Monday, January 24, 2011

ಜೋಶಿ ಬುವಾ, ನಿಮ್ಮನ್ನು ಭೇಟಿಯಾಗುವ, ಕಛೇರಿ ಸಂಗೀತ ಕೇಳುವ ಭಾಗ್ಯ ನನಗ್ಯಾಕೆ ಬರಲಿಲ್ಲ?
ನಿಜ ಪಂಡಿತ್ಜಿ, ನೀವು ನಂಬಿದ ನಾದದೇವತೆಯೇ ದೂರ ಕೈಹಿಡಿದು ನಡೆಸಿದ್ದು. ಹಂಗಿಲ್ಲದೆ ಹರಿವ ನೀರಿನಂತೆ ನಾದಜಗತ್ತು. ನಿಂತ ನೆಲದಲ್ಲೇ ನೆಲೆ ಅರಸುವುದಕ್ಕಿಂತ ಬೇಕಾದ್ದನ್ನು ದಕ್ಕಿಸಿಕೊಳ್ಳುತ್ತ ಸಾಗಿದಾಗ ಅದೊಂದು ಅದ್ಭುತ ರಸಯಾನ. ಅನಿವಾರ್ಯ ಮರೆಸಿ, ಅನುಭೂತಿ ನೀಡುವುದರಿಂದಲೇ ಅದು ಸೀಮಾತೀತ. ಇಂಥ ನಾದಪಯಣದಲ್ಲಿ ನೀವಿಂದು ಬಹುದೂರ ಕ್ರಮಿಸಿದ್ದೀರಿ.

ಆಡುವ ವಯಸ್ಸಿನಲ್ಲಿ ಓಡುವ ಮನಸ್ಸು ಮಾಡಿದಿರಿ. ಗೋಲಿ ಹಿಡಿಯುವ ಬೆರಳುಗಳಿಗೆ ತಂತಿ ಗುಂಗು ಹಿಡಿಸಿದಿರಿ. ಹಡೆದವರ ಹಂಗಿನಲ್ಲಿರದೇ, ನಾದದ ಬೆನ್ನು ಹತ್ತಿದಿರಿ. ತುತ್ತು ಅನ್ನಕ್ಕೂ ಹಂಬಲಿಸಿದಾಗ ನೀವು ನಂಬಿದ ನಾದದೇವತೆ ಕೈಬಿಡಲಿಲ್ಲ. ಗುರುವಿನ ಗುಲಾಮನಾಗಿ ಅವಳನ್ನು ಒಲಿಸಿಕೊಂಡಿರಿ. ಅವಳು ಕಳಿಸಿದತ್ತ, ಕರೆಸಿಕೊಂಡತ್ತ ಪಯಣ ಬೆಳೆಸಿದಿರಿ. ಒಂದೊಂದು ಪಯಣವೂ ಯಶಸ್ಸಿನ ಮೈಲಿಗಲ್ಲೇ...

ಹಾಂ. ಪಯಣವೆಂದರೆ ನೆನಪಾಗುವುದು ನಿಮ್ಮ ಕಾರು ಓಡಿಸುವ ರೀತಿ-ಪ್ರೀತಿ. ತಂಬೂರಿ-ತಬಲಗಳೊಂದಿಗೆ ನಿಮ್ಮ ಸಾಥಿದಾರರನ್ನೆಲ್ಲ ಕರೆದುಕೊಂಡು, ಕಲ್ಲು, ಮಣ್ಣು, ತಗ್ಗು-ದಿನ್ನೆಯಲ್ಲೂ ವೇಗವಾದರೂ ಹದವಾಗಿಯೇ ಕಾರು ಓಡಿಸುತ್ತಿದ್ದಿರಿ. ನಿಮ್ಮ ಪರಿಯ ಕಾರ್ಪ್ರೀತಿ ಜೊತೆಗಿರುವ ಅವರಿಗೆಲ್ಲ ಕಿರಿಕಿರಿಯಾಗದಂತೆ ನಿಗಾವಹಿಸುವ ಜಾಣ್ಮೆಯೂ ನಿಮಗಿತ್ತು. ಒಮ್ಮೆ ನೆನಪಿಸಿಕೊಳ್ಳಿ? ಇಳಿವಯಸ್ಸಿನಲ್ಲೂ ತುಂಟ ನಗೆಯೊಂದು ಚಿಮ್ಮಬಹುದೇನೊ...

ಒಂದೇ ದಿನದಲ್ಲಿ ಪುಣೆಯಿಂದ ಬೆಳಗಾವಿ ಅಥವಾ ಬೆಳಗಾವಿಯಿಂದ ಬೆಂಗಳೂರಿಗೆ ಕ್ರಮಿಸುತ್ತಿದ್ದ ವೇಗದ ರೀತಿಯೇ, ಬಹುಬೇಗ ಜಮ್ಮೂ, ಜಲಂಧರ್‍, ಗುವಾಹಟಿ, ದಿಲ್ಲಿವರೆಗೆ ನಿಮ್ಮ ರಸಯಾತ್ರೆ ಸಾಗುವಂತಾಯಿತೇನೋ... ಗಡಿ ದಾಟಿದ ಕೀರ್ತಿಗೆ, ಖ್ಯಾತಿಗೆ ನಿಮ್ಮೊಳಗಿನ ಡ್ರೈವರ್ನ್ನು ಕುಳಿತಲ್ಲೇ ಕಣ್ಮುಂದೆ ತಂದುಕೊಳ್ಳುತ್ತಿರಬಹುದಲ್ಲವೆ ಈಗ?

