Sunday, August 15, 2010

ಪ್ರಸಾಧನ ಕಲೆಯ ಹಿರಿತಲೆ ಮಹಾಲೆ
ನರನಾಡಿಗಳಲ್ಲಿ ಲಯ, ಬೆರಳುಗಳಲ್ಲಿ ಕೌಶಲ್ಯ. ಕಾಯಕ ತತ್ವವೇ ಅಡಿಪಾಯ. ಸ್ವಾಭಿಮಾನ, ಸೇವಾಮನೋಭಾವದ ಈ ನಿರಂತರ ಕಲಾಯಾನದಲ್ಲಿ 2009ರ ಸಾಲಿನ ಮೇಕಪ್ ನಾಣಿ ಪ್ರಶಸ್ತಿ, ಮೈಲಿಗಲ್ಲಿನಂತೆ.


ಮಂದಿ ನಡಕೂ ಬೇಂದ್ರೆ. ಸ್ಟೇಜ್ ಮ್ಯಾಲೂ ಬೇಂದ್ರೆ...

ಮೇಕಪ್ ಎಲ್ಲಾ ಮುಗೀತು. ಥೇಟ್ ಬೇಂದ್ರೆ ಗೆಟಪ್‌ನ್ಯಾಗ ಶ್ರೀರಂಗರು ತಯಾರಾದ್ರು. ಆದ್ರ ಅವ್ರ ಹಾಕ್ಕೊಂಡಿದ್ ನೀಲಿ ಕೋಟ್, ಯಾಕೋ ಅಷ್ಟು ಹೊಂದಿಕಿ ಆಗಿರ್ಲಿಲ್ಲ. ಕರೀ ಕೋಟ್ ಹಾಕ್ಕೊಳ್ರಿ ಅಂತ ಅಷ್ಟ ದೊಡ್ಡಾವ್ರಿಗೆ ಹೇಳೂದರ ಹೆಂಗ? ‘ಹದಿಮೂರು’ ವರ್ಷದ ಮೇಕಪ್ ಮ್ಯಾನ್ ಕೊನೆಗೂ ಧೈರ್ಯಾ ಮಾಡಿ ಹೇಳೇಬಿಟ್ಟ. ಆಗ ಶ್ರೀರಂಗರು, ‘ಹಿಂಗಂತೀಯಾ’ ಅಂದಾವ್ರನ ಕರೀ ಕೋಟ್ ಹಾಕ್ಕೊಂಡ ಸ್ಟೇಜ್ ಮ್ಯಾಲ ನಡದಬಿಟ್ರು. ಸಭಾಮಂದಿಯೊಳಗಿದ್ದ ಬೇಂದ್ರೆ ತಮ್ಮ ಪಡಿಯಚ್ಚ ನೋಡಿದಾವ್ರನ ಕೂತಲ್ಲೇ ದಂಗ್!

ನಾಟಕ ಮುಗದ ಮ್ಯಾಲ, ‘ಯಾರ ಅಂವಾ? ಕರೀರಿ ಅಂವನ್ನ..’ ಅಂತ ಮೇಕಪ್ ಹುಡುಗನ್ನ ಕರೆಸಿದ ಬೇಂದ್ರೆ, ‘ತಮ್ಮಾ ನೀ ಹಿಂಗ ನನ್ನಗತೇನ ಇಮೇಜ್ ಮಾಡಬ್ಯಾಡೋಪಾ ನನಗ ಧಕ್ಕಿ ಆದಗೀದೀತು..’ ಅಂತ ನಗಚಾಟಕಿ ಮಾಡ್ಕೋತ ಡುಬ್ಬಾ ಚಪ್ಪರಿಸಿ, ಕೂಡಿದ ಮಂದೀಗೆ ಪರಿಚಯ ಮಾಡ್ಸಿದ್ರು.

