Thursday, December 30, 2010

ಇರಲಿ ಅದು ಅಲ್ಲೇ ಸುತ್ತಿಕೊಂಡೇ


ಬಿಚ್ಚದಿರಿ ಈಗಷ್ಟೇ ಸುತ್ತಿಟ್ಟ ಆ ಚಾಪೆ.
ಕೂತೆದ್ದು ಹೋಗುವಾಗ ಅವರು
ಬಿಟ್ಟು ಹೋಗಿದ್ದಾರೆ ಅದರೊಳಗೆ ಅವುಗಳ.
ಇರಲಿ ಅದು ಅಲ್ಲೇ ಸುತ್ತಿಕೊಂಡೇ
ಆ ಕಟ್ಟೆಯ ಮೇಲೇ ಹೊರಗೇ..

ಚಾಪೆಕಡ್ಡಿಗಳ ಸಂದಿ-
ಹೆಣೆದ ದಾರ ವಾರೆ ಮಾಡಿ
ಇಣುಕುತಿವೆ ಅದರೊಳಗಿನವು.
ಸುಮ್ಮನಿದ್ದು ಬಿಡಿ
ನೋಡಿಯೂ ನೋಡದಂತೆ.
ಇರಲಿ ಅದು ಅಲ್ಲೇ ಸುತ್ತಿಕೊಂಡೇ
ಆ ಕಟ್ಟೆಯ ಮೇಲೇ ಹೊರಗೇ..

ಬೇಡ ಕುತೂಹಲ
ಕರ್ತವ್ಯ-ಸೈರಣೆಯ ಮಾತೂ.
ನಮ್ಮ ಮನೆಯ ಚಾಪೆಯೊಳಗೆ
ಅವರು ಬಿಟ್ಟು ಹೋಗಿದ್ದು ಅದೇ ಜೊಳ್ಳು.
ಇರಲಿ ಅದು ಅಲ್ಲೇ ಸುತ್ತಿಕೊಂಡೇ
ಆ ಕಟ್ಟೆಯ ಮೇಲೇ ಹೊರಗೇ..

ಒಂದೊಮ್ಮೆ ಅದ ಒಳತಂದಿರೋ;
ಸಾಕಷ್ಟು
ಅವರ ಮಾತುಬೀಜಗಳವು ಮೊಳಕೆ ಒಡೆಯಲು
ಮೊಳಕೆಗಳು ಕುಡಿ ಚಾಚಲು
ಚಾಚುತ್ತ ಗೋಡೆ-ಜಂತಿ ಹಬ್ಬಲು
ಹಬ್ಬಿ ಕಹಿಬಳ್ಳಿ ಮೈಗೆಲ್ಲ-
ಮನೆಮಂದಿ ಮನಸ ಮುದುಡಿಸಲು.

ಅದಕ್ಕೆ ಇರಲಿ ಅದು ಅಲ್ಲೇ ಹೊಸ್ತಿಲಿನಾಚೆ
ಸುತ್ತಿಕೊಂಡೇ ಆ ಕಟ್ಟೆಯ ಮೇಲೇ ಹೊರಗೇ..

ಹೇಗಿದ್ದರೂ ಆ ಚಾಪೆಯೊಳಗೆ
ಅವರು ಮುದ್ದಾಮು
ಬಿಟ್ಟು ಹೋದ ಮಾತುಗಳಲ್ಲವೆ?

ಅವುಗಳ ಸೆಳೆದುಕೊಳ್ಳಲು
ವರುಣನಿದ್ದಾನೆ.
ಆಪೋಷನಕ್ಕೆ ಅಗ್ನಿಯಿದ್ದಾನೆ
ಆಕಾಶ-ವಾಯುದೇವನೊಂದಿಗೆ
ಭೂತಾಯಿ ಇದ್ದೇ ಇದ್ದಾಳೆ
ಒಡಲೊಳಗೆ ಹಾಕಿಕೊಳ್ಳಲು.

ಬಿಟ್ಟುಬಿಡಿ ಅಲ್ಲೇ ಆ ಕಟ್ಟೆಯ ಮೇಲೇ
ಆ ಚಾಪೆಯನ್ನೂ.

ಕಿಂಡಿಯೊಳಗಿಳಿದ ಬೆಳಕಿನೆಳೆ
ಅಂಗಾಲ ಮಣ್ಣಹುಡಿ
ಒದ್ದೆ ಕೂದಲ ತುದಿಹನಿ
ದೀಪವನ್ನೊಮ್ಮೆ ವಾಲಿಸಿ ನೆಟ್ಟಗಾಗಿಸುವ
ಸಣ್ಣೇ ಸಣ್ಣದೊಂದು ನಿಟ್ಟುಸಿರು
-
ಯಾವುದನ್ನೂ ಕಲಕದಿರಲಿ

ಮತ್ತೆ ಬಂದೇ ಬರುತ್ತಾನೆ
ಓಣಿ ಮರೆಯದ ಚಾಪೆ ಮಾರುವವ
ಮತ್ತೊಂದು ದಿನ ಹೊಸದರೊಂದಿಗೆ.

