಲ್ಲ. ಬೇಜಾರ್ಯಾಕೆ? ಏನು ಖುಷಿ? ಎಂದು ತಲೆ ಸವರುವರಿಲ್ಲ. ಹೆಂಡತಿ ಎಂದರೆ ಟೇಕನ್ ಗ್ರ್ಯಾಂಟೆಡ್?! ಮಕ್ಕಳು ಎಂಜಿನಿಯರ್, ಡಾಕ್ಟರ್‌ಗಳೇ ಆಗಬೇಕು. ಬಂದ ಸೊಸೆ ಮಗನನ್ನು ಕಿತ್ತುಕೊಂಡರೆ?

ವಯಸ್ಸಾಯ್ತು ತಾನಿನ್ನು ಎಲ್ಲರ ಕೈಗೊಂಬೆಯೇ... ಎಲ್ಲವೂ ತಾನು ಹೇಳಿದಂತೆಯೇ ಆಗಬೇಕೆನ್ನುವ ಹಠ, ಅಭದ್ರ ಮನೋಭಾವ, ಹೀಗೆ ಇನ್ನೂ ಏನೇನೋ... ಸಮಸ್ಯೆ, ಗೊಂದಲ, ಖಿನ್ನತೆ, ನೋವು, ದುಃಖ.. ಇಂತಹ ಪರಿಸ್ಥಿತಿಯಲ್ಲಿ ಹೂವಿನಂತಿದ್ದ ಮನಸ್ಸು ಹಾವಿನಂತಾಗಬಹುದು. ಬಾಡಲೂಬಹುದು.

ಆಗ ಘಾಸಿಗೊಳಗಾದ ಆ ಮನಸ್ಸಿನೊಂದಿಗೆ ಇಡೀ ಕುಟುಂಬವನ್ನೂ ಆಪ್ತಸಮಾಲೋಚನೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅವಶ್ಯವಿದ್ದಲ್ಲಿ, ಅಗತ್ಯವಿದ್ದವರಿಗೆ ಮನೋಚಿಕಿತ್ಸೆ ನೀಡಬೇಕಾಗುತ್ತದೆ.

ಇಷ್ಟೆಲ್ಲರ ದೂರು-ದುಮ್ಮಾನ ಕೇಳಿದ ನಿಮ್ಮ ಮನಸ್ಸಿನ ಗತಿ? ನೀವೇನಾದರೂ ಈ ವಿಷಯವಾಗಿ ಕೆಲ ನಿಮಯಗಳನ್ನು ಹಾಕಿಕೊಂಡಿದ್ದೀರಾ?
ನೋಡಿ.... ಜೀವನದಲ್ಲಿ ಕಮಲ ಪತ್ರದ ಮೇಲಿನ ಜಲಬಿಂದುವಿನ ಹಾಗೆ ಇದ್ದುಬಿಟ್ರೆ ಜೀವನ ನಿಜವಾಗಲೂ ಸುಂದರವಾಗಿರತ್ತೆ. ಎಲ್ಲವನ್ನೂ ಕೇಳಿಸಿಕೊಳ್ಳುತ್ತೇನೆ. ರಾತ್ರಿ ಮನೆಗೆ ಬರೋವಾಗ ಎಲ್ಲರ ದುಃಖ, ಸಂಕಟ, ನೋವುಗಳನ್ನು ಮನೆಯೊಳಗೆ ಸೇರಿಸಿಕೊಳ್ಳುವುದೇ ಇಲ್ಲ.

ಇಷ್ಟೆ ಅಲ್ಲ, ದೊಡ್ಡ ಅಧಿಕಾರಿಯೇ ಆಗಲಿ ಯಾರೇ ಆಗಲಿ ಸಲಹಾ ಕೇಂದ್ರಕ್ಕೆ ಬರಲು ಸಂಕೋಚವೆನಿಸಿ ನಮ್ಮ ಮನೆಗೇ ಬರುತ್ತೇವೆಂದರೂ ನಾನು ಸುತರಾಂ ಒಪ್ಪುವುದಿಲ್ಲ. ಯಾವ ಕಾಣಿಕೆಯನ್ನೂ, ನೋವಿನ, ಪಾಪದ ಹಣವನ್ನೂ ಮುಟ್ಟುವುದಿಲ್ಲ. ಯಾರಿಗೆ ಗೊತ್ತು ಯಾರ ಮನಸು ಯಾವಾಗ ಹೇಗೆ ವರ್ತಿಸಬಹುದೆಂದು?

ಇನ್ನೊಂದು ಮಾತು, ಯಾರನ್ನೇ ಆಗಲಿ ಆಪ್ತ ಸಲಹಾ ಕೇಂದ್ರಕ್ಕೆ ಕರೆತರಬೇಕಾದಲ್ಲಿ ಅವರಿಗೆ ಬೇರೆಲ್ಲಿಗೋ ಕರೆದುಕೊಂಡು ಹೋಗುತ್ತೇವೆಂದೋ, ಮಕ್ಕಳಿಗಾದರೆ ಏನನ್ನೋ ಕೊಡಿಸುತ್ತೇವೆಂದೋ ಸುಳ್ಳು ಹೇಳುವುದು ಖಂಡಿತ ತಪ್ಪು. ಆಪ್ತಸಲಹೆ ಅವಶ್ಯವಿದ್ದವರನ್ನು ನನ್ನ ಸ್ನೇಹಿತರೊಬ್ಬರನ್ನು ಭೇಟಿ ಮಾಡಿಸುತ್ತೇನೆ ಬಾ.. ಎಂದೇ ಕರೆದುಕೊಂಡುಬರಬೇಕು.

ಆಪ್ತಸಲಹಾ ತರಬೇತಿ ನೀಡುವ ಬಗ್ಗೆ...

ಆಪ್ತಸಲಹೆಗಾರರಾಗಲು ಇಚ್ಛಿಸುವವರಿಗೆ ನಮ್ಮಲ್ಲಿ ಆರು ತಿಂಗಳ ಡಿಪ್ಲೊಮೊ ಕೋರ್ಸ್ ನಡೆಸಲಾಗುತ್ತದೆ. ನಿಮ್ಹಾನ್ಸ್‌ನ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್, ಡಾ. ಮಾಳವಿಕಾ ಕಪೂರ್, ಡಾ. ಎಸ್. ರಾಜಾರಾಮ್ ಮುಂತಾದವರು ಮಾರ್ಗದರ್ಶಕರಾಗಿದ್ದಾರೆ.

ಈ ಕೋರ್ಸ್‌ನ ನಂತರ ಸ್ವತಂತ್ರವಾಗಿ ಆಪ್ತಸಲಹಾಗಾರರಾಗಿ ಕಾರ್ಯ ನಿರ್ವಹಿಸಬಹುದು. ಅಲ್ಲದೆ ಮನಶಾಸ್ತ್ರದ ವಿದ್ಯಾರ್ಥಿಗಳಿಗೆ ಪ್ರಸನ್ನದಲ್ಲಿ ಇಂಟರ್ನ್‌ಶಿಪ್ ಹಾಗೂ ಸಂಶೋಧನೆ ನಡೆಸಲು ಅವಕಾಶವಿದೆ. ಅಂದಹಾಗೆ ಪ್ರಸನ್ನರ ಆಪ್ತಸಲಹಾಗಾರರು ಸ್ವಯಂಸ್ಫೂರ್ತಿಯಿಂದ ಬಿಡಿಗಾಸನ್ನೂ ಅಪೇಕ್ಷಿಸದೆ ಉಚಿತವಾಗಿ ಸಮಾಲೋಚನೆ ನಡೆಸುತ್ತಾರೆ.