ಗುರೂಜಿ, ಸಂಗೀತ : ಕೊನೆಯಿಲ್ಲದ ಪಯಣ. ನಮ್ಮ ನಂತರವೂ ಪರಂಪರೆ ಉಳಿಯುತ್ತದೆ, ಉಳಿದು ಬೆಳೆಯುತ್ತದೆ ಎಂಬಂತಾದರೆ ಅದು ಪಯಣದ ಸಾರ್ಥಕ್ಯ. ನಿಷ್ಕಾಮ ಕರ್ಮ. ಆದರೆ ಜೀವನ? ಕಾರು ಪ್ರಯಾಣದಂತೆ. ಎಷ್ಟೇ ವೇಗ ಚಲಿಸಿದರೂ, ಏನೇ ಅಡೆ-ತಡೆಗಳಾದರೂ ಅದರ ಮಿತಿಗೆ ನಾವು ಶರಣಾಗಲೇಬೇಕು. ಎಷ್ಟೇ ದೂರ ಕ್ರಮಿಸಿದರೂ ಮರಳಿ ಮನೆಗೆ ಬಂದಾಗ ಸಿಗುವ ತಂಪೇ ತಂಪಲ್ಲವೇ! ಆದರೆ ಮನೆತಂಪಿನಿಂದ ನೀವು ಈವತ್ತಿಗೂ ದೂರವೇ ಉಳಿದುಬಿಟ್ಟಿದ್ದೀರಿ.

ಕಾರಣಗಳಿಲ್ಲವಂತಲ್ಲ. ಅಂದಿನಿಂದ ಇಂದಿನವರೆಗೂ ನಮ್ಮ ಮನೆಯ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ನಮ್ಮವರಲ್ಲಿ ಏನೋ ಹಿಂಜರಿಕೆ. ನಿರ್ಲಕ್ಷ್ಯ. ನೆರೆಮನೆಯವರ ಶಿಫಾರಸ್ಸಿನ ನಂತರವಷ್ಟೇ ದಡಬಡಿಸಿ ಅಪ್ಪಿಕೊಳ್ಳುವ ಅಪ್ಯಾಯಮಾನತೆ! ಇಲ್ಲವೆ ಇದನ್ನೇ ಅವಾಂತರ ಮಾಡಿಬಿಡುವುದು. ಇದೇನೇ ಇದ್ದರೂ, ಒಂದು ಹಂತದಲ್ಲಿ ಬೆಳೆದು ನಿಂತಾಗ ಅಂದರೆ, ಸಾಂಸ್ಕೃತಿಕ ರಾಯಭಾರಿಯೆನಿಸಿಕೊಂಡಾಗ ಕಲಾವಿದನಿಗೆ ಇವೆಲ್ಲ ನಗಣ್ಯ. ತನ್ನ ನೆಲದ ಕಂಪಿಗೆ ಕಣ್ಣರಳಿಸಿದಲ್ಲಿ, ಹಂಬಲಿಸಿದಲ್ಲಿ, ಮತ್ತಷ್ಟು ಮೇರುವ್ಯಕ್ತಿತ್ವ ಅವನದಾಗಬಹುದಲ್ಲವೆ?

ಜೀವನವೇ ಸಂಗೀತ. ಸಂಗೀತವೇ ಜೀವನವೆಂದುಕೊಂಡು ಬಹುದೂರ ಸಾಗಿದ್ದೀರಿ. ಕಲಾಧ್ಯಾನದ ಮೂಲಕವೇ ಸಂಗೀತದೊಂದಿಗೆ ತಾದಾತ್ಮ್ಯ ಸಾಧಿಸುವ ಸ್ವರಸಂತ. ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲೇ ಹದವರಿತ ರಸಾನುಭೂತಿ ಒದಗಿಸುವ ಪ್ರಯೋಗಶೀಲ ಮನಸ್ಸುಳ್ಳವರು. ನಿಮ್ಮ ವಿಶಿಷ್ಟ ಧ್ವನಿಸಂಸ್ಕಾರವೇ ಜನಪ್ರಿಯತೆ, ಸಭಾರಂಜನೆಯ ಪ್ರಮುಖ ನಾಡಿ.ಶಾಬ್ದಿಕ ಸುಖಕ್ಕಿಂತ ನಾದದ ಅನುಭೂತಿ ಸೂಸುವ ಆಧ್ಯಾತ್ಮ ಶಕ್ತಿ ಇರುವುದೇ ಹಿಂದೂಸ್ತಾನಿ ಸಂಗೀತದಲ್ಲಿ. ತನ್ಮೂಲಕ ವಿಶೇಷ ಪ್ರಯಾಣದ ಸುಖ-ದುಃಖ ಕಂಡಿದ್ದೀರಿ. ನಿಮ್ಮ ಜೊತೆ ಜೊತೆಗೆ ಸಂಗೀತಯಾನದಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ಕಲಾವಿದರೂ ಈಗ ನೆನಪಾಗುತ್ತಿದ್ದಾರೆ. ಅನಕೃ ಅವರ ಒತ್ತಾಯಕ್ಕೆ ಮಣಿದು, ವಚನಗಳನ್ನು ಮನೆ-ಮನ ಮುಟ್ಟಿಸಿದ ಮನ್ಸೂರರ ನಾದಲೋಕವೇ ವಿಭಿನ್ನ. ಹದಿನಾರು ವರುಷಗಳ ಹಿಂದೆ ಧಾರವಾಡದ ಮುರುಘಾಮಠದಲ್ಲಿ ಕೇಳಿದ ಅಕ್ಕ ಕೇಳವ್ವದ 'ಅಚ್ಚರಿ'ಗೆ ಪ್ರಾಯವೇ ಕಳೆದಿಲ್ಲ. ಆದರೆ ಮನ್ಸೂರರ ಕಾರ್ಯಕ್ರಮದ ನಂತರ ಅಂದು ನಾನೇನು ಹಾಡಿದ್ದೆ? ಎನ್ನುವುದು ತಲೆಕೆಳಗೆ ಮಾಡಿನಿಂತರೂ ಸ್ಮೃತಿಪಟಲದ 'ಸಮ್‌' ಗೆ ಬಂದು ನಿಲ್ಲಲಾಗುತ್ತಿಲ್ಲ. ಆತ್ಮಾನುಭವ ಜೊತೆಜೊತೆಗೆ ಕೇಳುಗನೊಂದಿಗೆ ತಾದಾತ್ಮ್ಯ ಸಾಧಿಸುವುದು ತಪಸ್ಸೇ ಅಲ್ಲವೆ?


