Monday, October 4, 2010

ಅಪ್ಪನಿಗೆ ಹದಿಹರೆಯದ ಮಗಳ ಪತ್ರ...


ಹರೆಯಕ್ಕೆ ಕಾಲಿಟ್ಟ ಮಗಳ ರೂಂನ ಮುಂದೆ ಹೋಗುತ್ತಿದ್ದ ಅಪ್ಪನ ಹೆಜ್ಜೆಗಳು ನಿಧಾನವಾದವು...

ತೆರೆದರ್ಧ ಕಿಟಕಿಗೆ ತೆಳುಗುಲಾಬಿ ಪರದೆ. ತೆಳು ಗುಲಾಬಿಯದೇ ಬೆಡ್‌ಶೀಟ್ ಮೇಲೆ ಹಳದಿ ಹೂಮುದ್ರೆ, ಅದಕ್ಕೊಪ್ಪುವ ತಲೆದಿಂಬುಗಳೆರಡು. ಮಂಚದ ಪಕ್ಕಕ್ಕೊಂದು ನೀರ್‍ತುಂಬಿದ ಗಾಜಿನ ಹೂಜಿ. ಹೂಜಿ ಅಳತೆಗೆರಡು ಗ್ಲಾಸು... ಎಷ್ಟು ನೀಟಾಗಿ ಜೋಡಿಸಿಟ್ಟಿದ್ದಾಳೆ! ಏನು ವಿಶೇಷ ಈ ದಿನ? ಹೂಂ... ಇರಲಿ, ಎಷ್ಟೇ ಆದರೂ ನನ್ನ ಮಗಳಲ್ಲವೆ...ಎಂದು ಬೀಗಿದ ಅಪ್ಪ.

ಕೋಣೆ ಕಣ್ಣಾಡಿಸುತ್ತಲೆ ಹೊಸ್ತಿಲೊಳಗೆ ಕಾಲಿಟ್ಟ. ಮಗಳು ಅಪ್ಪಿ ಮಲಗುತ್ತಿದ್ದ ಟೆಡ್ಡಿ ಒಮ್ಮೆ ಅವನನ್ನು ನೋಡಿದ್ದೇ ಹುಬ್ಬು ಹಾರಿಸಿದಂತಾಯ್ತು; ತನಗಿನ್ನು ಶೋಕೇಸೇ ಗತಿ ಅನ್ನೋ ಹಾಗೆ.

ತಲೆದಿಂಬಿಗೆ ಒರಗಿಕೊಂಡ್ದಿದ ಬಿಳಿಯ ಪಾಕೀಟೊಂದು, ‘ಬಾ ಬಾ.. ನಿನ್ನನ್ನೇ ಕಾಯುತ್ತಿದ್ದೆ..’ ಎಂದು ಸನ್ನೆ ಮಾಡಿದ ಹಾಗಾಯ್ತು. ಎಂದೂ ಸೇರದ ಹುಬ್ಬನ್ನು ಗಂಟಿಕ್ಕಿಕೊಂಡೇ ಪಾಕೀಟನ್ನು ಕೈಗೆತ್ತಿಕೊಂಡ. ‘...ಅಪ್ಪನಿಗೆ’ ಎಂದಿತ್ತು. ‘ಅಂದರೆ ಇದು ನನಗೇ..’ ಎಂದ. ತುಟಿ ಚಲಿಸಿತು. ಧ್ವನಿ ಬರಲಿಲ್ಲ. ಯಾಕೋ ಕೈ ನಡುಕ. ಪತ್ರದ ಮಡಿಕೆ ಬಿಡಿಸಿದ.

***

ಪ್ರೀತಿಯ ಅಪ್ಪ,

ಪಶ್ಚಾತ್ತಾಪ ಮತ್ತು ದುಃಖದಿಂದ ಈ ಪತ್ರ ಬರೆಯುತ್ತಿದ್ದೇನೆ. ನನ್ನ ಹೊಸ ಗೆಳೆಯನೊಂದಿಗೆ ಇರಲು ನಿಶ್ಚಯಿಸ್ದಿದರಿಂದ ಈ ಮನೆ ಬಿಟ್ಟು ಹೊರಡುತ್ತಿದ್ದೇನೆ. ಪ್ರತಿ ಬಾರಿ ಅವನನ್ನು ಭೇಟಿಯಾದಾಗ ನನ್ನಲ್ಲಿ ಹಿತವಾದ ಭಾವೋದ್ವೇಗ! ‘ಕ್ರಷ್’ ಇರಬಹುದೇ? ಊಂಹೂ... ಅದು ಎಲವನ್ನೂ ಮೀರಿದ ಅಪ್ಪಟ ಪ್ರೀತಿ.

