Thursday, November 25, 2010

ಆ ಕಥೆ... ಆ ಪದ...

ಬಾಲ್ಯದಲ್ಲಿ ಕೇಳಿದ, ಹೂತ ಹುಣಸೆಯಂತೆ ಈಗಲೂ ಮನಸ್ಸಿನಲ್ಲಿ ಉಳಿದ ಕಥೆ/ಕವಿತೆ ಯಾವುದು ಎಂದು ಕೇಳಿದ್ದೇ ತಡ- ನೆನಪುಗಳು ಬಿಚ್ಚಿಕೊಂಡವು. ಈ ನಾಲ್ಕು ಕಥೆಗಳಲ್ಲಿ ಹತ್ತಾರು ಕಥೆಗಳು ಇಣುಕುತ್ತಿರುವುದು ವಿಶೇಷ.


‘ಅಮ್ಮಾ ಇಡೀ ರೊಟ್ಟಿ ಬೇಕು..’ ತನ್ನ ಮೊದಲ ಗಂಡನಿಂದ ಪಡೆದ ಮಗು ಅವಳನ್ನು ಕೇಳತ್ತೆ. ಆಗ ಅವಳು, ‘ಊಂಹೂ.. ಅರ್ಧಾ ರೊಟ್ಟಿನೇ ಕೊಡೋದು’ ಅಂತ ಗದರಿಸ್ತಾಳೆ. ‘ಇಲ್ಲಮ್ಮಾ ಹಸಿವು.. ಕೊಡಮ್ಮಾ ಪೂರ್ತಿ ರೊಟ್ಟಿ..’. ಗೋಗರಿಯುತ್ತೆ ಮಗು.

ಅವಳು ಮಗುವಿನ ಕಿರಿಕಿರಿ ತಾಳಲಾರದೆ ಹೊರದಬ್ಬಿ ಬಾಗಿಲು ಮುಚ್ಚಿಬಿಡುತ್ತಾಳೆ. ಆಗ ಮಗು ‘ಬಾಗಿಲು ತೆಗಿಯಮ್ಮಾ.. ಬಾಗಿಲು ತೆಗಿ..’ ಒಂದೇ ಸಮನೆ ಅಳೋದಕ್ಕೆ ಶುರು ಮಾಡತ್ತೆ. ‘ಕಣ್ಣು ಪಿಳಿಪಿಳಿ, ಬಾಲ ಪಟಪಟ, ಕಣ್ಣು ಪಿಳಿಪಿಳಿ, ಬಾಲ ಪಟಪಟ... ತೆಗಿಯೇ ಅಮ್ಮಾ ಬಾಗಿಲು..’ ಎಷ್ಟು ಅತ್ತರೂ ಅವಳು ಬಾಗಿಲು ತೆಗೆಯೋದೇ ಇಲ್ಲ. ಕೊನೆಗೊಮ್ಮೆ ಅಳು ನಿಲ್ಲುತ್ತೆ.ಆಗ ಅವಳು ಬಾಗಿಲು ತೆರೆಯುತ್ತಾಳೆ. ಅಷ್ಟೊತ್ತಿಗೆ ಹುಲಿ ಮಗುವಿನ ಪ್ರಾಣವನ್ನು ಬಲಿ ತೆಗೆದುಕೊಂಡುಬಿಟ್ಟಿರುತ್ತೆ’.ಈ ಘಟನೆಯಿಂದ ಮನನೊಂದ ಅವಳು ಮುಂದೆ ತನ್ನ ಎರಡನೇ ಗಂಡನಿಂದ ಪಡೆದ ಮಗುವನ್ನು ಅತಿಯಾಗಿ ಪ್ರೀತಿಸಲು ತೊಡಗುತ್ತಾಳೆ.

