Sunday, August 15, 2010

‘ಭೋಗ ಜೀವನವೊಂದೇ ಮುಖ್ಯವಲ್ಲ’ಭಾರತೀಯರಾದ ನಮಗೆ ಭೋಗ ಜೀವನವೊಂದೇ ಮುಖ್ಯವಲ್ಲ. ಮನೋ-ದೈಹಿಕ ನಿಯಂತ್ರಣಕ್ಕೆ ಆಧ್ಯಾತ್ಮವಿದೆ. ಸಂಗೀತವಿದೆ. ಧ್ಯಾನವಿದೆ. ಇಚ್ಛಿತ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮನೋಬಲವಿದೆ ಎಂದು ಹೇಳಿದಾಗ ಅವರೆಲ್ಲ ಎದ್ದು ನಿಂತು ಕರತಾಡನ ಮಾಡುತ್ತ ಅಭಿನಂದಿಸಿದರು. ಒಬ್ಬೊಬ್ಬರಾಗಿ ಎದ್ದು ಬಂದು ನೀವು ಭಾರತೀಯರು ಶ್ರೇಷ್ಠರು ಎಂದು ಅಪ್ಪಿಕೊಂಡರು. ಮುತ್ತಿಟ್ಟರು. ನಂತರ ನಾನು ಭಾರತದಿಂದ ತಂದಿದ್ದ ಸೋಪಿನಿಂದ ಮುಖ ಮೈ ಕೈ ತೊಳೆದುಕೊಂಡೆ...
--------------------------


ಬದುಕೆಂದರೆ ಗೋಳಲ್ಲ, ಸಂಬಂಧವೆಂದರೆ ಸಂಕೋಲೆಯಲ್ಲ, ಪ್ರೀತಿಯೊಂದೇ ಜೀವನವಲ್ಲ. ಮದುವೆಯಿಂದಲೇ ಮುಕ್ತಿ ಎಂದೇನಿಲ್ಲ, ಸಂಸಾರದಾಚೆಗೂ ಏನೋ ಇದೆಯಲ್ಲವಾ? ಎನ್ನುವ ಪಂಕಜಕ್ಕನ ‘ಪ್ರಸನ್ನ’ಕ್ಕೆ ನೋವಿನ ಗುಡ್ಡ ಹೊತ್ತು ಬಂದವರು ಖಂಡಿತ ಮರಳುವುದು ನಗೆಹೂವಿನೊಂದಿಗೇ. ಅಂತಹದೊಂದು ಮಾಂತ್ರಿಕ ಶಕ್ತಿ ಪಂಕಜಕ್ಕ ಮತ್ತು ಅವರ ಬಳಗಕ್ಕಿದೆ.

ಎಪ್ಪತ್ತಾರರ ಎಂ.ಸಿ. ಪಂಕಜಾ ಚನ್ನಪಟ್ಟಣದ ಹತ್ತಿರವಿರುವ ಹಿರೇಮಳೂರಿನವರು. ಮನಶಾಸ್ತ್ರದಲ್ಲಿ ಪದವಿ ಪಡೆದ ಇವರು ಬೆಂಗಳೂರಿನ ಹೊಂಬೇಗೌಡ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ನಿವೃತ್ತಿಯಾದರು. ಶಾಲೆಗೆ ಬರುತ್ತಿದ್ದ ಮಧ್ಯಮ, ಕೆಳಮಧ್ಯಮ ವರ್ಗದ ಮಕ್ಕಳ ಮನಃಸ್ಥಿತಿ, ಮನೆ ಪರಿಸ್ಥಿತಿಯೇ ಬೆಂಗಳೂರಿನ ಬಸವನಗುಡಿಯಲ್ಲಿರುವ ‘ಪ್ರಸನ್ನ ಆಪ್ತಸಲಹಾ ಕೇಂದ್ರ’ ತೆರೆಯಲು ಇವರನ್ನು ಪ್ರೇರೇಪಿಸಿತು.

ಬೆಂಗಳೂರಿನ ಪ್ರಥಮ ಆಪ್ತಸಲಹಾ ಕೇಂದ್ರ ‘ಪ್ರಸನ್ನ’ ಸುಮಾರು ಮೂವತ್ತು ವರ್ಷಗಳಿಂದ ಲಕ್ಷಾಂತರ ಜನರಿಗೆ ಸಾಂತ್ವನ ಹೇಳಿದೆ. ಮನೋಸ್ಥೈರ್ಯ ತುಂಬಿದೆ. ಮಾರ್ಗದರ್ಶನ ನೀಡಿದೆ.

