Sunday, August 15, 2010

ಹೊಸ ಬಾಟಲು, ಹಳೆ ಮದ್ಯ?

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಓದಲೇಬೇಕಾದಂತಹ ಕೃತಿಗಳನ್ನು ಆಯ್ಕೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಮೇರು ಕೃತಿ’ ಯೋಜನೆಯಡಿ ಕಡಿಮೆ ಬೆಲೆಯಲ್ಲಿ ಓದುಗರಿಗೆ ನೀಡಲು ತಯಾರಿ ನಡೆಸುತ್ತಿದೆ.ಈಗಾಗಲೇ ಈ ಕೃತಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಚ್ಚಿನ ಕಾರ್ಯ ಆರಂಭಿಕ ಹಂತದಲ್ಲಿದೆ. ಆದರೆ ಈ ಕೃತಿಗಳ ಆಯ್ಕೆಗೆ ಅನುಸರಿಸಲಾಗಿರುವ ಮಾನದಂಡದ ಕುರಿತು ಸ್ಪಷ್ಟತೆ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿದೆ.

ನಾಡಿನ ಪ್ರಮುಖ ನೂರು ಸಾಹಿತಿಗಳ ಆಯ್ದ ಒಂದೊಂದು ಕೃತಿಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಕಟಿಸಲಾಗುತ್ತಿದ್ದು, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಹಾಗೂ ಆಧುನಿಕ ಸಾಹಿತ್ಯ ಪ್ರಕಾರಗಳನ್ನು ಹೊರತರುವುದು ಈ ಯೋಜನೆಯ ಆಶಯವಾಗಿದೆ.

ಕವಿರಾಜಮಾರ್ಗ, ವಡ್ಡಾರಾಧನೆ, ಸೋಮೇಶ್ವರ ಶತಕ, ಜೈಮಿನಿಭಾರತ, ಶಿಶುನಾಳ ಶರೀಫರ ಸಮಗ್ರ ಗೀತೆಗಳು, ರಾಮಾಯಣ ದರ್ಶನಂ, ಚಿದಂಬರ ರಹಸ್ಯ, ಗೃಹಭಂಗ, ಹಸಿರು ಹೊನ್ನು, ಹಂಸಗೀತೆ, ಗಂಗವ್ವ ಗಂಗಾಮಾಯಿ, ಕುಸುಮಬಾಲೆ, ಗ್ರೀಕ್ ನಾಟಕ ಮತ್ತು ರಂಗಭೂಮಿ, ತೇರು, ಅರಮನೆ, ಬದುಕು, ತೇರು, ಸಂಜೆ ಐದರ ಮಳೆ, ಶಾಲ್ಮಲಿ, ಗೌರ್ನಮೆಂಟ್ ಬ್ರಾಹ್ಮಣ ... ಹೀಗೆ ಕೃತಿಗಳ ಪಟ್ಟಿ ಸಾಗುತ್ತದೆ.

ಈ ಕೃತಿಗಳ ಆಯ್ಕೆಗಾಗಿ ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯೊಂದನ್ನು ರಚಿಸಲಾಗಿದೆ. ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ, ಹಂಪಿ ವಿವಿಯ ನಿವೃತ್ತ ಕುಲಪತಿ ಡಾ. ಎಚ್.ಜಿ. ಲಕ್ಕಪ್ಪಗೌಡ, ಡಾ. ಹಂ.ಪ. ನಾಗರಾಜಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಪಿ.ಎಸ್. ಶಂಕರ್, ಸಾರಾ ಅಬೂಬಕ್ಕರ್, ಪ್ರಧಾನ ಗುರುದತ್, ಅರವಿಂದ ಮಾಲಗತ್ತಿ, ಪ್ರೊ. ದೊಡ್ಡರಂಗೇಗೌಡ ಅವರು ಸಮಿತಿಯ ಸದಸ್ಯರ ಪಟ್ಟಿಯಲ್ಲಿದ್ದಾರೆ.

ಸುಮಾರು ಒಂದೂವರೆ ವರ್ಷದಿಂದ ಈ ಸಮಿತಿಯು ಮೇರು ಕೃತಿಗಳ ಪ್ರಕಟಣೆಗೆ ಸಂಬಂಧಿಸಿದ ಕಾರ್ಯ-ಚಟುವಟಿಕೆಗಳಲ್ಲಿ ನಿರತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಖಾಸಗಿ ಪ್ರಕಾಶನದವರು ಈಗಾಗಲೇ ಪ್ರಕಟಿಸಿದ ಕೃತಿಗಳನ್ನೇ ಇಲಾಖೆ ಹೊರತರುತ್ತಿದೆ.