ಆನ್‌ಲೈನ್ ಕೌನ್ಸೆಲಿಂಗ್, ಟೆಲಿಕೌನ್ಸೆಲಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ?
ಖಂಡಿತ ನಾನು ಈ ವಿಧಾನವನ್ನು ಒಪ್ಪುವುದಿಲ್ಲ. ಇವೆಲ್ಲ ತಾತ್ಕಾಲಿಕ. ಆಪ್ತಸಲಹೆಯಲ್ಲಿ ನೋಟ, ಸ್ಪರ್ಶ ಹಾಗೂ ಧ್ವನಿ ಸಂವೇದನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಸಮಾಧಾನಿಸಲು, ಅಳಲು ಕೇಳಲು, ಗೊಂದಲ ನಿವಾರಿಸಲು, ಕೊನೆಗೆ ಅವರ ಸಮಸ್ಯೆಗೆ ಅವರ ಮೂಲಕವೇ ಉತ್ತರ ಕಂಡುಕೊಳ್ಳುವಂತೆ ಮಾಡಲು ಮುಖಾಮುಖಿ ಆಪ್ತಸಲಹೆಯೇ ಆಗಬೇಕು.

ವಿದೇಶದಲ್ಲಿ ವಿಚಾರ ಸಂಕಿರಣ ಮಂಡಿಸಿದಾಗಿನ ಅನುಭವ...
ಸುಮಾರು 22 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ‘ಅನುಭಾವಿಕ ಕಲಿಕೆ’ ಬಗ್ಗೆ ಪ್ರಬಂಧ ಮಂಡಿಸಲು ಲಂಡನ್‌ಗೆ ತೆರಳಿದ್ದೆ. ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳು ಸುಮಾರು ಎರಡು ಗಂಟೆಗಳ ಕಾಲ ಸಂವಾದದಲ್ಲಿ ತೊಡಗಿಕೊಂಡರು.

ಕೊನೆಗೆ ನನ್ನ ವೈಯಕ್ತಿಕ ಜೀವನದ ಸುತ್ತ ಪ್ರಶ್ನೆಗಳು ತಳಕು ಹಾಕಿಕೊಂಡವು. ನಾನು ಅವಿವಾಹಿತೆ ಎಂದು ತಿಳಿದ ತಕ್ಷಣ ಅವರಿಗೆ ಇನ್ನಷ್ಟು ಕುತೂಹಲ ಹುಟ್ಟಿಕೊಂಡಿತು. ಅವರ ಹುಬ್ಬೊಳಗೆ ಬಯಕೆ, ಕಾಮ, ಲೈಂಗಿಕತೆ ಇತ್ಯಾದಿ ಪ್ರಶ್ನೆಯಾಗಿ, ಅಚ್ಚರಿಯಾಗಿ ಕುಳಿತವು.

ಭಾರತೀಯರಾದ ನಮಗೆ ಭೋಗ ಜೀವನವೊಂದೇ ಮುಖ್ಯವಲ್ಲ. ಮನೋ-ದೈಹಿಕ ನಿಯಂತ್ರಣಕ್ಕೆ ಆಧ್ಯಾತ್ಮವಿದೆ. ಸಂಗೀತವಿದೆ. ಧ್ಯಾನವಿದೆ. ಇಚ್ಛಿತ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮನೋಬಲವಿದೆ ಎಂದು ಹೇಳಿದಾಗ ಅವರೆಲ್ಲ ಎದ್ದು ನಿಂತು ಕರತಾಡನ ಮಾಡುತ್ತ ಅಭಿನಂದಿಸಿದರು. ಒಬ್ಬೊಬ್ಬರಾಗಿ ಎದ್ದು ಬಂದು ನೀವು ಭಾರತೀಯರು ಶ್ರೇಷ್ಠರು ಎಂದು ಅಪ್ಪಿಕೊಂಡರು. ಮುತ್ತಿಟ್ಟರು. ನಂತರ ನಾನು ಭಾರತದಿಂದ ತಂದಿದ್ದ ಸೋಪಿನಿಂದ ಮುಖ ಮೈ ಕೈ ತೊಳೆದುಕೊಂಡೆ...

ನೀವು ಯಾಕೆ ಮದುವೆ ಮಾಡಿಕೊಳ್ಳಲಿಲ್ಲ?
ನಾವು ಏಳು ಜನ ಮಕ್ಕಳು. ಅಕ್ಕ ಮುದುವೆಯಾಗಿ ಪುಣೆಯಲ್ಲಿ ನೆಲೆಸಿದ್ದರು. ಮದುವೆಯಾದ ಐದು ವರ್ಷದೊಳಗೆ ಬಾವ ದೃಷ್ಟಿದೋಷದಿಂದ ಅಂಧರಾದರು.

ಮೂರು ಮಕ್ಕಳೊಂದಿಗೆ ಅವರಿಬ್ಬರನ್ನೂ ಬೆಂಗಳೂರಿಗೆ ಕರೆತಂದು ನೋಡಿಕೊಳ್ಳುವ ಜವಾಬ್ದಾರಿ ನಾನೇ ಹೊತ್ತೆ. ಅಣ್ಣ, ಅಕ್ಕನ ಸುಮಾರು ಹದಿನೈದು ಮೊಮ್ಮಕ್ಕಳನ್ನು ಸಾಕಿ, ಸಲುಹುತ್ತ ಬಂದೆ. ಅದ್ಯಾಕೋ ನನಗೆ ಮದುವೆ ಬಗ್ಗೆ ಆಸಕ್ತಿಯೇ ಹುಟ್ಟಲಿಲ್ಲ.
---------
ಶ್ರೀದೇವಿ ಕಳಸದ, ಪ್ರಜಾವಾಣಿಯ ’ಭೂಮಿಕಾ’ದಲ್ಲಿ ಪ್ರಕಟ, 25-05-2010

ಹೊಸ ಬಾಟಲು, ಹಳೆ ಮದ್ಯ?

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಓದಲೇಬೇಕಾದಂತಹ ಕೃತಿಗಳನ್ನು ಆಯ್ಕೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಮೇರು ಕೃತಿ’ ಯೋಜನೆಯಡಿ ಕಡಿಮೆ ಬೆಲೆಯಲ್ಲಿ ಓದುಗರಿಗೆ ನೀಡಲು ತಯಾರಿ ನಡೆಸುತ್ತಿದೆ.ಈಗಾಗಲೇ ಈ ಕೃತಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಚ್ಚಿನ ಕಾರ್ಯ ಆರಂಭಿಕ ಹಂತದಲ್ಲಿದೆ. ಆದರೆ ಈ ಕೃತಿಗಳ ಆಯ್ಕೆಗೆ ಅನುಸರಿಸಲಾಗಿರುವ ಮಾನದಂಡದ ಕುರಿತು ಸ್ಪಷ್ಟತೆ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿದೆ.

ನಾಡಿನ ಪ್ರಮುಖ ನೂರು ಸಾಹಿತಿಗಳ ಆಯ್ದ ಒಂದೊಂದು ಕೃತಿಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಕಟಿಸಲಾಗುತ್ತಿದ್ದು, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಹಾಗೂ ಆಧುನಿಕ ಸಾಹಿತ್ಯ ಪ್ರಕಾರಗಳನ್ನು ಹೊರತರುವುದು ಈ ಯೋಜನೆಯ ಆಶಯವಾಗಿದೆ.

