Friday, October 8, 2010

ಸದಾ ವತ್ಸಲೇ ಲಕ್ಷ್ಮೀ...
ನೋ ಲೈಟ್ಸ್, ನೋ ಕಟ್, ನೋ ರಿಟೇಕ್.

ಲಕ್ಷ್ಮೀ, ಹೌದು, ಜ್ಯೂಲಿ ಲಕ್ಷ್ಮೀ ಬೆಂಗಳೂರಿನ ಹೋಟೆಲ್ ಏಟ್ರಿಯಾನಲ್ಲಿ ಸಂಜೆ ಕಾಫಿಗೆ ಸಿಕ್ಕಿದ್ರು...

ಅದೇ ಮಾದಕ ಧ್ವನಿ. ಹರೆಯದ ಲವಲವಿಕೆ. ಐವತ್ತಾರು- ಐವತ್ತೇಳರ ಆಸುಪಾಸು ಓಡಾಡ್ತಿದೆ ವಯಸ್ಸು ಅಂತ ಅಂದಾಜಿಸಲೂ ಆಗದ ಮುಂಜಾನೆಯಂಥಾ ಮನಸ್ಸು. ಟೇಬಲ್ ಮೇಲಿದ್ದ ಟಿಶ್ಯೂ ಪೇಪರನ್ನು ಎಷ್ಟು ಕೋನಗಳಿಂದ ಮುದ್ದೆ ಮಾಡಲು ಸಾಧ್ಯವೋ ಅಷ್ಟು... ಮ್ದುದೆ ಮಾಡುತ್ತಲೇ ಮಾತನಾಡತೊಡಗಿದರು.

’ನನ್ನ ಮತ್ತು ಅನಂತ್ ನಡುವೆ ಒಂದು ಕೆಮಿಸ್ಟ್ರಿ ಇದೆ. ನಮ್ಮಿಬ್ಬರದು ಮೆಚ್ಯುರ್‍ಡ್ ಫ್ರೆಂಡ್‌ಶಿಪ್. ಪ್ರತಿಸಲವೂ ಶೂಟಿಂಗ್ ಮುಗಿದ ನಂತರ, ಸಾಕಿನ್ನು ಇನ್ಮೇಲೆ ಆಕ್ಟಿಂಗ್ ನಿಲ್ಲಿಸಿಬಿಡೋಣ ಅಂತ ಇಬ್ರೂ ಅಂದ್ಕೊಳ್ತಿರ್‍ತೇವೆ. ಆಗ ಅನಂತ್‌, ‘ಇದೇ ಲಾಸ್ಟು, ನಿಲ್ಲಿಸಿ ಬಿಡೋಣ ಲಕ್ಷ್ಮೀ, ಕ್ಯಾರೆಕ್ಟರ್ ಮಾಡ್ತಾ ಮಾಡ್ತಾ ನಾವೇ ಒಂದೊಂದು ಕ್ಯಾರೆಕ್ಟರ್ ಆಗಿಬಿಡ್ತಿವೊ ಏನೋ. ನನಗೇ... ನಾನ್ಯಾರು ಅನ್ನೋದನ್ನ ತಿಳ್ಕೊಬೇಕು ಲಕ್ಷ್ಮೀ...’ ಎಂದು ಹೇಳ್ತಿರ್‍ತಾರೆ. ನನಗೂ ಹಾಗೇ ಅನ್ನಸ್ತಿರತ್ತೆ. ಆದ್ರೆ....’

ಆದರೆ...?

ಯಾವತ್ತು ನಿರ್ದೇಶಕ ಭಗವಾನ್- ಪುಟ್ಟಿ ಲಕ್ಷ್ಮೀಗೆ ಕ್ಯಾಡ್‌ಬರೀಸ್‌ನ ಆಸೆ ತೋರಿಸಿದರೋ, ಒಂದು ಸಿನಿಮಾಕ್ಕೆ ಎರಡೂವರೆ ಸಾವಿರ ರೂಪಾಯಿ ಎಂದರೋ, ಲಕ್ಷ್ಮೀ ಕಣ್ಣ್ಲಲಿ ವಜ್ರದೋಲೆ ಮಿನುಗೇ ಬಿಟ್ಟಿತು (ಆಗಿನ ವಜ್ರದೋಲೆಯ ರೇಟು!) ಅಂದಿನಿಂದ ಇಂದಿನವರೆಗೂ ಲಕ್ಷ್ಮೀಯದು ಪ್ಯಾಕ್‌ಅಪ್ ಆಗದ ಶೂಟಿಂಗ್. ಕಳಚಲಾಗದ ಮೇಕಪ್.

