Monday, August 9, 2010

ಹಟವ್ಯಾಕೆ? ಚಟ ಬೇಕೆ?

ಕಾದಂಬರಿ ಬರೆಯುವ ಮತ್ತಿನಲ್ಲಿ ಯಾರದೋ ಒಬ್ಬರ ಬದುಕಿನ ಕಥೆಯನ್ನು ಸಾರ್ವತ್ರಿಕಗೊಳಿಸುವುದೆಂದರೆ?
ಸಂಗೀತದ ಬೆನ್ನು ಹತ್ತಿದವರಿಗೆ ‘ಮಂದ್ರ’ದ ಮಧುಮಿತಾಳ ‘ಮಾರ್ಗ’ವೇ ಖಾಯಂ?
ಗುರುದೀಕ್ಷೆಗೆ ಹಾಸಿಗೆಯೇ ‘ರಂಗ’ಮಂಚವಾಗಬೇಕೆ?


---------------------------------

ಭೈರಪ್ಪ ಸರ್,
ಹಸ್ತಾಕ್ಷರ ತೆಗೆದುಕೊಳ್ಳುವ ಖಯಾಲಿ ಮೊದಲಿನಿಂದಲೂ ನನಗಿಲ್ಲ. ಈಗಲೂ ಇಲ್ಲ. ಆದರೆ, ಹಸ್ತಾಕ್ಷರಕ್ಕಾಗಿ ಒಮ್ಮೆ ಕೈಚಾಚಿದ್ದುಂಟು. ಬೆಂಗಳೂರಿನಲ್ಲಿ ನಿಮ್ಮ ಕಾದಂಬರಿಗಳ ವಿಮರ್ಶಾ ಸಂಕಿರಣದ ಕಾರ್ಯಕ್ರಮ. ಹಿರಿಯ ಕಾದಂಬರಿಕಾರರಾದ ನಿಮ್ಮನ್ನು ಮುಖತಃ ನೋಡಿದ್ದು ಆಗಲೇ. ‘ಮಂದ್ರ’ ಆಗಷ್ಟೇ ಕಾವೇರತೊಡಗಿತ್ತು.ಬೆಳಗಿನ ಜಾವದ ಮಂದ್ರ ಸ್ವರದ ಅನುಭೂತಿ ನೆನಪಾಗಿ ಆ ಕಾದಂಬರಿ ಕೊಂಡೆ. ಜೀವನದಲ್ಲಿ ಮೊದಲ ಸಲ ಹಸ್ತಾಕ್ಷರ ಪಡೆಯಲು ನಿಮ್ಮದೇ ‘ಮಂದ್ರ’ ಚಾಚಿದೆ.

ಅದಕ್ಕೂ ಮೊದಲು ನಿಮ್ಮನ್ನು ನೋಡಿ ತುಸುವೇ ನಕ್ಕೆ. ನಿರಾಶೆಗೊಳ್ಳಲಿಲ್ಲ, ಅದು ನಿಮ್ಮನ್ನು ತಲುಪಲಿಲ್ಲವೇನೋ ಎಂದು ಸಮಾಧಾನಿಸಿಕೊಂಡು ಮತ್ತೂ ತುಟಿ ಅಗಲಿಸಿದೆ. ಉಹೂಂ... ಮುಖವನ್ನೂ ಎತ್ತದೆ ಕೇವಲ ನಾಮಾಂಕಿತ ಹಾಕಿ ಕಾದಂಬರಿ ಕೈಗಿಟ್ಟಿರಿ. ಒಂದೆರಡು ಶುಭಹಾರೈಕೆಗಳೆನಾದರೂ ಹಾರಿ ಬಂದಾವೋ ಎಂದು ಕಣ್ಣು ಅಗಲ ಮಾಡಿದವಳಿಗೆ, ಪ್ಚ್...

ಮತ್ತೆ ನಿಮ್ಮನ್ನು ಕಂಡಿದ್ದು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ. ಅರೆ! ಈ ಬಾರಿ ನೀವು ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳಿದಿರಿ. ನನಗೋ? ನನ್ನದೇ ಗಡಿಬಿಡಿ. ಹಿರಿಯ ಕಾದಂಬರಿಕಾರರಿಗೆ ಏನು ಪ್ರಶ್ನೆ ಕೇಳಬೇಕು? ಏನೋ ಕೇಳಿ ಬೈಸಿಕೊಂಡರೆ? ಅಳುಕಿನಿಂದಲೇ ಸ್ವರ ಹೊರಡಿಸಿದೆ.ಆಗ ನೀವು, ‘ಕಾದಂಬರಿಯೊಂದರ ಸಿದ್ಧತೆಯಲ್ಲಿದ್ದೇನೆ. ಇನ್ನೂ ಹೆಸರಿಟ್ಟಿಲ್ಲ. ಎರಡು ತಿಂಗಳಾಗಬಹುದು’ ಎಂದಷ್ಟೇ ಸುಮ್ಮನಾದಿರಿ.