ಕವಿರಾಜಮಾರ್ಗ, ವಡ್ಡಾರಾಧನೆ, ಸೋಮೇಶ್ವರ ಶತಕ, ಜೈಮಿನಿಭಾರತ, ಶಿಶುನಾಳ ಶರೀಫರ ಸಮಗ್ರ ಗೀತೆಗಳು, ರಾಮಾಯಣ ದರ್ಶನಂ, ಚಿದಂಬರ ರಹಸ್ಯ, ಗೃಹಭಂಗ, ಹಸಿರು ಹೊನ್ನು, ಹಂಸಗೀತೆ, ಗಂಗವ್ವ ಗಂಗಾಮಾಯಿ, ಕುಸುಮಬಾಲೆ, ಗ್ರೀಕ್ ನಾಟಕ ಮತ್ತು ರಂಗಭೂಮಿ, ತೇರು, ಅರಮನೆ, ಬದುಕು, ತೇರು, ಸಂಜೆ ಐದರ ಮಳೆ, ಶಾಲ್ಮಲಿ, ಗೌರ್ನಮೆಂಟ್ ಬ್ರಾಹ್ಮಣ ... ಹೀಗೆ ಕೃತಿಗಳ ಪಟ್ಟಿ ಸಾಗುತ್ತದೆ.

ಈ ಕೃತಿಗಳ ಆಯ್ಕೆಗಾಗಿ ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯೊಂದನ್ನು ರಚಿಸಲಾಗಿದೆ. ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಹಂಪಿ ವಿವಿಯ ನಿವೃತ್ತ ಕುಲಪತಿ ಡಾ. ಎಚ್.ಜಿ. ಲಕ್ಕಪ್ಪಗೌಡ, ಡಾ. ಹಂ.ಪ. ನಾಗರಾಜಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಪಿ.ಎಸ್. ಶಂಕರ್, ಸಾರಾ ಅಬೂಬಕ್ಕರ್, ಪ್ರಧಾನ ಗುರುದತ್, ಅರವಿಂದ ಮಾಲಗತ್ತಿ, ಪ್ರೊ. ದೊಡ್ಡರಂಗೇಗೌಡ ಅವರು ಸಮಿತಿಯ ಸದಸ್ಯರ ಪಟ್ಟಿಯಲ್ಲಿದ್ದಾರೆ.

ಸುಮಾರು ಒಂದೂವರೆ ವರ್ಷದಿಂದ ಈ ಸಮಿತಿಯು ಮೇರು ಕೃತಿಗಳ ಪ್ರಕಟಣೆಗೆ ಸಂಬಂಧಿಸಿದ ಕಾರ್ಯ-ಚಟುವಟಿಕೆಗಳಲ್ಲಿ ನಿರತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಖಾಸಗಿ ಪ್ರಕಾಶನದವರು ಈಗಾಗಲೇ ಪ್ರಕಟಿಸಿದ ಕೃತಿಗಳನ್ನೇ ಇಲಾಖೆ ಹೊರತರುತ್ತಿದೆ.

‘ಸಾಹಿತ್ಯ ಪರಂಪರೆಯಲ್ಲಿ ಕನ್ನಡಿಗರು ಓದಲೇಬೇಕಾದ ಪುಸ್ತಕಗಳನ್ನು ಪಟ್ಟಿ ಮಾಡಿ, ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡುವುದು ಈ ಹೊಸ ಯೋಜನೆಯ ಉದ್ದೇಶ’ ಎಂದು ಕೃತಿಗಳ ಆಯ್ಕೆ ಸಮಿತಿಯ ಅಧ್ಯಕ್ಷ ಪ್ರೊ. ಎಲ್.ಎಸ್. ಶೇಷಗಿರಿರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮಿತಿಯ ಎಲ್ಲ ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರವೇ ಕೃತಿಗಳ ಬಗ್ಗೆ ತೀರ್ಮಾನಿಸಲಾಗಿದೆ. ಹೀಗೆ ಚರ್ಚಿಸುವಾಗ ಒಬ್ಬೊಬ್ಬರದು ಒಂದೊಂದು ರೀತಿಯ ಅಭಿಪ್ರಾಯ, ಸಮರ್ಥನೆಗಳಿರುತ್ತವೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಮೇರುಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಕೃತಿಕಾರರ, ಪ್ರಕಾಶಕರ ಹಾಗೂ ಸಂಬಂಧಿಸಿದವರ ಒಪ್ಪಿಗೆಯ ಮೇರೆಗೆ ಮುನ್ನಡೆಯಲಾಗಿದೆ’ ಎಂದರು.

ಸದಸ್ಯರಿಗೇ ಗೊತ್ತಿಲ್ಲ...!: ಆದರೆ ಸಮಿತಿಯ ಸದಸ್ಯರಲ್ಲೊಬ್ಬರಾದ ಡಾ. ಚಂದ್ರಶೇಖರ ಕಂಬಾರ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ‘ಹೌದೆ? ಈ ಸಮಿತಿಯಲ್ಲಿ ನನ್ನ ಹೆಸರೂ ಇದೆಯೇ? ನನಗೇ ಗೊತ್ತಿಲ್ಲವಲ್ಲ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಅದೇ ರೀತಿ ಈ ಯೋಜನೆಯಡಿ ಡಾ. ರಾಜೇಂದ್ರ ಚೆನ್ನಿ ಅವರ ಪುಸ್ತಕವೂ ಆಯ್ಕೆಯಾಗಿದ್ದರ ಬಗ್ಗೆ ಅವರಿಗೇ ಮಾಹಿತಿ ಇಲ್ಲ. ‘ನನ್ನ ಪುಸ್ತಕ ಆಯ್ಕೆ ಮಾಡಿಕೊಂಡಿದ್ದಾರೆಯೆ? ಈ ವಿಷಯ ನನಗೆ ಗೊತ್ತಿಲ್ಲ ಬಿಡಿ’ ಎಂದರು.

ಉಳಿದ ಆಯ್ಕೆ ಸದಸ್ಯರ ಸಮ್ಮುಖದಲ್ಲಿ 100 ‘ಮೇರು ಕೃತಿ’ಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ಪ್ರಾಥಮಿಕ ಹಂತದ ಮುದ್ರಣ ಕಾರ್ಯ ಆರಂಭವಾಗಿದ್ದರೂ ಆ ಕೃತಿಗಳ ಆಯ್ಕೆಗೆ ಇದ್ದ ಮಾನದಂಡದ ಬಗ್ಗೆ ಸ್ಪಷ್ಟತೆ ಕಂಡುಬಂದಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ಯೋಜನೆಗೆ ಇಟ್ಟ ಹೆಸರು ಹಾಗೂ ಅದರಡಿ ನಿರೂಪಿಸ ಹೊರಟಿರುವ ರೂಪುರೇಷೆಗೂ ಸಾಮ್ಯತೆಯಾಗಲಿ, ಸಮರ್ಪಕತೆ ಅಷ್ಟಾಗಿ ಹೊಂದಾಣಿಕೆಯಾಗುತ್ತಿಲ್ಲ.