ಸಂಪ್ರದಾಯಸ್ಥ ಕುಟುಂಬವಾದರೂ ಬೆಳೆದ್ದಿದು ಶುದ್ಧ ಗಂಡುಬೀರಿ ಹಾಗೆ ಎಂದು ಯಾವ ಸಂಕೋಚವ್ಲಿಲದೆಯೇ ಹೇಳಿಕೊಳ್ಳುವ ಈ ಧೈರ್ಯಲಕ್ಷ್ಮೀ ಹುಡುಗರ ದಂಡಿನಲ್ಲೇ ಓಡಾಡಿಕೊಂಡ್ದಿದವರು. ಗಿಲ್ಲಿದಾಂಡು ಆಡುತ್ತ, ಕಾಂಪೌಂಡ್ ಹಾರುತ್ತ ಹೀಗೆ..

ಹರೆಯಕ್ಕೆ ಕಾಲಿಡುತ್ತಿದ್ದಂತೆ ಹೊಸ್ತಿಲು ಕಾಲು ಕಟ್ಟತೊಡಗಿತು. ಆದರೆ ಅಷ್ಟೇ ಬೇಗ ಕೇರ್‌ಫ್ರೀ ಬದುಕಿನ ಬಾಗಿಲು ತೆರೆದ್ದಿದು ಸಿನಿಮಾ. ‘ಆಗ ಹದಿನಾಲ್ಕು-ಹದಿನೈದಿರಬೇಕು. ಮನೆಯಲ್ಲಿ ಎಲದಕ್ಕೂ ರಿಸ್ಟ್ರಿಕ್ಶನ್. ಸಂಜೆಯಾಗ್ತಿದ್ದ ಹಾಗೆ ಬಾಗಿಲಲ್ಲಿ ನಿಲ್ಲಬಾರದು. ಲಂಗಾ-ದಾವಣಿನೇ ಹಾಕ್ಕೊಳ್ಬೇಕು ಅಂತೆಲ್ಲಾ. ಕೋಪಿಸ್ಕೊಂಡು ಒಂದು ಸೈಡ್‌ಲುಕ್ ಕೊಟ್ಟವಳೇ.. ಕೋಣೆ ಬಾಗಿಲು ಹಾಕ್ಕೊಂಡು ಕನ್ನಡಿ ಮುಂದೆ ಅಳ್ತಾ ಕೂತ್ಕೊಂಡ್‌ಬಿಡ್ತಿದ್ದೆ. ಬೇಜಾರಿನಿಂದಲದಲ, ಹಟ! ಆಮೇಲೆ ಕನ್ನಡಿಯಲ್ಲಿ ನನ್ನನ್ನ ನಾನೇ ನೋಡ್ಕೊಳ್ತಾ ನೋಡ್ಕೊಳ್ತಾ ಅಳುವನ್ನೇ ಮರೆತುಬಿಡ್ತಿದ್ದೆ’.ಅತ್ರೂ ಲೆಕ್ಕಚಾರದಲ್ಲಿ ಅಳಬೇಕ್ರಿ...

ಆಗ ಮರೆತ ಅಳು ಮತ್ತೆ ರಿಕಲೆಕ್ಟ್ ಆಗ್ತಿದ್ದದ್ದು ನಟಿಸುವಾಗ. ಸಿನಿಮಾಗಳಲ್ಲಿ ಎದೆ ಬಿರಿಯೋ ಹಾಗೆ ಹೋ... ಎಂದು ಅಳುವ ಲಕ್ಷ್ಮೀಗೆ ಮೊದ ಮೊದಲು ಅಳುವುದಕ್ಕೆ ಬರುತ್ತಿರಲ್ಲಿಲವಂತೆ. ಆಗ ಅನಿವಾರ್ಯವಾಗಿ ಸಿನಿಮಾಗಳಲ್ಲಿ ಗ್ಲಿಸ್‌ರಿನ್ ಡಬ್ಬ ಖಾಯಂ ಆಯಿತು. ಕ್ರಮೇಣ ಅದರಿಂದ ಸುರಿಯುವ ಗ್ಲಿಸ್‌ರಿನ್‌ಮಿಶ್ರಿತ ಸಿಹಿಕಣ್ಣೀರು ನೆಕ್ಕುವುದೂ ಸಿನಿಮಾದಂತೆಯೇ ಆಪ್ತವಾಯಿತು. ಟಾಮ್‌ಬಾಯಿಶ್‌ನಂತೆ ಬೆಳೆದಿದ್ದರೂ ಕೂಡಿ ಬಾಳುವೆ ಮಾಡುವುದು ಕಷ್ಟವೇ... ನೋವು, ಮುನಿಸು, ಹತಾಶೆ ಇದ್ದದೇ. ಆಗ್ಲೆಲ ಅಳು ತಡೆಯಲಾದೀತೆ? ನಷ್ಟ-ಕಷ್ಟ ಎಂದು... ಭಾವೋದ್ವೇಗದ ಸಂದರ್ಭದ್ಲಲೂ ಲೆಕ್ಕಾಚಾರ ಹಾಕಲಾದೀತೆ?