ಅಮ್ಮ ನನಗೆ ಈ ಕಥೆ ಹೇಳಿದಾಗ ಸುಮಾರು 8 ವರ್ಷ ಇರಬಹುದು. ಆ ಸಮಯದಲ್ಲೇ ನನಗೊಬ್ಬ ತಮ್ಮ ಹುಟ್ಟಿದ್ದು. ಹುಟ್ಟಿದ ತಮ್ಮ ಖುಷಿಯನ್ನೂ ಜೊತೆಗೆ ಬೇಸರವನ್ನೂ ತಂದಿದ್ದ. ಆದರೆ ಈ ಕಥೆಯ ಎಳೆಯು ನನ್ನ ಅಮ್ಮನನ್ನು, ಬೆನ್ನಿಗೆ ಬಿದ್ದ ತಮ್ಮನನ್ನು ಪ್ರೀತಿಯಿಂದ ಹಿಡಿದಿಟ್ಟುಕೊಳ್ಳುವಂತೆ ಮಾಡಿತು. ಈ ಕಥೆಯ ಪರಿಣಾಮವೋ ಏನೋ ತಮ್ಮನನ್ನು ಮಗನಂತೆ ನೋಡಿಕೊಳ್ಳತೊಡಗಿದೆ.

ಆಗಿನಿಂದಲೂ ಕಥೆಯ ಈ ಸಂಕೀರ್ಣ ಭಾವ ನನ್ನನ್ನು ತೀವ್ರವಾಗಿ ಕಾಡಿದೆ. ಕಾಡುತ್ತಲೇ ಇದೆ. ನನ್ನ ‘ತಾಯಿ’ ಕಥೆಯಲ್ಲಿ ಅಮ್ಮ ಹೇಳಿದ ಈ ಕಥೆಯನ್ನೂ ಬಳಸಿಕೊಂಡಿದ್ದೇನೆ.

-ಯು.ಆರ್.ಅನಂತಮೂರ್ತಿ
----------------------------------------------------


ಒಬ್ಬ ರಾಜಾ ಮದ್ವಿ ಮಾಡ್ಕೊಬೇಕು ಅಂತ ಹೆಣ್ಣ ಹುಡಕ್ಯಾಡತಿದ್ನಂತ. ಎಷ್ಟ ಹುಡಕೀದ್ರೂ ತನಗ ಬೇಕಾದಂಥಾ ಹೆಣ್ಣೂ ಸಿಗಲೇ ಇಲ್ಲಂತ. ಕಡೀಕ ಬ್ಯಾಸೊತ್ತ ಅಂವಾ ಒಂದ ಹೊಂಡದತ್ರ ಹೋಗಿ ಕುಂತನಂತ. ಸ್ವಲ್ಪ ಹೊತ್ತಿಗೆ ಹೊಂಡದ ನೀರಿನ್ಯಾಗ ಅವನ ಹೆಣಾ ತೇಲಿ ಬಂತಂತ. ಆಮ್ಯಾಲ ಅಂವಾ ಆ ಹೆಣಾ ತಿನ್ನಾಕ ಶುರು ಮಾಡಿದ್ನಂತ. ಹಿಂಗ ಅಂವಾ ದಿನ್ನಾ ಹೋಗೂದು ಆ ಹೊಂಡದಾಗ ಇಣುಕೂದು, ತೇಲಿ ಬಂದ ತನ್ನ ಹೆಣಾನ್ನ ತಿನ್ನೂದು.. ಮತ್ತ ಹೊಳ್ಳಿಮನೀಗ್ ಬರೂದು... ಹಿಂಗ ನಡೀತಂತ ಅವನ ಜೀವನ..

ನಮ್ಮ ಅವ್ವ, ದೊಡ್ಡವ್ವನೂ ನನಗ ಸಣ್ಣಾಂವ ಇದ್ದಾಗ ಕಥಿ ಹೇಳತಿದ್ರು. ಆದ್ರ ಈ ಕಥಿ ಹೇಳಿದ್ದು ಮಾತ್ರ ನಮ್ಮಪ್ಪ.ನನ್ನೊಳಗಿನ ಬಾಲ್ಯ ಬಿಡಿಸಿಕೊಂಡು ಹರೆಯಕ್ಕ ಕಾಲಿಡೋ ಹೊತ್ತಿನ್ಯಾಗ ಅಪ್ಪಾ ಇದನ್ನ ಹೇಳಿದ್ದಾ. ಇಷ್ಟ ಅಲ್ಲಾ, ಅಂವಾ ಈ ಕಥೀಗೇ ಕೊಟ್ಟ ವಿವರಣಾ ಕೇಳ್ರಿ- ‘ನೀ ಇನ್ನೂ ಸಣ್ಣಾಂವಾ. ಆದರೂ ಇದನ್ನ ತಿಳ್ಕೊಂಡಿರು; ನಾಳೆ ನಿನಗ ಅನುರೂಪವಾದಂಥಾ ಹೆಣ್ಣ... ಬೇಕು ಅಂತ ಹುಡಿಕ್ಕೊಂಡ ಹೊಂಟ್ರ ನಿನಗ ನೀನ ಹೆಂಡತಿ ಆಗಬೇಕಾಕ್ಕೇತಿಪಾ ತಮ್ಮಾ. ಆಗ ಹೊಂಡದಾಗಿನ ರಾಜಾನ ಕಥಿ ಆದಂಗ ಆಕ್ಕೇತಿ ನೋಡ. ಆತ್ಮರತಿ ಅನ್ನೂದು ನಮ್ಮನ್ನ ತಿಂದಬಿಡತೇತಿಪಾ...’