ಛೆ, ಅಷ್ಟೊಂದು ದಪ್ಪ ದಪ್ಪ ಕಾದಂಬರಿ ಬರೆಯುವವರು ಯಾಕೆ ಇಷ್ಟೇ ಮಾತನಾಡುತ್ತಾರೆ ಎಂದು ಮನಸ್ಸಿನಲ್ಲಿ ಮಣಮಣಿಸಿಕೊಂಡು ಮುಂದಿನ ಪ್ರಶ್ನೆಗಳಿಗೆ ದನಿ ಏರಿಸಿದೆ. ಸಾಮಾನ್ಯವೂ ಆದರೆ ಅಷ್ಟೇ ಪ್ರಸ್ತುತತೆಯೂ ಇರುವ ಪ್ರಶ್ನೆಗಳವು ಎಂದುಕೊಂಡೇ, ‘ಸರ್, ಈಗಿನ ಯುವಬರಹಗಾರರ ಬಗ್ಗೆ ಏನನ್ನಿಸುತ್ತದೆ? ಇತ್ತೀಚಿನ ತಲೆಮಾರಿನಲ್ಲಿ ನಿಮಗಿಷ್ಟವಾಗುವ ಕೃತಿ ಮತ್ತು ಕೃತಿಕಾರರು? ಅವರ ಸೃಜನಶೀಲತೆ, ಬರೆವಣಿಗೆಯ ಲಯ-ಗತಿ-ವಿಚಾರ? ಬ್ಲಾಗ್ ಬರಹಗಳ ಬಗ್ಗೆ ನಿಮ್ಮ ಅಭಿಪ್ರಾಯ? ಅಂದಹಾಗೆ ಇತ್ತೀಚೆಗೆ ಯಾವ ಕೃತಿ ಓದಿದಿರಿ ಸರ್?’

ಅದಕ್ಕೆ ನೀವೇನಂದಿರಿ- ‘ತುಂಬಾ ಜನ ಬರೀತಿದಾರೆ. ಅವರವರ ಅನುಭವಕ್ಕೆ ತಕ್ಕಂತೆ ಬರೆಯುತ್ತಿದ್ದಾರೆ.ಯಾರು ಅಂತೆಲ್ಲ ಹೇಳಲಿಕ್ಕಾಗದು. ಯಾರ್ಯಾರೋ ಹೊಸ ಪುಸ್ತಕಗಳನ್ನು ತಂದು ಕೊಡುತ್ತಿರುತ್ತಾರೆ. ಕೆಲವೊಂದನ್ನು ಓದುತ್ತೇನೆ. ಇತ್ತೀಚೆಗೆ ಯಾವ ಪುಸ್ತಕ ಓದಿದೆ ಅನ್ನೋದು ನೆನಪಿಲ್ಲ. ಏಕೆಂದರೆ ಓದಿಗಿಂತ ಬರೆಯುವುದೇ ನನ್ನ ಕೆಲಸ.
ಅದು ಒಂಥರಾ ಧ್ಯಾನ.
ಆಮೇಲೆ ಈ ವೆಬ್‌ಸೈಟ್‌ಗಳು, ಅವುಗಳಲ್ಲಿ ಬರುವ ಪ್ರತಿಕ್ರಿಯೆಗಳ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ.ಆದ್ರೆ ಈ ಬ್ಲಾಗ್ ಅಂದ್ರೆ... ಈಗ ನೀವೂ ಕೂಡ ನಿಮ್ಮದೇ ಒಂದು ಸ್ವಂತ ಬ್ಲಾಗ್ ಮಾಡಿ ನಿಮಗೆ ಬೇಕಾದ್ದನ್ನು ಬರೆಯಬಹುದು ನೋಡಿ...’.

ಮತ್ತೂ ಒಂದಿಷ್ಟು ಪ್ರಶ್ನೆಗಳಿಗೆ ಪ್ರಯತ್ನಿಸೋಣ ಎಂದುಕೊಳ್ಳುತ್ತಿರುವಾಗಲೇ ಅಭಿಮಾನಿಗಳು ಸುತ್ತುವರಿದರು.ಹೆಣ್ಣುಮಗಳೊಬ್ಬರು ಗಾಜಿನ ಕುಪ್ಪೆಯೊಂದನ್ನು ಬಗಲುಚೀಲದಿಂದ ತೆಗೆದು ‘ಮಾವಿನಕಾಯಿ ಮೊರಬ್ಬ...’ ಎನ್ನುತ್ತಾ ಅಕ್ಕರೆಯಿಂದ ಕೈಗಿಟ್ಟರು. ‘ನೆಲ್ಲಿಕಾಯಿ ಎಲ್ಲೂ ಸಿಗಲಿಲ್ಲ’ ಎಂದು ಪೆಚ್ಚುಮೋರೆಯನ್ನೂ ಹಾಕಿದರು. ಅದಕ್ಕೆ ನೀವು ‘ಪರವಾಗಿಲ್ಲ ಬಿಡಿ’ ಎನ್ನುತ್ತ ಅವರೆಲ್ಲರೊಂದಿಗೆ ನಡೆದಿರಿ.