ಹೊಸ ಯೋಜನೆಯೆ?: ಈ ಪೈಕಿ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ‘ಪುಸ್ತಕ ಪ್ರಕಟಣೆ ಅಡ್ಡಿಯಿಲ್ಲ. ಮರುಮುದ್ರಣವೂ ಸರಿ. ಆದರೆ ಹೊಸ ಬಾಟಲಿಯಲ್ಲಿ ಹಳೆಯ ಮದ್ಯವನ್ನು ಹಾಕಿಕೊಟ್ಟಂತಾಗಿದೆಯಲ್ಲ ಈ ಯೋಜನೆ? ಇದರಲ್ಲಿ ಹೊಸತಾಗಲಿ, ವಿಶೇಷವಾಗಲಿ ಏನಿದೆ? ‘ಮೇರು ಕೃತಿ’ಯ ಆಯ್ಕೆಯ ಮಾನದಂಡ ಏನಾಗಿತ್ತು ಎನ್ನುವುದರಲ್ಲೇ ಗೊಂದಲಗಳಿವೆ. ಇದು ಹಳೇ ಯೋಜನೆಗೆ ಹೊಸ ಹೆಸರಷ್ಟೇ’ ಎಂದರು.

‘ಆಧುನಿಕ ಸಂದರ್ಭದಲ್ಲಿ ಮೇರು ಕೃತಿ ಎಂದು ಗುರುತಿಸುವುದೇ ಕಷ್ಟಕರ. ಒಂದು ಕೃತಿಯನ್ನು ಮೇರು ಎಂದು ಗುರುತಿಸುವುದರ ಜತೆಗೆ ಅದನ್ನು ಯಾಕೆ ಮರುಮುದ್ರಿಸಲಾಗುತ್ತಿದೆ ಎಂದು ಯೋಚಿಸಿ ನಿರ್ಧರಿಸಬೇಕು. ಇದೆಲ್ಲ ಯೋಚಿಸಿ ನಿರ್ಧರಿಸಲಾಗಿದೆ ಎಂದಾದಲ್ಲಿ ಕೊನೆಪಕ್ಷ ಆಯಾ ಸಾಹಿತಿಗಳು ಗುರುತಿಸಿಕೊಂಡ ಸಾಹಿತ್ಯ ಪ್ರಕಾರದಿಂದ ಕೃತಿಯನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮೇರು’ ಎಂಬ ಗೊಂದಲ: ‘ಕನ್ನಡ ಸಾಹಿತ್ಯ ಪರಿಷತ್ತು ಕೂಡ ಮೇರು ಕೃತಿಗಳನ್ನು ಬಿಡಿಬಿಡಿಯಾಗಿ ಪ್ರಕಟಿಸಿದೆ. ಅಲ್ಲದೆ ಖಾಸಗಿ ಪ್ರಕಾಶನಗಳೂ ಪ್ರಕಟಿಸಿವೆ. ಹಾಗಿದ್ದರೆ ಆ ಎಲ್ಲ ಮೇರು ಕೃತಿ ಪ್ರತಿಗಳೂ ಮುಗಿದು ಹೋಗಿವೆಯೇ?’ ಎಂದು ಸಂಶಯ ವ್ಯಕ್ತಪಡಿಸಿದ ಅವರು, ತನ್ನ ಕೃತಿಯನ್ನೇ ‘ಮೇರು’ ಎಂದು ಹೇಳಿಕೊಳ್ಳುವುದು ಅಥವಾ ಪರಿಗಣಿಸುವುದು ಸಾಹಿತಿಯಾದವನಿಗೆ ಸಂಕೋಚಕ್ಕೆ ಈಡುಮಾಡುವ ವಿಷಯ. ಆದರೂ ಸಮಿತಿಯಲ್ಲಿರುವ ‘ಕೆಲ’ ಸಾಹಿತಿಗಳ ಕೃತಿಗಳು ಖಂಡಿತ ‘ಮೇರು’ ಎನ್ನಿಸಿಕೊಳ್ಳುವಲ್ಲಿ ಎರಡು ಮಾತಿಲ್ಲ ಎಂದರು.

ಆಯಾ ಸಾಹಿತಿಗಳು ಗುರುತಿಸಿಕೊಂಡಿರುವ ಪ್ರಕಾರಗಳ ಕೃತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ‘ಮೇರು’ ಎಂಬ ಶಬ್ದಕ್ಕೆ ನಿಜ ಅರ್ಥದಲ್ಲಿ ಮೆರುಗು ಮೂಡುತ್ತಿತ್ತಲ್ಲವೆ ಎಂದು ಶೇಷಗಿರಿರಾವ್ ಅವರನ್ನು ಪ್ರಶ್ನಿಸಿದಾಗ, ‘ಕೆಲ ಕೃತಿಗಳ ಹಕ್ಕುಸ್ವಾಮ್ಯ ವಿಷಯದಲ್ಲಿ ತೊಂದರೆ ಉಂಟಾಗಿದ್ದರಿಂದ ಅವುಗಳನ್ನು ಬಿಟ್ಟು ಅದೇ ಲೇಖಕರ ಬೇರೆ ಕೃತಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಆಯ್ಕೆ ಸಮಿತಿಯ ಸದಸ್ಯರೆಲ್ಲ ಕನ್ನಡಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದರಿಂದ ಅವರ ಕೃತಿಗಳನ್ನೂ ಈ ಯೋಜನೆಯಡಿ ಸೇರಿಸಿಕೊಳ್ಳಲಾಯಿತು’ ಎಂದು ಹೇಳಿದರು.

ವರ್ಷಾಂತ್ಯದೊಳಗೆ ಓದುಗರ ಕೈಗೆ..: ಇಲಾಖೆಯ ನಿರ್ದೇಶಕ ಮನು ಬಳಿಗಾರ, ‘ಇದೊಂದು ಹೊಸ ಯೋಜನೆ. ಈ ಹಿಂದೆ ಬಿಡಿಬಿಡಿಯಾಗಿ ಪ್ರಕಟಿಸಿದ ಕೃತಿಗಳನ್ನೇ ಇಲಾಖೆ ಪ್ರಕಟಿಸುತ್ತಲಿದೆ. ಬೆಲೆಯನ್ನು ನಿಖರವಾಗಿ ಹೇಳಲಾಗದು. ಒಟ್ಟಿನಲ್ಲಿ ಆದಷ್ಟು ಕಡಿಮೆ ಬೆಲೆಯಲ್ಲಿ ವರ್ಷಾಂತ್ಯದೊಳಗೆ ಈ ನೂರು ಮೇರುಕೃತಿಗಳು ಓದುಗನನ್ನು ತಲುಪಲಿವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಮೇರು ಕೃತಿ’ ಯೋಜನೆಯಡಿ ಪ್ರಕಟಿಸುತ್ತಿರುವ ಕೆಲ ಕೃತಿಗಳ ವಿವರ...

ಡಾ. ಯು.ಆರ್. ಅನಂತಮೂರ್ತಿ-‘ಪ್ರಶ್ನೆ’. ಪು.ತಿ.ನ-‘ಸಮಗ್ರ ಪ್ರಬಂಧ’, ಡಾ. ಚಂದ್ರಶೇಖರ ಕಂಬಾರ-‘ಚಕೋರಿ’, ಎ.ಎನ್. ಮೂರ್ತಿರಾವ್-‘ಚಿತ್ರಗಳು, ಪತ್ರಗಳು’, ಪ್ರೊ. ದೇ. ಜವರೇಗೌಡ- ‘ಶ್ರೀ ರಾಮಾಯಣ ದರ್ಶನಂ-ವಚನಚಂದ್ರಿಕೆ’, ಯಶವಂತ ಚಿತ್ತಾಲ- ‘ಆಟ’, ಡಾ. ಹಂ.ಪ. ನಾಗರಾಜಯ್ಯ- ‘ಪಂಪ’.

