Sunday, August 15, 2010

ಗಮಕಯೋಗಿಯೊಂದಿಗೆ...ನಮ್ಮದು ಹಳ್ಳಿ ಮನೆ. ಒಂದೊಂದಕ್ಕೆ ಒಂದೊಂದು ಜಾಗ. ಅಭ್ಯಾಸಕ್ಕೆ ಒಂದು ಕೋಣೆ, ಮಲಗಲು ಮತ್ತೊಂದು.. ಅವಳಿಗೂ ಗಮಕದ ಹದ ಗೊತ್ತು. ರುಚಿಯೂ. ಆದರೆ ವಾಚಿಸುವುದಿಲ್ಲವಷ್ಟೇ. ಇಷ್ಟು ವರ್ಷಗಳಾದರೂ ತಕರಾರೇ ಇಲ್ಲ. ಕಾರ್ಯಕ್ರಮಗಳಿಗೆ ಬಿಟ್ಟು ಹೋದರೂ ಕೋಪಿಸಿಕೊಂಡಿದ್ದಂತೂ ಊಂ ಹೂ....

-------------------

೨೦೧೦ನೇ ಸಾಲಿನ ಕುಮಾರವ್ಯಾಸ ಪ್ರಶಸ್ತಿ ಗಮಕಿ ಹೊಸಹಳ್ಳಿ ಕೇಶವಮೂರ್ತಿ ಅವರನ್ನು ಅರಸಿ ಬಂದಿದೆ. ಗಮಕ ಕಲೆಯನ್ನು ಜೀವಂತವಾಗಿ ಇಟ್ಟ, ಜನರ ಆಸಕ್ತಿಯನ್ನು ಕನ್ನಡ ಕಾವ್ಯದ ಕುರಿತಂತೆ ಹಿಡಿದಿಟ್ಟ ಹಿರಿಯ ಗಮಕಿಗಳಲ್ಲಿ ಅವರೂ ಒಬ್ಬರು. ಇಲ್ಲಿ ತಮ್ಮ ಗಮಕ ಜೀವನದ ಬಗ್ಗೆ ಮಾತನಾಡಿದ್ದಾರೆ.

ಹೊಸಹಳ್ಳಿ-ಮತ್ತೂರು ಮಧ್ಯೆ ತಾಯ ಮಮತೆಯಂತೆ ಹರಿಯುವ ತುಂಗೆಯೇ ಬಾಲಕ ಕೇಶವನಿಗೆ ಸಂಗೀತ ಮಾತೆ. ಅವಳ ಲಯ-ಗತಿಗೆ, ಕಾವ್ಯದ ರಸಕ್ಕೆ ರಾಗಗಳನ್ನು ಹೊಸೆಯುತ್ತ ಪಂಪ, ರನ್ನ, ಕುಮಾರವ್ಯಾಸ ಕಾವ್ಯಗಳನ್ನು ಗಮಕ ಶೈಲಿಯಲ್ಲಿ ಹಾಡುವ ಕಲೆ ಕೇಶವನಿಗೆ ಬಾಲ್ಯದಲ್ಲೇ ಸಿದ್ಧಿಸಿತ್ತು. ಅತ್ತ ಹೈಸ್ಕೂಲು ಕಟ್ಟೆ ಏರುವ ಹೊತ್ತಿಗೆ ಗಮಕ ವಾಚನಕ್ಕಾಗಿ ಸಾರ್ವಜನಿಕ ವೇದಿಕೆಗಳನ್ನು ಏರುವ ಅವಕಾಶಗಳೂ ಅವನನ್ನು ಹುಡುಕಿಕೊಂಡು ಬಂದವು...

ಹಗಲು ಹೊತ್ತು ಉತ್ತು-ಬಿತ್ತುವ ಕೆಲಸ. ಇರುಳು ಹನ್ನೊಂದರಿಂದ ಕಾವ್ಯದ ಆಸ್ವಾದನೆ, ರಸಸಿದ್ಧಾಂತದೊಂದಿಗೆ ಗಮಕ ಕಲೆಯ ಕುಸುರಿ ಕೆಲಸ. ಯುವಕ ಕೇಶವನಿಗೆ ಕಲಾದೇವಿಯೊಂದಿಗೆ ‘ಲಕ್ಷ್ಮೀದೇವಿ’ಯೂ ಒಲಿದುಬಂದಳು. ಈ ದಾಂಪತ್ಯಕ್ಕೆ ‘ಉಷೆ’ ಬೆಳಕು ಚೆಲ್ಲಿದಳು. ಕೇಶವಮೂರ್ತಿಗಳ ಕಾಯಕ ಮುಂದುವರಿಯಿತು... ಆಳಿನೊಂದಿಗೆ ಆಳಾಗಿ ವಸುಂಧರೆಯ ಸೇವೆ; ಕಾವ್ಯ-ರಸದೊಂದಿಗೆ ಸರಸ್ವತಿಯ ಪಾದಸೇವೆ...