ಹೀಗೆ ಖ್ಯಾಲಗಾಯನದ ಶೈಲಿಯಲ್ಲೇ ವಚನ ಸಂಗೀತ ಪ್ರಸ್ತುತ ಪಡಿಸಿದ ಇನ್ನೋರ್ವರು ರಾಜಗುರುಗಳು. ಆಗಾಗ ವಿನಾಕಾರಣ ಕಣ್ಣೀರು ತರಿಸುತ್ತಾರೆ. ಹಾರ್ಮೋನಿಯಂ ನುಡಿಸುತ್ತ ಯಮನ್ ರಾಗದಲ್ಲಿ ನೀನೊಲಿದರೆ ಕೊರಡು ಕೊನರುವುದಯ್ಯಾ ಎಂದಾಗ 'ವ್ಹಾ! ಎಳೆ ಎಳೆ ಎಂಟರ ಹುಡುಗಿ ನನ್ನ ಹತ್ತಿರವೇ ಇದ್ದು ಬಿಡಲಿ. ನನ್ನ ಶಿಷ್ಯಬಳಗದಲ್ಲಿ ಇವಳೂ ಒಬ್ಬಳು. ಎಂದು ಅಕ್ಕರೆ ತೋರಿಸಿದ್ದು ಮಾಸದ ನೆನಪು. ಮರು ವರ್ಷವೇ ಕೊಟ್ಟ ಮಾತು, ತೋರಿದ ವಿಶ್ವಾಸ ಮರೆತು ನಡೆದೇ...ಬಿಟ್ಟರು ಶಾಶ್ವತವಾಗಿ. ಆದರೆ ಆಗಲೂ ಈಗಲೂ ಕೋಪ ಬರುವುದು ಖಂಡಿತ ಅವರ ಮೇಲಲ್ಲ, ಅವರೆಲ್ಲ ನಂಬಿದ್ದ ಕಾಲನ ಮೇಲೆ.

ತ್ರಿಸಪ್ತಕಗಳ ದಾಟಿ ತಾರಕ ಮೀರಿ ಏರಿದ ಸ್ವರ ನಿಲ್ಲಿಸಿ, 'ಹಾರ್ಮೊನಿಯಂ ಯಾಕೆ ನಿಲ್ಲಿಸಿದಿರಿ?' ಎಂದು ವಸಂತ ಕನಕಾಪುರರಿಗೆ ರಾಜಗುರುಗಳು ಕೇಳಿದ್ದರಂತೆ... ಹಾರ್ಮೋನಿಯಂನಲ್ಲಿನ ಸ್ವರಗಳು ಮುಗಿದರೆ ಇನ್ನೇನು ಮಾಡಲಿ? ಎಂದು ಕನಕಾಪುರ ಪ್ರಶ್ನಿಸಿದ್ದರಂತೆ. ವಾದ್ಯದ ಮಿತಿಯನ್ನು ಮೀರಿದ ಕಂಠತ್ರಾಣ, ತನ್ಮಯತೆಗೆ ಸಾಕ್ಷಿ ರಾಜಗುರುಗಳು.

ಜೋಶಿ ಬುವಾ, ಆದರೆ ಇವರೆಲ್ಲರ ಹಾಗೆ ನಿಮ್ಮನ್ನು ಭೇಟಿಯಾಗುವ, ಕಛೇರಿ ಸಂಗೀತ ಕೇಳುವ ಭಾಗ್ಯ ನನಗ್ಯಾಕೆ ಬರಲಿಲ್ಲ? ಕಾಡುವ ಪ್ರಶ್ನೆ ಈಗಿನದಲ್ಲ. ವಯಸ್ಸಿನಿಂದಲೇ...

ಅದೆಲ್ಲ ಇರಲಿ. ಪಕ್ಕದ ಮನೆಯಲ್ಲಿದ್ದರೇನು? ನಮ್ಮ ಮನೆಯಲ್ಲಿದ್ದರೇನು? ನಾದದ ಹೊಳೆ ಹರಿಯುತ್ತಲೇ ಇದೆ.... ಹರಿದಾಸವಾಣಿ ಹಾಗೂ ಅಭಂಗ್ವಾಣಿ ಮೂಲಕ ಮನಸೆಳೆದ ನೀವು ಅಂದು ಬೇಂದ್ರೆಯವರ 'ಉತ್ತರ ಧೃವದಿಂ...' ಶೀರ್ಷಿಕೆಯಡಿ ಭಾವಗೀತೆಗಳಿಗೆ ಜೀವ ತುಂಬಿದ್ದೀರಿ. ಖ್ಯಾಲ ಗಾಯನದ ಮೂಲಕ ನಾದಾನುಭವಕ್ಕೆ ಅನುವು ಮಾಡಿಕೊಟ್ಟು, ಠುಮ್ರಿ, ಠಪ್ಪಾ, ಭಜನ್ನಂಥ ಆಧ್ಯಾತ್ಮ ಮಿಲಿತ ರಸದೌತಣ ಬಡಿಸಿದ್ದೀರಿ. ಪ್ರಕೃತಿಯ ಇರವನ್ನೆ, ಹರಿವನ್ನೇ ಪುಟ್ಟ ಗಂಟಲಲ್ಲಡಗಿಸಿಕೊಂಡು ಮೂಕವಿಸ್ಮಿತಗೊಳಿಸಿದ್ದೀರಿ. ಇದೆಲ್ಲದರ ಫಲವಾಗಿ ಈಗ ಭಾರತ ರತ್ನ ಪ್ರಶಸ್ತಿ ಕಿರೀಟ. ಅಭಿನಂದನೆ ಗುರೂಜಿ.