ಮಾಸ್ತಿ ವೆಂಕಟೇಶ್ ಅಯ್ಯಂಗಾರ್-‘ಆದಿಕವಿ ವಾಲ್ಮೀಕಿ’, ಡಾ. ಜಿ.ಎಸ್.ಆಮೂರ- ‘ಭುವನದ ಭಾಗ್ಯ’, ಡಾ. ಎಚ್.ಎಲ್. ನಾಗೇಗೌಡ- ‘ಬೆಟ್ಟದಿಂದ ಬಯಲಿಗೆ’, ಸಿದ್ಧಲಿಂಗ ಪಟ್ಟಣಶೆಟ್ಟಿ-‘ಆಯ್ದ ಕವಿತೆಗಳು’, ಡಾ. ಸಿದ್ಧಲಿಂಗಯ್ಯ-‘ಸಮಗ್ರ ಕಾವ್ಯ’, ಡಾ. ರಾಜೇಂದ್ರ ಚೆನ್ನಿ-’ಆಯ್ದ ವಿಮರ್ಶಾ ಲೇಖನಗಳು’ ಇತ್ಯಾದಿ...


-ಶ್ರೀದೇವಿ ಕಳಸದ,13-08-2010 ರಂದು ’ಪ್ರಜಾವಾಣಿ’ಯಲ್ಲಿ ಪ್ರಕಟಿತ ವರದಿ.

Monday, August 9, 2010

ಹಟವ್ಯಾಕೆ? ಚಟ ಬೇಕೆ?

ಕಾದಂಬರಿ ಬರೆಯುವ ಮತ್ತಿನಲ್ಲಿ ಯಾರದೋ ಒಬ್ಬರ ಬದುಕಿನ ಕಥೆಯನ್ನು ಸಾರ್ವತ್ರಿಕಗೊಳಿಸುವುದೆಂದರೆ?
ಸಂಗೀತದ ಬೆನ್ನು ಹತ್ತಿದವರಿಗೆ ‘ಮಂದ್ರ’ದ ಮಧುಮಿತಾಳ ‘ಮಾರ್ಗ’ವೇ ಖಾಯಂ?
ಗುರುದೀಕ್ಷೆಗೆ ಹಾಸಿಗೆಯೇ ‘ರಂಗ’ಮಂಚವಾಗಬೇಕೆ?


---------------------------------

ಭೈರಪ್ಪ ಸರ್,
ಹಸ್ತಾಕ್ಷರ ತೆಗೆದುಕೊಳ್ಳುವ ಖಯಾಲಿ ಮೊದಲಿನಿಂದಲೂ ನನಗಿಲ್ಲ. ಈಗಲೂ ಇಲ್ಲ. ಆದರೆ, ಹಸ್ತಾಕ್ಷರಕ್ಕಾಗಿ ಒಮ್ಮೆ ಕೈಚಾಚಿದ್ದುಂಟು. ಬೆಂಗಳೂರಿನಲ್ಲಿ ನಿಮ್ಮ ಕಾದಂಬರಿಗಳ ವಿಮರ್ಶಾ ಸಂಕಿರಣದ ಕಾರ್ಯಕ್ರಮ. ಹಿರಿಯ ಕಾದಂಬರಿಕಾರರಾದ ನಿಮ್ಮನ್ನು ಮುಖತಃ ನೋಡಿದ್ದು ಆಗಲೇ. ‘ಮಂದ್ರ’ ಆಗಷ್ಟೇ ಕಾವೇರತೊಡಗಿತ್ತು.ಬೆಳಗಿನ ಜಾವದ ಮಂದ್ರ ಸ್ವರದ ಅನುಭೂತಿ ನೆನಪಾಗಿ ಆ ಕಾದಂಬರಿ ಕೊಂಡೆ. ಜೀವನದಲ್ಲಿ ಮೊದಲ ಸಲ ಹಸ್ತಾಕ್ಷರ ಪಡೆಯಲು ನಿಮ್ಮದೇ ‘ಮಂದ್ರ’ ಚಾಚಿದೆ.

ಅದಕ್ಕೂ ಮೊದಲು ನಿಮ್ಮನ್ನು ನೋಡಿ ತುಸುವೇ ನಕ್ಕೆ. ನಿರಾಶೆಗೊಳ್ಳಲಿಲ್ಲ, ಅದು ನಿಮ್ಮನ್ನು ತಲುಪಲಿಲ್ಲವೇನೋ ಎಂದು ಸಮಾಧಾನಿಸಿಕೊಂಡು ಮತ್ತೂ ತುಟಿ ಅಗಲಿಸಿದೆ. ಉಹೂಂ... ಮುಖವನ್ನೂ ಎತ್ತದೆ ಕೇವಲ ನಾಮಾಂಕಿತ ಹಾಕಿ ಕಾದಂಬರಿ ಕೈಗಿಟ್ಟಿರಿ. ಒಂದೆರಡು ಶುಭಹಾರೈಕೆಗಳೆನಾದರೂ ಹಾರಿ ಬಂದಾವೋ ಎಂದು ಕಣ್ಣು ಅಗಲ ಮಾಡಿದವಳಿಗೆ, ಪ್ಚ್...

ಮತ್ತೆ ನಿಮ್ಮನ್ನು ಕಂಡಿದ್ದು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ. ಅರೆ! ಈ ಬಾರಿ ನೀವು ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳಿದಿರಿ. ನನಗೋ? ನನ್ನದೇ ಗಡಿಬಿಡಿ. ಹಿರಿಯ ಕಾದಂಬರಿಕಾರರಿಗೆ ಏನು ಪ್ರಶ್ನೆ ಕೇಳಬೇಕು? ಏನೋ ಕೇಳಿ ಬೈಸಿಕೊಂಡರೆ? ಅಳುಕಿನಿಂದಲೇ ಸ್ವರ ಹೊರಡಿಸಿದೆ.ಆಗ ನೀವು, ‘ಕಾದಂಬರಿಯೊಂದರ ಸಿದ್ಧತೆಯಲ್ಲಿದ್ದೇನೆ. ಇನ್ನೂ ಹೆಸರಿಟ್ಟಿಲ್ಲ. ಎರಡು ತಿಂಗಳಾಗಬಹುದು’ ಎಂದಷ್ಟೇ ಸುಮ್ಮನಾದಿರಿ.

ಛೆ, ಅಷ್ಟೊಂದು ದಪ್ಪ ದಪ್ಪ ಕಾದಂಬರಿ ಬರೆಯುವವರು ಯಾಕೆ ಇಷ್ಟೇ ಮಾತನಾಡುತ್ತಾರೆ ಎಂದು ಮನಸ್ಸಿನಲ್ಲಿ ಮಣಮಣಿಸಿಕೊಂಡು ಮುಂದಿನ ಪ್ರಶ್ನೆಗಳಿಗೆ ದನಿ ಏರಿಸಿದೆ. ಸಾಮಾನ್ಯವೂ ಆದರೆ ಅಷ್ಟೇ ಪ್ರಸ್ತುತತೆಯೂ ಇರುವ ಪ್ರಶ್ನೆಗಳವು ಎಂದುಕೊಂಡೇ, ‘ಸರ್, ಈಗಿನ ಯುವಬರಹಗಾರರ ಬಗ್ಗೆ ಏನನ್ನಿಸುತ್ತದೆ? ಇತ್ತೀಚಿನ ತಲೆಮಾರಿನಲ್ಲಿ ನಿಮಗಿಷ್ಟವಾಗುವ ಕೃತಿ ಮತ್ತು ಕೃತಿಕಾರರು? ಅವರ ಸೃಜನಶೀಲತೆ, ಬರೆವಣಿಗೆಯ ಲಯ-ಗತಿ-ವಿಚಾರ? ಬ್ಲಾಗ್ ಬರಹಗಳ ಬಗ್ಗೆ ನಿಮ್ಮ ಅಭಿಪ್ರಾಯ? ಅಂದಹಾಗೆ ಇತ್ತೀಚೆಗೆ ಯಾವ ಕೃತಿ ಓದಿದಿರಿ ಸರ್?’