ಆದರೆ ಲಕ್ಷ್ಮೀ ತನ್ನ ಅಳುವಿಗೂ ಬೆಲೆ ಕಟ್ಟಿಕೊಳ್ಳುತ್ತ ಬಂದವರು. ನೋವನ್ನೂ ಅಳುವನ್ನೂ ಸಕಾರಾತ್ಮಕವಾಗಿ ಬಳಸಿಕೊಳ್ಳುವ ಕಲೆಗಾರಿಕೆ, ಪ್ರಜ್ಞೆ ಅವರಲ್ಲಿ ಸದಾ ಜಾಗೃತ. ‘ಯಾವುದೇ ಕಾರಣಕ್ಕಾಗಲಿ ಮನೇಲಿದ್ದಾಗ ಮಾತ್ರ ಅಳ್ತಿರಲಿಲ್ಲ. ಸೆಟ್‌ನಲ್ಲಿ ಅಳುವ ಸೀನ್‌ನಲ್ಲೇ ಚೆನ್ನಾಗಿ ಅತ್ತುಬಿಡ್ತಿದ್ದೆ. ಇದ್ರಿಂದ ನನ್ನ ಮನಸ್ಸೂ ಹಗುರಾಗ್ತಿತ್ತು. ದುಡ್ಡಿಗೆ ದುಡ್ಡೂ ಬರ್‍ತಿತ್ತು. ಅಲ್ರೀ... ನಮ್ಮ ಎನರ್ಜಿಯನ್ನ ನಾವ್ಯಾಕೆ ವೇಸ್ಟ್ ಮಾಡ್ಕೊಬೇಕು? ನನ್ನ ಸ್ನೇಹಿತ ಕಮಲಹಾಸನ್‌ಗೂ ಇದೇ ಅಭ್ಯಾಸವಿದೆಯಂತೆ. ಹಾಗೆನೇ ತಮಿಳು ನಟ ಶ್ರೀಕಾಂತ್‌ಗೂ. ಅಂದ ಹಾಗೆ ನೋವಿಗೆ ತುಂಬಾ ಶಕ್ತಿ ಇದೇರೀ.. ಅದಕ್ಕೆ, ಅದನ್ನ ಪ್ರೀತಿಸೋದನ್ನ ಕಲಿತುಬಿಡಬೇಕು. ಅನುಭವಗಳೇ ನಮ್ಮನ್ನು ಬದಲಾಯಿಸುತ್ತವೆ’ ಎಂದು ಶೂನ್ಯನೋಟ ಬೀರಿದವರೊಮ್ಮೆ ‘ಅರೆ, ನಿಮ್ಮ ಕಾಫಿ ಹಾಗೇ ಇದೆ ಕಪ್ನಲ್ಲಿ...’ ಎಂದು ಮಾತು ತಿರುಗಿಸಿಬಿಟ್ಟರು ಗಾಳಿಯಂತೆ.

‘ನಿಜಜೀವನದಲ್ಲಿನ ’ಗಾಳಿಮಾತಿ’ಗೆಲ್ಲ ಹೇಗೆ ಸ್ಪಂದಿಸುತ್ತ ಬಂದಿದ್ದೀರಿ?” ಎಂದಿದ್ದಕ್ಕೆ, ‘ಅದು ನನ್ನ ಸಮಸ್ಯೆಯಲ್ಲ, ಗಾಸಿಪ್ ಮಾಡುವವರದು’ ಎಂದು ಚುಟುಕಾಗಿ ಉತ್ತರಿಸಿ ತೆಳುವಾಗಿ ನಕ್ಕುಬಿಟ್ಟರು.ಕಾಡಿನಲ್ಲೊಬ್ಬಳು ಅಮ್ಮ..