ಪರವಾಗಿಲ್ಲ ಬಿಡಿ ಭೈರಪ್ಪ ಸರ್, ನಾನೂ ಈಗ ಅದನ್ನೇ ಪುನರುಚ್ಚರಿಸುತ್ತೇನೆ. ಆಗ ಕೇಳದ ಪ್ರಶ್ನೆಗಳನ್ನು ಇನ್ನೆಂದಾದರೂ ಕೇಳೋಣವೆಂದಿದ್ದೆ. ಹಾಗೆ ಅಂದುಕೊಳ್ಳುತ್ತಿರುವಾಗಲೇ ಮತ್ತಷ್ಟು ಪ್ರಶ್ನೆಗಳು ಬಾಲಂಗೋಚಿಗಳಾಗುತ್ತಾ ಹೊರಟಿವೆ. ಅದಕ್ಕೆ ಇದು ಪ್ರಶ್ನೆ ಕೇಳುವ ಸಮಯ ಎಂದು ನಿರ್ಧರಿಸಿ ಮುದ್ದಾಮ್ ಬೆಳೆಯುವ ಬಾಲಂಗೋಚಿಯನ್ನು ತುಂಡರಿಸುತ್ತಿದ್ದೇನೆ.

ಸರ್, ಸೃಜನಶೀಲ ಚಿಂತನೆ, ಬರವಣಿಗೆಯನ್ನು ಪೂರ್ವ ನಿರ್ಧರಿತವಾಗಿ ಚಿತ್ರಿಸಲೂ ಸಾಧ್ಯವೆ? ಮೊದಲೇ ಹೇಳಿ ಮಾಡಿಸಿದ ಸಣ್ಣ ತೂತಿನ ಜರಡಿಯಲ್ಲಿ ದೊಡ್ಡ ಅಳತೆಯ ಕಾಳುಗಳನ್ನು ಜರಡಿ ಹಿಡಿದು, ಇವು ಗಟ್ಟಿಕಾಳುಗಳು ಎಂದು ಹೇಳುವುದರಲ್ಲಿ ಧನ್ಯತೆ ಇರುತ್ತದೆಯೆ? ಇಂಥದೇ ಕಟ್ಟಿಗೆ, ಇಷ್ಟೇ ಮೊಳೆಗಳು, ಇದೇ ಬಣ್ಣ ಎಂದು ಕಟ್ಟಿದ ಚೌಕಟ್ಟಿನೊಳಗಿನಿಂದ ಪಾತ್ರಗಳೇನಾದರೂ ಇಣುಕಿ ಹಾಕಿದವೊ.. ಅವುಗಳ ಅಂತಃಸತ್ವ ಉಡುಗುವುದು ನಿಶ್ಚಿತವೆ? ಪೂರ್ವಗ್ರಹಪೀಡಿತ ಪಾತ್ರಗಳನ್ನು ಓದುಗ ಒಪ್ಪುವಂತೆ ಮಾಡುವ ಒತ್ತಾಯ ಯಾಕೆ? ಬೇಕೆ?

‘ಗೃಹಭಂಗ’ದ ನಂಜಮ್ಮ ನಮಗೆಲ್ಲ ಎಷ್ಟು ಇಷ್ಟವಾಗುತ್ತಾಳೆ ಗೊತ್ತಾ ಸರ್? ಅವಳ ದಿಟ್ಟತನ, ಧೈರ್ಯ, ಸಾಹಸ, ಬದುಕನ್ನು ಮುಟ್ಟಿಗೆಯಲ್ಲಿ ಕಟ್ಟಿಕೊಂಡು ಛಲದಿಂದ ಬದುಕುವ ರೀತಿ- ಎಲ್ಲ ಅಮ್ಮಂದಿರೂ ಹೀಗೆಯೇ ಮಕ್ಕಳನ್ನೂ ಬೆಳೆಸಿರುತ್ತಾರೆಯೇ ಎಂದು ಕಣ್ಣ ತೇವಗೊಳಿಸುವ ಸಂದರ್ಭಗಳು... ಎಲ್ಲ ಎಲ್ಲವೂ...