ಅದಕ್ಕೆ ನೀವೇನಂದಿರಿ- ‘ತುಂಬಾ ಜನ ಬರೀತಿದಾರೆ. ಅವರವರ ಅನುಭವಕ್ಕೆ ತಕ್ಕಂತೆ ಬರೆಯುತ್ತಿದ್ದಾರೆ.ಯಾರು ಅಂತೆಲ್ಲ ಹೇಳಲಿಕ್ಕಾಗದು. ಯಾರ್ಯಾರೋ ಹೊಸ ಪುಸ್ತಕಗಳನ್ನು ತಂದು ಕೊಡುತ್ತಿರುತ್ತಾರೆ. ಕೆಲವೊಂದನ್ನು ಓದುತ್ತೇನೆ. ಇತ್ತೀಚೆಗೆ ಯಾವ ಪುಸ್ತಕ ಓದಿದೆ ಅನ್ನೋದು ನೆನಪಿಲ್ಲ. ಏಕೆಂದರೆ ಓದಿಗಿಂತ ಬರೆಯುವುದೇ ನನ್ನ ಕೆಲಸ.
ಅದು ಒಂಥರಾ ಧ್ಯಾನ.
ಆಮೇಲೆ ಈ ವೆಬ್‌ಸೈಟ್‌ಗಳು, ಅವುಗಳಲ್ಲಿ ಬರುವ ಪ್ರತಿಕ್ರಿಯೆಗಳ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ.ಆದ್ರೆ ಈ ಬ್ಲಾಗ್ ಅಂದ್ರೆ... ಈಗ ನೀವೂ ಕೂಡ ನಿಮ್ಮದೇ ಒಂದು ಸ್ವಂತ ಬ್ಲಾಗ್ ಮಾಡಿ ನಿಮಗೆ ಬೇಕಾದ್ದನ್ನು ಬರೆಯಬಹುದು ನೋಡಿ...’.

ಮತ್ತೂ ಒಂದಿಷ್ಟು ಪ್ರಶ್ನೆಗಳಿಗೆ ಪ್ರಯತ್ನಿಸೋಣ ಎಂದುಕೊಳ್ಳುತ್ತಿರುವಾಗಲೇ ಅಭಿಮಾನಿಗಳು ಸುತ್ತುವರಿದರು.ಹೆಣ್ಣುಮಗಳೊಬ್ಬರು ಗಾಜಿನ ಕುಪ್ಪೆಯೊಂದನ್ನು ಬಗಲುಚೀಲದಿಂದ ತೆಗೆದು ‘ಮಾವಿನಕಾಯಿ ಮೊರಬ್ಬ...’ ಎನ್ನುತ್ತಾ ಅಕ್ಕರೆಯಿಂದ ಕೈಗಿಟ್ಟರು. ‘ನೆಲ್ಲಿಕಾಯಿ ಎಲ್ಲೂ ಸಿಗಲಿಲ್ಲ’ ಎಂದು ಪೆಚ್ಚುಮೋರೆಯನ್ನೂ ಹಾಕಿದರು. ಅದಕ್ಕೆ ನೀವು ‘ಪರವಾಗಿಲ್ಲ ಬಿಡಿ’ ಎನ್ನುತ್ತ ಅವರೆಲ್ಲರೊಂದಿಗೆ ನಡೆದಿರಿ.

ಪರವಾಗಿಲ್ಲ ಬಿಡಿ ಭೈರಪ್ಪ ಸರ್, ನಾನೂ ಈಗ ಅದನ್ನೇ ಪುನರುಚ್ಚರಿಸುತ್ತೇನೆ. ಆಗ ಕೇಳದ ಪ್ರಶ್ನೆಗಳನ್ನು ಇನ್ನೆಂದಾದರೂ ಕೇಳೋಣವೆಂದಿದ್ದೆ. ಹಾಗೆ ಅಂದುಕೊಳ್ಳುತ್ತಿರುವಾಗಲೇ ಮತ್ತಷ್ಟು ಪ್ರಶ್ನೆಗಳು ಬಾಲಂಗೋಚಿಗಳಾಗುತ್ತಾ ಹೊರಟಿವೆ. ಅದಕ್ಕೆ ಇದು ಪ್ರಶ್ನೆ ಕೇಳುವ ಸಮಯ ಎಂದು ನಿರ್ಧರಿಸಿ ಮುದ್ದಾಮ್ ಬೆಳೆಯುವ ಬಾಲಂಗೋಚಿಯನ್ನು ತುಂಡರಿಸುತ್ತಿದ್ದೇನೆ.

ಸರ್, ಸೃಜನಶೀಲ ಚಿಂತನೆ, ಬರವಣಿಗೆಯನ್ನು ಪೂರ್ವ ನಿರ್ಧರಿತವಾಗಿ ಚಿತ್ರಿಸಲೂ ಸಾಧ್ಯವೆ? ಮೊದಲೇ ಹೇಳಿ ಮಾಡಿಸಿದ ಸಣ್ಣ ತೂತಿನ ಜರಡಿಯಲ್ಲಿ ದೊಡ್ಡ ಅಳತೆಯ ಕಾಳುಗಳನ್ನು ಜರಡಿ ಹಿಡಿದು, ಇವು ಗಟ್ಟಿಕಾಳುಗಳು ಎಂದು ಹೇಳುವುದರಲ್ಲಿ ಧನ್ಯತೆ ಇರುತ್ತದೆಯೆ? ಇಂಥದೇ ಕಟ್ಟಿಗೆ, ಇಷ್ಟೇ ಮೊಳೆಗಳು, ಇದೇ ಬಣ್ಣ ಎಂದು ಕಟ್ಟಿದ ಚೌಕಟ್ಟಿನೊಳಗಿನಿಂದ ಪಾತ್ರಗಳೇನಾದರೂ ಇಣುಕಿ ಹಾಕಿದವೊ.. ಅವುಗಳ ಅಂತಃಸತ್ವ ಉಡುಗುವುದು ನಿಶ್ಚಿತವೆ? ಪೂರ್ವಗ್ರಹಪೀಡಿತ ಪಾತ್ರಗಳನ್ನು ಓದುಗ ಒಪ್ಪುವಂತೆ ಮಾಡುವ ಒತ್ತಾಯ ಯಾಕೆ? ಬೇಕೆ?