ಪ್ರಸಕ್ತ ಸಾಲಿನ ಕುಮಾರವ್ಯಾಸ ಪ್ರಶಸ್ತಿ ಗಮಕಿ ಹೊಸಹಳ್ಳಿ ಕೇಶವಮೂರ್ತಿ ಅವರನ್ನು ಅರಸಿ ಬಂದಿದೆ. ಈ ಸಂದರ್ಭದಲ್ಲಿ ‘ಸಾಪ್ತಾಹಿಕ’ ದೊಂದಿಗೆ ಅವರು ತಮ್ಮ ‘ಗಮಕ-ಜೀವನ’ದ ಬಗ್ಗೆ ಮೆಲುಕು ಹಾಕಿದ ಛಾಯೆಯಷ್ಟೇ ನಿಮ್ಮಮುಂದೆ...

* ನಿಮ್ಮ ಬಾಲ್ಯ...
ಅಪ್ಪ ಸಂಸ್ಕೃತ ಪುರಾಣ ವಾಚಕರು. ಅಣ್ಣ ಸಂಗೀತ ವಿದ್ವಾಂಸ. ಹೀಗಾಗಿ ಸಂಗೀತ ಪರಿಸರದಲ್ಲೇ ಬೆಳೆದೆ. ಗಮಕವಾಚನ ಎಲ್ಲೇ ನಡೆದರೂ ಲಕ್ಷ್ಯಗೊಟ್ಟು ಆಲಿಸುವುದೇ ಬಾಲ್ಯಕಾಲದ ‘ಆಟ’ವಾಗಿತ್ತು. ನಂತರ ಕುಪ್ಪಳಿಯ ವೆಂಕಟೇಶಯ್ಯನವರಲ್ಲಿ ಗಮಕಾಭ್ಯಾಸ ಮುಂದುವರಿಸಿದೆ.

* ಗಮಕ-ಕಲಾಸಮಯ-ಪ್ರಯೋಗ..

ಇಡೀ ದಿನ ತೋಟದಲ್ಲಿ ಕೆಲಸ. ರಾತ್ರಿ ಹನ್ನೊಂದರಿಂದ 1 ಗಂಟೆವರೆಗೆ ಗಮಕ ಅಭ್ಯಾಸ. ರನ್ನ, ಪಂಪರ ಮಹಾಕಾವ್ಯಗಳಿಗಿಂತ ಕುಮಾರವ್ಯಾಸ ಕಾವ್ಯವನ್ನೇ ವಾಚಿಸಿದ್ದು ಹೆಚ್ಚು. ಶಂಕರಾಭರಣ, ಕಲ್ಯಾಣಿ, ತೋಡಿ, ಹಂಸಧ್ವನಿ, ಮೋಹನ ಇತ್ಯಾದಿ ಹದಿನೈದಿಪ್ಪತ್ತು ರಾಗಗಳಿಗೆ ಸೀಮಿತವಾಗಿದ್ದ ಗಮಕ ವಾಚನವನ್ನು ಕಾವ್ಯದ ರಸಕ್ಕೆ ತಕ್ಕಂತೆ ಹೊಸ ರಾಗಗಳನ್ನು ಸಂಯೋಜಿಸಿ ಹಾಡುತ್ತ ಬಂದೆ.

* ನಿಮ್ಮ ‘ಕಲಾಸಮಯ’ ಪತ್ನಿ ಲಕ್ಷ್ಮೀದೇವಿಯವರ ಮುನಿಸಿಗೆ ಎಡೆಮಾಡಿಕೊಡಲಿಲ್ಲವೆ?

