Thursday, December 30, 2010

ಇರಲಿ ಅದು ಅಲ್ಲೇ ಸುತ್ತಿಕೊಂಡೇ


ಬಿಚ್ಚದಿರಿ ಈಗಷ್ಟೇ ಸುತ್ತಿಟ್ಟ ಆ ಚಾಪೆ.
ಕೂತೆದ್ದು ಹೋಗುವಾಗ ಅವರು
ಬಿಟ್ಟು ಹೋಗಿದ್ದಾರೆ ಅದರೊಳಗೆ ಅವುಗಳ.
ಇರಲಿ ಅದು ಅಲ್ಲೇ ಸುತ್ತಿಕೊಂಡೇ
ಆ ಕಟ್ಟೆಯ ಮೇಲೇ ಹೊರಗೇ..

ಚಾಪೆಕಡ್ಡಿಗಳ ಸಂದಿ-
ಹೆಣೆದ ದಾರ ವಾರೆ ಮಾಡಿ
ಇಣುಕುತಿವೆ ಅದರೊಳಗಿನವು.
ಸುಮ್ಮನಿದ್ದು ಬಿಡಿ
ನೋಡಿಯೂ ನೋಡದಂತೆ.
ಇರಲಿ ಅದು ಅಲ್ಲೇ ಸುತ್ತಿಕೊಂಡೇ
ಆ ಕಟ್ಟೆಯ ಮೇಲೇ ಹೊರಗೇ..

ಬೇಡ ಕುತೂಹಲ
ಕರ್ತವ್ಯ-ಸೈರಣೆಯ ಮಾತೂ.
ನಮ್ಮ ಮನೆಯ ಚಾಪೆಯೊಳಗೆ
ಅವರು ಬಿಟ್ಟು ಹೋಗಿದ್ದು ಅದೇ ಜೊಳ್ಳು.
ಇರಲಿ ಅದು ಅಲ್ಲೇ ಸುತ್ತಿಕೊಂಡೇ
ಆ ಕಟ್ಟೆಯ ಮೇಲೇ ಹೊರಗೇ..

ಒಂದೊಮ್ಮೆ ಅದ ಒಳತಂದಿರೋ;
ಸಾಕಷ್ಟು
ಅವರ ಮಾತುಬೀಜಗಳವು ಮೊಳಕೆ ಒಡೆಯಲು
ಮೊಳಕೆಗಳು ಕುಡಿ ಚಾಚಲು
ಚಾಚುತ್ತ ಗೋಡೆ-ಜಂತಿ ಹಬ್ಬಲು
ಹಬ್ಬಿ ಕಹಿಬಳ್ಳಿ ಮೈಗೆಲ್ಲ-
ಮನೆಮಂದಿ ಮನಸ ಮುದುಡಿಸಲು.

ಅದಕ್ಕೆ ಇರಲಿ ಅದು ಅಲ್ಲೇ ಹೊಸ್ತಿಲಿನಾಚೆ
ಸುತ್ತಿಕೊಂಡೇ ಆ ಕಟ್ಟೆಯ ಮೇಲೇ ಹೊರಗೇ..

ಹೇಗಿದ್ದರೂ ಆ ಚಾಪೆಯೊಳಗೆ
ಅವರು ಮುದ್ದಾಮು
ಬಿಟ್ಟು ಹೋದ ಮಾತುಗಳಲ್ಲವೆ?

ಅವುಗಳ ಸೆಳೆದುಕೊಳ್ಳಲು
ವರುಣನಿದ್ದಾನೆ.
ಆಪೋಷನಕ್ಕೆ ಅಗ್ನಿಯಿದ್ದಾನೆ
ಆಕಾಶ-ವಾಯುದೇವನೊಂದಿಗೆ
ಭೂತಾಯಿ ಇದ್ದೇ ಇದ್ದಾಳೆ
ಒಡಲೊಳಗೆ ಹಾಕಿಕೊಳ್ಳಲು.

ಬಿಟ್ಟುಬಿಡಿ ಅಲ್ಲೇ ಆ ಕಟ್ಟೆಯ ಮೇಲೇ
ಆ ಚಾಪೆಯನ್ನೂ.

ಕಿಂಡಿಯೊಳಗಿಳಿದ ಬೆಳಕಿನೆಳೆ
ಅಂಗಾಲ ಮಣ್ಣಹುಡಿ
ಒದ್ದೆ ಕೂದಲ ತುದಿಹನಿ
ದೀಪವನ್ನೊಮ್ಮೆ ವಾಲಿಸಿ ನೆಟ್ಟಗಾಗಿಸುವ
ಸಣ್ಣೇ ಸಣ್ಣದೊಂದು ನಿಟ್ಟುಸಿರು
-
ಯಾವುದನ್ನೂ ಕಲಕದಿರಲಿ

ಮತ್ತೆ ಬಂದೇ ಬರುತ್ತಾನೆ
ಓಣಿ ಮರೆಯದ ಚಾಪೆ ಮಾರುವವ
ಮತ್ತೊಂದು ದಿನ ಹೊಸದರೊಂದಿಗೆ.

-ಶ್ರೀದೇವಿ ಕಳಸದ

ಹೊಸ ವರ್ಷದ ಶುಭಾಶಯ ಆಲಾಪ ಕೇಳುವವರೆಲ್ಲರಿಗೂ...

5 comments:

Narayan Bhat said...

ಕವನ ತುಂಬಾ ಖುಷಿಕೊಟ್ಟಿತು...ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

sunaath said...

ಶ್ರೀದೇವಿ,
ಸುಂದರವಾದ ಕವನ.
ಹೊಸ ವರ್ಷದ ಶುಭಾಶಯಗಳು.

ಬಿಸಿಲ ಹನಿ said...

ಚೆಂದದ ಕವನಕ್ಕೆ ಥ್ಯಾಂಕ್ಸ್. ನಿಮಗೂ ಕೂಡ ಹೊಸ ವರ್ಷದ ಶುಭಾಶಯಗಳು.

ಚುಕ್ಕಿಚಿತ್ತಾರ said...

ಹೊಸ ವರುಷಕೆ ಹೊಸ ಚಾಪೆ..
ಹಳೆಯ ನೋವನ್ನೆಲ್ಲ ಹಳೆಯ ವರುಷಕೆ ಬಿಡುವ.
ಹೊಸ ಉತ್ಸಾಹ, ಹೊಸ ವಿಚಾರ ಹೊಸ ರಾಗ ಹಾಡುವ..

ಸು೦ದರ ಕವಿತೆ.
ನಿಮಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು.

ಆನಂದ said...

ಚಾಪೆ ಸುತ್ತಿಟ್ಟಾಗಿದೆ, ಮತ್ತೆ ಬಿಚ್ಚುವ ಮಾತಿಲ್ಲ.
ಕವಿತೆ ಇಷ್ಟವಾಯ್ತು. ಹೊಸ ವರ್ಷದ ಶುಭಾಶಯಗಳು.