‘ಗೃಹಭಂಗ’ದ ನಂಜಮ್ಮ ನಮಗೆಲ್ಲ ಎಷ್ಟು ಇಷ್ಟವಾಗುತ್ತಾಳೆ ಗೊತ್ತಾ ಸರ್? ಅವಳ ದಿಟ್ಟತನ, ಧೈರ್ಯ, ಸಾಹಸ, ಬದುಕನ್ನು ಮುಟ್ಟಿಗೆಯಲ್ಲಿ ಕಟ್ಟಿಕೊಂಡು ಛಲದಿಂದ ಬದುಕುವ ರೀತಿ- ಎಲ್ಲ ಅಮ್ಮಂದಿರೂ ಹೀಗೆಯೇ ಮಕ್ಕಳನ್ನೂ ಬೆಳೆಸಿರುತ್ತಾರೆಯೇ ಎಂದು ಕಣ್ಣ ತೇವಗೊಳಿಸುವ ಸಂದರ್ಭಗಳು... ಎಲ್ಲ ಎಲ್ಲವೂ...

ಆದರೆ ಇದಕ್ಕೆ ವಿರುದ್ಧವಾಗಿ ನೀವು ಸೃಷ್ಟಿಸಿದ ಸಾಕಷ್ಟು ಸ್ತ್ರೀ ಪಾತ್ರಗಳು ಯಾಕೋ ಅತಿ ಎನಿಸುತ್ತವೆ. ಯಾಕೆ ಸರ್ ಹೀಗೆ? ನಿಮ್ಮ ಪ್ರತಿ ಕಾದಂಬರಿ ಹೊರಬಂದಾಗಲೂ ಪಾತ್ರ ಸೃಷ್ಟಿಯ ಹಿಂದೆ ಹಿಡನ್ ಅಜೆಂಡಾ ಇದೆ ಎಂದು ವಿಮರ್ಶಕರು ಹೇಳುತ್ತಲೇ ಇರುತ್ತಾರೆ. ಆದರೆ ನೀವೇ ಹೇಳಿ, ಕಾದಂಬರಿ ಬರೆಯುವ ಮತ್ತಿನಲ್ಲಿ ಯಾರದೋ ಒಬ್ಬರ ಬದುಕಿನ ಕಥೆಯನ್ನು ಸಾರ್ವತ್ರಿಕಗೊಳಿಸುವುದೆಂದರೆ? ಸಂಗೀತದ ಬೆನ್ನು ಹತ್ತಿದವರಿಗೆ ‘ಮಂದ್ರ’ದ ಮಧುಮಿತಾಳ ‘ಮಾರ್ಗ’ವೇ ಖಾಯಂ? ಗುರುದೀಕ್ಷೆಗೆ ಹಾಸಿಗೆಯೇ ‘ರಂಗ’ಮಂಚವಾಗಬೇಕೆ? ಅದೊಂದು ಸಂದರ್ಭವಾಗಿ, ತಂತ್ರವಾಗಿ ಸರಿದುಹೋದರೆ ಸರಿ, ಆದರೆ ಅದೇ ಕಾಮಭೂಮಿಕೆಯಾಗಿಬಿಟ್ಟರೆ? ಸಂಗೀತವೆಂದು ಹೋದೆಯೋ ಕಾಮವೆಂಬ ಸಂವಾದಿಗೂ ಶರಣಾಗಬೇಕು ನೆನಪಿರಲಿ... ಎಂದು ಬೆತ್ತ ಹಿಡಿದು ಬೆದರಿಸಿದಂತೆ ಅಲ್ಲವೆ ಸರ್ ಇದು?

ಹಣೆಗೆ ಕುಂಕುಮ, ಬಳೆ, ಹೂ ಮುಡಿಯದಿದ್ದರೆ ‘ಬದುಕು ಕವಲೇ’ ಎಂದು ಕಡ್ಡಿಮುರಿದ ಹಾಗೆ ಹೇಳಿದ ಹಾಗಿದೆಯಲ್ಲ? ಪದೇಪದೇ ಇಣುಕುವ ‘ಸೂತಕ’ ಎನ್ನುವ ಪದ ಪ್ರಯೋಗ ಹೊಟ್ಟೆತೊಳಸಿದಂತಾಗುತ್ತದೆ. ಆದರೆ ಆ ಪಾತ್ರ ಸೃಷ್ಟಿ ಮಾಡುತ್ತಾ ಹೋದಾಗ ನಿಮಗೆ ಏನನ್ನಿಸಿರಬಹುದು?

ಮಹಿಳಾ ಹೋರಾಟಗಳು ಮೂವತ್ತು ವರ್ಷಗಳ ಹಿಂದೆಯೇ ಮೆತ್ತಗಾಗಿರುವುದು ನಿಮಗೆ ನೆನಪಿಲ್ಲವೆ? ವೈಯಕ್ತಿಕ ನೆಲೆಯಲ್ಲಿ ಹೋರಾಡುತ್ತ ನ್ಯಾಯ ಕಂಡುಕೊಳ್ಳುವ ಮಹಿಳೆಯರು ನಿಮ್ಮ ಸ್ಮೃತಿಗೆ ನಿಲುಕುತ್ತಿಲ್ಲವೆ ಸರ್? ಪುರುಷನ ನೆರಳಿನಾಚೆಗೂ ಅವಳು ಬದುಕುತ್ತಿರುವುದು, ಆರ್ಥಿಕ ಜವಾಬ್ದಾರಿಯನ್ನು ಹಂಚಿಕೊಳ್ಳುವಲ್ಲಿ ಅವಳು ತೊಡಗಿರುವುದು ಈ ಹೊತ್ತಿನ ಚರ್ಚೆಯಾಗಬೇಕಿತ್ತಲ್ಲವೆ?

ಆದರೂ ಸಂಬಂಧಗಳ ಸೆಲೆ ಇಳಿಮುಖವಾಗಿ ಹರಿಯುತ್ತಿದೆ. ಇದನ್ನು ನಿರ್ವಹಿಸುವಲ್ಲಿ ಯಾರದು ಯಾವ ರೀತಿ ಪಾತ್ರವಿರಬೇಕಿತ್ತು? ಎಂಬುದು ಸದ್ಯದ ಚರ್ಚೆಯ ವಿಷಯವಲ್ಲವೆ ಸರ್? ಓದಿದ ಗಂಡಸರೆಲ್ಲಾ ಹೆಂಗಸಾಗಿದ್ದಾರೆ.ಓದಿದ ಹೆಂಗಸರೆಲ್ಲಾ ಗಂಡಸಾಗಿದ್ದಾರೆ ಎಂದಿದ್ದೀರಲ್ಲ... ಅಕ್ಷರ ಎನ್ನುವುದು ‘ಕ್ರೌರ್ಯ’ ತಂದುಕೊಡುವ ಮಟ್ಟಕ್ಕೆ ತಲುಪಿದೆ ಎನ್ನುವುದಾದರೆ ಶಿಕ್ಷಣಕ್ಕಾಗಿ ಮಾಡಿದ ಹೋರಾಟಗಳು ಏನಾದವು? ಏನಾಗಬಹುದು?