ನಮ್ಮದು ಹಳ್ಳಿ ಮನೆ. ಒಂದೊಂದಕ್ಕೆ ಒಂದೊಂದು ಜಾಗ. ಅಭ್ಯಾಸಕ್ಕೆ ಒಂದು ಕೋಣೆ, ಮಲಗಲು ಮತ್ತೊಂದು.. ಅವಳಿಗೂ ಗಮಕದ ಹದ ಗೊತ್ತು. ರುಚಿಯೂ. ಆದರೆ ವಾಚಿಸುವುದಿಲ್ಲವಷ್ಟೇ. ಇಷ್ಟು ವರ್ಷಗಳಾದರೂ ತಕರಾರೇ ಇಲ್ಲ. ಕಾರ್ಯಕ್ರಮಗಳಿಗೆ ಬಿಟ್ಟು ಹೋದರೂ ಕೋಪಿಸಿಕೊಂಡಿದ್ದಂತೂ ಊಂ ಹೂ....

* ಮತ್ತೂರು ಮತ್ತು ನೀವು...
ಮತ್ತೂರು ಕೃಷ್ಣಮೂರ್ತಿಯವರು ಲಂಡನ್‌ನಿಂದ ಭಾರತಕ್ಕೆ ಬಂದಾಗಲೆಲ್ಲ ನನ್ನ ಗಮಕ ವಾಚನಕ್ಕೆ ಕಿವಿಯಾಗುತ್ತಿದ್ದರು. ನಂತರ ಅವರು ಶಾಶ್ವತವಾಗಿ ಭಾರತಕ್ಕೇ ಮರಳಿದರು. ಆಗ ಅವರಿಗೆ 55 ವಯಸ್ಸಿದ್ದಿರಬೇಕು. ಆಗ... ಅವರಿಗೆ ಗಮಕ ವ್ಯಾಖ್ಯಾನದ ಖಯಾಲಿ ಶುರುವಾಯಿತು! ನಂತರ ಸಾಕಷ್ಟು ಕಡೆ ವ್ಯಾಖ್ಯಾನ-ವಾಚನ ಒಟ್ಟಾಗಿ ನಡೆಸಿದೆವು. ಈಗಲೂ ನಡೆಸುತ್ತಿದ್ದೇವೆ. ಎಚ್‌ಎಂವಿ ಕೆಸೆಟ್ ಕಂಪೆನಿಯವರ 200 ಕೆಸೆಟ್‌ಗಳಲ್ಲಿ ವ್ಯಾಖ್ಯಾನಿಸಿ-ವಾಚಿಸಿದ್ದೇವೆ. ಟಿವಿ, ರೇಡಿಯೋ ಕಾರ್ಯಕ್ರಮ ಎಂದು ಬೆಂಗಳೂರಿಗೆ ತಿಂಗಳಿಗೆರಡು ಮೂರು ಬಾರಿ ಪ್ರಯಾಣ...

* ನಿಮ್ಮ ಪ್ರಕಾರ ಗಮಕ ಕಲೆಯ ವೈಶಿಷ್ಟ್ಯ?
ಪರಭಾರೆಗೆ ಸಾಧ್ಯವಾಗದ ಕನ್ನಡದ ಏಕೈಕ ಕಲೆ ಎಂದರೆ ಗಮಕ. ಭಾಷೆಯೇ ಇದಕ್ಕೆ ಮಿತಿ. ಕನ್ನಡದ ಕಾವ್ಯವೇ ಇದಕ್ಕೆ ಅಂತಃಸ್ಸತ್ವ. ಆದರೂ ಪ್ರಯೋಗಾರ್ಥವಾಗಿ ಅಲಹಾಬಾದಿನಲ್ಲಿ ಕನ್ನಡದಲ್ಲೇ ಕಾವ್ಯ ವಾಚಿಸಿದೆ. ಮತ್ತೂರು ಅದಕ್ಕೆ ಹಿಂದಿಯಲ್ಲಿ ವ್ಯಾಖ್ಯಾನಿಸಿದರು. ಆದರೂ ಕನ್ನಡದ ಕಂಪೇ ಕಂಪು. ತಂಪು, ಇಂಪು ಎಲ್ಲವೂ....

* ಬೇಸರವೇನು? ಖುಷಿ ಏನು?

