Wednesday, March 23, 2011

ಇದ್ದಾನೆ ಇಲ್ಲೇ..


’ಎಣಿಸಿಟ್ಟುಕೊಂಡಿದ್ದೇನೆ ಎವೆ ಪಲಕುಗಳ ಪಟಪಟಿಸುವಿಕೆ

ಸುರಿದ ಕಣ್ಣೀರ ಲೆಕ್ಕವೂ ಇದೆ

ಒರೆಸುವ ದಾರಿ ಕಾಣದೇ ಸೋತವನಿಗೆ

ಕಾಮನಬಿಲ್ಲಿನ ಕನಸ ಆಮಿಷ’ -


ಅವ ಸಿಟ್ಟಿನಿಂದ ಬರೆದಿದ್ದ ಭಾವನೆಗಳ

ಬಚ್ಚಿಟ್ಟುಕೊಂಡಿದ್ದೇನೆ ಎದೆಯಲ್ಲಿ ಹಾಗೇ

ಎವೆ ಪಲುಕಿದಾಗೆಲ್ಲ ಅವ ನೆನಪಾಗುತ್ತಾನೆ

ಉಕ್ಕುತ್ತಾನೆ ಕಣ್ಣೀರು ತುಳುಕಿದಾಗ

ಮರೆಯಬೇಕೆಂದು ಅವನನ್ನು ದಿನಾ ನೆನಪಿಸಿಕೊಳ್ಳುತ್ತೇನೆ

ಹಾಳಾದವನು

ಎಲ್ಲಿಂದ ಬಂದನೋ, ಏಕೆ ನಿಂತನೋ

ಎವೆ ಪಲುಕಿಸಿದರೆ ಎಣಿಸಿಯಾನೆಂದು

ದಿಟ್ಟಿಗಣ್ಣು ಬಿಟ್ಟು ಕೂತರೆ

ಕಣ್ಣೀರಾಗಿ ಇಣುಕುತ್ತಾನೆ, ಕಾಡುತ್ತಾನೆ.

ಅಳುವಂತಿಲ್ಲ ಅವನ ನೆನಪಲ್ಲಿ, ಪಲುಕಿಸುವಂತಿಲ್ಲ ಎವೆ

ನೆರಳಿನಂಥವನು

ಜೊತೆಗೇ ಇರುತ್ತಾನೆ, ಇನ್ನಿಲ್ಲದಂತೆ.


‘ಮೊಗ್ಗಾಗಿ ಬಾರೋ ಜಡೆಗೆ...’

ಎಂದು ಮೈಮರೆತು ಗುನುಗಿದರೂ

ಅವ ಅರಳುತ್ತಾನೆ ಹೂವಾಗಿ, ಹವಣಿಸುತ್ತಾನೆ ಮುಡಿಯೇರಲು

ಮುದುಡಿ ಬೀಸಾಡೋಣೆಂದರೆ

ಮೆದುವಾಗುತ್ತಾನೆ ಕೈಯಲ್ಲೇ, ಹರಡುತ್ತಾನೆ ಸುಗಂಧವಾಗಿ

ಒಂದಲ್ಲ ಎರಡಲ್ಲ ಸಾವಿರಾರು ಸಲ

ಸುಟ್ಟಿದ್ದೇನೆ ಅವನ ನೆನಪ, ಸುತ್ತಿಟ್ಟಿದ್ದೇನೆ ಕನಸ

ಭೋರ್ಗರೆವ ಧಾರೆಯಲಿ ಕರಗಿಸಿದ್ದೇನೆ ಹನಿಯಾಗಿ

ಆದರೂ-

ಸುಟ್ಟಿಲ್ಲ, ಸುತ್ತೊಳಗಿಲ್ಲ, ಧಾರೆಯಲಿ ಕೊಚ್ಚಿಹೋಗಿಲ್ಲ

ಇದ್ದಾನೆ ಇಲ್ಲೇ

ಎಲ್ಲಿ?

ಇದ್ದಾನೆ ಇಲ್ಲೇ;

ಎವೆ ಪಲಕಿಸುತ್ತಾನೆ, ಧುಮುಕುತ್ತಾನೆ ಕಣ್ಣೀರಾಗಿ...


- ಶ್ರೀದೇವಿ ಕಳಸದ

(೨೦೧೧ ’ಮೇ’ ಮಯೂರದಲ್ಲಿ ಪ್ರಕಟ)

9 comments:

sunaath said...

ಶ್ರೀದೇವಿ,
ಪ್ರತಿಮೆಗಳ ಕಲ್ಪನೆಯಲ್ಲಿ ನಿಮ್ಮನ್ನು ಮೀರಿಸುವವರಿಲ್ಲ. ನಿಮ್ಮ ಕವನಕ್ಕೆ ನಾಯಕನಾದ ಆ ‘ಅವನು’ ಭಾಗ್ಯವಂತ!

ತೇಜಸ್ವಿನಿ ಹೆಗಡೆ said...

"ಮರೆಯಬೇಕೆಂದು ಅವನನ್ನು ದಿನಾ ನೆನಪಿಸಿಕೊಳ್ಳುತ್ತೇನೆ"..

Nice line and a good poem :)

Chamaraj Savadi said...

ಸೊಗಸಾಗಿದೆ ಕವನ. ಭಾವನೆಗಳಿಗೆ ಅಕ್ಷರರೂಪ ಕೊಟ್ಟಂತೆ.

ಒಂದು ಸಲಹೆ: ಬರೆಯುವ ಅಬ್ಬರದಲ್ಲಿ, ಪ್ಯಾರಾಗಳ ವಿಂಗಡಣೆಯತ್ತ ಗಮನ ಕೊಟ್ಟಿಲ್ಲ ಅಂತ ಕಾಣುತ್ತೆ. ಅಲ್ಲಲ್ಲಿ ಪ್ಯಾರಾ ಮಾಡಿದರೆ, ಅರ್ಥ ಇನ್ನಷ್ಟು ಗರ್ಭಿತವಾಗಬಹುದು ಅನಿಸುತ್ತದೆ.

ಕವನ ಬರೆಯುವುದನ್ನು ಏಕೆ ನಿಲ್ಲಿಸಿದಿರಿ? ಬರೆಯುತ್ತಿರಿ.

ಸಾಗರದಾಚೆಯ ಇಂಚರ said...

sundara kavana, chamaraaj avara maatige nanna sahamatvide

ರಾಘು ತೆಳಗಡಿ said...

ಅಲಾಪದಲ್ಲಿದ್ದಾನೆ......... ಭಾವ ಬರವಣಿಗೆ ಗೆ ತಲೆ ಬಾಗುತಿರುವವ ಇಲ್ಲಿದ್ದಾನೆ ಶ್ರೀ....

ಗಿರೀಶ್ ಎಸ್ said...

saalugalu chennagive

ರಾಘವೇಂದ್ರ ಜೋಶಿ said...

Good One!

Veda said...

Sundaravada kavana Sridevi

jithendra hindumane said...

ನಿಮ್ಮ ಭಾವನೆಗಳ ಮಹಾಪೂರದಲ್ಲಿ ನಾ ಕೊಚ್ಚಿ ಹೋದೆ.......................:(
ಧನ್ಯವಾದಗಳು