ಸಾಂಪ್ರದಾಯಿಕ ಆಲೋಚನೆಗಳನ್ನು ನಿರೂಪಿಸುವಾಗ ಮುಗ್ಗರಿಸಿದಂತಾಗಬಾರದಲ್ಲವೆ? ಲಿವಿಂಗ್ ಟುಗೆದರ್ ನಮ್ಮ ದೇಶದಲ್ಲಿನ್ನೂ ಶೈಶವಾವಸ್ಥೆಯಲ್ಲಿದ್ದು, ಅದಕ್ಕೆ ಸಾಂಪ್ರದಾಯಿಕ ಅಂಗಿ ತೊಡಿಸಿ ಆಗಲೇ ಅದಕ್ಕೊಂದು ಚೌಕಟ್ಟು ಹಾಕಿ ಗಂಧದ ಕಡ್ಡಿಯನ್ನೂ ಬೆಳಗಿಬಿಟ್ಟಿದ್ದೀರಿ! ಸ್ತ್ರೀ ಸ್ವಾತಂತ್ರ್ಯ, ಕಾನೂನು ಎಂದು ಹೊರಟವರು ಮಣ್ಣು ಮುಕ್ಕುವುದು ಗಟ್ಟಿ ಎಂದೂ, ಕವಲಿನ ಮುಕ್ತಾಯ ಮೊದಲು ಬರಿದಿಟ್ಟು ನಂತರ ಆರಂಭಿಸಿರುವಿರೇನೋ ಎನ್ನುವುದು ಪಿಸುಮಾತಾಗಿ ಉಳಿದಿಲ್ಲ ಈಗ.

ಹೀಗೆ ಹೇಳುತ್ತಿದ್ದೇನೆ ಎಂದು ಬೇಸರಿಕೊಳ್ಳಬೇಡಿ ಸರ್. ಬೇಲಿ ಹಾಕಿಕೊಂಡರೆ ಅದು ಗದ್ದೆಯೋ, ಹೊಲವೋ, ತೋಟವಷ್ಟೇ ಆಗುತ್ತದೆ; ಸುರಕ್ಷಿತ ವಲಯದಲ್ಲಿ ಸಾಂಪ್ರದಾಯಿಕ ಸೀಮಿತ ಬೆಳೆ. ಇಳುವರಿಯಲ್ಲಿ ಏರುಪೇರು;ಬೆಲೆಯಲ್ಲೂ. ಆದರೆ ಕಾಡು? ಬೇಲಿಯ ಹಂಗಿಲ್ಲ. ಬೀಜ ಬಿತ್ತುವವರಿಗಾಗಿ ಕಾಯಬೇಕಿಲ್ಲ. ನೀರುಣಿಸುವವರಿಗೆ ಋಣಿಯಾಗಿರಬೇಕಿಲ್ಲ. ಅಳೆದು ಸುರಿದು ಬೆಳೆಯಬೇಕಿಲ್ಲ, ಧಾರಣೆಗೆ ತಕ್ಕಂತೆ ತಕ್ಕಡಿಯನ್ನೂ ತೂಗಬೇಕಿಲ್ಲ.

ಹೊಕ್ಕಷ್ಟೂ ಕಿರುದಾರಿ, ನಡೆದಷ್ಟು ಕಾಲುದಾರಿ, ಬಾಗಿದಷ್ಟೂ ಒಳದಾರಿ, ತಿರುದಾರಿ, ಅಂಕೆಗೂ ಸಿಗದ ಉಷೆಯ ದಾರಿ, ನಿಷೆಯ ದಾರಿ. ಯಾವಾಗ? ಎಲ್ಲಿ? ಹೇಗೆ? ಯಾಕೆ? ಯಾರು? ಎಂಬ ಪ್ರಶ್ನೆಗಳ ಅಂದಾಜಿಲ್ಲದೆ ಸಾಗುವ ಅನೂಹ್ಯ ಪಯಣ. ಲೆಕ್ಕಾಚಾರವಿಲ್ಲದ ಚುಕ್ತಾ ಮಾಡಲಾಗದ ಅನುಭವದ ಮೊತ್ತ ಅದಾಗಬಹುದಲ್ಲವೆ?

ಗಮ್ಯ ಮೀರಿದ ನಡಿಗೆಗೆ ಮಾತ್ರ ಅದು ನಿಲುಕಬಲ್ಲದೇನೋ... ಈ ಅನುಭವದ ಯಾತ್ರೆಯಲಿ ನೀವೂ ಈ ಹಿಂದೆ ಕೆಲವೊಂದು ಕಡೆ ‘ಸಾಕ್ಷಿ’ಯಾಗಿದ್ದೀರಿ, ಎನ್ನುವುದನ್ನು ನೆನಪಿಸಬೇಕಿಲ್ಲ ಅಲ್ಲವೆ? ಯಾರೋ ಎಂದೋ ತೊಡಿಸಿದ ಕನ್ನಡಕದಲ್ಲಿ ಎಷ್ಟು ದಿನ ನೋಡಲು ಸಾಧ್ಯ? ಒಮ್ಮೆ ಕೈಗೆ ಬಂದ ಗಾಜನ್ನೇ ಫ್ರೇಮಿನೊಳಗೆ ತೂರಿಸುವ ಹಟವ್ಯಾಕೆ? ಚಟ ಬೇಕೆ? ಅಳತೆ ಬದಲಾದಂತೆ ಪಾತ್ರಗಳ ಆಕಾರ ಹಿಗ್ಗಿ, ಕುಗ್ಗಿ, ತಗ್ಗುವುದಲ್ಲದೆ? ಅಷ್ಟೇ ಯಾಕೆ ಒಂದೊಮ್ಮೆ ಇಲ್ಲವೂ ಆದಲ್ಲಿ, ಒಪ್ಪಿಕೊಳ್ಳಲೇನು ಅಡ್ಡಿ? ಒರೆಸಿ ಒರೆಸಿ ಗೀಚು ಬಿದ್ದ, ಅಳತೆಗೆಟ್ಟ ಮಬ್ಬುಗಾಜು, ಅಳತೆಬಿಟ್ಟ ಚೌಕಟ್ಟು ಅಟ್ಟಣಿಗೆಗೆ ಚೆಂದವಷ್ಟೆ.

ಹೇಳಿ? ಒತ್ತಿಟ್ಟ ಹತ್ತಿಯನ್ನು ತೆಗೆಯದೇ ಹೋದರೆ ಗದ್ದಲಕ್ಕೂ, ಶಬ್ದಕ್ಕೂ ವ್ಯತ್ಯಾಸ ತಿಳಿದೀತು ಹೇಗೆ? ಅಂದಿಟ್ಟ ಟೊಪ್ಪಿಗೆಯದು ಪಿಸಿದು, ಬಣ್ಣಗೆಟ್ಟಿದ್ದರೂ ಮಕಮಲ್ಲು ಎಂದು ಮುಟ್ಟಿಕೊಳ್ಳುವುದರಲ್ಲಿ ಏನಿದೆ ಅರ್ಥ? ನಿಮ್ಮೊಂದಿಗೆ, ಅಹುದಹುದು ಎನ್ನುವವರಿಗೆ, ಆ ಅಕ್ಕನೇ ಹುಟ್ಟಿಬರಬೇಕೋ ಏನೊ? ಅದೆಲ್ಲ ಭ್ರಮೆಯಷ್ಟೆ.ಆದರೆ ನಿಮ್ಮ ಲೇಖನಿಯಿಂದಲಾದರೂ ಅವಳು ಮತ್ತೆ ಎದ್ದುಬಂದರೆ ಅದೇ ವಾಸ್ತವ, ಸಮಕಾಲೀನ.

-ಶ್ರೀದೇವಿ ಕಳಸದ
-----------------
ಪ್ರಜಾವಾಣಿ ಸಾಪ್ತಾಹಿಕ ಪುರವಣಿ (08-08-2010) ಪತ್ರಕಾಮೇಷ್ಟಿ ಅಂಕಣದಲ್ಲಿ ಪ್ರಕಟ