ಇದಕ್ಕ್ದಿದಂತೆ ಕಾಡು- ಮಳೆದಿನಗಳಿಗೆ ಸರಿದರು. ‘ಅವತ್ತು ತಮಿಳುನಾಡಿನ ಉರ್ಕಾಡ್‌ನ ಕಾಡಿನಲ್ಲಿ ಶೂಟಿಂಗ್ ನಡೀತಿತ್ತು. ಇದ್ದಕ್ಕಿದ್ದ ಹಾಗೆ ಮಳೆ ಬಂತು. ಒಬ್ಬೊಬ್ರೂ ಒಂದು ಕಡೆಯಾಗ್ಬಿಟ್ರು. ತಮಿಳು ನಟ ಶಿವಕುಮಾರ್ ಮತ್ತು ನಾನು ಅಲೇ ಇದ ಗುಡಿಸಿಲಿನೊಳಗೆ ನುಗ್ಗಿದ್ವಿ. ನೆಟ್ಟಗೆ ನಿಂತ್ಕೊಳ್ಳೋದಕ್ಕೂ ಆಗದಿರೋ ಆ ಗುಡಿಸಿಲಿನಲ್ಲಿ ಒಂದು ಹಣ್ಣಾದ ಅಜ್ಜಿ. ಪಟ್ಟಣದವರಿಗೆ ಈ ವಾಸನೆಯೆಲ್ಲ ಆಗ್ಲಿಕ್ಕಿಲ್ಲ ಅಂತ ತಕ್ಷಣ ಊದುಬತ್ತಿ ಹಚ್ಚಿದ್ಲು. ಹೊತ್ತು ಸರೀತಿತ್ತು. ಹೊಟ್ಟೆ ಚುರುಗುಡ್ತಿತ್ತು. ಗಂಜಿ ಇದೆಯಾ ಅಂತ ಕೇಳಿದ್ದಕ್ಕೆ ಇಲ್ಲ ಪೆಚ್ಚು ಮೋರೆ ಹಾಕಿದ ಅಜ್ಜಿ, ಮಳೆನಲ್ಲಿ ನೆನಕೊಂಡೇ ಪಕ್ಕದ ಗುಡಿಸಿಲಿನಿಂದ ಹಲಸಿನ ಹಪ್ಪಳ ತಂದು ಸುಟ್ಟುಕೊಟ್ಟಳು. ನಿಜವಾಗಲೂ ಆಕೆಯದು ತಾಯಿಹೃದಯ; ನಾವು ತಿನ್ನುವುದನ್ನೇ ನೋಡುತ್ತ ಕುಳಿತ್ದಿದಳು’.ಚಾಕಲೇಟಿನ ಆಸೆ, ಸ್ಟೈಲಿಶ್ ಡ್ರೆಸ್ಸೂ..

ತಂದೆ ವೈ.ವಿ.ರಾವ್ ಚಿತ್ರ ನಿರ್ದೇಶಕ, ತಾಯಿ ರುಕ್ಮಿಣಿ ತಮಿಳು ಚಿತ್ರ ನಟಿಯಾಗ್ದಿದರೂ ಚಿತ್ರರಂಗ ಪ್ರವೇಶಿಸಲು ಪೂರ್ವ ತಯಾರಿಯೂ ಇರಲಿಲ್ಲ. ಕಲಾವಿದೆಯಾಗಬೇಕೆಂಬ ಕನಸೂ ಇರಲ್ಲಿಲ. ಕೇವಲ ಚಾಕಲೇಟಿನ ಆಸೆಗೆ, ಬಗೆಬಗೆಯ ಬಟ್ಟೆ ತೊಟ್ಟುಕೊಳ್ಳುವ ಅವಕಾಶಕ್ಕೆ ಸೆಟ್‌ನಲ್ಲಿ ಅವರು ಹೇಳಿದಂತೆ ಮಾಡುತ್ತ ಹೋದರು ಲಕ್ಷ್ಮೀ. ಅದಕ್ಕೆ ಅಭಿನಯವೆನ್ನುತ್ತಾರೆ ಎನ್ನುವುದೂ ಕೂಡ ಅವರ ಅರಿವಿನಲ್ಲಿ ಇರಲಿಲ್ಲವಂತೆ! ‘ಈಗಿನ ಯುವಕಲಾವಿದರೇ ನನಗೆ ಸ್ಫೂರ್ತಿ. ಹೊಸ ಡೈರೆಕ್ಟರ್‌ಗಳೇ ಗುರುಗಳು. ಫೀಲ್ಡ್ ಬಗೆಗಿನ ಕಮಿಟ್‌ಮೆಂಟ್ ಅವರಲ್ಲಿದೆ. ಅದಕ್ಕೆ ಬೇಕಾಗುವ ಎಲ್ಲ ತಯಾರಿಯೂ, ಶ್ರದ್ಧೆಯೂ. ಮೇಕಪ್, ಡಯಟ್, ಡ್ರೆಸ್‌ಸೆನ್ಸ್, ವರ್ಕ್‌ಔಟ್, ಡ್ಯಾನ್ಸಿಂಗ್, ಕೆರಿಯರ್ ಪ್ಲಾನಿಂಗ್ ಇತ್ಯಾದಿ...’ಪಾತ್ರಧ್ಯಾನ