ಆದರೆ ಇದಕ್ಕೆ ವಿರುದ್ಧವಾಗಿ ನೀವು ಸೃಷ್ಟಿಸಿದ ಸಾಕಷ್ಟು ಸ್ತ್ರೀ ಪಾತ್ರಗಳು ಯಾಕೋ ಅತಿ ಎನಿಸುತ್ತವೆ. ಯಾಕೆ ಸರ್ ಹೀಗೆ? ನಿಮ್ಮ ಪ್ರತಿ ಕಾದಂಬರಿ ಹೊರಬಂದಾಗಲೂ ಪಾತ್ರ ಸೃಷ್ಟಿಯ ಹಿಂದೆ ಹಿಡನ್ ಅಜೆಂಡಾ ಇದೆ ಎಂದು ವಿಮರ್ಶಕರು ಹೇಳುತ್ತಲೇ ಇರುತ್ತಾರೆ. ಆದರೆ ನೀವೇ ಹೇಳಿ, ಕಾದಂಬರಿ ಬರೆಯುವ ಮತ್ತಿನಲ್ಲಿ ಯಾರದೋ ಒಬ್ಬರ ಬದುಕಿನ ಕಥೆಯನ್ನು ಸಾರ್ವತ್ರಿಕಗೊಳಿಸುವುದೆಂದರೆ? ಸಂಗೀತದ ಬೆನ್ನು ಹತ್ತಿದವರಿಗೆ ‘ಮಂದ್ರ’ದ ಮಧುಮಿತಾಳ ‘ಮಾರ್ಗ’ವೇ ಖಾಯಂ? ಗುರುದೀಕ್ಷೆಗೆ ಹಾಸಿಗೆಯೇ ‘ರಂಗ’ಮಂಚವಾಗಬೇಕೆ? ಅದೊಂದು ಸಂದರ್ಭವಾಗಿ, ತಂತ್ರವಾಗಿ ಸರಿದುಹೋದರೆ ಸರಿ, ಆದರೆ ಅದೇ ಕಾಮಭೂಮಿಕೆಯಾಗಿಬಿಟ್ಟರೆ? ಸಂಗೀತವೆಂದು ಹೋದೆಯೋ ಕಾಮವೆಂಬ ಸಂವಾದಿಗೂ ಶರಣಾಗಬೇಕು ನೆನಪಿರಲಿ... ಎಂದು ಬೆತ್ತ ಹಿಡಿದು ಬೆದರಿಸಿದಂತೆ ಅಲ್ಲವೆ ಸರ್ ಇದು?

ಹಣೆಗೆ ಕುಂಕುಮ, ಬಳೆ, ಹೂ ಮುಡಿಯದಿದ್ದರೆ ‘ಬದುಕು ಕವಲೇ’ ಎಂದು ಕಡ್ಡಿಮುರಿದ ಹಾಗೆ ಹೇಳಿದ ಹಾಗಿದೆಯಲ್ಲ? ಪದೇಪದೇ ಇಣುಕುವ ‘ಸೂತಕ’ ಎನ್ನುವ ಪದ ಪ್ರಯೋಗ ಹೊಟ್ಟೆತೊಳಸಿದಂತಾಗುತ್ತದೆ. ಆದರೆ ಆ ಪಾತ್ರ ಸೃಷ್ಟಿ ಮಾಡುತ್ತಾ ಹೋದಾಗ ನಿಮಗೆ ಏನನ್ನಿಸಿರಬಹುದು?

ಮಹಿಳಾ ಹೋರಾಟಗಳು ಮೂವತ್ತು ವರ್ಷಗಳ ಹಿಂದೆಯೇ ಮೆತ್ತಗಾಗಿರುವುದು ನಿಮಗೆ ನೆನಪಿಲ್ಲವೆ? ವೈಯಕ್ತಿಕ ನೆಲೆಯಲ್ಲಿ ಹೋರಾಡುತ್ತ ನ್ಯಾಯ ಕಂಡುಕೊಳ್ಳುವ ಮಹಿಳೆಯರು ನಿಮ್ಮ ಸ್ಮೃತಿಗೆ ನಿಲುಕುತ್ತಿಲ್ಲವೆ ಸರ್? ಪುರುಷನ ನೆರಳಿನಾಚೆಗೂ ಅವಳು ಬದುಕುತ್ತಿರುವುದು, ಆರ್ಥಿಕ ಜವಾಬ್ದಾರಿಯನ್ನು ಹಂಚಿಕೊಳ್ಳುವಲ್ಲಿ ಅವಳು ತೊಡಗಿರುವುದು ಈ ಹೊತ್ತಿನ ಚರ್ಚೆಯಾಗಬೇಕಿತ್ತಲ್ಲವೆ?