ಅಪ್ಪಾ ಹೇಳಿದ ಈ ಕಥಿಯನ್ನ ‘ಸಿರಿಸಂಪಿಗೆ’ಯೊಳಗ ತಗೊಂಡೇನಿ. ಅಹಂ ಬ್ರಹ್ಮಾಸ್ಮಿ, ಆತ್ಮದರ್ಶನ, ಆತ್ಮಸಾಕ್ಷಾತ್ಕಾರ ಅಂತ ‘ಭಾರೀ’ ಸಂಸ್ಕೃತಿ ಬಗ್ಗೆ ಹೇಳ್ತಾರು ಖರೆ. ಆದರ ಇದೆಲ್ಲಾ ನಮ್ಮನ್ನ ಜನರಿಂದ ದೂರ ಸರಸ್ತೇತಿ. ಹೆಂಗಂದ್ರ ಪಶ್ಚಿಮದ ನಾರ್ಸಿಸ್‌ನ ಕಥಿಯೊಳಗ ಅಂವಾ.. ಹೊಂಡದೊಳಗ ತನ್ನ ಪ್ರತಿಬಿಂಬ ನೋಡ್ಕಕೋತ ಅದಕ್ಕ ಮುತ್ತು ಕೊಡಾಕ ಹೋದಂಗ ಆಕ್ಕೇತಿ.

ಆದರ ನಮ್ಮದು ಅಂಥಾ ಸಂಸ್ಕೃತಿ ಅಲ್ಲ. ಹೊಂಡದಾಗ ಮುಖ ನೋಡ್ರಿ. ಅದರ ತಿಳಿನೀರಿನ್ಯಾಗ ಇಣಕಿದ್ರ ಗಿಡ-ಬಳ್ಳಿ, ಮೋಡ, ಪಕ್ಷಿ ಅಷ್ಟ ಯಾಕ ಬಾಜೂಕಿನ ಬಳಗಾನೂ ಕಾಣತೇತಿ. ಜೊತೀಗೆ ನೀವಂತೂ ಇದ್ದ ಇರ್ತೀರಿ. ಅದಕ್ಕ ಜಾನಪದ ಅಂತೇತಿ; ಬಳಗದೊಳಗ ಬದುಕು ಅಂತ.

-ಚಂದ್ರಶೇಖರ ಕಂಬಾರ
-----------------------------------------‘ನಾನು ಪಂಜರ ಪಕ್ಷಿ, ಇನ್ನು ನನಗಾರು ಗತಿ
ಕೇಳಬಲ್ಲೆಯೇನು ನನ್ನ ಕಥೆಯ
ಅಲ್ಲಿ ಬನ-ಬನದಲ್ಲಿ, ಕಾಡ-ಗಿಡಗಿಡದಲ್ಲಿ
ಕೊಂಬೆ ಕೊಂಬೆಗೆ ಹೂ ಸಾವಿರಾರು.
ಬನದ ಹಣ್ಣಿನ ರುಚಿನ ಬರಿ ನೆನೆದರೇನುಂಟು
ಮರಳಿ ದೊರೆಯಬಹುದೇ ತವರಿನವರು..’

