Tuesday, September 28, 2010

ಅವಿತ ಪ್ರಶ್ನೆ, ಬಯಲ ಉತ್ತರ

ಮಳೆ ಬರುತ್ತದೆ
ತೋಯುತ್ತದೆ ನೆಲ.
ನೆಲ ಪ್ರಶ್ನಿಸಲಿಲ್ಲ
ಉತ್ತರಿಸಲಿಲ್ಲ ಮಳೆಯೂ.
ಆದರಿವರು ತಮ್ಮ ಪ್ರಶ್ನೆಗಳನ್ನು
ಉತ್ತರಗಳನ್ನೂ
ಮಾಡಿಟ್ಟಿದ್ದಾರೆ ಜೋಪಾನ-
ಮಳೆಯಂಗಿ ತೊಡಿಸಿ, ಕಂಬಳಿ ಹೊದಿಸಿಯೋ
ಅವು ನೆನೆಯದಂತೆ, ನಡುಗದಂತೆ.

ನೆಲಕ್ಕಿಡುವುದೇ? ಎಂದು
ಭದ್ರವಾಗಿರಿಸಿದ್ದಾರೆ ಕೆಲವರು
ಕಟ್ಟಿಕೊಂಡ ಗೋಡೆಗಳೊಳಗೆ
ಕೊರೆದ ಮಾಡಿನೊಳಗೆ-
ಚಂದಕ್ಕೆಂದು ಹಾಕಿಸಿಟ್ಟಿದ್ದಾರೆ ಚೌಕಟ್ಟೂ.

ಬೆನ್ನು ಮಾಡಿದ್ದು ಬಿಳಿಗೇ ಆದರೂ
ಅಕ್ಷರಗಳವು ಬಣ್ಣಬಣ್ಣದವು.
ಆಕಾರ ಭಿನ್ನ.

ಅವಿತ ’ಪ್ರಶ್ನೆ’ಗದು
ಸುರಿವ ಮಳೆಯ ನೆನಕೆ.
ಬಯಲಾಗುವೆನೆಂದು-
ಕವನರಿಸುತಿದೆ ’ಉತ್ತರ’

ಉತ್ತರದ
ಪ್ರಶ್ನೆಯ
ಉಸಿರು-ನಿಟ್ಟುಸಿರು
ಮಬ್ಬಾಗಿಸುತ್ತಲೇ ಇದೆ
ಆ ಚೌಕಟ್ಟಿನ ಗಾಜನ್ನು.

-ಶ್ರೀದೇವಿ ಕಳಸದ

೨೦೦೯ ರ ಡಿಸೆಂಬರ್‌ ಮಯೂರದಲ್ಲಿ ಪ್ರಕಟ.