ವಯಸ್ಸು ಅವರ ದೇಹವನ್ನ ತುಸು ಬಾಗಿಸಿದೆಯಾದರೂ ಮುಖಲ್ಲಿನ ಆಕರ್ಷಣೆ ಹಾಗೇ ಇದೆ. ಅಭಿಮಾನಿಗಳ ಮೆಚ್ಚುಗೆ ಪತ್ರಗಳೇ ಅವರನ್ನು ಸ್ವಲ್ಪ ವ್ಯಾಯಾಮ, ನಡಿಗೆ ಕಡೆಗೆ ವಾಲಿಸಿದ್ದಂತೆ. ‘ಅಭಿಮಾನಿಗಳು ಸೋದರಿ, ಸ್ನೇಹಿತೆ, ಪ್ರೇಯಸಿ ಎಂದೆಲ್ಲಾ ಭಾವಿಸಿಕೊಂಡು ಪತ್ರ ಬರೆಯುತ್ತಿದ್ದರು. ಉತ್ತರಿಸಬೇಕೆನ್ನಿಸಿದಲ್ಲಿ ಉತ್ತರಿಸುತ್ತಿದ್ದೆ. ಫೋಟೊ ಕೂಡ ಕಳಿಸುತ್ತಿದ್ದೆ. ಪಾತ್ರಗಳ ಮೂಲಕ ಜನ ನಮ್ಮನ್ನು ಇಷ್ಟಪಡ್ತಾರೆ ಎಂದ ಮೇಲೆ ಸ್ವಲ್ಪ ಮೈಕಟ್ಟನ್ನೂ ಮೆಂಟೇನ್ ಮಾಡಬೇಕು ಅನ್ನಿಸೋದಕ್ಕೆ ಶುರುವಾಯ್ತು. ಆದ್ರೆ ಡಯಟ್ ಮಾಡ್ಲಿಲ್ಲ. ಇಷ್ಟ ಪಟ್ಟದ್ದನ್ನೆಲ್ಲ ತಿನ್ನುತ್ತಾ ಅದನ್ನ ಕರಗಿಸೋದಕ್ಕೆ ವ್ಯಾಯಾಮ, ವಾಕಿಂಗ್ ಅಂತೆಲ್ಲಾ ಮಾಡ್ತಿದ್ದೆ. ಈಗ್ಲೂ ಮಾಡ್ತೀನಿ’.

ನಿಜ ಬದುಕಿನ ಪಾತ್ರಗಳ ಬಗ್ಗೆ ಯೋಚಿಸದೆ, ಊಹಿಸದೆ ’ಸದ್ಯ’ಕ್ಕಷ್ಟೇ ಆತುಕೊಳ್ಳುವ ಲಕ್ಷ್ಮೀಗೆ ಧ್ಯಾನವೆಂದರೆ ಅಭಿನಯ ಧ್ಯಾನ. ‘ಧ್ಯಾನ ಮಾಡ್ತೀನಿ. ಆದ್ರೆ ಅದು ಧ್ಯಾನವೋ ಏನೋ ಗೊತ್ತಿಲ್ಲ. ಸುಮ್ನೆ ಕೂತ್ಕೊಂಡು ಮಾಡುವ ಪಾತ್ರಗಳ ಬಗ್ಗೆ ದಿನವೂ ಯೋಚಿಸ್ತಿರ್‍ತೀನಿ. ಅದೊಂಥರ ಹೋಮ್‌ವರ್ಕ್ ಕೂಡ. ಇದೆಲ್ಲದವರ ಜೊತೆ ನಿದ್ದೆ ಮುಖ್ಯ. ನಿಶ್ಚಿಂತೆಯಿಂದ ಮಲಗಬೇಕು. ಕೆಲವೊಮ್ಮೆ ಶೂಟಿಂಗ್ ಶೆಡ್ಯೂಲ್‌ನಿಂದ ಗಂಡ-ಮಕ್ಕಳಿಗೆ ತೊಂದರೆಯಾಗಿರುತ್ತೆ. ಆಗೆಲ್ಲಾ ಮಲಗೋ ಮುಂಚೆ ಯಾರ್‍ಯಾರಿಗೆ ಕ್ಷಮೆ ಕೇಳಬೇಕೊ, ಧನ್ಯವಾದ ಹೇಳಬೇಕೊ ಅದನ್ನೆಲ್ಲಾ ಮುಗಿಸಿ ನೆಮ್ಮದಿಯಿಂದ ನಿದ್ದೆಗಿಳಿತೀನಿ’.