ಈ ಪದ್ಯ ಈಗಲೂ ಕಣ್ಣಮುಂದ ಬಂದ ನಿಂದರತೇತಿ. ನಾಲ್ಕನೇತ್ತಾ ಓದುಮುಂದ ಈ ಕವನ ನಮಗಿತ್ತು. ಇದು ಯಾಕ ಭಾಳ ಮನಸ್ಸಿನ್ಯಾಗ ಕುಂತ ಅಂತಂದ್ರ... ನಮ್ಮ ಬಾಲ್ಯ ಕೂಡ ಪಂಜರದ ಪಕ್ಷಿ ಹಂಗಾನ ಇತ್ತು. ಸ್ವಾತಂತ್ರ್ಯ ಅನ್ನೂದು ಕೈಗ ಸಿಗದ ಕನಸ ಆಗಿತ್ತು. ನಮ್ಮ ಅಪ್ಪಾ ಅವ್ವಾ ನಮ್ಮ ಕನಸುಗಳಿಗೆ ಪಂಜರಾ ಹಾಕಿಬಿಟ್ಟಿದ್ರು. ಮಕ್ಕಳ ಹಕ್ಕುಗಳ ದಮನ ಅಂತಾನಾದ್ರೂ ಅನ್ರಿ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಅಂತಾನರ ಅನ್ರಿ. ಈ ಪದ್ಯ ಈವತ್ತಿನ ಈ ಜಾಗತೀಕರಣ ಸಂದರ್ಭಕ್ಕ ಬಹಳ ಹೊಂದತೇತಿ ಅಂತ ಅನ್ನಸ್ತೇತಿ. ಹಂಗ ಭಾವನಾತ್ಮಕವಾಗಿನೂ..

-ಕುಂ. ವೀರಭದ್ರಪ್ಪ
---------------------------------------------


ಸಾಲಿಯೊಳಗ ಅಕ್ಕೋರಗೋಳು, ಮಾಸ್ತರಗೋಳಿಂದ ನಮಗೇನು ಕಥಿ, ಕವನಾ ಸಿಗಲಿಲ್ಲಾ ಅಂತಾನ ಹೇಳಬೇಕು. ಆದರ ನಮ್ಮವ್ವಾ ಆಗಾಗ ಹೇಳೂ ಕಥಿಗೋಳು ಮಾತ್ರ ಭಾಳಾ ಕಾಡ್ತಾವು. ಆ ಕಥಿಗೋಳು ಕಟ್ಟಿದ್ದುನೂ ಅಲ್ಲ. ಬಾಯಿಂದ ಬಾಯಿಗೆ ಹರದ ಬಂದಿದ್ದೂನೂ ಅಲ್ಲ. ಬಾಲ್ಯದೊಳಗ ನನ್ನ ಸುತ್ತ ನಡದಂಥ ಘಟನಾಗೋಳನ್ನ ಅಕಿ ಕಥಿ ಮಾಡಿ ಹೇಳಾಕಿ. ಒಂದನ್ನ ಇಲ್ಲಿ ಹೇಳ್ತೀನಿ ಕೇಳ್ರಿ...

ಅವತ್ತ ಒಂದಿನಾ ನಾ ರಾತ್ರಿ ಏನೂ ತಿನ್ಲಾರ್ದ ಮಕ್ಕೊಂಡಿದ್ನಿ. ನಸಿಕಿನ್ಯಾಗ ಹೊಟ್ಟಿ ಹಸ್ಯಾಕತ್ತು. ‘ಯವ್ವಾ ಏನಾರ ತಿನ್ನಾಕ ಕೊಡಬೇ’ ಅಂದೆ. ಗಡಬಡಿಸಿ ಎದ್ದಾಕಿನ ಹಟ್ಟಿ ಹಸನ ಮಾಡಿ, ಆಕಳಗೋಳನ್ನ ಸಂಭಾಳಿಸಿ ಹಾಲ ಕರ್ಯಾಕ ತಯಾರಿ ಮಾಡ್ಕೊಂಡ್ಲು. ಹಂಗ ತಯಾರಿ ಮಾಡ್ಕೋತನ- ‘ಆತ ಯಪ್ಪಾ. ಈಗ ಹಸನ ಮಾಡಾತೇನ್ಯಾ... ಶಗಣಿ ತಗ್ಯಾತೇನಾ.. ಹಾಲ ಕರೀತೇನಾ.. ಒಲಿ ಹಚ್ಚತೇನಾ... ಹಾಲನ್ಯಾಗ ಸಕ್ರಿ ಹಾಕಿ ವಾಟೆ ತುಂಬಾ.. ಹಾಲ ಕೊಡ್ತೇನಾ ಯಪ್ಪಾ ಇರ ನನ್ನ ಮಗನ..’ ಅಂತ ಹೇಳ್ಕೋತ ಹಾಲಿನ ವಾಟೆ ಕಯ್ಯಾಗ ಕೊಟ್ಟಬಿಟ್ಲು.. ಮತ್ತ ಏನೋ ಕೆಲಸಾ ಮಾಡಾಕ ಹೋದ್ಲು.