-ಶ್ರೀದೇವಿ ಕಳಸದ

ಹೊಸ ವರ್ಷದ ಶುಭಾಶಯ ಆಲಾಪ ಕೇಳುವವರೆಲ್ಲರಿಗೂ...

Thursday, December 9, 2010

ತೆಗೆದು ಕಟ್ಟು, ಒಡೆದು ಮಡಕೆ

ನಾಳೆ ನನ್ನ ಶ್ರಾದ್ಧ
ಒಂದು ವಿನಂತಿ;
ಹಾಕಿಸಬೇಡಿ ಭಾವಚಿತ್ರಕ್ಕೆ
ದಯವಿಟ್ಟು ಕಟ್ಟು,
ಸಿಕ್ಕರೆ ತರಬೇಕಿದೆ
ತೇಲಿಬಿಟ್ಟ ಮಡಕೆಯನ್ನೂ.

***

ಆ ದಿನ ಮಾಸಿಲ್ಲ.
ಕಂಠಪಾಠ ಮುಗಿದ ಮೇಲೆ
ಅಳಿಸಿದಷ್ಟೂ ಅವು ದಟ್ಟ-
ಕಪ್ಪು ಹಲಗೆ ಮೇಲೆ
ಬೆಳ್ಳಗೆ;
ಗೆರೆಗಳವು ನಾಲ್ಕು ಕೂಡಿದರೆ
ಚೌಕ, ಶಂಖ, ಆಯತ...

ಮುಂದಿನದೆಲ್ಲ ಸ್ವಗತ;

ಸಂಧಿಸಿದ ಮೂರು ಕೋನ
ಅಲ್ಲ ಎಂದವರಾರು ತ್ರಿಕೋನ?
ಮತ್ತಷ್ಟು ಸೇರಿಸಿದರೆ ಕೋನ-
ಷಟ್ಕೋನ-ಅಷ್ಟಕೋನ. ಶತ, ಸಹಸ್ರ, ಕೋಟಿ..

ಆದರೆ ವೃತ್ತವೆಂದರೆ...

ಅಮ್ಮ ತೊಟ್ಟ ಬಳೆ
ಯಾವ ಕಾಲಕ್ಕೂ ತಟ್ಟುವ ರೊಟ್ಟಿ
ಆಗಾಗ ಆರತಿಗೆ ಅಣಿಗೊಳಿಸಿಕೊಳುವ ತಟ್ಟೆ.
ಅಪ್ಪನ ಮೇಲ್‌ಮುಂಗೈ ಗಡಿಯಾರ
ಹೊತ್ತುಗೊತ್ತಿಲ್ಲದೆ ಹಾರುವ ಬಲ್ಬು.
ಆಚೀಚೆಯಾಗದ ಅಜ್ಜಿಯ ಕೆಂಬೊಟ್ಟು
ಕಣ್ಣಳತೆ ಮೀರಿದ ಅಜ್ಜನ ಚಾಳೀಸು
ದುಂಡುಸುತ್ತುವ ತಮ್ಮನ ಚೆಂಡು
ತಂಗಿಯ ತುಂಬುಗೆನ್ನೆ.
ಪಕ್ಕದ ಮನೆಯ ದೋಸೆ
ಎದುರು ಮನೆಯ ಕನ್ನಡಿ.
ಗೆಳೆಯ ತಿರುಗಿಸುವ ಬುಗುರಿ
ಗೆಳತಿಯ ಬಿಗಿಮುಚ್ಚಳದ ಬುತ್ತಿಡಬ್ಬಿ.
ದೇವಿಗುಡಿಯ ಜಾಗಟೆ
ದೊಡ್ಡವಾಡೆಯ ಮೆಟ್ಟಿಲು ಬಾವಿ
ಸದ್ದಿಲ್ಲದೆ ಆವರಿಸುವ ಅದರಲೆ
ಢಣಢಣಿಸುವ ಜಾಗಟೆ
ಕೆಂಡ ಹಾಯುವ ಕುಂಡ
ಹಾರಿಬೀಳುವ ರುಂಡ
ದಿಕ್ಕೆಟ್ಟು ಉರುಳುವ ಬಂಡಿಗಾಲಿ
ಮುಗ್ಗರಿಸಿ ಇಡಿದೇಹ, ಹಿಡಿಬೂದಿ ಮಡಕೆ.

ನಾಳೆ ನನ್ನ ಶ್ರಾದ್ಧ
ನಂತರವಾದರೂ ಒಂದಾಗಬೇಕು
ಎಲ್ಲರೊಳು-
ಕಟ್ಟು ತೆಗೆದು, ಮಡಕೆಯೂ ಒಡೆದು.

-ಶ್ರೀದೇವಿ ಕಳಸದ

('ಹಾಡಾಗದ ಸಾಲುಗಳು' ಕವನಗಳಲ್ಲಿ ಇದೂ ಒಂದು.. )