ಆಪ್ತಸಲಹೆ ನಿಮಗೆ ಆಪ್ತವಾದದ್ದು...


ಮಕ್ಕಳೊಂದಿಗಿನ ಒಡನಾಟ!? ಆಗ ಹೊಂಬೇಗೌಡ ಶಾಲೆಗೆ ಬರುತ್ತಿದ್ದ ಮಕ್ಕಳ ಬಹುಪಾಲು ಅಪ್ಪಂದಿರು ಕುಡುಕರು, ಬೇಜವಾಬ್ದಾರರು. ಇನ್ನು ಅಮ್ಮಂದಿರು ಮಕ್ಕಳ ಮೇಲೆ ಪಾಟಿಚೀಲದೊಂದಿಗೆ ಕಂಕುಳ ಕೂಸನ್ನೂ ‘ಹೊರೆ’ಸುತ್ತ ಹಿಟ್ಟಿಗಾಗಿ ಮೈಮುರಿಯುತ್ತಿದ್ದರು.

ಇಂತಹ ಪರಿಸ್ಥಿತಿಯಲ್ಲಿ ‘ಓದುವ’ ಆ ಮನಸುಗಳು ಭಾರದಿಂದ ನಲುಗುತ್ತಿದ್ದವು, ಏಕಾಗ್ರತೆ ತೊಂದರೆ, ಭಯ, ಚುರುಕಿಲ್ಲದಿರುವಿಕೆ ಹೀಗೆ ಮುಂತಾದ ಸಮಸ್ಯೆಗಳು ಅವರ ಬಾಲ್ಯವನ್ನು ನುಂಗಿಹಾಕುತ್ತಿದ್ದವು. ಆ ಸಮಯದಲ್ಲಿ ಮಕ್ಕಳೊಂದಿಗೆ ಅವರ ಮನೆಯವರನ್ನು ಕರೆಸಿ ಸಲಹೆ ನೀಡುತ್ತ ಬಂದೆ. ಅಂದಿನಿಂದಲೂ ಈ ಆಪ್ತತೆ ಲಕ್ಷಾಂತರ ಮನಸುಗಳೊಂದಿಗೆ ಬೆಸೆದುಕೊಂಡುಬಿಟ್ಟಿದೆ.

ಯಾರಿಗೆ ಆಪ್ತ ಸಲಹೆ ಬೇಕು? ಯಾಕೆ?

ಕುಟುಂಬದ ಯಾರೇ ಆಗಲಿ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎಂದಾದಲ್ಲಿ ಸಮಸ್ಯೆ ಅವರಿಗೊಬ್ಬರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದಕ್ಕೆ ಪೂರಕವಾಗಿ ಅವರೊಂದಿಗಿರುವವರು ನೀಡಿದ ‘ಕೊಡುಗೆ’ಯ ಪಾತ್ರ ಮಹತ್ವದ್ದಾಗಿರುತ್ತದೆ.

ಮನೆಗೆ ಬಂದ ಮಕ್ಕಳಿಗೆ ತಿನ್ನುಣ್ಣು, ಎಂದು ಹೇಳುವವರಿಲ್ಲ. ಬೇಜಾರ್ಯಾಕೆ? ಏನು ಖುಷಿ? ಎಂದು ತಲೆ ಸವರುವರಿಲ್ಲ. ಹೆಂಡತಿ ಎಂದರೆ ಟೇಕನ್ ಗ್ರ್ಯಾಂಟೆಡ್?! ಮಕ್ಕಳು ಎಂಜಿನಿಯರ್, ಡಾಕ್ಟರ್‌ಗಳೇ ಆಗಬೇಕು. ಬಂದ ಸೊಸೆ ಮಗನನ್ನು ಕಿತ್ತುಕೊಂಡರೆ?