ಧಾರವಾಡದ ಬಾಸೆಲ್ ಮಿಷನ್ ಶಾಲೆಯಲ್ಲಿ ಶ್ರೀರಂಗರು ‘ಸಂಸಾರ ನೌಕೆ’ ನಾಟಕ ಮಾಡುವಾಗಿನ ಈ ಘಟನೆಗೆ ಈಗ ಐವತ್ತೆಂಟು ವರ್ಷ. ಅಂದಿನ ‘ಛೋಟಾ’ ಮೇಕಪ್‌ಮ್ಯಾನ್ ಗಜಾನನ ಮಹಾಲೆಯವರ ದೇಹಕ್ಕೆಎಂಬತ್ತೊಂಬತ್ತಾದರೂ ಇವರ ಚೈತನ್ಯಕ್ಕೆ, ಸೈಕಲ್ಲಿಗೆ, ಇಪ್ಪತ್ತೇ. ಮೂತಿಗೆ ಮೇಕಪ್ ಕಿಟ್, ಕಿವಿಗೆ ಕ್ಷೌರದ ಚೀಲ, ಬೆನ್ನಿಗೆ ಹಾರ್ಮೋನಿಯಂ ಕಟ್ಟಿಕೊಂಡು ಒಮ್ಮೆ ಗಾಲಿಕಿತ್ತ ಇವರ ಸೈಕಲ್ ಮತ್ತೆ ಮರಳುವುದು ಊರೆಲ್ಲ ಕತ್ತಲ ತೋಳಿನೊಳಗೆ ಆತುಕೊಂಡಾಗ. ಬೆಳಗು ಮಿಸುಕುವ ಮೊದಲೇ ಮತ್ತದೇ ಕಾಯಕದ ತಯಾರಿ. ಅವರ ನಾಯಿ- ಬೆಕ್ಕು ಮಲಗಿಕೊಂಡೇ ಅವರಿಗೆ ಬೀಳ್ಕೊಡುಗೆ ನೀಡುವಾಗಲೇ ಟ್ರೇನಿಂಗ್ ಕಾಲೇಜಿನ ಪಕ್ಕದ ಓಣಿಸಂದಿಯಿಂದ ಮುಖ್ಯರಸ್ತೆ ತಲುಪಿಯಾಗಿರುತ್ತದೆ ಮಹಾಲೆ ಮತ್ತವರ ಸೈಕಲ್.

‘ಹೇಳಿ ಕಳಿಸಿದ ಹಾಗೆ ಬಂದಿರಿ ನೋಡಿ’ ಎನ್ನುತ್ತಲೇ ಧಾರವಾಡದ ಪರಿಚಿತರ, ಕಲಾವಿದರ, ಆತ್ಮೀಯರ ತಲೆಗಳು ಮಹಾಲೆಯವರ ಕೇಶ ಕರ್ತನ ಸೇವೆಗೆ ಬಾಗುತ್ತವೆ. ‘ವೃತ್ತಿ ಧರ್ಮಕ್ಕೆ ಕತ್ತರಿ ಹಾಕಬೇಡವೋ..’ ಎಂದ ಅಪ್ಪನ ಮಾತಿನ ನೆನಕೆಯೊಂದಿಗೆ ಲಯಬದ್ಧವಾಗಿ ಶಿರೋಮರ್ದನನಡೆಸುತ್ತವೆ ಬೆರಳುಗಳು. ಹೊತ್ತು ಏರುತ್ತಿದ್ದಂತೆ ಆ ಬೆರಳುಗಳುತೋರುವ ದಾರಿಯೇ ಸಾಧನಕೇರಿ, ಮಾಳಮಡ್ಡಿ, ಚನ್ನಬಸವೇಶ್ವರ ನಗರ, ಶ್ರೀನಗರ.. ಅಲ್ಲಿಯ ಹಿರಿ-ಕಿರಿಯ ಕಲಾವಿದರೊಂದಿಗೆ ಕೆಲ ಹೊತ್ತು ಹಾರ್ಮೋನಿಯಂ ಸಾಥ್ ಸಂಗತ್.

