Tuesday, May 24, 2011

ಕಣ್ಣೀರಿನ ಆ ದಿನಗಳು ನಗಿಸುವ ಈ ದಿನಗಳು..
ಹುಬ್ಬಳ್ಳಿಯಲ್ಲಿದ್ದಾಗ ’ಇಲ್ಲಿರುವುದು ಸುಮ್ಮನೆ’ ಅಂದ ಬಸವರಾಜ‌ ಕಟ್ಟಿಮನಿ ’ಪಾರ್ವತಿ ಪರಮೇಶ್ವರ’ ಅಂತ ಬೆಂಗಳೂರಿಗೆ ಬಂದರು....


ಮುಂದ?

ಮುಂದ? ನೀವ ಅದೀರಲ್ರಿ? ಅಂದ್ರ... ಇಡೀ ಕರ್ನಾಟಕಾನ ನನ್ನ ಮುಂದ ಐತ್ರಿ. ಏನರ ಮಾಡಿ ಮಂದಿಯೊಳಗ ಗುರ್ತಿಸ್ಕೊಬೇಕು ಅಂತ ಆ ವೀರಪ್ಪನ್ ಸತ್ತ ದಿನಾನ ಡಿಸೈಡ್ ಮಾಡಿದೆ.

ಕೆಟ್ಟರ ಸೈ ಚುಲೋನರ ಸೈ. ಓದಿಗೂ ನನಗೂ ಯಾಕೋ ಅಷ್ಟಕ್ಕಷ್ಟ. ಆ್ಯಕ್ಟಿಂಗ್ ಅಂದ್ರ ಕಲಿಬೇಕು ಅಂತ ಭಾಳ ಆಸೆ ಇತ್ತು. ಆದ್ರೂ ಮನೀಯವರ ಒತ್ತಾಯಕ್ಕ ಹುಬ್ಬಳ್ಯಾಗ ಡಿಪ್ಲೋಮಾ ಮುಗಿಸಿ ಬೆಂಗಳೂರು ಹಾದಿ ಹಿಡದೆ. ಆಮ್ಯಾಲಿಂದೆಲ್ಲಾ ಬ್ಯಾಡ ಬಿಡ್ರಿ. ಆ ದಿನಗಳನ್ನ ನೆನಸ್ಕೊಂಡ್ರ ಕಣ್ಣಾಗ ನೀರ ಬರ್ತಾವ...

ಪರವಾಗಿಲ್ಲ ಹೇಳಿ...
ಬೆಂಗಳೂರಿಗೆ ಬಂದಮ್ಯಾಲ ಎರಡು ತಿಂಗಳು ಒಂದು ಕಂಪನಿಯೊಳಗ ಕೆಲಸ ಮಾಡಿದೆ. ನನ್ನೊಳಗಿನ ನಟ ಯಾಕೋ ಬ್ಯಾಸರಾ ಮಾಡ್ಕೊಳ್ಳಾಕಹತ್ತಾ. ಇದ್ದಕ್ಕಿದ್ದಂಗ ಕೆಲಸ ಬಿಟ್ಟೆ.

ಎಷ್ಟೋ ದಿನ ಕಿಸೆದಾಗ ಒಂದು ರೂಪಾಯಿನೂ ಇರ್ತಿರಲಿಲ್ಲ. ಒಂದ ಕಪ್ ಚಾ ಬನ್, ಇಲ್ಲಂದ್ರ ಎರಡು ದಿನಕ್ಕೊಮ್ಮೆ ಚಿತ್ರಾನ್ನಾನೋ ಏನೋ ತಿಂದ ಇರ್ತಿದ್ದೆ. ಒಮ್ಮೆ ಬಸ್ಸಿನೊಳಗ ಹೋಗುಮುಂದ ‘ಅಭಿನಯ ತರಂಗ’ದ ಜಾಹೀರಾತು ನೋಡಿದೆ.