‘ಸಾಹಿತ್ಯ ಪರಂಪರೆಯಲ್ಲಿ ಕನ್ನಡಿಗರು ಓದಲೇಬೇಕಾದ ಪುಸ್ತಕಗಳನ್ನು ಪಟ್ಟಿ ಮಾಡಿ, ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡುವುದು ಈ ಹೊಸ ಯೋಜನೆಯ ಉದ್ದೇಶ’ ಎಂದು ಕೃತಿಗಳ ಆಯ್ಕೆ ಸಮಿತಿಯ ಅಧ್ಯಕ್ಷ ಪ್ರೊ. ಎಲ್.ಎಸ್. ಶೇಷಗಿರಿರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮಿತಿಯ ಎಲ್ಲ ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರವೇ ಕೃತಿಗಳ ಬಗ್ಗೆ ತೀರ್ಮಾನಿಸಲಾಗಿದೆ. ಹೀಗೆ ಚರ್ಚಿಸುವಾಗ ಒಬ್ಬೊಬ್ಬರದು ಒಂದೊಂದು ರೀತಿಯ ಅಭಿಪ್ರಾಯ, ಸಮರ್ಥನೆಗಳಿರುತ್ತವೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಮೇರುಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಕೃತಿಕಾರರ, ಪ್ರಕಾಶಕರ ಹಾಗೂ ಸಂಬಂಧಿಸಿದವರ ಒಪ್ಪಿಗೆಯ ಮೇರೆಗೆ ಮುನ್ನಡೆಯಲಾಗಿದೆ’ ಎಂದರು.

ಸದಸ್ಯರಿಗೇ ಗೊತ್ತಿಲ್ಲ...!: ಆದರೆ ಸಮಿತಿಯ ಸದಸ್ಯರಲ್ಲೊಬ್ಬರಾದ ಡಾ. ಚಂದ್ರಶೇಖರ ಕಂಬಾರ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ‘ಹೌದೆ? ಈ ಸಮಿತಿಯಲ್ಲಿ ನನ್ನ ಹೆಸರೂ ಇದೆಯೇ? ನನಗೇ ಗೊತ್ತಿಲ್ಲವಲ್ಲ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಅದೇ ರೀತಿ ಈ ಯೋಜನೆಯಡಿ ಡಾ. ರಾಜೇಂದ್ರ ಚೆನ್ನಿ ಅವರ ಪುಸ್ತಕವೂ ಆಯ್ಕೆಯಾಗಿದ್ದರ ಬಗ್ಗೆ ಅವರಿಗೇ ಮಾಹಿತಿ ಇಲ್ಲ. ‘ನನ್ನ ಪುಸ್ತಕ ಆಯ್ಕೆ ಮಾಡಿಕೊಂಡಿದ್ದಾರೆಯೆ? ಈ ವಿಷಯ ನನಗೆ ಗೊತ್ತಿಲ್ಲ ಬಿಡಿ’ ಎಂದರು.

ಉಳಿದ ಆಯ್ಕೆ ಸದಸ್ಯರ ಸಮ್ಮುಖದಲ್ಲಿ 100 ‘ಮೇರು ಕೃತಿ’ಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ಪ್ರಾಥಮಿಕ ಹಂತದ ಮುದ್ರಣ ಕಾರ್ಯ ಆರಂಭವಾಗಿದ್ದರೂ ಆ ಕೃತಿಗಳ ಆಯ್ಕೆಗೆ ಇದ್ದ ಮಾನದಂಡದ ಬಗ್ಗೆ ಸ್ಪಷ್ಟತೆ ಕಂಡುಬಂದಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ಯೋಜನೆಗೆ ಇಟ್ಟ ಹೆಸರು ಹಾಗೂ ಅದರಡಿ ನಿರೂಪಿಸ ಹೊರಟಿರುವ ರೂಪುರೇಷೆಗೂ ಸಾಮ್ಯತೆಯಾಗಲಿ, ಸಮರ್ಪಕತೆ ಅಷ್ಟಾಗಿ ಹೊಂದಾಣಿಕೆಯಾಗುತ್ತಿಲ್ಲ.