ಆದರೂ ಸಂಬಂಧಗಳ ಸೆಲೆ ಇಳಿಮುಖವಾಗಿ ಹರಿಯುತ್ತಿದೆ. ಇದನ್ನು ನಿರ್ವಹಿಸುವಲ್ಲಿ ಯಾರದು ಯಾವ ರೀತಿ ಪಾತ್ರವಿರಬೇಕಿತ್ತು? ಎಂಬುದು ಸದ್ಯದ ಚರ್ಚೆಯ ವಿಷಯವಲ್ಲವೆ ಸರ್? ಓದಿದ ಗಂಡಸರೆಲ್ಲಾ ಹೆಂಗಸಾಗಿದ್ದಾರೆ.ಓದಿದ ಹೆಂಗಸರೆಲ್ಲಾ ಗಂಡಸಾಗಿದ್ದಾರೆ ಎಂದಿದ್ದೀರಲ್ಲ... ಅಕ್ಷರ ಎನ್ನುವುದು ‘ಕ್ರೌರ್ಯ’ ತಂದುಕೊಡುವ ಮಟ್ಟಕ್ಕೆ ತಲುಪಿದೆ ಎನ್ನುವುದಾದರೆ ಶಿಕ್ಷಣಕ್ಕಾಗಿ ಮಾಡಿದ ಹೋರಾಟಗಳು ಏನಾದವು? ಏನಾಗಬಹುದು?

ಸಾಂಪ್ರದಾಯಿಕ ಆಲೋಚನೆಗಳನ್ನು ನಿರೂಪಿಸುವಾಗ ಮುಗ್ಗರಿಸಿದಂತಾಗಬಾರದಲ್ಲವೆ? ಲಿವಿಂಗ್ ಟುಗೆದರ್ ನಮ್ಮ ದೇಶದಲ್ಲಿನ್ನೂ ಶೈಶವಾವಸ್ಥೆಯಲ್ಲಿದ್ದು, ಅದಕ್ಕೆ ಸಾಂಪ್ರದಾಯಿಕ ಅಂಗಿ ತೊಡಿಸಿ ಆಗಲೇ ಅದಕ್ಕೊಂದು ಚೌಕಟ್ಟು ಹಾಕಿ ಗಂಧದ ಕಡ್ಡಿಯನ್ನೂ ಬೆಳಗಿಬಿಟ್ಟಿದ್ದೀರಿ! ಸ್ತ್ರೀ ಸ್ವಾತಂತ್ರ್ಯ, ಕಾನೂನು ಎಂದು ಹೊರಟವರು ಮಣ್ಣು ಮುಕ್ಕುವುದು ಗಟ್ಟಿ ಎಂದೂ, ಕವಲಿನ ಮುಕ್ತಾಯ ಮೊದಲು ಬರಿದಿಟ್ಟು ನಂತರ ಆರಂಭಿಸಿರುವಿರೇನೋ ಎನ್ನುವುದು ಪಿಸುಮಾತಾಗಿ ಉಳಿದಿಲ್ಲ ಈಗ.

ಹೀಗೆ ಹೇಳುತ್ತಿದ್ದೇನೆ ಎಂದು ಬೇಸರಿಕೊಳ್ಳಬೇಡಿ ಸರ್. ಬೇಲಿ ಹಾಕಿಕೊಂಡರೆ ಅದು ಗದ್ದೆಯೋ, ಹೊಲವೋ, ತೋಟವಷ್ಟೇ ಆಗುತ್ತದೆ; ಸುರಕ್ಷಿತ ವಲಯದಲ್ಲಿ ಸಾಂಪ್ರದಾಯಿಕ ಸೀಮಿತ ಬೆಳೆ. ಇಳುವರಿಯಲ್ಲಿ ಏರುಪೇರು;ಬೆಲೆಯಲ್ಲೂ. ಆದರೆ ಕಾಡು? ಬೇಲಿಯ ಹಂಗಿಲ್ಲ. ಬೀಜ ಬಿತ್ತುವವರಿಗಾಗಿ ಕಾಯಬೇಕಿಲ್ಲ. ನೀರುಣಿಸುವವರಿಗೆ ಋಣಿಯಾಗಿರಬೇಕಿಲ್ಲ. ಅಳೆದು ಸುರಿದು ಬೆಳೆಯಬೇಕಿಲ್ಲ, ಧಾರಣೆಗೆ ತಕ್ಕಂತೆ ತಕ್ಕಡಿಯನ್ನೂ ತೂಗಬೇಕಿಲ್ಲ.