ಅಪ್ಪಾ ಅವನೆಷ್ಟು ಚೆಂದದ ಹುಡುಗ ಗೊತ್ತಾ? ನೀನೇನಾದರೂ ಅವನನ್ನು ಭೇಟಿ ಮಾಡಿದಲ್ಲಿ ಖಂಡಿತ ಇಷ್ಟ ಪಡುತ್ತಿ. ಕಿವಿ, ಹುಬ್ಬು ಹಾಗೂ ಗದ್ದಕ್ಕೆ ತೂರಿಸಿಕೊಂಡ ಅವನ ಚಿಕ್ಕ ಚಿಕ್ಕ ರಿಂಗ್, ಸ್ಟಡ್ಸ್... ತೋಳಿಗೆ, ಬೆನ್ನಿಗೆ ಹುಯ್ದುಕೊಂಡ ಬಣ್ಣದ ಹಚ್ಚೆ... ಮೋಟರ್ ಸೈಕಲ್ ಪ್ರಿಂಟ್ಸ್‌ನ ಅವನ ಟೀಶರ್ಟ್ಸ್... ವೋವ್! ರಿಯಲಿ ಹಿ ಈಸ್ ಅಮೇಝಿಂಗ್!

***

ಆದರೆ ಅಪ್ಪಾ... ಒಂದು ವಿಷಯ. ಹೀಗೆ ಹೇಳಿಕೊಳ್ಳಲು ನನಗ್ಯಾವ ಸಂಕೋಚ, ಭಯ ಇಲ. ಹೆಮ್ಮೆಯಿಂದ ಹೇಳುವೆ; ನಾನೀಗ ಗರ್ಭಿಣಿ. ಮತ್ತೆ... ‘ನಮಗೊಂದು ಮಗುವಾದರೆ ಒಟ್ಟಿಗೆ ಖುಷಿಯಿಂದ ಇರಬಹುದು’ ಎಂದು ಹೇಳಿದ ಅವ ನನಗಿಂತ ಸ್ವಲ್ಪ ದೊಡ್ಡವನೇ. ನಲ್ವತ್ತೆರಡೇನು ಅಂಥಾ ಮಹಾ ವಯಸ್ಸ್ಲಲ ಬಿಡು.

ನಿಜ ಹೇಳಬೇಕೆಂದರೆ ಈಗ ಅವನದು ಬರಿಗೈ. ಆದರೆ ನಮ್ಮ ಈ ಪ್ರೀತಿಗೆ ‘ಹಣ’ ಅಡ್ಡಿಯಾಗತ್ತಾ? ಇದನ್ನ ನೀ ಕೂಡ ಒಪ್ಪುತ್ತೀಯ್ಲಲ? ಅವನ ಬಳಿ ಎಷ್ಟೊಂದು ಸಿ.ಡಿ ಕಲೆಕ್ಷನ್ ಇದೆ ಗೊತ್ತಾ? ಮತ್ತೆ... ಸೌದೆ ಸಾಗಿಸುವ ತಳ್ಳುಗಾಡಿಯೂ ಅವನ ಸ್ವಂತ್ದದೇ. ಅಷ್ಟೇ ಅಲ ಇಡೀ ಚಳಿಗಾಲಕ್ಕಾಗುವಷ್ಟು ಉರುವಲು ಕೂಡಿಟ್ಟಿದ್ದಾನೆ!