ಊರಿಗೆ ಫೋನ್ ಮಾಡಿ ಕ್ಯಾಡ್ ಕೋರ್ಸ್ ಸೇರಬೇಕು ಅಂತ ಎಂಟು ಸಾವಿರ ಕೇಳಿದೆ. ಅಪ್ಪ ನನ್ನ ಮಾತ ನಂಬಿ ದುಡ್ಡು ಕಳಿಸೇ ಬಿಟ್ರು. ಆಮ್ಯಾಲ ಅದ ರೊಕ್ಕದಾಗ ಬಾಡಿಗಿ, ಗೆಳ್ಯಾರ ಸಣ್ಣ ಸಾಲ ತೀರಿಸಿದೆ.

‘ಅಭಿನಯ ತರಂಗ’ಕ್ಕ ಸೇರ್ಕೊಳ್ಳಾಕ ಅಂತಾನ ಪೀಣ್ಯದೊಳಗ ಅನಿವಾರ್ಯವಾಗಿ ಮತ್ತೊಂದ ಕೆಲಸ ಹಿಡದೆ. ಆದರೂ ಆ್ಯಕ್ಟಿಂಗ್ ಯಾಕೋ ಭಾಳ ತಲೀಗೆ ಏರಾಕತ್ತಿದ್ರಿಂದ ಆ ಕೆಲಸಾನೂ ಬಿಟ್ಟ ಕುಂತೆ. ಮತ್ತದ ಉಪವಾಸ.

ಯಾವ ಹಬ್ಬಕ್ಕನೂ ಊರಿಗೆ ಹೋಗ್ತಿರಲಿಲ್ಲ. ರೊಕ್ಕ ಇದ್ರಲ್ಲ..? ಆಗ ನನ್ನ ರೂಮ್ಮೇಟ್ ಅಪ್ಪಾಗ ಫೋನ್ ಮಾಡಿ ನನ್ನ ಕಥಿ ಎಲ್ಲಾ ಹೇಳ್ಬಿಟ್ಟಾ. ಕಂಪನ್ಯಾಗ ಕೆಲಸಾ ಮಾಡಾತಾನ ನನ್ನ ಮಗಾ ಅಂತ ತಿಳ್ಕೊಂಡಿದ್ದ ಅಪ್ಪಾ ಸಿಟ್ಟಿಗೆದ್ದ, ಊರಿಗೆ ಕರಿಸ್ಕೊಂಡ.

ಆಗ ಬಣ್ಣಾ ಹಚ್ಕೊಳ್ಳದನ ನನ್ನ ಬಣ್ಣ ಬದಲಾತು. ನಾ ಗೆಳ್ಯಾರ ಕೂಡ ಕಾಂಟ್ಯಾಕ್ಟ್ ಇಟ್ಕೊಂಡಿದ್ದೆ. ಆಮ್ಯಾಲ ಸುಬ್ಬು ಸುಬ್ರಹ್ಮಣ್ಯ, ವೇದಾವ್ರ ಬಾಯ್‌ಫ್ರೆಂಡ್, ಪಾರ್ವತಿಯಕ್ಕಾನ ಕಸಿನ್ ಬ್ರದರ್ ಆದೆ...

ಆಮೇಲೆ?
ಆಮೇಲ್ ಏನ್ ಕೇಳ್ತೀರಿ ನನ್ನ ಪರಿಸ್ಥಿತಿ... ಸುಬ್ಬು ನನ್ನ ಮೈಯೊಳಗ ಹೊಕ್ಕಾನೋ ಅವನ ಮೈಯೊಳಗ ನಾ ಹೊಕ್ಕೊಂಡೇನೋ ಅನ್ನೂ ಹಂಗ ಆಗ್ಬಿಡ್ತ್ರೀ. ಆ ಕ್ಯಾರೆಕ್ಟರ್‌ನಿಂದ ಹೊರಗ ಬಂದು ಸಜೀಕ ಮಾತಾಡಾಕ ಆಗ್ವಾಲ್ತ್ರೀ.