ವಯಸ್ಸಾಯ್ತು ತಾನಿನ್ನು ಎಲ್ಲರ ಕೈಗೊಂಬೆಯೇ... ಎಲ್ಲವೂ ತಾನು ಹೇಳಿದಂತೆಯೇ ಆಗಬೇಕೆನ್ನುವ ಹಠ, ಅಭದ್ರ ಮನೋಭಾವ, ಹೀಗೆ ಇನ್ನೂ ಏನೇನೋ... ಸಮಸ್ಯೆ, ಗೊಂದಲ, ಖಿನ್ನತೆ, ನೋವು, ದುಃಖ.. ಇಂತಹ ಪರಿಸ್ಥಿತಿಯಲ್ಲಿ ಹೂವಿನಂತಿದ್ದ ಮನಸ್ಸು ಹಾವಿನಂತಾಗಬಹುದು. ಬಾಡಲೂಬಹುದು.

ಆಗ ಘಾಸಿಗೊಳಗಾದ ಆ ಮನಸ್ಸಿನೊಂದಿಗೆ ಇಡೀ ಕುಟುಂಬವನ್ನೂ ಆಪ್ತಸಮಾಲೋಚನೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅವಶ್ಯವಿದ್ದಲ್ಲಿ, ಅಗತ್ಯವಿದ್ದವರಿಗೆ ಮನೋಚಿಕಿತ್ಸೆ ನೀಡಬೇಕಾಗುತ್ತದೆ.

ಇಷ್ಟೆಲ್ಲರ ದೂರು-ದುಮ್ಮಾನ ಕೇಳಿದ ನಿಮ್ಮ ಮನಸ್ಸಿನ ಗತಿ? ನೀವೇನಾದರೂ ಈ ವಿಷಯವಾಗಿ ಕೆಲ ನಿಮಯಗಳನ್ನು ಹಾಕಿಕೊಂಡಿದ್ದೀರಾ?
ನೋಡಿ.... ಜೀವನದಲ್ಲಿ ಕಮಲ ಪತ್ರದ ಮೇಲಿನ ಜಲಬಿಂದುವಿನ ಹಾಗೆ ಇದ್ದುಬಿಟ್ರೆ ಜೀವನ ನಿಜವಾಗಲೂ ಸುಂದರವಾಗಿರತ್ತೆ. ಎಲ್ಲವನ್ನೂ ಕೇಳಿಸಿಕೊಳ್ಳುತ್ತೇನೆ. ರಾತ್ರಿ ಮನೆಗೆ ಬರೋವಾಗ ಎಲ್ಲರ ದುಃಖ, ಸಂಕಟ, ನೋವುಗಳನ್ನು ಮನೆಯೊಳಗೆ ಸೇರಿಸಿಕೊಳ್ಳುವುದೇ ಇಲ್ಲ.

ಇಷ್ಟೆ ಅಲ್ಲ, ದೊಡ್ಡ ಅಧಿಕಾರಿಯೇ ಆಗಲಿ ಯಾರೇ ಆಗಲಿ ಸಲಹಾ ಕೇಂದ್ರಕ್ಕೆ ಬರಲು ಸಂಕೋಚವೆನಿಸಿ ನಮ್ಮ ಮನೆಗೇ ಬರುತ್ತೇವೆಂದರೂ ನಾನು ಸುತರಾಂ ಒಪ್ಪುವುದಿಲ್ಲ. ಯಾವ ಕಾಣಿಕೆಯನ್ನೂ, ನೋವಿನ, ಪಾಪದ ಹಣವನ್ನೂ ಮುಟ್ಟುವುದಿಲ್ಲ. ಯಾರಿಗೆ ಗೊತ್ತು ಯಾರ ಮನಸು ಯಾವಾಗ ಹೇಗೆ ವರ್ತಿಸಬಹುದೆಂದು?

ಇನ್ನೊಂದು ಮಾತು, ಯಾರನ್ನೇ ಆಗಲಿ ಆಪ್ತ ಸಲಹಾ ಕೇಂದ್ರಕ್ಕೆ ಕರೆತರಬೇಕಾದಲ್ಲಿ ಅವರಿಗೆ ಬೇರೆಲ್ಲಿಗೋ ಕರೆದುಕೊಂಡು ಹೋಗುತ್ತೇವೆಂದೋ, ಮಕ್ಕಳಿಗಾದರೆ ಏನನ್ನೋ ಕೊಡಿಸುತ್ತೇವೆಂದೋ ಸುಳ್ಳು ಹೇಳುವುದು ಖಂಡಿತ ತಪ್ಪು. ಆಪ್ತಸಲಹೆ ಅವಶ್ಯವಿದ್ದವರನ್ನು ನನ್ನ ಸ್ನೇಹಿತರೊಬ್ಬರನ್ನು ಭೇಟಿ ಮಾಡಿಸುತ್ತೇನೆ ಬಾ.. ಎಂದೇ ಕರೆದುಕೊಂಡುಬರಬೇಕು.