ಹೊಕ್ಕಷ್ಟೂ ಕಿರುದಾರಿ, ನಡೆದಷ್ಟು ಕಾಲುದಾರಿ, ಬಾಗಿದಷ್ಟೂ ಒಳದಾರಿ, ತಿರುದಾರಿ, ಅಂಕೆಗೂ ಸಿಗದ ಉಷೆಯ ದಾರಿ, ನಿಷೆಯ ದಾರಿ. ಯಾವಾಗ? ಎಲ್ಲಿ? ಹೇಗೆ? ಯಾಕೆ? ಯಾರು? ಎಂಬ ಪ್ರಶ್ನೆಗಳ ಅಂದಾಜಿಲ್ಲದೆ ಸಾಗುವ ಅನೂಹ್ಯ ಪಯಣ. ಲೆಕ್ಕಾಚಾರವಿಲ್ಲದ ಚುಕ್ತಾ ಮಾಡಲಾಗದ ಅನುಭವದ ಮೊತ್ತ ಅದಾಗಬಹುದಲ್ಲವೆ?

ಗಮ್ಯ ಮೀರಿದ ನಡಿಗೆಗೆ ಮಾತ್ರ ಅದು ನಿಲುಕಬಲ್ಲದೇನೋ... ಈ ಅನುಭವದ ಯಾತ್ರೆಯಲಿ ನೀವೂ ಈ ಹಿಂದೆ ಕೆಲವೊಂದು ಕಡೆ ‘ಸಾಕ್ಷಿ’ಯಾಗಿದ್ದೀರಿ, ಎನ್ನುವುದನ್ನು ನೆನಪಿಸಬೇಕಿಲ್ಲ ಅಲ್ಲವೆ? ಯಾರೋ ಎಂದೋ ತೊಡಿಸಿದ ಕನ್ನಡಕದಲ್ಲಿ ಎಷ್ಟು ದಿನ ನೋಡಲು ಸಾಧ್ಯ? ಒಮ್ಮೆ ಕೈಗೆ ಬಂದ ಗಾಜನ್ನೇ ಫ್ರೇಮಿನೊಳಗೆ ತೂರಿಸುವ ಹಟವ್ಯಾಕೆ? ಚಟ ಬೇಕೆ? ಅಳತೆ ಬದಲಾದಂತೆ ಪಾತ್ರಗಳ ಆಕಾರ ಹಿಗ್ಗಿ, ಕುಗ್ಗಿ, ತಗ್ಗುವುದಲ್ಲದೆ? ಅಷ್ಟೇ ಯಾಕೆ ಒಂದೊಮ್ಮೆ ಇಲ್ಲವೂ ಆದಲ್ಲಿ, ಒಪ್ಪಿಕೊಳ್ಳಲೇನು ಅಡ್ಡಿ? ಒರೆಸಿ ಒರೆಸಿ ಗೀಚು ಬಿದ್ದ, ಅಳತೆಗೆಟ್ಟ ಮಬ್ಬುಗಾಜು, ಅಳತೆಬಿಟ್ಟ ಚೌಕಟ್ಟು ಅಟ್ಟಣಿಗೆಗೆ ಚೆಂದವಷ್ಟೆ.

ಹೇಳಿ? ಒತ್ತಿಟ್ಟ ಹತ್ತಿಯನ್ನು ತೆಗೆಯದೇ ಹೋದರೆ ಗದ್ದಲಕ್ಕೂ, ಶಬ್ದಕ್ಕೂ ವ್ಯತ್ಯಾಸ ತಿಳಿದೀತು ಹೇಗೆ? ಅಂದಿಟ್ಟ ಟೊಪ್ಪಿಗೆಯದು ಪಿಸಿದು, ಬಣ್ಣಗೆಟ್ಟಿದ್ದರೂ ಮಕಮಲ್ಲು ಎಂದು ಮುಟ್ಟಿಕೊಳ್ಳುವುದರಲ್ಲಿ ಏನಿದೆ ಅರ್ಥ? ನಿಮ್ಮೊಂದಿಗೆ, ಅಹುದಹುದು ಎನ್ನುವವರಿಗೆ, ಆ ಅಕ್ಕನೇ ಹುಟ್ಟಿಬರಬೇಕೋ ಏನೊ? ಅದೆಲ್ಲ ಭ್ರಮೆಯಷ್ಟೆ.ಆದರೆ ನಿಮ್ಮ ಲೇಖನಿಯಿಂದಲಾದರೂ ಅವಳು ಮತ್ತೆ ಎದ್ದುಬಂದರೆ ಅದೇ ವಾಸ್ತವ, ಸಮಕಾಲೀನ.