ಇದೊಂಥರಾ ಸವಾಲ ಆಗ್ಬಿಟ್ಟೇತಿ ನೋಡ್ರಿ. ಕಷ್ಟ ಪಟ್ರ ಸುಖ ಖರೆ. ಆದ್ರೂ ಲಕ್ ಅನ್ನೂದು ಬೇಕ್ರಿ. ಇಷ್ಟ ಲಗೂನ ಜನ ನನ್ನ ಗುರ್ತಸ್ತಾರು ಅಂತ ಅನ್ಕೊಂಡೇ ಇರಲಿಲ್ಲ ನೋಡ್ರಿ. ಕರ್ನಾಟಕದಾಗ ಎಲ್ಲಿ ಹೋದ್ರೂ ಮಂದಿ ಬಿಡೂದಿಲ್ರಿ. ಇದೆಲ್ಲಾ ಒಮ್ಮೆ ಮುಜುಗರ ಆಕ್ಕೇತ್ರಿ. ಆದ್ರೂ ಖುಷಿ ಐತ್ರಿ.

ಖುಷಿ ಓಕೆ. ತೃಪ್ತಿ?
ಯಾರ್ರಿ ಅವ್ರಿಬ್ರೂ? ಏಯ್ ಸಾರಿರೀ.. ನೋಡ್ರೀ, ಈ ಸುಬ್ಬು ಹಿಂಗ ಅಡ್ಡಡ್ಡ ಬರ್ತಾನ್ರಿ ಎಲ್ಲಾ ಮಾತನ್ಯಾಗೂ... ಈ ಸುಬ್ಬು ಮತ್ತು ಬಸ್ಸುನ ಬೆನ್ನ ಚಪ್ಪರಿಸಿದ ಸಿಹಿಕಹಿ ಚಂದ್ರು, ಪೃಥ್ವಿರಾಜ್ ಕುಲಕರ್ಣಿ, ಎ.ಎಸ್.ಮೂರ್ತಿ, ಬೆಳವಾಡಿ ಅವರಿಗೆ ಈ ಬಸವರಾಜ ಯಾವಾಗ್ಲೂ ಋಣಿಯಾಗಿರತೇನ್ರಿ.

ಸೀರಿಯಲ್‌ಗಳಿಂದ ಹೆಸರು, ಖುಷಿ, ಹಣ ಸಿಗತೇತಿ ಖರೆ. ಆದ್ರ ಇದ ಪರ್ಮನೆಂಟ್ ಅಲ್ರಿ. ರಂಗಭೂಮಿಯಿಂದಾನ ತೃಪ್ತಿ. ಸೀರಿಯಲ್ ಆರ್ಟಿಸ್ಟ್ ಕುಲದೀಪಕ್, ನಾಗರಾಜ್ ಸೇರಕೊಂಡು ‘ನಮ್ಮ ತಂಡ’ ಅಂತ ಕಟ್ಕೊಂಡೀವಿ.

ಎ.ಎಸ್.ಮೂರ್ತಿ ಅವರ ‘ಹಾಯ್ ಮೊನಾಲಿಸಾ’ ನಾಟಕ ಪ್ರದರ್ಶನ ಮಾಡಿದ್ವಿ. ನಟನೆ ಜೊತಿ ನಿರ್ದೇಶನ ಮಾಡಬೇಕು ಅಂತ ಆಸೆ ಐತಿ. ಫಿಸಿಕಲಿ ನನ್ನ ಲಿಮಿಟೇಶನ್ ಗೊತ್ತು. ಅದ ನನಗ ಪ್ಲಸ್ ಪಾಯಿಂಟ್. ಆದ್ರ ಎಬಿಲಿಟಿ, ಎಫರ್ಟ್‌ಗೆ ಲಿಮಿಟೇಷನ್ ಇಲ್ಲಲ್ರಿ? ಇನ್ನೊಬ್ಬರನ್ನ ಯಾವಾಗ ಅನುಕರಿಸಾಕ ಹೋಗ್ತೀವೋ ಅಂದ ನಾವ್ ಬಿದ್ದಂಗ.