ಇನ್ನೊಂದು ಒಂದ್ ಗುಟ್ಟಿನ ವಿಷಯ ಹೇಳ್ಲಾ ಅಪ್ಪಾ? ಅವನಿಗೆ ತುಂಬಾ ಜನ ಸ್ನೇಹಿತೆಯರಿದ್ದಾರೆ. ಆದರೆ ನನಗವನು ಮೋಸ ಮಾಡುವುದಿಲ್ಲ ಎನ್ನುವ ವಿಶ್ವಾಸವಂತೂ ನಿನ್ನಾಣೆ ಇದೆಯಪ್ಪಾ. ಯಾಕೇಂದ್ರೆ ಅವನದು ಡಿಫರೆಂಟ್ ಪರ್ಸ್‌ನಾಲಿಟಿ! ಆಗಾಗ ನೀನು ನನಗೆ ಛೇಡಿಸುತ್ತಿದ್ದೆ, ತುಂಬಾ ಆತುರದ ಹುಡುಗಿ. ನಿನ್ನ ಕನಸಿಗೆ ಮಿತಿಯಿರಲಿ ಅಂತ. ನಿನ್ನ ಮಾತು ಕೇಳಿ ಕುಳಿತಿದ್ದರೆ ನನ್ನ ಕತೆ ಹ್ಮ್...

ಅವನಿಗೆ ಮಾತು ಕೊಟ್ಟಿದ್ದೇನೆ. ಮಕ್ಕಳೆಂದರೆ ಅವನಿಗೆ ಸಿಕ್ಕಾಪಟ್ಟೆ ಇಷ್ಟ. ನಾನವನಿಗೆ ಮತ್ತಷ್ಟು ಮಕ್ಕಳನ್ನು ಕೊಡಬೇಕಂತೆ! ನೆನಪಿರಲಿ ಅಪ್ಪಾ... ಅವನಿಗಿಷ್ಟ ಅಂತ ಬರೀ ಮಕ್ಕಳನ್ನು ಹಡೆಯುತ್ತ ಕೂಡುವ ಹುಡುಗಿ ನಾನಲ್ಲ. ನನ್ನ ಜೀವನದ್ಲಲೂ ಕನಸುಗಳಿಗೆ ಒಂದಿಷ್ಟು ಜಾಗವಿದೆ. ಆ ದೊಡ್ಡ ದೊಡ್ಡ ಕನಸುಗಳಲ್ಲಿ ಮಕ್ಕಳನ್ನು ಪಡೆಯುವುದೂ ಒಂದು ಚಿಕ್ಕ ಕನಸಷ್ಟೆ.

***

ಅವನಲ್ಲಿ ಎಷ್ಟೊಂದು ಇನ್ನೊವೇಟಿವ್ ಐಡಿಯಾಗಳಿವೆ!; ದೊಡ್ಡ ಉದ್ಯಮಿಯಾಗಿ ಮೆರೆಯುವುದು, ಇಲ್ಲಸಲ್ಲದ್ದಕ್ಕೆಲ್ಲ ತಲೆಬಿಸಿ ಮಾಡಿಕೊಳ್ಳುವುದಕ್ಕಿಂತ ಒಂದಿಷ್ಟು ಸಮಾನ ಮನಸ್ಕರೊಂದಿಗೆ ಕಲೆತು ಬದುಕು ನಡೆಸುವುದು ಎಷ್ಟು ಚೆಂದ ಅಲ್ವಾ ಅಂತಾನೆ. ಅವನ ಮಹತ್ವದ ಕನಸನ್ನೂ ನಿನ್ನೊಂದಿಗೆ ಹಂಚಿಕೊಳ್ಳಲೆ ಅಪ್ಪಾ? ಏನ್ಲಿಲ... ಬೇಳೆ-ಕಾಳು ಬೆಳೆಯುವುದಕ್ಕಿಂತ ನೀಗಿದಷ್ಟು ‘ಮರಿಜುವಾನಾ’ (ಗಾಂಜಾ) ಬೆಳೆಯೋದೇ ಒಳ್ಳೆಯದಂತೆ ಅವನ ಪ್ರಕಾರ. ಆಗ ನಮ್ಮಲ್ಲಿದ್ದ ಮರಿಜುವಾನಾ ಸ್ನೇಹಿತರ ಉಡಿಯಲ್ಲಿ. ಅವರಲ್ಲಿದ್ದ ಕೊಕೇನ್, ಹಶಿಷ್ ನಮ್ಮ ಅಂಗೈಯ್ಲಲಿ. ಬದುಕಿನ್ಲಲಿ ಸ್ನೇಹಕ್ಕಿಂತ ದೊಡ್ಡದು ಯಾವುದಿದೆ?