-ಶ್ರೀದೇವಿ ಕಳಸದ
-----------------
ಪ್ರಜಾವಾಣಿ ಸಾಪ್ತಾಹಿಕ ಪುರವಣಿ (08-08-2010) ಪತ್ರಕಾಮೇಷ್ಟಿ ಅಂಕಣದಲ್ಲಿ ಪ್ರಕಟ

6 comments:

sunaath said...

ಶ್ರೀದೇವಿ,
‘ಮಂದ್ರ’ವಂತೂ ಒಂದು ತುಚ್ಛ ಕಾದಂಬರಿ. ಇನ್ನು ಭೈರಪ್ಪನವರ ಅನೇಕ ಕಾದಂಬರಿಗಳಲ್ಲಿ ಪುರುಷ-ವಿಜೃಂಭಣೆ ಇದೆ. ಅಪವಾದಗಳೆಂದರೆ ‘ಗೃಹಭಂಗ ಹಾಗು ‘ಸಾರ್ಥ’. ಇದೀಗ ‘ಕವಲು’ ಕಾದಂಬರಿಯೂ ಸಹ ಭೈರಪ್ಪನವರನ್ನು ಒಬ್ಬ
male chauvinistic pig ಎಂದು ಸಾಬೀತುಗೊಳಿಸಿದೆ!

ಮಧು said...

ಶ್ರೀದೇವಿ,

ಉತ್ತಮವಾದ ಲೇಖನ, ಇಷ್ಟವಾಯಿತು.
ಬ್ಲಾಗ್ ನಲ್ಲಿ ಈಗಿತ್ತಲಾಗಿ ಏನೂ ಬರೀತಾನೆ ಇಲ್ಲ ನೀವು! ನಿಮ್ಮ ಕವನಗಳನ್ನೆಲ್ಲ ಮಿಸ್ ಮಾಡ್ತಾ ಇದೀವಿ!

ಸುಮ said...

ಮಂದ್ರ , ಕವಲು - ನಿಜಕ್ಕೂ ಭೈರಪ್ಪನವರಂತಹ ಹಿರಿಯ ಕಾದಂಬರಿಕಾರರೇ ಬರೆದಿದ್ದಾರೆಯೆ ಎನ್ನಿಸುವಷ್ಟು ಬಾಲಿಶವಾಗಿದೆ.

Narayan Bhat said...

ಕವಲು ಕಾದಂಬರಿ ಬಗ್ಗೆ ನಿಮ್ಮ ಅಭಿಪ್ರಾಯ ಮೆಚ್ಚುಗೆಯಾಯ್ತು.

ಆಲಾಪಿನಿ said...

@ ಸುನಾಥ್‌ ಅಂಕಲ್‌, ನಿಜ.. ಕವಲು ಓದುತ್ತಿರುವಾಗಲಂತೂ ಹೊಟ್ಟೆ ತೊಳಸಿದಂತಾಗುತ್ತಿತ್ತು. ಭೈರಪ್ಪ ಅವರು ವಾಸ್ತವ ಹೇಳಹೊರಟಿದ್ದೇನೆ ಎನ್ನುತ್ತಾ ತಮ್ಮ ಪೂರ್ವನಿರ್ಧಾರಿತ ಯೋಚನೆಗಳಿಗೆ ಓದುಗರನ್ನು ಬಗ್ಗಿಸಿಕೊಳ್ಳುತ್ತಾ ಹೋಗುವ ಪ್ರಯತ್ನ ಮಾಡುತ್ತಾರೇನೋ ಎಂದು ಅನ್ನಿಸುತ್ತಲ್ವಾ?
---------
@ ಮಧು, ಹೇಗಿದ್ದೀರಿ? ಅರ್ಚನಾ ಹೇಗಿದ್ದಾರೆ? ನಿಜ ಇತ್ತೀಚೆಗೆ ಬ್ಲಾಗ್‌ ಅಪ್‌ಡೇಟ್ ಮಾಡಲು ಆಗುತ್ತಿಲ್ಲ ರಿಪೋರ್ಟಿಂಗ್‌ ಬಂದಮೇಲೆ. ಕವನಗಳನ್ನೂ ಅಷ್ಟಾಗಿ ಬರೆದಿಲ್ಲ.
------------
@ ಸುಮ, :)
---------
@ ನಾರಾಯಣ ಭಟ್‌, ಥ್ಯಾಂಕ್ಸ್‌

Chamaraj said...

ಶ್ರೀದೇವಿ, ನಿಮ್ಮ ಅಭಿಪ್ರಾಯ ಒಪ್ಪುವುದು ಕಷ್ಟ.