ಸುಮ್ನೆ ಬೀಳೋ ಮಾತು ಯಾಕೆ...
ಒಬ್ಬರು ಮಾಡಿದಂಗ ನಾವೂ ಮಾಡಿದ್ರ ಏನ್ ಸ್ಪೆಷಲ್ ಇರ್ತೇತಿ ಹೇಳ್ರಿ. ಚಾರ್ಲಿ, ಜಾನಿ ಲಿವರ್, ನರಸಿಂಹರಾಜು, ದ್ವಾರಕೀಶ್ ಇವರೆಲ್ಲಾ ನನ್ನ ಫೇವರಿಟ್ ಖರೇ. ಆದ್ರ ಅವರ್ಕಿಂತ ಚಲೋ ಮಾಡಬೇಕು ಅಂತ ಅನ್ಕೊತೀನಿ.

ಈ ಸೀರಿಯಲ್ ಹಿಟ್ ಆಗ್ತಿದ್ದಂಗನ ‘ಮಾಸ್’ ಮತ್ತು ‘ಐತಲಕಡಿ’ ಸಿನಿಮಾದೊಳಗ ಕಾಮಿಡಿ ರೋಲ್‌ಗೆ ಕರದ್ರು. ಆದ್ರ ಸೀರಿಯಲ್ ಕಮಿಟ್‌ಮೆಂಟ್‌ನಿಂದ ನಾ ಆಗ ಒಪ್ಕೋಳಿಲ್ಲ. ಅವಕಾಶ ಬಂದ್ರ, ಬ್ಯಾರೇ ರೀತಿಯ ಪಾತ್ರಗಳೂ ಬಂದ್ರ ಈಗಿನ ಕಮಿಟ್‌ಮೆಂಟ್ ನೋಡ್ಕೊಂಡ ಮಾಡ್ತೀನಿ.

ವೇದಾ ಜೊತೆ ಎಷ್ಟು ದಿನ ಕಮಿಟ್‌ಮೆಂಟ್?
ಹೋದಲ್ಲೆಲ್ಲಾ ಇದ ಮಾತ ಕೇಳ್ತಾರ್ರಿ... ವೇದಾನ್ನ ಯಾವಾಗ ಮದವಿ ಆಕ್ಕೀರಿ ಅಂತ, ಆದ್ರ ವೇದಾ ರೇಡಿಯೋ ಜಾಕಿ ಆದ್ರ, ನಾ ವೇದಾನ್ನ ಮದವಿ ಆದ್ರ, ವೈಶಾಲಿ ಗುಂಡಣ್ಣಗ ಮಕ್ಕಳಾದ್ರ ಸೀರಿಯಲ್ ಮುಗದಂಗ.

ಅದಿನ್ನೂ ಒಂದು ಸಾವಿರ ಎಪಿಸೋಡ ತನಕ ಮುಂದವರಿಯೂದೈತ್ರಿ. ಅಲ್ಲೆತನಕ ಚಿಂತಿ ಬಿಟ್ಟ ನೋಡ್ರಿ...

(ಅಷ್ಟೊತ್ತಿಗೆ ಫೋನ್ ರಿಂಗ್...)
ನೋಡ್ರಿ ಸಾಫ್ಟ್‌ವೇರಕ್ಕನ ಕಾಲ್ ಬರಾಕತ್ರಿ. ಫ್ರೆಂಡ್ ಮನೀಗೆ ಹೋಗ್ಯಾಳ್ರಿ ತಂಗಿ. ಅಕಿನ್ನ ಕರ್ಕೊಂಡ ಹೋಗ್ಬೇಕ್ರಿ ಮನೀಗೆ. ಮನಿ ಇಲ್ಲೇ ಶಿವನಳ್ಯಾಗ. ತಮ್ಮ ಹುಬ್ಬಳ್ಯಾಗ ಬಿಕಾಂ ಕಲೀತಾನು. ಅಪ್ಪ-ಅವ್ವಾನೂ ಅಲ್ಲೇ ಅದಾರು. ನಾ ಇಲ್ಲಿದ್ರೂ ಹುಬ್ಬಳ್ಳಿ ಹುಲಿ ಮುಟ್ಟಿದ್ರ ಬಲೀನ...