ಹೊಸ ಯೋಜನೆಯೆ?: ಈ ಪೈಕಿ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ‘ಪುಸ್ತಕ ಪ್ರಕಟಣೆ ಅಡ್ಡಿಯಿಲ್ಲ. ಮರುಮುದ್ರಣವೂ ಸರಿ. ಆದರೆ ಹೊಸ ಬಾಟಲಿಯಲ್ಲಿ ಹಳೆಯ ಮದ್ಯವನ್ನು ಹಾಕಿಕೊಟ್ಟಂತಾಗಿದೆಯಲ್ಲ ಈ ಯೋಜನೆ? ಇದರಲ್ಲಿ ಹೊಸತಾಗಲಿ, ವಿಶೇಷವಾಗಲಿ ಏನಿದೆ? ‘ಮೇರು ಕೃತಿ’ಯ ಆಯ್ಕೆಯ ಮಾನದಂಡ ಏನಾಗಿತ್ತು ಎನ್ನುವುದರಲ್ಲೇ ಗೊಂದಲಗಳಿವೆ. ಇದು ಹಳೇ ಯೋಜನೆಗೆ ಹೊಸ ಹೆಸರಷ್ಟೇ’ ಎಂದರು.

‘ಆಧುನಿಕ ಸಂದರ್ಭದಲ್ಲಿ ಮೇರು ಕೃತಿ ಎಂದು ಗುರುತಿಸುವುದೇ ಕಷ್ಟಕರ. ಒಂದು ಕೃತಿಯನ್ನು ಮೇರು ಎಂದು ಗುರುತಿಸುವುದರ ಜತೆಗೆ ಅದನ್ನು ಯಾಕೆ ಮರುಮುದ್ರಿಸಲಾಗುತ್ತಿದೆ ಎಂದು ಯೋಚಿಸಿ ನಿರ್ಧರಿಸಬೇಕು. ಇದೆಲ್ಲ ಯೋಚಿಸಿ ನಿರ್ಧರಿಸಲಾಗಿದೆ ಎಂದಾದಲ್ಲಿ ಕೊನೆಪಕ್ಷ ಆಯಾ ಸಾಹಿತಿಗಳು ಗುರುತಿಸಿಕೊಂಡ ಸಾಹಿತ್ಯ ಪ್ರಕಾರದಿಂದ ಕೃತಿಯನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಮೇರು’ ಎಂಬ ಗೊಂದಲ: ‘ಕನ್ನಡ ಸಾಹಿತ್ಯ ಪರಿಷತ್ತು ಕೂಡ ಮೇರು ಕೃತಿಗಳನ್ನು ಬಿಡಿಬಿಡಿಯಾಗಿ ಪ್ರಕಟಿಸಿದೆ. ಅಲ್ಲದೆ ಖಾಸಗಿ ಪ್ರಕಾಶನಗಳೂ ಪ್ರಕಟಿಸಿವೆ. ಹಾಗಿದ್ದರೆ ಆ ಎಲ್ಲ ಮೇರು ಕೃತಿ ಪ್ರತಿಗಳೂ ಮುಗಿದು ಹೋಗಿವೆಯೇ?’ ಎಂದು ಸಂಶಯ ವ್ಯಕ್ತಪಡಿಸಿದ ಅವರು, ತನ್ನ ಕೃತಿಯನ್ನೇ ‘ಮೇರು’ ಎಂದು ಹೇಳಿಕೊಳ್ಳುವುದು ಅಥವಾ ಪರಿಗಣಿಸುವುದು ಸಾಹಿತಿಯಾದವನಿಗೆ ಸಂಕೋಚಕ್ಕೆ ಈಡುಮಾಡುವ ವಿಷಯ. ಆದರೂ ಸಮಿತಿಯಲ್ಲಿರುವ ‘ಕೆಲ’ ಸಾಹಿತಿಗಳ ಕೃತಿಗಳು ಖಂಡಿತ ‘ಮೇರು’ ಎನ್ನಿಸಿಕೊಳ್ಳುವಲ್ಲಿ ಎರಡು ಮಾತಿಲ್ಲ ಎಂದರು.