ಅಕಿ ಹಿಂಗ ಕೊಟ್ಟ ಹೋಗೂದಕ ನಮ್ಮ ಮನಿ ಹಿಂದಿನ ಕೇರ್ಯಾಗಿನ ಕೋಳಿ ಕೊಕ್ಕೊಕೋ.... ಅಂತ ಕೂಗಿಬಿಟ್ತು. ‘ಯವ್ವಾ ಕೋಳಿ ನೋಡಬೇ ಹೆಂಗ ಕೂಗಿತು’ ಅಂತ ಎರಡೂ ಕೈ ಬಿಟ್ಟ ಸಂತೋಷದ್ಲೇ ಹೇಳಾಕ ಹೋದೆ. ಆದ್ರ ಏನಾತು? ಎಲ್ಲಾ ಹಾಲು ನೆಲಕ್ಕ...

ಹಸದೇತಿ ಮಗಾ ಅಂತ ಕೊಟ್ರ ಹಾಲು ನೆಲಕ್ಕಾತು ಅಂತ ಬ್ಯಾಸರಾ ಮಾಡ್ಕೊಂಡ್ಲೋ, ಕೋಳಿ ಕೂಗ ಕೇಳಿ ಕುಣದಾಡಿದಾ ತನ್ನ ಮಗಾ ಅಂತ ಖುಷಿ ಪಟ್ಲೋ ಗೊತ್ತಿಲ್ಲ. ಆದರ ಎಷ್ಟೋ ವರ್ಷದ ತನಕ ಈ ಕಥಿ ಹೇಳ್ಕೋತನ ಇದ್ಲು. ನನ್ನ ಬಾಲ್ಯದ ದಡ್ಡತನಕ್ಕ ಅಕಿ ಇದನ್ನ ಹೇಳ್ತಿದ್ಲೋ.. ಅಥವಾ ಪಕ್ಷಿ-ಪ್ರಾಣಿಗಳ ಪ್ರೇಮಕ್ಕ ಅಕಿ ಹೇಳ್ತಿದ್ಲೋ ಅನ್ನೂದು ಈಗಲೂ ತಿಳಿವಲ್ದಂಗಾಗೇತಿ..
-ಅಮರೇಶ ನುಗಡೋಣಿ


-----------------------------------
ನಿರ್ವಹಣೆ: ಶ್ರೀದೇವಿ ಕಳಸದ,
ನವೆಂಬರ್ ೧೪ ರ 'ಪ್ರಜಾವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟ

Saturday, November 13, 2010

ಚೊಚ್ಚಲ ಕೂಸು; ’ಹಾಡಾಗದ ಸಾಲುಗಳು’

ನಮಸ್ಕಾರ...
ಹೇಗಿದ್ದೀರಿ ಎಲ್ಲಾ?
ಅಂದಹಾಗೆ ಆ ದಿನ ನೀವೂ ಅಲ್ಲಿರುತ್ತೀರಿ. ಆ ದಿನ ’ಮರೆವು’ ಅನ್ನೋದು ನಿಮ್ಮ ಹತ್ತಿರಕ್ಕೂ ಸುಳಿಯಲ್ಲ. ಇನ್ನು ’ನೆಪ’ ಅನ್ನೋದಂತೂ ನಿಮ್ಮ ನಿಘಂಟಿನಲ್ಲಿ ಇಲ್ಲೇ ಇಲ್ಲ! ಆದ್ದರಿಂದ ಖಂಡಿತ ಬಂದೇ ಬರುತ್ತೀರಿ...

ಬರ‍್ತೀರಿ ಅಲ್ವಾ? ದಯವಿಟ್ಟು ಬನ್ನಿ. ನನ್ನ ಖುಷಿಯಲ್ಲಿ ನಿಮ್ಮ ಪಾಲೂ ಇದೆ :)

ಪ್ರೀತಿಯಿಂದ
ಶ್ರೀದೇವಿ ಕಳಸದ