ಆಪ್ತಸಲಹಾ ತರಬೇತಿ ನೀಡುವ ಬಗ್ಗೆ...

ಆಪ್ತಸಲಹೆಗಾರರಾಗಲು ಇಚ್ಛಿಸುವವರಿಗೆ ನಮ್ಮಲ್ಲಿ ಆರು ತಿಂಗಳ ಡಿಪ್ಲೊಮೊ ಕೋರ್ಸ್ ನಡೆಸಲಾಗುತ್ತದೆ. ನಿಮ್ಹಾನ್ಸ್‌ನ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್, ಡಾ. ಮಾಳವಿಕಾ ಕಪೂರ್, ಡಾ. ಎಸ್. ರಾಜಾರಾಮ್ ಮುಂತಾದವರು ಮಾರ್ಗದರ್ಶಕರಾಗಿದ್ದಾರೆ.

ಈ ಕೋರ್ಸ್‌ನ ನಂತರ ಸ್ವತಂತ್ರವಾಗಿ ಆಪ್ತಸಲಹಾಗಾರರಾಗಿ ಕಾರ್ಯ ನಿರ್ವಹಿಸಬಹುದು. ಅಲ್ಲದೆ ಮನಶಾಸ್ತ್ರದ ವಿದ್ಯಾರ್ಥಿಗಳಿಗೆ ಪ್ರಸನ್ನದಲ್ಲಿ ಇಂಟರ್ನ್‌ಶಿಪ್ ಹಾಗೂ ಸಂಶೋಧನೆ ನಡೆಸಲು ಅವಕಾಶವಿದೆ. ಅಂದಹಾಗೆ ಪ್ರಸನ್ನರ ಆಪ್ತಸಲಹಾಗಾರರು ಸ್ವಯಂಸ್ಫೂರ್ತಿಯಿಂದ ಬಿಡಿಗಾಸನ್ನೂ ಅಪೇಕ್ಷಿಸದೆ ಉಚಿತವಾಗಿ ಸಮಾಲೋಚನೆ ನಡೆಸುತ್ತಾರೆ.

ಆನ್‌ಲೈನ್ ಕೌನ್ಸೆಲಿಂಗ್, ಟೆಲಿಕೌನ್ಸೆಲಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ?
ಖಂಡಿತ ನಾನು ಈ ವಿಧಾನವನ್ನು ಒಪ್ಪುವುದಿಲ್ಲ. ಇವೆಲ್ಲ ತಾತ್ಕಾಲಿಕ. ಆಪ್ತಸಲಹೆಯಲ್ಲಿ ನೋಟ, ಸ್ಪರ್ಶ ಹಾಗೂ ಧ್ವನಿ ಸಂವೇದನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಸಮಾಧಾನಿಸಲು, ಅಳಲು ಕೇಳಲು, ಗೊಂದಲ ನಿವಾರಿಸಲು, ಕೊನೆಗೆ ಅವರ ಸಮಸ್ಯೆಗೆ ಅವರ ಮೂಲಕವೇ ಉತ್ತರ ಕಂಡುಕೊಳ್ಳುವಂತೆ ಮಾಡಲು ಮುಖಾಮುಖಿ ಆಪ್ತಸಲಹೆಯೇ ಆಗಬೇಕು.

ವಿದೇಶದಲ್ಲಿ ವಿಚಾರ ಸಂಕಿರಣ ಮಂಡಿಸಿದಾಗಿನ ಅನುಭವ...
ಸುಮಾರು 22 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ‘ಅನುಭಾವಿಕ ಕಲಿಕೆ’ ಬಗ್ಗೆ ಪ್ರಬಂಧ ಮಂಡಿಸಲು ಲಂಡನ್‌ಗೆ ತೆರಳಿದ್ದೆ. ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳು ಸುಮಾರು ಎರಡು ಗಂಟೆಗಳ ಕಾಲ ಸಂವಾದದಲ್ಲಿ ತೊಡಗಿಕೊಂಡರು.