ಆದರೆ, ಮತ್ತೆ ಮತ್ತೆ ಹೇಳುತ್ತಿದ್ದೇನೆ. ಬಂದುಬಿಡಿ ಒಮ್ಮೆ ನಿಮ್ಮದೇ ಮನೆಗೇ.... ಅಂದು ಎಲ್ಲರೆದುರಿಗೆ ಸುಮ್ಮನಿದ್ದು, ಸಂದರ್ಭ ಒದಗಿದಾಗ ತನ್ನ ಮಿತಿಯನ್ನು ತೋಡಿಕೊಂಡರೂ ಅದರ ಕತ್ತು ಸವರುತ್ತಲೇ, ಹುರಿದುಂಬಿಸುತ್ತಲೇ ನಿಮ್ಮತನಕ್ಕೆ ಅದನ್ನು ಒಗ್ಗಿಸಕೊಂಡುಬಿಟ್ಟಿದ್ದಿರಿ. ಕಾರು ಈಗ ನಿಮ್ಮೊಂದಿಗಿದೆಯೋ ಇಲ್ಲವೋ ಗೊತ್ತಿಲ್ಲ. ಅದರೆ ಅದೇ ವೇಗವನ್ನೇನೂ ನಾವು ಕೇಳುತ್ತಿಲ್ಲ, ಏಕೆಂದರೆ ನದಿ ಬೇಡ ಸಾಕು ಸೆಲೆ. ಸೆಲೆಯೊಂದಿಗೆ ಸ್ವರಸಾಮಿಪ್ಯ. ಇಡೀ ನಾದಲೋಕವೇ ನಿಮ್ಮನ್ನು ಒಪ್ಪಿ-ಅಪ್ಪಿರುವಾಗ ಮತ್ಯಾಕೆ ತಡ? ಕೇಳಿಸುತ್ತಿಲ್ಲವೇ? ಒಡಲಹಂಬಲ...

Thursday, January 6, 2011

ಹೊಸಿಲು ದಾಟಲಿ ಒಳಗೂ ಬರಲಿ


ಬಯಕೆಯಂತೆ ಸುಂದರಿ, ಬುದ್ಧಿವಂತೆ ಮತ್ತು ಸೂಕ್ಷ್ಮಮತಿ ಹುಡುಗಿ ಸಿಕ್ಕಾಗ ಆಕೆ ತನ್ನ ಸ್ವತ್ತು ಎಂದು ಅವನು ಪರಿಭಾವಿಸುತ್ತಾನೆ. ‘ಸ್ವತ್ತು’ ಆಗಿಬಿಟ್ಟದ್ದು ಚೆಲುವು ಆಗಿ ಉಳಿಯಲಾರದು; ಚೆಲುವು ಯಾರ ಸ್ವತ್ತೂ ಆಗಿ ಉಳಿಯಲಾರದು. ಪರಿಣಾಮ: ಪರಸ್ಪರರ ಆಸಕ್ತಿ ಕರಗುತ್ತ ಹೋಗುತ್ತದೆ. ಸಾಮಾಜಿಕ ಅನ್ಯೋನ್ಯತೆ ಸಾಧಿಸುತ್ತಾರೆ ನಿಜ. ಆದರೆ ಬೇಕಿರುವುದು ನೋವು, ಸುಖ ಉಂಟು ಮಾಡ ಬಹುದಾದ ಅನ್ಯೋನ್ಯತೆ-ಪ್ರೀತಿ. ಇದು ನಿರಂತರ ಗಂಡು-ಹೆಣ್ಣಿನ ಪಾಡು.
-ಡಾ. ಯು. ಆರ್. ಅನಂತಮೂರ್ತಿ

---------------------------------------------------------------------------------------
ಪ್ರೀತಿ ರಿನ್ಯೂ ಆಗುತ್ತಲೇ ಇರಬೇಕು. ಅದೊಂದು ಮದುವೆ ಮುಹೂರ್ತದ ಡಿಪಾಸಿಟ್ ಆಗಬಾರದು.. ಲೋಹಿಯಾ ಒಂದು ಕಡೆ ಹೇಳಿದ್ದು ಅದ್ಯಾಕೋ ಮನಸಿಗೆ ತಾಕಿದೆ. ‘ಪ್ರಪಂಚದಲ್ಲಿ ಗಾಢವಾದ ಕಥೆಗಳಿರೋದು ಗಂಡು ಹೆಣ್ಣಿನ ಪ್ರೀತಿ ಮತ್ತು ದೇವರ ಮೇಲಿನ ಪ್ರೀತಿ’ ಬಗ್ಗೆ. ಈ ದೇವರ ಮೇಲಿನ ಪ್ರೀತಿ ಮತ್ತು ಗಂಡು ಹೆಣ್ಣಿನ ಸಂಬಂಧ ಅಷ್ಟು ಸುಲಭದ್ದಲ್ಲ. ಆದರೂ ಮನಸ್ಸನ್ನು ಮರೆಸುವಂಥವು ಹೆಣ್ಣು ಮತ್ತು ದೇವರು ಎರಡೇ. ಆ ಪ್ರೀತಿಯಲ್ಲಿ ದುಃಖ, ವಿಕೋಪ, ವಿರಸ ಎಲ್ಲವೂ ಇರತ್ತೆ ನಿಜ. ಆದರೂ ಪರಮ ನೆಮ್ಮದಿ ದಕ್ಕೋದೂ ಹೆಣ್ಣಿನಿಂದಲೇ.

