Thursday, December 9, 2010

ತೆಗೆದು ಕಟ್ಟು, ಒಡೆದು ಮಡಕೆ

ನಾಳೆ ನನ್ನ ಶ್ರಾದ್ಧ
ಒಂದು ವಿನಂತಿ;
ಹಾಕಿಸಬೇಡಿ ಭಾವಚಿತ್ರಕ್ಕೆ
ದಯವಿಟ್ಟು ಕಟ್ಟು,
ಸಿಕ್ಕರೆ ತರಬೇಕಿದೆ
ತೇಲಿಬಿಟ್ಟ ಮಡಕೆಯನ್ನೂ.

***

ಆ ದಿನ ಮಾಸಿಲ್ಲ.
ಕಂಠಪಾಠ ಮುಗಿದ ಮೇಲೆ
ಅಳಿಸಿದಷ್ಟೂ ಅವು ದಟ್ಟ-
ಕಪ್ಪು ಹಲಗೆ ಮೇಲೆ
ಬೆಳ್ಳಗೆ;
ಗೆರೆಗಳವು ನಾಲ್ಕು ಕೂಡಿದರೆ
ಚೌಕ, ಶಂಖ, ಆಯತ...

ಮುಂದಿನದೆಲ್ಲ ಸ್ವಗತ;

ಸಂಧಿಸಿದ ಮೂರು ಕೋನ
ಅಲ್ಲ ಎಂದವರಾರು ತ್ರಿಕೋನ?
ಮತ್ತಷ್ಟು ಸೇರಿಸಿದರೆ ಕೋನ-
ಷಟ್ಕೋನ-ಅಷ್ಟಕೋನ. ಶತ, ಸಹಸ್ರ, ಕೋಟಿ..

ಆದರೆ ವೃತ್ತವೆಂದರೆ...

ಅಮ್ಮ ತೊಟ್ಟ ಬಳೆ
ಯಾವ ಕಾಲಕ್ಕೂ ತಟ್ಟುವ ರೊಟ್ಟಿ
ಆಗಾಗ ಆರತಿಗೆ ಅಣಿಗೊಳಿಸಿಕೊಳುವ ತಟ್ಟೆ.
ಅಪ್ಪನ ಮೇಲ್‌ಮುಂಗೈ ಗಡಿಯಾರ
ಹೊತ್ತುಗೊತ್ತಿಲ್ಲದೆ ಹಾರುವ ಬಲ್ಬು.
ಆಚೀಚೆಯಾಗದ ಅಜ್ಜಿಯ ಕೆಂಬೊಟ್ಟು
ಕಣ್ಣಳತೆ ಮೀರಿದ ಅಜ್ಜನ ಚಾಳೀಸು
ದುಂಡುಸುತ್ತುವ ತಮ್ಮನ ಚೆಂಡು
ತಂಗಿಯ ತುಂಬುಗೆನ್ನೆ.
ಪಕ್ಕದ ಮನೆಯ ದೋಸೆ
ಎದುರು ಮನೆಯ ಕನ್ನಡಿ.
ಗೆಳೆಯ ತಿರುಗಿಸುವ ಬುಗುರಿ
ಗೆಳತಿಯ ಬಿಗಿಮುಚ್ಚಳದ ಬುತ್ತಿಡಬ್ಬಿ.
ದೇವಿಗುಡಿಯ ಜಾಗಟೆ
ದೊಡ್ಡವಾಡೆಯ ಮೆಟ್ಟಿಲು ಬಾವಿ
ಸದ್ದಿಲ್ಲದೆ ಆವರಿಸುವ ಅದರಲೆ
ಢಣಢಣಿಸುವ ಜಾಗಟೆ
ಕೆಂಡ ಹಾಯುವ ಕುಂಡ
ಹಾರಿಬೀಳುವ ರುಂಡ
ದಿಕ್ಕೆಟ್ಟು ಉರುಳುವ ಬಂಡಿಗಾಲಿ
ಮುಗ್ಗರಿಸಿ ಇಡಿದೇಹ, ಹಿಡಿಬೂದಿ ಮಡಕೆ.

ನಾಳೆ ನನ್ನ ಶ್ರಾದ್ಧ
ನಂತರವಾದರೂ ಒಂದಾಗಬೇಕು
ಎಲ್ಲರೊಳು-
ಕಟ್ಟು ತೆಗೆದು, ಮಡಕೆಯೂ ಒಡೆದು.

-ಶ್ರೀದೇವಿ ಕಳಸದ

('ಹಾಡಾಗದ ಸಾಲುಗಳು' ಕವನಗಳಲ್ಲಿ ಇದೂ ಒಂದು.. )

8 comments:

ಸಾಗರದಾಚೆಯ ಇಂಚರ said...

Superb one

ishtaa ayitu

sunaath said...

`ನಾನು ಹೋದರೆ ಹೋಗಬಹುದು.’
--------------------ಕನಕದಾಸರು

Ashwini said...

akka nammooru nenpaagthide... :)

Anuradha said...

ತೆಗೆದ ಕಟ್ಟು ,ಒಡೆದ ಮಡಿಕೆ ನಮ್ಮದೂ ಹೌದು .ತುಂಬಾ ಚೆನ್ನಾಗಿದೆ .ಅಭಿನಂದನೆಗಳು .

gorur naga said...

ನನ್ನೂರು,ಮನೆಮಂದಿ,ಆಗಿದ್ದು-ಈಗಿಲ್ಲದ
ಮನಸುಗಳ ನೆನಪು ಕಾಡಿದಂತಾಯ್ತು....
ಮನಸಿನ ಗೋಡೆಗಳಿಗೆ ನೆನಪುಗಳ
ಅಲೆ ಅಪ್ಪಳಿಸಲಾರಂಭಿಸಿದೆ,
ಕವನ ಚೆಂದವಿದೆ, ನಿಮಗೊಂದು
ಅಕ್ಕರೆಯ ಸಲಾಂ........

ಆಲಾಪಿನಿ said...

ellarigoo dhanyavada

Apoorva Udupi said...

chennagide kavana, thumba ishtaythu.... :)

mounamohinandish said...

adbuthavagide .....ida bareda nimagondu namana...........