ಆಯಾ ಸಾಹಿತಿಗಳು ಗುರುತಿಸಿಕೊಂಡಿರುವ ಪ್ರಕಾರಗಳ ಕೃತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ‘ಮೇರು’ ಎಂಬ ಶಬ್ದಕ್ಕೆ ನಿಜ ಅರ್ಥದಲ್ಲಿ ಮೆರುಗು ಮೂಡುತ್ತಿತ್ತಲ್ಲವೆ ಎಂದು ಶೇಷಗಿರಿರಾವ್ ಅವರನ್ನು ಪ್ರಶ್ನಿಸಿದಾಗ, ‘ಕೆಲ ಕೃತಿಗಳ ಹಕ್ಕುಸ್ವಾಮ್ಯ ವಿಷಯದಲ್ಲಿ ತೊಂದರೆ ಉಂಟಾಗಿದ್ದರಿಂದ ಅವುಗಳನ್ನು ಬಿಟ್ಟು ಅದೇ ಲೇಖಕರ ಬೇರೆ ಕೃತಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಆಯ್ಕೆ ಸಮಿತಿಯ ಸದಸ್ಯರೆಲ್ಲ ಕನ್ನಡಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದರಿಂದ ಅವರ ಕೃತಿಗಳನ್ನೂ ಈ ಯೋಜನೆಯಡಿ ಸೇರಿಸಿಕೊಳ್ಳಲಾಯಿತು’ ಎಂದು ಹೇಳಿದರು.

ವರ್ಷಾಂತ್ಯದೊಳಗೆ ಓದುಗರ ಕೈಗೆ..: ಇಲಾಖೆಯ ನಿರ್ದೇಶಕ ಮನು ಬಳಿಗಾರ, ‘ಇದೊಂದು ಹೊಸ ಯೋಜನೆ. ಈ ಹಿಂದೆ ಬಿಡಿಬಿಡಿಯಾಗಿ ಪ್ರಕಟಿಸಿದ ಕೃತಿಗಳನ್ನೇ ಇಲಾಖೆ ಪ್ರಕಟಿಸುತ್ತಲಿದೆ. ಬೆಲೆಯನ್ನು ನಿಖರವಾಗಿ ಹೇಳಲಾಗದು. ಒಟ್ಟಿನಲ್ಲಿ ಆದಷ್ಟು ಕಡಿಮೆ ಬೆಲೆಯಲ್ಲಿ ವರ್ಷಾಂತ್ಯದೊಳಗೆ ಈ ನೂರು ಮೇರುಕೃತಿಗಳು ಓದುಗನನ್ನು ತಲುಪಲಿವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಮೇರು ಕೃತಿ’ ಯೋಜನೆಯಡಿ ಪ್ರಕಟಿಸುತ್ತಿರುವ ಕೆಲ ಕೃತಿಗಳ ವಿವರ...

ಡಾ. ಯು.ಆರ್. ಅನಂತಮೂರ್ತಿ-‘ಪ್ರಶ್ನೆ’. ಪು.ತಿ.ನ-‘ಸಮಗ್ರ ಪ್ರಬಂಧ’, ಡಾ. ಚಂದ್ರಶೇಖರ ಕಂಬಾರ-‘ಚಕೋರಿ’, ಎ.ಎನ್. ಮೂರ್ತಿರಾವ್-‘ಚಿತ್ರಗಳು, ಪತ್ರಗಳು’, ಪ್ರೊ. ದೇ. ಜವರೇಗೌಡ- ‘ಶ್ರೀ ರಾಮಾಯಣ ದರ್ಶನಂ-ವಚನಚಂದ್ರಿಕೆ’, ಯಶವಂತ ಚಿತ್ತಾಲ- ‘ಆಟ’, ಡಾ. ಹಂ.ಪ. ನಾಗರಾಜಯ್ಯ- ‘ಪಂಪ’.

ಮಾಸ್ತಿ ವೆಂಕಟೇಶ್ ಅಯ್ಯಂಗಾರ್-‘ಆದಿಕವಿ ವಾಲ್ಮೀಕಿ’, ಡಾ. ಜಿ.ಎಸ್.ಆಮೂರ- ‘ಭುವನದ ಭಾಗ್ಯ’, ಡಾ. ಎಚ್.ಎಲ್. ನಾಗೇಗೌಡ- ‘ಬೆಟ್ಟದಿಂದ ಬಯಲಿಗೆ’, ಸಿದ್ಧಲಿಂಗ ಪಟ್ಟಣಶೆಟ್ಟಿ-‘ಆಯ್ದ ಕವಿತೆಗಳು’, ಡಾ. ಸಿದ್ಧಲಿಂಗಯ್ಯ-‘ಸಮಗ್ರ ಕಾವ್ಯ’, ಡಾ. ರಾಜೇಂದ್ರ ಚೆನ್ನಿ-’ಆಯ್ದ ವಿಮರ್ಶಾ ಲೇಖನಗಳು’ ಇತ್ಯಾದಿ...