ನನಗೆ ನಾನೇ ಶಕ್ತಿತನಗೆ ತಾನೇ ಶಕ್ತಿ. ತಾನೇ ಮುಖ್ಯ ಎನ್ನುವ ಲಕ್ಷ್ಮೀ, ಛಲವೇ ಎಲವನ್ನೂ ಸಂಭಾಳಿಸಿಕೊಂಡು ಹೋಗಲು ಕಲಿಸುತ್ತದೆ ಎನ್ನುತ್ತಾರೆ. ವ್ಯಕ್ತಿಸ್ವಾತಂತ್ರ್ಯವನ್ನು ಅನುಮೋದಿಸುತ್ತಾ ಅಮ್ಮನನ್ನು ನೆನೆಯುತ್ತಾರೆ. ‘ಅಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡ್ತಿದ್ರು. ಆದ್ರೆ ಮುಂದೆ ಕುಟುಂಬಕ್ಕಾಗಿ ಮತ್ತು ನನಗಾಗಿ ಎಲವನ್ನೂ ತ್ಯಾಗ ಮಾಡ್ತಾ ಬಂದ್ರು. ಆದರೆ ಆ ಬಗ್ಗೆ ಅವರು ಒಂದು ಮಾತನ್ನೂ ಎಂದೂ ಆಡಲಿಲ್ಲ’ಎಂದು ಮೆದುವಾಗುತ್ತಾರೆ.

ಇದ್ದಕ್ಕಿದ್ದಂತೆ ತುಸು ಅಂತರದಲ್ಲಿ ಕುಳಿತ್ದಿದ ಪುಟ್ಟ ಮಗಳು ಸಂಯುಕ್ತಾಗೆ, ‘ಮ್ಯಾಡಮ್ ನಿಮಗೇನಾದರೂ ಪ್ರಶ್ನೆಗಳಿವೆಯಾ?’ ಎಂದು ತುಂಟತನದಿಂದ ಕೇಳಿ ಮತ್ತೆ ಮಾತಿಗೆ ಹೊರಳಿದರು. (ಎಲ್ಲಿ ಮಗಳು ತನ್ನನ್ನು ಗಮನಿಸುತ್ತಿಲ್ಲವೆಂದು ನೊಂದುಕೊಂಡಾಳು ಎಂದೋ ಏನೋ..) ‘ನನ್ನ ಮಕ್ಕಳ ಜೀವನ ಅವರವರ ಕೈಯಲ್ಲಿ. ಸಲಹೆ ಕೊಡುತ್ತೇನೆ, ನಿರ್ಧಾರ ಅವರಿಗೆ ಬಿಟ್ಟಿದ್ದು’.

ಅಷ್ಟೊತ್ತಿಗೆ ನಿರ್ದೇಶಕರೂ, ಕಾದಂಬರಿಕಾರರೂ ಆಗಿರುವ ಪತಿ ಶಿವಚಂದ್ರನ್ ಫೋನ್ ಕರೆ... ‘ಎಕ್ಸ್‌ಕ್ಯೂಸ್ ಮಿ, ಮೈ ಮ್ಯಾನ್ ಈಸ್ ಕಾಲಿಂಗ್’ ಎಂದವರೇ, ಚುಟುಕು ಸಂಭಾಷಣೆ ಮುಗಿಸಿದರು.

‘ಕಂಫರ್ಟ್’ ಝೋನಿನಾಚೆಗೆ..

ಪ್ರತೀ ಯಶಸ್ವೀ ಮಹಿಳೆ ಹಿಂದೆ ಪುರುಷನೂ ಇರುತ್ತಾನೆ ಎಂದು ಪತಿಯನ್ನು ಉದಾಹರಿಸುತ್ತ, ಪ್ರಸ್ತುತ ಸಂಬಂಧಗಳ ಸುತ್ತ ಸುತ್ತು ಹಾಕಿಕೊಂಡಿತು ಅವರ ಮಾತು.