ಇಳಿಹೊತ್ತಾಗುತ್ತಲೇ ಕಣ್‌ಮನಗಳ ತುಂಬ ತುಂಬಿ ಕೊಳ್ಳುವುದೇ ಜೀವದ ಪ್ರಸಾಧನ ರಂಗ. ಪಾತ್ರ ಅಥವಾ ವಯಸ್ಸು ಹೇಳಿದರೆ ಸಾಕು ನಿಮಿಷಗಳ ಲೆಕ್ಕದಲ್ಲಿ ಚಕಚಕನೆ ಪಾತ್ರಸೃಷ್ಟಿ. ಪಾತ್ರಧಾರಿಯ ಮುಖ ಹೇಗೇ ಇರಲಿ ನಗು ಮುಖದ ನಾರಿಯನ್ನಾಗಿ, ರೋಷ ಉಕ್ಕಿಸುವ ಮಾರಿಯನ್ನಾಗಿ, ಜೋಲುಮುಖದ ನೀರೆಯನ್ನಾಗಿ, ನೆರಿಗೆಗಳಿಂದ ಕೂಡಿದ ಮುದುಕಿಯನ್ನಾಗಿ, ಹದಿನಾರು ವರುಷದ ತರುಣನನ್ನಾಗಿ- ಹೀಗೆ ಆಕಾರಕ್ಕೆ ಆಕಾರವನ್ನೇ ಬದಲಿಸಿ ಉದ್ದ ಮೂಗು, ವಿಶಾಲ ಕಿವಿ, ರಾಕ್ಷಸ ಕಣ್ಣು, ಕೋರೆ ಹಲ್ಲು, ಬೊಚ್ಚು ಬಾಯಿ, ಬೋಳು ತಲೆ ಮುಂತಾದ ಕುರೂಪ-ಸುರೂಪಗಳನ್ನು ಅಲ್ಪ ಸಮಯದಲ್ಲಿಯೇ ಮಾಡುವ ಅಪರೂಪದ ಸಾಧಕರಿವರು.

2001ರಲ್ಲಿ ಧಾರವಾಡದ ಶ್ರೀ ಗಜಾನನ ಮಹಾಲೆ ಅಭಿನಂದನಾ ಸಮಿತಿಯವರು ಹಮ್ಮಿಣಿ ಸಲ್ಲಿಸಲು ಚಂದಾ ವಸೂಲಿಗೆ ಹೋದ ಸಂದರ್ಭದಲ್ಲಿ, ‘ಮಹಾಲೆಯವ್ರಿಗೇನ್ರಿ? ಐದನೂರ್ಯಾಕ್ರೀ ಸಾವ್ರಾ ತುಗೊಳ್ರೀ..’ ಹೀಗೆ ಧಾರವಾಡ- ಹುಬ್ಬಳ್ಳಿ ಜನ ಕಕ್ಕುಲಾತಿಯಿಂದ ದೇಣಿಗೆ ನೀಡಿದ್ದರು. ಹಾಗೆ ಸಂಗ್ರಹಿಸಿದ ಮೊತ್ತ ಎರಡು ಲಕ್ಷಕ್ಕೆ ಹತ್ತಿರವಾಗಿತ್ತು!

ಪ್ರಸಾಧನ ಕಲೆಯಲ್ಲಿ ಹೊಸ ಪ್ರಯೋಗಗಳೊಂದಿಗೆ ನೈಜ ಹಾಗೂ ತೆಳು ಲೇಪನದ ಯುಗಕ್ಕೆ ನಾಂದಿ ಹಾಕಿದ ಮಹಾಲೆ, ಬಣ್ಣ-ಬೆಳಕು-ನೆರಳಿನ ಸಂಯೋಜನೆಗನುಸಾರವಾಗಿ ಪ್ರಸಾಧಿಸುವಲ್ಲಿ ನಿಪುಣರು. ಇದೆಲ್ಲದರೊಂದಿಗೆ ಸಜ್ಜನಿಕೆ, ಸರಳತೆ, ಅಕ್ಕರೆಯೇ ಅವರನ್ನಿಷ್ಟು ಎತ್ತರಕ್ಕೇರಿಸಿದ್ದು. ಅಂತೆಯೇ ನಾಟಕಕ್ಕೆ ಮೊದಲು ಕಲಾವಿದರೆಲ್ಲ ತೆರೆಯ ಹಿಂದಿನ ಗಜಾನನನಿಗೆ (ಮಹಾಲೆಯವರಿಗೆ) ವಂದಿಸಿಯೇ ರಂಗಮಂಚ ಪ್ರವೇಶಿಸುವುದು ಇಂದಿಗೂ ರೂಢಿ.

ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಮುಂತಾದ ಹಿರಿಯ ಕಲಾವಿದರಿಗಷ್ಟೇ ಅಲ್ಲ ಕಿರಿಯರಿಗೂ ವಿಶೇಷವಾಗಿ ಮಕ್ಕಳಿಗೂ ಹಾರ್ಮೋನಿಯಮ್ ಸಾಥ್ ಕೊಡುವಲ್ಲಿ ಅದೇ ಶ್ರದ್ಧೆ. ಕೆಲ ವರ್ಷಗಳಿಂದ ಚಂದ್ರಶೇಖರ ಪುರಾಣಿಕಮಠರ ಗರಡಿಯಲ್ಲಿ ಮತ್ತಷ್ಟು ಪಳಗುತ್ತಿದ್ದಾರೆ. ಇದೆಲ್ಲದರೊಂದಿಗೆ ವರುಷವೂ ಶ್ರಾವಣ-ಭಾದ್ರಪದ ಬಂತೆಂದರೆ ಮೈಕೈ ತುಂಬ ಮಣ್ಣು. ಮಣ್ಣಿಗೆ ಗಣೇಶ ರೂಪು ಕೊಡುವುದರಲ್ಲಿ ಹಗಲು-ರಾತ್ರಿ ಸರಿದಿದ್ದು ಅವರ ಅರಿವಿಗೆ ಬರುವುದೇ ಇಲ್ಲ. ಈ ಮಣ್ಣ-ಬಣ್ಣ ಅಭಿನಯದ ನಂಟನ್ನೂ ಅಂಟಿಸಿದೆ; ಕಿರುತೆರೆ, ಹಿರಿತೆರೆಗಳಿಗೆ ಪ್ರಸಾಧನ ಮಾಡುತ್ತ ಕೆಲ ಪಾತ್ರಗಳನ್ನೂ ನಿರ್ವಹಿಸಿದ ಬಹುಮುಖಿ ವ್ಯಕ್ತಿತ್ವ ಇವರದು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1987-88), ರಾಷ್ಟ್ರಮಟ್ಟದ ಅತ್ಯುತ್ತಮ ಪ್ರಸಾಧನ ಪ್ರಶಸ್ತಿ(2004-05), ಮುಂಬೈ ಕರ್ನಾಟಕ ಸಂಘದಿಂದ ಅತ್ಯುತ್ತಮ ರಾಷ್ಟ್ರ ಮಟ್ಟದ ಪ್ರಸಾಧನ ಪ್ರಶಸ್ತಿ (2008-09), ಇವರ ಜೋಳಿಗೆಯಲ್ಲಿವೆ ಯಾದರೂ ಇಂದಿಗೂ ಬಾಡಿಗೆ ಮನೆಯಲ್ಲಿಯೇ ವಾಸ. ಮೂರು ಮಕ್ಕಳ ಪೈಕಿ ಮಗಳು ಭಾರತಿ ಮತ್ತು ಕಿರಿಯ ಮಗ ಸಂತೋಷ್ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ.

ಹೀಗೆ ಬಣ್ಣದೊಂದಿಗೆ. ಮಣ್ಣಿನೊಂದಿಗೆ. ಕೇಶಕರ್ತನದೊಂದಿಗೆ, ಸಂಗೀತದೊಂದಿಗೆ ಸಾಗುತ್ತಿರುವ ಈ ಸಣ್ಣ ದೇಹಕ್ಕೆ ಒಮ್ಮೆ ಪೆಟ್ಟು ಬಿದ್ದಿತು. ‘ಸೈಕಲ್ ಮುಟ್ಟಿದರೆ ಆಣೆ!’ ಪತ್ನಿ ಜಯಾರ ಮಾತು ಮುರಿದು ಮತ್ತದೇ ಸೈಕಲ್ ಏರಿದರು ಮಹಾಲೆ. ಈ ವಯಸ್ಸಿನಲ್ಲಿಯೂ ಆರೋಗ್ಯ-ಮನಸ್ಸು ಉಲ್ಲಸಿತವಾಗಿದೆ ಎಂದರೆ ನಮನ, ಸೈಕಲ್ಲಿಗೇ ಎನ್ನುತ್ತಾರೆ ಮಹಾಲೆ.

-ಶ್ರೀದೇವಿ ಕಳಸದ, ’ಪ್ರಜಾವಾಣಿ’ ಸಾಪ್ತಾಹಿಕದಲ್ಲಿ 08/09/2009ರಂದು ಪ್ರಕಟ.

1 comment:

sunaath said...

ಮಹಾಲೆಯವರ ಬಗೆಗಿನ ಮಾಹಿತಿ ಓದಿ, ಮನಸ್ಸು ತುಂಬಿ ಬಂದಿತು. ಆ ಮಹಾನ್ ಕಲಾವಿದರಿಗೆ ಹಾಗು ಅವರನ್ನು ಪರಿಚಯಿಸಿದ ನಿಮಗೆ ನಮನಗಳು.