-ಶ್ರೀದೇವಿ ಕಳಸದ,13-08-2010 ರಂದು ’ಪ್ರಜಾವಾಣಿ’ಯಲ್ಲಿ ಪ್ರಕಟಿತ ವರದಿ.

4 comments:

sunaath said...

ಶ್ರೀದೇವಿ,
ಬ್ಲಾಗ್ ಬರಹಕ್ಕೆ ಇಷ್ಟೇಕೆ ವಿಳಂಬಿಸಿದಿರಿ? ಇರಲಿ, ಯೋಜನೆಯೊಂದರ ವಿವರಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’, ರಾವಬಹಾದ್ದೂರರ ‘ಗ್ರಾಮಾಯಣ’ ಹಾಗು ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಈ ಪಟ್ಟಿಯಲ್ಲಿ ಇಲ್ಲವೆ?

ಆಲಾಪಿನಿ said...

@ ಸುನಾಥ ಅಂಕಲ್‌, ರಿಪೋರ್ಟಿಂಗ್‌ ಸೆಕ್ಷನ್‌ನಲ್ಲಿದ್ದುದರಿಂದ ಈಗೀಗ ಅಪ್‌ಡೇಟ್‌ ಮಾಡಲು ಆಗತ್ತಿಲ್ಲ:)
ಪ್ರಸ್ತುತ ವರದಿಯನ್ನು ನಿಮ್ಮೆಲ್ಲರ ಗಮನಕ್ಕೆ ತರುವುದು ನಮ್ಮ (ಪತ್ರಕರ್ತರ)ಕೆಲಸ. ಸದ್ಯಕ್ಕೆ ಅಷ್ಟು ಮಾಡಲಾಗಿದೆ. ನಿಮಗಿರುವ ಪ್ರಶ್ನೆ, ಕುತೂಹಲ ನನ್ನಲ್ಲೂ ಇದ್ದಿದ್ದಕ್ಕೆ ಈ ಯೋಜನೆ ಕುರಿತು ಬರೆಯಬೇಕಾಯಿತು. ಆಯಾ ಸಾಹಿತಿಗಳ ಮೇರುಕೃತಿಗಳ ಬಗ್ಗೆ ಕೆಲ ಪ್ರಮುಖ ಸಾಹಿತಿಗಳೊಂದಿಗೆ ಪರೋಕ್ಷವಾಗಿ ಚರ್ಚಿಸಲಾಗಿತ್ತು. ಅದನ್ನೆಲ್ಲ ಪ್ರಕಟಿಸಲು ಜಾಗದ ಕೊರತೆ... ಆದರೆ ನನಗದು ಒಂದು ರೀತಿ ಬ್ಯಾಕ್‌ಗ್ರೌಂಡ್‌ ಸ್ಟಡಿಗೆ ಸಹಾಯವಾಯಿತು.”ಮಲೆಗಳಲ್ಲಿ ಮದುಮಗಳು’ ಕಾಪಿರೈಟ್‌ ಸಮಸ್ಯೆಯಂತೆ. ಇನ್ನು ಶಿವರಾಮ ಕಾರಂತರ ಸಂಪುಟಗಳನ್ನು ಇಲಾಖೆ ತರುತ್ತಿದೆಯಂತೆ. ಆಮೇಲೆ ಗ್ರಾಮಾಯಣ ಮೇರುಕೃತಿ ಪಟ್ಟಿಯಲ್ಲಿ ಇಲ್ಲ

ವಿ.ರಾ.ಹೆ. said...

ಮೇರಾಗಲಿ ಮರಿಯಾಗಲೀ ನಮಗೆ ಕಡಿಮೆ ಬೆಲೆಯಲ್ಲಿ ಕೃತಿಗಳು ಓದಲು ಸಿಕ್ಕರೆ ಅದೇ ಸಂತೋಷ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಧನ್ಯವಾದ ಹೇಳಬೇಕು. ಮೊಸರಲ್ಲಿ ಕಲ್ಲು ಹುಡುಕೋದ್ಯಾಕೆ !

ಆಲಾಪಿನಿ said...

ಹಂಗಂತೀಯೇನೋ..? ನಿನಗೆ ಜೈ..