ನಿಜವಾದ ಸ್ವಾತಂತ್ರ್ಯ ಹೆಣ್ಣಿಗೆ ದಕ್ಕಿಲ್ಲ...
ಪ್ರೀತಿ-ಸಂಬಂಧಗಳ ಬಗ್ಗೆ ಇರುವ ತಕರಾರನ್ನು ಮನಶಾಸ್ತ್ರ ಪುಸ್ತಕಗಳಿಂದ ಬಗೆಹರಿಸಿಕೊಳ್ಳೋದು ಅಸಾಧ್ಯ. ಹಾಗಾದರೆ ಸಮಸ್ಯೆ ಏನಿಲ್ಲಿ? ಹೆಣ್ಣು ಸುಂದರಿ, ಬುದ್ಧಿವಂತೆ, ಸೂಕ್ಷ್ಮಮತಿಯೂ ಆಗಿರಬೇಕು ಜೊತೆಜೊತೆಗೆ ಸಂಪೂರ್ಣ ತನ್ನವಳಾಗಬೇಕು ಎನ್ನುವುದು ಗಂಡಿನ ಆಸೆ, ಭಾವನೆ ಏನೆಲ್ಲ. ಆದರೆ ಇದು ಒಂದಕ್ಕೊಂದು ತದ್ವಿರುದ್ಧ.

ಒಂದು ಅಪೇಕ್ಷೆ ಫಲಿಸಿದರೆ ಇನ್ನೊಂದು ಫಲಿಸುವುದಿಲ್ಲ. ಇದು ಮನುಷ್ಯ ಸ್ವಭಾವದಲ್ಲೇ ಇರುವ ತೊಡಕು. ಇದನ್ನು ಗೆಲ್ಲುವುದು ಬಹಳ ದೊಡ್ಡ ಕೆಲಸ. ಆದರೆ ಇದನ್ನು ಒಂದು ಉದಾತ್ತತೆಯಲ್ಲಿ ಅರ್ಥ ಮಾಡಿಕೊಳ್ಳುವ ಮೂಲಕ ಗೆಲ್ಲಬಹುದು. ಇಲ್ಲವೆ ಪ್ರೀತಿಯನ್ನು ಕಡಿಮೆ ಮಾಡುವುದರಿಂದಲೂ ಯಶಸ್ಸು ಕಾಣಬಹುದು.
ಆದರೆ ಅದು ಕೇವಲ ಸಾಂಸಾರಿಕ ಗೆಲುವಾಗುತ್ತದೆ. ಈ ಗೆಲುವು ಸಮಸ್ಯಾತ್ಮಕವಾದದ್ದು. ಪರಸ್ಪರ ಆಕರ್ಷಣೆ ಹಿಂದಿನ ಉತ್ಕಟತೆಯಲ್ಲಿ ಉಳಿದಿರುವುದಿಲ್ಲ. ಮೇಲ್ನೋಟಕ್ಕೆ ಅನ್ಯೋನ್ಯವಾಗಿದ್ದವರಂತೆ ಅವರು ಕಾಣುತ್ತಾರಾದರೂ ಪ್ರೀತಿಯ ವಿಷಯವಾಗಿ ದೂರ ದೂರವೆ. ಸ್ವತ್ತಾದ ನಂತರ ಜಾಣೆ ಸುಂದರಿಯಾಗಿರುವುದಿಲ್ಲ. ಸುಂದರಿ ಜಾಣೆ ಯಾಗಿರುವುದಿಲ್ಲ. ಇದೊಂದು ಸುಲಭವಾಗಿ ವಿವರಿಸಲಾಗದ ತಳ್ಳಿಹಾಕಲಾಗದ ವಿಷಯ.

ಒಬ್ಬ ಗಂಡಸು ಗಂಡಸಾಗಿಲ್ಲದಿದ್ದರೆ ಅಥವಾ ಯಾವ ಯಜಮಾನಿಕೆ ಶಕ್ತಿಯೂ ಇಲ್ಲದಿದ್ದರೆ ಹೆಣ್ಣಿಗೆ ಅವನ ಮೇಲೆ ಆಸಕ್ತಿ ಹೊರಟು ಹೋಗಬಹುದೆಂದು ನನಗೆ ಅನುಮಾನ. ಇದು ಸರಿಯೂ ಅಲ್ಲ. ತಪ್ಪೂ ಅಲ್ಲ. ನಾನು ಹುಡುಗನಾಗಿದ್ದಾಗಿನ ಸಂದರ್ಭ ನೆನಪಿಗೆ ಬರ್ತಿದೆ. ಆಗ ವರದಕ್ಷಿಣೆ ಪರಿಕಲ್ಪನೆ ಇನ್ನೂ ಹುಟ್ಟಿಕೊಂಡಿರಲಿಲ್ಲ. ತೆರ (ವಧುದಕ್ಷಿಣೆ) ಕೊಡುವ ಪದ್ಧತಿ ಇತ್ತು. ಹುಡುಗನ ಕಡೆಯವರು ಕೊಟ್ಟ ದುಡ್ಡನ್ನು ಆ ಹುಡುಗಿ ತನ್ನ ಅಪ್ಪನಿಗೆ ಕೊಡುತ್ತಿದ್ದಳು. ಕೃಷಿಪ್ರಧಾನ ಕುಟುಂಬದಲ್ಲಿ ಗಂಡು ಹೆಣ್ಣು ಸಮಾನವಾಗಿ ದುಡೀತಿದ್ರು. ಆದ್ದರಿಂದ ವಧುದಕ್ಷಿಣೆ ಕೊಟ್ರೆ ಮಾತ್ರ ಮದುವೆ ಎಂಬ ಕರಾರು ಇರುತ್ತಿತ್ತು. ನಾಗರಿಕನಾದ ಗಂಡನಾದವನು ಸಾಮಾನ್ಯವಾಗಿ ಮನೆಗೆಲಸಕ್ಕೆ ಸಹಾಯ ಮಾಡುತ್ತಿದ್ದಾನೆ ಹಾಗೇ ಮಕ್ಕಳ ಕೆಲಸಗಳನ್ನು ನಿರ್ವಹಿಸುತ್ತಿದ್ದಾನೆ.