ಗಮಕ ಕಲೆಯ ಬಗ್ಗೆ ಜನರಿಗೆ ನಿರಾಸಕ್ತಿ. ನೂರಾರು ಶಿಷ್ಯರಿದ್ದರೂ ಮುಂದುವರಿಸಿಕೊಂಡು ಹೋಗುತ್ತಿಲ್ಲ. ಅದರಲ್ಲೂ ಗಂಡು ಮಕ್ಕಳು ಗಮಕದ ಕಡೆ ತಲೆಯೇ ಹಾಕುತ್ತಿಲ್ಲ. ಇನ್ನು ಹೆಣ್ಣುಮಕ್ಕಳು ಕಾಲೇಜು ಮೆಟ್ಟಿಲು ಹತ್ತುವುದರೊಳಗೆ ಅವರ ಆಸಕ್ತಿಗಳೇ ಬದಲಾಗಿ ಬಿಟ್ಟಿರುತ್ತವೆ. ಒಂದುವೇಳೆ ಕಲಿಕೆ ಮುಂದುವರಿಸಿದರೂ ಮದುವೆಯಾದ ನಂತರ ತಕ್ಕ ಪರಿಸರದ ಕೊರತೆ. ಆದರೂ ದೆಹಲಿಯಲ್ಲಿ ಜಲಜಾ, ಚಿತ್ರದುರ್ಗದಲ್ಲಿ ಚಂಪಾ ಹಾಗೂ ಸನತ್‌ಕುಮಾರ್, ಅನಂತನಾರಾಯಣ ಈ ಕಲೆಯನ್ನು ಕಲಿಯುತ್ತ, ಕಲಿಸುತ್ತ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

* ಕಲೆಯ ಉಳಿವಿಗಾಗಿ...
ಪ್ರಾಥಮಿಕ ಶಾಲೆಯಿಂದಲೇ ಪಠ್ಯದಲ್ಲಿ ಗಮಕ ಕಲೆ ಅಳವಡಿಕೆ. ವಾರಕ್ಕೆ ಎರಡು-ಮೂರು ಸಲವಾದರೂ ಮಕ್ಕಳು ಗಮಕ ವಾಚನ ಕೇಳಿದಲ್ಲಿ ಆಸಕ್ತಿ ಬೆಳೆಯುವುದೋ..? ಪ್ರಯತ್ನಿಸಿ ನೋಡಬೇಕು.... ಹೊಸಹಳ್ಳಿಯಲ್ಲಿ ಈಗಲೂ ‘ಹೊಸಹಳ್ಳಿ ಗಮಕ ಕಲಾ ಪರಿಷತ್ತು’ ಪ್ರತಿ ವರ್ಷ ಸಪ್ತಾಹ ಆಚರಿಸುತ್ತದೆ. ಸ್ಥಳೀಯರೊಂದಿಗೆ ಹೊರ ಊರುಗಳ ಗಮಕ ಕಲಾವಿದರೂ ಇಲ್ಲಿಗೆ ಬಂದು ಸೇವೆ ಸಲ್ಲಿಸುತ್ತಾರೆ.

* 76ರ ಇಳಿವಯಸ್ಸಿನಲ್ಲೂ ಗಮಕ ಸೇವೆ...?
ನಿಲ್ಲಿಸುವುದೆಂತು ಮಾರಾಯರೆ? ಆಸಕ್ತಿಯಿಂದ ಆಲಿಸುವ ಯಾರೇ, ಎಲ್ಲೇ ಕರೆದರೂ, ‘ಕಾಂಚಾಣ’ ಲೆಕ್ಕಿಸದೆ ಕಲಾಸೇವೆಗೆ ಸೈ....
----------------------
ಶ್ರೀದೇವಿ ಕಳಸದ, ’ಪ್ರಜಾವಾಣಿ’ ಸಾಪ್ತಾಹಿಕದಲ್ಲಿ 20-6-2010 ಪ್ರಕಟ.

2 comments:

sunaath said...

ಶ್ರೀದೇವಿ,
ಪುಂಖಾನುಪುಂಖವಾಗಿ, ಸಾಧಕರ ಪರಿಚಯ ಮಾಡಿಕೊಡುತ್ತಿದ್ದೀರಿ. ಇಷ್ಟು ದಿನಗಳ ನಿಮ್ಮ ಬ್ಲಾಗ್-ಕೊರರೆಯನ್ನು ತುಂಬುತ್ತಿದ್ದೀರಿ. ಉತ್ತಮ ಲೇಖನಕ್ಕಾಗಿ ಅಭಿನಂದನೆಗಳು.

ವಿ.ಆರ್.ಭಟ್ said...

Very Good Sridevi Madam, Thanks