-ಶ್ರೀದೇವಿ ಕಳಸದ

’ಪ್ರಜಾವಾಣಿ’ ಸಿನಿಮಾ ಪುರವಣಿಯಲ್ಲಿ (೨೦/೫/೨೦೧೧) ಪ್ರಕಟ

Tuesday, May 10, 2011

ಅಲ್ಲ ಮಾಯಾವಿಯೇ?


ನಿನ್ನೆಯ ನೆನಪಿಲ್ಲ
ಸುಳಿವಿಲ್ಲ ನಾಳೆಯದು
ಚೌಕಟ್ಟಿನೊಳಗೆ ವರ್ತಮಾನ ಚಿತ್ರ
ಎದುರಾದ ಗಳಿಗೆಯತ್ತಲಷ್ಟೇ ಚಿತ್ತ.

ತೋಯ್ದರೂ ಕಣ್ಣಂಚ
ಮಿಂಚಿದರೂ ಇಂಚು ಕಣ್ಣ
ಕಂಡವರ ಕಣ್ಣೊಳಗೇ.

ಕತ್ತಲೆಯ ಬೆನ್ನಿಗೆ
ಬೆಳಗ ತಂತಿ ಎಳೆದು
ಐಕ್ಯ ಸ್ವರದೊಳಗೆ;
ಕಾವು ಬೇಡದ
ಹದವರಿದ ನಾದವದು
ಕಾಣದೆದೆಯೊಳಗೆ
ಜೀವಬಂಧಿ.

ತಿಳಿಮುಗಿಲ ಮಡಿಲಲಿ
ಮೈಮುರಿದ ಬೆಳ್ಮೋಡಕೆ
ರಾಗವದು ಸಂಜೆಗೆ;
ನೀರಲ್ಲ ಕದಡಲು
ಅಬ್ಬರಿಸಲು ಕಡಲಲ್ಲ
ಅಲ್ಲವೇ ಅಲ್ಲ
ಇನಿಯನ ಕಣ್ಣಂತೂ.


ನೆತ್ತಿ ಅಡವಿಟ್ಟು,
ತೊಡೆ ಒತ್ತಿಕೊಂಡು
ಎದೆ ಹರಡಿ
ಬೆನ್ನು ತೋರಿಸದ
ಕನ್ನಡಿಯದು;
ಅಲ್ಲ ಮಾಯಾವಿ

ಮೂರೂ ಹೊತ್ತು
ಇದರದೇ ಚಿಂತೆ
ನಿಂತಿಲ್ಲ ಉಸಿರು
ಬಾಡಿಲ್ಲ ಹಸಿರು
ಒಣ ಸೌದೆಯೊಳಗೂ
ಹೊತ್ತಿಲ್ಲ ಚಿತೆ.

ಊರಾಚೆ ಬಿಟ್ಟ
ಬೆಕ್ಕಿನಂತೆ
ಮತ್ತೆ ಮತ್ತೆ ಮನೆಯತ್ತ
ಮನದತ್ತ,
ಆಳಕ್ಕಿಳಿದು
ಮೇಲಕ್ಕೆ ತೇಲಿ
ಅಲ್ಲೆಲ್ಲೋ ತ್ರಿಶಂಕುವಾಗಿ
ಬದುಕಿಲ್ಲ, ಸತ್ತಿಲ್ಲ
ದೆವ್ವವೂ ಆಗಿಲ್ಲ

ಹೌದು ಮಾಯಾವಿಯೇ.

-ಶ್ರೀದೇವಿ ಕಳಸದ