ಆದರೂ ಹೆರುವುದು, ಮೊಲೆಯೂಡಿಸುವುದು ಮಾತ್ರ ಹೆಂಡತಿಯೇ ಅಲ್ಲವೆ? ಹೀಗೆ ಅವಳು ಹೆರಿಗೆ, ಬಾಣಂತನ ಎಂದು ಕುಳಿತರೆ ದುಡಿಯಲು ಸಾಧ್ಯವೇ? ಆದ್ದರಿಂದ ಹೆಣ್ಣೊಬ್ಬಳು ಹೆರುತ್ತಾಳೆಂದರೆ ಅದು ಅವಳ ದೊಡ್ಡ ಕರ್ತವ್ಯ. ಅವಳಿಗೆ ಹುಟ್ಟುವ ಮಗು ದೇಶದ ಸ್ವತ್ತು. ಆ ಕರ್ತವ್ಯವನ್ನು ಸರ್ಕಾರ ಗೌರವಿಸಬೇಕು. ರಜಾ ಅವಧಿಯನ್ನು ಹೆಚ್ಚಿಸಬೇಕು. ಸತತ ನವೀಕರಣ ಹೆರಿಗೆಯಲ್ಲಿ. ಈ ಮೂಲಕ ಸಮಾಜ, ಸಂಸ್ಕೃತಿಯ ನವೀಕರಣ. ಇದನ್ನು ಸಮಾಜ ಒಪ್ಪಿಕೊಳ್ಳಬೇಕು.

ಗಂಡಿನ ಮಟ್ಟಿಗೆ ಕಾಮ ಎನ್ನುವುದಿದೆ ಆದರೆ ಹೆಣ್ಣಿಗಿಲ್ಲ ಅಂತ ಅಂದ್ಕೊಂಡಿದೀವಿ. ಕಾಮ ಅನ್ನೋದು ಹೆಣ್ಣಿನ ಮೇಲೆ ಪ್ರಯೋಗಿಸುವ ವಿಷಯ ಅಂತಾನೂ ತಪ್ಪು ತಿಳ್ಕೊಂಡಿದೀವಿ. ಗಂಡಿನಂತೆ ಹೆಣ್ಣಿಗೂ ಕಾಮದ ಬಯಕೆ ಇರತ್ತೆ. ಆದರೆ ಅದು ಬೇರೆ ರೀತಿಯಲ್ಲಿ ಅಂದರೆ ಸೂಕ್ಷ್ಮತೆಯಲ್ಲಿ ವ್ಯಕ್ತವಾಗತ್ತೆ. ಆದರೆ ನಾವುಗಳು ಹೆಣ್ಣಿಗೆ ಕಾಮಬಯಕೆಯೇ ಇಲ್ಲ ಅನ್ನೋಹಾಗೆ ವರ್ತಿಸ್ತಿದಿವಿ.

ಮದುವೆ ಆದ ಮೇಲೆ ಗಂಡ ಅಥವಾ ಹೆಂಡತಿ ಬೇರೊಬ್ಬರನ್ನು ಇಷ್ಟಪಟ್ಟಾಗ ಮಾರಲ್ ಟರ್ಮ್‌ನಲ್ಲಿ ಮಾತ್ರ ಅದನ್ನು ಖಂಡಿಸಿ ಪ್ರಯೋಜನವಿಲ್ಲ. ಇಬ್ಬರಲ್ಲಿ ಯಾರೇ ಆಗಲಿ ಬೇರೊಬ್ಬರನ್ನು ಇಷ್ಟಪಟ್ಟು, ಈ ಇಷ್ಟ ಗಟ್ಟಿಯಾಗಲಾರದೇ ಮತ್ತೆ ತಮ್ಮ ಹಿಂದಿನ ಪ್ರೀತಿಯನ್ನು ನವೀಕರಿಸಿಕೊಂಡು ಒಪ್ಪಿಕೊಳ್ಳುವುದಾದಲ್ಲಿ ತಪ್ಪಿಲ್ಲ. ಅಂದರೆ ಇಲ್ಲಿ ಹೊಸಿಲು ದಾಟಿದ ಹೆಣ್ಣು ಮತ್ತೆ ಒಳಗೂ ಬರಬಹುದು. ಇದು ಹೊಸ ಕಾಲದಲ್ಲಿ ನಮ್ಮ ತಿಳಿವಿಗೆ ಬರಬೇಕು. ಈ ತಿಳಿವಿನ ಹಿಂದೆ ತುಂಬಾ ನೋವು ಇರತ್ತೆ, ಈ ವಿಷಯವಾಗಿ ಹೆಣ್ಣು, ಗಂಡು ಇಬ್ಬರೂ ಕಷ್ಟ ಪಡುತ್ತಿದ್ದಾರೆ. ಯಾತನೆ ಅನುಭವಿಸುತ್ತಿದ್ದಾರೆ ಇದು ನೋವಿನಿಂದಲೇ ತಿಳಿದುಕೊಳ್ಳುವ ವಿಷಯ.