‘ಗಂಡ-ಹೆಂಡತಿ ಎನ್ನುವ ಭಾವನಾತ್ಮಕ ಸಂಬಂಧಕ್ಕಿಂತ ಸ್ವ-ಭದ್ರತೆ ಈಗ ಮುಖ್ಯವಾಗ್ತಿದೆ. ಅದರಲ್ಲೂ ಹೆಣ್ಣು ಯಾವ ರೀತಿಯಿಂದಲೂ ಅವಲಂಬಿಸಬೇಕಿಲ್ಲ. ಇದು ಒಂದು ಕಡೆಯಿಂದ ಉತ್ತಮ ವಿಚಾರವೇ ಆದರೆ ನಮ್ಮ ದೇಶದ ಜಾತಿ ಪದ್ಧತಿ, ತನಗೆ ಹೇಗೆ ಬೇಕೋ ಹಾಗೆ ಒಗ್ಗಿಸಿಕೊಳ್ಳುವ ಪುರುಷನ ನಯವಂಚಕತನ ಮಾತ್ರ ಇನ್ನೂ ಹಾಗೇ ಇದೆ ಎಂದರು. ತಮಿಳು ಕಿರುತೆರೆಯಲ್ಲಿ ’ಕಥೆಯಲ್ಲೈ ನಿಜಂ’ ಎನ್ನುವ ರಿಯಾಲಿಟಿ ಶೋನಲ್ಲಿನ ಕೆಲ ಘಟನೆಗಳನ್ನ ಕಣ್ಮುಂದೆ ತಂದುಕೊಂಡರು. ‘ಬದುಕು ಅಂದರೆ ಹೀಗಿರುತ್ತಾ ಅಂತ ಗೊತ್ತಾಗ್ದಿದೇ ಕಳೆದ ಐದು ವರ್ಷಗಳಲ್ಲಿ. ಯಾಕೆಂದ್ರೆ ನಾನು ಬೆಳೆದ್ದಿದು ತುಂಬಾ ಕಂಫರ್ಟ್ ಝೋನ್‌ನಲ್ಲಿ. ಆಡು ಆಡುತ್ತಲೇ ಆಟಿಸಮ್‌ ಗೆ ಒಳಗಾಗುವ ಮಗು ಹಾಗೂ ಅದರ ತಾಯಿಯ ಸಂಕಟ. ಅರಿವಿದ್ದೋ ಅರಿವ್ಲಿಲದೆಯೋ ವೇಶ್ಯಾವೃತ್ತಿಗೆ ಅಂಟಿಕೊಂಡ ಹೆಣ್ಣುಮಕ್ಕಳನ್ನು ಸ್ವತಃ ತಾಯಿಯೇ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಸಂಕಟ ಇತ್ಯಾದಿ...’

ಈಗಲೂ ರಾತ್ರೋ ರಾತ್ರಿ ಎಷ್ಟೋ ಜನ ಚೆನ್ನೈನಲ್ಲಿರುವ ಲಕ್ಷ್ಮೀ ಮನೆ ಬಾಗಿಲು ತಟ್ಟುತ್ತಾರೆ. ನ್ಯಾಯ ಕೇಳಿಕೊಂಡು, ಕಷ್ಟ ಹೇಳಿಕೊಂಡು, ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದು. ಕೆಲ ದಿನಗಳಲ್ಲೇ ಸುವರ್ಣ ವಾಹಿನಿಯಲ್ಲೂ ‘ಕಥೆಯಲ್ಲ ಜೀವನ’ ಶಿರ್ಷಿಕೆಯಡಿ ರಿಯಾಲಿಟಿ ಷೋ ಹೊರಬರಲಿದ್ದು ಅದನ್ನು ನಡೆಸಿಕೊಡುವ ತಯಾರಿಯಲ್ಲಿ ಲಕ್ಷ್ಮೀ ಇದಾರೆ.