ಜೀವನ ಎಲ್ಲರಿಗಿಂತ ಡಿಫರೆಂಟ್ ಆಗಿರಬೇಕು. ಏನಾದರೂ ಸಾಧಿಸಬೇಕು ಮುದ್ದು... ಅಂತ ನೀ ಆಗಾಗ ನನ್ನ ತಲೆ ನೇವರಿಸಿ ಹೇಳ್ತಿದ್ದೆ ತಾನೆ? ಹಾಂ.. ನಮ್ಮ ಜೋಡಿ ಕೂಡ ಡಿಫರೆಂಟೇ! ನಿನಗೇ ಗೊತ್ತಲ್ಲ ಯಾವತ್ತಾದರೂ ಆ ನಿಮ್ಮ ಗೊಡ್ಡು ದೇವರ ಫೋಟೋಗಳಿಗೆ ಕೈಮುಗಿದಿದ್ದೀನಾ? ನೊ ವೇ... ಬಟ್ ಇನ್ನು ಮುಂದೆ ನೋಡಿ. ಪ್ರತಿದಿನವೂ ಕೈಮುಗಿಯುತ್ತೇನೆ ನನ್ನವನ ಜೊತೆಗೂಡಿ. ಆದರೆ ದೇವರಿಗಲ್ಲ. ವಿಜ್ಞಾನಕ್ಕೆ! ಆಗ ಖಂಡಿತ ಏಡ್ಸ್‌ಗೆ ಔಷಧಿ ದೊರೆಯುತ್ತದೆ. ಆಮೇಲ್ ನೋಡಿ ಏಡ್ಸ್ ಮಹಾಮಾರಿಯನ್ನು ಖೊಡವಿಕೊಂಡ ನನ್ನವನ ಲವಲವಿಕೆಯ ಮುಖ!

***

ಓಹ್ ಅಪ್ಪಾ... ಕಮಾನ್... ಡೋಂಟ್ ವರಿ.. ನನಗೀಗ ಕೇವಲ ಹದಿನೈದು. ನನ್ನನ್ನು ನಾನು ನೋಡಿಕಳ್ಳುತ್ತೇನೆ. ಕಾಳಜಿ ಬಿಡಿ. ಖಂಡಿತ ಒಂದು ದಿನ ಮನೆಗೆ ವಾಪಸ್ ಬಂದೇ ಬರುತ್ತೇನೆ, ನಿನ್ನನ್ನು ಮತ್ತು ಅಮ್ಮನನ್ನು ನೋಡಲು. ನಿಮ್ಮ ಮೊಮ್ಮಕ್ಕಳನ್ನು ನೋಡಿ ಆನಂದದಿಂದ ಕಣ್ತುಂಬಿಕೊಳ್ಳುವ ಕಾಲ ಬಂದೇ ಬರುತ್ತದೆ. ನಿರಾಶೆ ಬೇಡ. ಆಗ ನೀನು ನನ್ನ ಬಯ್ಯ್ಲಲ ಅಲ್ವಾ?-ಇಂತಿ ನಿನ್ನ ಪ್ರೀತಿಯ ಮಗಳು.

***

ಅಪ್ಪ ನಡುಗುತ್ತಿದ್ದ. ನೆನಪಿಗೆ ಬಾರದ್ದಿದರೂ ದೇವರ ಹೆಸರನ್ನು ಸ್ಮರಣೆಗೆ ತಂದುಕೊಳ್ಳಲು ಪ್ರಯತ್ನಿಸುತ್ತಿದ್ದ. ಆದರೆ ಪುಟದ ಅಡಿಗೆ ಪು.ತಿ.ನೊ... ಎನ್ನುವ ಸೂಚನೆಯಿತ್ತು. ಮತ್ತೇನು ಕಾದಿದೆಯೋ ಎಂದು ನಡುಗುತ್ತಿದ್ದ ಕೈಗಳಿಂದ ಪುಟ ತಿರುಗಿಸಿಯೇ ಬಿಟ್ಟ. ಅಷ್ಟೊತ್ತಿಗೆ ಒಂದೆರಡು ಕಣ್ಣೀರು ಪತ್ರದ ಮೇಲೆ ತೊಟ್ಟಿಕ್ಕ್ದಿದವು. ಅಲ್ಲಿತ್ತು:

ವಿ. ಸೂ: ಓಯ್ ಅಪ್ಪಾ, ಮೇಲೆ ಬರೆದ ಯಾವ ವಿಷಯವೂ ನಿಜವಲ್ಲ. ನಾನೆಲ್ಲೂ ಹೋಗಿಲ್ಲ. ರಾತ್ರಿಪೂರ್ತಿ ಪಕ್ಕದ ಮನೆಯಲ್ಲೇ ಇದೇನೆ. ಏಕೆಂದರೆ ನನ್ನ ಶಾಲೆಯ ‘ಪ್ರೋಗ್ರೆಸ್ ಕಾರ್ಡ್’ಗಿಂತಲೂ ಕೆಟ್ಟದಾದ ಸಂಗತಿಗಳು ಜಗತ್ತಿನಲ್ಲಿವೆ ಎನ್ನುವುದನ್ನು ನಿನಗೆ ತಿಳಿಸಬೇಕಿತ್ತು. ಅದಕ್ಕಾಗಿ ಈ ಪತ್ರ..

ಬೀರುವಿನ ಮಧ್ಯದ ಡ್ರಾ ಎಳೆದರೆ ‘ರಿಪೋರ್ಟ್ ಕಾರ್ಡ್’ ಕಾಣುತ್ತದೆ. ದಯವಿಟ್ಟು ಅದಕ್ಕೊಂದು ಸಹಿ ಹಾಕು ಮತ್ತೆ ಮನೆಗೆ ವಾಪಸ್ ಬರಲು ಯಾವ ಟೈಮ್ ಸೂಕ್ತ? ಅನ್ನೋದನ್ನ ಕಾಲ್ ಮಾಡಿ ಹೇಳು ಪ್ಲೀಸ್..

ಅಪ್ಪಾ, ಲವ್ ಯೂ ಪಾ..

ಇಂತಿ ನಿನ್ನ ಕೂಸುಮರಿ

ಭಾವಾನುವಾದ-ಶ್ರೀದೇವಿ ಕಳಸದ
(ಈಮೇಲ್‌ನಲ್ಲಿ ಹರಿದಾಡುತ್ತಿದ್ದ ಈ ಪತ್ರ ಮಯೂರದಲ್ಲಿ ಪ್ರಕಟ)

6 comments:

sunaath said...

ಶ್ರೀದೇವಿ,
ಮಯೂರಕ್ಕಿಂತ ಮೊದಲೂ ಸಹ ಈ ಕತೆ ಬೇರೆಲ್ಲೊ ಪ್ರಕಟವಾದಂತಿದೆ. ಮತ್ತೊಮ್ಮೆ ಓದಿ ಖುಶಿಯಾಯಿತು.

Guru's world said...

ಓಹ್,,,ಎಂತಹ ಕತೆ....ನಿಜವಾಗ್ಲೂ ತುಂಬಾ ಚೆನ್ನಾಗಿ ಇತ್ತು....

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ.

Chamaraj Savadi said...

ಚೆನ್ನಾಗಿದೆ ಕತೆ ಶ್ರೀದೇವಿ. ಮಿನಿ ಪತ್ತೆದಾರಿ ಕತೆಯಂತೆ.

ಏಕೋ ಅವನ ವಯಸ್ಸು ೪೨ ಅನ್ನೋದು ನನಗೆ ಒಂಚೂರು ಅಳುಕುಂಟು ಮಾಡಿದ್ದಂತೂ ನಿಜ. :)

ವಿ.ಆರ್.ಭಟ್ said...

ಈ ಕಥೆ/ಪತ್ರವನ್ನು ನಿಯತಕಾಲಿಕವೊಂದು ವರ್ಷದ ಮೋದಲೇ ಪ್ರಕಟಿಸಿತ್ತು, ಅದು ಮಯೂರವಲ್ಲ, ಬೇರಾವ ಪತ್ರಿಕೆ ಎಂಬುದು ಸರಿಯಾಗಿ ನೆನಪಿಗೆ ಬರುತ್ತಿಲ್ಲ, ಕಥೆ ಚೆನ್ನಾಗಿದೆ, ಇವತ್ತಿನ ವಾಸ್ತವಿ-ಕಥೆ!

avinash said...

Super....Thx 4 sharing