ನೋವು, ಹಿಂಸೆ ನಡುವೆಯೇ ಸಂಬಂಧ ಪಕ್ವಗೊಳ್ಳುವುದು...
ನೋವು, ಹಿಂಸೆ, ಇವೆಲ್ಲದರ ನಡುವೆ ಗಂಡು ಹೆಣ್ಣಿನ ಸಂಬಂಧಗಳು ಪಕ್ವವಾಗುತ್ತಾ ಹೋಗುತ್ತವೆ. ಹಿಂಸೆ ಅನ್ನೋದು ಮನಸಿನ ಹಿಂಸೆ ಅಲ್ಲದೆ ದೇಹದ ಹಿಂಸೆ ಆದಾಗ ಅದು ಅರ್ಥ ಕಳೆದುಕೊಳ್ಳತ್ತೆ. ಹೊಡೆತ, ಬಡೆತದಿಂದ ಪ್ರೀತಿ ಅರ್ಥ ಕಳೆದುಕೊಳ್ಳತ್ತೆ. ಆದ್ದರಿಂದ ವಿವೇಕ ಅಗತ್ಯ. ಗಂಡು ಅಂದ್ರೆ ಹೀಗೆ. ಹೆಣ್ಣು ಅಂದರೆ ಹೀಗೆ ಅಂತ ತೀರ್ಮಾನ ಮಾಡುವುದು ಶುದ್ಧ ತಪ್ಪು. ಈ ಸಂದರ್ಭದಲ್ಲಿ ಮಾಸ್ತಿಯವರ ‘ವೆಂಕಟಿಗನ ಹೆಂಡತಿ’ ಕಥೆ ನೆನಪಾಗ್ತಿದೆ. ಗಂಡನಲ್ಲಿ ಪುರುಷತ್ವವೇ ಸಾಲದು ಅಂತ ಹೆಂಡತಿ ಹೊರಟುಬಿಡುತ್ತಾಳೆ. ಆದರೆ ಅವನು ಸೌಮ್ಯ ವ್ಯಕ್ತಿ. ಅದನ್ನು ಮನಸಿಗೆ ಹಾಕಿಕೊಳ್ಳದೆ ನಾರ್ಮಲ್ ಆಗಿದ್ದುಬಿಡುತ್ತಾನೆ. ನಂತರ ಅವಳೇ ವಾಪಸಾಗುತ್ತಾಳೆ. ಈ ಕಥೆಯ ಸತ್ಯ ಎಲ್ಲ ಕಾಲಕ್ಕೂ ಸಲ್ಲುವಂಥದ್ದು.

ಗಂಡ-ಹೆಂಡತಿ ಸಂಬಂಧ ಪಾಸಿಟಿವ್ ಆಗಿ ಹೊರಳುತ್ತಿರುವಾಗಲೇ ಆಸೆಬುರುಕ ಸಂಸ್ಕೃತಿ ಸಂಸಾರ ಘಟಕವನ್ನು ನಾಶ ಮಾಡುತ್ತ ಹೊರಟಿದೆ. ಸಮಸ್ಥಿತಿಗೆ ಬರುವಂಥದ್ದನ್ನು ಅತಿರೇಕಕ್ಕೆ ಎಳೆದುಕೊಂಡು ಹೋಗುತ್ತಿದೆ. ಸೌಂದರ್ಯದ ಕಲ್ಪನೆಯಲ್ಲೇ ಬದಲಾವಣೆಯಾಗಿದೆ.

ಎಲ್ಲೆಡೆ ಹಣದ ಗರ್ವ ಹಾಸುಹೊಕ್ಕಾಗಿದೆ. ಜಾಹೀರಾತುಗಳಲ್ಲಿ ಬರುವ ಮುಖಗಳೇ ಚೆಂದದ ಮುಖಗಳು ಅನ್ನೋದು ಸರ್ವಸಮ್ಮತ ಎಂಬಂತಾಗಿದೆ. ಆದರೆ ನಿಜವಾದ ಸೌಂದರ್ಯ ಕಣ್ಣಿಗೆ ಕಾಣೋದಿಲ್ಲ. ಈ ಸರಕು ಸಂಸ್ಕೃತಿ ಮತ್ತು ಸಿನಿಮಾ ಸಂಸ್ಕೃತಿಯ ಪರಿಭಾಷೆಗೆ ಅರ್ಥವಿಲ್ಲ. ಸಾಮಾನ್ಯವಾಗಿ ಎಲ್ಲರೂ ಚೆಂದ ಅಂತ ತಿಳ್ಕೊಂಡಿರೋದನ್ನೂ ಮೀರಿದ ಸೌಂದರ್ಯ ಇರುತ್ತದಲ್ಲ... ಅದನ್ನು ತೋರಿಸೋದು ಸಾಧ್ಯವಾಗಬೇಕು. ಅದು ನಿಜ ಸೌಂದರ್ಯ.
ಸಿನಿಮಾ-ಸರಕು ಸಂಸ್ಕೃತಿಗೆ ಆಕರ್ಷಿತರಾಗಿ, ಕಾಣಬಹುದಾದ ಸೌಂದರ್ಯವನ್ನು ಕಾಣದೇ ಹೋಗ್ತಿದ್ದೇವೆ. ಸೌಂದರ್ಯ ಹಲವು ರೀತಿಯಲ್ಲಿ ಕಾಣುವಂಥದ್ದು. ಒಳಮನಸ್ಸಿನ ಸೌಂದರ್ಯ ಮುಖ್ಯ. ಒಳ್ಳೆಯ ಸಂಬಂಧದಲ್ಲಿ ಪರಸ್ಪರ ಇಬ್ಬರೂ ಅಂಥ ಸೌಂದರ್ಯ ಕಂಡುಕೊಂಡಿರುತ್ತಾರೆ. ಇದೊಂದು ಅಂತರ್ಗತ ಸೌಂದರ್ಯ.

ಇಬ್ಬರೂ ಬದಲಾಗಿಲ್ಲ...
ಒಂದರ್ಥದಲ್ಲಿ ಮಹಿಳೆಯೂ ಬದಲಾಗಿಲ್ಲ. ಪುರುಷನೂ. ಆದರೆ ನಾವು ಇರಬೇಕಾದ ಸ್ಥಿತಿಗಳು ಒತ್ತಾಯ ತರ್ತಾ ಇವೆ. ಮನುಷ್ಯ ಸಂಬಂಧಗಳನ್ನು ಅಳತೆಗೋಲಿಟ್ಟು ನಿರೂಪಿಸೋದಕ್ಕೆ ಆಗಲ್ಲ. ಎಲ್ಲವೂ ಮರ್ಯಾದೆಗಾಗಿ, ಗಂಡು ಹೆಣ್ಣಿನ ಸೂಕ್ಷ್ಮತೆಗಳನ್ನು ತಿಳಿಯದೇ ಮೊದಲಿನಿಂದಲೂ ಮಾಡಿದ ಕಟ್ಟುಪಾಡುಗಳಿವು. ಈಗಲೂ ಗಂಡಿಗೇ ಅಧಿಕಾರ ಇರೋದ್ರಿಂದ ಪ್ರೀತಿ ಈ ರೀತಿ ಕುರೂಪ ಪಡೆದುಕೊಳ್ತಿದೆ. ಮಹಿಳೆಯರಿಗೆ ಇಂತಿಷ್ಟು ಮೀಸಲಾತಿ ಇರಬೇಕು ಅಂತ ಹೇಳ್ತಿದೀವಲ್ಲ ಅದು ಸರಿ. ಮಹಿಳೆ ರಾಜಕೀಯಕ್ಕೆ ಎಂಟ್ರಿ ಕೊಡಲೇಬೇಕು.