ಕಾದಂಬರಿ, ಕಾದಂಬರಿಕಾರ ಮತ್ತು ವಾಸ್ತವ ಒಂದಕ್ಕೊಂದು ಪೂರಕವಾಗಿರುವಂತೆ ಪ್ರತ್ಯೇಕವಾಗಿಯೂ ನಿಲ್ಲುವಂಥವು. ಒಂದು ಅಜೆಂಡಾ ಅಥವಾ ಕಾರ್ಯಸೂಚಿ ಇಟ್ಟುಕೊಂಡು ಸಾಹಿತ್ಯಿಕ ಕೃತಿ ರಚಿಸುವುದು ಸುಲಭವಲ್ಲ. ಹಾಗೆ ರಚನೆಯಾದರೂ ಅದಕ್ಕೆ ಸಾಹಿತ್ಯಿಕ ಮೌಲ್ಯಗಳು ದಕ್ಕುವುದು ಸಾಧ್ಯವಿಲ್ಲ. ಭೈರಪ್ಪನವರು ಯಾವುದೋ ಅಜೆಂಡಾ ಇಟ್ಟುಕೊಂಡು ಅದನ್ನು ಸಾಹಿತ್ಯಿಕ ಚೌಕಟ್ಟಿನಲ್ಲಿ ತಂದಿದ್ದಾರೆ ಎಂಬಂಥ ವಾದವನ್ನು ಒಪ್ಪುವುದು ಕಷ್ಟ.

ಲೈಂಗಿಕತೆ ಸುತ್ತ ಕಾದಂಬರಿ ಸುತ್ತುತ್ತಿದೆ ಎಂಬ ವಾದವನ್ನೂ ಒಪ್ಪಲಾಗದು. ಕವಲು ಕಾದಂಬರಿಯಲ್ಲಿ ಬಂದ ಪಾತ್ರಗಳನ್ನು ಹೋಲುವ ಅನೇಕ ವ್ಯಕ್ತಿಗಳನ್ನು ಹಾಗೂ ಸಂಸಾರಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ.

ಮಹಿಳೆಯರನ್ನು ತುಚ್ಛವಾಗಿ ಚಿತ್ರಿಸಿದ್ದಾರೆ ಎಂಬ ಆರೋಪದಲ್ಲೂ ಹುರುಳಿಲ್ಲ. ಆ ಕಾದಂಬರಿಯಲ್ಲಿ ಬಂದಂಥ ಪಾತ್ರಗಳು ನಮ್ಮ ಸುತ್ತಮುತ್ತಲೇ ಕಾಣುತ್ತವೆ. ತುಚ್ಛತೆಗೆ ಮಹಿಳೆ-ಪುರುಷ ಎಂಬ ಭೇದವಿಲ್ಲ. ಹೀಗಾಗಿ, ಕಾದಂಬರಿಯ ವಸ್ತು, ಪ್ರಸ್ತುತಿ, ಪಾತ್ರಗಳು ಅಪ್ರಸ್ತುತವೆಂಬುದನ್ನು, ಅಜೆಂಡಾ ಇಟ್ಟುಕೊಂಡು ರೂಪಿಸಿದವುಗಳೆಂಬುದನ್ನು ನಾನು ಒಪ್ಪಲಾರೆ.

ಒಂದು ಕಾದಂಬರಿಯನ್ನು ಕಾದಂಬರಿಯಾಗಿ ಓದಬೇಕು ಎಂಬುದು ನನ್ನ ನಂಬಿಕೆ. ಆದರೆ, ಅದನ್ನು ಸುದ್ದಿಯೆಂಬಂತೆ ಓದಿ, ತಂತಮ್ಮ ನಂಬಿಕೆಗಳೊಂದಿಗೆ ಹೋಲಿಸಿ ನೋಡೋರಿಗೆ ಏನು ಹೇಳೋದು? ಕಾಮನ್ಸೆನ್ಸ್ ಇರದ ಬುದ್ಧಿಜೀವಿಗಳು, ವಾಸ್ತವ ಧಿಕ್ಕರಿಸಿ ಯೋಚಿಸುವ ವಿಚಾರವ್ಯಾಧಿಗಳು ಇಂಥ ಎಲ್ಲ ಬರವಣಿಗೆ/ ಬೆಳವಣಿಗೆಯನ್ನೂ ವಿರೋಧಿಸುತ್ತಾರೆ. ಆದರೆ, ಇವರ ಸಾಲಿಗೆ ಮಹಿಳಾವಾದಿಗಳು ಕೂಡ ಸೇರಿರುವುದನ್ನು ನೋಡಿದರೆ, ನಮ್ಮ ವಿಚಾರಗಳೇ ಕವಲು ದಾರಿಯಲ್ಲಿ ನಿಂತಿವೆ ಅನಿಸುತ್ತದೆ.

- ಚಾಮರಾಜ ಸವಡಿ
http://chamarajsavadi.blogspot.com/2010/08/blog-post.html