ಕೊನೆಗೆ ನನ್ನ ವೈಯಕ್ತಿಕ ಜೀವನದ ಸುತ್ತ ಪ್ರಶ್ನೆಗಳು ತಳಕು ಹಾಕಿಕೊಂಡವು. ನಾನು ಅವಿವಾಹಿತೆ ಎಂದು ತಿಳಿದ ತಕ್ಷಣ ಅವರಿಗೆ ಇನ್ನಷ್ಟು ಕುತೂಹಲ ಹುಟ್ಟಿಕೊಂಡಿತು. ಅವರ ಹುಬ್ಬೊಳಗೆ ಬಯಕೆ, ಕಾಮ, ಲೈಂಗಿಕತೆ ಇತ್ಯಾದಿ ಪ್ರಶ್ನೆಯಾಗಿ, ಅಚ್ಚರಿಯಾಗಿ ಕುಳಿತವು.

ಭಾರತೀಯರಾದ ನಮಗೆ ಭೋಗ ಜೀವನವೊಂದೇ ಮುಖ್ಯವಲ್ಲ. ಮನೋ-ದೈಹಿಕ ನಿಯಂತ್ರಣಕ್ಕೆ ಆಧ್ಯಾತ್ಮವಿದೆ. ಸಂಗೀತವಿದೆ. ಧ್ಯಾನವಿದೆ. ಇಚ್ಛಿತ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮನೋಬಲವಿದೆ ಎಂದು ಹೇಳಿದಾಗ ಅವರೆಲ್ಲ ಎದ್ದು ನಿಂತು ಕರತಾಡನ ಮಾಡುತ್ತ ಅಭಿನಂದಿಸಿದರು. ಒಬ್ಬೊಬ್ಬರಾಗಿ ಎದ್ದು ಬಂದು ನೀವು ಭಾರತೀಯರು ಶ್ರೇಷ್ಠರು ಎಂದು ಅಪ್ಪಿಕೊಂಡರು. ಮುತ್ತಿಟ್ಟರು. ನಂತರ ನಾನು ಭಾರತದಿಂದ ತಂದಿದ್ದ ಸೋಪಿನಿಂದ ಮುಖ ಮೈ ಕೈ ತೊಳೆದುಕೊಂಡೆ...

ನೀವು ಯಾಕೆ ಮದುವೆ ಮಾಡಿಕೊಳ್ಳಲಿಲ್ಲ?
ನಾವು ಏಳು ಜನ ಮಕ್ಕಳು. ಅಕ್ಕ ಮುದುವೆಯಾಗಿ ಪುಣೆಯಲ್ಲಿ ನೆಲೆಸಿದ್ದರು. ಮದುವೆಯಾದ ಐದು ವರ್ಷದೊಳಗೆ ಬಾವ ದೃಷ್ಟಿದೋಷದಿಂದ ಅಂಧರಾದರು.

ಮೂರು ಮಕ್ಕಳೊಂದಿಗೆ ಅವರಿಬ್ಬರನ್ನೂ ಬೆಂಗಳೂರಿಗೆ ಕರೆತಂದು ನೋಡಿಕೊಳ್ಳುವ ಜವಾಬ್ದಾರಿ ನಾನೇ ಹೊತ್ತೆ. ಅಣ್ಣ, ಅಕ್ಕನ ಸುಮಾರು ಹದಿನೈದು ಮೊಮ್ಮಕ್ಕಳನ್ನು ಸಾಕಿ, ಸಲುಹುತ್ತ ಬಂದೆ. ಅದ್ಯಾಕೋ ನನಗೆ ಮದುವೆ ಬಗ್ಗೆ ಆಸಕ್ತಿಯೇ ಹುಟ್ಟಲಿಲ್ಲ.
---------
ಶ್ರೀದೇವಿ ಕಳಸದ, ಪ್ರಜಾವಾಣಿಯ ’ಭೂಮಿಕಾ’ದಲ್ಲಿ ಪ್ರಕಟ, 25-05-2010

1 comment:

sunaath said...

ಸಾಧಕರೊಬ್ಬರ ಬಗೆಗೆ ನೀವು ನೀಡಿದ ಮಾಹಿತಿ ಉಪಯುಕ್ತವಾಗಿದೆ.