‘ಗಂಡು ಬೇರೆ. ಹೆಣ್ಣು ಬೇರೆ. ಆದರೆ ಇಬ್ಬರೂ ಸಮಾನ’ ಅಂತ ಗಾಂಧಿ ಹೇಳಿದ್ರು. ಸಮಾನ ಅಂತ ಹೇಳೋವ್ರ ವಿಭಿನ್ನತೆ ಮರೀತಾರೆ. ವಿಭಿನ್ನತೆ ಅನ್ನೋವ್ರ ಸಮಾನತೆ ಮರೀತಾರೆ. ಇವೆರಡರಿಂದ ಅಪಚಾರ ಉಂಟಾಗತ್ತೆ. ವಿಭಿನ್ನತೆ, ಸಮಾನತೆ ವಿಷಯವಾಗಿ ಇಬ್ಬರೂ ತಪ್ಪು ಮಾಡ್ತಾರೆ. ಗಂಡು ಇಲ್ಲದೇ ಇದ್ರೆ ಅಥವಾ ಹೆಣ್ಣು ಇಲ್ಲದಿದ್ದರೆ ತಾನು ಅಪೂರ್ಣ ಎನ್ನುವುದು ಇಬ್ಬರಿಗೂ ಗೊತ್ತಿರಬೇಕು. ಆದರೆ ಗಂಡಸು ಹೆಣ್ಣಿನ ಸಂಪರ್ಕವೇ ಬೇಡ ಅನ್ನೋದು, ಹೆಣ್ಣು ಗಂಡಿನ ಸಂಪರ್ಕವೇ ಬೇಡ ಎನ್ನುವ ತೀರ್ಮಾನಕ್ಕೆ ಬರೋದು ಕಾಲದ ಅತಿರೇಕ.

ಆದರ್ಶದ ಹೆಸರಿನಲ್ಲಿ ಎಲ್ಲವನ್ನೂ ಸರಳಗೊಳಿಸಿ ತಪ್ಪು ಮಾಡ್ತಿದೀವಿ. ಅರ್ಥ ಮಾಡಿಕೊಳ್ಳುವುದರಲ್ಲಿ ನೋವಿರತ್ತೆ. ಮನಸು ಒಪ್ಪಲ್ಲ. ಹಾಗೇ ಒಳ್ಳೇತನ ಸಹಜವೇನಲ್ಲ. ಅಸಹಜವೂ ಅಲ್ಲ. ಅದು ಇಬ್ಬರಿಗೂ ಅನ್ವಯವಾಗುವ ಮಾತು. ಅರಿವು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ನೋವಿರತ್ತೆ. ಒಟ್ಟು ಮನಸು ತಿಳಿಯಾಗಿರಬೇಕು. ಆದರೆ ಸುಳ್ಳುಗಳಿಗೆ ಅವಕಾಶವಿರಲೇಬಾರದು.

ಒಬ್ಬರಿಗೊಬ್ಬರು ಇಂಟ್ರೆಸ್ಟ್ ಕಳೆದುಕೊಂಡ ಅನ್ಯೋನ್ಯತೆ ಸಾಮಾಜಿಕ ಒಪ್ಪಂದ ಅಷ್ಟೆ. ಯಾರು ಜಗಳಾಡ್ತಾ ಇರ್ತಾರೆ ಅವರು ಹೆಚ್ಚು ಪ್ರೀತಿಸ್ತಿರ್ತಾರೆ. ಬಹಳ ಇಷ್ಟ ಇರೋವ್ರ ಜೊತೆನೇ ಜಗಳ ಅಲ್ವೆ? ದ್ವೇಷ ಬೇರೆ. ಜಗಳ ಬೇರೆ. ಯಾರನ್ನೇ ಆಗಲಿ ಕಟುವಾಗಿ ಟೀಕಿಸ್ತಿದೀವಿ ಅಂದ್ರೆ ಆ ಟೀಕೆ ಪ್ರೀತಿಯಿಂದ ಹುಟ್ಟಿರುವಂಥದ್ದು. ಇವರಿರೋದೇ ಹೀಗೆ ಅಂತ ಸುಮ್ಮನಾಗಿಬಿಟ್ಟರೆ ಸಿನಿಕರಾಗಿಬಿಡ್ತೇವೆ. ಹಾಗೇ ಟೀಕೆಗೊಳಗಾದವರಿಗೆ ಆ ಟೀಕೆಯ ಸತ್ಯಾಂಶವನ್ನು ಅರ್ಥ ಮಾಡಿಕೊಳ್ಳುವಂಥ ವಿನಯ ಇರಬೇಕು.

----------------------------------------------

ಸಂದರ್ಶನ: ಶ್ರೀದೇವಿ ಕಳಸದ
’ಪ್ರಜಾವಾಣಿ’ಯ ’ಭೂಮಿಕಾ’ ಸಂಚಿಕೆಯ ಅವಳು-ಅವನು ಅಂಕಣಕ್ಕೆ ಡಾ. ಯು.ಆರ್‌. ಅನಂತಮೂರ್ತಿ ಅವರೊಂದಿಗೆ ನಡೆಸಿದ ಸಂದರ್ಶನ ( ೧-೧-೨-೧೧ ರಂದು ಪ್ರಕಟ)