ಅಷ್ಟೊತ್ತಿಗೆ ಪುಟ್ಟ ಮಗಳು ಸಂಯುಕ್ತಾ ಕಿವಿಯಲ್ಲಿ ಏನೋ ಗುಸುಗುಸು ಮಾಡಿಹೋದಳು. ಶಿವಕಾಶಿಯಲ್ಲಿ ಅನಂತನಾಗ್ ಜೊತೆ ನಟಿಸಿದ್ದನ್ನು, ಇನ್ನೂ ಹೆಸರಿಡದ ಚಿತ್ರವೊಂದಕ್ಕೆ ಸಹಿ ಹಾಕಿರುವುದನ್ನೂ ಹೇಳುತ್ತಿರುವಂತೆಯೇ ಮತ್ತೆ ಶಿವಚಂದ್ರನ್ ಕರೆ ಬಂತು. ಅಲ್ಲಿಗೆ ಮಾತೂ ಮುಗಿಸಬೇಕಯ್ತು.

-------------------

ಸಣ್ಣ ’ಸಣ್ಣ’ ವಿಷಯ..


'ಶೂಟಿಂಗ್ ಟೈಮ್‌ನಲ್ಲಿ ರಾಜ್‌ಕುಮಾರ್ ಸರ್‌ಗೆ ಕೇಳಿದೆ. ಸ್ಕೂಟರ್ ಓಡಿಸ್ಲಾ ಅಂತ... ಹೂಂ ಎಂದರು. ಓಡಿಸೇ ಬಿಟ್ಟೆ. ಆಮೇಲೆ ಕಾರ್, ಲಾರೀನೂ ಓಡಿಸಿದೆ. ಪ್ಲೇನ್ ಓಡಿಸೋದಕ್ಕೂ ಪ್ರಯತ್ನಪಟ್ಟಿದ್ದೆ. ಆದರೆ ಇದುವರೆಗೂ ಸೈಕಲ್ ಮಾತ್ರ ಬರ್‍ತಿಲ್ಲ'.

--------------------

’ಪುಸ್ತಕಗಳಿಂದಲೇ ನನಗೆ ಸಾಕಷ್ಟು ಜನ ಫ್ರೆಂಡ್ಸ್ ಆಗಿದಾರೆ. ಕರ್ನಾಟಕದಲ್ಲೂ ಕೆಲವರಿದ್ದಾರೆ. ಅವರೆಲ್ಲರೂ ಸಾಮಾನ್ಯ ವರ್ಗದವರೇ. ಆದರೆ ಅವರ ಹೆಸರನ್ನು ಬಹಿರಂಗ ಪಡಿಸಬಾರದು ಎನ್ನುವುದು ಅವರ ಇಚ್ಛೆ’

--------------------

'ಭಾಷೆ ಕಲಿಯೋದು ಕಷ್ಟ ಅಲ್ಲ. ಟೈಮ್‌ಗೆ ಸರಿಯಾಗಿ ದುಡ್ಡು ಬಂದ್ಬಿಟ್ರೆ ಎಲ್ಲಾ ಬಂದ್ಬಿಡತ್ತೆ. ಅದಕ್ಕೇ ನನ್ನ ಎಲ್ಲ ಚಿತ್ರಗಳಿಗೂ ನಾನೇ ಡಬ್ಬಿಂಗ್ ಮಾಡ್ತಿದ್ದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ...

-ಶ್ರೀದೇವಿ ಕಳಸದ

(’ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟ)

3 comments:

sunaath said...

ಟೈಮ್‌ಗೆ ಸರಿಯಾಗಿ ದುಡ್ಡು ಬಂದ್ಬಿಟ್ರೆ ಎಲಾ ಬಂದ್ಬಿಡತ್ತೆ.
Very practical person!

Lakshmana said...

ದುಡ್ಡು ಬಂದ್ಬಿಟ್ರೆ ಎಲಾ ಬಂದ್ಬಿಡತ್ತೆ. very good observation, writing is also good and impressive.

- Kodase

Chamaraj Savadi said...

ತುಂಬ ಚೆನ್ನಾಗಿ ಗ್ರಹಿಸಿ ಬರೆದಿದ್ದೀರಿ ಶ್ರೀದೇವಿ. ಆಪ್ತವಾಗಿದೆ ವಿಷಯ, ಬರವಣಿಗೆ.

ಲಕ್ಷ್ಮಿ ಹೇಳಿದ್ದು ನಿಜ. ಸರಿಯಾದ ಸಮಯಕ್ಕೆ ಸರಿಯಾಗಿರೋದು ಬಂದರೆ ಇತರ ವಿಷಯಗಳು ಸಮಸ್ಯೆಗಳಾಗಲ್ಲ. ಅದನ್ನು ಲಕ್ಷ್ಮಿ ಚೆನ್ನಾಗಿ ಗ್ರಹಿಸಿದ್ದಾರೆ.

- ಚಾಮರಾಜ ಸವಡಿ